Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ

ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅಪ್ಪಟ ಕನ್ನಡದ ವಚನಗಳ ತಲಸ್ಪರ್ಶಿ ಅಧ್ಯಯನಕ್ಕಾಗಿ ಮೀಸಲಾದ ಸಂಸ್ಥೆಯೇ ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠದ ವಚನ ಅಧ್ಯಯನ ಕೇಂದ್ರ

ವಚನ ಸಾಹಿತ್ಯದ ಅಭ್ಯಾಸಿಗಳಿಗೆ, ಸಂಶೋಧಕರಿಗೆ ಪೂರಕ ಸಾಮಗ್ರಿಯನ್ನು ಒದಗಿಸುವುದಕ್ಕಾಗಿ ಆರಂಭಿಸಲಾದ ವಚನ ಅಧ್ಯಯನ ಕೇಂದ್ರ ಪ್ರಾತಿನಿಧಿಕ ವಚನಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವ ಕೆಲಸವನ್ನೂ ಮಾಡುತ್ತಿದೆ.

ಈ ಅಧ್ಯಯನ ಕೇಂದ್ರದಲ್ಲಿ ಈಗಾಗಲೇ ಎಪ್ಪತ್ತೊಂಭತ್ತಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಅಭ್ಯಾಸ ಮಾಡಿ ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದು, ಇಲ್ಲಿ ಕಳೆದ ಒಂಭೈನೂರು ವರ್ಷಗಳಲ್ಲಿ ರಚಿತವಾದ ಶರಣರ ಅಪರೂಪದ ಸಾಹಿತ್ಯ ಗ್ರಂಥಗಳನ್ನು ಸಂಗ್ರಹಿಸಲಾಗಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ರೋನಾಲ್ಡ್ ಕೊಲಾಸೋ

ಮಂಗಳೂರಿನವರಾದ ರೋನಾಲ್ಡ್ ಕೊಲಾಸೋ ವಿದೇಶದಲ್ಲಿ ನೆಲೆಸಿ ಅನೇಕ ಉದ್ಯಮಗಳನ್ನು ಕಟ್ಟಿದವರು. ಕಳೆದ ಇಪ್ಪತ್ತೈದು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಸ್ವಂತ ಖರ್ಚಿನಿಂದ ಜಾರಿಗೊಳಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಅನೇಕ ಪೋಲೀಸ್ ಕಚೇರಿಗಳನ್ನು ನವೀಕರಣಗೊಳಿಸುವುದರಲ್ಲಿ ಹಾಗು ತಾಲೂಕು ಪಂಚಾಯಿತಿ ಕಚೇರಿಗಳನ್ನು ನಿರ್ಮಾಣ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ರೊನಾಲ್ಡ್ ಕೊಲಾಸೋ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಿದ್ದಾರೆ.

ಸಾಮಾಜಿಕ ಸೌಹಾರ್ದತೆಗಾಗಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕೊಲಾಸೋ, ಅನ್ನ ಆರೋಗ್ಯ ಒದಗಿಸುವಲ್ಲಿಯೂ ಯೋಜನೆ ಅನುಷ್ಠಾನಗೊಳಿಸಿದ್ದಾರೆ.

ರೊನಾಲ್ಡ್ ಕೊಲಾಸೋ ಅವರಿಗೆ ಪ್ರತಿಷ್ಠಿತ ಟೈಮ್ಸ್ ನೌ ಗ್ಲೋಬಲ್ ಏನ್.ಆರ್.ಐ ಪ್ರಶಸ್ತಿ, ಇಂಡಿಯನ್ ಬಹರೇನ್ ಸೆಂಟಿನರಿ ಅವಾರ್ಡ್, ವಿಶ್ವ ಕೊಂಕಣಿ ಸಮ್ಮೇಳನದ ಗೌರವ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಬಿ.ಎ.ರಡ್ಡಿ

ಕರ್ನಾಟಕ ಸರ್ಕಾರದ ಇಂಜಿನಿಯರಿಂಗ್ ಇನ್ ಚೀಫ್ ಆಗಿ ನಿವೃತ್ತರಾಗಿರುವ ಬಿ.ಎ.ರಡ್ಡಿ ಅವರು ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಣ್ಣ ನೀರಾವರಿ ವಿಭಾಗದಲ್ಲಿ ಸರ್ಕಾರಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಡ್ಡಿ ಅವರು ನಾರಾಯಣಪುರ ಜಲಾಶಯದ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ.

ನೀರಾವರಿ ವಿಭಾಗದಲ್ಲಿ ಬಿ.ಎ.ರೆಡ್ಡಿ ಅವರ ಅನುಪಮ ಸೇವೆಯನ್ನು ಗುರುತಿಸಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆಯಿಂದ ಅತ್ಯುತ್ತಮ ಇಂಜಿನಿಯರ್, ನವದೆಹಲಿಯ ಫ್ರೆಂಡ್‌ಶಿಪ್ ಫೋರಂನ ಗೌರವ, ಔರಂಗಾಬಾದಿನ ಝಾನ್ಸಿ ಸಂಸ್ಥೆಯ ಪ್ರಶಸ್ತಿ ನೀಡಲಾಗಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ|| ಪಿ.ಶಾಮರಾಜು

ಬೆಂಗಳೂರಿನ ಮೂಲ ಸೌಕರ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿರುವ ಡಾ|| ಶ್ಯಾಮರಾಜು ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗಣನೀಯ.

ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ವಿಭಿನ್ನ ಬಗೆಯ ಕಾರ್ಯಸ್ಥಳಗಳನ್ನು ನಿರ್ಮಿಸಿಕೊಟ್ಟಿರುವ ಶ್ಯಾಮರಾಜು ಅವರು ತಮ್ಮ ರೇವಾ ವಿಶ್ವವಿದ್ಯಾನಿಲಯದ ಮೂಲಕ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಿದ್ದಾರೆ.

ಬೆಂಗಳೂರಿನ ಟಿಟಿಡಿ ಸಂಸ್ಥೆಯ ದೇವಾಲಯದ ಧರ್ಮದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ಯಾಮರಾಜು ಅವರು ಹಲವು ದೇವಾಲಯಗಳ ಅಭಿವೃದ್ಧಿಗಾಗಿ ಶ್ರಮಿಸಿದವರು. ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿರುವ ಇವರು ಸಂಜೀವಿನಿ ಅಂಬ್ಯುಲೆನ್ಸ್, ವೃದ್ಧಾಲಯ, ಕಾರ್ಮಿಕ ಮಕ್ಕಳ ಶಾಲೆಗಳೇ ಮೊದಲಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಹನಾ ಕುಮಾರಿ

ದೇಶದ ಹೈಜಂಪ್ ಕ್ರೀಡಾಪಟುಗಳಲ್ಲಿ ಒಬ್ಬರಾದ ಸಹನಾ ಕುಮಾರಿ ಅವರು ಲಂಡನ್ನಿನಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರತಿಭಾವಂತ ಕ್ರೀಡಾಳು.

ಮಹಿಳಾ ಹೈಜಂಪ್ ವಿಭಾಗದಲ್ಲಿ ೧.೯೨ ಮೀಟರ್ ಎತ್ತರ ಜಿಗಿಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಸಹನಾಕುಮಾರಿ ಗೌಹಾತಿಯಲ್ಲಿ ಜರುಗಿದ ಹನ್ನೆರಡನೆಯ ದಕ್ಷಿಣ ಏಷಿಯಾ ಕ್ರೀಡಾಕೂಟದಲ್ಲಿಯೂ ಮಹಿಳಾ ವಿಭಾಗದ ಹೈಜಂಪ್ ನಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.

ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹದಿನಾಲ್ಕಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸಿರುವ ಸಹನಾ ಕುಮಾರಿ ಅವರಿಗೆ ಕರ್ನಾಟಕ ರಾಜ್ಯ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಗೌರವ, ಕೆಂಪೇಗೌಡ ಪ್ರಶಸ್ತಿ ಹಾಗೂ ಕೇಂದ್ರ ರೈಲ್ವೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿ.ಆರ್.ರಘುನಾಥ್

ಭಾರತ ಹಾಕಿ ತಂಡದ ಪ್ರಮುಖ ಆಟಗಾರರಾದ ವಿ.ಆರ್.ರಘುನಾಥ್ ರಾಷ್ಟ್ರಮಟ್ಟದಲ್ಲಿ ಸಬ್ ಜ್ಯೂನಿಯರ್ ಭಾರತೀಯ ತಂಡದ ಆಟಗಾರರಾಗಿ ಪಾದಾರ್ಪಣೆ ಮಾಡಿದರು.

೨೦೦೫ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೀನಿಯರ್ ಹಾಕಿ ಪಂದ್ಯದಲ್ಲಿ ಸ್ಥಾನ ಪಡೆದ ರಘುನಾಥ, ನಂತರ ಹಲವು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿ ಪಾಲುಗೊಂಡಿದ್ದಾರೆ.

೨೦೦೭ರಲ್ಲಿ ಸುಲ್ತಾನ್ ಅಜ್ಞಾನ್ ಷಾ ಕಪ್ ಗೆದ್ದ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಇವರು ರಾಷ್ಟ್ರೀಯ ಲೀಗ್ ಪಂದ್ಯಾವಳಿಗಳಲ್ಲಿ ಉತ್ತರ ಪ್ರದೇಶದ ನಾಯಕರಾಗಿದ್ದು, ಒಂದೇ ಸೀಸನ್ನಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಎರಡು ಬಾರಿ ಬರೆದಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಲ್.ಶೇಖರ ನಾಯಕ್

ಭಾರತೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಲ್.ಶೇಖರ ನಾಯಕ್ ಅವರು ಅಂತರರಾಷ್ಟ್ರೀಯ ಟಿ-೨೦ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಪದ್ಮಶ್ರೀ ಪುರಸ್ಕೃತರಾದ ಶೇಖರ ನಾಯಕ್ ಬಡರೈತನ ಮಗನಾಗಿ ಜನಿಸಿದ ಹುಟ್ಟು ಅಂಧರು. ಅಂಧ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೇ ಕ್ರಿಕೆಟ್ ಕಲಿತ ಶೇಖರನಾಯಕ್ ಕರ್ನಾಟಕ ರಾಜ್ಯ ಅಂಧ ಕ್ರಿಕೆಟ್ ಆಟಗಾರರಾಗಿ, ನಾಯಕರಾಗಿ, ಹೆಸರುವಾಸಿಯಾದವರು.

ಭಾರತ ತಂಡದ ಅಂಧ ಕ್ರಿಕೆಟ್ ಕ್ಯಾಪ್ಟನ್ ಆಗಿ ವಿಶ್ವಕಪ್ ಅಂಧ ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ಬಾರಿ ಗೆದ್ದುಕೊಟ್ಟ ಶೇಖರನಾಯಕ್ ಅವರಿಗೆ ಭಾರತ ಸರ್ಕಾರ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಗೌರವ ಸನ್ಮಾನಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಲೀಲಾವತಿ ದೇವದಾಸ್

ಹೈದರಾಬಾದ್ ಕರ್ನಾಟಕದಲ್ಲಿ ಹದಿನೈದು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ಲೀಲಾವತಿ ದೇವದಾಸ್ ಅವರು ಗಾಂಧಿ ಸ್ಮಾರಕ ಕುಷ್ಠರೋಗ ನಿವಾರಣಾ ನಿಧಿಯಲ್ಲಿ ಸೇವೆ ಸಲ್ಲಿಸಿದವರು.

ಟಿ. ನರಸೀಪುರದಲ್ಲಿ ಕುಷ್ಠರೋಗ ನಿವಾರಣಾ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಆರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ವಿಶ್ರಾಂತ ಜೀವನದಲ್ಲಿಯೂ ಮೂರು ಮಿಷನ್ ಆಸ್ಪತ್ರೆಗಳಲ್ಲಿ ಸಲ್ಲಿಸುತ್ತಿರುವ ಲೀಲಾದೇವಿ ಅವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಸೇವೆ ಅನುಕರಣೀಯ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಗೌರವ ಶಾಶ್ವತಿ ಸಂಸ್ಥೆಯ ಸದೋದಿತಾ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಗೌರವಗಳನ್ನು ಪಡೆದಿರುವ ಡಾ|| ಲೀಲಾವತಿ ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿಯೂ ಸಕ್ರಿಯರು.

ಐವತ್ತಕ್ಕೂ ಹೆಚ್ಚು ಆರೋಗ್ಯ ಸಂಬಂಧಿ ಕೃತಿಗಳನ್ನು ರಚಿಸಿರುವ ಇವರು ಅನೇಕ ಪತ್ರಿಕೆಗಳಲ್ಲಿ ಆರೋಗ್ಯ ವಿಷಯವಾಗಿ ಅಂಕಣಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಮುನಿವೆಂಕಟಪ್ಪ ಸಂಜಪ್ಪ

ಭಾರತೀಯ ಸಸ್ಯ ಸರ್ವೇಕ್ಷಣಾ ನಿರ್ದೇಶಕರಾದ ಎಸ್.ಸಂಜಪ್ಪ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿರ್ದೇಶಕರಾಗಿದ್ದವರು. ಪ್ರಸಕ್ತ ಸಿ.ಎಸ್.ಐ.ಆರ್ ವಿಜ್ಞಾನಿಯಾಗಿರುವ ಎಸ್.ಸಂಜಪ್ಪ ಅವರು ರಾಷ್ಟ್ರೀಯ ರೇಷ್ಮೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ.

ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಸಂಜಪ್ಪ ಅವರು ಟಾನಮಿ ಸಂಶೋಧನೆಯಲ್ಲಿ ಪರಿಣತರು.

ದೇಶದ ಪ್ರಮುಖ ವಿಜ್ಞಾನಿಗಳು, ಸಂಶೋಧಕರು, ಸಸ್ಯ ಶಾಸ್ತ್ರಜ್ಞರಿಗೆ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿರುವ ಸಂಜಪ್ಪ ಅವರು ಸಸ್ಯಶಾಸ್ತ್ರಕ್ಕೆ ಮುವ್ವತ್ತೈದು ನೂತನ ಪ್ರಬೇಧಗಳನ್ನು ಪತ್ತೆ ಹಚ್ಚಿಕೊಟ್ಟವರು. ಹಲವಾರು ಸಸ್ಯಶಾಸ್ತ್ರ ಕೃತಿಗಳ ರಚನಾಕಾರರಾದ ಸಂಜಪ್ಪ ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಇವರಿಗೆ ಪ್ರತಿಷ್ಠಿತ ಬಿ.ವಿ.ಶಿವರಂಜನ್ ಚಿನ್ನದ ಪದಕ, ಡಾ|| ಜಿ.ಪಾಣಿಗ್ರಾಹಿ ಸ್ಮರಣ ಪ್ರಶಸ್ತಿ ಹಾಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಜಾನಕಿ ಅಮ್ಮಾಳ್ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಎಂ.ಆರ್.ಶ್ರೀನಿವಾಸನ್

ರಾಷ್ಟ್ರದ ಅಣುಶಕ್ತಿ ಕಾರ್ಯಕ್ರಮದ ಪ್ರವರ್ತಕರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಎಂ.ಆರ್.ಶ್ರೀನಿವಾಸನ್ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿ ನಂತರ ಕೇಂದ್ರ ಸರ್ಕಾರದ ಅಣು ಇಂಧನ ಇಲಾಖೆಗೆ ಕಾಲಿಟ್ಟರು.

ದೇಶದ ಮೊಟ್ಟಮೊದಲ ಅಣುಇಂಧನ ಕೇಂದ್ರದ ಪ್ರಧಾನ ಯೋಜನಾ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಶ್ರೀನಿವಾಸನ್ ಅವರು ನಂತರ ಮದರಾಸಿನ ಅಣುವಿದ್ಯುತ್ ಕೇಂದ್ರದ ನೇತೃತ್ವ ವಹಿಸಿದವರು. ಭಾರತದ ಅಣು ಇಂಧನ ಆಯೋಗದ ಅಧ್ಯಕ್ಷರಾಗಿ ಕೇಂದ್ರ ಅಣು ಇಂಧನ ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸನ್ ಭಾರತೀಯ ನ್ಯೂಕ್ಲಿಯ ಪವರ್ ಕಾರ್ಪೋರೇಷನ್‌ ಸ್ಥಾಪಕ ಅಧ್ಯಕ್ಷರು.

ದೇಶದ ಎಲ್ಲ ನ್ಯೂಕ್ಲಿಯರ್ ಇಂಧನ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀನಿವಾಸನ್ ಗ್ಯಾಸ್ ಟರ್ಬೈನ್ ತಂತ್ರಜ್ಞಾನದಲ್ಲಿಯೂ ನೈಪುಣ್ಯತೆ ಪಡೆದವರು. ದೇಶದ ಪ್ರತಿಷ್ಠಿತ ಪದ್ಮವಿಭೂಷಣ, ಭಾರತೀಯ ಇಚಿಜಿನಿಯರಿಂಗ್ ಇನ್ಸಿಟ್ಯೂಟಿನ ಶ್ರೇಷ್ಠ ವಿನ್ಯಾಸಕಾರ, ಹೋಮಿ ಬಾಬಾ ಪ್ರಶಸ್ತಿ ಸೇರಿದಂತೆ ಹಲವಾರು ದೇಶವಿದೇಶಗಳ ಉನ್ನತ ಗೌರವ ಪುರಸ್ಕಾರಗಳಿಗೆ ಇವರು ಪಾತ್ರರಾಗಿದ್ದಾರೆ

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ರಾಮದೇವ ರಾಕೆ

ದಲಿತ ಹೋರಾಟದ ಮಂಚೂಣಿಯಲ್ಲಿದ್ದ ರಾಮದೇವ ರಾಕೆಯವರು ಆಚಿದೋಲನ-ಪಂಚಮ ಪತ್ರಿಕೆಗಳ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದವರು.

ಪಂಚಮ ನಿಯತಕಾಲಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ರಾಮದೇವ ರಾಕೆಯವರು ನಂತರ ಪ್ರಜಾವಾಣಿ ಸಮೂಹ ಸೇರಿದರು. ವಿಶೇಷ ವರದಿ, ಶೋಧನಾ ವರದಿಗಳಲ್ಲಿ ನಿಪುಣತೆ ಸಾಧಿಸಿದ ಇವರದ್ದು ರಾಜಕೀಯ ವಿಶ್ಲೇಷಣೆಯಲ್ಲಿ ಎತ್ತಿದ ಕೈ.

ಚುನಾವಣಾ ವಿಶ್ಲೇಷಣೆ ಮಾಡುವಲ್ಲಿ ನಿಪುಣರಾದ ರಾಮದೇವ ರಾಕೆಯವರು ಗುಲಬರ್ಗಾದ ಪ್ರಜಾವಾಣಿ ಬ್ಯೂರೋದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ದಲಿತ ಸಮೂದಾಯದ ಜಾಗೃತಿಗಾಗಿ ಆರಂಭವಾದ ಕನ್ನಡದ ಪ್ರಪ್ರಥಮ ಪತ್ರಿಕೆ ‘ಪಂಚಮ’ವನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖ. ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿವೆ.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿಠಪ್ಪ ಗೋರಂಟ್ಲಿ

ಪತ್ರಕರ್ತರಾಗಿ ಹಾಗೂ ಸಾಹಿತಿಗಳಾಗಿ ಹೆಸರಾಗಿರುವ ವಿಠಪ್ಪ ಗೋರಂಟ್ಲಿ ಅವರು ಲಂಕೇಶ್‌ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದವರು.

ಕೊಪ್ಪಳ ಪ್ರದೇಶದಲ್ಲಿ ಪತ್ರಿಕೋದ್ಯಮದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಠಪ್ಪ ಗೋರಂಟ್ಲಿ ಅನೇಕ ದೈನಿಕ ಹಾಗೂ ನಿಯತಕಾಲಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾವ್ಯ, ಕತೆ, ಜೀವನಚರಿತ್ರೆ ಹಾಗೂ ಅಂಕಣ ಬರೆಹಗಳ ಬಗ್ಗೆ ಅನೇಕ ಕೃತಿಗಳನ್ನು ಹೊರತಂದಿರುವ ಇವರು ಅನೇಕ ಜನಪರ ಹೋರಾಟಗಳಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ತನಿಖಾ ವರದಿ ಪ್ರಶಸ್ತಿಯು ೨೦೦೩ರಲ್ಲಿ ಲಭಿಸಿದೆ.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎ.ಸಿ.ರಾಜಶೇಖರ್

ಭಾಷಾಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಅಟ್ಟೂರು ರಾಜಶೇಖರ ಅವರು ಪತ್ರಿಕೋದ್ಯಮ ಪ್ರವೇಶ ಮಾಡಿದ್ದು ಪ್ರಜಾವಾಣಿ ದೈನಿಕದ ಮೂಲಕ. ಎರಡೂವರೆ ದಶಕಗಳಿಗೂ ಹೆಚ್ಚು ಸಮಯ ಪ್ರಜಾವಾಣಿಯ ಸಂಪಾದಕೀಯ ವರ್ಗದಲ್ಲಿ ಕಾರ್ಯ ನಿರ್ವಹಿಸಿದ ರಾಜಶೇಖರ್ ಅವರು ಸಹಾಯಕ ಸಂಪಾದಕರಾಗಿಯೂ ಕೆಲಸ ಮಾಡಿದವರು.

ಮುದ್ರಣ ಮಾಧ್ಯಮದಿಂದ ವಿದ್ಯುನ್ಮಾನ ಮಾಧ್ಯಮಕ್ಕೆ ಪ್ರವೇಶ ಮಾಡಿದ ಅಬ್ಬರು ರಾಜಶೇಖ‌ ಅವರು ಕಸ್ತೂರಿ ವಾಹಿನಿಯ ಸುದ್ದಿ ಹಾಗೂ ಸಂವಾದ ಮಾಧ್ಯಮ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟಾರೆ ಮುವ್ವತ್ತೂರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿರುವ ರಾಜಶೇಖರ್ ಪ್ರಸ್ತುತ ರಾಮನಗರದ ಆರಂಭ ಕನ್ನಡ ದೈನಿಕದ ಸಂಪಾದಕರು.

ರಾಜಶೇಖರ ಅವರಿಗೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಮಂಗಳ ಎಂ.ಸಿ ವರ್ಗೀಸ್ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕುಸುಮಾ ಶಾನಭಾಗ್

ಕನ್ನಡದ ಪ್ರಸಿದ್ಧ ಬರಹಗಾರರಾದ ಭಾರತೀಸುತ ಅವರ ಪುತ್ರಿ ಕುಸುಮಾ ಶಾನಭಾಗ್ ಅವರು ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ಪತ್ರಿಕೋದ್ಯಮದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ವರದಿಗಳನ್ನು ನೀಡಿದ್ದಾರೆ.

ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸುಮಾರು ಮೂರುದಶಕಗಳ ಕಾಲ ಕಾರ್ಯ ನಿರ್ವಹಿಸಿದ ಕುಸುಮಾ ಶಾನಭಾಗ್ ಅವರು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.

ಸಮಾಜದ ಎಲ್ಲ ಸ್ಥರದ ಜನತೆಯ ನೋವು ನಲಿವುಗಳನ್ನು ಪತ್ರಿಕೆಗಳಲ್ಲಿ ಪ್ರತಿಬಿಂಬಿಸಿದ ಮಹಿಳಾ ಪತ್ರಕರ್ತರಲ್ಲಿ ಕುಸುಮಾ ಪ್ರಮುಖರು. ಅವರ ‘ಕಾಯದ ಕಾರ್ಪಣ್ಯ’ ಕೃತಿಯು ಅತ್ಯಂತ ವಿಶಿಷ್ಟವಾದ ಕೃತಿ.

ಮಹಿಳಾಪರ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ಸಿದ್ಧಪಡಿಸಿದ ಕುಸುಮಾ ಅವರಿಗೆ ಅನೇಕ ವೃತ್ತಿ ಸಂಸ್ಥೆಗಳು ಗೌರವಿಸಿವೆ.

Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಿ.ಯತಿರಾಜು

ವಿಜ್ಞಾನ ಹಾಗೂ ಪರಿಸರ ಜಾಗೃತಿಗಾಗಿ ಮೂರು ದಶಕಗಳಿಂದ ತೊಡಗಿಕೊಂಡಿರುವ ಸಿ.ಯತಿರಾಜು ಅವರು ವೃತ್ತಿಯಿಂದ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಯತಿರಾಜು ಅವರು ಭಾರತ ಜ್ಞಾನ ವಿಜ್ಞಾನ ಸಮಿತಿಯ ಚಟುವಟಿಕೆಗಳಲ್ಲಿ ಪಾಲುಗೊಂಡವರು.

ಕರ್ನಾಟಕ ರಾಜ್ಯ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆಯ ಸಂಚಾಲಕರಾಗಿದ್ದ ಯತಿರಾಜು ಅವರು ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಪಶ್ಚಿಮಘಟ್ಟಗಳ ಕರೆ, ಕಾಯದ ಕೃಷಿ, ಹಿರೋಷಿಮಾದಿಂದ ಬುದ್ಧನ ನಗುವಿನವರೆಗೆ ಕೃತಿಗಳು ಮುಖ್ಯವಾದವು.

ವಿಜ್ಞಾನ ಸಂವಹನಕಾರರಾಗಿ ಉಪನ್ಯಾಸ, ಲೇಖನ ಬರೆಯುವುದರಲ್ಲಿಯೂ ನಿಪುಣರಾದ ಯತಿರಾಜು ಅವರು ಸಾಕ್ಷರತಾ ಅಂದೋಲನಗಳಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.

Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಸ್.ಎಂ. ಕೃಷ್ಣಪ್ಪ

ಸಾಂಪ್ರದಾಯಿಕ ತೋಟದ ಬೆಳೆಗಳನ್ನು ಬೆಳೆಯುವ ಮನೆತನದಲ್ಲಿ ಜನಿಸಿದ ಎಸ್.ಎಂ.ಕೃಷ್ಣಪ್ಪ ಅವರು ಇಂಜಿನಿಯರಿಂಗ್ ಶಿಕ್ಷಣ ಪಡೆದ ನಂತರ ಪಾರಂಪರಿಕ ತೋಟಗಾರಿಕೆ ವೃತ್ತಿಯನ್ನು ಕೈಗೊಂಡವರು.

ಉತ್ಕೃಷ್ಟವಾದ ನರ್ಸರಿಗಳನ್ನು ಸ್ಥಾಪಿಸಿ ಬೆಳೆಸುವ ಮೂಲಕ ಹೆಸರಾಗಿರುವ ಕೃಷ್ಣಪ್ಪ ಅಂಗಾಂಶ ಕಸಿ ತಂತ್ರಜ್ಞಾನ ಹಾಗು ಸಾಂಪ್ರದಾಯಿಕ ತೋಟಗಾರಿಕೆ ಎರಡರಲ್ಲೂ ಯಶ ಸಾಧಿಸಿ ವಿದೇಶಗಳಿಗೆ ಸಸಿಗಳನ್ನು ರಫ್ತು ಮಾಡುತ್ತಿದ್ದಾರೆ.

ಲಾಲ್‌ಬಾಗಿನಲ್ಲಿ ವೈವಿಧ್ಯಮಯವಾದ ಹೂವುಗಳ ಪ್ರದರ್ಶನವನ್ನು ಏರ್ಪಡಿಸುತ್ತಿರುವ ಕೃಷ್ಣಪ್ಪ ಅವರು ತೋಟಗಾರಿಕೆ ಬೆಳೆಗಾರರಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸುವ ನರ್ಸರಿಮೆನ್ಸ್ ಮ್ಯಾಗಜಿನ್ ಸಂಪಾದಕರಾಗಿದ್ದು, ನರ್ಸರಿಮನ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಖಾದರ್ ಇಮಾಮಸಾಬ್ ನಡಕಟ್ಟಿನ

ಕೃಷಿಗೆ ಸಂಬಂಧಿಸಿದ ವಿವಿಧ ಯಂತ್ರೋಪಕರಣಗಳನ್ನು ಸ್ವಂತ ಬಂಡವಾಳ ಹೂಡಿ ತಯಾರಿಸಿ ಕೃಷಿಕರಿಗೆ ನೆರವು ನೀಡಿದ ಅಬ್ದುಲ್ ಖಾದರ್ ಇಮಾಂಸಾಬ್ ನಡಕಟ್ಟಿನ ಅವರಿಗೆ ಭಾರತ ಸರ್ಕಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಮುವ್ವತ್ತು ವರ್ಷಗಳಿಂದ ಹೊಸ ಹೊಸ ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿರುವ ನಡಕಟ್ಟಿನ ಅವರು ಕೂರಿಗೆ, ಕಬ್ಬಿಣದ ನೇಗಿಲ ಗಾಲಿ, ಕಬ್ಬು ಬಿತ್ತುವ ಕೂರಿಗೆ, ರೋಟೋವೇಟರ್‌ ಮೊದಲಾದ ಸರಳ ಯಂತ್ರಗಳನ್ನು ಸಂಶೋಧಿಸಿ ತಯಾರಿಸಿದ್ದಾರೆ.

ತಾವು ಸಿದ್ದಗೊಳಿಸಿದ ಯಂತ್ರೋಪಕರಣಗಳನ್ನು ಪ್ರಯೋಗ ಮಾಡಲು ಸ್ವಂತ ಜಮೀನನ್ನು ಮೀಸಲಾಗಿರಿಸಿರುವ ನಡಕಟ್ಟಿನ ಅವರಿಗೆ ಕೃಷಿ ವಿವಿ ಹಾಗೂ ಕೃಷಿ ಇಲಾಖೆಗಳು ಅನೇಕ ಗೌರವಗಳನ್ನು ನೀಡಿ ಗೌರವಿಸಿವೆ.

Categories
ಕೃಷಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಡಾ|| ಬಿಸಲಯ್ಯ

ಕೃಷಿ ಅಧ್ಯಯನ ಸಂಶೋಧನೆ, ಅಭಿವೃದ್ಧಿ ಕಾರ್ಯ ಮತ್ತು ಆಡಳಿತದಲ್ಲಿ ತೊಡಗಿರುವ ಡಾ|| ಬಿಸಲಯ್ಯ ಅವರು ಕೃಷಿ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಒಡನಾಟವಿಟ್ಟುಕೊಂಡಿದ್ದಾರೆ.

ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಿದ ಬಿಸಲಯ್ಯ ಅವರು ಈವರೆಗೆ ಸುಮಾರು ೧೭೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಕೃಷಿ ಅಭಿವೃದ್ಧಿ ಯೋಜನೆಯ ರೂಪುರೇಷೆಗಳ ತಯಾರಿಕೆಯಲ್ಲಿ ತಮ್ಮ ತಜ್ಞತೆಯನ್ನು ಧಾರೆ ಎರೆದಿರುವ ಬಿಸಲಯ್ಯ ಅವರು ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಮನೋಹರ ಕೆ ಪತ್ತಾರ

ಪರಂಪರಾನುಗತವಾಗಿ ಬಂದ ಶಿಲ್ಪಕಲೆ ಹಾಗೂ ಚಿತ್ರಕಲೆಯಲ್ಲಿ ಮೂರು ದಶಕಗಳಿಂದ ಹೆಸರಾಗಿರುವ ಮನೋಹರ ಪತ್ತಾರ ಅವರು ಕಾಲೇಜು ಚಿತ್ರಕಲಾ ಶಿಕ್ಷಕರಾಗಿಯೂ ಅನುಭವ ಪಡೆದವರು.

ಮಣ್ಣು, ಫೈಬರ್, ಸಿಮೆಂಟ್ ಸೇರಿದಂತೆ ಬಹುಮಾಧ್ಯಮ ಶಿಲ್ಪಕಲಾಕೃತಿ ರಚನೆಯಲ್ಲಿ ನೈಪುಣ್ಯತೆ ಸಾಧಿಸಿರುವ ಮನೋಹರ ಪತ್ತಾರ ಅವರು ರಂಗ ನಿರ್ದೇಶಕರಾಗಿಯೂ ಖ್ಯಾತಿ ಪಡೆದಿದ್ದಾರೆ.

ಬಹುಮುಖ ಪ್ರತಿಭೆಯ ಕಲಾವಿದರಾದ ಮನೋಹರ ಪತ್ತಾರ ಅವರು ಕೇಂದ್ರ ಲಲಿತಕಲಾ ಅಕಾಡೆಮಿಯ ಸಮೂಹ ವರ್ಣ ಕಾರ್ಯಾಗಾರದ ಮಾರ್ಗದರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಮನೋಹರ ಪತ್ತಾರ ಅವರು ಹಲವು ಪ್ರದರ್ಶನಗಳನ್ನು ಏರ್ಪಡಿಸಿದ್ದು, ಅನೇಕ ನಾಟಕಗಳಿಗೆ ರಂಗಸಜ್ಜಿಕೆಯಲ್ಲಿ ಸಹ ತೊಡಗಿದ್ದಾರೆ. ಇವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ನೀಡಿ ಸನ್ಮಾನಿಸಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಹೊನ್ನಪ್ಪಾಚಾರ್ಯ

ನಾಡಿನ ಹೆಸರಾಂತ ಲೋಹಶಿಲ್ಪಿಗಳಲ್ಲಿ ಒಬ್ಬರಾದ ಶಿಲ್ಪಿ ಹೊನ್ನಪ್ಪಾಚಾರ್ ಕಳೆದ ಐದು ದಶಕಗಳಿಂದ ವೈವಿಧ್ಯಮಯವಾದ ಲೋಹ ಶಿಲ್ಪಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಗತ್ಯಗಳಿಗೆ ಅನುಗುಣವಾಗಿ ಶಿಲ್ಪಗಳನ್ನು ನಿರ್ಮಿಸಿಕೊಟ್ಟಿರುವ ಹೊನ್ನಪ್ಪಾಚಾರ್ ಗುರುಕುಲ ಮಾದರಿಯ ಶಿಲ್ಪಕಲಾ ತರಬೇತಿ ಶಾಲೆಯನ್ನು ಆರಂಭಿಸುವ ಮೂಲಕ ನೂರಾರು ಮಂದಿ ಆಸಕ್ತರನ್ನು ಶಿಲ್ಪಕಲೆಯಲ್ಲಿ ತರಬೇತುಗೊಳಿಸಿದ್ದಾರೆ.

ವಿಶ್ವಕರ್ಮ ರಥೋತ್ಸವ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಶಿಲ್ಪಿ ಹೊನ್ನಪ್ಪಾಚಾರ್ ಕೇಂದ್ರ ಸರ್ಕಾರದ ಅಧಿಕೃತ ಶಿಲ್ಪಿಯಾಗಿ ಪರಿಗಣಿಸಲ್ಪಟ್ಟಿದ್ದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆಳ್ವಾಸ್ ನುಡಿಸಿರಿ ಗೌರವ, ಬೆಂಗಳೂರು ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರಿಗೆ ಲಭಿಸಿವೆ.

Categories
ಕರಕುಶಲಕಲೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಶರಣಮ್ಮ ಮ್ಯಾಗೇರಿ

ಬಡತನದ ಸಿರಿಯಾಗಿ ಶರಣಮ್ಮ ಮ್ಯಾಗೇರಿ ಅವರು ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಸಿದ್ಧಪಡಿಸುವ ಕೌದಿಗಳು ಕೇವಲ ಹಾಸಿಗೆ ಹೊದ್ದಿಕೆಯಾಗಿದ್ದಲ್ಲದೆ, ಕಲಾತ್ಮಕ ಕಸೂತಿಯಾಗಿಯೂ ರೂಪುಗೊಂಡಿವೆ.

ಅತ್ಯಂತ ಸುಲಭ ದರದಲ್ಲಿ ಕಲಾತ್ಮಕವಾಗಿ ಸಿದ್ದಪಡಿಸುವ ಕೌದಿಗಳು ಹಿರಿಯರ ನೆನಪಾಗಿಯೂ, ಉತ್ತಮ ಕಲಾಕೃತಿಯಾಗಿಯೂ ಸಿದ್ಧಪಡಿಸುವಲ್ಲಿ ಶರಣಮ್ಮ ಅವರು ಸಿದ್ಧಹಸ್ತರು.

Categories
ಚಿತ್ರಕಲೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಜಿ.ಎಲ್.ಎನ್.ಸಿಂಹ

ಮೈಸೂರಿನ ಕಾವಾ ಚಿತ್ರಕಲಾ ಶಾಲೆಯಲ್ಲಿ ಕಲಿತ ಜಿ.ಎಲ್.ಎನ್.ಸಿಂಹ ಅವರು ಭಾರತೀಯ ಪೌರಾಣಿಕ ಕಥಾಪ್ರಸಂಗಗಳನ್ನು ಹಾಗೂ ವೇದ ಸೂಕ್ತಗಳನ್ನು ಅನುಸರಿಸಿ ಹಲವಾರು ಸುಂದರ ಮತ್ತು ಅರ್ಥಪೂರ್ಣ ಚಿತ್ರಗಳನ್ನು ರಚಿಸಿದ್ದಾರೆ.

ಭಾರತೀಯ ಕಲಾಲೋಕದಲ್ಲಿ ಧಾರ್ಮಿಕ ಹಿನ್ನೆಲೆಯ ಸರಣಿ ಚಿತ್ರಗಳನ್ನು ನೀಡಿರುವ ಸಿಂಹ ಅವರು ಸ್ತೋತ್ರಗಳನ್ನು ಅನುಕರಿಸಿ ಚಿತ್ರಗಳನ್ನು ರಚಿಸುವ ಪ್ರಯತ್ನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಭಾರತೀಯ ಮಹಾಕಾವ್ಯಗಳ ಆಂತರ್ಯವನ್ನು ಕುಂಚದಲ್ಲಿ ಸಮರ್ಥವಾಗಿ ಬಿಂಬಿಸುವ ಕಲಾವಿದರಲ್ಲಿ ಜಿ.ಎಲ್.ಎನ್.ಸಿಂಹ ಅವರು ಅಪೂರ್ವ ಸಾಧನೆಗೈದಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಪ್ರೊ|| ಬಿ. ಗಂಗಾಧರಮೂರ್ತಿ

ವೃತ್ತಿಯಿಂದ ಪ್ರಾಧ್ಯಾಪಕರಾದ ಗಂಗಾಧರಮೂರ್ತಿಯವರು ಹೆಸರಾಂತ ಬರಹಗಾರರು. ೭೦ರ ದಶಕದಿಂದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಗಂಗಾಧರಮೂರ್ತಿಯವರು ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ನಡೆಸಿದವರು.

ದಲಿತ ಬಂಡಾಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿರುವ ಗಂಗಾಧರ ಮೂರ್ತಿ ಅವರು ಅನೇಕ ಕೃತಿಗಳನ್ನು ರಚಿಸಿದ್ದು, ಬೇರೆ ಭಾಷೆಗಳಿಂದ ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ.

ಗೌರಿಬಿದನೂರು ಬಳಿಯ ವಿದುರಾಶ್ವತ ಕ್ಷೇತ್ರದಲ್ಲಿ ಸ್ವಾತಂತ್ರ ಸೌಧವನ್ನು ರೂಪಿಸುವಲ್ಲಿ ಗಂಗಾಧರ ಮೂರ್ತಿ ಅವರ ಪಾತ್ರ ಹಿರಿದು.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಹಾಗು ಸಾರ್ವಜನಿಕರನ್ನು ತೊಡಗಿಕೊಳ್ಳಲು ಪೇರೇಪಿಸುತ್ತಿರುವ ಗಂಗಾಧರ ಮೂರ್ತಿ ಅವರು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಜನಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ|| ಸಯ್ಯದ್ ಷಾ ಖುಸ್ರೋ ಹುಸೇನಿ

ಗುಲಬರ್ಗಾದ ಸ್ವಾಜಾ ಬಂದೇನವಾಜ್ ಅವರ ವಂಶಸ್ಥರಾದ ಖುಸ್ರೋ ಹುಸೇನಿ ತಾವು ಸ್ಥಾಪಿಸಿದ ಖಾಜಾ ವಿದ್ಯಾಸಂಸ್ಥೆಯ ಮೂಲಕ ಶೈಕ್ಷಣಿಕ ಮತ್ತು ಸಮಾಜಮುಖಿ ಸೇವಾ ಕಾರ್ಯಗಳನ್ನು ಆರು ದಶಕಗಳಿಂದ ಅವ್ಯಾಹತವಾಗಿ ನಡೆಸುತ್ತ ಬಂದಿರುವರು.

ಗುಲಬರ್ಗ ಪ್ರದೇಶದಲ್ಲಿರುವ ಮುಸ್ಲಿಂ ಸಮುದಾಯದ ಉನ್ನತಿಗಾಗಿ ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಖುಸ್ರೋ ಹುಸೇನಿ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ಒದಗಿಸಿದವರು.

ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಖುಸ್ರೋ ಹುಸೇನಿ ಮುಂದಿನ ಪೀಳಿಗೆಯ ವ್ಯಕ್ತಿತ್ವ ವಿಕಸನಕ್ಕಾಗಿ ಶ್ರಮಿಸಿದ್ದು ಇವರ ಸೇವೆಗಾಗಿ ಕರ್ನಾಟಕ ಉರ್ದು ಅಕಾಡೆಮಿ, ನವದೆಹಲಿಯ ಅಂತರರಾಷ್ಟ್ರೀಯ ಪ್ರಕಾಶನ ಸಂಸ್ಥೆಯ ಪ್ರಥಮ ನಾಗರಿಕ ಪ್ರಶಸ್ತಿ, ಸೇರಿದಂತೆ ಹಲವು ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಾಸನ ಅಧ್ಯಯನ

ಸೀತಾರಾಮ್ ಜಾಗೀರದಾ

ನಾಡಿನ ಹೆಸರಾಂತ ಶಾಸನ ತಜ್ಞರಲ್ಲಿ ಒಬ್ಬರಾದ ಸೀತಾರಾಮ್ ಜಾಗೀರದಾರ್ ಅವರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಮೌಲ್ಯಯುತ ಶಾಸನ ಗ್ರಂಥಗಳನ್ನು ಹೊರತಂದವರು.

ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಹಿರಿಯ ಶಾಸನ ತಜ್ಞರಾಗಿ ನಿವೃತ್ತರಾದ ಇವರು ಶ್ರವಣಬೆಳಗೊಳದ ಚಂದ್ರಗಿರಿಯ ಶಾಸನಗಳ ಅಧ್ಯಯನ ಯೋಜನೆಯ ಮುಖ್ಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದವರು.

ರಾಷ್ಟ್ರಕೂಟ ರಾಜವಂಶದಲ್ಲಿ ಕನ್ನಡ ಸಾಹಿತ್ಯದ ಅಭಿವೃದ್ಧಿಯ ಕುರಿತು ಆಳವಾದ ಅಧ್ಯಯನ ಮಾಡಿರುವ ಇವರು ಕನ್ನಡದ ಮೊದಲ ಕೃತಿ ‘ಕವಿರಾಜಮಾರ್ಗ’ದ ಬಗ್ಗೆ ವಿಶೇಷ ಉಪನ್ಯಾಸ, ಪುಸ್ತಕ ಪ್ರಕಟಣೆಗಳಲ್ಲಿ ಪಾಲುಗೊಂಡವರು.

ಅಲ್ಲಮ ಪ್ರಭುಗಳು, ಇಮ್ಮಡಿ ನಾಗವರ್ಮ, ವೀರಶೈವ ಸಾಹಿತ್ಯ ವಿಶೇಷ ಅಧ್ಯಯನ ಹೀಗೇ ಐವತ್ತಕ್ಕೂ ಹೆಚ್ಚು ಕನ್ನಡ ಹಾಗು ಇಂಗ್ಲಿಷ್ ಕೃತಿಗಳನ್ನು ರಚಿಸಿರುವ ಇವರು ನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ಶ್ರವಣಬೆಳಗೊಳದ ಶಾಸನ ಶಾಸ್ತ್ರ ವಿಶಾರದ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಇವರಿಗೆ ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಚ್.ಬಿ. ಮಂಜುನಾಥ್

ತಮ್ಮ ವಕ್ರರೇಖೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೊನಚು ವ್ಯಂಗ್ಯಚಿತ್ರಕಾರರಲ್ಲಿ ಪ್ರಮುಖರು ಎಚ್.ಬಿ.ಮಂಜುನಾಥ್,

ಪ್ರಜಾವಾಣಿ ಪತ್ರಿಕೆಯ ಚಿನಕುರಳಿ, ಕನ್ನಡ ಪ್ರಭದ ಸಿಡಿಮದ್ದು, ಸಂಯುಕ್ತ ಕರ್ನಾಟಕದ ಚುಚ್ಚುಮದ್ದು ಅಂಕಣಗಳ ಮೂಲಕ ಸುಮಾರು ೧೭,೦೦೦ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ಅರಳಿಸಿದ್ದಾರೆ. ರೇಖೆಗಳೇ ಅಲ್ಲದೆ ಛಾಯಾಚಿತ್ರಕಲೆಯಲ್ಲಿಯೂ ತಮ್ಮ ಛಾಪು ಮೂಡಿಸಿರುವ ಇವರು ತೆಗೆದ ೮೦೦೦ಕ್ಕೂ ಹೆಚ್ಚು ಛಾಯಾಚಿತ್ರಗಳು ಇವರ ಸೃಜನಶೀಲತೆಯ ಪ್ರತೀಕವಾಗಿದೆ.

ದೇಶ ವಿದೇಶಗಳಲ್ಲಿಯೂ ವ್ಯಂಗ್ಯಚಿತ್ರ ಪ್ರಾತ್ಯಕ್ಷಿಕೆ, ಮತ್ತು ಪ್ರದರ್ಶನಗಳನ್ನು ನೀಡಿರುವ ಇವರಿಗೆ ರಂಭಾಪುರಿ ಪೀಠದಿಂದ ಚಿತ್ರಕಲಾಕೋವಿದ ಪ್ರಶಸ್ತಿ, ದಾವಣಗೆರೆ ಜಿಲ್ಲಾಡಳಿತದ ಗೌರವ ಪುರಸ್ಕಾರಗಳೂ ಸೇರಿದಂತೆ ಹಲವು ಗೌರವ ಸಮ್ಮಾನಗಳು ಇವರಿಗೆ ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್. ಸಯ್ಯದ್ ಅಹಮದ್

ಶತಮಾನದ ಅಂಚಿನಲ್ಲಿರುವ ಎಸ್.ಸಯ್ಯದ್ ಅಹಮದ್ ಅವರು ಅಲ್ಲಮ, ಇಟ್ಬಾಲ್ ಮಹಾಕವಿಗಳ ಬಗೆಗೆ ಆಳವಾದ ಅಭ್ಯಾಸ ಮಾಡಿರುವ ಅನೇಕ ಕೃತಿಗಳನ್ನು ರಚಿಸಿರುವ ಹಿರಿಯರು.

ಆಧ್ಯಾತ್ಮ, ತತ್ವಜ್ಞಾನ ಮತ್ತು ಅನುಭಾವ ಸಾಹಿತ್ಯಕ್ಕೆ ಸೇರಿದ ಹದಿನೆಂಟಕ್ಕೂ ಹೆಚ್ಚು ಪರ್ಷಿಯನ್ ಗ್ರಂಥಗಳನ್ನು ಉರ್ದು ಭಾಷೆಗೆ ಅನುವಾದ ಮಾಡಿ ಓದುಗರಿಗೆ ಸುಲಭ ದರದಲ್ಲಿ ದೊರೆಯುವಂತೆ ಮಾಡಿದ ಹೆಗ್ಗಳಿಕೆ ಇವರದು.

ಕಾಶ್ಮೀರಿ ವಿಶ್ವವಿದ್ಯಾಲಯ ಹಾಗೂ ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಭಾಷಾ ಪಾಂಡಿತ್ಯದ ಬಗ್ಗೆ ಪ್ರಶಂಸೆ ಪಡೆದಿರುವ ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿಗಳಾದ ಸಯ್ಯದ್ ಅಹಮದ್ ಅವರು ಅಲ್ಲಮನ ತತ್ವಜ್ಞಾನದ ಬಗ್ಗೆ ಅಗಾಧವಾದ ಪಾಂಡಿತ್ಯವುಳ್ಳವರು.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ರಾಮಚಂದ್ರ ಗುಹಾ

ಅಂಕಣಕಾರರಾಗಿರುವ ರಾಮಚಂದ್ರ ಗುಹಾ ಅವರು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ತಮ್ಮ ಅಂಕಣಗಳ ಮೂಲಕ ಪರಿಸರ, ಕ್ರಿಕೆಟ್ ಮತ್ತು ರಾಜಕೀಯ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಮಂಡಿಸುತ್ತಿದ್ದಾರೆ.

ತಮ್ಮ ಇಂಡಿಯಾ ಆಕ್ಟರ್ ಗಾಂಧಿ ಕೃತಿಯಲ್ಲಿ ಭಾರತೀಯ ಇತಿಹಾಸವನ್ನು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದಲ್ಲಿ ರಚಿಸುವಲ್ಲಿ ಗುಹಾ ಅವರ ಕೊಡುಗೆ ಹಿರಿದು. ಕ್ರಿಕೆಟ್, ಇತಿಹಾಸ ಸೇರಿದಂತೆ ಹಲವು ಕೃತಿಗಳನ್ನು ಇವರು ರಚಿಸಿದ್ದಾರೆ.

ರಾಷ್ಟ್ರದ ಮತ್ತು ವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸ ನೀಡುತ್ತಿರುವ ರಾಮಚಂದ್ರ ಗುಹಾ ಅವರ ಹಲವು ಕೃತಿಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಲೆಫ್ಟಿನೆಂಟ್ ಜನರಲ್ ರಮೇಶ ಹಲ್ಗಲಿ

ಬಾಗಲಕೋಟೆಯ ಲೆ. ಕರ್ನಲ್ ರಮೇಶ ಹಲ್ಗಲಿ ಭಾರತೀಯ ಸೈನ್ಯದಲ್ಲಿ ಉಪಮುಖ್ಯಸ್ಥರಾಗಿದ್ದು, ತಮ್ಮ ವಿಶಿಷ್ಟ ಸೇವೆಗಾಗಿ ಹಲವು ಸೇವಾ ಪದಕಗಳನ್ನು ಗಳಿಸಿದವರು.

ನಿವೃತ್ತಿಯ ನಂತರ ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಹಿತಿ ತಂತ್ರಜ್ಞಾನ ವಲಯದಲ್ಲಿಯೂ ಅಪರಿಮಿತ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ರಮೇಶ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೀರಾ ನಾಯಕ್

ಸ್ತ್ರೀ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಕನ್ನಡ ಭಾಷೆಯ ಉನ್ನತಿಗಾಗಿ ಶ್ರಮಿಸುತ್ತಿರುವ ಮೀರಾ ನಾಯಕ್ ಅವರು ಮೈಸೂರಿನ ಸಮತಾ ವೇದಿಕೆಯ ಸಂಸ್ಥಾಪಕ ಸದಸ್ಯರು.

ಹತ್ತು ಹಲವು ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮೀರಾನಾಯಕ್ ಅವರು ದೇಶವಿದೇಶಗಳಲ್ಲಿ ನಡೆದ ಹಲವಾರು ಸಮ್ಮೇಳನ, ವಿಚಾರ ಸಂಕಿರಣ ಹಾಗೂ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಸ್ತ್ರೀ ಚಿಂತನೆಯ ವಿಚಾರಗಳನ್ನು ಮಂಡಿಸಿದ್ದಾರೆ.

ಹವ್ಯಾಸಿ ರಂಗಭೂಮಿಯಲ್ಲಿಯೂ ನಟಿ ಹಾಗು ನಿರ್ದೇಶಕಿಯಾಗಿರುವ ಮೀರಾ ನಾಯಕ್ ಅವರು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಇವರಿಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಬೆಂಗಳೂರಿನ ಶಕ್ತಿ ರಾಜ್ಯ ಮಟ್ಟದ ಪ್ರಶಸ್ತಿ, ಒಡನಾಡಿ ಸಂಸ್ಥೆಯ ಮಹಿಳಾ ಸಾಧಕಿ ಗೌರವ ಲಭಿಸಿದೆ.

Categories
ಬಯಲಾಟ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಈಶ್ವರವ್ವ ಹುಚ್ಚವ್ವ ಮಾದರ

ಬಯಲಾಟ ಕ್ಷೇತ್ರಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ಈಶ್ವರವ್ವ ಹುಚ್ಚಪ್ಪ ಮಾದರ ಶ್ರೀ ಕೃಷ್ಣ ಪಾರಿಜಾತ, ಬಯಲಾಟಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತ ಬಂದವರು.

ನಾಲ್ಕೂವರೆ ದಶಕಗಳಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟದಲ್ಲಿ ರುಕ್ಕಿಣಿ, ನಾರದ, ದೊರೆಸಾನಿ ಪಾತ್ರಗಳಿಗೆ ಜೀವ ತುಂಬುತ್ತಿರುವ ಈಶ್ವರವ್ವ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಪ್ರದರ್ಶಿಸಿರುವ ಶ್ರೀಕೃಷ್ಣ ಪಾರಿಜಾತ ಪ್ರದರ್ಶನಗಳು ನಾಲ್ಕು ಸಾವಿರಕ್ಕೂ ಹೆಚ್ಚು.

ಹರಿಯಾಣ ಉತ್ಸವ, ಮೈಸೂರು ವಿಶ್ವಕನ್ನಡ ಸಮ್ಮೇಳನ, ಪಟ್ಟದಕಲ್ಲು ಉತ್ಸವ ಮೊದಲಾದ ಕಡೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿರುವ ಈಶ್ವರವ್ವ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಅಖಿಲ ಭಾರತ ಜಾನಪದ ಸಮಾವೇಶ ಗೌರವ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ.

Categories
ಬಯಲಾಟ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕೆ. ಪಂಪಾಪತಿ

ಬಯಲಾಟಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಾರಿ ಸಾರಥಿ ಪಾತ್ರ ಮಾಡಿರುವ ಕೆ.ಪಂಪಾಪತಿ ಅವರು ಬಳ್ಳಾರಿಯ ಹತ್ತಿಗಿರಣಿಯ ಕಾರ್ಮಿಕರಾಗಿ ದುಡಿದಿದ್ದಾರೆ.

ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪಂಪಾಪತಿ ಅನೇಕ ಬಯಲಾಟಗಳಲ್ಲಿ ಸಾರಥಿ ಪಾತ್ರದ ಜೊತೆಗೆ ಪ್ರಮುಖ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ.

ಪಾಂಡುವಿಜಯ, ಅಭಿಮನ್ಯು ಕಾಳಗ, ಸುಂದೋಪಸುಂದರ ರತಿ ಕಲ್ಯಾಣ, ಗಿರಿಜಾ ಕಲ್ಯಾಣ ಮೊದಲಾದ ಬಯಲಾಟಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ ಕಲಾವಿದ ಪಂಪಾಪತಿ ಅವರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ಯಕ್ಷಗಾನ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಬಳ್ಳೂರು ಕೃಷ್ಣ ಯಾಜಿ

ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಯಾಜಿ ಅವರು ನಾಡಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದು, ಹತ್ತು ವರ್ಷಗಳ ಹಿಂದೆ ತಮ್ಮದೇ ಆದ ಯಾಜಿ ಯಕ್ಷ ಮಿತ್ರ ಮಂಡಳಿಯನ್ನು ಸ್ಥಾಪಿಸಿದರು.

ಯಕ್ಷಗಾನ ಲೋಕದ ದಿಗ್ಗಜರೊಂದಿಗೆ ಒಡನಾಟವಿಟ್ಟುಕೊಂಡ ಯಾಜಿಯವರು ದೇಶ ವಿದೇಶಗಳಲ್ಲಿ ಮೇಳಗಳೊಂದಿಗೆ ಪ್ರವಾಸ ಮಾಡಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ತಮ್ಮ ಮೇಳ ಮೂಲಕ ಹೊಸ ಪೀಳಿಗೆಯ ಯಕ್ಷಗಾನ ಕಲಾವಿದರನ್ನು ಸಿದ್ಧ ಮಾಡುತ್ತಿರುವ ಯಾಜಿ ಅವರಿಗೆ ಅನೇಕ ಗೌರವ ಸನ್ಮಾನಗಳು ಲಭಿಸಿದೆ.

Categories
ಯಕ್ಷಗಾನ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಶಿವರಾಮ ಜೋಗಿ

ಚಿಕ್ಕಂದಿನಲ್ಲಿಯೇ ಕಲೆಗೆ ಒಲಿದು ಯಕ್ಷಗಾನ ಹಾಗೂ ನಾಟ್ಯಾಭ್ಯಾಸ ಮಾಡಿ ಯಕ್ಷಗಾನದಲ್ಲಿ ಶಿವರಾಮ ಜೋಗಿ ಹೆಚ್ಚಿನ ಪರಿಣತಿ ಪಡೆದದ್ದು ಶೇಣಿಗೋಪಾಲಕೃಷ್ಣ ಭಟ್ಟರಂತಹ ದಿಗ್ಗಜರ ಗರಡಿಯಲ್ಲಿ. ಅರ್ಥಗಾರಿಕೆಯಲ್ಲಿ ಅಚ್ಚುಕಟ್ಟಾಗಿ ಅಭಿನಯಿಸುವ ಕಲೆ ಕಲಿತ ಶಿವರಾಮ ಜೋಗಿಯವರು ಕೂಡ್ಲು ಮೇಳದಿಂದ ಯಕ್ಷರಂಗಕ್ಕೆ ಕಾಲಿಟ್ಟರು.

ಕೆಲಕಾಲ ಮೂಲ್ಕಿ ಮೇಳದಲ್ಲಿದ್ದ ಜೋಗಿಯವರು, ಮುಂದಿನ ತಮ್ಮ ಯಕ್ಷಗಾನ ಪಯಣವನ್ನು ಮೀಸಲಿಟ್ಟಿದ್ದು ಸುರತ್ಕಲ್ ಯಕ್ಷಗಾನ ಮೇಳದ ಜೊತೆಯಲ್ಲಿ, ಅಭಿಮನ್ಯು, ಕೃಷ್ಣ, ಬಬ್ರುವಾಹನ ಮೊದಲಾದ ಪಾತ್ರಗಳಲ್ಲಿ ಜೀವ ತುಂಬುತ್ತಿದ್ದ ಜೋಗಿಯವರು ಸುರತ್ಕಲ್ ಮೇಳವನ್ನು ಜನಪ್ರಿಯಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.

ನಾಲ್ಕು ದಶಕಗಳ ಕಾಲ ಸುರತ್ಕಲ್ ಮೇಳದ ತಿರುಗಾಟದ ಜವಾಬ್ದಾರಿ ಹೊತ್ತಿದ್ದ ಶಿವರಾಮ ಜೋಗಿ, ಯಕ್ಷಗಾನ ಮೇಳಗಳ ಸಂಘಟನೆಯಲ್ಲಿಯೂ ಸಕ್ರಿಯರಾಗಿದ್ದರು. ಯಕ್ಷಗಾನ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಜೋಗಿಯವರಿಗೆ ಸಂದಿವೆ.

Categories
ಜಾನಪದ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ದುರ್ಗಮ್ಮ ಕರಡಿಗುಡ್ಡ

ಹಳ್ಳಿಗಾಡಿನ ಸೊಗಡಿನ ಜನಪದೀಯ ಪರಂಪರೆಯ ಹಾಡುಗಳು ಜನಪದರ ದೈನಂದಿನ ಬದುಕನ್ನು ಕಟ್ಟಿಕೊಡುವಲ್ಲಿ ತನ್ನ ಪ್ರಭಾವ ಬೀರಿದೆ. ಹೀಗೆ ಹಳ್ಳಿಗಾಡಿನ ಸಾಂಸ್ಕೃತಿಕ ಬದುಕಿನ ದನಿಯನ್ನು ಲೋಕಕ್ಕೆ ತಮ್ಮ ಹಾಡುಗಳ ಮೂಲಕ ಪರಿಚಯಿಸುವ ಅಸಂಖ್ಯ ಮೌಖಿಕ ಪರಂಪರೆಯ ಪ್ರತಿನಿಧಿಗಳನ್ನು ದುರ್ಗಮ್ಮ ಕರಡಿಗುಡ್ಡ ಅವರು ಪ್ರಮುಖರು.

ಮದುವೆ ಮುಂಜಿ ಮುಂತಾದ ಶುಭ ಕಾರ್ಯಗಳಲ್ಲಿ ಸೋಬಾನೆ ಪದಗಳನ್ನು ತಮ್ಮ ಮಧುರ ಕಂಠದಿಂದ ಹಾಡುವ ದುರ್ಗಮ್ಮ ಅವರು ಆಸಕ್ತರಿಗೆ ತರಬೇತಿ ನೀಡುತ್ತ ತಮ್ಮೊಡನೆ ಸೊಲ್ಲು ಹಾಡುವ ಪರಂಪರೆಯನ್ನು ಸೋಬಾನೆ ಗಾಯಕಿಯರಾಗಿ ಜನಪದ ಪರಂಪರೆಯನ್ನು ವಿಸ್ತರಿಸುತ್ತಿದ್ದಾರೆ.

ಆಕಾಶವಾಣಿಯಲ್ಲಿಯೂ ತಮ್ಮ ಗಾಯನಸುಧೆ ಹರಿಸಿರುವ ದುರ್ಗಮ್ಮ ಅವರ ಸೇವೆಯನ್ನು ಗುರುತಿಸಿ ರಾಯಚೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಇವರ ಮುಡಿಗೇರಿವೆ.

Categories
ಜಾನಪದ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿಷ್ಣಪ್ಪ ಗೋವಿಂದಪ್ಪ ಪುರದವರ

ಜನಪದ ಪರಂಪರೆಯಲ್ಲಿ ತಮ್ಮ ಕುಲದೈವವಾದ ಬೀರಪ್ಪ ದೇವರ ಧಾರ್ಮಿಕ ಕಾರ್ಯಗಳಲ್ಲಿ ಡೊಳ್ಳಿನ ಪದಗಳನ್ನು ಸಾದರ ಪಡಿಸುವ ಮೂಲಕ ತತ್ವಗಳನ್ನು ಪ್ರಸ್ತುತ ಪಡಿಸುವ ಕಲಾವಿದರಲ್ಲಿ ವಿಷ್ಣಪ್ಪ ಗೋವಿಂದಪ್ಪ ಪುರದವರ ಅವರು ಪ್ರಮುಖರು.

ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ತತ್ವಪದಗಳು ಮತ್ತು ಭಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ವಿಷ್ಣಪ್ಪ ಅವರು ತಮ್ಮ ಆಶುಕವಿತ್ವದಿಂದ ತತ್ವಗಳನ್ನು ಕಟ್ಟಿಕೊಡುವಲ್ಲಿ ಸಹ ಜನಪ್ರಿಯರು. ಆಸಕ್ತ ಮಕ್ಕಳಿಗೆ ತತ್ವಪದ ತರಬೇತಿ ಕಾರ್ಯವನ್ನು ನಡೆಸಿಕೊಡುತ್ತ ಬಂದಿದ್ದಾರೆ.

ಉತ್ತರ ಕರ್ನಾಟಕದ ಪ್ರಮುಖ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ವಿಷ್ಣಪ್ಪ ಗೋವಿಂದಪ್ಪ ಪುರದವರ ಅವರ ಡೊಳ್ಳಿನ ಪದ ಗಾಯನವನ್ನು ವೃತ್ತಿಯಾಗಿಯೂ ಪ್ರವೃತ್ತಿಯಾಗಿಯೂ ರೂಢಿಸಿಕೊಂಡು ಬದುಕಿದವರು. ಇವರ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ.

Categories
ಜಾನಪದ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಮಾನಪ್ಪ ಈರಪ್ಪ ಲೋಹಾರ

ಜನಪದ ಪರಂಪರೆಯಲ್ಲಿ ವೀರಗತಿಯ ಪ್ರದರ್ಶನ ನೀಡುವ ಜಾನಪದ ಪ್ರದರ್ಶನ ಕಲೆ ವೀರಗಾಸೆ, ರುದ್ರ ಭಯಂಕರವಾಗಿ ತಮ್ಮ ವೇಷಭೂಷಣ ಮತ್ತು ನೃತ್ಯದ ಮೂಲಕ ಜನರ ಗಮನ ಸೆಳೆದವರು ಮಾನಪ್ಪ ಈರಪ್ಪ ಲೋಹಾರ.

ಕಳೆದ ನಾಲ್ಕೂವರೆ ದಶಕಗಳಿಂದ ವೀರಗಾಸೆಯಲ್ಲಿ ತಮ್ಮ ಪ್ರದರ್ಶನ ನೀಡುತ್ತ ಬಂದಿರುವ ಮಾನಪ್ಪ ಈರಪ್ಪ ಲೋಹಾರ ಅವರು ಬಾಗಲಕೋಟೆ ಜಿಲ್ಲೆಯ ಅನೇಕ ಊರುಗಳಲ್ಲಿ ಮೂರ್ತಿಗಳನ್ನು ಸಿದ್ಧಪಡಿಸಿ ಬಣ್ಣ ಹಚ್ಚುವುದರಲ್ಲಿ ನಿಪುಣರು.

ಮುಧೋಳ, ಜಮಖಂಡಿ ತಾಲೂಕುಗಳಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮ ವಿಶಿಷ್ಟ ಬಗೆಯ ವೀರಗಾಸೆ ನೃತ್ಯವನ್ನು ಪ್ರದರ್ಶಿಸುತ್ತ ಬಂದಿರುವ ಇವರು ಈ ಜಾನಪದ ನೃತ್ಯ ಪರಂಪರೆಯಲ್ಲಿ ಆಸಕ್ತ ಯುವಕರಿಗೆ ತರಬೇತಿಯನ್ನು ಸಹ ನೀಡುತ್ತ ಬಂದಿದ್ದಾರೆ.

ಹಂಪಿ ಉತ್ಸವ, ನವರಸಪುರ ಮೊದಲಾದ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರದರ್ಶನ ನೀಡುತ್ತ ಬಂದಿರುವ ಮಾನಪ್ಪ ಈರಪ್ಪ ಲೋಹಾರ ಅವರಿಗೆ ಜಿಲ್ಲಾಡಳಿತ ಪ್ರಶಸ್ತಿ ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಗೌರವಿಸಿವೆ

Categories
ಜಾನಪದ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ತಾಯಮ್ಮ

ಸೋಬಾನೆ ಪದಗಳನ್ನು ತಾಯಿಯ ಮಡಿಲಿನಲ್ಲೇ ಕಲಿತ ತಾಯಮ್ಮ ಅವರು ಬಾಲ್ಯದಿಂದಲೇ ಜನಪದ ಪರಂಪರೆಗೆ ತೆರೆದುಕೊಂಡವರು.

ಸೋಬಾನೆಪದ, ಸಿದ್ಧರಾಮನ ಪದ, ಅಂತರಘಟ್ಟ ಅಮ್ಮನ ಪದ, ಬೀಸೋಕಲ್ಲು ಪದಗಳನ್ನು ಹಾಡುತ್ತ ಬಂದಿರುವ ತಾಯಮ್ಮ ಅವರು ತಮ್ಮ ವಿವಾಹಾನಂತರವೂ ಕಲೆಯನ್ನು ಮುಂದುವರೆಸಿದ್ದಾರೆ.

ಆಕಾಶವಾಣಿಯಲ್ಲಿ ಸಹ ತಮ್ಮ ಕಲಾ ಪ್ರದರ್ಶನ ಮಾಡಿರುವ ತಾಯಮ್ಮ ಅವರ ಬದುಕಿನ ಬಡತನ ಕಲೆಗೆ ಎರವಾಗಿಲ್ಲದಿರುವುದು ಗಮನೀಯ.

ತಾಯಮ್ಮ ಅವರಿಗೆ ಚಿಕ್ಕಮಗಳೂರು ಜಿಲ್ಲಾ ರಾಜೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ಸಂದಿವೆ.

Categories
ಜಾನಪದ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಗೊರವರ ಮೈಲಾರಪ್ಪ

ಜಾನಪದ ಪರಂಪರೆಯಲ್ಲಿ ಸಹಸ್ರಾರು ಭಕ್ತರನ್ನು ಒಂದೆಡೆ ಸೇರಿಸಿ ಗೊರವರ ಪವಾಡದ ನುಡಿಗಳನ್ನಾಡುವ ಮೂಲಕ ಏಳುಕೋಟಿ ಏಳುಕೋಟಿ ಚಾಂಗಲೋ ಘೋಷದಲ್ಲೇ ಲಕ್ಷಾಂತರ ಆಸ್ತಿಕರನ್ನು ಒಂದೆಡೆ ಸೇರಿಸುವ ಪವಾಡ ಪರಂಪರೆಯಲ್ಲಿ ಗೊರವರ ಮೈಲಾರಪ್ಪನವರು ಜನಪ್ರಿಯ.

ಕರಿಯ ಕಂಬಳಿ ಅಂಗಿ, ಕೈಯ್ಯಲ್ಲಿ ಕೊಳಲು, ಢಮರುಗ, ತ್ರಿಶೂಲ, ಭಂಡಾರದ ಬಟ್ಟಲು, ದೋಣಿ ಹಿಡಿದ ವಿಶಿಷ್ಟ ಗೊರವರ ವೇಷ ಧರಿಸುವ ಮೈಲಾರಪ್ಪ ತಮ್ಮ ಕಾರಣಿಕ ನುಡಿಗಳ ಮೂಲಕವೇ ಜನಮನ್ನಣೆಗಳಿಸಿದವರು.

ಮೈಲಾರಲಿಂಗೇಶ್ವರ ದೇವರ ಆರಾಧಕರಾದ ಗೊರವರ ಮೈಲಾರಪ್ಪ ದೋಣಿ ಸೇವೆಯಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದಿರುವ ಮೈಲಾರಪ್ಪ ಅವರು ಜನಪದ ಪರಂಪರೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖರು.

Categories
ನೃತ್ಯ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಶಾವಮ್ಮ

ವಿಶಿಷ್ಟ ರೀತಿಯ ಲಂಬಾಣಿ ಸಂಸ್ಕೃತಿಯ ವೇಷಭೂಷಣ ಹಾಗೂ ನರ್ತನವನ್ನು ಮೈಗೂಡಿಸಿಕೊಂಡಿರುವ ಶಾವಮ್ಮ ಅವರು ಕಳೆದ ಏಳು ದಶಕಗಳಿಂದ ಅದನ್ನು ಪ್ರದರ್ಶಿಸುತ್ತ ಜನಪ್ರಿಯರಾಗಿದ್ದಾರೆ.

ಲಂಬಾಣಿ ನೃತ್ಯಗಳನ್ನು ಅದ್ಭುತವಾಗಿ ಅಭಿನಯಿಸುವ ಶಾವಮ್ಮ ಅನೇಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಲಂಬಾಣಿ ಭಾಷೆ, ವೇಷಭೂಷಣ ಹಾಗೂ ಹಾಡು-ನೃತ್ಯಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುತ್ತಿರುವ ಶಾವಮ್ಮ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗೌರವವೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ಜಾನಪದ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ತಂಬೂರಿ ಜವರಯ್ಯ

ಸಕ್ಕರೆ ನಾಡಿನವರಾದ ತಂಬೂರಿ ಜವರಯ್ಯ ಅವರು ತಮ್ಮ ಜೀವನ ಸಂಗಾತಿ ಬೋರಮ್ಮ ಅವರೊಡಗೂಡಿ ಏಕತಾರಿಯಲ್ಲಿ ಲಯಬದ್ಧವಾಗಿ ತತ್ವಗಳನ್ನು ಸತ್ವಶಾಲಿಯಾಗಿ ಹಾಡುತ್ತಾ ಬಂದವರು.

ಭಿಕ್ಷಾಟನೆ ವೃತ್ತಿಯಲ್ಲಿ ತೊಡಗಿದರೂ ತಮ್ಮ ಸ್ಮರಣ ಶಕ್ತಿಯಿಂದ ಜೀವನ ಸಂದೇಶಗಳನ್ನು ಸಾರುವ ತತ್ವಪದಗಳ ಬಹುದೊಡ್ಡ ಭಂಡಾರವೇ ಆಗಿರುವ ತಂಬೂರಿ ಜವರಯ್ಯನವರು ಕಳೆದ ಐದು ದಶಕಗಳಿಂದಲೂ ತತ್ವಪದ ಗಾಯನಕ್ಕೆ ತಮ್ಮನ್ನು ತೊಡಗಿಸಿಕೊಂಡವರು.

ಶಿಶುನಾಳ ಷರೀಫ, ನಾಗಲಿಂಗಯೋಗಿ, ಕೈವಾರ ನಾರೇಯಣಪ್ಪ ಕಡಕೋಳ ಮಡಿವಾಳಪ್ಪ ಶಿವಯೋಗಿಗಳ ತತ್ವಪದಗಳನ್ನು ಹಾಡುವ ತಂಬೂರಿ ಜವರಯ್ಯ ಅವರು ಜನರ ನಡುವೆಯೇ ಬದುಕುತ್ತ ತಮ್ಮ ಗಾಯನದ ಮೂಲಕ ಜನರ ಬದುಕನ್ನು ಹಸನುಗೊಳಿಸುತ್ತಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಉಳ್ಳಾಲ ಮೋಹನಕುಮಾರ್

ಶಾಲಾ ದಿನಗಳಲ್ಲಿಯೇ ನೃತ್ಯ ಶಿಕ್ಷಣವನ್ನು ಆರಂಭಿಸಿ ನಂತರ ಭರತನಾಟ್ಯದಲ್ಲಿ ಉನ್ನತ ಶಿಕ್ಷಣವನ್ನೂ ಪಡೆದ ಉಲ್ಲಾಳ ಮೋಹನಕುಮಾರ್ ನೃತ್ಯಕ್ಕಾಗಿಯೇ ಕಟ್ಟಿದ ಸಂಸ್ಥೆಯೊಂದರ ಸಕ್ರಿಯ ಸದಸ್ಯರಾಗಿ ನೃತ್ಯ ಕಲಿಸುವ ಕಾಯಕದಲ್ಲಿ ತೊಡಗಿದರು.ಇವರ ಶಿಷ್ಯವೃಂದ ದೇಶವಿದೇಶಗಳಲ್ಲಿ ನೆಲೆಸಿದ್ದು ನೃತ್ಯ ಪ್ರಸಾರದಲ್ಲಿ ನಿರತರಾಗಿದ್ದಾರೆ.

ಅನೇಕ ಪೌರಾಣಿಕ ಹಾಗೂ ಧಾರ್ಮಿಕ ನೃತ್ಯ ರೂಪಕಗಳನ್ನು ನಿರ್ದೇಶಿಸಿರುವ ಮೋಹನಕುಮಾರ್ ಅವರು ತುಳು ಭಾಷೆಯಲ್ಲಿಯೂ ನೃತ್ಯ ರೂಪಕ ಸಂಯೋಜಿಸಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ. ರಾಜ್ಯಮಟ್ಟದ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಇದ್ದ ಮೋಹನಕುಮಾರ್ ಅವರು ಸಾಕ್ಷ್ಯಚಿತ್ರಗಳಿಗೆ ನಾಟ್ಯ ಸಂಯೋಜನೆ ಮಾಡಿದ್ದಾರೆ. ಇವರಿಗೆ ಪ್ರತಿಷ್ಟಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವೀರೇಶ ಕಿತ್ತೂರು

ಗದಗ ಜಿಲ್ಲೆಯ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಯಾಗಿ ಸಂಗೀತಾಭ್ಯಾಸ ಮಾಡಿದ ವೀರೇಶ ಕಿತ್ತೂರು ಕರ್ನಾಟಕ ಸರ್ಕಾರದ ವಿದ್ವತ್ ಹಾಗೂ ಗಾಯನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ಆಕಾಶವಾಣಿಯ ಕಲಾವಿದರಾಗಿರುವ ವೀರೇಶ ಅವರು ಶೀಶೈಲ, ಸೊಲ್ಲಾಪುರ ಸೇರಿದಂತೆ ನೂರಾರು ಸಂಗೀತ ಸಮ್ಮೇಳನಗಳಲ್ಲಿ ಕಚೇರಿಗಳನ್ನು ನೀಡಿದ್ದು, ಇವರ ನೂರಕ್ಕೂ ಹೆಚ್ಚು ಧ್ವನಿಸುರುಳಿಗಳು ಜನಪ್ರಿಯವಾಗಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ರಂಭಾಪುರಿ ಧಾರ್ಮಿಕ ಸಮ್ಮೇಳನದ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ರಾಜೇಂದ್ರಸಿಂಗ್ ಪವಾರ್

ಹಾರ್ಮೋನಿಯಂ ವಾದ್ಯವನ್ನು ರಾಷ್ಟ್ರಮಟ್ಟದಲ್ಲಿಯೂ ಬೆಳಗುವಂತೆ ಮಾಡಿದ ಕೆಲವೇ ವಿದ್ವಾಂಸರಲ್ಲಿ ಬೀದರ್ ಜಿಲ್ಲೆಯ ರಾಜೇಂದ್ರ ಸಿಂಗ್ ಪವಾರ್ ಅವರು ಒಬ್ಬರು.

ನಾಲ್ಕು ದಶಕಗಳಿಂದ ಹಾರ್ಮೋನಿಯಂ ವಾದಕರಾಗಿದ್ದು, ಸಂಗೀತ ಸೇವೆ ಮಾಡುತ್ತಿರುವ ಇವರು ಬೀದರಿನಲ್ಲಿ ಸಂಗೀತ ಕಲಾಮಂಡಳವನ್ನು ಸ್ಥಾಪಿಸಿ ಭಕ್ತಿಗೀತೆ ಹಾಗು ಭಜನಾ ಹಾಡುಗಳಿಗೆ ಹೊಸ ಬಗೆಯ ಸಂಗೀತ ಸಂಯೋಜನೆ ಮಾಡಿ ಕೇಳುಗರ ಮನಗೆದ್ದಿದ್ದಾರೆ.

ಪವಾರ್ ಅವರ ಹಾರ್ಮೋನಿಯಂ ಸೋಲೋ ಪ್ರಯೋಗ ರಾಷ್ಟ್ರ ಹಾಗೂ ರಾಜ್ಯಮಟ್ಟದ ಸಂಗೀತ ಸಮ್ಮೇಳನಗಳಲ್ಲಿ ಜನಪ್ರಿಯವಾಗಿದ್ದು, ಅದಕ್ಕಾಗಿ ಇವರಿಗೆ ಹಲವು ಗೌರವ ಸನ್ಮಾನಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ರಾಜಪ್ರಭು ಧೋತ್ರೆ

ಆರನೆಯ ವಯಸ್ಸಿಗೆ ಸಂಗೀತಾಭ್ಯಾಸ ಆರಂಭಿಸಿದ ರಾಜಪ್ರಭು ಧೋತ್ರೆ, ಪಂಡಿತ್ ಬಿ.ವಿ.ಕಡಲಾಸ್ಕರ ಬುವಾ ಇವರಿಂದ ಶಾಸ್ತ್ರೀಯಸಂಗೀತ ಶಿಕ್ಷಣ ಪಡೆದರು. ಕರ್ನಾಟಕದ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ಮೊದಲ ಬ್ಯಾಂಕ್ ಪಡೆದ ರಾಜಪ್ರಭು ಹಿಂದೂಸ್ಥಾನಿ ಸಂಗೀತದಲ್ಲಿ ಪರಿಣತರಾದರೂ ಸುಗಮ ಸಂಗೀತದಲ್ಲಿ ನೈಪುಣ್ಯತೆ ಪಡೆದವರು.

ವಚನ ಗಾಯನ, ಭಕ್ತಿಗೀತೆ, ರಂಗಗೀತೆಗಳನ್ನು ಹಾಡಬಲ್ಲ ಇವರು ಹಿಂದೂಸ್ಥಾನಿ ಹಾಗೂ ಸುಗಮ ಸಂಗೀತದಲ್ಲಿ ಆಕಾಶವಾಣಿಯ ಎ ಶೇಣಿ ಕಲಾವಿದರು.

ದೇಶದ ಹಲವು ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಕಚೇರಿ ನಡೆಸಿರುವ ರಾಜಪ್ರಭು ಅವರಿಗೆ ಮಹಾರಾಷ್ಟ್ರ ನೇಕಾರ ಸಮಾಜದ ಪುರಸ್ಕಾರ, ಬೆಳಗಾವಿಯ ಪ್ರಸಿದ್ಧ ಗಣೇಶೋತ್ಸವದ ಗೌರವಗಳು ಲಭಿಸಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿದುಷಿ ಲಲಿತಾ ಜೆ ರಾವ್

ಆಡ್ರಾ ಘರಾಣೆಯ ಪ್ರಮುಖ ಗಾಯಕಿ ಎಂದು ಹೆಸರಾಗಿರುವ ಲಲಿತ್ ಜೆ ರಾವ್ ಅವರು ಸಂಗೀತ ಕಲಿಕೆ ನಡೆಸಿದ್ದು ಪದ್ಮಭೂಷಣ ಪುರಸ್ಕತ ಪಂಡಿತ್ ಖಾದೀಮ್ ಹುಸೇನ್ ಖಾನ್, ದಿನಕರ ಕಾಯ್ಕಿಣಿ ಹಾಗೂ ಪಂ.ರಾಮರಾವ್ ನಾಯಕ್ ಅವರುಗಳ ಬಳಿ.

ಆರು ದಶಕಗಳಿಂದ ದೇಶದ ಪ್ರಮುಖ ಸಂಗೀತ ಉತ್ಸವಗಳಲ್ಲಿ ಪಾಲುಗೊಳ್ಳುತ್ತಿರುವ ಲಲಿತ್ .ಜೆ.ರಾವ್ ಅವರು ಗ್ವಾಲಿಯರ್‌ನ ತಾನಸೇನ್ ಸಮಾರೋಹ್, ದೆಹಲಿಯ ವಿಷ್ಣು ದಿಗಂಬರ ಜಯಂತಿ ಉತ್ಸವ, ಮಥುರಾದ ಗುಣಿದಾಸ ಸಂಗೀತ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತ ಸಮ್ಮೇಳನ ಸೇರಿದಂತೆ ದೇಶ ವಿದೇಶಗಳಲ್ಲಿ ೧೫೦೦ಕ್ಕೂ ಹೆಚ್ಚು ಕಚೇರಿಗಳನ್ನು ನೀಡಿದ ಹಿರಿಮೆ ಇವರದು.

ಇಂಜಿನಿಯರಿಂಗ್ ಪದವೀಧರರಾದ ಇವರು ಹಿಂದೂಸ್ಥಾನಿ ಸಂಗೀತಕ್ಕಾಗಿ ಪೂರ್ಣ ಸಮಯವನ್ನು ಮೀಸಲಿಟ್ಟಿದ್ದು ಆಕಾಶವಾಣಿ ಹಾಗೂ ದೂರದರ್ಶನದ ಎ ಶ್ರೇಣಿ ಕಲಾವಿದರಾಗಿದ್ದಾರೆ.

ಕೇರಳ ಸರ್ಕಾರದ ನಿಶಾಗಂಧಿ ಪ್ರಶಸ್ತಿ, ಗುಜರಾತ್ ಸರ್ಕಾರದ ತಾನಾ ರೀರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಗೌರವಗಳಿಗೆ ಪಾತ್ರರಾಗಿರುವ ಇವರು ಭಾರತೀಯ ಸಾಂಪ್ರದಾಯಿಕ ಹಿಂದೂಸ್ಥಾನಿ ಸಂಗೀತ ಭಂಡಾರದ ಕಾರ್ಯಕ್ರಮದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಹಾಸನ ರಘು

ಸೈನ್ಯದಲ್ಲಿದ್ದು ಸ್ವಯಂ ನಿವೃತ್ತಿಯ ನಂತರ ಚಲನಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಲು ಆರಂಭಿಸಿದ ಹಾಸನ ರಘು ಅವರು ಸ್ವತಃ ಆತ್ಮರಕ್ಷಣೆಯ ಕಲೆಯಲ್ಲಿ ಪರಿಣತರು.

ನೂರಾರು ಚಲನಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ನಿರ್ದೇಶನ ಮಾಡುವ ಮೂಲಕ ಜನಪ್ರಿಯರಾದ ಹಾಸನ ರಘು ಅವರು ಮದರಾಸಿನ ಸಾಹಸ ನಿರ್ದೇಶಕರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.

ರಾಮನಗರದಲ್ಲಿ ಆತ್ಮರಕ್ಷಣೆ ಕಲೆಯ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸಿರುವ ಇವರು ನೂರಾರು ಸಾಹಸ ಕಲಾವಿದರನ್ನು ತಯಾರು ಮಾಡಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಮುಖ್ಯಮಂತ್ರಿ ಚಂದ್ರು

ರಂಗಭೂಮಿಯಿಂದ ಚಲನಚಿತ್ರ ರಂಗಕ್ಕೆ ಕಾಲಿಟ್ಟ ಚಂದ್ರಶೇಖರ್ ಅವರು ಮುಖ್ಯಮಂತ್ರಿ ನಾಟಕದಿಂದ ಮುಖ್ಯಮಂತ್ರಿ ಚಂದ್ರು ಎಂದೇ ಹೆಸರಾದವರು.

ಮೂಕಾಭಿನಯದಿಂದ ಬಣ್ಣದ ಪ್ರಪಂಚಕ್ಕೆ ಬಂದ ಚಂದ್ರು ಅವರು ಐನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿಯೂ ಜನಪ್ರಿಯರಾಗಿರುವ ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ ನಾಟಕವನ್ನು ಸತತವಾಗಿ ಆರು ನೂರು ಪ್ರದರ್ಶನಗಳನ್ನು ಪೂರೈಸಿದ್ದಾರೆ.

ಶಾಸಕರಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಚಂದ್ರು ಅವರು ದೇಶವಿದೇಶಗಳಲ್ಲಿ ಕನ್ನಡದ ಕಂಪನ್ನು ಹರಿಸಿದವರು. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪೋಷಕ ನಟ ಗೌರವವೂ ಲಭಿಸಿದೆ.

Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕಾಂಚನಾ

ದಕ್ಷಿಣ ಭಾರತದ ಪ್ರಸಿದ್ಧ ಚಲನಚಿತ್ರ ನಾಯಕಿಯಾಗಿ ಹೆಸರಾಗಿರುವ ಕಾಂಚನಾ ಅವರು ಖ್ಯಾತ ನೃತ್ಯಗಾರ್ತಿ.

ಡಾ|| ರಾಜಕುಮಾರ್ ಅಭಿನಯದ ಬಭ್ರುವಾಹನ, ಶಂಕರಗುರು, ನಾನೊಬ್ಬ ಕಳ್ಳ ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ತೆಲುಗು ಚಿತ್ರರಂಗದ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್‌ ಅವರಿಗೂ ನಾಯಕಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಕಾಂಚನಾ ಅವರದು.

ಕಿರುತೆರೆಯಲ್ಲಿಯೂ ಕಾಂಚನಾ ಅವರು ಜನಪ್ರಿಯರು. ಕನ್ನಡದ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಉಪನಾಯಕಿ, ಪೋಷಕ ನಟಿ ಹಾಗೂ ಖಳನಾಯಕ ಪಾತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕೆ.ಜೆ. ಯೇಸುದಾಸ್

ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕರು. ತ್ಯಾಗರಾಜರು, ಪುರಂದರದಾಸರ ಕೃತಿಗಳನ್ನು ಮಾಧುರ್ಯಪೂರ್ಣವಾಗಿ ಹಾಡುವ ಸಿರಿಕಂಠದ ಇವರು ಭಾರತೀಯ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲೊಬ್ಬರು.

ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿರುವ ಇವರು ಹಿಂದಿ ಚಿತ್ರಗಳಲ್ಲಿಯೂ ಹಾಡಿದ್ದಾರೆ.

ದೇಶ ವಿದೇಶಗಳಲ್ಲಿ ವಿದ್ವತ್ತೂರ್ಣ ಸಂಗೀತ ಕಚೇರಿಗಳನ್ನು ನಿರಂತರವಾಗಿ ನಡೆಸುತ್ತಿರುವ ಕೆ.ಜೆ.ಯೇಸುದಾಸ್ ಅವರು ಅಯ್ಯಪ್ಪ ಸ್ವಾಮಿ, ಗುರುವಾಯೂರಪ್ಪ ಮತ್ತು ಕೊಲ್ಲೂರು ಮೂಕಾಂಬಿಕೆ ಭಕ್ತಿ ಗೀತ ಗಾಯನದಲ್ಲಿಯೂ ಜನಪ್ರಿಯರು.

ಕನ್ನಡ ಭಾಷೆಯಲ್ಲಿ ವಿಷ್ಣುವರ್ಧನ್, ಶಂಕರನಾಗ್ ಮೊದಲಾದ ಚಲನಚಿತ್ರ ಕಲಾವಿದರಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಯೇಸುದಾಸ್ ಅವರು ಜನಪ್ರಿಯ ಸಂಗೀತ ಸಂಯೋಜಕರು.

Categories
ರಂಗಭೂಮಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವೈ.ಎಂ. ಪುಟ್ಟಣ್ಣಯ್ಯ

ಕಲಾವಿದ ದಂಪತಿಗಳ ಪುತ್ರ ವೈ.ಎಂ.ಪುಟ್ಟಣ್ಣಯ್ಯ ಎಳೆಯ ವಯಸ್ಸಿನಿಂದಲೇ ರಂಗಭೂಮಿಯ ಜೊತೆ ಜೊತೆಯಲ್ಲಿಯೇ ಬೆಳೆದವರು. ಆರಂಭದಲ್ಲಿ ಬಾಲನಟರಾಗಿ ಬಣ್ಣ ಹಚ್ಚಿದ ಇವರು ನಂತರ ಸಂಗೀತದತ್ತ ವಾಲಿದರು.

ರಂಗಗೀತೆಗಳನ್ನು ಕಂಚಿನ ಕಂಠದಿಂದ ಹಾಡುತ್ತಿದ್ದ ಪುಟ್ಟಣ್ಣಯ್ಯ ಅವರು ಹಾರ್ಮೋನಿಯಂ ವಾದ್ಯ ವಾದನವನ್ನು ಕಲಿತರು. ಮುಂದಿನ ದಿನಗಳಲ್ಲಿ ರಂಗಸಂಗೀತ ಶಿಕ್ಷಕರೆಂದೇ ಹೆಸರಾಗಿ ಗುಬ್ಬಿ ಕಂಪನಿ, ಹೊನ್ನಪ್ಪ ಭಾಗವತರ್್ರ ಕಂಪನಿ, ಹಿರಣ್ಣಯ್ಯ ಮಿತ್ರಮಂಡಳಿ ಮೊದಲಾದ ವೃತ್ತಿ ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ ನುಡಿಸುತ್ತ ಖ್ಯಾತಿ ಪಡೆದರು.

ವೃತ್ತಿ ನಾಟಕ ಕಂಪನಿಗಳೇ ಅಲ್ಲದೆ ಅನೇಕ ಹವ್ಯಾಸಿ ನಾಟಕ ತಂಡಗಳಿಗೆ ಕೆಲಸ ಮಾಡಿರುವ ಪುಟ್ಟಣ್ಣಯ್ಯ ಅವರು ರಂಗಾಯಣ ಹಾಗೂ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿಯೂ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪದ್ದಣ್ಣ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವೃತ್ತಿ ರಂಗಭೂಮಿ

ಎ.ವರಲಕ್ಷ್ಮೀ

ಚಿಕ್ಕವಯಸ್ಸಿನಿಂದಲೇ ಕಲೆಯಲ್ಲಿ ಆಸಕ್ತಿ ತೋರಿದ ಎ.ವರಲಕ್ಷ್ಮಿ ಅವರು ಬಳ್ಳಾರಿ ಲಲಿತಮ್ಮನವರ ಲಲಿತಕಲಾ ನಾಟ್ಯಮಂಡಳಿಯಲ್ಲಿ ಬಾಲನಟಿಯಾಗಿ ಕಲಾಜೀವನ ಆರಂಭಿಸಿದರು.

ಅವರು ಮುಂದಿನ ದಿನಗಳಲ್ಲಿ ಗುಬ್ಬಿ ಚನ್ನಬಸವೇಶ್ವರ ಕಂಪನಿ, ಮಾಂಡ್ರಾ ಕವಿಯವರ ಕಂಪನಿ, ಏಣಗಿಬಾಳಪ್ಪನವರ ಕಂಪನಿ, ಮೊದಲಾದ ಕಂಪನಿಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ನೋಡುಗರ ಗಮನ ಸೆಳೆದರು.

ವೀರರಾಣಿ ಕಿತ್ತೂರು ಚನ್ನಮ್ಮ ನಾಟಕದಲ್ಲಿ ಇವರು ವೀರಮ್ಮನ ಪಾತ್ರಧಾರಿಯಾಗಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು. ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಪಾತ್ರ ನಿರ್ವಹಣೆಯಲ್ಲಿ ವರಲಕ್ಷ್ಮಿಯವರದು ಎತ್ತಿದ ಕೈ.

ಈವರೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶಿವಪ್ಪ ಭರಮಪ್ಪ ಅದರಗುಂಚಿ

ಕರ್ನಾಟಕ ಗ್ರಾಮೀಣ ರಂಗಭೂಮಿಯಲ್ಲಿ ನಾಲ್ಕು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡು ರಂಗಪ್ರಕಾರವನ್ನು ವಿಸ್ತರಿಸುತ್ತಿರುವ, ಕಲಾವಿದ, ರಂಗ ಸಂಘಟಕ ಶಿವಪ್ಪ ಭರಮಪ್ಪ ಅದರಗುಂಚಿ,

ಶ್ರೀ ಗುರು ಸೋಮಲಿಂಗೇಶ್ವರ ಸಾಂಸ್ಕೃತಿಕ ನಾಟ್ಯ ಸಂಘ, ಕಲಘಟಗಿ ಎಂಬ ಸಂಸ್ಥೆಯನ್ನು ಆರಂಭಿಸಿ, ಪೌರಾಣಿಕ ಐತಿಹಾಸಿಕ, ಭಕ್ತಿ ಪ್ರಧಾನ ಮತ್ತು ಸಾಮಾಜಿಕ ನಾಟಕಗಳನ್ನು ರಾಜ್ಯದುದ್ದಕ್ಕೂ ಅಭಿನಯಿಸುತ್ತಿರುವ ಶಿವಪ್ಪ ಅವರು ಅನೇಕ ನಾಟಕಗಳ ನಿರ್ದೇಶಕರು.

ರೇಣುಕಾ ಮಹಾತ್ಮ, ರಕ್ತರಾತ್ರಿ, ಜಗಜ್ಯೋತಿ ಬಸವೇಶ್ವರ, ಸಿಂಧೂರ ಲಕ್ಷ್ಮಣ ಮೊದಲಾದ ನೂರಾರು ನಾಟಕಗಳನ್ನು ಪ್ರಯೋಗಿಸಿರುವ ಇವರು ಗ್ರಾಮೀಣ ರಂಗಭೂಮಿಗೆ ಮಹತ್ವದ ಕಾಣಿಕೆ ನೀಡಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹವ್ಯಾಸಿ ರಂಗಭೂಮಿ

ಸಿ.ಕೆ. ಗುಂಡಣ್ಣ

ಆಧುನಿಕ ರಂಗಭೂಮಿ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಸಮುದಾಯ ತಂಡದ ಸಿ.ಕೆ.ಗುಂಡಣ್ಣ ನಟ, ನಿರ್ದೇಶಕ ಹಾಗೂ ರಂಗ ಸಂಘಟಕರಾಗಿ ಹೆಸರು ಮಾಡಿದರು.

ಬೀದಿ ನಾಟಕಗಳಿಂದ ತಮ್ಮ ಕಲಾಯಾತ್ರೆಯನ್ನು ಆರಂಭಿಸಿದ ಸಿ.ಕೆ.ಗುಂಡಣ್ಣ ಅನೇಕ ನಾಟಕಗಳಲ್ಲಿ ಪಾತ್ರಧಾರಿಯಾಗಿ, ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಪರಿಸರ ರಕ್ಷಣೆ, ಸಾಕ್ಷರತೆ, ವೈಜ್ಞಾನಿಕ ಮನೋಭಾವ ಇಂತಹ ಜನಮುಖಿ ವಿಚಾರಗಳ ಕುರಿತು ಸಮುದಾಯ ಸಂಘಟಿಸಿದ ನಾಟಕ, ಸಮಾವೇಶಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿರುವ ಗುಂಡಣ್ಣ ಈಗಲೂ ನಾಟಕ ಚಟುವಟಿಕೆಗಳಲ್ಲಿ ಸಕ್ರಿಯರು.

ಪ್ರಸನ್ನ ಹಾಗೂ ಸಿಜಿಕೆ ಅವರುಗಳ ರಂಗ ಒಡನಾಡಿಯಾಗಿ ತಾಯಿ, ಕುಬಿ ಮತ್ತು ಇಯಾಲ, ದಂಗೆಯ ಮುಂಚಿನ ದಿನಗಳು, ಮೊದಲಾದ ನಾಟಕಗಳಿಗೆ ಕಲಾನಿರ್ದೇಶಕರಾಗಿ ರಂಗವಿನ್ಯಾಸವನ್ನು ಮಾಡಿದ್ದಾರೆ ಕಿರುತೆರೆಗಾಗಿ ಅನೇಕ ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದಾರೆ. ಮತ್ತು ಕಿರುತೆರೆಯ ಮೂಲಕ ನಟರಾಗಿ ಕೂಡ ಅವರು ಈಗ ಜನಪ್ರಿಯರು.

ಗುಂಡಣ್ಣ ಅವರಿಗೆ ಪರಣ್ಣ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ರಂಗಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವೃತ್ತಿ ರಂಗಭೂಮಿ

ಗೂಡೂರು ಮಮತಾ

ವೃತ್ತಿ ಹಾಗೂ ಹವ್ಯಾಸ ರಂಗಭೂಮಿಯಲ್ಲಿ ಅಭಿನಯಿಸುತ್ತಿರುವ ಮಮತಾ ಗೂಡೂರು ತಮ್ಮ ಐದನೆಯ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ಉತ್ತರ ಕರ್ನಾಟಕದ ಬಹುತೇಕ ವೃತ್ತಿ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿರುವ ಇವರು ಬಹುತೇಕ ಎಲ್ಲ ನಾಟಕಗಳಲ್ಲಿಯೂ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

ಗರೀಬಿ ಹಟಾವೋ, ವಿಧಿಯ ಕೈವಾಡ, ಇಳಕಲ್ ಸೀರೆ, ಪೋಲೀಸನ ಮಗಳು, ರಕ್ತರಾತ್ರಿ ಮೊದಲಾದ ನಾಟಕಗಳಲ್ಲಿ ಮಮತಾ ಅವರು ವಹಿಸಿದ ಪಾತ್ರಗಳು ಪ್ರೇಕ್ಷಕರ ಮನಸೂರೆಗೊಂಡಿದೆ. ಸಾಮಾಜಿಕ, ಐತಿಹಾಸಿಕ, ಭಕ್ತಿ ಪ್ರಧಾನ ಹೀಗೆ ಎಲ್ಲ ಪ್ರಕಾರದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿರುವ ಅಭಿಜಾತ ಕಲಾವಿದೆ ಮಮತಾ ಅವರು ಹವ್ಯಾಸಿ ನಾಟಕಗಗಳಲ್ಲಿಯೂ ಅಭಿನಯಿಸಿದ್ದಾರೆ.

ಅನೇಕ ಚಲನಚಿತ್ರಗಳಲ್ಲಿಯೂ ಅಭಿನಯಿಸಿರುವ ಮಮತಾ ಅವರಿಗೆ ಎಸ್.ಪಿ.ವರದರಾಜ್ ಗೌರವ ಪ್ರಶಸ್ತಿ, ಅಭಿನಯ ಚತುರೆ ನಾಟ್ಯ ಸರಸ್ವತಿ ಮೊದಲಾದ ಬಿರುದುಗಳು ಲಭಿಸಿವೆ.

Categories
ನಾಟಕಕಾರರು ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಬೇಲೂರು ಕೃಷ್ಣಮೂರ್ತಿ

ಕನ್ನಡದಲ್ಲಿ ಎಲ್ಲ ಪ್ರಕಾರದ ನಾಟಕಗಳನ್ನು ರಚಿಸಿರುವ ಬೇಲೂರು ಕೃಷ್ಣಮೂರ್ತಿಯವರು ಈವರೆಗೂ ಬರೆದಿರುವ ನಾಟಕಗಳು ನೂರಕ್ಕೂ ಹೆಚ್ಚು.

ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಹಾಗೂ ಹವ್ಯಾಸಿ ನಾಟಕಗಳಲ್ಲಿ ಹೆಸರು ಮಾಡಿರುವ ಕೃಷ್ಣಮೂರ್ತಿಯವರು ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸತ್ಯಕತೆಗಳನ್ನು ಆಧರಿಸಿ ಅನೇಕ ಸಂಕಲನಗಳನ್ನು ಹೊರತಂದಿರುವ ಇವರು ರೇಡಿಯೋ ನಾಟಕ ರಚನೆಯಲ್ಲಿಯೂ ನಿಪುಣರು.

ದಿವಂಗತ ಮುಸುರಿ ಕೃಷ್ಣಮೂರ್ತಿಯವರ ನಾಟಕ ಕಂಪನಿಯಲ್ಲಿ ಸಹ ನಟರಾಗಿಯೂ ಪಾತ್ರ ವಹಿಸಿರುವ ಬೇಲೂರು ಕೃಷ್ಣಮೂರ್ತಿಯವರು ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವಕ್ಕೂ ಪಾತ್ರರು.

ಕೃಷ್ಣಮೂರ್ತಿ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಹಲವು ಸಂಘಟನೆಗಳು ಗೌರವ ಸನ್ಮಾನಗಳನ್ನು ಮಾಡಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಿ.ಎಸ್. ನಾಗಭೂಷಣ

ವಿಮರ್ಶಾ ಲೋಕದಲ್ಲಿ ಗಮನಾರ್ಹ ಕೆಲಸ ಮಾಡಿರುವ ಡಿ.ಎಸ್.ನಾಗಭೂಷಣ ಅವರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿಲಯ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.

‘ಲೋಹಿಯಾ ವ್ಯಕ್ತಿವಿಚಾರ’, ‘ಮಾಸ್ತಿ ಸಾಹಿತ್ಯ ಸಮಗ್ರ ಚಿಂತನೆ’, ‘ಕಾಡಿನ ಹುಡುಗ ಕೃಷ್ಣ’ ಎಂಬ ಸಂಪಾದಿತ ಕೃತಿಗಳನ್ನು ಜೇಪಿ-ಸೆರೆಮನೆ ದಿನಚರಿ ಅನುವಾದ ಕೃತಿಯನ್ನು ಹಾಗು ಜೇಪಿ ಒಂದು ಅಪೂರ್ಣ ಕ್ರಾಂತಿಯ ಕತೆ ಎಂಬ ವೈಚಾರಿಕ ಕೃತಿಯನ್ನು ಹಾಗೂ ಕರ್ನಾಟಕ ಏಳು-ಬೀಳುಗಳನ್ನು ಕುರಿತ ಹಲವು ಪುಸ್ತಕಗಳನ್ನು ಡಿ.ಎಸ್.ನಾಗಭೂಷಣ ರಚಿಸಿದ್ದಾರೆ.

ಏಕೀಕರಣ ಕಂಡ ಕರ್ನಾಟಕದ ಬಹುಮುಖ ಬೆಳವಣಿಗೆ ಕುರಿತಂತೆ ಹಲವು ಮಹತ್ವದ ಕೃತಿಗಳನ್ನು ಹೊರತಂದಿರುವ ಇವರು ಅಂಕಣಕಾರರಾಗಿಯೂ ಜನಪ್ರಿಯರು.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಡಾ|| ಹನುಮಾಕ್ಷಿ ಗೋಗಿ

ಶ್ರೀಮತಿ ಹನುಮಾಕ್ಷಿ ಚಂದಪ್ಪ ಗೋಗಿ ಅವರು ಶಾಸನಗಳನ್ನು ಕುರಿತಂತೆ ಆಳವಾದ ಅಧ್ಯಯ ನಡೆಸಿ ಅನೇಕ ಮಹತ್ವಪೂರ್ಣ ಕೃತಿಗಳನ್ನು ರಚಿಸಿದ್ದಾರೆ.

ಶಾಸನ ಕುರಿತಂತೆ ಅನೇಕ ಸಂಶೋಧನಾ ಕೃತಿಗಳನ್ನು ಸಂಪಾದಿಸಿರುವ ಹಾಗೂ ಪ್ರಬಂಧ ಸಂಕಲನಗಳನ್ನು ಹೊರ ತಂದಿರುವ ಹನುಮಾಕ್ಷಿ ಗೋಗಿ ಅವರು ರಾಜ್ಯ ಸಾಹಿತ್ಯ ಅಕಾಡೆಮಿ, ಮಲ್ಲಿಕಾ ದತ್ತಿನಿಧಿ ಮೊದಲಾದ ಪ್ರಶಸ್ತಿಗಳ ಪುರಸ್ಕೃತರು. ಸುರಪುರ ತಾಲೂಕು ಹಾಗೂ ಗುಲಬರ್ಗ ಜಿಲ್ಲೆಯ ಶಾಸನಗಳನ್ನು ಕುರಿತು ಇವರು ಸಂಶೋಧನೆ ನಡೆಸಿ ಕೃತಿಗಳನ್ನು ಹೊರತಂದಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಹಿತ್ಯಕ ವಿಚಾರಗೋಷ್ಟಿಗಳಲ್ಲಿ ಪಾಲುಗೊಂಡಿದ್ದು ಮಹಿಳೆಯರ ಸಾಹಿತ್ಯ ಸೃಜನೆ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಪ್ರಕಟಿಸಲು ಪ್ರಕಾಶನ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹಿರಿಯ ಕವಿಗಳು ಅನುವಾದಕರು

ಮಾಹೆರ್ ಮನ್ಸೂರ್

ಕನ್ನಡ, ಹಿಂದಿ ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವವಿರುವ ಮಾಹರ್ ಮನ್ಸೂರ್ ಅವರು ನಾಡಿನ ಪ್ರಖ್ಯಾತ ಉರ್ದು ಕವಿಗಳು ಮತ್ತು ಸಮರ್ಥ ಅನುವಾದಕರು. ಇವರ ಮೂಲ ಸಾಹಿತ್ಯ ಕೃತಿಗಳು ಮತ್ತು ಹಲವು ಕವಿಗಳ ಕಾವ್ಯ ಅನುವಾದಗಳು ಜನಮನ್ನಣೆ ಗಳಿಸಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನೆಯ ಪ್ರಶಸ್ತಿ, ಉರ್ದು ಅಕಾಡೆಮಿ, ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

ಮಾಹೆರ್ ಮನ್ಸೂರ್ ಅವರ ಸಾಹಿತ್ಯ ಸಾಧನೆಯ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯದ ಉರ್ದು ವಿಭಾಗ ಪಿ.ಎಚ್.ಡಿ. ಅಧ್ಯಯನ ಸಹ ನಡೆಸಿದೆ. ಕುವೆಂಪು ಭಾಷಾ ಭಾರತಿ ಸಂಸ್ಥೆ ಮೂಲಕ ನಡೆಯುತ್ತಿರುವ ಉರ್ದು ಮತ್ತು ಕನ್ನಡದ ಶ್ರೇಷ್ಟ ಕೃತಿಗಳ ಅಂತರ್‌ ಅನುವಾದ ಯೋಜನೆಯಲ್ಲಿ ಇವರು ಮುಖ್ಯ ಸಂಪಾದಕರಾಗಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ|| ವೈದೇಹಿ

‘ವೈದೇಹಿ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ‘ಜಾನಕಿ ಶ್ರೀನಿವಾಸಮೂರ್ತಿಯವರು ಕನ್ನಡದ ಪ್ರಮುಖ ಲೇಖಕಿ, ಸಣ್ಣಕಥೆ, ಕಾವ್ಯ, ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಚಿಂತನಶೀಲ ಬರಹಗಾರರು.

‘ಕ್ರೌಂಚ ಪಕ್ಷಿಗಳು’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ವೈದೇಹಿಯವರು ‘ಮರಗಿಡಬಳ್ಳಿ’ ಎಂಬ ಸಣ್ಣಕಥಾ ಸಂಕಲನ, ‘ಮಲ್ಲಿನಾಥನ ಧ್ಯಾನ’ ಎಂಬ ಪ್ರಬಂಧ, ‘ಬೆಳ್ಳಿ ಸಂಕೋಲೆಗಳು’ ಎಂಬ ಮಹಿಳಾ ವಿಮೋಚನಾ ಹೋರಾಟ ಕಥನ ಹಾಗೂ ಹಲವಾರು ಅನುವಾದ ಮತ್ತು ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.

ವೈದೇಹಿಯವರಿಗೆ ನಿರಂಜನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೌರವ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ಪುರಸ್ಕಾರ ಸೇರಿದಂತೆ ಹಲವಾರು ಗೌರವಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ|| ಬಸವರಾಜ ಸಬರದ

ಕಾವ್ಯ, ಸಂಶೋಧನೆ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಹಲವು ಪ್ರಾಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಬಸವರಾಜ ಸಬರದ ಅವರು ನಾಡಿನ ಪ್ರಮುಖ ಸಾಹಿತಿಗಳು, ಹೋರಾಟ, ಬೆಳದಿಂಗಲು ಬಿಸಿಲಾಯಿತು, ಕೆಂಡ ಸಂಪಿಗೆ ಇವರ ಮುಖ್ಯ ಕಾವ್ಯ ಸಂಕಲನಗಳು.

ಗುಲಬರ್ಗಾ, ರಾಯಚೂರು ಹಾಗು ಬೀದರ್ ಜಿಲ್ಲೆಯ ಅನುಭಾವಿ ಕವಿಗಳ ಬಗ್ಗೆ ಸಂಶೋಧನೆ ನಡೆಸಿರುವ ಸಬರದ ಅವರು ಬಸವೇಶ್ವರ ಹಾಗೂ ಪುರಂದರ ದಾಸರ ಬಗ್ಗೆ ಸಹ ಆಳವಾದ ಅಧ್ಯಯನ ಮಾಡಿದ್ದಾರೆ.

‘ಪ್ರತಿರೂಪ’, ‘ರೆಕ್ಕೆ ಮೂಡಿದಾಗ’, ‘ನಾಕುಬೀದಿ’ ನಾಟಕಗಳು ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ. ವಿಮರ್ಶಾ ಕ್ಷೇತ್ರದಲ್ಲಿಯೂ ಇವರ ಸೇವೆ ಗಣನೀಯ. ಕುವೆಂಪು ಸಾಹಿತ್ಯ ಪುರಸ್ಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹಾದ್ದೂರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.

Categories
ನ್ಯಾಯಾಂಗ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್

ಬೆಂಗಳೂರಿನಲ್ಲಿ ವಕೀಲಿವೃತ್ತಿ ನಡೆಸುತ್ತಿದ್ದು ನಂತರ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರಾಗಿ ನಿವೃತ್ತರಾದರು. ಪ್ರಸ್ತುತ ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾಗಿರುವ ನಾಗಮೋಹನದಾಸ್ ಸಂವಿಧಾನ ವಿಚಾರಗಳ ಬಗ್ಗೆ ಅಪಾರ ಜ್ಞಾನವುಳ್ಳವರು.

ನ್ಯಾಯಾಂಗ ಹಾಗೂ ಸಂವಿಧಾನದ ಬಗ್ಗೆ ಹಲವಾರು ಮೌಲ್ಯಯುತ ಕೃತಿಗಳನ್ನು ರಚಿಸಿರುವ ಶ್ರೀಯುತರು ಕರ್ನಾಟಕ ಸರ್ಕಾರದ ಹಲವು ಸಂವಿಧಾನಾತ್ಮಕ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರತಿಷ್ಠಿತ ಕರ್ನಾಟಕ ಸರ್ಕಾರದ ‘ಗಾಂಧಿ ಸೇವ’ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಪತ್ರಕರ್ತ ಟಿ.ಎಸ್.ರಾಮಚಂದ್ರರಾವ್ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನಾಗಮೋಹನದಾಸ್ ಅವರು ಕಾರ್ಯ ನಿರ್ವಹಿಸಿದ್ದಾರೆ.