Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಕತ್ತಿಗೆ ಚನ್ನಪ್ಪ

ಮಲೆನಾಡಿನ ಬಹುಮುಖಿ ಸಾಧಕರ ಸಾಲಿಗೆ ನಿಸ್ಸಂಶಯವಾಗಿ ಸೇರುವವರು ಕತ್ತಿಗೆ ಚನ್ನಪ್ಪ, ಸಾಹಿತ್ಯ, ರಂಗಭೂಮಿ, ಸಮಾಜಸೇವೆಯಲ್ಲಿ ಧನ್ಯತೆ ಕಂಡುಕೊಂಡ ನಿನ್ನಹ ಸಾಧಕರು.
ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಕತ್ತಿಗೆ ಚೆನ್ನಪ್ಪ ಅವರು ಹೊನ್ನಾಳಿ ತಾಲ್ಲೂಕಿ ಕತ್ತಿಗೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿಇಡಿ ವ್ಯಾಸಂಗ ಮಾಡಿದವರು. ಸಾಹಿತ್ಯಾಭಿರುಚಿ, ರಂಗಪ್ರೇಮ, ಸಮಾಜಚಿಂತನೆ ಕತ್ತಿಗೆ ಚೆನ್ನಪ್ಪರ ವೈಶಿಷ್ಟ್ಯತೆ.ಕವಿ, ಕಥೆಗಾರರಾಗಿಯೂ ಜನಪ್ರಿಯ. ಜೇನುಹುಟ್ಟು ಕವನಸಂಕಲನ, ಮಾನಜ್ಜಿ ಮತ್ತು ಇತರೆ ಕಥೆಗಳು ಕಥಾಸಂಕಲನ, ಮುತ್ತಿನ ತೆನೆ, ಚಿತ್ತಾರ ಮಕ್ಕಳ ಕವಿತಾಸಂಕಲನವೂ ಸೇರಿದಂತೆ ಹದಿನೈದಕ್ಕೂ ಹೆಚ್ಚು ಕೃತಿಗಳ ರಚನಕಾರರು. ನಟನೆ ನೆಚ್ಚಿನ ಗೀಳು. ಹಲವಾರು ನಾಟಕಗಳ ಪಾತ್ರಗಳಿಗೆ ಜೀವತುಂಬಿದ ಪಾತ್ರಧಾರಿ, ಸಾಮಾಜಿಕ ಸೇವೆ ವ್ಯಕ್ತಿತ್ವದ ಮತ್ತೊಂದು ಮುಖ. ಶ್ರೀಚೆನ್ನೇಶ್ವರ ಯುವಕ ಸಂಘ, ಹೊನ್ನಾಳಿ ತಾಲ್ಲೂಕು ಕಸಾಪ, ಶಿಕಾರಿಪುರ ತಾಲ್ಲೂಕು ಕಸಾಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತಿತರ ಸಂಸ್ಥೆಗಳಲ್ಲಿ ಸೇವೆ. ಹುಟ್ಟೂರಿನಲ್ಲಿ ಗ್ರಂಥಾಲಯ ಕಟ್ಟಡ, ಲಂಕೇಶ್ ಬಯಲು ರಂಗಮಂದಿರ, ಯುವಕರಿಗೆ ಕ್ರೀಡಾ ಉಪಕರಣಗಳ ನೀಡಿಕೆ, ಸಮುದಾಯ ಭವನ ನಿರ್ಮಾಣ, ನೀರಾವರಿ ಯೋಜನೆ ಕುರಿತ ಹೋರಾಟ ಮುಂತಾದ ಸಾಮಾಜಿಕ ಕಾರ್ಯಗಳ ನಿರ್ವಹಿಸಿರುವ ಚನ್ನಪ್ಪ ಸೇವೆಗೆ ಮುಡಿಪಾಗಿರುವ ಜೀವಿ.