Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹನುಮಂತರಾಯ ಪಂಡಿತ್‌

ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕರು ಡಾ. ಹನುಮಂತರಾಯ ಪಂಡಿತ್. ಜ್ಯೋತಿಷ್ಯ, ಹೋಮಿಯೋಪತಿ ಮತ್ತು ಆಯುರ್ವೇದದಲ್ಲಿ ಹೊಸ ಸಂಶೋಧನೆಗಳಿಂದ ಜನೋಪಕಾರಿಯಾದ‌ ಪಂಡಿತರು.
ತುಮಕೂರು ತಾಲ್ಲೂಕಿನ ರಾಮುಗನಹಳ್ಳಿ ಹನುಮಂತರಾಯರ ಹುಟ್ಟೂರು. ೧೯೨೯ರ ಮೇ.೨೫ರಂದು ಜನನ. – ಓದು, ಛಲ ಹುಟ್ಟುಗುಣ. ಬಡತನದಿಂದಾಗಿ ಪ್ರೌಢಶಾಲೆಯ ಮೆಟ್ಟಿಲೇರಲಾಗದಿದ್ದರೂ ಸಂಸ್ಕೃತ ಭಾಷಾ ಅಧ್ಯಯನದಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್‌ ಗಳಿಸಿದವರು. ಪರಿಶ್ರಮದಿಂದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಅಧ್ಯಾಪಕ, ಉಪನ್ಯಾಸಕರಾಗಿ ಹುದ್ದೆಗೇರಿದವರು. ಎಸ್‌ಎಸ್‌ಎಲ್, ಕನ್ನಡಪಂಡಿತ ಪದವಿ, ಜ್ಯೋತಿಷ್ಯ, ಹೋಮಿಯೋಪಥಿ ಹಾಗೂ ಆಯುರ್ವೇದದ ಅಧ್ಯಯನವೆಲ್ಲವೂ ಛಲದ ಫಲವೇ. ಮಾಧ್ಯಮಿಕ ಶಾಲೆಯ ಉಪಪಠ್ಯವಾದ ನಾಲ್ಕು ಕಿರುಕಥೆಗಳು, ಹತ್ತನೇ ತರಗತಿ ಪಠ್ಯಪುಸ್ತಕವಾದ ಸಾಹಿತ್ಯಸಂಪುಟ ರಚಿಸಿದವರು. ವಿವಿಧ ಕಾಯಿಲೆಗಳ ನಿವಾರಣೆಗೆ ೨೦ ಸಂಶೋಧನೆಗಳು, ಆಯುರ್ವೇದ ಔಷಧಿಗಳ ನಿರ್ಮಾಣಗಾರದ ಸ್ಥಾಪನೆ, ಆಯುರ್ ಪಾರ್ಕ್ ಹೆಲ್ತ್‌ಕೇರ್ ಲಿಮಿಟೆಡ್‌ನ ನಿರ್ದೇಶಕತ್ವ ಸಾದು ಜನಾಂಗದ ಇತಿಹಾಸದ ಸಂಗ್ರಹ, ಸಹಕಾರ ಸಂಘ ಸ್ಥಾಪನೆ, ಸಾದರ ಸುದ್ದಿ ಪತ್ರಿಕೆ. ಎಲ್ಲವೂ ಸಾಧನೆಯ ಮೈಲಿಗಲ್ಲುಗಳೇ.೯೦ರ ಇಳಿವಯಸ್ಸಿನಲ್ಲೂ ಕ್ರಿಯಾಶೀಲವಾಗಿರುವ ಹಿರಿಯ ಜೀವ ಸಾಧಕರಿಗೆ ನಿಜಮಾದರಿ.