Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ

ಯೋಗ ಶಿಕ್ಷಣದ ಮೂಲಕ ಸಮಾಜದ ಸ್ವಾಸ್ಥ್ಯ ರಕ್ಷಣೆ-ಪೋಷಣೆಗೆ ಶ್ರಮಿಸುತ್ತಿರುವ ವಿಶಿಷ್ಟ ಸಂಸ್ಥೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. ಪಾರಂಪರಿಕ ಯೋಗ ಪದ್ಧತಿಯ ಪ್ರಸಾರಕ್ಕಾಗಿಯೇ ಮುಡಿಪಿರುವ ಸಂಘಟನೆ.
ತುಮಕೂರಿನಲ್ಲಿ ನೆಲೆನಿಂತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿಯು ೧೯೮೦ರಲ್ಲಿ ಪ್ರಾರಂಭಗೊಂಡಿತು. ಯೋಗ ಗುರು ಅ.ರಾ.ರಾಮಸ್ವಾಮಿ ಅವರು ಈ ಸಂಸ್ಥೆಯ ರೂವಾರಿಗಳು. ಪುಟ್ಟ ಯೋಗ ತರಗತಿ ರೂಪದಲ್ಲಿ ಮೈದೆಳೆದ ಸಂಸ್ಥೆ ಆನಂತರ ಬೃಹದಾಕಾರವಾಗಿ ಮೈಚಾಚಿ ನಿಂತಿದ್ದು ಇತಿಹಾಸ. ಮಲ್ಲಾಡಿಹಳ್ಳಿಯ ರಾಘವೇಂದ್ರ ಮಹಾಸ್ವಾಮಿಗಳು, ವಿಶ್ವವಿಖ್ಯಾತ ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ರೂಪತೆಳೆದ ಈ ಸಂಸ್ಥೆಯದ್ದು ಸಂಸ್ಕಾರ, ಸಂಘಟನೆ ಮತ್ತು ಸೇವೆಯೇ ಮುಖ್ಯಗುರಿ. ಸರಿಸುಮಾರು ೪೦ ವರ್ಷಗಳಿಂದಲೂ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿರುವುದು ಸ್ಮರಣಾರ್ಹ. ರಾಜ್ಯವೊಂದರಲ್ಲೇ ೯೦೦ ಶಾಖೆ ಮಾತ್ರವಲ್ಲದೆ, ಹೊರರಾಜ್ಯ ಮತ್ತು ಹೊರದೇಶಗಳಲ್ಲೂ ಶಾಖೆ ಹೊಂದಿರುವ ಸಮಿತಿಯಲ್ಲಿ ಈವರೆಗೆ ನಲವತ್ತು ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರು ತಯಾರಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಯೋಗವನ್ನು ಕಲಿಸಿಕೊಡಲಾಗಿದ್ದು ಆ ಮೂಲಕ ಯುವಜನತೆಯ ಮಾನಸಿಕ-ದೈಹಿಕ ಆರೋಗ್ಯದ ಸುಸ್ಥಿರತೆಗೆ ಅಪೂರ್ವ ಕಾಣೆ ನೀಡಿರುವುದು ನಾಡಿಗೆ ನಾಡೇ ಹೆಮ್ಮೆ ಪಡುವ ವಿಷಯ.