Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ

ಶ್ರೀ ಪ್ರವೀಣ್ ಕುಮಾರ್ ಹೊರನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸಿದ ಮಹನೀಯರಲ್ಲಿ ಒಬ್ಬರು. ಕಳೆದ ಎರಡು ದಶಕಗಳಿಂದ ಯು.ಎ.ಇ ಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಶ್ರೀ ಪ್ರವೀಣ್ ಶೆಟ್ಟಿ ಅವರು, ೩೭ ದೇಶಗಳ ೧೨೩ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿರುವ ‘ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಶನ್’ನ ಮಹಾಪೋಷಕರಾಗಿದ್ದು ಎಲ್ಲ ಕನ್ನಡಿಗರನ್ನು ಬೆಸೆದಿದ್ದಾರೆ. ಪರರಾಷ್ಟ್ರದಲ್ಲಿದ್ದರೂ ಕನ್ನಡ ನಾಡಿನ ಸೆಳೆತದಲ್ಲಿಯೇ ಇರುವ ಅವರು ಅನೇಕ ಬಡಕುಟುಂಬದ ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿ ಅವರೆಲ್ಲರಿಗೂ ಉತ್ತಮ ವಿದ್ಯಾಭ್ಯಾಸ ನೀಡುತ್ತ ಉತ್ತಮ ನಾಗರೀಕರನ್ನಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀಮತಿ ಸುನೀತಾ ಎಂ. ಶೆಟ್ಟಿ

ಹೊರನಾಡ ಕನ್ನಡಿಗರಲ್ಲಿ ಅಪರೂಪದ ಸಾಧನೆ ಮಾಡಿದವರು ಶ್ರೀಮತಿ ಸುನೀತಾ. ಎಂ. ಶೆಟ್ಟಿ. ಮುಂಬೈ ನಲ್ಲಿ ಅನಿವಾಸಿ ಕನ್ನಡಿಗರಾಗಿದ್ದು, ಮೂವತ್ತಾರು ವರ್ಷಗಳ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ಮುಂಬಯಿ ವಿ.ವಿ. ಮತ್ತು ಮಹಾರಾಷ್ಟ್ರ ಸರ್ಕಾರದ ಕನ್ನಡ ಭಾಷಾಮಂಡಳ ಸದಸ್ಯೆಯಾಗಿದ್ದು, ಶಾಲಾ ಕಾಲೇಜುಗಳಿಗೆ ಪಠ್ಯಪುಸ್ತಕ ರಚನೆ, ಆಯ್ಕೆಯ ಕೆಲಸ ನಿರ್ವಹಿಸಿದ್ದಾರೆ. ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ತುಳು ಪಠ್ಯಗಳಲ್ಲಿ ಕವಿತೆ ಹಾಗೂ ಲೇಖನಗಳು ಸೇರ್ಪಡೆಯಾಗಿವೆ. ಇವರು ಒಟ್ಟು ೪೦ ಕೃತಿಗಳನ್ನು ಬರೆದಿದ್ದು ಸ್ವತಂತ್ರ ಕೃತಿಗಳು, ಸಂಪಾದಿತ ಕೃತಿಗಳು, ವ್ಯಕ್ತಿ ವಿಶೇಷ ಗ್ರಂಥಗಳು, ಆತ್ಮಕಥನಗಳು ಸೇರಿವೆ. ಹಲವು ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ ಹಾಗೂ ವಿಷಯ ಮಂಡನೆ ಮಾಡಿದ್ದಾರೆ.
ಎರಡು ಬಾರಿ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ದಾನಚಿಂತಾಮಣಿ ಅತಿಮಬ್ಬೆ ಪ್ರಶಸ್ತಿ, ಮುಂಬಯಿ ಕರ್ನಾಟಕ ಸಂಘದಿಂದ ಸಾಧನಾ ಸಾಧಕ ಪ್ರಶಸ್ತಿ ಲಭಿಸಿದೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ವಿದ್ಯಾಸಿಂಹಾಚಾರ್ಯ ಮಾಹುಲಿ

ಮುಂಬಯಿಯಲ್ಲಿ ಸನಾತನ ವೈದಿಕ ಸಂಸ್ಕೃತಿ ಉಳಿವಿಗೆ ಅಹರ್ನಿಶಿ ಶ್ರಮಿಸುತ್ತಿರುವ ಮಹಾಗುರು, ಘನ ವಿದ್ವಾಂಸರು ಪಂಡಿತ್ ವಿದ್ಯಾಸಿಂಹಾಚಾರ್ಯ ಮಾಹುಲಿ. ಹರಿದಾಸ ಸಾಹಿತ್ಯದ ಪ್ರಚಾರಕರು, ಹೊರನಾಡಿನ ಕನ್ನಡದ ಕಟ್ಟಾಳು.
ಮುಂಬಯಿನ ಮಾಳುಂದದಲ್ಲಿ ಮಾಳುಂದದಲ್ಲಿ ಮಧ್ವಸಿದ್ಧಾಂತದ ವಾಣಿ ವಿಹಾರ ಸಿದ್ಧಪಡಿಸಿದ ಮಾಹುಲಿ ಗೋಪಾಲಾಚಾರ್ಯರ ಸುಪುತ್ರರಾದ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ಬಾಲ್ಯದಲ್ಲೇ ಶಾಸ್ತ್ರಪಾರಂಗತರು. ತಂದೆ ಕಟ್ಟಿದ ಮಹಾವಿದ್ಯಾಲಯ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾಗಿ ಅನನ್ಯ ಸೇವೆ. ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನವಸ್ತ್ರದಾನ, ಆಶ್ರಯ ನೀಡಿ ೧೪ ವರ್ಷ ವಿದ್ಯಾದಾನ ಮಾಡುವಲ್ಲಿ ಸದಾ ನಿರತರು. ಪಂಡಿತರನ್ನು ರೂಪಿಸಿದ ಪಂಡಿತೋತ್ತಮರು. ಮುಂಬಯಿ ನೆಲೆದಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸಿದ ಅಗ್ರಗಣ್ಯ ಆಚಾರ್ಯರು, ಹರಿದಾಸ ಸಾಹಿತ್ಯದಲ್ಲಿ ಅಪಾರ ವಿದ್ವತ್ತು, ಸಿಡಿಗಳ ಮೂಲಕ ಹರಿಭಕ್ತಿಸಾರವನ್ನು ಪ್ರಚುರಪಡಿಸಿದ ಮಹನೀಯರು. ನಾನಾ ನಗರಗಳಿಗೆ ತೆರಳಿ ಜ್ಞಾನಸತ್ರ ನಡೆಸುವ ಅಪ್ಪಟ ಕನ್ನಡಪ್ರೇಮಿ, ಪಂಡಿತ ಪರಂಪರೆ ನಿರ್ಮಾಣಕ್ಕೆ ಬದುಕು ಮೀಸಲಿಟ್ಟಿರುವ ಕರ್ಮಯೋಗಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ

ಮುಂಬಯಿ ನೆಲದಲ್ಲಿ ಕನ್ನಡದ ಕೀರ್ತಿ ಬೆಳಗಿದ ಹೆಮ್ಮೆಯ ಹೊರನಾಡು ಕನ್ನಡಿಗ ಕುಸಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ, ಉದ್ಯಮ-ಸಮಾಜಸೇವಾ ಕ್ಷೇತ್ರದ ಸಾಧನಾಶೀಲರು.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಚೆಲ್ಲಡ್ಕ ಗುತ್ತು ಹುಟ್ಟೂರು, ತಾಯ್ಕೆಲದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಂಬಯಿಯಲ್ಲಿ ವಾಣಿಜ್ಯ ಪದವಿ. ಶಿಪ್ಪಿಂಗ್ ಕಂಪನಿಯಲ್ಲಿ ವೃತ್ತಿ ಬದುಕಿನಾರಂಭ. ಸತತ ೨೮ ವರ್ಷಗಳ ಕಾಲ ವಿವಿಧ ಶಿಪ್ಪಿಂಗ್ ಕಂಪನಿಗಳಲ್ಲಿ ಗುರುತರ ಸೇವೆ. ೨೦೦೭ರಲ್ಲಿ ಸ್ವಂತದ್ದೇ ಭವಾನಿ ಶಿಪ್ಪಿಂಗ್ ಸರ್ವಿಸಸ್ ಕಂಪನಿ ಆರಂಭ. ಮುಂದಿನದು ಅಪ್ರತಿಮ ಯಶೋಗಾಥೆ, ದೇಶದ ೧೮ ವಲಯಗಳಲ್ಲಿ ಕಛೇರಿಗಳು, ನಾಲ್ಕು ವಿದೇಶಗಳಲ್ಲಿ ಶಿಪ್ಪಿಂಗ್ ಲೈನ್ಗಳು, ಶಿಪ್ಪಿಂಗ್ ಉದ್ಯಮದಲ್ಲಿ ಅಚ್ಚರಿಯ ಸಾಧನೆ. ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಿದ ಹಿರಿಮೆ. ಅಬಲ ಹೆಣ್ಣುಮಕ್ಕಳ ವಿವಾಹಕ್ಕೆ ನಿರಂತರ ನೆರವು, ಸಾಮಾಜಿಕ ಕಾರ್ಯಗಳಲ್ಲಿ ನಿಸ್ಪೃಹ ನಡೆ, ಶಿಪ್ಪಿಂಗ್ ನೋಬಲ್, ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಗಳಿಂದ ಭೂಷಿತರಾದ ಸಮಾಜಮುಖಿ ಸಹೃದಯಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ರಾಜ್‌ಕುಮಾರ್, ಬೆಹರಿನ್

ವಿದೇಶದಲ್ಲಿ ಕನ್ನಡದ ಕಂಪು ಹರಿಸಿ ಕರುನಾಡಿನ ಕೀರ್ತಿ ಬೆಳಗಿದವರು ರಾಜ್‌ಕುಮಾರ್, ಬೆಹರಿನ್ ಕನ್ನಡ ಸಂಘದ ಆದ್ಯ ಪ್ರವರ್ತಕರು. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ರೂವಾರಿ, ಉಡುಪಿ ಜಿಲ್ಲೆ ಅಂಬಲಪಾಡಿಯಲ್ಲಿ ೧೯೯೨ರ ಜನವರಿಯಲ್ಲಿ ಜನಿಸಿದ ರಾಜ್‌ಕುಮಾರ್ ಬದುಕು ಅರಸಿ ದ್ವೀಪ ರಾಷ್ಟ್ರ ಬೆಹರಿನ್‌ಗೆ ಗುಳೆ ಹೋದವರು. ವೃತ್ತಿಯಲ್ಲಿ ಉದ್ಯಮಿ, ಪ್ರವೃತ್ತಿಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಾರಕ. ನಾಲ್ಕು ದಶಕಗಳಿಂದಲೂ ಬೆಹರಿನ್‌ನಲ್ಲಿ ನೆಲೆನಿಂತಿರುವ ರಾಜ್‌ಕುಮಾರ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಹರಿನ್ ಕನ್ನಡ ಸಂಘವನ್ನು ಹತ್ತು ವರ್ಷಗಳಿಗೂ ಮಿಗಿಲು ಮುನ್ನಡೆಸಿದವರು. ಸಂಘಕ್ಕೊಂದು ಸುಸಜ್ಜಿತ ಕನ್ನಡಭವನ ನಿರ್ಮಾಣಕ್ಕೆ ಕಾರಣರಾದವರು. ವಿದೇಶಿ ನೆಲದಲ್ಲಿ ಎರಡು ಬಾರಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದ ಹೆಗ್ಗಳಿಕೆ, ಆಳ್ವಾಸ್ ನುಡಿಸಿರಿ ಕಾರ್ಯಕ್ರಮ, ಅಂಧರ ಸಾಂಸ್ಕೃತಿಕ ಕಾರ್ಯಕ್ರಮ, ಪುನೀತ್‌ನಮನ ಮುಂತಾದ ಕನ್ನಡತನದ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಿದವರು. ಬೆಹರೈನ್ ಬಿಲ್ವಾಸ್ ಸಂಸ್ಥಾಪಕ, ಐದು ಬಾಲ ಅಧ್ಯಕ್ಷರಾಗಿ ಸಮುದಾಯದ ಸೇವೆಗೈದವರು. ಧಾರ್ಮಿಕ, ಸಾಹಿತ್ಯಕ, ಜಾನಪದ ಮತ್ತು ಕ್ರೀಡಾಚಟುವಟಿಕೆಗಳನ್ನು ಆಯೋಜಿಸಿದ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾದ ನೈಜ ಭಾಷಾಪ್ರತಿನಿಧಿ, ಮಾದರಿ ಸಮಾಜಸೇವಕರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ.ಎ.ಎ. ಶೆಟ್ಟಿ

ಕುಂದಾಪುರದ ಅಸೋಡೆಯವರಾದ ಡಾ. ಎ.ಎ.ಶೆಟ್ಟಿ ಜಗತ್ತಿನ ಹೆಸರಾಂತ ಎಲುಬು ಮತ್ತು ಮೂಳೆ ಶಸ್ತ್ರಚಿಕಿತ್ಸಕರು. ವಿದೇಶದಲ್ಲಿ ಕನ್ನಡದ ಕೀರ್ತಿ ಬೆಳಗಿದ ವೈದ್ಯಕೀಯ ವಿಜ್ಞಾನಿ.
ವೈದ್ಯಕೀಯ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆಗೈದಿರುವ ಡಾ. ಎ.ಎ.ಶೆಟ್ಟಿ ಅವರು ಲಂಡನ್ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ, ಪಿ.ಎಚ್.ಡಿ ಪದವಿ ಪಡೆದವರು. ಮಣಿಪಾಲದ ಕೆ.ಎಂ.ಸಿ., ವೈದ್ಯಕೀಯ ಕ್ಷೇತ್ರದಲ್ಲಿ ‘ಸರ್ಜನ್ರ ಸರ್ಜನ್’ ಎಂದೇ ಪ್ರಖ್ಯಾತರಾದ ಅವರು ಇಂಗ್ಲೆಂಡಿನಲ್ಲಿ ಪ್ರತಿ ವರ್ಷ ನೂರಾರು ಸರ್ಜನ್ರನ್ನು ತರಬೇತಿಗೊಳಿಸುತ್ತಿದ್ದಾರೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾಗ್ನಿಜ್ ಟ್ರಾನ್ಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿದ ಹೆಗ್ಗಳಿಕೆ. ಕ್ಯಾನ್ಸರ್ ಹಾಗೂ ತಲಸ್ಸೇಮಿಯ ರೋಗಗಳ ನಿರ್ಮೂಲನೆಗೆ ನೆರವಾಗುವ ಔಷಧ ತಯಾರಿಕೆಯಲ್ಲಿ ಸಫಲರಾದವರು. ಸ್ಟೆಮ್ಸೆಲ್ ಸಂಶೋಧನೆಯಲ್ಲಿ ಪೇಟೆಂಟ್ ಹೊಂದಿರುವವರು. ಕೀಲುನೋವು, ಮೂಳೆನೋವು, ಅಕರ ಜೀವಕೋಶ ಚಿಕಿತ್ಸೆಯ ಮೂಲಕ ಮೂಳೆ ಬೆಳವಣಿಗೆಯಾಗುವಂತಹ ಚಿಕಿತ್ಸಾ ಸಂಶೋಧನೆಯು ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದವರು. ಅನೇಕ ರಾಜ್ಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಹೆಮ್ಮೆಯ ಕನ್ನಡಿಗರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ. ಎಂ.ಬಿ.ಉದೋಷಿ

ಕನ್ನಡ ನಾಡಿನಲ್ಲಿ ಹುಟ್ಟಿ ವೃತ್ತಿ ನೈಪುಣ್ಯತೆ ಮತ್ತು ಸೇವಾ ಮನೋಭಾವದಿಂದ ದೇಶದಾಚೆಗೂ ತಮ್ಮ ಪ್ರತಿಭೆಯನ್ನು
ಪರಿಚಯಿಸಿದವರು ಡಾ. ಎಂ.ಬಿ.ಉದೋಷಿ ಅವರು.
ದೇಶದ ಅನೇಕ ಪ್ರತಿಭೆಗಳಂತೆ ತಮ್ಮ ವೃತ್ತಿಗೊಂದು ಘನತೆಯನ್ನು ಬಯಸಿ, ಅಮೆರಿಕೆಗೆ ಕಾಲಿಟ್ಟ ಶ್ರೀಯುತರು ವೃತ್ತಿ ಬದುಕಿನಿಂದಾಚೆಗೂ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡದ್ದು ಅವರ ವಿಶಿಷ್ಟ ವ್ಯಕ್ತಿತ್ವಕ್ಕೆ ಸಾಕ್ಷಿ.
ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಲೇ ಅಮೆರಿಕದಂತಹ ದೂರ ದೇಶದಲ್ಲಿ ನೆಲೆಸಿರುವ ಕನ್ನಡಿಗರ ಭಾವನೆಗಳಿಗೂ ಸ್ಪಂದಿಸುತ್ತ ಕನ್ನಡ ಸಂಘಗಳನ್ನು ಕಟ್ಟಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ ಶ್ರೀಯುತರು.
ಹೊರದೇಶದಲ್ಲಿದ್ದರೂ ವೈದ್ಯಕೀಯ ಕರ್ತವ್ಯದೊಂದಿಗೆ ತಾಯಿನುಡಿ ಕನ್ನಡವನ್ನೂ ಉಳಿಸಿ ಬೆಳೆಸುವ ಕನ್ನಡ ಸೇವೆಗೆ ನಿಂತ ಉದೋಷಿ ಅವರಿಗೆ ಸಂದಿರುವ ಗೌರವ, ಸಮ್ಮಾನಗಳು ಹತ್ತು-ಹಲವು.
ದೇಶದಾಚೆಗೆ ಕನ್ನಡದ ಸೇವೆಯನ್ನು ಚಾಚಿದವರು ಡಾ. ಎಂ.ಬಿ.ಉದೋಷಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ. ಉಮಾ ಮೈಸೂರ್ಕರ್‌

ದೂರದ ಅಮೆರಿಕೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆಯ ವೈಭವವನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಕೆಲಸ ಮಾಡುತ್ತಿರುವವರು ಡಾ. ಉಮಾ ಮೈಸೂರ‌ ಅವರು.
ಕನ್ನಡ ಕೂಟದ ಸದಸ್ಯರಾಗಿ ಅವರು ಸಲ್ಲಿಸುತ್ತಿರುವ ಸೇವೆ ಅನನ್ಯ. ೧೯೭೦ರಿಂದ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಈ ಕನ್ನಡತಿ ವೃತ್ತಿಯಲ್ಲಿ ಪ್ರಸೂತಿ ತಜ್ಞೆ, ಪ್ರವೃತ್ತಿಯಲ್ಲಿ ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರಿಯರು. ಉತ್ತರ ಅಮೆರಿಕದ ಹಿಂದೂ ಟೆಂಪಲ್ ಸೊಸೈಟಿಯ ಅಧ್ಯಕ್ಷರಾಗಿ ಹಿಂದೂ ಧರ್ಮ ಪ್ರಚಾರಕ್ಕಾಗಿ ಅವರು ಸಲ್ಲಿಸುತ್ತಿರುವ ಸೇವೆ ಅಭಿನಂದನಾರ್ಹ.
ಶ್ರೀಯುತರ ಸೇವಾ ಕೈಂಕರ್ಯ ಅಮೆರಿಕದಲ್ಲಿ ಮಾತ್ರವಲ್ಲದೇ ತವರು ನೆಲದ ಬೆಂಗಳೂರಿನಲ್ಲಿ ಬಡ ಮಹಿಳೆಯರ ವಸತಿ ನಿಲಯ ನಿರ್ಮಾಣಕ್ಕೆ, ಅಂಗವಿಕಲರ ಕಲ್ಯಾಣಕ್ಕಾಗಿ ಆರ್ಥಿಕ ನೆರವಿನ ರೂಪದಲ್ಲಿ ಸಂದಿದೆ.
ನ್ಯೂಯಾರ್ಕ್‌ನ ಕನ್ನಡ ಕೂಟದ ಅಧ್ಯಕ್ಷರೂ ಆಗಿರುವ ಡಾ. ಉಮಾ ಮೈಸೂರ‌ ಅವರು ತಮ್ಮ ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಅನಿವಾಸಿ ಕನ್ನಡಿಗರಿಗೆ ಮಾದರಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ಕೆ. ಉಪೇಂದ್ರ ಭಟ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಕಿರಾನಾ ಘರಾಣೆಯ ಯಶಸ್ವಿ ಗಾಯಕ ಪಂಡಿತ್ ಕೆ.ಉಪೇಂದ್ರ ಭಟ್ ಅವರ ಸಾಧನೆಯಷ್ಟೇ ಅವರ ವ್ಯಕ್ತಿತ್ವವೂ ಶಿಖರ ಸದೃಶ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಶ್ರೀಯುತರು ಸಂಗೀತ ಪಯಣ ಆರಂಭಿಸಿದ್ದು ಮಂಗಳೂರಿನ ಶ್ರೀ ಪಂಡಿತ್ ನಾರಾಯಣ ಪೈ ಅವರ ಬಳಿ, ಆ ಬಳಿಕ ಪಂಡಿತ ಮಾಧವ ಗುಡಿ ಮತ್ತು ಖ್ಯಾತ ಹಿಂದೂಸ್ತಾನಿ ಹಾಡುಗಾರ ಪಂಡಿತ್ ಭೀಮಸೇನ ಜೋಷಿ ಅವರ ಕಾವಲಿನಲ್ಲಿ ನಿಯಮಿತ ತರಬೇತಿ ಪಡೆದು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವರು. ಸದ್ಯ ಪೂಜ್ಯ ಭೀಮಸೇನ ಜೋಷಿ ಅವರೊಂದಿಗೆ ಪುಣೆಯಲ್ಲಿ ಅವರ ವಾಸ.
ಮುಂಬಯಿಯ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ‘ಸಂಗೀತ ವಿಶಾರದ ಮತ್ತು ಸಂಗೀತ ಅಲಂಕಾರ’ ವಿಷಯದಲ್ಲಿ ಸ್ನಾತಕೋತ್ತರ ಪದವಿ, ದೈವದತ್ತವಾಗಿ ಒಲಿದ ಕಂಠ ಸಿರಿಯ ಉಪೇಂದ್ರರ ಹಾಡುಗಾರಿಕೆಯಲ್ಲಿ ವ್ಯವಸ್ಥಿತ ರಾಗದ ಆಲಾಪನೆಗಳು, ಸ್ಪಷ್ಟ ಉಚ್ಚಾರ, ಶಕ್ತಿಶಾಲಿ ತಾನಗಳ ಸೊಬಗುಂಟು.
ಜಲಂಧರ್‌ನ ಹರಿವಲ್ಲಭ ಸಂಗೀತ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವಗಳಲ್ಲಿ, ಇಂಗ್ಲೆಂಡ್, ಅಮೆರಿಕ, ದುಬೈ, ಬಕ್ರೇನ್ ಮುಂತಾದೆಡೆ ಅಲ್ಲಿನ ಪ್ರಸಿದ್ದ ಸಭೆ-ಸಮಾರಂಭಗಳಲ್ಲೂ ಉಪೇಂದ್ರ ಭಟ್ ಅವರ ಸಂಗೀತ ಮಾಧುರ್ಯದ ಕಂಪು ಪಸರಿಸಿದೆ.
೧೯೯೬ರಲ್ಲಿ ಜರುಗಿದ ಸಂತ ಜ್ಞಾನೇಶ್ವರರ ೭ನೇ ಜನ್ಮ ಶತಾಬ್ಬಿ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದ ಕಾರ್ಯಕ್ರಮದಲ್ಲಿ ಪಂಡಿತ್‌ ಉಪೇಂದ್ರರ ಸಂಗೀತ ಪ್ರೌಢಿಮೆಗೆ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರಿಂದ ಶ್ಲಾಘನೆ. ೨೦೦೦ದಲ್ಲಿ ಉತ್ತರ ಅಮೆರಿಕಾ ವತಿಯಿಂದ ‘ಮ್ಯೂಜಿಷಿಯನ್ ಆಫ್ ದಿ ಇಯರ್’ ಗೌರವಕ್ಕೆ ಅವರು ಪಾತ್ರರು.
ಸುಮಧುರ ಸಂಗೀತದಿಂದ ಜನಮೆಚ್ಚುಗೆ ಪಡೆದ ಶಾಸ್ತ್ರೀಯ ಹಾಡುಗಾರರು ಶ್ರೀ ಕೆ. ಉಪೇಂದ್ರ ಭಟ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ವಿಜಯಕುಮಾರ್ ಶೆಟ್ಟಿ

ಮುಂಬೈನಲ್ಲಿ ನಾಟಕ ತಂಡ ರಚಿಸಿ ಕನ್ನಡ ಸಂಸ್ಕೃತಿ, ಕಲೆ, ಶ್ರೇಷ್ಠತೆಯನ್ನು ಉಳಿಸಿ ಬೆಳೆಸುತ್ತಿರುವವರು ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರು.
ಉಡುಪಿ ಜಿಲ್ಲೆಯ ತೋನ್ಸೆ ಗ್ರಾಮದವರಾದ ವಿಜಯ ಕುಮಾರ್ ವಿಜ್ಞಾನ ಪದವೀಧರರು. ಎಳೆವಯಸ್ಸಿನಿಂದಲೂ ರಂಗಭೂಮಿಯಲ್ಲಿ ಆಸಕ್ತಿ ತಳೆದಿದ್ದ ಅವರು, ಪ್ರವೃತ್ತಿಯಾಗಿ ಆಯ್ದುಕೊಂಡಿದ್ದು ರಂಗಭೂಮಿಯನ್ನು.
ಉದ್ಯೋಗ ನಿಮಿತ್ತ ಮುಂಬೈ ವಾಸಿಯಾಗಿರುವ ಅವರು ರಂಗ ಸಾಧಕರ ಸಂಪರ್ಕದಿಂದ ‘ಕಲಾಜಗತ್ತು’ ರಂಗ ತಂಡ ಸ್ಥಾಪನೆ, ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಚಿಣ್ಣರ ಬಿಂಬದ ರಚನೆ ಶ್ರೀಯುತರ ಸಮಾಜಮುಖಿ ನಿಲುವಿಗೆ ಸಾಕ್ಷಿ. ಈವರೆಗೆ ಎರಡು ಸಾವಿರಕ್ಕೂ ಹೆಚ್ಚಿನ ತುಳು-ನಾಟಕಗಳ ಪ್ರದರ್ಶನ ನೀಡಿರುವ ಅವರು ೪೦ಕ್ಕೂ ಹೆಚ್ಚಿನ ಕನ್ನಡ ಮತ್ತು ತುಳು ನಾಟಕ ಕೃತಿಗಳ ಲೇಖಕರು.
‘ಬದಿ’ ತುಳು ನಾಟಕ ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಲಭಿಸಿದೆ. ಶ್ರೀಯುತರ ಸೇವಾ ಮನೋಭಾವಕ್ಕೆ ಮಹಾರಾಷ್ಟ್ರದ ಅಭಿಮಾನಿ ಬಳಗದಿಂದ ತುಳು ನಾಟಕ ಕಲಾರತ್ನ ಪ್ರಶಸ್ತಿ, ಶ್ರೇಷ್ಠ ಹೊರನಾಡ ಕನ್ನಡಿಗ ಗೌರವಗಳು ಸಂದಿವೆ.
ನಟ, ನಿರ್ದೇಶಕ, ಸಂಘಟಕ, ಕಲಾ ಪೋಷಕರಾಗಿ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿರುವವರು ಶ್ರೀ ತೋನ್ಸೆ ವಿಜಯ ಕುಮಾರ್ ಶೆಟ್ಟಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ. ನೀರಜ್ ಪಾಟೀಲ

ಗ್ರೇಟ್ ಬ್ರಿಟನ್ ಪಾರ್ಲಿಮೆಂಟ್‌ಗೆ ಸದ್ಯದಲ್ಲಿಯೇ ನಡೆಯುವ ಚುನಾವಣೆಯಲ್ಲಿ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಹೆಮ್ಮೆಯ ಕನ್ನಡಿಗ ನೀರಜ್ ಪಾಟೀಲ್‌.
ನಮ್ಮ ರಾಜ್ಯದ ಕಲ್ಬುರ್ಗಿಯವರಾದ ಶ್ರೀಯುತರು ಅಲ್ಲಿ ಕೆಲವು ವರ್ಷ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರೇಟ್ ಬ್ರಿಟನ್‌ಗೆ ತೆರಳಿ ಅಲ್ಲಿಯೇ ವೈದ್ಯ ವೃತ್ತಿಯನ್ನು ಮುಂದುವರೆಸುತ್ತ ಅಲ್ಲಿಯ ರಾಜಕೀಯ ಜೀವನಕ್ಕೂ ಪಾದಾರ್ಪಣೆಗೈದರು. ಲಂಡನ್ ನಗರದ ಕಾರ್ಪೋರೇಷನ್‌ಗೆ ಕೌನ್ಸಿಲರಾಗಿ ಆಯ್ಕೆಯಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದರು.
ನಮ್ಮ ರಾಜ್ಯದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗುಲ್ಬರ್ಗ ತಾಲ್ಲೂಕಿನ ಕಮಲಾಪುರದಲ್ಲಿ ಮತದಾರರು, ಶಾಸಕ ಸ್ಥಾನದ ಆಕಾಂಕ್ಷಿಗಳ ಸಭೆ ಕರೆದು ಚುನಾವಣೆಯ ಮಹತ್ವ, ಯೋಗ್ಯರ ಆಯ್ಕೆಯ ಅಗತ್ಯ ಕುರಿತು ಜಾಗೃತಿ ಮೂಡಿಸಿದ್ದರು.
ಇಂಗ್ಲೆಂಡ್‌ನ ಲ್ಯಾಂಬೆತ್ ಕೌನ್ಸಿಲ್‌ನ ಗಾಡ್ಸ್ ಅಂಡ್ ಸೇಂಟ್ ಥಾಮಸ್ ಆಸ್ಪತ್ರೆಯ ಗವರ್ನಿಂಗ್ ಅಡ್ಮಿನಿಸ್ಟೇಟರ್ ಆಗಿ ಇತ್ತೀಚೆಗೆ ನೇಮಕಗೊಂಡಿದ್ದಾರೆ.
ಇವರ ಸಾಧನೆಗೆ ಬಹರೇನ್‌ನ ಕನ್ನಡ ಸಂಘವು ‘ವಿಶ್ವ ಮಾನವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಇಂತಹ ಪ್ರತಿಭಾವಂತ ಕನ್ನಡದ ಸುಪುತ್ರ ಡಾ. ನೀರಜ್ ಪಾಟೀಲ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ. ಉದಯ ಬಿ.ಎಸ್.ಪ್ರಕಾಶ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ ಖ್ಯಾತ ವೈದ್ಯರು ಡಾ. ಉದಯ ಬಿ.ಎಸ್.ಪ್ರಕಾಶ್ ಅವರು. ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆಗಳಲ್ಲಿ ಜಾಗತಿಕ ಮಟ್ಟದ ಮನ್ನಣೆ ಪಡೆದ ತಜ್ಞರು.
ವೈದ್ಯ ವಿಜ್ಞಾನದಲ್ಲಿ ಅನೇಕ ಪದವಿ ಗಳಿಸಿದ್ದಾರೆ. ಭಾರತದಲ್ಲೇ ಅಲ್ಲದೇ ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಕೆನಡಾ, ಅಮೆರಿಕ, ಸಿಂಗಾಪುರ್, ಸ್ಪೇನ್ ಸೇರಿದಂತೆ ೨೫ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರತಿಷ್ಠಿತ ವೇದಿಕೆಗಳಲ್ಲಿ ಪುಪ್ಪುಸ ಕಾಯಿಲೆಗೆ ಸಂಬಂಧಿಸಿದಂತೆ ಮೌಲಿಕ ಪ್ರಬಂಧಗಳನ್ನು ಮಂಡಿಸಿ ಪ್ರಶಂಸೆ ಗಳಿಸಿರುವರು. ಅನೇಕ ಲೇಖನಗಳು, ಪುಸ್ತಕಗಳನ್ನೂ ಪ್ರಕಟಿಸಿರುವರು.
ಇಪ್ಪತ್ತು ಸಾವಿರ ಸದಸ್ಯರಿರುವ ವಿಶ್ವದ ಅತಿ ಬೃಹತ್ ವೈದ್ಯ ಸಂಸ್ಥೆ ‘ಅಮೆರಿಕಾ ಕಾಲೇಜ್ ಆಫ್ ಬೆಸ್ಟ್ ಫಿಜಿಷಿಯನ್ಸ್’ನ ಅಧ್ಯಕ್ಷರಾಗಿ ದುಡಿದ ಹಿರಿಮೆ ಅವರದು.
ಸದ್ಯ ಅಮೆರಿಕಾದ ಪ್ರತಿಷ್ಠಿತ ಮೆಯೊ ಕ್ಲಿನಿಕ್‌ನಲ್ಲಿ ವಿಶೇಷ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಡಾ. ಉದಯ ಬಿ.ಎಸ್.ಪ್ರಕಾಶ್.