Categories
ಪರಿಸರ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಹಾದೇವ ವೇಳಿಪ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಬಳಿ ಇರುವ ಕಾರ್ಟೊ೪ ಕಾಡಿನ ಕುಣಬಿ ಜನಾಂಗದ ಶ್ರೀ ಮಹಾದೇವ ವೇಳಪ ಕುಣಬಿಗಳ ನಡೆದಾಡುವ ವಿಶ್ವಕೋಶ ಎಂದೇ ಹೆಸರಾದವರು. ಮಹಾದೇವ ವೇಳಪ ಅವರು ಸುಮಾರು ೩೮ ಜಾತಿಯ ಗೆಡ್ಡೆಗಳನ್ನು ಗುರುತಿಸಬಲ್ಲರು. ಕಾಡಿನ ಪ್ರಾಣಿ ಪಕ್ಷಿಗಳ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿದೆ.

೯೧ ವರ್ಷದ ಮಹಾದೇವ ವೇಳಿಪರವರ ಪರಿಸರ ಪ್ರೀತಿ ದೊಡ್ಡದು. ಕಲ್ಲಿಗೆ ಕಲ್ಲು ಕುಟ್ಟಿ, ಕಲ್ಲು ಮತ್ತು ಮಾಡಿ ಮರದ ತೊಗಟೆಯ ಸಹಾಯದಿಂದ ಬೆಂಕಿ ಹೊತ್ತಿಸಿ ಉಪಯೋಗಿಸುವುದರ ಮೂಲಕ ಬೆಂಕಿ ಕಡ್ಡಿ ಬಳಸದೇ ಪರಿಸರ ಕಾಪಾಡುತ್ತಿದ್ದಾರೆ. ಇವರು ಉತ್ತಮ ಮನೆ ಮದ್ದು ಕೊಡುವುದರಲ್ಲಿ ಕೂಡ ಪರಿಣಿತರು. ತುಳಸಿ ಪದ, ರಾಮಾಯಣ ಮಹಾಭಾರತಕ್ಕೆ ಸಂಬಂಧಿಸಿದ್ದ ಅನೇಕ ಹಾಡುಗಳನ್ನು ಹಾಗೂ ಕುಣಬಿಗಳ ಶ್ರಮ ಸಂಸ್ಕೃತಿಯನ್ನು ಬಿಂಬಿಸುವಂಥ ಹಾಡುಗಳನ್ನು ಇವರು ಹಾಡುತ್ತಾರೆ. ಒಂದಕ್ಷರ ಕಲಿಯದಿದ್ದರೂ ದಟ್ಟ ಕಾನನದ ಕಾರ್ಟೊಆ ಊರಿಗೆ ಕನ್ನಡ ಶಾಲೆ ತರುವಲ್ಲಿ ಇವರ ಶ್ರಮವೂ ಇದೆ.

Categories
ಪರಿಸರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎನ್.ಡಿ. ಪಾಟೀಲ

ಸರ್ಕಾರಿ ಕೆಲಸದ ನಡುವೆಯೂ ಪರಿಸರ ರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡವರು ಎನ್.ಡಿ. ಪಾಟೀಲ. ೨೦ ಸಾವಿರಕ್ಕೂ ಅಧಿಕ ಸಸಿಗಳ ನೆಟ್ಟು ಪೋಷಿಸಿದ ಪರಿಸರ ಸಂರಕ್ಷಕ.
ವಿಜಯಪುರ ಜಿಲ್ಲೆಯ ಡೂಮನಾಳದ ನಾನಾಸಾಹೇಬ ದ್ಯಾಮನಗೌಡ ಪಾಟೀಲರು ಹುಟ್ಟಿದ್ದು ೧೯೫೫ರ ಏಪ್ರಿಲ್ ೧೩ರಂದು. ಬಿ.ಎ. ಪದವೀಧರರು. ವೃತ್ತಿ ಕಂದಾಯ ಇಲಾಖೆಯ ಸರ್ಕಾರಿ ನೌಕರಿ, ಪ್ರವೃತ್ತಿ ಪರಿಸರ ಸಂರಕ್ಷಣೆ. ೩೮ ವರ್ಷಗಳ ಸುದೀರ್ಘ ಸೇವಾವಧಿಯ ಉದ್ದಕ್ಕೂ ಸಸಿಗಳ ಪೋಷಣೆಗೈದ, ನಿವೃತ್ತಿಯ ಹಣವನ್ನೆಲ್ಲಾ ಗಿಡಗಳನ್ನು ನೆಡಲು ವ್ಯಯಿಸಿದ ಪರಿಸರಪ್ರೇಮಿ. ವಿಜಯಪುರ ಹಾಗೂ ಇಂಡಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದ ಸಾರ್ಥಕತೆ. ಬೆಂಗಳೂರಿನ ತಿಂಡ್ಲುವಿನಲ್ಲೂ ೩೩೦ ಸಸಿ ನೆಟ್ಟಿರುವ ಎನ್.ಡಿ. ಪಾಟೀಲರ ಪರಿಸರಪೂರಕ ಚಟುವಟಿಕೆಗಳಿಗೆ ಆದಿ ಮಾತ್ರ ಅಂತ್ಯವೆಂಬುದೇ ಇಲ್ಲ. ಅನುದಿನ ಅನುಕ್ಷಣ ಪರಿಸರದ್ದೇ ಧ್ಯಾನ, ಸಂರಕ್ಷಣೆಯದ್ದೇ ಆಲೋಚನೆ. ಜಿಲ್ಲಾ ರಾಜ್ಯ ಮಟ್ಟದ ಹಲವು ಪ್ರಶಸ್ತಿ-ಸನ್ಮಾನಗಳಿಗೆ ಪಾತ್ರರಾಗಿರುವ ಪಾಟೀಲರು ನೈಜ ಪರಿಸರಮಿತ್ರ

Categories
ಪರಿಸರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆಂಪರೆಡ್ಡಿ ಅಮರನಾರಾಯಣ

ಪರಿಸರ ಸಂರಕ್ಷಣೆ-ಪೋಷಣೆಗಾಗಿ ಶ್ರಮಿಸಿದ ವಿರಳಾತಿವಿರಳ ನಿವೃತ್ತ ಐ.ಎ.ಎಸ್. ಕೆಂಪರೆಡ್ಡಿ ಅಮರನಾರಾಯಣ. ಪ್ರತಿದಿನವೂ ಪರಿಸರದಿನವಾಗಬೇಕೆಂಬ ಉದ್ವೇಷವನ್ನು ನಿಜವಾಗಿಸಿದ ಅಪ್ಪಟ ಹಸಿರು ಜಿಲ್ಲಾಧಿಕಾರಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮದ ಕೆಂಪರೆಡ್ಡಿ ಅಮರನಾರಾಯಣರು ಸ್ನಾತಕೋತ್ತರ ಪದವಿ, ಎಲ್.ಎಲ್.ಬಿ. ಬಳಿಕ ಇಂಗ್ಲೆಂಡ್ನ ಲೆಸ್ಟರ್ ವಿವಿಯಲ್ಲಿ ಟಿ.ಸಿ.ಟಿ. ಫೆಲೋಶಿಪ್ ಪಡೆದು ಐ.ಎ.ಎಸ್. ಅಧಿಕಾರಿಯಾದವರು. ಬಾಲ್ಯದಿಂದಲೂ ಉತ್ಕಟ ಪರಿಸರ ಪ್ರೇಮ. ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಯಾಗಿದ್ದಾಗ ಅಮರನಾರಾಯಣ ಅವರು ಜಾರಿಗೊಳಿಸಿದ ಪರಿಸರಪೂರಕ ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲ. ಕೋಟಿನಾಟ, ಕೃಷಿ ಅರಣ್ಯ, ವೃಕ್ಷ ರಕ್ಷ, ಕಲ್ಲರಳಿ ಹಣ್ಣಾಗಿ, ಪರಿಮಳ ವನ, ದುರ್ಗದ ಮೊರೆ-ಹಸಿರಿಗೆ ಕೆರೆ, ಸ್ವಚ್ಛತೆಯೆ ಸ್ವರ್ಗ, ಕಸದಿಂದ ಕಾಸು, ಪ್ಲಾಸ್ಟಿಕ್ ಮುಕ್ತ ವಲಯ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಪರಿಸರಮಿತ್ರ ಕಲ್ಯಾಣಿಗಳ ಜೀರ್ಣೋದ್ಧಾರ, ಉದ್ಯಾನವನಗಳ ರಕ್ಷಣೆ, ೩೫ ಸಾವಿರಕ್ಕೂ ಹೆಚ್ಚು ಸಸಿ, ೧೪೦೦ಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದ, ನಿವೃತ್ತಿಯ ನಂತರವೂ ಪರಿಸರ ರಕ್ಷಣೆಯಲ್ಲಿ ತೊಡಗಿರುವ ಸಾಧಕರು.

Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶಿವಾಜಿ ಛತ್ರಪ್ಪ ಕಾಗಣಿಕ‌ರ್

ಸಮಾಜಸೇವೆಯೇ ಭಗವಂತನ ಸೇವೆಯೆಂಬ ದಿವ್ಯನಂಬಿಕೆಯಲ್ಲಿ ಸೇವಾನಿರತರಾಗಿರುವವರು ಶಿವಾಜಿ ಛತ್ರಪ್ಪ ಕಾಗಣಿಕ‌. ಬೆಳಗಾವಿ ಜಿಲ್ಲೆಯ ಅಣ್ಣಾಹಜಾರೆಯೆಂದೇ ಜನಜನಿತರು.
ಬೆಳಗಾವಿ ತಾಲ್ಲೂಕಿನ ಕಟ್ಟನಭಾವಿ ಶಿವಾಜಿ ಕಾಗಣಿಕರ್‌ರ ಹುಟ್ಟೂರು. ಬಿಎಸ್ಸಿ ಪದವೀಧರರಾದ ಕಾಗಣಿಕ‌ ಬಾಲ್ಯದಿಂದಲೂ ಸಮಾಜಸೇವಾಸಕ್ತರು. ಪರಿಸರ ಅಧ್ಯಯನ, ಸಮಾಜಸೇವೆಯಲ್ಲಿ ಕ್ರಿಯಾಶೀಲರು. ಗಾಂಧಿವಾದದ ಅನುಯಾಯಿಯಾದ ಕಾಗಣಿಕ‌ ೧೯ನೇ ವಯಸ್ಸಿನಲ್ಲಿ ೧೯೬೮ರಲ್ಲಿ ಜನ ಜಾಗ್ರಣ ಸಂಸ್ಥೆಯನ್ನು ಸ್ಥಾಪಿಸಿ ಹಳ್ಳಿಗರಲ್ಲಿ ಶಿಕ್ಷಣ, ನೀರಿನ ಸಂರಕ್ಷಣೆ ಜೊತೆಗೆ ಗ್ರಾಮೀಣ ಜನಪದದ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿದ್ದು ಮೊದಲ ಸಾಮಾಜಿಕ ಹೆಜ್ಜೆ. ಆನಂತರ ಗ್ರಾಮದಲ್ಲಿ ರಾತ್ರಿ ಶಾಲೆಯ ಸ್ಥಾಪನೆ. ಹಳ್ಳಿಯ ಅಡುಗೆ ಮನೆಗಳನ್ನು ಹೊಗೆರಹಿತ ಮಾಡಲು ೬೦ಕ್ಕೂ ಅಧಿಕ ಜೈವಿಕ ಇಂಧನ ಘಟಕಗಳ ಸ್ಥಾಪನೆ. ಮಹಿಳಾ ಸಬಲೀಕರಣ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಗೆ ಐದು ದಶಕಗಳಿಂದ ಕಾರ್ಯೋನ್ಮುಖರಾಗಿ ಅವಿರತ ಶ್ರಮಿಸುತ್ತಿರುವ ಕಾಗಣಿಕ‌ ಅವರ ನಡೆ-ನುಡಿ- ವೇಷಭೂಷಣವೆಲ್ಲವೂ ಗಾಂಧಿಮಯ. ಗಾಮೀಣಾಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿರುವ ಶಿವಾಜಿ ಛತ್ರಪ್ಪ ಕಾಗಣಿಕ‌ ಪ್ರತಿಷ್ಠಿತ ದೇವರಾಜು ಅರಸು ಪ್ರಶಸ್ತಿಯಿಂದ ಭೂಷಿತರು. ೬೯ರ ಇಳಿವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ಅನುದಿನ ಅನುಕ್ಷಣ ನಿರತರಾಗಿರುವ ನಿಸ್ವಾರ್ಥ ಜೀವಿ.

Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಸಾಲುಮರದ ವೀರಾಚಾರ್

ಪರಿಸರ ಸಂರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡ ಅಪಾರ ವೃಕ್ಷಪ್ರೇಮಿ ವೀರಾಚಾರ್, ಸಾವಿರಾರು ಮರಗಳನ್ನು ನೆಟ್ಟು ಪೋಷಿಸಿದ ಸಾವಿರ ಗಿಡಗಳ ಸರದಾರ, ಅಪೂರ್ವ ಪರಿಸರಮಿತ್ರ
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ನಂದಿಹಳ್ಳಿ ವೀರಾಚಾರ್‌ರ ಹುಟ್ಟೂರಾದರೂ ಬದುಕು ನೆಲೆಗೊಂಡಿದ್ದು ಹರಿಹರ ತಾಲೂಕಿನ ಮಿಟ್ಲಕಟ್ಟೆಯಲ್ಲಿ. ಕುಲುಮೆ ಕೆಲಸವೇ ಬದುಕಿಗೆ ಆಧಾರ. ಬಾಲ್ಯದಿಂದಲೂ ಗಿಡ ಮರಗಳೆಂದರೆ ವಿಪರೀತ ಪ್ರೀತಿ. ಗಿಡ ನೆಡುವುದು ನೆಚ್ಚಿನ ಕೆಲಸ. ರಸ್ತೆ ಬದಿಯಲ್ಲಿ ಗಿಡ ನೆಡಲು ಆರಂಭಿಸಿದ ವೀರಾಚಾರ್‌ರ ಸಸ್ಯಪ್ರೇಮ ಬದುಕಿನ ಗತಿಯನ್ನೇ ಬದಲಿಸಿದ್ದು ವಿಶೇಷ. ಸ್ವಂತ ಕುಟುಂಬ, ಖಾಸಗಿ ಬದುಕು, ಕುಲುಮೆ ಉದ್ಯೋಗವನ್ನು ನಿರ್ಲಕ್ಷಿಸುವಷ್ಟು ಪರಿಸರ ಪ್ರೇಮ ಅವರದ್ದು. ಮದುವೆ ಸಮಾರಂಭ, ಗೃಹಪ್ರವೇಶ ಮುಂತಾದ ಯಾವುದೇ ಸಮಾರಂಭಗಳಿಗೂ ತೆರಳಿದರೂ ಗಿಡವೇ ಊಡುಗೊರೆ. ಸಾವಿನ ಮಣ್ಣಿಗೆ ಹೋದರೂ ಸಮಾಧಿ ಬಳಿ ಗಿಡ ನೆಟ್ಟು ಬರುವುದು ನೆಚ್ಚಿನ ಹವ್ಯಾಸ. ಶಾಲೆಗಳ ಅಂಗಳದಲ್ಲಿ ನೆಟ್ಟ ಗಿಡಗಳಿಗೆ ಲೆಕ್ಕವಿಲ್ಲ. ವನಮಹೋತ್ಸವ ಕಾರ್ಯಕ್ರಮಗಳ ಮೂಲಕ ಮೂಡಿಸಿದ ಪರಿಸರ ಜಾಗೃತಿ ಅಗಣಿತ.ಎಲ್ಲಾ ಬಗೆಯ ಗಿಡಗಳನ್ನು ನೆಟ್ಟು ಪೋಷಿಸಿರುವ ವೀರಾಚಾರ್ ಸಾವಿರ ಗಿಡಗಳ ಸರದಾರರೆಂದೇ ಜನಜನಿತ. ನಿರ್ವಾಜ್ಯ ಪರಿಸರ ಪ್ರೇಮದ ವೀರಾಚಾರ್‌ಗೆ ಬದುಕಿಗಿಂತಲೂ ಪರಿಸರವೇ ದೊಡ್ಡದು. ಅದಕ್ಕಾಗಿಯೇ ಬದುಕು ಸದಾ ಮೀಸಲು.

Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಿ.ಯತಿರಾಜು

ವಿಜ್ಞಾನ ಹಾಗೂ ಪರಿಸರ ಜಾಗೃತಿಗಾಗಿ ಮೂರು ದಶಕಗಳಿಂದ ತೊಡಗಿಕೊಂಡಿರುವ ಸಿ.ಯತಿರಾಜು ಅವರು ವೃತ್ತಿಯಿಂದ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಯತಿರಾಜು ಅವರು ಭಾರತ ಜ್ಞಾನ ವಿಜ್ಞಾನ ಸಮಿತಿಯ ಚಟುವಟಿಕೆಗಳಲ್ಲಿ ಪಾಲುಗೊಂಡವರು.

ಕರ್ನಾಟಕ ರಾಜ್ಯ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆಯ ಸಂಚಾಲಕರಾಗಿದ್ದ ಯತಿರಾಜು ಅವರು ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಪಶ್ಚಿಮಘಟ್ಟಗಳ ಕರೆ, ಕಾಯದ ಕೃಷಿ, ಹಿರೋಷಿಮಾದಿಂದ ಬುದ್ಧನ ನಗುವಿನವರೆಗೆ ಕೃತಿಗಳು ಮುಖ್ಯವಾದವು.

ವಿಜ್ಞಾನ ಸಂವಹನಕಾರರಾಗಿ ಉಪನ್ಯಾಸ, ಲೇಖನ ಬರೆಯುವುದರಲ್ಲಿಯೂ ನಿಪುಣರಾದ ಯತಿರಾಜು ಅವರು ಸಾಕ್ಷರತಾ ಅಂದೋಲನಗಳಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.

Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಸ್.ಎಂ. ಕೃಷ್ಣಪ್ಪ

ಸಾಂಪ್ರದಾಯಿಕ ತೋಟದ ಬೆಳೆಗಳನ್ನು ಬೆಳೆಯುವ ಮನೆತನದಲ್ಲಿ ಜನಿಸಿದ ಎಸ್.ಎಂ.ಕೃಷ್ಣಪ್ಪ ಅವರು ಇಂಜಿನಿಯರಿಂಗ್ ಶಿಕ್ಷಣ ಪಡೆದ ನಂತರ ಪಾರಂಪರಿಕ ತೋಟಗಾರಿಕೆ ವೃತ್ತಿಯನ್ನು ಕೈಗೊಂಡವರು.

ಉತ್ಕೃಷ್ಟವಾದ ನರ್ಸರಿಗಳನ್ನು ಸ್ಥಾಪಿಸಿ ಬೆಳೆಸುವ ಮೂಲಕ ಹೆಸರಾಗಿರುವ ಕೃಷ್ಣಪ್ಪ ಅಂಗಾಂಶ ಕಸಿ ತಂತ್ರಜ್ಞಾನ ಹಾಗು ಸಾಂಪ್ರದಾಯಿಕ ತೋಟಗಾರಿಕೆ ಎರಡರಲ್ಲೂ ಯಶ ಸಾಧಿಸಿ ವಿದೇಶಗಳಿಗೆ ಸಸಿಗಳನ್ನು ರಫ್ತು ಮಾಡುತ್ತಿದ್ದಾರೆ.

ಲಾಲ್‌ಬಾಗಿನಲ್ಲಿ ವೈವಿಧ್ಯಮಯವಾದ ಹೂವುಗಳ ಪ್ರದರ್ಶನವನ್ನು ಏರ್ಪಡಿಸುತ್ತಿರುವ ಕೃಷ್ಣಪ್ಪ ಅವರು ತೋಟಗಾರಿಕೆ ಬೆಳೆಗಾರರಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸುವ ನರ್ಸರಿಮೆನ್ಸ್ ಮ್ಯಾಗಜಿನ್ ಸಂಪಾದಕರಾಗಿದ್ದು, ನರ್ಸರಿಮನ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಪರಿಸರ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಾಲುಮರದ ನಿಂಗಣ್ಣ

ಬಡತನದ ಬದುಕಿನಲ್ಲೂ ಸಮಷ್ಟಿ ಪ್ರಜ್ಞೆ ಮೆರೆದ ಅಪ್ಪಟ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣ. ಹಳ್ಳಿಗಾಡಿನ ನಿಜ ಸೇವಕ, ಸಾವಿರಾರು ಗಿಡಗಳನ್ನು ಪೋಷಿಸಿದ ಸಮಾಜಮುಖಿ, ರಾಮನಗರ ಜಿಲ್ಲೆ ಕೂಟಗಲ್ ಹೋಬಳಿಯ ಅರೇಹಳ್ಳಿಯವರಾದ ನಿಂಗಣ್ಣ ವೃತ್ತಿಯಲ್ಲಿ ಕೂಲಿಕಾರ್ಮಿಕ, ಬಾಲ್ಯದಿಂದಲೂ ಪ್ರಕೃತಿಯ ಆರಾಧಕ, ಬಟಾಬಯಲಿನಂತಿದ್ದ ಅರೇಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವುದೇ ನಿತ್ಯಕಾಯಕ. ಆಲ, ಅರಚಿ, ಬೇವು, ಬಾಗೆ, ಹೊಂಗೆ, ಅತ್ತಿ ಮುಂತಾದ ಗಿಡಗಳನ್ನು ನೆಟ್ಟು ನಿತ್ಯ ನೀರೆರೆದು ಪೋಷಿಸಿ ಬೇಲಿ ಹಾಕಿ ಕಾವಲು ಕಾದು ಮರಗಳನ್ನಾಗಿ ಬೆಳೆಸಿದ ಪರಿಸರಪ್ರೇಮಿ, ಬರಗಾಲದಲ್ಲಿ ಮರಗಳಿಗೆ ನೀರುಣಿಸಲು ಪತ್ನಿಯ ಮಾಂಗಲ್ಯ ಮಾರಲು ಹೋಗಿದ್ದ ತ್ಯಾಗಮಯಿ, ಊರವರ ಕುಹಕಮಾತು, ಅಧಿಕಾರಿಗಳ ಕಿರುಕುಳದ ಮಧ್ಯೆಯೂ ೩೦ ವರ್ಷಗಳಲ್ಲಿ ಬರೋಬ್ಬರಿ ೧೫೦೦ ಮರಗಳನ್ನು ಬೆಳೆಸಿದ ಪರಿಸರ ರಕ್ಷಕ. ಗಿಡಮರಗಳ ಬಗ್ಗೆ ನಿಷ್ಕಲ್ಮಶ ಪ್ರೀತಿ, ನಿಷ್ಕಾಮ ಸೇವೆ. ೬೭ರ ಇಳಿವಯಸ್ಸಿನಲ್ಲೂ ತವರೂರಿನ ಕೆರೆಯ ಪಕ್ಕ ನೂರು ಗಿಡನೆಟ್ಟು ನಿತ್ಯ ಆರೈಕೆ ಮಾಡುತ್ತಿರುವ ನಿಂಗಣ್ಣ ನಿಜ ಅರ್ಥದಲ್ಲಿ ಸಾಲುಮರದ ನಿಂಗಣ್ಣ. ಪರಿಸರಕಾಳಜಿಗೆ ರಾಜ್ಯಪಾಲರ ಸನ್ಮಾನ, ರಾಜ್ಯ ಪರಿಸರ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರ. ಮರಗಳನ್ನು ಬೆಳೆಸಲು ದುಡಿದ ಕೂಲಿ ಹಣದ ಒಂದು ಭಾಗ ವ್ಯಯಿಸಿರುವ ನಿಂಗಣ್ಣ ನಮ್ಮ ನಡುವಿರುವ ನಿಜ ಮನುಷ್ಯ, ನಿಸ್ವಾರ್ಥ ಸೇವೆಗೊಂದು ಮಹಾಮಾದರಿ.