Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವಿಮರ್ಶೆ

ಕೆ.ವಿ. ಸುಬ್ರಮಣ್ಯಂ

ಕೆವಿಎಸ್ ಎಂದೇ ಗುರುತಿಸಲ್ಪಡುವ ಕೆ. ವಿಸುಬ್ರಮಣ್ಯಂ ನಾಡಿನ ಸುಪ್ರಸಿದ್ಧ ಕಲಾಚಿಂತಕರು, ಕುಂಚ-ಲೇಖನಿ ಎರಡರಿಂದಲೂ ಕಲಾವಲಯದಲ್ಲಿ ಹೆಸರು ಮಾಡಿರುವ ಸಾಧಕರು. ನಿರಂತರ ಶೋಧನೆ, ಪರಿಪೂರ್ಣ ಕಲಾವ್ಯಕ್ತಿತ್ವ ಕೆಎಎಸ್ ಅವರ ವೈಶಿಷ್ಟ್ಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ವಾಗಟ ಅಗ್ರಹಾರ ಸುಬ್ರಮಣ್ಯಂ ಅವರ ಮೂಲ ನೆಲೆ. ಬಾಲ್ಯದಲ್ಲೇ ಸಾಹಿತ್ಯ- ಕಲೆಯ ಬಗೆಗೆ ಆಸಕ್ತಿ. ಬಿ.ಎ, ಎ.ಸಿ.ಬಿ ಪದವೀಧರರು. ೧೯೬೯ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವೃತ್ತಿ ಜೀವನ. ಕಲಾಕೃತಿಗಳ ರಚನೆ, ಕಲಾವಿಮರ್ಶೆ ನೆಚ್ಚಿನ ಕಾರ್ಯಕ್ಷೇತ್ರ ಕರ್ನಾಟಕ ಚಿತ್ರಕಲಾ ಪರಿಷತ್ತು, ರಾಷ್ಟ್ರೀಯ ಕಲಾಮೇಳ ಮತ್ತಿತರೆಡೆ ಕಲಾಕೃತಿಗಳ ಪ್ರದರ್ಶನದಿಂದ ಮುಂಚೂಣಿಗೆ, ದೃಶ್ಯಕಲೆಯ ಕಲಾವಿಮರ್ಶಕರಾಗಿ ನಾಲ್ಕು ದಶಕಕ್ಕೂ ಮೀರಿದ ಅನನ್ಯ ಸೇವೆ. ವೆಂಕಟಪ್ಪ ಪುನರಾವಲೋಕನ, ದೃಶ್ಯಧ್ಯಾನ, ಲಲಿತಕಲೆಗಳು, ಆಧುನಿಕ ಶಿಲ್ಪಕಲೆ ಮುಂತಾದ ಮಹತ್ವದ ಕೃತಿಗಳ ರಚನಕಾರರು.ಜನಪ್ರಿಯ ಅಂಕಣಕಾರರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ, ಗೌರವ ಫೆಲೋಶಿಪ್, ಕಲಾಧ್ಯಾನ ಪುರಸ್ಕಾರಗಳಿಂದ ಭೂಷಿತರು.

Categories
ಗುಡಿ ಕೈಗಾರಿಕೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನವರತ್ನ ಇಂದುಕುಮಾರ್

ಗುಡಿಕೈಗಾರಿಕೆಯ ಹಿರಿಮೆಯನ್ನು ಸಾರಿದ ಪಾರಂಪರಿಕ ಕರಕುಶಲ ಕಲಾವಿದೆ ನವರತ್ನ ಇಂದುಕುಮಾರ್. ಗೊಂಬೆ ಮತ್ತು ಹೂಗುಚ್ಛಗಳ ತಯಾರಿಕೆಯಲ್ಲಿ ವಿಶಿಷ್ಟತೆ ಮೆರೆದವರು.
ಚಿಕ್ಕಮಗಳೂರಿನ ವಾಸಿಗಳಾದ ನವರತ್ನ ಇಂದುಕುಮಾರ್ ಹಿಂದಿ ರಾಷ್ಟ್ರಭಾಷಾ ವಿಶಾರದರು, ಬಾಲ್ಯದಿಂದಲೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ವಿಶೇಷ ಆಸಕ್ತಿ, ಗೊಂಬೆ ಮತ್ತು ಹೂಗುಚ್ಛ ತಯಾರಿಕೆಯಲ್ಲಿ ಕಲಾನೈಪುಣ್ಯತೆ, ಬಟ್ಟೆ ಮತ್ತು ವುಡ್‌ವುಲ್‌ನಲ್ಲಿ ಗೊಂಬೆಗಳ ತಯಾರಿಸುವ ಭಾರತದಲ್ಲಿರುವ ಅಪರೂಪದ ಮೂವರು ಕಲಾವಿದರಲ್ಲಿ ಒಬ್ಬರೆಂಬುದು ನಾಡಿನ ಹೆಮ್ಮೆ, ಗಾಜು ಮತ್ತು ಮರದ ಮೇಲೆ ಪೈಂಟಿಂಗ್, ಉಬ್ಬು ಚಿತ್ರಗಳ ರಚನೆ, ಪಂಪನ ಆದಿಪುರಾಣದ ೩೨ ದೃಶ್ಯಗಳು, ಹೊಂಬುಜ ಪದ್ಮಾವತಿಯ ೨೪ ಕೈಗಳುಳ್ಳ ಚಾಮುಂಡೇಶ್ವರಿ, ಯಕ್ಷಗಾನದ ಗೊಂಬೆಗಳು, ಶಿಲಾಬಾಲಿಕೆಯರು, ಜಾನಪದ ಗೊಂಬೆಗಳು ಸೇರಿ ಸಾವಿರಾರು ಗೊಂಬೆಗಳ ರಚನೆ, ಗೊಂಬೆ ತಯಾರಿಕೆ- ಎಂಬೋಸಿಂಗ್ ಬಗ್ಗೆ ಯುವಪೀಳಿಗೆಗೆ ತರಬೇತಿ.ವೇದಿಕೆಗಳ ನಿರ್ಮಾಣದಲ್ಲೂ ನಿಸ್ಸಿಮರು, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ವೇದಿಕೆ, ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನದ ವೇದಿಕೆ ಮುಂತಾದ ವೇದಿಕೆಗಳು ಇವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿವೆ. ರಾಜ್ಯ-ಹೊರರಾಜ್ಯಗಳಲ್ಲಿನ ಅನೇಕ ಉತ್ಸವಗಳಲ್ಲಿ ಕರಕುಶಲ ಉತ್ಪನ್ನಗಳನ್ನು ಪ್ರದರ್ಶಿಸಿರುವ ನವರತ್ನ ಅವರು ಸಾಂಸ್ಕೃತಿಕ ಸಂಘಟನೆ-ಬರಹದಲ್ಲೂ ತೊಡಗಿಕೊಂಡಿರುವ ಬಹುಮುಖ ಪ್ರತಿಭೆ. ಹತ್ತಾರು ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಬಿ.ಜಿ. ಮೋಹನ್‌ದಾಸ್

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯ ಅನ್ವರ್ಥಕವಾಗಿರುವವರು ಬಿ.ಜಿ.ಮೋಹನ್‌ದಾಸ್. ಕೊಲ್ಲಿ ರಾಷ್ಟ್ರದಲ್ಲಿ ಕನ್ನಡದ ಕಂಪು ಪಸರಿಸಿದ ಹೆಮ್ಮೆಯ ಕನ್ನಡಿಗ.
ದಕ್ಷಿಣ ಕನ್ನಡದ ಅಪ್ಪಟ ಕನ್ನಡಾಭಿಮಾನಿ ಮೋಹನ್‌ದಾಸ್, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಬಿಜೂರು ಹುಟ್ಟೂರು. ಹುಟ್ಟಿನಿಂದಲೇ ಕನ್ನಡವೆಂದರೆ ಪಂಚಪ್ರಾಣ. ಮಣಿಪಾಲದಲ್ಲಿ ಔಷಧಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಔಷಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಅಲ್ಪಕಾಲದ ಸೇವೆ. ಜೇಸಿಸ್ ಸಂಸ್ಥೆಯಲ್ಲಿ ಪ್ರಧಾನಕಾರ್ಯದರ್ಶಿಯಾಗಿ ಸಂಘಟನಾನುಭವ ಗಳಿಕೆ. ಆನಂತರ ಬದುಕು ಅರಸಿ ದುಬೈಗೆ, ಪರದೇಶದಲ್ಲಿ ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸೇವೆಗೆ ದೃಢಸಂಕಲ್ಪ, ಕೊಲ್ಲಿಯಲ್ಲಿ ಕನ್ನಡಿಗರನ್ನು ಸಂಘಟಿಸಿ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಮತ್ತಿತರ ಚಟುವಟಿಕೆಗಳನ್ನು ಕೈಗೊಂಡು ಹೊರನಾಡ ಕನ್ನಡಿಗರ ಧ್ವನಿಯಾದವರು. ೧೯೮೫ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ೮೯ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರು, ಗಲ್ಫ್ ವಾರ್ತೆ ಡಾಟ್ ಕಾಂ, ಗಲ್ಫ್ ಕನ್ನಡಿಗ ಅಂತರ್ಜಾಲ ಸುದ್ದಿಪತ್ರಿಕೆಯ ಮೂಲಕ ಕೊಲ್ಲಿ ರಾಷ್ಟ್ರದ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ಸ್ತುತ್ಯಾರ್ಹ ಕಾರ್ಯ. ವಿದೇಶಿ ನೆಲದಲ್ಲಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಸಾರ್ಥಕ ಸೇವೆ. ಪ್ರತಿಷ್ಠಿತ ಮಯೂರ ಪ್ರಶಸ್ತಿ, ಮಣಿಪಾಲ ವಿವಿಯ ಅತ್ಯುತ್ತಮ ಪೂರ್ವ ವಿದ್ಯಾರ್ಥಿ ಗೌರವಕ್ಕೆ ಪಾತ್ರವಾಗಿರುವ ಮೋಹನದಾಸ್ರ ಕನ್ನಡಸೇವೆ ಸರ್ವಕಾಲಕ್ಕೂ ಮಾದರಿಯೇ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಗಂಗಾಧರ ಬೇವಿನಕೊಪ್ಪ

ತಾಂತ್ರಿಕ ತಜ್ಞ ಉದ್ಯಮಿ, ಚತುರ ಸಂಘಟನಾಕಾರರಾದ ಗಂಗಾಧರ ಬೇವಿನಕೊಪ್ಪ ಅವರು ‘ಗಾಂಧಿ’ ಎಂಬ ವಿಶೇಷ ನಾಮದಿಂದಲೇ ಚಿರಪರಿಚಿತರು. ವಿದೇಶದಲ್ಲಿ ನಾಡಿನ ಕೀರ್ತಿ, ಧೀಶಕ್ತಿಯನ್ನು ಬೆಳಗಿದ ಹೆಮ್ಮೆಯ ಹೊರನಾಡು ಕನ್ನಡಿಗ,
ಗಂಗಾಧರ ಬೇವಿನಕೊಪ್ಪ ಗಡಿನಾಡಿನ ಪ್ರತಿಭೆ, ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಬಳಿಯ ಕೆಂಗನೂರು ಹುಟ್ಟೂರು. ಬಾಲ್ಯದಿಂದಲೂ ಪ್ರಖರ ಬುದ್ಧಿವಂತಿಕೆ. ಆಸ್ಟ್ರೇಲಿಯಾದ ಡೇಕಿನ್ ವಿ.ವಿ ಯ ಬಿ.ಟೆಕ್ ಪದವೀಧರರು. ಟೂಲ್ ಅಂಡ್ ಡೈ ಮೇಕಿಂಗ್‌ನಲ್ಲಿ ಡಿಪ್ಲೋಮಾ ಪಡೆದವರು. ತಾಂತ್ರಿಕ ಪರಿಣಿತಿ-ಅನುಭವದ ಆಧಾರದ ಮೇರೆಗೆ ಆಸ್ಟ್ರೇಲಿಯಾದ ಮೇಲ್ಬರ್ನನಲ್ಲಿ ದುಡಿಮೆ, ೧೯೯೪ರಲ್ಲಿ ಸ್ವಂತ ಉದ್ದಿಮೆ ಕೊಪ್ಪ ಇಂಜಿನಿಯರಿಂಗ್‌ ಸಂಸ್ಥೆ ಸ್ಥಾಪನೆ-ಯಶಸ್ಸು. ಆನಂತರ ಮೌಲ್ಡಿಂಗ್ ವಸ್ತುಗಳನ್ನು ಉತ್ಪಾದಿಸುವ ಬೆವ್ ಪ್ಲಾಸ್ಟಿಕ್ಸ್ ಸ್ಥಾಪಿಸಿ ಉನ್ನತ ಸಾಧನೆ. ಅನಿವಾಸಿ ಭಾರತೀಯರು ನೆಲೆನಿಲ್ಲಲು ನೆರವಾದ ಸಹೃದಯಿ. ಮೇಲ್ಬರ್ನ್ ಕನ್ನಡ ಸಂಘ, ವಿವೇಕಾನಂದ ಯೋಗ ಕೇಂದ್ರ, ಬಸವ ಸಮಿತಿ, ರೋಟರಿ ಕ್ಲಬ್‌ ಮತ್ತಿತರ ಹಲವು ಸಾಮಾಜಿಕ, ವೃತ್ತಿಪರ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸಂಘಟಕರಾಗಿ ಪರಿಶ್ರಮ-ಸಾರ್ಥಕ ಸೇವೆ ಸಲ್ಲಿಸಿದ ಅದಮ್ಯ ಉತ್ಸಾಹದ ಮಾದರಿ ತಂತ್ರಜ್ಞ ಉದ್ಯಮಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಜಯಂತ ಮುನ್ನೊಳ್ಳಿ

ವರ್ಣಚಿತ್ರಕಲೆಯಲ್ಲಿ ತಮ್ಮದೇ ಅಚ್ಚಳಿಯದ ಛಾಪು ಮೂಡಿಸಿದ ಕಲಾಕುಸುಮ ಜಯಂತ ಮುನ್ನೊಳ್ಳಿ. ವೈವಿಧ್ಯಮಯ ಕಲಾಪ್ರದರ್ಶನಗಳ ಮೂಲಕ ಕಲಾವಲಯದಲ್ಲಿ ಸಂಚಲನ ಮೂಡಿಸಿದ ಸಾಧಕ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಮೂಲದವರಾದ ಜಯಂತ ಮುನ್ನೊಳ್ಳಿ ಬಹುಭಾಷಾ ಪ್ರವೀಣರು. ಆಫ್ರಿಕನ್ ಭಾಷೆಯನ್ನೂ ಬಲ್ಲವರು. ೧೯೪೦ರ ಡಿಸೆಂಬರ್ ೧೦ರಂದು ಜನಿಸಿದ ಮುನ್ನೊಳ್ಳಿ ೬೪ರಲ್ಲಿ ಮದ್ರಾಸ್ ರಾಜ್ಯದ ಸೇಲಂನಲ್ಲಿ ಹ್ಯಾಂಡ್‌ಲೂಮ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಕಲಿತವರು. ಪೂರ್ವ ಆಫ್ರಿಕಾದ ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದವರು. ಕ್ರಿಯೇಟಿವ್ ಪೇಟಿಂಗ್ ಮತ್ತು ಆಯಿಲ್ ಪೇಟಿಂಗ್‌ನಲ್ಲಿ ವಿಶೇಷ ಪರಿಣಿತಿಯುಳ್ಳವರು. ಮುಂಬಯಿನ ಎಲಿಮೆಂಟ್ರಿ ಡ್ರಾಯಿಂಗ್ ಕಾಂಪಿಟೇಶನ್‌ನಲ್ಲಿ ಪ್ರಥಮ ಬಹುಮಾನ ಗಳಿಸಿದ ಪ್ರತಿಭಾವಂತರು. ಮುಂಬಯಿನ ಜಹಾಂಗೀರ ಆರ್ಟ್‌ ಗ್ಯಾಲರಿಯಲ್ಲಿ ಹತ್ತು ಬಾರಿ ಸೇರಿ ದೇಶದ ವಿವಿಧೆಡೆ ೫೦ಕ್ಕೂ ಹೆಚ್ಚು ಏಕವ್ಯಕ್ತಿ ಕಲಾಪ್ರದರ್ಶನದ ಹೆಗ್ಗಳಿಕೆ ಇವರದ್ದು. ಪ್ರತಿ ಪ್ರದರ್ಶನದಲ್ಲೂ ನವೀನ ಕಲಾಕೃತಿಗಳ ಮೂಲಕ ಕಲಾಪ್ರೇಮಿಗಳಲ್ಲಿ ಬೆರಗು ಮೂಡಿಸಿದ ಕಲಾವಂತಿಕೆ ಜಯಂತ ಅವರ ವಿಶೇಷತೆ. ೮೦ರ ಆಸುಪಾಸಿನಲ್ಲೂ ಕಲಾಕೃತಿಗಳ ರಚನೆಯಲ್ಲಿ ತನ್ಮಯರಾಗಿರುವ ಅವರು ಕಲಾಕೃತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಬಂದಿವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಭಾಜನರು.

Categories
ನ್ಯಾಯಾಂಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಎನ್. ಕುಮಾರ್

ನ್ಯಾಯಾಂಗ ಕ್ಷೇತ್ರದಲ್ಲಿ ಜನಪರ ನಿಲುವುಗಳಿಂದಲೇ ಹೆಸರುವಾಸಿಯಾದವರು ನ್ಯಾಯಮೂರ್ತಿಗಳಾದ ಎನ್. ಕುಮಾರ್, ವಕೀಲರು, ನ್ಯಾಯಾಧೀಶರು, ನ್ಯಾಯಾಂಗ ತರಬೇತುದಾರರಾಗಿ ಅನುಪಮ ಸೇವೆಗೈದ ಸಾಧಕರು.
ಪ್ರಸ್ತುತ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಎನ್. ಕುಮಾರ್ ಅವರು ವಕೀಲಿ ವೃತ್ತಿ ಆರಂಭಿಸಿದ್ದು ೧೯೭೬ರಲ್ಲಿ. ವಕೀಲ ವ್ಯಾಸಂಗವನ್ನು ಆಳವಾಗಿ ಅಧ್ಯಯನಿಸಿದ ಅವರು ತಮ್ಮ ಅಭ್ಯಾಸವನ್ನು ಹೈಕೋರ್ಟ್‌ಗೆ ವಿಸ್ತರಿಸಿದರು. ಸಿವಿಲ್‌, ಕಂಪನಿ, ಕಾರ್ಮಿಕ, ತೆರಿಗೆ, ಐಪಿರ್ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ವಿಶೇಷ ಪರಿಣಿತಿ ಸಾಧಿಸಿದವರು. ಕರ್ನಾಟಕದ ಭಾರತೀಯ ಕಾನೂನು ವರದಿಗಳ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ೨೦೦೦ರಲ್ಲಿ ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಹಲವು ಮಹತ್ವದ ಜನಪರ ತೀರ್ಪುಗಳ ಮೂಲಕ ಜನಾನುರಾಗಿಯಾದವರು. ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ, ನ್ಯಾಯಾಂಗದ ಅಧಿಕಾರಿಗಳಿಗೆ ತರಬೇತುದಾರರಾಗಿಯೂ ಸೇವೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ನ್ಯಾಯಾಧೀಶರ ರೌಂಡ್ ಟೇಬಲ್ ಸಮ್ಮೇಳನಗಳಲ್ಲಿ ಉಪನ್ಯಾಸ-ಪ್ರಬಂಧಗಳ ಮಂಡನೆ ಮಾಡಿರುವ ನ್ಯಾಯಮೂರ್ತಿಗಳಿಗೆ ಅಲೈಯನ್ಸ್ ವಿ.ವಿ ಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಅನನ್ಯ ಸೇವೆಗೆ ಸಂದಿರುವ ಸತ್ಪಲ. ಸಧ್ಯ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ಸೇವಾನಿರತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೃಷ್ಣಪ್ರಸಾದ್. ಕೆ

ಕತ್ತಲೆಯಲ್ಲಿರುವವರ ಬಾಳು ಬೆಳಗಿದ ದೀಪವಾದವರು ಹೆಸರಾಂತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್.ಕೆ. ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಜಾಗೃತಿ ಮೂಡಿಸಲೆಂದೇ ಬದುಕು ಮೀಸಲಿಟ್ಟಿರುವ ವೈದ್ಯಶಿರೋಮಣಿ.
ಉಡುಪಿ ಜಿಲ್ಲೆಯವರಾದ ಕೃಷ್ಣಪ್ರಸಾದ್ ನೇತ್ರ ಚಿಕಿತ್ಸೆಯಲ್ಲಿ ಅದ್ವಿತೀಯ ಸಾಧನೆಗೈದವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಎಸ್. ಪೂರೈಸಿದವರು. ಅದೇ ಕಾಲೇಜಿನ ಪ್ರಾಧ್ಯಾಪಕ, ಉಡುಪಿ ಜಿಲ್ಲಾ ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥ, ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಆಸ್ಪತ್ರೆಯ ಗೌರವ ಪ್ರಾಧ್ಯಾಪಕರಾಗಿ, ಸುಪ್ರಸಿದ್ಧ ಪ್ರಸಾದ್ ನೇತ್ರಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಣೆ. ಕಣ್ಣಿನ ಚಿಕಿತ್ಸೆಯಲ್ಲಿ ಅಪೂರ್ವ ಸೇವೆ ಕೃಷ್ಣಪ್ರಸಾದ್‌ ಹಿರಿಮೆ. ೨೦ ಲಕ್ಷ ಜನರ ಕಣ್ಣಿನ ತಪಾಸಣೆ, ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಸೇವೆ, ೬೦ ಸಾವಿರಕ್ಕೂ ಮಿಗಿಲಾದ ಕಣ್ಣಿನ ಶಸ್ತ್ರಚಿಕಿತ್ಸೆ, ೩.೭೫ ಲಕ್ಷ ಜನರಿಗೆ ಉಚಿತ ಕನ್ನಡ ವಿತರಣೆ, ಉಚಿತ ನೇತ್ರ ತಪಾಸಣಾ ಶಿಬಿರಗಳು, ಕಣ್ಣಿನ ಆರೋಗ್ಯದ ಬಗ್ಗೆ ಜನಸಾಮಾನ್ಯರು-ಮಕ್ಕಳಲ್ಲಿ ಜಾಗೃತಿ ಮೂಡಿಸುವಿಕೆ ಮುಂತಾದವು ಕೃಷ್ಣಪ್ರಸಾದ್‌ ಸಾಧನೆಯ ಮೈಲಿಗಲ್ಲುಗಳು. ಹತ್ತಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ, ಉಪನ್ಯಾಸದ ಹೆಗ್ಗಳಿಕೆ.ರಾಜ್ಯ, ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಂದಲೂ ಭೂಷಿತರಾಗಿರುವ ಕೃಷ್ಣಪ್ರಸಾದ್ ವೈದ್ಯಲೋಕದ ನಕ್ಷತ್ರಗಳಲ್ಲಿ ಒಬ್ಬರೆಂಬುದಕ್ಕೆ ಅವರ ಸಾಧನೆಯೇ ಜ್ವಲಂತ ಸಾಕ್ಷಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಜಿ.ಟಿ. ಸುಭಾಷ್

ವೈದ್ಯಕೀಯ ಕ್ಷೇತ್ರದಲ್ಲಿ ಬಹುರೂಪಿ ಸೇವೆ-ಸಾಧನೆಗೈದ ಅಪರೂಪದ ಪ್ರತಿಭಾವಂತರು ಡಾ.ಜಿ.ಟಿ.ಸುಭಾಷ್. ವೈದ್ಯಕೀಯ, ಸಮಾಜಸೇವೆ, ಆಡಳಿತ, ಸಾಮಾಜಿಕ ಕ್ಷೇತ್ರದ ಸಾಧಕರು.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಗಂಜಿಗೆರೆಯವರಾದ ಸುಭಾಷ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜಿ.ಎ.ತಿಮ್ಮಪ್ಪಗೌಡರ ಸುಪುತ್ರರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಡಿ, ನಿಮ್ಹಾನ್ಸ್‌ನಲ್ಲಿ ಡಿ.ಎಂ.ಮಾಡಿದವರು. ಗ್ರಾಮೀಣ ವೈದ್ಯಕೀಯ ಸೇವೆಗಳ ಬಳಿಕ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನರವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಥಮ ಡೀನ್ – ನಿರ್ದೇಶಕರಾಗಿ ಸ್ಮರಣೀಯ ಸೇವೆ. ರಾಜೀವಗಾಂಧಿ ವಿವಿ ಹಣಕಾಸು ಸಮಿತಿಯ ಸೆನೆಟ್ ಸದಸ್ಯ, ಕರ್ನಾಟಕ ಮೆಡಿಕಲ್ ಕೌನ್ಸಿಲ್‌ ಸದಸ್ಯ, ಯುಜಿಸಿಯ ಮೆಡಿಕಲ್ ಇನ್ಸ್‌ಪೆಕ್ಟರ್, ಪಿಎಂಎಸ್‌ ವೈನ ವಿಶೇಷ ಆಡಳಿತಾಧಿಕಾರಿ..ಹೀಗೆ ಬಹುಹುದ್ದೆಗಳಲ್ಲಿ ದುಡಿದವರು.ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರ, ಬೀದಿ ನಾಟಕಗಳು, ಸಮ್ಮೇಳನಗಳು, ಪರಿಸರ ಸಂರಕ್ಷಣೆ-ಧೂಮಪಾನದ ವಿರುದ್ಧ ಜಾಗೃತಿ ಮೂಡಿಸುವಿಕೆ, ಪಾರ್ಶ್ವವಾಯು ಪೀಡಿತರಿಗೆ ಮಾಹಿತಿ-ಚಿಕಿತ್ಸೆ ಮುಂತಾದ ಸಾಮಾಜಿಕ ಕಾರ್ಯಗಳಿಂದಲೂ ಚಿರಪರಿಚಿತರು.ಡಾ. ಬಿ.ಸಿ.ರಾಯ್ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಫೆಲೋಶಿಪ್ ಮತ್ತಿತರ ಗೌರವಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಆರ್. ನಾಗರತ್ನ

ವೈದ್ಯ ನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥಕವಾಗಿ ಬದುಕಿರುವವರು ಡಾ.ಆರ್.ನಾಗರತ್ನ, ಯೋಗ ಚಿಕಿತ್ಸಾ ವಿಧಾನದಲ್ಲಿ ಸಿದ್ಧಹಸ್ತರು, ಅನುಪಮ ಸೇವೆಯ ಮಾದರಿ ವೈದ್ಯರು.
ಬೆಂಗಳೂರಿನವರಾದ ಡಾ. ನಾಗರತ್ನ ವೈದ್ಯಕೀಯ ಸ್ನಾತಕೋತ್ತರ ಪದವೀಧರರು. ರಕ್ತದೊತ್ತಡ, ಮಧುಮೇಹ, ಅಸ್ತಮಾ, ಹೃದಯಸಂಬಂಧಿ ಕಾಯಿಲೆಗಳಿಗೆ ಯೋಗ ಚಿಕಿತ್ಸಾ ವಿಧಾನ ಅಭಿವೃದ್ಧಿ ಪಡಿಸಿ ಐದು ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದವರು. ಆರು ಪ್ರಾಯೋಜಿತ ಸಂಶೋಧನೆ ಪೂರ್ಣಗೊಳಿಸಿದ ಹಿರಿಮೆ, ಯೋಗ ಚಿಕಿತ್ಸಾ ವಿಧಾನದ ರಚನೆ, ವ್ಯಾಲಿಡೇಶನ್, ಪ್ರಮಾಣೀಕರಣ ಮತ್ತು ಪರೀಕ್ಷಾ ಪ್ರಮಾಣೀಕರಣದಲ್ಲಿ ಪರಿಣಿತಿ ಸಾಧಿಸಿದ ಗರಿಮೆ ಅವರದ್ದು. ಬೆಂಗಳೂರು ಆರೋಗ್ಯಧಾಮದ ಮುಖ್ಯ ಆರೋಗ್ಯಾಧಿಕಾರಿ, ವಾಣಿ ವಿಲಾಸ ಆಸ್ಪತ್ರೆಯ ಸಹಾಯಕ ಶಸ್ತ್ರಚಿಕಿತ್ಸಕರು, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜು, ಮಡಿಕೇರಿಯ ಅಶ್ವಿನಿ ಆಸ್ಪತ್ರೆ, ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ, ಅಮೆರಿಕದ ಆಸ್ಪತ್ರೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಮಾನವೀಯ ಸೇವೆ. ಹನ್ನೊಂದು ಕೃತಿಗಳ ರಚಿಸಿ ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಮಂಡಿಸಿರುವ ಡಾ. ಆರ್.ನಾಗರತ್ನ ಅವರ ಸೇವೆಗೆ ಸಂದಿರುವ ಹತ್ತಾರು ಪ್ರಶಸ್ತಿಗಳ ಘನತೆಯೇ ಹೆಚ್ಚಿರುವುದು ಉತ್ಪಕ್ಷೆಯಲ್ಲದ ನಿಜದ ಮಾತು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಟಿ.ಹೆಚ್. ಅಂಜನಪ್ಪ

ವೈದ್ಯಕೀಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯ ಮೂಲಕ ಮಾದರಿಯಾಗಿರುವ ಸಾಧಕರು ಡಾ. ಟಿ.ಹೆಚ್. ಅಂಜನಪ್ಪ ಸಾವಿರಾರು ಶಸ್ತ್ರಚಿಕಿತ್ಸೆಗಳ ಮೂಲಕ ರೋಗಿಗಳ ಜೀವರಕ್ಷಿಸಿದ ಧನ್ವಂತರಿ,
ವೈದ್ಯಕೀಯ, ಸಮಾಜಸೇವೆ, ಉಪನ್ಯಾಸ, ಆರೋಗ್ಯ ಶಿಬಿರಗಳ ಸಂಘಟನೆಯ ಕಾರ್ಯದಲ್ಲಿ ಮೈಲಿಗಲ್ಲು ನಿರ್ಮಿಸಿರುವ ಅಪರೂಪದ ವೈದ್ಯರು ಡಾ.ಟಿ.ಹೆಚ್.ಅಂಜನಪ್ಪ, ಮೂರೂವರೆ ದಶಕಗಳಿಂದಲೂ ವೈದ್ಯಕೀಯ ಸೇವೆಯಲ್ಲಿ ಅನವರತ ನಿರತರಾಗಿರುವ ಡಾ.ಟಿ.ಹೆಚ್. ಅಂಜನಪ್ಪ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಂಪೇಗೌಡ ಆಸ್ಪತ್ರೆಗಳಲ್ಲಿ ರೋಗಿಗಳ ಜೀವರಕ್ಷಣೆಗೆ ದುಡಿದವರು. ೩೫ ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ವಿಶಿಷ್ಟ ದಾಖಲೆ ಅವರದ್ದು. ಬಡರೋಗಿಳಿಗೆ ಉಚಿತ ಚಿಕಿತ್ಸೆ, ೭೦೦ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳ ಆಯೋಜನೆ, ೯೦೦ಕ್ಕೂ ಅಧಿಕ ಆರೋಗ್ಯದ ಕುರಿತ ಉಪನ್ಯಾಸ, ಕರ್ನಾಟಕ ಕ್ಯಾನ್ಸರ್ ಸಂಸ್ಥೆಯಿಂದ ನಿರಂತರ ಸಮಾಜಸೇವೆ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಅನೇಕ ಕಾಲೇಜು-ಸಂಘಸಂಸ್ಥೆಗಳಲ್ಲಿ ಅರ್ಬುದ ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಡಾ.ಟಿ.ಹೆಚ್ ಅಂಜನಪ್ಪ ಅವರ ಬಹುಮುಖಿ ಸೇವೆ-ಸಾಧನೆಗೆ ಹಿಡಿದ ಕೈಗನ್ನಡಿ. ಹತ್ತಾರು ಪ್ರಶಸ್ತಿ-ಗೌರವಗಳಿಗೆ ಪಾತ್ರವಾಗಿರುವ ಅಂಜನಪ್ಪ ವೈದ್ಯರಂಗದ ವಿಶಿಷ್ಟ ಹಾಗೂ ಮಾದರಿ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹನುಮಂತರಾಯ ಪಂಡಿತ್‌

ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರು ಡಾ. ಹನುಮಂತರಾಯ ಪಂಡಿತ್. ಜ್ಯೋತಿಷ್ಯ, ಹೋಮಿಯೋಪತಿ ಮತ್ತು ಆಯುರ್ವೇದದಲ್ಲಿ ಹೊಸ ಸಂಶೋಧನೆಗಳಿಂದ ಜನೋಪಕಾರಿಯಾದ‌ ಪಂಡಿತರು.
ತುಮಕೂರು ತಾಲ್ಲೂಕಿನ ರಾಮುಗನಹಳ್ಳಿ ಹನುಮಂತರಾಯರ ಹುಟ್ಟೂರು. ೧೯೨೯ರ ಮೇ.೨೫ರಂದು ಜನನ. – ಓದು, ಛಲ ಹುಟ್ಟುಗುಣ. ಬಡತನದಿಂದಾಗಿ ಪ್ರೌಢಶಾಲೆಯ ಮೆಟ್ಟಿಲೇರಲಾಗದಿದ್ದರೂ ಸಂಸ್ಕೃತ ಭಾಷಾ ಅಧ್ಯಯನದಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್‌ ಗಳಿಸಿದವರು. ಪರಿಶ್ರಮದಿಂದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಅಧ್ಯಾಪಕ, ಉಪನ್ಯಾಸಕರಾಗಿ ಹುದ್ದೆಗೇರಿದವರು. ಎಸ್‌ಎಸ್‌ಎಲ್, ಕನ್ನಡಪಂಡಿತ ಪದವಿ, ಜ್ಯೋತಿಷ್ಯ, ಹೋಮಿಯೋಪಥಿ ಹಾಗೂ ಆಯುರ್ವೇದದ ಅಧ್ಯಯನವೆಲ್ಲವೂ ಛಲದ ಫಲವೇ. ಮಾಧ್ಯಮಿಕ ಶಾಲೆಯ ಉಪಪಠ್ಯವಾದ ನಾಲ್ಕು ಕಿರುಕಥೆಗಳು, ಹತ್ತನೇ ತರಗತಿ ಪಠ್ಯಪುಸ್ತಕವಾದ ಸಾಹಿತ್ಯಸಂಪುಟ ರಚಿಸಿದವರು. ವಿವಿಧ ಕಾಯಿಲೆಗಳ ನಿವಾರಣೆಗೆ ೨೦ ಸಂಶೋಧನೆಗಳು, ಆಯುರ್ವೇದ ಔಷಧಿಗಳ ನಿರ್ಮಾಣಗಾರದ ಸ್ಥಾಪನೆ, ಆಯುರ್ ಪಾರ್ಕ್ ಹೆಲ್ತ್‌ಕೇರ್ ಲಿಮಿಟೆಡ್‌ನ ನಿರ್ದೇಶಕತ್ವ ಸಾದು ಜನಾಂಗದ ಇತಿಹಾಸದ ಸಂಗ್ರಹ, ಸಹಕಾರ ಸಂಘ ಸ್ಥಾಪನೆ, ಸಾದರ ಸುದ್ದಿ ಪತ್ರಿಕೆ. ಎಲ್ಲವೂ ಸಾಧನೆಯ ಮೈಲಿಗಲ್ಲುಗಳೇ.೯೦ರ ಇಳಿವಯಸ್ಸಿನಲ್ಲೂ ಕ್ರಿಯಾಶೀಲವಾಗಿರುವ ಹಿರಿಯ ಜೀವ ಸಾಧಕರಿಗೆ ನಿಜಮಾದರಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ

ಯೋಗ ಶಿಕ್ಷಣದ ಮೂಲಕ ಸಮಾಜದ ಸ್ವಾಸ್ಥ್ಯ ರಕ್ಷಣೆ-ಪೋಷಣೆಗೆ ಶ್ರಮಿಸುತ್ತಿರುವ ವಿಶಿಷ್ಟ ಸಂಸ್ಥೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. ಪಾರಂಪರಿಕ ಯೋಗ ಪದ್ಧತಿಯ ಪ್ರಸಾರಕ್ಕಾಗಿಯೇ ಮುಡಿಪಿರುವ ಸಂಘಟನೆ.
ತುಮಕೂರಿನಲ್ಲಿ ನೆಲೆನಿಂತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿಯು ೧೯೮೦ರಲ್ಲಿ ಪ್ರಾರಂಭಗೊಂಡಿತು. ಯೋಗ ಗುರು ಅ.ರಾ.ರಾಮಸ್ವಾಮಿ ಅವರು ಈ ಸಂಸ್ಥೆಯ ರೂವಾರಿಗಳು. ಪುಟ್ಟ ಯೋಗ ತರಗತಿ ರೂಪದಲ್ಲಿ ಮೈದೆಳೆದ ಸಂಸ್ಥೆ ಆನಂತರ ಬೃಹದಾಕಾರವಾಗಿ ಮೈಚಾಚಿ ನಿಂತಿದ್ದು ಇತಿಹಾಸ. ಮಲ್ಲಾಡಿಹಳ್ಳಿಯ ರಾಘವೇಂದ್ರ ಮಹಾಸ್ವಾಮಿಗಳು, ವಿಶ್ವವಿಖ್ಯಾತ ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ರೂಪತೆಳೆದ ಈ ಸಂಸ್ಥೆಯದ್ದು ಸಂಸ್ಕಾರ, ಸಂಘಟನೆ ಮತ್ತು ಸೇವೆಯೇ ಮುಖ್ಯಗುರಿ. ಸರಿಸುಮಾರು ೪೦ ವರ್ಷಗಳಿಂದಲೂ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿರುವುದು ಸ್ಮರಣಾರ್ಹ. ರಾಜ್ಯವೊಂದರಲ್ಲೇ ೯೦೦ ಶಾಖೆ ಮಾತ್ರವಲ್ಲದೆ, ಹೊರರಾಜ್ಯ ಮತ್ತು ಹೊರದೇಶಗಳಲ್ಲೂ ಶಾಖೆ ಹೊಂದಿರುವ ಸಮಿತಿಯಲ್ಲಿ ಈವರೆಗೆ ನಲವತ್ತು ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರು ತಯಾರಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಯೋಗವನ್ನು ಕಲಿಸಿಕೊಡಲಾಗಿದ್ದು ಆ ಮೂಲಕ ಯುವಜನತೆಯ ಮಾನಸಿಕ-ದೈಹಿಕ ಆರೋಗ್ಯದ ಸುಸ್ಥಿರತೆಗೆ ಅಪೂರ್ವ ಕಾಣೆ ನೀಡಿರುವುದು ನಾಡಿಗೆ ನಾಡೇ ಹೆಮ್ಮೆ ಪಡುವ ವಿಷಯ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್

ಕಲಾರಕ್ಷಣೆ ಮತ್ತು ಕಲಾವಿದರ ಪೋಷಣೆಯಲ್ಲಿ ಅವಿರತ ಶ್ರಮ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯದ್ದು. ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಧೀಮಂತ ಸಂಸ್ಥೆ.
ಕರ್ನಾಟಕ ಕಲಾರಂಗದ ಪ್ರಮುಖ ಸಂಸ್ಥೆಯೆನಿಸಿರುವ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರುವಾಸಿ. ಬಹಮುಖ ಪ್ರತಿಭೆ ರಾಘವೇಂದ್ರ ಜೆ.ಪ್ರಭಾತ್‌ ಅವರ ಕಲ್ಪನೆಯ ಕೂಸು. ಆಧ್ಯಾತ್ಮ, ತತ್ವ, ಸಾಹಿತ್ಯ, ಸಂಗೀತ, ನೃತ್ಯ, ನೃತ್ಯನಾಟಕ, ಪತ್ರಿಕೋದ್ಯಮ. ಹೀಗೆ ಹತ್ತು ಹಲವು ಮುಖದ ಕಲೆಯ ಪರಿಚಯವಿರುವ ರಾಘವೇಂದ್ರ ಪ್ರಭಾತ್ ಪ್ರಖರ ವಾಗ್ನಿ, ರಂಗನಟ, ನಿರ್ದೇಶಕ ಮತ್ತು ನೃತ್ಯ ನಾಟಕಗಳ ರಚನಕಾರರು.ರಾಜ್ಯ, ರಾಷ್ಟ್ರ ಮಾತ್ರವಲ್ಲದೆ, ಅಮೆರಿಕಾ, ಯುರೋಪ್, ಸಿಂಗಪುರ, ಮಲೇಷಿಯ ಮುಂತಾದ ಪೌರಾತ್ಯ ದೇಶಗಳಲ್ಲೆಲ್ಲಾ ಸಾಂಸ್ಕೃತಿಕ ಪ್ರವಾಸ ಕೈಗೊಂಡು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸಿದ್ದು ರಾಘವೇಂದ್ರದ ಹೆಗ್ಗಳಿಕೆ. ನೃತ್ಯ ಕ್ಷೇತ್ರಕ್ಕೆ ರಾಘವೇಂದ್ರರಂತೆ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್‌ ಸಂಸ್ಥೆಯದ್ದು ಮಹತ್ವದ ಕೊಡುಗೆ. ಸಂಸ್ಥೆಯ ‘ಶ್ರೀ ಕೃಷ್ಣಕಮಲಾನಾಥ್’ ಎಂಬ ವರ್ಣವು ಜಗತ್ತಿನಾದ್ಯಂತ ಎಲ್ಲಾ ನರ್ತಕರು ಪ್ರದರ್ಶಿಸುವ ಜನಪ್ರಿಯ ಆಕೃತಿಯಾಗಿರುವುದು ವಿಶೇಷ. ಕಲಾವನದ ಮಂದಾರಪುಷ್ಟವಾಗಿ ಪ್ರಭಾತ್ ಆರ್ಟ್ಸ್ ಇಂಟರ್‌ನ್ಯಾಷನಲ್ ತನ್ನ ಸುಗಂಧವನ್ನೂ ಬೀರುತ್ತಲೇ ಇರುವುದು ಸಾಂಸ್ಕೃತಿಕ ಹೆಗ್ಗುರುತು.

Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶಿವಾಜಿ ಛತ್ರಪ್ಪ ಕಾಗಣಿಕ‌ರ್

ಸಮಾಜಸೇವೆಯೇ ಭಗವಂತನ ಸೇವೆಯೆಂಬ ದಿವ್ಯನಂಬಿಕೆಯಲ್ಲಿ ಸೇವಾನಿರತರಾಗಿರುವವರು ಶಿವಾಜಿ ಛತ್ರಪ್ಪ ಕಾಗಣಿಕ‌. ಬೆಳಗಾವಿ ಜಿಲ್ಲೆಯ ಅಣ್ಣಾಹಜಾರೆಯೆಂದೇ ಜನಜನಿತರು.
ಬೆಳಗಾವಿ ತಾಲ್ಲೂಕಿನ ಕಟ್ಟನಭಾವಿ ಶಿವಾಜಿ ಕಾಗಣಿಕರ್‌ರ ಹುಟ್ಟೂರು. ಬಿಎಸ್ಸಿ ಪದವೀಧರರಾದ ಕಾಗಣಿಕ‌ ಬಾಲ್ಯದಿಂದಲೂ ಸಮಾಜಸೇವಾಸಕ್ತರು. ಪರಿಸರ ಅಧ್ಯಯನ, ಸಮಾಜಸೇವೆಯಲ್ಲಿ ಕ್ರಿಯಾಶೀಲರು. ಗಾಂಧಿವಾದದ ಅನುಯಾಯಿಯಾದ ಕಾಗಣಿಕ‌ ೧೯ನೇ ವಯಸ್ಸಿನಲ್ಲಿ ೧೯೬೮ರಲ್ಲಿ ಜನ ಜಾಗ್ರಣ ಸಂಸ್ಥೆಯನ್ನು ಸ್ಥಾಪಿಸಿ ಹಳ್ಳಿಗರಲ್ಲಿ ಶಿಕ್ಷಣ, ನೀರಿನ ಸಂರಕ್ಷಣೆ ಜೊತೆಗೆ ಗ್ರಾಮೀಣ ಜನಪದದ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿದ್ದು ಮೊದಲ ಸಾಮಾಜಿಕ ಹೆಜ್ಜೆ. ಆನಂತರ ಗ್ರಾಮದಲ್ಲಿ ರಾತ್ರಿ ಶಾಲೆಯ ಸ್ಥಾಪನೆ. ಹಳ್ಳಿಯ ಅಡುಗೆ ಮನೆಗಳನ್ನು ಹೊಗೆರಹಿತ ಮಾಡಲು ೬೦ಕ್ಕೂ ಅಧಿಕ ಜೈವಿಕ ಇಂಧನ ಘಟಕಗಳ ಸ್ಥಾಪನೆ. ಮಹಿಳಾ ಸಬಲೀಕರಣ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಗೆ ಐದು ದಶಕಗಳಿಂದ ಕಾರ್ಯೋನ್ಮುಖರಾಗಿ ಅವಿರತ ಶ್ರಮಿಸುತ್ತಿರುವ ಕಾಗಣಿಕ‌ ಅವರ ನಡೆ-ನುಡಿ- ವೇಷಭೂಷಣವೆಲ್ಲವೂ ಗಾಂಧಿಮಯ. ಗಾಮೀಣಾಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿರುವ ಶಿವಾಜಿ ಛತ್ರಪ್ಪ ಕಾಗಣಿಕ‌ ಪ್ರತಿಷ್ಠಿತ ದೇವರಾಜು ಅರಸು ಪ್ರಶಸ್ತಿಯಿಂದ ಭೂಷಿತರು. ೬೯ರ ಇಳಿವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ಅನುದಿನ ಅನುಕ್ಷಣ ನಿರತರಾಗಿರುವ ನಿಸ್ವಾರ್ಥ ಜೀವಿ.

Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಸಾಲುಮರದ ವೀರಾಚಾರ್

ಪರಿಸರ ಸಂರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡ ಅಪಾರ ವೃಕ್ಷಪ್ರೇಮಿ ವೀರಾಚಾರ್, ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿದ ಸಾವಿರ ಗಿಡಗಳ ಸರದಾರ, ಅಪೂರ್ವ ಪರಿಸರಮಿತ್ರ
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನಂದಿಹಳ್ಳಿ ವೀರಾಚಾರ್‌ರ ಹುಟ್ಟೂರಾದರೂ ಬದುಕು ನೆಲೆಗೊಂಡಿದ್ದು ಹರಿಹರ ತಾಲೂಕಿನ ಮಿಟ್ಲಕಟ್ಟೆಯಲ್ಲಿ. ಕುಲುಮೆ ಕೆಲಸವೇ ಬದುಕಿಗೆ ಆಧಾರ. ಬಾಲ್ಯದಿಂದಲೂ ಗಿಡ ಮರಗಳೆಂದರೆ ವಿಪರೀತ ಪ್ರೀತಿ. ಗಿಡ ನೆಡುವುದು ನೆಚ್ಚಿನ ಕೆಲಸ. ರಸ್ತೆ ಬದಿಯಲ್ಲಿ ಗಿಡ ನೆಡಲು ಆರಂಭಿಸಿದ ವೀರಾಚಾರ್‌ರ ಸಸ್ಯಪ್ರೇಮ ಬದುಕಿನ ಗತಿಯನ್ನೇ ಬದಲಿಸಿದ್ದು ವಿಶೇಷ. ಸ್ವಂತ ಕುಟುಂಬ, ಖಾಸಗಿ ಬದುಕು, ಕುಲುಮೆ ಉದ್ಯೋಗವನ್ನು ನಿರ್ಲಕ್ಷಿಸುವಷ್ಟು ಪರಿಸರ ಪ್ರೇಮ ಅವರದ್ದು. ಮದುವೆ ಸಮಾರಂಭ, ಗೃಹಪ್ರವೇಶ ಮುಂತಾದ ಯಾವುದೇ ಸಮಾರಂಭಗಳಿಗೂ ತೆರಳಿದರೂ ಗಿಡವೇ ಊಡುಗೊರೆ. ಸಾವಿನ ಮಣ್ಣಿಗೆ ಹೋದರೂ ಸಮಾಧಿ ಬಳಿ ಗಿಡ ನೆಟ್ಟು ಬರುವುದು ನೆಚ್ಚಿನ ಹವ್ಯಾಸ. ಶಾಲೆಗಳ ಅಂಗಳದಲ್ಲಿ ನೆಟ್ಟ ಗಿಡಗಳಿಗೆ ಲೆಕ್ಕವಿಲ್ಲ. ವನಮಹೋತ್ಸವ ಕಾರ್ಯಕ್ರಮಗಳ ಮೂಲಕ ಮೂಡಿಸಿದ ಪರಿಸರ ಜಾಗೃತಿ ಅಗಣಿತ.ಎಲ್ಲಾ ಬಗೆಯ ಗಿಡಗಳನ್ನು ನೆಟ್ಟು ಪೋಷಿಸಿರುವ ವೀರಾಚಾರ್ ಸಾವಿರ ಗಿಡಗಳ ಸರದಾರರೆಂದೇ ಜನಜನಿತ. ನಿರ್ವಾಜ್ಯ ಪರಿಸರ ಪ್ರೇಮದ ವೀರಾಚಾರ್‌ಗೆ ಬದುಕಿಗಿಂತಲೂ ಪರಿಸರವೇ ದೊಡ್ಡದು. ಅದಕ್ಕಾಗಿಯೇ ಬದುಕು ಸದಾ ಮೀಸಲು.

Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವೇಶ್ವರ ಸಜ್ಜನ್

ಒಣಭೂಮಿ ಬೇಸಾಯವನ್ನೇ ಬದುಕಾಗಿಸಿಕೊಂಡು ಬಂಗಾರದ ಬೆಳೆ ಬೆಳೆದವರು ವಿಶ್ವೇಶ್ವರ ಸಜ್ಜನ್, ಸಾವಯವ ಕೃಷಿಯಲ್ಲಿ ಯಶಸ್ಸಿನ ಹೊಸ ದಾಖಲೆ ಬರೆದ ಆದರ್ಶ ಕೃಷಿಕರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆಯವರಾದ ವಿಶ್ವೇಶ್ವರ ಸಜ್ಜನ್ ಕನ್ನಡದ ಸ್ನಾತಕೋತ್ತರ ಪದವೀಧರರು. ಕೃಷಿಯಲ್ಲಿ ಆಸಕ್ತಿ ಮೊಳಕೆಯೊಡೆದು ಬೇಸಾಯಕ್ಕಿಳಿದವರು. ಪಾಲಿಗೆ ಬಂದ ಐದು ಎಕರೆ ಒಣಭೂಮಿಯೇ ಕರ್ಮಭೂಮಿ, ಬರ ಮತ್ತು ಅಕಾಲಿಕ ಮಳೆಯ ಮಧ್ಯೆಯೇ ಸಾವಯವ ಕೃಷಿಯಿಂದ ಒಂದೂವರೆ ಎಕರೆಯಲ್ಲಿ ಬೇಲದ ಹಣ್ಣು, ಎರಡು ಎಕರೆಯಲ್ಲಿ ಬೆಟ್ಟದ ನೆಲ್ಲಿಕಾಯಿ, ಮತ್ತೊಂದು ಎಕರೆಯಲ್ಲಿ ಜಂಬೂ ನೇರಳೆ ಬೆಳೆದ ಸಾಧಕರು.ಬೇಲದ ಜ್ಯೂಸ್, ಪೇಡ, ರಸಂ, ಟೀಪೌಡರ್ ತಯಾರಿಕೆ, ಹತ್ತು ದೇಸೀ ಗೀರ್ ತಳಿಯ ಗೋವುಗಳ ಸಾಕಣೆ, ಅವುಗಳ ಹಾಲಿನಿಂದಲೂ ಪೇಡ, ಗೋಮೂತ್ರ, ಆರ್ಕ ಮತ್ತು ತುಪ್ಪ ತಯಾರಿಸಿ ಮಾರಾಟ ಮಾಡಿ ಗೆದ್ದವರು. ಕೃಷಿ ಆದಾಯದಲ್ಲೇ ನಾಲ್ಕಾರು ಜನರಿಗೆ ಉದ್ಯೋಗ ಕಲ್ಪಿಸಿರುವ ಸಜ್ಜನ್ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ನೈಜ ಕೃಷಿಋಷಿ.

Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ಕೆ.ದೇವರಾವ್

ಸಾವಯವ ಕೃಷಿಯನ್ನೇ ಬದುಕಿನ ಮಾರ್ಗವಾಗಿಸಿಕೊಂಡ ಕಾಯಕಯೋಗಿ ಬಿ.ಕೆ.ದೇವರಾವ್. ಭತ್ತದ ತಳಿಗಳ ಸಂರಕ್ಷಣೆಯಲ್ಲಿ ಮೌಲಿಕವಾದ ಸಾಧನೆಗೈದ ಮಾದರಿ ಕೃಷಿಕರು.
ದೇವರಾಯರು ಮೂಲತಃ ಕೃಷಿ ಮನೆತನದವರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಹುಟ್ಟೂರು. ಓದಿದ್ದು ೧೧ನೇ ಇಯತ್ತೆವರೆಗೆ ಮಾತ್ರ ಶಾಲೆಗಿಂತ ಕೃಷಿ ಅನುಭವದಲ್ಲಿ ಕಲಿತದ್ದೇ ಅಪಾರ. ಮಿತ್ತಬಾಗಿಲಿನ ಕೃಷಿ ಭೂಮಿಯೇ ಇವರ ತಪೋಭೂಮಿ. ತಂದೆಯಿಂದ ಬಂದ ೩೦ ಎಕರೆ ಭೂಮಿಯ ಪೈಕಿ ೪ ಎಕರೆಯಲ್ಲಿ ಭತ್ತ, ಎರಡೂವರೆ ಎಕರೆಯಲ್ಲಿ ಅಡಿಕೆ, ೨೫೦ ತೆಂಗು, ಗೇರು, ಕಾಳುಮೆಣಸು, ಮನೆಮಟ್ಟಿಗೆ ತರಕಾರಿ ಬೆಳೆವ ಸ್ವಾವಲಂಬಿ ಕೃಷಿ ಬದುಕು. ಮಲೆನಾಡಿನ ಆಕಳ ತಳಿಗಳ ಸಂರಕ್ಷಣೆಯಲ್ಲೂ ಎತ್ತಿದ ಕೈ. ಮರೆಯಾಗಿದ್ದ ಭತ್ತದ ೨೩ ತಳಿಗಳ ಸಂರಕ್ಷಕರು- ಪೋಷಕರು. ತಳಿ ವೈವಿಧ್ಯ ಹೆಚ್ಚಿಸುವುದೇ ಬದುಕಿನ ಹೆಗ್ಗುರಿ. ಸಾಂಪ್ರದಾಯಿಕ ಕ್ರಮದ ಬಿತ್ತನೆ ಮತ್ತು ನಾಟ ದೇವರಾಯರ ಬೇಸಾಯದ ವೈಶಿಷ್ಟ್ಯ, ರೈತ ಅವರ ಊಟಕ್ಕಾದರೂ ಗದ್ದೆ ಮಾಡಲಿ ಎಂಬ ದಿವ್ಯಮಂತ್ರ ಪಠಿಸುತ್ತಿರುವ ದೇವರಾಯರು ಸಾವಯವ ಕೃಷಿಯ ಅನನ್ಯ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಕತ್ತಿಗೆ ಚನ್ನಪ್ಪ

ಮಲೆನಾಡಿನ ಬಹುಮುಖಿ ಸಾಧಕರ ಸಾಲಿಗೆ ನಿಸ್ಸಂಶಯವಾಗಿ ಸೇರುವವರು ಕತ್ತಿಗೆ ಚನ್ನಪ್ಪ, ಸಾಹಿತ್ಯ, ರಂಗಭೂಮಿ, ಸಮಾಜಸೇವೆಯಲ್ಲಿ ಧನ್ಯತೆ ಕಂಡುಕೊಂಡ ನಿನ್ನಹ ಸಾಧಕರು.
ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಕತ್ತಿಗೆ ಚೆನ್ನಪ್ಪ ಅವರು ಹೊನ್ನಾಳಿ ತಾಲ್ಲೂಕಿ ಕತ್ತಿಗೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿಇಡಿ ವ್ಯಾಸಂಗ ಮಾಡಿದವರು. ಸಾಹಿತ್ಯಾಭಿರುಚಿ, ರಂಗಪ್ರೇಮ, ಸಮಾಜಚಿಂತನೆ ಕತ್ತಿಗೆ ಚೆನ್ನಪ್ಪರ ವೈಶಿಷ್ಟ್ಯತೆ.ಕವಿ, ಕಥೆಗಾರರಾಗಿಯೂ ಜನಪ್ರಿಯ. ಜೇನುಹುಟ್ಟು ಕವನಸಂಕಲನ, ಮಾನಜ್ಜಿ ಮತ್ತು ಇತರೆ ಕಥೆಗಳು ಕಥಾಸಂಕಲನ, ಮುತ್ತಿನ ತೆನೆ, ಚಿತ್ತಾರ ಮಕ್ಕಳ ಕವಿತಾಸಂಕಲನವೂ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕೃತಿಗಳ ರಚನಕಾರರು. ನಟನೆ ನೆಚ್ಚಿನ ಗೀಳು. ಹಲವಾರು ನಾಟಕಗಳ ಪಾತ್ರಗಳಿಗೆ ಜೀವತುಂಬಿದ ಪಾತ್ರಧಾರಿ, ಸಾಮಾಜಿಕ ಸೇವೆ ವ್ಯಕ್ತಿತ್ವದ ಮತ್ತೊಂದು ಮುಖ. ಶ್ರೀಚೆನ್ನೇಶ್ವರ ಯುವಕ ಸಂಘ, ಹೊನ್ನಾಳಿ ತಾಲ್ಲೂಕು ಕಸಾಪ, ಶಿಕಾರಿಪುರ ತಾಲ್ಲೂಕು ಕಸಾಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತಿತರ ಸಂಸ್ಥೆಗಳಲ್ಲಿ ಸೇವೆ. ಹುಟ್ಟೂರಿನಲ್ಲಿ ಗ್ರಂಥಾಲಯ ಕಟ್ಟಡ, ಲಂಕೇಶ್ ಬಯಲು ರಂಗಮಂದಿರ, ಯುವಕರಿಗೆ ಕ್ರೀಡಾ ಉಪಕರಣಗಳ ನೀಡಿಕೆ, ಸಮುದಾಯ ಭವನ ನಿರ್ಮಾಣ, ನೀರಾವರಿ ಯೋಜನೆ ಕುರಿತ ಹೋರಾಟ ಮುಂತಾದ ಸಾಮಾಜಿಕ ಕಾರ್ಯಗಳ ನಿರ್ವಹಿಸಿರುವ ಚನ್ನಪ್ಪ ಸೇವೆಗೆ ಮುಡಿಪಾಗಿರುವ ಜೀವಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಸ್.ಜಿ. ಭಾರತಿ

ದಮನಿತರ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಂಡುಕೊಂಡಿರುವ ವಿಶಿಷ್ಟ ಸಮಾಜ ಸೇವಕ ಎಸ್.ಜಿ. ಭಾರತಿ. ಲೋಕಕಲ್ಯಾಣಕ್ಕಾಗಿ ಮಿಡಿವ ಹೃದಯವಂತ.
ಬಯಲು ನಾಡಾದ ಕಲ್ಲುಗಿಯ ನಿವಾಸಿಯಾಗಿರುವ ಎಸ್.ಜಿ.ಭಾರತಿ ಹುಟ್ಟಿದ್ದು ೧೯೫೮ರ ಜುಲೈ ೧೧ರಂದು. ಸ್ನಾತಕೋತ್ತರ ಪದವೀಧರರಾದ ಅವರದ್ದು ಶುದ್ಧ ಸೇವಾಮನೋಭಾವ. ಬಹು ದಶಕಗಳಿಂದಲೂ ತರಹೇವಾರಿ ಸಮಾಜಸೇವೆಯಲ್ಲಿ ನಿರತರು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ, ಅಸ್ಪಶ್ಯತೆ ನಿವಾರಣೆ, ದಮನಿತರು ಮತ್ತು ಇತರೆ ಜನಾಂದವರಿಗೆ ಸರ್ಕಾರದಿಂದ ಸಿಗಬೇಕಿರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸುವುದೇ ನಿತ್ಯದ ಕಾಯಕ. ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಕ್ಷಣವೂ ಮೀಸಲಿಟ್ಟಿರುವ ಎಸ್.ಜಿ.ಭಾರತಿ ಅವರು ಗುಲ್ಬರ್ಗಾ ವಿವಿಯ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು. ರಾಜ್ಯ ಸರ್ಕಾರದ ಡಾ. ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಜಿ.ಭಾರತಿ ಅವರ ಸೇವಾತತ್ಪರತೆಗೆ ರಾಜ್ಯಾದ್ಯಂತ ಸಾಕಷ್ಟು ಸಂಘ ಸಂಸ್ಥೆಗಳು, ಅಕಾಡೆಮಿಗಳು ಪ್ರಶಸ್ತಿ-ಸನ್ಮಾನಗಳನ್ನಿತ್ತು ಗೌರವಿಸಿರುವುದು ನೈಜಸೇವೆಗೆ ಸಂದ ಸತ್ಫಲವೇ ಸರಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಹಕಾರ

ರಮೇಶ್ ವೈದ್ಯ

ರಾಜ್ಯದ ಕೃಷಿ ಸಹಕಾರ ಕ್ಷೇತ್ರದಲ್ಲಿ ಅನನ್ಯ ಸೇವೆಗೈದ ರಮೇಶ್ ವೈದ್ಯ ಪ್ರಮುಖ ಸಾಧಕರು. ಹಳ್ಳಿಗಾಡಿನ ಕೃಷಿ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ಪರಿಶ್ರಮಿಸಿದ ಸಹಕಾರ ಧುರೀಣರು.
ಕೊಪ್ಪಳ ಜಿಲ್ಲೆಯ ಹಿಟ್ನಾಳದವರಾದ ರಮೇಶ್ ವೈದ್ಯ ಕೃಷಿ ಮನೆತನದ ಕುಡಿ. ೧೯೫೦ರ ಜುಲೈ ೮ರಂದು ಜನಿಸಿದ ರಮೇಶ್ ವಿಜ್ಞಾನ ಪದವೀಧರರು, ವಿದ್ಯಾರ್ಥಿ ದೆಸೆಯಿಂದಲೂ ಕೃಷಿ ಚಟುವಟಿಕೆಗಳಲ್ಲಿ ಆಸಕ್ತರು. ಬೇಸಾಯದ ಒಳಸುಳಿ-ನೋವು ನಲಿವುಗಳ ಅರಿತಾಕ್ಷಣ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ತಲ್ಲೀನ, ರಾಜ್ಯದ ಉದ್ದಗಲಕ್ಕೂ ಹಾಗೂ ಹೊರದೇಶಗಳಿಗೂ ಗ್ರಾಮೀಣ ಸಹಕಾರ ಸಂಸ್ಥೆಗಳ ಶ್ರೇಯೋಭಿವೃದ್ಧಿಗೆ ಸಂಚಾರ-ಪರಿಶ್ರಮ. ಕೊಪ್ಪಳ ಜಿಲ್ಲಾ ಕೃಷಿ ಮಾರಾಟ ಸೊಸೈಟಿಯ ಕಾರ್ಯಾಕಾರಿ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ರಾಯಚೂರು ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ಮತ್ತಿತರ ಸಂಸ್ಥೆಗಳಲ್ಲಿ ಸಾರ್ಥಕ ಸೇವೆ. ಸದ್ಯ ಕರ್ನಾಟಕ ರಾಜ್ಯ ಹೈನುಗಾರಿಕಾ ಒಕ್ಕೂಟದ ನಿರ್ದೇಶಕರು ಹಾಗೂ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಮೇಶ್ ವೈದ್ಯ ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಮುಂತಾದ ಪ್ರಶಸ್ತಿಗಳಿಂದ ಭೂಷಿತರು.