Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಹನುಮಂತ ಬೊಮ್ಮಗೌಡ

ಹನುಮಂತ ಬೊಮ್ಮಗೌಡ ಅವರು ಪಾರ್ಶ್ವ ರೋಗವನ್ನು ನಿವಾರಿಸುವಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದವರು. ತಮ್ಮ ತಂದೆಯವರಿಂದ ಕಲಿತ ಈ ಔಷಧಿ ಕೊಡುವ ಕಾಯಕವನ್ನು ವ್ಯಾಪಕವಾಗಿ ಕೈಗೊಳ್ಳಲು ಒಳರೋಗಿಗಳಿಗಾಗಿ ಕೇಂದ್ರವನ್ನು ಸ್ಥಾಪಿಸಿ ಪಾರ್ಶ್ವರೋಗ ಪೀಡಿತರಿಗೆ ಅವರು ನೆರವಾಗುತ್ತಿದ್ದಾರೆ.

ಹಾಲಕ್ಕಿ ಒಕ್ಕಲಿಗರ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ಇವರ ಪುರೋಭಿವೃದ್ಧಿಗೆ ಶ್ರಮಿಸುತ್ತಿರುವ ಹನುಮಂತ ಬೊಮ್ಮಗೌಡ ವನ ಔಷಧಗಳಿಂದ ಪಾರ್ಶ್ವರೋಗ ಪೀಡಿತರಿಗೆ ಲೇಪನ ಚಿಕಿತ್ಸೆಯನ್ನು ಮಾಡುವಲ್ಲಿ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಸಿ. ವಿ. ಕೇಶವಮೂರ್ತಿ

‘ಭಾರತೀಯ ಸಂವಿಧಾನದ ತಿದ್ದುಪಡಿಯ ಸಾಮರ್ಥ್ಯ ಮತ್ತು ಶಕ್ತಿಗಳ ಮೂಲ ಸ್ವರೂಪದ ಸಿದ್ಧಾಂತ’ ಪುಸ್ತಕದ ಲೇಖಕರಾದ ಶ್ರೀ ಸಿ. ವಿ. ಕೇಶವಮೂರ್ತಿಯವರು ಹಿರಿಯ ವಕೀಲರು. ಮೈಸೂರಿನವರಾದ ಇವರು ಕಾನೂನು ಕಾಲೇಜಿನಲ್ಲಿ ಅಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರು ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು,ಕಾರ್ಯದರ್ಶಿಗಳು, ಮೇಲ್ವಿಚಾರಕರು, ಕಾನೂನು ಸಲಹೆಗಾರರು ಹಾಗೂ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವಸ್ಥಾನವೊಂದರ ಧರ್ಮದರ್ಶಿಯೂ ಆಗಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಡಾ. ಯು. ಬಿ. ರಾಜಲಕ್ಷ್ಮಿ

ಪತ್ರಿಕಾ ಕ್ಷೇತ್ರದಲ್ಲಿ ಸುಮಾರು ೩೮ ವರ್ಷಗಳ ಅನುಭವವಿರುವ ಡಾ. ಯು. ಬಿ. ರಾಜಲಕ್ಷ್ಮಿಯವರು ಪ್ರಸ್ತುತ ‘ತರಂಗ’ವಾರಪತ್ರಿಕೆಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕನ್ನಡ ಪತ್ರಿಕೋದ್ಯಮದಲ್ಲಿ ಡಿ. ಅಟ್ ಪಡೆದಿರುವ ಮೊದಲ ಪತ್ರಕರ್ತೆ.

ಮುಂಗಾರು, ಹೊಸದಿಗಂತ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿರುವ ಇವರು, ಹಲವು ಕೃತಿಗಳನ್ನು ಹೊರತಂದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯೆಯಾಗಿದ್ದು, ‘ತುಲಾ ಪ್ರಕಾಶನ’ವನ್ನು ನಿರ್ವಹಣೆ ಮಾಡುತ್ತ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಟ್ಟಂ ಅನಂತ ಪದ್ಮನಾಭ

ಮೂಲತ: ಮೈಸೂರಿನವರಾದ ಪಟ್ಟಂ ಅನಂತ ಪದ್ಮನಾಭ ಅವರು, ೧೯೭೦ ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಕನ್ನಡ ಪ್ರಮುಖ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ೩೫ ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ.

ಕ್ರೀಡಾ ವರದಿಗಳನ್ನು ಬರೆಯುವಲ್ಲಿ ಅನಂತಪದ್ಮನಾಭ ಅವರು ಸಿದ್ಧಹಸ್ತರು. ಗ್ರಾಮೀಣ ಕ್ರೀಡೆಗಳ ಬಗ್ಗೆ ಇವರಷ್ಟು ಬರೆದವರು ಮತ್ತೊಬ್ಬರಿಲ್ಲ. ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಡೆದ ಕ್ರೀಡಾಕೂಟಗಳ ವರದಿ ಮಾಡಿದ್ದಾರೆ. ಪ್ರಜಾವಾಣಿ ಮತ್ತು ಸುಧಾ ವಾರಪತ್ರಿಕೆಗಳಲ್ಲಿ ಕ್ರೀಡೆ ವಾಣಿಜ್ಯ ಮುಂತಾದ ವಿಷಯಗಳ ಬಗ್ಗೆ ಲೇಖನಗಳನ್ನು, ಸಂಪಾದಕೀಯವನ್ನು ಬರೆದಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ಅನೇಕ ಯುವ ಪತ್ರಕರ್ತರನ್ನು ಬೆಳೆಸಿದ್ದಾರೆ ಮತ್ತು ಮಾರ್ಗದರ್ಶನ ನೀಡಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬೈಕಂಪಾಡಿ ರಾಮಚಂದ್ರ

ಮಂಗಳೂರಿನ ಮೀನುಗಾರರ ನಾಯಕ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಚೇರ್ಮನ್ ಆಗಿರುವ ಪಣಂಬೂರಿನ ಶ್ರೀ ಬೈಕಂಪಾಡಿ ರಾಮಚಂದ್ರ ಮೀನುಗಾರರ ಹಿತಕ್ಕಾಗಿ ಹೋರಾಟ ಮಾಡುತ್ತಿರುವವರು. ೧೯೮೯ ರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿ ಶಾಸಕರಾದವರು. ೧೯೯೨ ರಲ್ಲಿ ವಿದೇಶಿ ಕಂಪನಿಗಳು ಸಾಗರದಲ್ಲಿ ಮಾಡುವ ಅಕ್ರಮ ಮೀನುಗಾರಿಕೆ ವಿರುದ್ಧ ೪೮ ದಿನಗಳ ಕಾಲ ಮತ್ಯ ಜಲ ಯಾತ್ರೆಯ ನಾಯಕತ್ವ ವಹಿಸಿ ನ್ಯಾಯ ಒದಗಿಸುವಲ್ಲಿ ಸಫಲರಾದವರು. ಸಮುದ್ರ ಮಾಲಿನ್ಯದ ವಿರುದ್ಧ ಹಲವಾರು ಬಾರಿ ಯಶಸ್ವಿ ಹೋರಾಟ ಮಾಡಿದ್ದಾರೆ.

ಇವರಿಗೆ ೨೦೨೧ ರಲ್ಲಿ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಲಭಿಸಿದೆ.

Categories
ಪರಿಸರ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಹಾದೇವ ವೇಳಿಪ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಬಳಿ ಇರುವ ಕಾರ್ಟೊ೪ ಕಾಡಿನ ಕುಣಬಿ ಜನಾಂಗದ ಶ್ರೀ ಮಹಾದೇವ ವೇಳಪ ಕುಣಬಿಗಳ ನಡೆದಾಡುವ ವಿಶ್ವಕೋಶ ಎಂದೇ ಹೆಸರಾದವರು. ಮಹಾದೇವ ವೇಳಪ ಅವರು ಸುಮಾರು ೩೮ ಜಾತಿಯ ಗೆಡ್ಡೆಗಳನ್ನು ಗುರುತಿಸಬಲ್ಲರು. ಕಾಡಿನ ಪ್ರಾಣಿ ಪಕ್ಷಿಗಳ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿದೆ.

೯೧ ವರ್ಷದ ಮಹಾದೇವ ವೇಳಿಪರವರ ಪರಿಸರ ಪ್ರೀತಿ ದೊಡ್ಡದು. ಕಲ್ಲಿಗೆ ಕಲ್ಲು ಕುಟ್ಟಿ, ಕಲ್ಲು ಮತ್ತು ಮಾಡಿ ಮರದ ತೊಗಟೆಯ ಸಹಾಯದಿಂದ ಬೆಂಕಿ ಹೊತ್ತಿಸಿ ಉಪಯೋಗಿಸುವುದರ ಮೂಲಕ ಬೆಂಕಿ ಕಡ್ಡಿ ಬಳಸದೇ ಪರಿಸರ ಕಾಪಾಡುತ್ತಿದ್ದಾರೆ. ಇವರು ಉತ್ತಮ ಮನೆ ಮದ್ದು ಕೊಡುವುದರಲ್ಲಿ ಕೂಡ ಪರಿಣಿತರು. ತುಳಸಿ ಪದ, ರಾಮಾಯಣ ಮಹಾಭಾರತಕ್ಕೆ ಸಂಬಂಧಿಸಿದ್ದ ಅನೇಕ ಹಾಡುಗಳನ್ನು ಹಾಗೂ ಕುಣಬಿಗಳ ಶ್ರಮ ಸಂಸ್ಕೃತಿಯನ್ನು ಬಿಂಬಿಸುವಂಥ ಹಾಡುಗಳನ್ನು ಇವರು ಹಾಡುತ್ತಾರೆ. ಒಂದಕ್ಷರ ಕಲಿಯದಿದ್ದರೂ ದಟ್ಟ ಕಾನನದ ಕಾರ್ಟೊಆ ಊರಿಗೆ ಕನ್ನಡ ಶಾಲೆ ತರುವಲ್ಲಿ ಇವರ ಶ್ರಮವೂ ಇದೆ.

Categories
ಕೃಷಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ. ಎಸ್. ಶಂಕರಪ್ಪ ಅಮ್ಮಿನಘಟ್ಟ

ಸಾವಯವ ಕೃಷಿ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಶ್ರೀ ಎಸ್. ಶಂಕರಪ್ಪ ಅಮ್ಮಿನಘಟ್ಟ ಅವರದು ವಿಶಿಷ್ಟ ಸಾಧನೆ. ಸಾವಯವ ಕೃಷಿಯನ್ನು ಪ್ರೇರೇಪಿಸಲು ಶ್ರಮಿಸುತ್ತಿರುವ ಇವರು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಾವಯವ ಕೃಷಿ ಪ್ರೇರಕರಾಗಿ ದುಡಿಯುತ್ತಿದ್ದಾರೆ.

ತಮ್ಮ ಎಂಟು ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ಅಡಿಕೆ, ಹಲಸು, ಮಾವು, ಮೆಣಸು, ಸಪೋಟ ಹಾಗೂ ನಾನಾ ತರದ ಗಿಡಗಳನ್ನು ಬೆಳೆಸಿದ್ದಾರೆ. ಇದಲ್ಲದೇ ಮಳೆ ನೀರು ಸಂಗ್ರಹಣೆಯಲ್ಲಿ ಕೂಡ ಇವರ ಕಾಳಜಿ ಅಪಾರ, ನಿಸರ್ಗ ಸಾವಯವ ಕೃಷಿ ಪರಿವಾರದಲ್ಲಿ ನಿರ್ದೇಶಕರಾಗಿ ಹಾಗೂ ತುಮಕೂರು ಜಿಲ್ಲಾ ಸಂಚಾಲಕರಾಗಿ ಸಕ್ರಿಯವಾಗಿದ್ದಾರೆ. ಸುಭಿಕ್ಷ ಆರ್ಗಾನಿಕ್ ಫಾರ್ಮಸ್್ರ ಮಲ್ಟಿ ಸ್ಟೇಟ್ಸ್ ಕೋ ಆಪರೇಟಿವ್ ಸೊಸೈಟಿ ಅಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುರುಲಿಂಗಪ್ಪ ಮೇಲ್ಗೊಡ್ಡಿ

ಸಾವಯವ ಕೃಷಿಯನ್ನು ಕಳೆದ ೨೧ ವರ್ಷಗಳಿಂದ ಮಾಡುತ್ತಾ ಬಂದಿರುವ ಶ್ರೀ ಗುರುಲಿಂಗಪ್ಪ ಮೇಲೊಡ್ಡಿ, ತೊಗರಿ ಬೆಳೆಯಲ್ಲಿ ವಿನೂತನ ಪದ್ಧತಿಯಾದ ನಾಟಪದ್ಧತಿ ಅಳವಡಿಸಿಕೊಂಡು ದಾಖಲೆ ಇಳುವರಿ ಪಡೆದಿದ್ದಾರೆ. ಸಾವಯವ ಬೆಳೆಯ ಬೆಲ್ಲ, ತರಕಾರಿ, ಹಣ್ಣು ಇತ್ಯಾದಿಗಳನ್ನು ಬೆಳೆದು ಸಂಸ್ಕರಿಸಿ ಬಳಕೆದಾರರಿಗೆ ಪೂರೈಸುತ್ತಿದ್ದಾರೆ.

ತಮ್ಮಂತೆಯೇ ಸಾವಯವ ಕೃಷಿ ಮಾಡಿ ಯಶ ಕಾಣಲಿ ಎನ್ನುವ ಸಹಕಾರ ಮನೋಭಾವದಲ್ಲಿ ಇವರು ತಮ್ಮ ಜ್ಞಾನ ಹಾಗೂ ಅನುಭವಗಳನ್ನು ಸಂಪನ್ಮೂಲ ವ್ಯಕ್ತಿಯಾಗಿ ಸಮಾಜದ ಇತರ ರೈತರಿಗೆ ತಿಳಿಸಿಕೊಡುತ್ತಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಕೃಷಿ ಇಲಾಖೆಯು ಸಾವಯವ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಹಲವು ಪ್ರಶಸ್ತಿಗಳು, ಪ್ರಯೋಗಶೀಲ ಕಿಸಾನ್ ಪ್ರಶಸ್ತಿಯನ್ನು ಗುಜರಾತ್ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದಲೂ ಪಡೆದಿದ್ದಾರೆ. ಹಲವು ಕೃಷಿ ಮತ್ತು ವಸ್ತುಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಡಾ. ಸಿ. ನಾಗರಾಜ್

ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನವರಾದ ಡಾ.ಸಿ.ನಾಗರಾಜ್ ಅವರ ನೆಚ್ಚಿನ ಕ್ಷೇತ್ರ ಕೃಷಿಯಾಗಿದೆ. ಸುಮಾರು ೩೫ ವರ್ಷಗಳ ಸುದೀರ್ಘ ಪರಿಶ್ರಮದಿಂದ ರೈತರಿಗೆ ಅನುಕೂಲವಾಗುವಂಥ ಬಹುಪಯೋಗಿ ಯಂತ್ರವನ್ನು ತಯಾರಿಸಿಕೊಟ್ಟಿದ್ದು ಈ ಯಂತ್ರ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.

ಮಾರುತಿ ಕೃಷಿ ಉದ್ಯೋಗ್ ಸಂಸ್ಥೆಯನ್ನು ಸ್ಥಾಪಿಸಿ, ಕೃಷಿ ಯಂತ್ರಗಳನ್ನು ತಯಾರಿಸಿದ್ದು, ರೈತರ ಸಮಯ ಮತ್ತು ಖರ್ಚು ಕಡಿಮೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಸಾವಯವ ಕೃಷಿಯ ಅಗತ್ಯತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಸಂಶೋಧನೆ ಮಾಡಿದ್ದಾರೆ. ಇವರ ಸಾಧನೆಗಾಗಿ ರೋಟರಿ ಸಂಸ್ಥೆಯಿಂದ ಎಕ್ಸಲೆನ್ಸ್ ಅವಾರ್ಡ್, ಉಜ್ವಲ ಉದ್ಯಮಿ ಪ್ರಶಸ್ತಿ, ಮಣ್ಣಿನ ಮಗ ಪ್ರಶಸ್ತಿ, ಸಾಲು ಮರದ ತಿಮ್ಮಕ್ಕ ಗೌರವ ಸನ್ಮಾನ, ಎ.ಪಿ.ಜೆ. ಅಬ್ದುಲ್ ಕಲಾಂ ಇನ್ನೋವೇಷನ್ ಅವಾರ್ಡ್‌ಗಳು ಸಂದಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಪ್ರೊ. ಜಿ. ಯು. ಕುಲಕರ್ಣಿ

ಬೆಂಗಳೂರಿನ ಪ್ರೊ. ಜಿ. ಯು. ಕುಲಕರ್ಣಿ ಹಲವಾರು ಸಂಶೋಧನೆ ಹಾಗೂ ಅವಿಷ್ಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೂ ಸಂಶೋಧನೆಗೆ ಸಂಬಂಧಿಸಿದ ಉಪಯುಕ್ತ ಪ್ರಬಂಧಗಳನ್ನು ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.

ಪ್ರಸ್ತುತ ಜವಾಹರ್ ಲಾಲ್ ನೆಹರು ಮುಂದುವರೆದ ವೈಜ್ಞಾನಿಕ ಸಂಶೋಧನಾ ಕೇಂದ್ರ ಜಕ್ಕೂರಿನಲ್ಲಿ ಅಧ್ಯಕ್ಷರಾಗಿದ್ದಾರೆ. ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಶೋಧನೆ

ಡಾ. ಎಚ್. ಎಸ್. ಸಾವಿತ್ರಿ

ಮೂಲತ: ಬೆಂಗಳೂರಿನವರಾದ ಡಾ. ಸಾವಿತ್ರಿ ಅವರು ಸಸ್ಯಗಳ ವೈರಸ್ ಗಳನ್ನು ಕುರಿತು ಸಂಶೋಧನೆ ನಡೆಸಿದವರು. ಇವರು ಪ್ರಯೋಗ ಶಾಲೆಯಲ್ಲಿ ಕಂಡು ಹಿಡಿದ ಮೊದಲ ವೈರಸ್ ‘ಜಿನೋಮ್’ ಇವರದ್ದೆಂದರೆ ಉತ್ತೇಕ್ಷೆಯಲ್ಲ. ಜೀವರಸಾಯನ ಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ೧೯೭೭ ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಐ.ಐ.ಎಸ್ಸಿಯಲ್ಲಿ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಿರುವ ಸಾವಿತ್ರಿಯವರು ಮನುಷ್ಯರ ವಂಶವಾಹಿನಿಯನ್ನೂ ಕುರಿತು ಸಂಶೋಧನೆ ಮಾಡಿದ್ದಾರೆ. ಸುಮಾರು ೧೦೦ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ‘ಜೀವರಸಾಯನ ಶಾಸ್ತ್ರ’ವಿಭಾಗದ ‘ಚೇರ್ ಪರ್ಸನ್’ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಗಂಗಾವತಿ ಪ್ರಾಣೇಶ್

ಬೀಚಿ ಅವರ ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್ ಅವರು ತಮ್ಮ ಹಾಸ್ಯದ ಮಾತುಗಳಿಂದ ಜನರನ್ನು ರಂಜಿಸುತ್ತಾ ಸ್ಟಾ ಂಡಪ್ ಕಾಮಿಡಿ ಅನ್ನುವ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದವರು. ಹಾಸ್ಯದ ಜೊತೆಯಲ್ಲಿಯೇ ಸಮಾಜಕ್ಕೆ ಸಂದೇಶವನ್ನೂ ನೀಡುವ ಕಾಯಕವನ್ನು ಮಾಡುತ್ತ ನಗೆಯ ಚಾಟಿಯಿಂದಲೇ ಜನತೆಯನ್ನು ಎಚ್ಚರಿಸುತ್ತಿದ್ದಾರೆ.

ಪ್ರಾಣೇಶ್ ಅವರ ವೈಶಿಷ್ಟ್ಯತೆಯೆಂದರೆ ಉತ್ತರ ಕರ್ನಾಟಕ ಭಾಷಾ ಶೈಲಿ. ಆ ಸೊಗಡಿನಲ್ಲಿಯೇ ರಂಜಿಸುವ ಇವರ ಮಾತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟದೆ. ಅಮೇರಿಕಾದ ಅಕ್ಕ ಸಂಸ್ಥೆಯು ಅಲ್ಲಿನ ೧೯ ಪ್ರಮುಖ ನಗರಗಳಲ್ಲಿ ಇವರ ಕಾರ್ಯಕ್ರಮವನ್ನು ಏರ್ಪಡಿಸಿ ಸಂಭ್ರಮಿಸಿದೆ. ಹಾಸ್ಯದ ಕುರಿತ ಸಾಕಷ್ಟು ಪುಸ್ತಕಗಳು, ಸಿ.ಡಿಗಳನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣೇಶ್ ಅವರ ಹಾಸ್ಯಕ್ಕೆ ಅಸಂಖ್ಯಾತ ವೀಕ್ಷಕರಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಕ್ಯಾಪ್ಟನ್ ರಾಜಾರಾವ್

ಖ್ಯಾತ ನೀರಾವರಿ ತಜ್ಞರಾದ ಕ್ಯಾಪ್ಟನ್ ರಾಜರಾವ್ ಅವರು, ಕಾವೇರಿ ನದಿ ನೀರು ಹಂಚಿಕೆ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಸ್ತಿತ್ವವನ್ನು ಒತ್ತಾಯಿಸಿದವರು. ಕರ್ನಾಟಕ ಸೀನಿಯರ್ ಇಂಜಿನಿಯರ್ಸ್ ಫೋರಂನ ಚೇರ್ಮನ್ ಆಗಿರುವ ರಾಜಾರಾವ್ ಅವರು, ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳು ಹಾಳಾಗಿ ಪರಿಸರಕ್ಕೆ ಧಕ್ಕೆಯಾಗುವ ಮುನ್ನ ಡಿಟರ್ಜೆಂಟ್ ಗಳಲ್ಲಿ ಪಾಸ್ಟೇಟ್ ಬಳಕೆಯನ್ನು ನಿಲ್ಲಿಸಿ, ಕೆರೆಗಳನ್ನು ಉಳಿಸಿ ಎಂದು ಎಚ್ಚರಿಕೆ ನೀಡುತ್ತ ಈಗಲೂ ಪರಿಸರ ಕಾಳಜಿಯನ್ನು ಹೊಂದಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಬಿ. ಅಂಬಣ್ಣ

ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿರುವ ಡಾ. ಅಂಬಣ್ಣ, ತಮ್ಮ ಹುಟ್ಟೂರನ್ನು ಮರೆಯದೇ ಮರ೪ ೧೯೬೧ ರಲ್ಲಿ ಮರಿಯಮ್ಮನಹಳ್ಳಿಗೆ ಬರುವ ಮೂಲಕ ವೈದ್ಯರು ಹಳ್ಳಿಗಳಿಗೆ ಬರುವುದಿಲ್ಲ ಎಂಬ ಅಪವಾದವನ್ನು ಹುಸಿ ಮಾಡಿದವರು.

ಕಳೆದ ಐದು ದಶಕಗಳಿಂದ ನಿರಂತರವಾಗಿ ಮರಿಯಮ್ಮನ ಹಳ್ಳಿಯ ಸುತ್ತಮುತ್ತಲಿನ ೩೦ಕ್ಕೂ ಹೆಚ್ಚು ಗ್ರಾಮಗಳಿಗೆ ತೆರಳಿ ಔಷಧೋಪಚಾರ ಮಾಡುವ ಡಾ.ಅಂಬಣ್ಣ ಅವರು ಜನರ ಡಾಕ್ಟರ್ ಎಂದೇ ಜನಪ್ರಿಯ. ಪ್ರತಿದಿನ ೧೫೦ ಮಂದಿಗೆ ಚಿಕಿತ್ಸೆ ನೀಡುವ ಇವರು, ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಗುಣಪಡಿಸಿದ್ದಾರೆ.

ವೈದ್ಯಕೀಯ ಸೇವೆಯ ಜೊತೆಗೆ ತರಳಬಾಳು ಹೈಸ್ಕೂಲ್, ಚಿಲಕನ ಹಟ್ಟಿಯ ಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ಸೇವಾಮನೋಭಾವವನ್ನು ಗುರುತಿಸಿ,ಲೋಕಕಲ್ಯಾಣ ಪ್ರಶಸ್ತಿ ಪಡೆದುಕೊಂಡಿದ್ದು ಈಗಲೂ ತಮ್ಮ ಕಾಯಕ ಮುಂದುವರೆಸಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಶ್ರೀಧರ ಚಕ್ರವರ್ತಿ

ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರದ ದೀವಿಗೆ ಹಿಡಿಯಲು ಸತತ ೩೭ ವರ್ಷಗಳ ಕಾಲ ಗಣಿತ ಶಿಕ್ಷಕನಾಗಿ, ಹುಬ್ಬಳ್ಳಿಯ ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಶ್ರಮಿಸಿದ್ದಾರೆ. ಅವರ ಈ ಅವಿರತ ಪ್ರಯತ್ನದ ಫಲವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ನಕ್ಷತ್ರದಂತೆ ವಿವಿಧ ಕ್ಷೇತ್ರಗಳಲ್ಲಿ ಹಾಗೂ ವಿವಿಧ ದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ತಮ್ಮ ಸೇವೆಯಲ್ಲಿ ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉನ್ನತ ಅಭ್ಯಾಸದ ಖರ್ಚನ್ನು ತಮ್ಮ ಗಳಿಕೆಯಲ್ಲೇ ನೀಡಿದ್ದಾರೆ. ನಿವೃತ್ತಿಯ ನಂತರವೂ ಸಹ ಅವರು ಮಹಾಗುರು ಎಜುಕೇಶನ್ ಟ್ರಸ್ಟ್ ನ ಮಾರ್ಗದರ್ಶಕರಾಗಿ ತಮ್ಮ ನಿವೃತ್ತಿ ಹಣದ ಶೇ ೯೦ ರಷ್ಟನ್ನು ಟ್ರಸ್ಟ್ ಮೂಲಕ ಬಡ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಇವರಿಗೆ ‘ಶಿಕ್ಷಣ ಸಿರಿ’ ಹಾಗೂ ೨೦೦೫ ರ ಆದರ್ಶ ಶಿಕ್ಷಕ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳು ಲಭಿಸಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಸ್ವಾಮಿ ಲಿಂಗಷ್ಟ

ಮೂಲತ: ಹರಿಹರ ತಾಲ್ಲೂಕಿನವರಾದ ಶ್ರೀ ಸ್ವಾಮಿ ಅಂಗಪ್ಪ, ಶಿಕ್ಷಣ ಹಾಗೂ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸದೇ ಮನೆಯಲ್ಲೇ ಇರಿಸಿಕೊಂಡಿದ್ದವರ ಮನ ಒಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸವನ್ನು ಮಾಡುತ್ತ ಅಕ್ಷರಕ್ರಾಂತಿಗೆ ಕಾರಣರಾದವರು. ತಮ್ಮ ನಿವೃತ್ತಿಯ ನಂತರ ಆಧ್ಯಾತ್ಯ ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದು, ಹಲವು ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಬಡವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪಠ್ಯಪುಸ್ತಕಗಳನ್ನು ಕೊಡಿಸಿ, ಶಾಲಾ ಶುಲ್ಕವನ್ನು ಕೂಡ ತಾವೇ ಕಟ್ಟುವುದರ ಮೂಲಕ ತಮ್ಮ ಧೀಮಂತಿಕೆ ಮೆರೆಯುತ್ತಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದೇವರಾಜ್

ಕನ್ನಡ ಚಲನಚಿತ್ರರಂಗದಲ್ಲಿ ಡೈನಾಮಿಕ್‌ ಹೀರೋ ಎಂದೇ ಖ್ಯಾತರಾದ ಹಿರಿಯ ನಟ ದೇವರಾಜ್, ೧೯೮೬ ರಲ್ಲಿ ಚಿತ್ರರಂಗ ಪ್ರವೇಶಿಸಿದ್ದು ೨೭ ಮಾವಳ್ಳಿ ಸರ್ಕಲ್‌ ಎನ್ನುವ ಚಿತ್ರದ ಮೂಲಕ.

ಮೂಲತ: ನಾಟಕರಂಗದಿಂದ ಬಂದವರಾದ ಇವರು, ಸ್ಪಂದನ ತಂಡ ಹಾಗೂ ಸಂಕೇತ್ ತಂಡದಲ್ಲಿ ತೊಡಗಿಸಿಕೊಂಡಿದ್ದರು. ಸರಿಸುಮಾರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, ಆಗಂತುಕ ಸಿನಿಮಾದಲ್ಲಿನ ಪಾತ್ರಕ್ಕಾಗಿ ರಾಜ್ಯಪ್ರಶಸ್ತಿ ಪಡೆದುಕೊಂಡರು. ಹಾಗೂ ಮತ್ತೊಂದು ಚಿತ್ರ ವೀರಪ್ಪನ್ ನಲ್ಲಿ ನಿರ್ವಹಿಸಿದ ಪಾತ್ರಕ್ಕೆ ಎರಡನೇ ಬಾರಿ ರಾಜ್ಯ ಪ್ರಶಸ್ತಿ ಪಡೆದುಕೊಂಡರು.

ಲಾಕಪ್ ಡೆತ್,ಹುಲಿಯ, ಗೋಲಿಬಾರ್, ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಪ್ರಚಂಡರಾವಣ ಇವರ ಪ್ರಮುಖ ಚಿತ್ರಗಳು

Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎ. ನಾಗರಾಜ್

ಬೆಂಗಳೂರಿನ ಎ. ನಾಗರಾಜ್ ಅವರು ಕಡ್ಡಿ ತರಬೇತುದಾರರು. ಸುಮಾರು ಮೂರು ದಶಕಗಳ ಕಾಲದ ಕ್ರೀಡಾ ಜೀವನವನ್ನು ನಡೆಸಿರುವ ಇವರು ೨೨ ವರ್ಷಗಳ ಕಾಲ ಐ.ಟಿ.ಐ ಸಂಸ್ಥೆಯ ತಂಡವನ್ನು ತರಬೇತುಗೊಳಸಿ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಸಿದ್ಧಗೊಳಿಸಿದ್ದಾರೆ. ಇವರಿಂದ ತಯಾರಾದ ಕಬ್ಬಡ್ಡಿ ಆಟಗಾರರು ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ‘ಅರ್ಜುನ ಪ್ರಶಸ್ತಿ’ ಹಾಗೂ ‘ಏಕಲವ್ಯ ಪ್ರಶಸ್ತಿ’ಗಳನ್ನು ಪಡೆದುಕೊಂಡಿದ್ದಾರೆ. ಒಬ್ಬ ಕ್ರೀಡಾಗುರುವಾಗಿ ಸಾರ್ಥಕತೆಯನ್ನು ಕಂಡಿರುವ ಶ್ರೀ ನಾಗರಾಜು ಮಲೇಷ್ಯಾದಲ್ಲಿ ನಡೆದ ವಿಶ್ವಕಪ್ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ. ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಇವರದ್ದಾಗಿದೆ.

Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರೋಹಿತ್ ಕುಮಾರ್ ಕಟೀಲ್

ಕಾರ್ಕಳ ತಾಲ್ಲೂಕಿನ ಕ್ರೀಡಾಪ್ರತಿಭೆ ಶ್ರಿ ರೋಹಿತ್ ಕುಮಾರ್ ಕಟೀಲ್‌ ಅಸಾಧಾರಣ ಪ್ರತಿಭೆ, ಹೈ ಜಂಪ್ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಇವರು ವಿಶ್ವ ಕಿರಿಯರ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲಿಗ.

ಮಾಜಿ ಅಂತಾರಾಷ್ಟ್ರೀಯ ಆಟಗಾರರಾದ ಇವರು, ಬ್ರೆಜಿಲ್ ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿನ ಭಾರತೀಯ ತಂಡದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದವರು. ಇದೀಗ ಕಾರ್ಕಳದ ವಿಮಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗೋಪಿನಾಥ್ ಕೆ

ಪ್ಯಾರಾ ಓಲಂಪಿಕ್ ಕ್ರೀಡೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧನೆ ಮಾಡಿರುವ ಬೆಂಗಳೂರಿನ ಕೆ.ಗೋಪಿನಾಥ್ ವಿಕಲಚೇತನ ಕ್ರೀಡಾಪಟು.

೨೦೦೩ ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಶ್ರೀ ಕೆ.ಗೋಪಿನಾಥ್ ಪ್ಯಾರಾ ಬ್ಯಾಂಡ್ಮಿಂಟನ್, ಡಿಸ್ಕ್ ಪ್ರೋ ಹಾಗೂ ಶಾಟ್ ಪುಟ್ ಆಡಿ ಚಿನ್ನದ ಪದಕ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಹಾಂಕಾಂಗ್, ಚೀನಾ, ಮಲೇಶಿಯಾ, ಇಸ್ರೇಲ್, ಜರ್ಮನಿ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾಗಳಲ್ಲಿ ನಡೆದ ಪ್ಯಾರಾ ಓಲಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಕ್ರೀಡಾಸಾಧನೆಯನ್ನು ಪರಿಗಣಿಸಿ ೨೦೧೧ ರಲ್ಲಿ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ರೀಡಾ ಸಂಸ್ಥೆಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕರ್ನಾಟಕ ರಾಜ್ಯ ವಿಕಲ ಚೇತನ ಒಕ್ಕೂಟದ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.