Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಸಾಲುಮರದ ವೀರಾಚಾರ್

ಪರಿಸರ ಸಂರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡ ಅಪಾರ ವೃಕ್ಷಪ್ರೇಮಿ ವೀರಾಚಾರ್, ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿದ ಸಾವಿರ ಗಿಡಗಳ ಸರದಾರ, ಅಪೂರ್ವ ಪರಿಸರಮಿತ್ರ
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನಂದಿಹಳ್ಳಿ ವೀರಾಚಾರ್‌ರ ಹುಟ್ಟೂರಾದರೂ ಬದುಕು ನೆಲೆಗೊಂಡಿದ್ದು ಹರಿಹರ ತಾಲೂಕಿನ ಮಿಟ್ಲಕಟ್ಟೆಯಲ್ಲಿ. ಕುಲುಮೆ ಕೆಲಸವೇ ಬದುಕಿಗೆ ಆಧಾರ. ಬಾಲ್ಯದಿಂದಲೂ ಗಿಡ ಮರಗಳೆಂದರೆ ವಿಪರೀತ ಪ್ರೀತಿ. ಗಿಡ ನೆಡುವುದು ನೆಚ್ಚಿನ ಕೆಲಸ. ರಸ್ತೆ ಬದಿಯಲ್ಲಿ ಗಿಡ ನೆಡಲು ಆರಂಭಿಸಿದ ವೀರಾಚಾರ್‌ರ ಸಸ್ಯಪ್ರೇಮ ಬದುಕಿನ ಗತಿಯನ್ನೇ ಬದಲಿಸಿದ್ದು ವಿಶೇಷ. ಸ್ವಂತ ಕುಟುಂಬ, ಖಾಸಗಿ ಬದುಕು, ಕುಲುಮೆ ಉದ್ಯೋಗವನ್ನು ನಿರ್ಲಕ್ಷಿಸುವಷ್ಟು ಪರಿಸರ ಪ್ರೇಮ ಅವರದ್ದು. ಮದುವೆ ಸಮಾರಂಭ, ಗೃಹಪ್ರವೇಶ ಮುಂತಾದ ಯಾವುದೇ ಸಮಾರಂಭಗಳಿಗೂ ತೆರಳಿದರೂ ಗಿಡವೇ ಊಡುಗೊರೆ. ಸಾವಿನ ಮಣ್ಣಿಗೆ ಹೋದರೂ ಸಮಾಧಿ ಬಳಿ ಗಿಡ ನೆಟ್ಟು ಬರುವುದು ನೆಚ್ಚಿನ ಹವ್ಯಾಸ. ಶಾಲೆಗಳ ಅಂಗಳದಲ್ಲಿ ನೆಟ್ಟ ಗಿಡಗಳಿಗೆ ಲೆಕ್ಕವಿಲ್ಲ. ವನಮಹೋತ್ಸವ ಕಾರ್ಯಕ್ರಮಗಳ ಮೂಲಕ ಮೂಡಿಸಿದ ಪರಿಸರ ಜಾಗೃತಿ ಅಗಣಿತ.ಎಲ್ಲಾ ಬಗೆಯ ಗಿಡಗಳನ್ನು ನೆಟ್ಟು ಪೋಷಿಸಿರುವ ವೀರಾಚಾರ್ ಸಾವಿರ ಗಿಡಗಳ ಸರದಾರರೆಂದೇ ಜನಜನಿತ. ನಿರ್ವಾಜ್ಯ ಪರಿಸರ ಪ್ರೇಮದ ವೀರಾಚಾರ್‌ಗೆ ಬದುಕಿಗಿಂತಲೂ ಪರಿಸರವೇ ದೊಡ್ಡದು. ಅದಕ್ಕಾಗಿಯೇ ಬದುಕು ಸದಾ ಮೀಸಲು.