Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಶ್ರೀಧರ ಚಕ್ರವರ್ತಿ

ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರದ ದೀವಿಗೆ ಹಿಡಿಯಲು ಸತತ ೩೭ ವರ್ಷಗಳ ಕಾಲ ಗಣಿತ ಶಿಕ್ಷಕನಾಗಿ, ಹುಬ್ಬಳ್ಳಿಯ ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಶ್ರಮಿಸಿದ್ದಾರೆ. ಅವರ ಈ ಅವಿರತ ಪ್ರಯತ್ನದ ಫಲವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ನಕ್ಷತ್ರದಂತೆ ವಿವಿಧ ಕ್ಷೇತ್ರಗಳಲ್ಲಿ ಹಾಗೂ ವಿವಿಧ ದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ತಮ್ಮ ಸೇವೆಯಲ್ಲಿ ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉನ್ನತ ಅಭ್ಯಾಸದ ಖರ್ಚನ್ನು ತಮ್ಮ ಗಳಿಕೆಯಲ್ಲೇ ನೀಡಿದ್ದಾರೆ. ನಿವೃತ್ತಿಯ ನಂತರವೂ ಸಹ ಅವರು ಮಹಾಗುರು ಎಜುಕೇಶನ್ ಟ್ರಸ್ಟ್ ನ ಮಾರ್ಗದರ್ಶಕರಾಗಿ ತಮ್ಮ ನಿವೃತ್ತಿ ಹಣದ ಶೇ ೯೦ ರಷ್ಟನ್ನು ಟ್ರಸ್ಟ್ ಮೂಲಕ ಬಡ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಇವರಿಗೆ ‘ಶಿಕ್ಷಣ ಸಿರಿ’ ಹಾಗೂ ೨೦೦೫ ರ ಆದರ್ಶ ಶಿಕ್ಷಕ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳು ಲಭಿಸಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಸ್ವಾಮಿ ಲಿಂಗಷ್ಟ

ಮೂಲತ: ಹರಿಹರ ತಾಲ್ಲೂಕಿನವರಾದ ಶ್ರೀ ಸ್ವಾಮಿ ಅಂಗಪ್ಪ, ಶಿಕ್ಷಣ ಹಾಗೂ ಜನಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸದೇ ಮನೆಯಲ್ಲೇ ಇರಿಸಿಕೊಂಡಿದ್ದವರ ಮನ ಒಲಿಸಿ ಅವರ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸವನ್ನು ಮಾಡುತ್ತ ಅಕ್ಷರಕ್ರಾಂತಿಗೆ ಕಾರಣರಾದವರು. ತಮ್ಮ ನಿವೃತ್ತಿಯ ನಂತರ ಆಧ್ಯಾತ್ಯ ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದು, ಹಲವು ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಬಡವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪಠ್ಯಪುಸ್ತಕಗಳನ್ನು ಕೊಡಿಸಿ, ಶಾಲಾ ಶುಲ್ಕವನ್ನು ಕೂಡ ತಾವೇ ಕಟ್ಟುವುದರ ಮೂಲಕ ತಮ್ಮ ಧೀಮಂತಿಕೆ ಮೆರೆಯುತ್ತಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ|| ಪಿ.ಶಾಮರಾಜು

ಬೆಂಗಳೂರಿನ ಮೂಲ ಸೌಕರ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿರುವ ಡಾ|| ಶ್ಯಾಮರಾಜು ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗಣನೀಯ.

ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ವಿಭಿನ್ನ ಬಗೆಯ ಕಾರ್ಯಸ್ಥಳಗಳನ್ನು ನಿರ್ಮಿಸಿಕೊಟ್ಟಿರುವ ಶ್ಯಾಮರಾಜು ಅವರು ತಮ್ಮ ರೇವಾ ವಿಶ್ವವಿದ್ಯಾನಿಲಯದ ಮೂಲಕ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಿದ್ದಾರೆ.

ಬೆಂಗಳೂರಿನ ಟಿಟಿಡಿ ಸಂಸ್ಥೆಯ ದೇವಾಲಯದ ಧರ್ಮದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ಯಾಮರಾಜು ಅವರು ಹಲವು ದೇವಾಲಯಗಳ ಅಭಿವೃದ್ಧಿಗಾಗಿ ಶ್ರಮಿಸಿದವರು. ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿರುವ ಇವರು ಸಂಜೀವಿನಿ ಅಂಬ್ಯುಲೆನ್ಸ್, ವೃದ್ಧಾಲಯ, ಕಾರ್ಮಿಕ ಮಕ್ಕಳ ಶಾಲೆಗಳೇ ಮೊದಲಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಬಿಷ್ಟಪ್ಪ ಫಕೀರಪ್ಪ ದಂಡಿನ

ಸಾವಿರಾರು ಬಡಮಕ್ಕಳ ಬಾಳಿನಲ್ಲಿ ಅಕ್ಷರದ ಜ್ಯೋತಿ ಬೆಳಗಿದ ಶಿಕ್ಷಣ ಚೇತನ ಡಾ. ಬಿ.ಎಫ್. ದಂಡಿನ. ೬೦ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಹಳ್ಳಿಮಕ್ಕಳ ಹಿತಚಿಂತಕ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ದ್ಯಾಮಣಸಿಯಲ್ಲಿ ಜನಿಸಿದ ದಂಡಿನ ಕಡುಬಡತನದಲ್ಲಿ ಅರಳಿದ ಪ್ರತಿಭೆ. ಕೂಲಿ ಮಾಡುತ್ತಲೇ ವ್ಯಾಸಂಗ. ಬಿ.ಎಸ್ಸಿ. ಪದವಿ, ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಾಧ್ಯಾಪಕರಾಗಿ ಒಂದೂವರೆ ದಶಕಗಳ ಕಾಲ ಸೇವೆ. ಪ್ರಾಚಾರ್ಯರಾಗಿಯೂ ದುಡಿತ. ಉದ್ಯೋಗಕ್ಕೆ ರಾಜೀನಾಮೆಯಿತ್ತು ಬಡಮಕ್ಕಳ ಶಿಕ್ಷಣಕ್ಕಾಗಿ ಜೀವನ ಅರ್ಪಣೆ, ಕನಕದಾಸ ಶಿಕ್ಷಣ ಸಂಸ್ಥೆ ಮೂಲಕ ಬಡ, ಹಿಂದುಳಿದ ಗ್ರಾಮೀಣ ಮಕ್ಕಳಿಗಾಗಿ ವಸತಿನಿಲಯ ಸ್ಥಾಪಿಸಿ ಉಚಿತ ಶಿಕ್ಷಣ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣ ಒದಗಿಸುವ ಹೈಸ್ಕೂಲ್, ಪದವಿಪೂರ್ವ ಕಾಲೇಜು, ಪದವಿ, ಬಿ.ಎಡ್, ಡಿ.ಎಡ್ ಹಾಗೂ ಸ್ನಾತಕೋತ್ತರ ಸಂಸ್ಥೆ ಸೇರಿದಂತೆ ಒಟ್ಟು ೬೦ ಶಿಕ್ಷಣ ಸಂಸ್ಥೆಗಳನ್ನು ನಡೆಸಿದ ಹೆಗ್ಗಳಿಕೆ. ಸಾವಿರಾರು ಬಡ ವಿದ್ಯಾರ್ಥಿಗಳ ಬದುಕು ರೂಪಿಸಿದ ಧನ್ಯತೆ. ೮೬ರ ಇಳಿ ವಯಸಿನಲ್ಲೂ ಕ್ರಿಯಾಶೀಲವಾಗಿರುವ ಅಕ್ಷರದಾಸೋಹಿ, ಶಿಕ್ಷಣ ಪ್ರದೀಪ, ಅತ್ಯುತ್ತಮ ಸಮಾಜ ಸೇವಕ ಮುಂತಾದ ಪ್ರಶಸ್ತಿಗಳಿಗೆ ಪಾತ್ರವಾಗಿರುವ ವಿರಳಾತಿವಿರಳ ಶಿಕ್ಷಣ ಶಿಲ್ಪಿ,

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಅಶೋಕ್ ಎಸ್. ಶೆಟ್ಟರ್

ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಅಪರೂಪದ ಶಿಕ್ಷಣ ತಜ್ಞರು ಡಾ. ಅಶೋಕ್ ಎಸ್. ಶೆಟ್ಟರ್, ಕುಲಪತಿ, ದಕ್ಷ ಆಡಳಿತಗಾರ, ಮೇರುಸಾಧನೆಯ ಶಿಕ್ಷಣಶಿಲ್ಪಿ.
ಧಾರವಾಡ ಮೂಲದ ಅಶೋಕ್ ಎಸ್. ಶೆಟ್ಟರ್ ೧೯೮೧ರಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ, ಬೆಂಗಳೂರಿನ ಐಐಎಸ್ಸಿಯಲ್ಲಿ ಸ್ನಾತಕೋತ್ತರ ಪದವಿ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದವರು. ೩೫ ವರ್ಷಗಳ ಸುದೀರ್ಘ ಬೋಧನಾನುಭವ. ಪ್ರಾಧ್ಯಾಪಕ, ಪ್ರಾಚಾರ್ಯ, ಡೀನ್, ಸಂಸ್ಥಾಪಕ ನಿರ್ದೇಶಕರಾಗಿ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಗುರುತರ ಸೇವೆ. ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿ, ಸಂಶೋಧನೆ, ಯೋಜನಾ ಮಾರ್ಗದರ್ಶನ, ತರಬೇತಿ ನೀಡುವಿಕೆಯಲ್ಲಿ ವಿಶೇಷ ಪ್ರಾವೀಣ್ಯತೆ. ಎಂಜಿನಿಯರಿಂಗ್ ಶಿಕ್ಷಣವನ್ನು ಉದ್ಯಮಕ್ಕೆ ಪೂರಕವಾಗಿಸಿದ ಬಗೆ ಅನನ್ಯ. ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿಗೆ ಭದ್ರ ಅಡಿಪಾಯ ಹಾಕಿದ ಶಿಲ್ಪಿ. ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ವಿವಿಯನ್ನು ಕಟ್ಟಿ ಬೆಳೆಸಿದ ಪರಿ ನಿಜಕ್ಕೂ ಸೋಜಿಗವೇ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಟೆಕ್ನ ವಿಜಿನರಿ ಮುಂತಾದ ಪ್ರಶಸ್ತಿಗಳು ಅಶೋಕ್ ಶೆಟ್ಟರ್ರವರ ಅಪ್ರತಿಮ ಸಾಧನೆಗೆ ಸಂದ ಸತ್ಪಲಗಳು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಪುಟ್ಟಸಿದ್ಧಯ್ಯ

ತಳಸಮುದಾಯದ ಶೈಕ್ಷಣಿಕ ಏಳೆಗೆ ಅಹರ್ನಿಶಿ ಶ್ರಮಿಸಿದವರು ಡಾ. ಪುಟ್ಟಸಿದ್ಧಯ್ಯ, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ವೈದ್ಯ, ಸಮಾಜಸೇವಕರಾದ ಬಹುರೂಪಿ,
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದಾಸನಪುರದಲ್ಲಿ ಹುಟ್ಟಿದ ಪುಟ್ಟಸಿದ್ಧಯ್ಯ ಎಂ.ಬಿ.ಬಿ.ಎಸ್. ಪದವೀಧರರು. ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲಾ ವೈದ್ಯಾಧಿಕಾರಿಯಾಗಿ ದಶಕಗಳ ಕಾಲ ಸೇವೆ. ಉಪಮುಖ್ಯ ವೈದ್ಯಾಧಿಕಾರಿಯಾಗಿ ನಿವೃತ್ತಿ. 1991ರಲ್ಲಿ ಬಾಬು ಜಗಜೀವನರಾಂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಚನೆ. ದಮನಿತ ಸಮುದಾಯದ ಶೈಕ್ಷಣಿಕ ಏಳೆಗಾಗಿಯೇ ಪ್ರೌಢಶಾಲೆ, ಬಾಲಕರ ವಿದ್ಯಾರ್ಥಿ ನಿಲಯ, ಪ್ರಾಥಮಿಕ ಶಾಲೆ, ಸಂಸ್ಕೃತ ಪಾಠಶಾಲೆ ಹಾಗೂ ಪದವಿಪೂರ್ವ ಕಾಲೇಜು ಸೇರಿದಂತೆ ಆರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಹಿರಿಮೆ. ನಾಲ್ಕು ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆ. ದಕ್ಷಿಣ ಭಾರತದ ಹಲವೆಡೆ ತಳಸಮುದಾಯದವರಲ್ಲಿ ಸಾಮಾಜಿಕ ಅರಿವು ಮೂಡಿಸುವಿಕೆ, ದಲಿತ ಮಕ್ಕಳಿಗಾಗಿ ಸಾಂಸ್ಕೃತಿಕ-ಕ್ರೀಡಾ ಕಾರ್ಯಕ್ರಮಗಳ ಆಯೋಜನೆ. ಉತ್ತಮ ಸೇವಾ ಪ್ರಶಸ್ತಿ, ಜಾಂಬವಶ್ರೀ ಪ್ರಶಸ್ತಿ, ದಲಿತಶ್ರೀ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾದ ಸಮಾಜಬಂಧು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಆರ್. ರಾಮಕೃಷ್ಣ

ಅಧ್ಯಯನ, ಅಧ್ಯಾಪನ ಮತ್ತು ಬರವಣಿಗೆಯನ್ನೇ ಬದುಕಿನ ಡಾ. ಆರ್. ರಾಮಕೃಷ್ಣ. ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಗುರು. ಡಾ. ಆರ್. ರಾಮಕೃಷ್ಣ ಉಸಿರಾಗಿಸಿಕೊಂಡ ಶಿಕ್ಷಣ ತಜ್ಞರು
ಸಾಂಸ್ಕೃತಿಕ ನಗರಿ ಮೈಸೂರು ರಾಮಕೃಷ್ಣರ ಹುಟ್ಟೂರು, ಮಾತ್ರವಲ್ಲ ಸಾಧನೆಯ ಕರ್ಮಭೂಮಿಯೂ ಸಹ. ಕನ್ನಡ, ಭಾಷಾ-ವಿಜ್ಞಾನಗಳೆರಡರಲ್ಲೂ ಸ್ನಾತಕೋತ್ತರ ಪದವಿ, ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ, ಭಾರತೀಯ ಸಾಹಿತ್ಯದಲ್ಲಿ ಡಿಪ್ಲೋಮಾ ವ್ಯಾಸಂಗ, ಬ್ಯಾಂಕ್ ವಿಜೇತ ವಿದ್ಯಾರ್ಥಿ, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ಮುಖ್ಯಸ್ಥರಾಗಿ ವೃತ್ತಿಬದುಕು ಸಂಪನ್ನ, ಅಧ್ಯಯನ, ಬರೆವಣಿಗೆ ಸಾಧನೆಯ ಕಾರ್ಯಕ್ಷೇತ್ರ ಸಾಮಾನ್ಯ ಮತ್ತು ದ್ರಾವಿಡ ಭಾಷಾ ವಿಜ್ಞಾನ, ಭಾರತೀಯ ಸಾಹಿತ್ಯ ವಿಮರ್ಶೆ, ವ್ಯಾಕರಣ ಶಾಸ್ತ್ರ, ಮಧ್ಯಕಾಲೀನ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ವಿಶೇಷ ಪರಿಣಿತಿ. ೧೫ ಕೃತಿಗಳ ಲೇಖಕರು, ೧೦ ಮೌಲಿಕ ಸಂಶೋಧನಾ ಪ್ರಕಟಣೆಗಳ ಕರ್ತೃ. ಪ್ರಕಟಿತ ಲೇಖನಗಳು ಐವತ್ತಕ್ಕೂ ಹೆಚ್ಚು. ವಿಚಾರಸಂಕಿರಣ-ಕಾರ್ಯಾಗಾರಗಳಲ್ಲಿ ಪ್ರಜ್ವಲಿಸಿದ ಪಾಂಡಿತ್ಯ. ೨೮ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡಿದ ಗುರುವರ್ಯರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಎಂ.ಎನ್. ಷಡಕ್ಷರಿ

ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸೇವೆಗೈದ ಸಾರ್ಥಕ ಜೀವಿ ಎಂ.ಎನ್. ಷಡಕ್ಷರಿ. ಶಾಲಾ ಸಂಸ್ಥಾಪಕ, ಪ್ರಾಚಾರ್ಯ, ಸೌಟ್ಸ್ ಶಿಕ್ಷಕ, ಬರಹಗಾರ, ಶಿಕ್ಷಣ ತಜ್ಞರಾಗಿ ಅವರದ್ದು ಅನುಪಮ ಸೇವೆ.
ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿ ತವರುನೆಲ. ೧೯೪೭ರಲ್ಲಿ ಜನನ. ಬಿ.ಎಸ್ಸಿ, ಬಿಇಡಿ ಪದವೀಧರರು. ಚಿಕ್ಕಮಗಳೂರಿನ ಮೌಂಟೆನ್ ವಿದ್ಯಾಲಯದಲ್ಲಿ ೨೩ ವರ್ಷಗಳ ಶಿಕ್ಷಕ ಸೇವೆ. ಸೈಟ್ಸ್ ಶಿಕ್ಷಕರಾಗಿಯೂ ವಿಶಿಷ್ಟ ಛಾಪು. ನೂರಾರು ಮಕ್ಕಳನ್ನು ಸೈಟ್ಸ್ನಲ್ಲಿ ರಾಷ್ಟ್ರಪತಿ ಪುರಸ್ಕಾರಕ್ಕೆ ಅರ್ಹರನ್ನಾಗಿಸಿದ ಅಚ್ಚಳಿಯದ ಹೆಗ್ಗಳಿಕೆ. ಉಪ್ಪಳಿಯ ಮಾಡೆಲ್ ಇಂಗ್ಲಿಷ್ ಶಾಲೆಯ ಸಂಸ್ಥಾಪಕ-ಪ್ರಾಚಾರ್ಯರಾಗಿ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಮಹತ್ತರ ಕೊಡುಗೆ. ಸೌಟ್ಸ್ ಮತ್ತು ಗೈಡ್ಸ್ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಸಿಲ್ವರ್ಸ್ಟಾರ್ ಪುರಸ್ಕಾರ ಪಡೆದ ವಿಶೇಷ ವ್ಯಕ್ತಿ. ಅಂಚೆ ಚೀಟಿ, ನಾಟ್ಯ, ಶಂಖ, ಚಿಪ್ಪು ಸಂಗ್ರಹ ನೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ಲೇಖನಗಳನ್ನು ಬರೆದ ಬರಹಗಾರ. ಗ್ರೀನ್ ಟೀಚರ್ ರಾಷ್ಟ್ರೀಯ ಪುರಸ್ಕಾರ, ಜಿಲ್ಲಾ ವಿಜ್ಞಾನ ಪ್ರಶಸ್ತಿ, ಪರಿಸರ ಶಿಕ್ಷಣ ಪ್ರಶಸ್ತಿ ಮೊದಲಾದ ಪುರಸ್ಕಾರಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಂ.ಜಿ. ಈಶ್ವರಪ್ಪ

ಶಿಕ್ಷಣ, ರಂಗಭೂಮಿ ಮತ್ತು ಜನಪದ ಕ್ಷೇತ್ರದ ಸಾಧಕಮಣಿ ಡಾ. ಎಂ.ಜಿ. ಈಶ್ವರಪ್ಪ, ಶಿಕ್ಷಣ ತಜ್ಞ ಸಂಶೋಧಕ, ಲೇಖಕ, ಅಧ್ಯಾಪಕರಾಗಿ ಅವರದ್ದು ಪರಿಪಕ್ವ ಸಾಧನೆ.
ಬಯಲುಸೀಮೆ ದಾವಣಗೆರೆಯ ಎಂ.ಜಿ. ಈಶ್ವರಪ್ಪ ಸ್ನಾತಕೋತ್ತರ ಪದವೀಧರರು. ಮೈಸೂರು ವಿವಿಯಿಂದ ಪಿ.ಎಚ್ಡಿ ಪಡೆದವರು. ೩೮ ವರ್ಷಗಳ ಸಾರ್ಥಕ ಅಧ್ಯಾಪಕ ವೃತ್ತಿ. ಬೋಧನೆಯಲ್ಲಿ ಅಮಿತಾನಂದ ಕಂಡುಕೊಂಡ ಗುರುವರ್ಯ. ಜನಪದ ಸಂಶೋಧನೆ, ರಂಗನಿರ್ದೇಶನ, ಉಪನ್ಯಾಸ, ಬರವಣಿಗೆಯಲ್ಲಿ ಅಪರಿಮಿತ ಕೃಷಿ, ಜಾತ್ರೆ, ಸಾಯೋಆಟ, ಕಡೇಮನೆ ಕಡೇ ಗಲ್ಲಿ, ಹಳ್ಳಿಮೇಷ್ಟ್ರು ಮತ್ತಿತರ ನಾಟಕಗಳ ನಿರ್ದೇಶನ, ಜನಪದ ರಂಗಭೂಮಿ ಕುರಿತು ಅನೇಕ ಉಪನ್ಯಾಸ ನೀಡಿದ ಪ್ರಖರ ವಾಗ್ನಿ, ಚಿಂತಕ, ಮ್ಯಾಸಬೇಡರು, ಬೇಸಾಯ ಪದ್ಧತಿ, ಬಂಗಾರ ಕೊದಲಜೈರಾನಿ ಮತ್ತಿತರ ೧೬ ಕೃತಿಗಳ ಲೇಖಕರು. ಮೈಸೂರು ವಿವಿ ಸೆನೆಟ್ ಸದಸ್ಯ, ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ, ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಕುವೆಂಪು ವಿವಿ ಶಿಕ್ಷಣ ಮಂಡಳಿ ಸದಸ್ಯರಾಗಿ ಅನನ್ಯ ಶೈಕ್ಷಣಿಕ ಸೇವೆ. ಜನಪದ ತಜ್ಞ ಮಹಾಲಿಂಗ ರಂಗಪ್ರಶಸ್ತಿ ಮುಂತಾದ ಗೌರವಗಳಿಗೆ ಭಾಜನರಾದ ಚಿಂತಕರು-ಹೆಮ್ಮೆಯ ಸಾಧಕರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಗುರುರಾಜ ಕರ್ಜಗಿ

ನಾಡಿನ ಹೆಸರಂತ ಶಿಕ್ಷಣ ತಜ್ಞರು, ಪ್ರಖರ ವಾಗಿ, ಉಪನ್ಯಾಸಕರು ಅಂಕಣಕಾರರು ಹಾಗೂ ಆಧ್ಯಾತ್ಮಿಕ ಚಿಂತಕರಾಗಿ ಡಾ.ಗುರುರಾಜ ಕರ್ಜಗಿ ಅವರದ್ದು ಬಹುಶ್ರುತ ಸಾಧನೆ.
ಧಾರವಾಡದವರಾದ ಡಾ. ಗುರುರಾಜ ಕರ್ಜಗಿ ಕರ್ನಾಟಕ ವಿ.ವಿ ಯಿಂದ ಡಾಕ್ಟರೇಟ್ ಪದವಿ ಪಡೆದವರು. ಬೆಂಗಳೂರಿನ ವಿವಿಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ವಿವಿಎಸ್ ಶೈಕ್ಷಣಿಕ-ಆಡಳಿತ ಮಹಾವಿದ್ಯಾಲಯದ ನಿರ್ದೇಶಕರು, ಜೈನ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರು, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಸ್ಥಾಪಕ ನಿರ್ದೇಶಕರು, ಅನೇಕ ವೈದ್ಯಕೀಯ ವಿ.ವಿ ಗಳ ಹಾಗೂ ಅಂತಾರಾಷ್ಟ್ರೀಯ ಶಾಲೆಗಳ ಆಡಳಿತ ಮಂಡಳಿ ಸದಸ್ಯರಾಗಿ ಅವರದ್ದು ಅನನ್ಯ ಶೈಕ್ಷಣಿಕ ಸೇವೆ. ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ೮೫ಕ್ಕೂ ಹೆಚ್ಚು ಶಾಲೆಗಳ ನಿರ್ಮಾಣದ ಕಾರಣೀಕರ್ತರು, ಕರ್ನಾಟಕ ಜ್ಞಾನ ಆಯೋಗದ ಸದಸ್ಯರೂ ಆಗಿರುವ ಕರ್ಜಗಿ ಅತ್ಯುತ್ತಮ ಬರಹಗಾರರೂ ಕೂಡ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ೧೦೦ಕ್ಕೂ ಹೆಚ್ಚು ಲೇಖನ, ೧೭೦೦ಕ್ಕೂ ಅಧಿಕ ಅಂಕಣ ಬರಹ, ಆಂಗ್ಲ ಮತ್ತು ಕನ್ನಡದಲ್ಲಿ ಕಥೆ, ಪಠ್ಯಪುಸ್ತಕಗಳನ್ನು ರಚಿಸಿರುವ ವಿದ್ವಾಂಸರು. ಕರುಣಾಳು ಬಾ ಬೆಳಕೆ ಅವರ ಮಹೋನ್ನತ ಜನಪ್ರಿಯ ಕೃತಿ. ಅವರ ವಿದ್ವತ್ತೂರ್ಣ ಮಾತು-ಬರಹಗಳು ಯುವಜನತೆಗೆ ಮಾದರಿ, ನಾಡಿಗೆ ಹೆಮ್ಮೆಯ ವಿಷಯ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೆ. ಚಿದಾನಂದಗೌಡ

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿದಾನಂದಗೌಡರು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಕಂಡ ಅಪ್ರತಿಮ ಪ್ರತಿಭೆ. ಶಿಕ್ಷಣ ತಜ್ಞ ಆಡಳಿತಗಾರ, ಲೇಖಕರಾಗಿ ಅವರದ್ದು ವಿದ್ವತ್ತೂರ್ಣ ಸಾಧನೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಚೊಕ್ಕಾಡಿ ಚಿದಾನಂದಗೌಡರ ಹುಟ್ಟೂರು. ಬಾಲ್ಯದಲ್ಲೇ ಪ್ರಖರ ಬುದ್ಧಿವಂತಿಕೆ. ಯುವಿಸಿಇಯಲ್ಲಿ ಇಂಜಿನಿಯರಿಂಗ್, ಬರೋಡಾದಲ್ಲಿ ಸ್ನಾತಕೋತ್ತರ ಪದವಿ, ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಎಚ್‌ ಡಿ ಪಡೆದವರು. ಅಮೇರಿಕಾದ ನಾಸಾ, ಫ್ರಾನ್ಸ್‌ನ ಇನಿಯಾದ ಫೆಲೋಶಿಪ್ ಪುರಸ್ಕೃತರು. ಉಪನ್ಯಾಸಕರಾಗಿ ಆರಂಭವಾದ ವೃತ್ತಿ ಬದುಕು ಪ್ರಾಧ್ಯಾಪಕ, ಪ್ರಾಂಶುಪಾಲಗಿರಿ ದಾಟಿ ಮೈಸೂರು ವಿವಿಯ ಕುಲಪತಿ ಸ್ಥಾನದವರೆಗೂ ವಿಸ್ತಾರಗೊಂಡಿದ್ದು ಚಿದಾನಂದಗೌಡರ ದೈತ್ಯ ಪ್ರತಿಭೆಯ ಪ್ರತೀಕ. ಹಲವು ವಿವಿಗಳ ಶೈಕ್ಷಣಿಕ- ಆಡಳಿತಾತ್ಮಕ ಸಮಿತಿಗಳಲ್ಲಿ ಪ್ರಮುಖ ಹುದ್ದೆಗಳ ನಿರ್ವಹಣೆ-ಮಾರ್ಗದರ್ಶನ. ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳ ಮಂಡನೆ, ಹತ್ತಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಉಪನ್ಯಾಸ, ಪ್ರಪಂಚದ ಉದ್ದಗಲಕ್ಕೂ ಸಂಚಾರ ಚಿದಾನಂದಗೌಡರ ಜ್ಞಾನದ ಆಳಕ್ಕೆ ಸಾಕ್ಷಿ. ಪುಟಾಣಿಗಳ ವಿಜ್ಞಾನ ಪದ್ಯಗಳು, ವಿಜ್ಞಾನ ವಚನಗಳು, ಪತ್ತೇದಾರಿ ಪದ್ಯಗಳು ಸೇರಿ ಹಲವು ಕೃತಿಗಳ ರಚಿಸಿರುವ ಚಿದಾನಂದಗೌಡರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೇಜಗೌ ಸಾಹಿತ್ಯ ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಟಿ. ಶಿವಣ್ಣ

ಶಿಕ್ಷಣದ ಬಹು ಅಂಗಗಳಲ್ಲಿ ಮಾದರಿಯಾದ ಕಾರ್ಯಗಳನ್ನು ಕೈಗೊಂಡ ಶಿಕ್ಷಣ ತಜ್ಞರು ಪ್ರೊಟಿ. ಶಿವಣ್ಣ. ಅಧ್ಯಯನ, ಅಧ್ಯಾಪನ, ಸಮುದಾಯದ ಸೇವೆ ಮತ್ತು ಬರವಣಿಗೆಯಲ್ಲಿ ಸಾಧನೆಯ ಮೈಲುಗಲ್ಲು ಮುಟ್ಟಿದವರು.
ಸಕ್ಕರೆಯ ನಾಡಿನ ಗಟ್ಟಿ ಪ್ರತಿಭೆ ಪ್ರೊ.ಟಿ. ಶಿವಣ್ಣ. ಮದ್ದೂರು ಜನ್ಮಸ್ಥಳ. ೧೯೩೦ರ ಸೆಪ್ಟೆಂಬರ್ ೨ರಂದು ಜನಿಸಿದ ಶಿವಣ್ಣ ಅವರು ಬಿ.ಎ ಹಾನರ್ ಪದವೀಧರರು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಉಪನ್ಯಾಸಕ, ರೀಡರ್, ಪ್ರಾಚಾರ್ಯ ಮತ್ತು ಪ್ರಾಂಶುಪಾಲರಾಗಿ ಶೈಕ್ಷಣಿಕ ಸೇವೆ. ಎನ್‌ಸಿ ಅಧಿಕಾರಿಯಾಗಿ ರಾಷ್ಟ್ರ ಮಟ್ಟದಲ್ಲಿ ಬೆಳಗಿದ ಪ್ರತಿಭಾವಂತರು. ಬೆಂಗಳೂರು ವಿ.ವಿ ಯ ಶೈಕ್ಷಣಿಕ ಮಂಡಳಿ, ಸೆನೆಟ್, ಸಿಂಡಿಕೇಟ್ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿಯೂ ಸೇವೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಸಮಾಜವಿಜ್ಞಾನ ಪುಸ್ತಕಗಳ ರಚನೆ, ರಂಗನಟನೆ, ಹಿಂದೂಸ್ತಾನಿ, ಪಾಶ್ಚಿಮಾತ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ, ವಿದೇಶ ಪ್ರವಾಸಗಳು ನೆಚ್ಚಿನ ಹವ್ಯಾಸ ಮಾತ್ರವಲ್ಲ ಅವರ ಬಹುಮುಖಿ ಆಸಕ್ತಿ-ಸಾಧನೆಗೆ ಸಾಕ್ಷಿ. ಆರು ದಶಕದಲ್ಲಿ ವಿದೇಶಗಳಲ್ಲಿ ಅನೇಕ ಚಟುವಟಿಕೆಗಳನ್ನು ಕೈಗೊಂಡು ಭಾಷಣಕಾರರಾಗಿ ವಿದ್ವತ್ ಮೆರೆದ ಪ್ರೊಟಿ.ಶಿವಣ್ಣರ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿಗಳು ಸಂದಿದ್ದು ೯೦ರ ಆಸುಪಾಸಿನಲ್ಲೂ ಅವರದ್ದು ಬತ್ತದ ಉತ್ಸಾಹ. ಸಾಧಕರಿಗೆ ಅವರ ಬದುಕೇ ನೈಜ ಪ್ರೇರಣೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಎಸ್.ಆರ್. ಗುಂಜಾಳ

ಪ್ರಾಧ್ಯಾಪಕ, ಸಂಶೋಧಕ ಲೇಖಕ ಹಾಗೂ ಆಡಳಿತಗಾರರಾಗಿ ಡಾ.ಎಸ್‌.ಆರ್.ಗುಂಜಾಳ ಅವರದು ಶಿಕ್ಷಣ ಕ್ಷೇತ್ರದಲ್ಲಿ ಬಹುಮುಖಿ ಸಾಧನೆ. ಹೊಸತಲೆಮಾರಿಗೆ ಮಾದರಿಯಾದಂತಹ ವ್ಯಕ್ತಿತ್ವ.
ಧಾರವಾಡ ಜಿಲ್ಲೆಯ ಕೋಳಿವಾಡದವರಾದ ಡಾ. ಶಿವಪುತ್ರಪ್ಪ ರಾಯಪ್ಪ ಗುಂಜಾಳ್ ಹುಟ್ಟಿದ್ದು ೧೯೩೨ರ ಜೂನ್ ೨೫ರಂದು, ಅಕ್ಷರದಿಂದ ಅರಳಿದ ಪ್ರತಿಭೆ. ಸ್ನಾತಕೋತ್ತರ ಪದವಿ, ದೆಹಲಿ ವಿ.ವಿ ಯಿಂದ ಎಂ.ಲಿಟ್.ಎಸ್.ಸಿ, ಪಿಎಚ್‌ಡಿ ಪದವೀಧರರು, ಗ್ರಂಥಪಾಲ, ಡೆಪ್ಯೂಟಿ ಗ್ರಂಥಪಾಲ, ಪ್ರಾಧ್ಯಾಪಕ, ಮುಖ್ಯಸ್ಥರಾಗಿ ದುಡಿದವರು. ಅಧ್ಯಾಪನದ ಜೊತೆಗೆ ಸಂಶೋಧನೆ-ಬರವಣಿಗೆ, ಗ್ರಂಥಾಲಯ ವಿಜ್ಞಾನ ಗ್ರಂಥಗಳೂ ಸೇರಿದಂತೆ ೭೨ ಕೃತಿಗಳು, ೧೫೦ ಲೇಖನಗಳ ರಚನಕಾರರು.೨೫ ರಾಷ್ಟ್ರೀಯ-ಪ್ರಾಂತೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಹಿರಿಮೆ, ೨೦ ವಿ.ವಿ ಗಳ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಗುಲ್ಬರ್ಗಾ ವಿ.ವಿ ಸಮಾಜವಿಜ್ಞಾನ ವಿಭಾಗದ ಡೀನ್ ಆಗಿ ಶೈಕ್ಷಣಿಕ ಸೇವೆ. ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಸೇರಿ ಹತ್ತಾರು ಗೌರವಗಳಿಂದ ಭೂಷಿತರಾದ ಗುಂಜಾಳ್ ನಿಯತಕಾಲಿಕೆಗಳ ಸಂಪಾದಕರು, ಪಿಎಚ್‌ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿಯೂ ಸೇವೆಗೈದ ಸಾಧಕಮಣಿ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಶಿವಾನಂದ ಕೌಜಲಗಿ

ರಾಜಕಾರಣ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಮಾನವಾದ ಸೇವೆ ಸಲ್ಲಿಸಿದವರು ಶಿವಾನಂದ ಕೌಜಲಗಿ. ಪ್ರತಿಷ್ಠಿತ ಕೆ.ಎಲ್.ಇ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದವರಲ್ಲಿ ಪ್ರಮುಖರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಶಿವಾನಂದ ಕೌಜಲಗಿ ಅವರ ಬಿ.ಕಾಂ ಪದವೀಧರರು. ಕಾನೂನು ಪದವಿಯನ್ನೂ ಪಡೆದವರು. ಶಿಕ್ಷಣದಷ್ಟೇ ರಾಜಕಾರಣದಲ್ಲೂ ಆಸಕ್ತಿ ವಹಿಸಿದವರು. ಬೈಲಹೊಂಗಲ ವಿಧಾನಸಭಾ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸಿದವರು. ಲೋಕೋಪಯೋಗಿ ಸಚಿವರಾಗಿ , ಸಂಸದರಾಗಿ ಜನಸೇವೆ ಮಾಡಿದವರು. ಅಂತೆಯೇ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಪ್ರಸ್ತುತ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೆ.ಪಿ.ಗೋಪಾಲಕೃಷ್ಣ

ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರು ಡಾ. ಕೆ.ಪಿ.ಗೋಪಾಲಕೃಷ್ಣ, ಪ್ರತಿಷ್ಠಿತ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಸಂಸ್ಥಾಪಕ ಅಧ್ಯಕ್ಷರು.
ಸುಶಿಕ್ಷಿತ ಕುಟುಂಬದ ಹಿನ್ನೆಲೆಯಿಂದ ಬಂದ ಡಾ. ಕೆ.ಪಿ.ಗೋಪಾಲಕೃಷ್ಣ ಅವರು ೧೯೫೯ರಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅನ್ನು ಆರಂಭಿಸಿದರು. ಸಂಸ್ಥಾಪಕ ಅಧ್ಯಕ್ಷ ಹಾಗೂ ಪ್ರಾಂಶುಪಾಲರಾಗಿ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಅವರದ್ದು ಸ್ಮರಣೀಯ ಪಾತ್ರ ದೂರದರ್ಶಿತ್ವದ ಶೈಕ್ಷಣಿಕ ನಡೆಯಿಂದ ಎನ್.ಪಿ.ಎಸ್. ಇಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪಗೊಂಡಿದೆ. ಶಿಸ್ತು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು ಈ ಜನಪ್ರಿಯತೆಯ ಹಿಂದೆ ಗೋಪಾಲಕೃಷ್ಣರ ಪರಿಶ್ರಮದ ಪಾಲು ಬಹಳವಿದ್ದು ಶಿಕ್ಷಣ ತಜ್ಞರಾಗಿ ಹೆಜ್ಜೆಗುರುತು ಮೂಡಿಸಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಎ.ವಿ.ಎಸ್.ಮೂರ್ತಿ

ಶೈಕ್ಷಣಿಕ ಕ್ಷೇತ್ರದ ಸಾಧಕರಲ್ಲಿ ಎ.ವಿ.ಎಸ್.ಮೂರ್ತಿ ಅವರೂ ಸಹ ಒಬ್ಬರು. ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ನ ಗೌರವಾನ್ವಿತ ಕಾರ್ಯದರ್ಶಿಗಳು,
ಬೆಂಗಳೂರಿನ ಬಸವನಗುಡಿಯಲ್ಲಿ ಜನಿಸಿದ ಎ.ವಿ.ಎಸ್.ಮೂರ್ತಿ ಸುಶಿಕ್ಷಿತರು. ಪ್ರತಿಷ್ಠಿತ ಬಿಷಪ್ ಕಾಟನ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ. ಬಿ.ಎಂ.ಎಸ್.ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವಿಯನ್ನು ಪ್ರಥಮ ಬ್ಯಾಂಕ್ನಲ್ಲಿ ಪೂರ್ಣಗೊಳಿಸಿದವರು. ಅಮೆರಿಕಾದ ಕನಸಾಸ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಎಂ.ಎಸ್ ಸ್ನಾತಕೋತ್ತರ ಪದವೀಧರರು. ವಿದ್ಯಾಭ್ಯಾಸದ ಬಳಿಕ ಸ್ವಂತ ಉದ್ಯಮದಲ್ಲಿ ತೊಡಗಿಕೊಂಡ ಅವರು ರೋಟರಿ ಬೆಂಗಳೂರು ಮಿಡ್ಟೌನ್ ಅಧ್ಯಕ್ಷರಾಗಿ, ಕೆನರಾ ಬ್ಯಾಂಕ್ ಪರಿಹಾರ ಮತ್ತು ಕಲ್ಯಾಣ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ವಾಸವಿ ವಿದ್ಯಾನಿಕೇತನ್ ಟ್ರಸ್ಟ್ನ ಉಪಾಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆ. ಆನಂತರ ವಾಸವಿ ಎಜುಕೇಷನಲ್ ಟ್ರಸ್ಟ್ ಜೀವನ ಸಂಧ್ಯಾ ಟ್ರಸ್ಟ್ ಮತ್ತು ಕರ್ನಾಟಕ ಆರ್ಯವೈಶ್ಯ ಚಾರಿಟಬಲ್ ಟ್ರಸ್ಟ್ನ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿ ಆನಂತರ ರಾಷ್ಟ್ರೀಯ ಶಿಕ್ಷಣ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ, ೨೦೦೩ರಿಂದ ಕಾರ್ಯದರ್ಶಿಯಾಗಿ ಸಂಸ್ಥೆಯ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ ಹೆಗ್ಗಳಿಕೆಗೆ ಅನೇಕ ಪ್ರಶಸ್ತಿ-ಗೌರವಗಳಿಗೆ ಭಾಜನರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀಮತಿ ಗೀತಾ ರಾಮಾನುಜಂ

ಶಿಕ್ಷಣ ಕ್ಷೇತ್ರವೂ ಸೇರಿದಂತೆ ಹಲವು ರಂಗಗಳಲ್ಲಿ ಸಾಧನೆಗೈದಿರುವ ಬಹುಮುಖ ಪ್ರತಿಭೆ ಡಾ.ಗೀತಾ ರಾಮಾನುಜಂ, ಶಿಕ್ಷಣತಜ್ಞರು, ನಾಟಕಕಾರರು, ಅಂಕಣಕಾರರು, ಆಪ್ತ ಸಮಾಲೋಚಕಲರು, ಆಡಳಿತಗಾರರು ಜೊತೆಗೆ ವಾಗ್ರಿಗಳು ಕೂಡ.
ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆ ಗೀತಾರಾಮಾನುಜಂ. ಮೈಸೂರು ವಿವಿಯ ವಿಜ್ಞಾನ ಪದವೀಧರೆ, ಇಂಗ್ಲೀಷ್ ಮತ್ತು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹಾಸನ ಜಿಲ್ಲೆಯ ಹೊಳೆನರಸೀಪುರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಬದುಕು ಆರಂಭ. ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಕೆ, ಸಾಹಿತ್ಯ ರಚನೆಯಲ್ಲಿ ಕೃಷಿ, ಸೂಳೆಕೆರೆ, ಕಾನನದ ಕಗ್ಗತ್ತಲ್ಲಿ, ಭಾಮತಿ ಮತ್ತಿತರ ನಾಟಕಗಳ ರಚನಕಾರರು, ಮಕ್ಕಳ ನಾಟಕಗಳ ನಿರ್ದೇಶಕರು, ಸಿಂಗಾಪೂರ, ಅಮೆರಿಕದ ಕ್ಯಾಲಿಫೋರ್ನಿಯಾದ ವಿವಿಯಲ್ಲಿ ಉಪನ್ಯಾಸ. ವಾಗ್ನಿಯೆಂದೇ ಜನಪ್ರಿಯ. ಪತ್ರಿಕೆಗಳ ಅಂಕಣಕಾರರಾಗಿಯೂ ಹೆಸರುವಾಸಿ, ನಿವೃತ್ತಿಯ ನಂತರ ಜಿ.ಆರ್.ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು. ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ ಹೆಗ್ಗಳಿಕೆ. ಆಧ್ಯಾತ್ಮ ಚಿಂತನೆಯಿಂದಲೂ ಜನಮನ್ನಣೆ ಗಳಿಸಿರುವ ಗೀತಾರಾಮಾನಜುಂ ಅವರ ಸಾಧನೆಗೆ ನಾಟಕ ಅಕಾಡೆಮಿ ಪುರಸ್ಕಾರ, ವಿದ್ಯಾಧಾರಿಣಿ ಪ್ರಶಸ್ತಿ, ಡಿವಿಜಿ ಪ್ರಶಸ್ತಿ, ಇಂಡಿಯಾ ಯುನೆಸ್ಕೋ ಪುರಸ್ಕಾರ ಮತ್ತಿತರ ಗೌರವಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ತೇಜಸ್ವಿ ಕಟ್ಟಿಮನಿ

ಡಾ|| ತೇಜಸ್ವಿ ಕಟ್ಟಿಮನಿ ಅವರು ಪ್ರಸ್ತುತ ಮಧ್ಯ ಪ್ರದೇಶದ ಅಮರ ಕಂಟಕದಲ್ಲಿರುವ ಇಂದಿರಾಗಾಂಧಿ ಬುಡಕಟ್ಟು ವಿಶ್ವವಿದ್ಯಾಲಯದ ಉಪಕುಲಪತಿಗಳು. ಧಾರವಾಡದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ತೇಜಸ್ವಿ ಕಟ್ಟಿಮನಿ ಅವರು ವಿಶ್ವವಿದ್ಯಾಲಯ ಅಧ್ಯಾಪಕರ ಸಂಘದ ಪದಾಧಿಕಾರಿಗಳಾಗಿ ಸಹ ಸೇವೆ ಸಲ್ಲಿಸಿದ್ದಾರೆ.
ವಾಲ್ಮೀಕಿ ಸಮುದಾಯದ ಅಭ್ಯುದಯಕ್ಕಾಗಿ ರಚನೆಯಾಗಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವ ತೇಜಸ್ವಿ ಕಟೀಮನಿ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿರುವ ಕಟೀಮನಿ ಅವರು ಅನೇಕ ಅನುವಾದ ಕೃತಿಗಳನ್ನು ಸಹ ಹೊರತಂದಿದ್ದಾರೆ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕುರುಂಜಿ ವೆಂಕಟರಮಣಗೌಡ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪ್ರಮುಖ ಶಿಕ್ಷಣ ಸಂಸ್ಥೆಯಾದ ಕೆ.ವಿ.ಜಿ ಶಿಕ್ಷಣ ಸಮೂಹ ಸಂಸ್ಥೆಗಳ ಬೆನ್ನೆಲುಬು
ಡಾ. ಕುರಂಜಿ ವೆಂಕಟರಮಣ ಗೌಡ ಅವರು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕುರಂಜಿಬಾಗ್‌ನವರು. ೭೭ ವರ್ಷ ವಯಸ್ಸಿನ ಗೌಡರು ಮೂಲತಃ ಕೃಷಿಕರು. ಮಾಡಿದ್ದು ಮಾತ್ರ ಶೈಕ್ಷಣಿಕ ಕೃಷಿ, ಕೆವಿಜಿ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜು, ಕೆವಿಜಿ ಆಯುರ್ವೇದ ಕಾಲೇಜು, ಕೆವಿಜಿ ಮೊಬೈಲ್ ಹೆಲ್ತ್ ಯೂನಿಟ್, ಪಾಲಿಟೆಕ್ನಿಕ್, ಕೈಗಾರಿಕಾ ತರಬೇತಿ ಸಂಸ್ಥೆ, ಪ್ರಥಮ ದರ್ಜೆ ಕಾಲೇಜು, ಕಾನೂನು ಕಾಲೇಜು ಹೀಗೆ ಪಟ್ಟಿ ದೊಡ್ಡದು.
ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕ ಪ್ರತಿಭಾವಂತರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವರು. ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯೆಯನ್ನು ಧಾರೆಯೆರೆಯುತ್ತಿರುವವರು ಡಾ. ಕುರಂಜಿ ವೆಂಕಟರಮಣ ಗೌಡ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಬಸವರಾಜ ಪಾಟೀಲ್ ಸೇಡಂ

“ಶಾಲೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು” ಎಂಬ ಧೇಯ ವಾಕ್ಯದೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ, ನುಡಿದಂತೆ ನಡೆಯುತ್ತಿರುವ ನಮ್ಮ ನಡುವಿನ ಅಪರೂಪದ ಸರಳ ವ್ಯಕ್ತಿ ಶ್ರೀ ಬಸವರಾಜ ಪಾಟೀಲ
ಸೇಡಂ ಅವರು.
ಗುಲ್ಬರ್ಗ ಜಿಲ್ಲೆ ಸೇಡಂ ತಾಲ್ಲೂಕಿನ ತರನಹಳ್ಳಿಯಲ್ಲಿ ಜನನ. ಬಿ.ಎಸ್.ಸಿ. ಪದವಿವರೆಗೆ ಅಧ್ಯಯನ, ಸಮಾನ ಮನಸ್ಕರೊಡನೆ ಜೊತೆಗೂಡಿ “ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ” ಯ ಸ್ಥಾಪನೆ. ಇದರ ಆಶ್ರಯದಲ್ಲಿ ೩೫ ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವು ಶೈಕ್ಷಣಿಕ ಕ್ಷೇತ್ರಕ್ಕೆ ಸೇಡಂ ಅವರ ಹೆಮ್ಮೆಯ ಕೊಡುಗೆಗಳಾಗಿವೆ. ಹೈದರಾಬಾದ್ ಕರ್ನಾಟಕದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕ ವಿಭಾಗವೊಂದನ್ನು ತೆರೆದು ಈ ಪ್ರದೇಶದ ಐದು ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು ೨೦ ಕೋಟಿ ರೂಗಳಿಗೂ ಅಧಿಕ ವೆಚ್ಚಮಾಡಿ ತಾಯ್ಯಾಡಿನ ಬೆಳವಣಿಗೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ಎಂ.ಪಿ. ಯಾಗಿ, ಎಂ.ಎಲ್.ಸಿ. ಯಾಗಿ, ಸಾರ್ವಜನಿಕ ಲೆಕ್ಕಪತ್ರ ವ್ಯವಹಾರ ಸಮಿತಿಯ ಸದಸ್ಯರಾಗಿ, ರಾಜ್ಯ ಭಾರತೀಯ ಜನತಾಪಾರ್ಟಿಯ ಅಧ್ಯಕ್ಷರಾಗಿ, ನಿಷ್ಕಳಂಕ ಸೇವೆಸಲ್ಲಿಸಿದ ಹಿರಿಮೆ ಇವರದು.
ಸಮಾಜ ಸೇವೆ ಮಾಡುತ್ತ ಇತರರಿಗಾಗಿ ಬದುಕುವ ಅಪರೂಪದ ವ್ಯಕ್ತಿಗಳಲ್ಲಿ ಶ್ರೀ ಬಸವರಾಜ ಪಾಟೀಲ ಸೇಡಂ ಅವರೂ ಒಬ್ಬರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ವಿ.ಬಿ. ಕುಟಿನೋ

ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕಾರ್ಮಿಕ ಹಾಗೂ ಪರಿಸರ ಕಾನೂನು ವಿಷಯಗಳಲ್ಲಿ ಆಳವಾದ ಜ್ಞಾನವುಳ್ಳ ಅಂತಾರಾಷ್ಟ್ರೀಯಮಟ್ಟದ ಶಿಕ್ಷಣ ತಜ್ಞ ಪ್ರೊ. ವಿ.ಬಿ. ಕುಟಿನೋ ಅವರು.
ಎಲ್.ಎಲ್.ಎಂ., ಪಿ.ಎಚ್.ಡಿ. ಪದವಿ ಪಡೆದು ಬೆಳಗಾವಿ, ಧಾರವಾಡ ಬೆಂಗಳೂರು ಮೊದಲಾದ ಕಡೆ ಕಾನೂನು ಉಪನ್ಯಾಸಕರಾಗಿ ದುಡಿದು ೨೦೦೨ ರಿಂದ ೨೦೦೬ ರವರೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಕೆ. ಕಾರ್ಮಿಕ ಕಾಯ್ದೆ ಹಾಗೂ ಪರಿಸರ ಕಾನೂನು ಇವರ ಆಸಕ್ತಿಯ ಕ್ಷೇತ್ರಗಳು, ಈ ವಿಷಯಗಳ ಬಗೆಗೆ ಅನೇಕ ಪುಸ್ತಕಗಳ ರಚನೆ.
ಕೌಲಾಲಂಪೂರ್, ಸಿಡ್ನಿ, ಅಡಿಲೇಡ್ ಮೆಲಬರ್ನ್, ಕ್ಯಾನ್‌ಬೆರಾ, ಹಾಲೆಂಡ್ ಮೊದಲಾದ ವಿಶ್ವವಿದ್ಯಾಲಯಗಳ ಕೋರಿಕೆ ಮೇರೆಗೆ ವಿವಿಧ ವಿಷಯಗಳನ್ನು ಕುರಿತು ಯೋಜನಾವರದಿಗಳನ್ನು ಸಿದ್ಧಪಡಿಸಿ ನೀಡಿದ್ದಾರೆ.
ಅನೇಕ ಗಣ್ಯ ವೇದಿಕೆಗಳಲ್ಲಿ ಹಾಗೂ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಪ್ರಶಂಸೆಗಳಿಸಿದ ಮೇಧಾವಿ. ಬೆಂಗಳೂರು ಕಾನೂನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಅವಧಿಯಲ್ಲಿ ಅನೇಕ ಮಹತ್ವಪೂರ್ಣ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡುದು, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಕಾಲದಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಜಾರಿಗೊಳಿಸಿದ ಯೋಜನೆಗಳು ಅವರ ಶೈಕ್ಷಣಿಕ ಪ್ರಬುದ್ಧತೆಗೆ ಸಾಕ್ಷಿಗಳು.
ಯು.ಜಿ.ಸಿ.ಯ ಸದಸ್ಯರಾಗಿ ಮತ್ತು ಯು.ಜಿ.ಸಿ.ಯ ಬೃಹತ್ ಯೋಜನೆಗಳ ಪರಿಶೀಲಕರಾಗಿ ನಿರ್ವಹಿಸಿದ ಇವರ ಕಾವ್ಯ ಪ್ರಶಂಸಾರ್ಹ.
ಕಾನೂನು, ಪರಿಸರ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅರ್ಪಣಾಭಾವದಿಂದ ಅಧ್ಯಯನ ನಡೆಸಿ ಉತ್ತುಂಗಕ್ಕೇರಿರುವ ಗಣ್ಯವ್ಯಕ್ತಿ ಪ್ರೊ. ವಿ.ಬಿ. ಕುಟಿನೋ ಅವರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಕೆ.ಎಸ್. ನಾರಾಯಣಾಚಾರ್ಯ

ಕಲಿತದ್ದು, ಬೋಧಿಸಿದ್ದು ಆಂಗ್ಲ ಸಾಹಿತ್ಯವನ್ನಾದರೂ ಗಮಕಿಗಳಾಗಿಯೂ ಹೆಸರು ಮಾಡಿದವರು ಕೆ.ಎಸ್.ನಾರಾಯಣಾಚಾರ್ಯ ಅವರು.
ಕನಕಪುರದಲ್ಲಿ ೧೯೩೩ರಲ್ಲಿ ಜನನ. ತಂದೆ ಬಹುದೊಡ್ಡ ವೇದ ವಿದ್ವಾಂಸರು. ಪ್ರಾರಂಭಿಕ ಶಿಕ್ಷಣ ಪಡೆದಿದ್ದು ಹುಟ್ಟೂರಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿಎ ಆನ‌, ಆಂಗ್ಲ ಎಂಎ ಪದವಿ. ‘ಡಬ್ಲ್ಯೂ.ಬಿ.ಯೇಟ್ಸ್, ಟಿ.ಎಸ್.ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರದ ಪ್ರಭಾವ’ ವಿಷಯ ಕುರಿತು ಸಂಶೋಧನಾ ಪ್ರಬಂಧ ಮಂಡನೆ. ಉಪನ್ಯಾಸಕರಾಗಿ ಅಧ್ಯಾಪನ ವೃತ್ತಿ ಆರಂಭ. ಪ್ರಾಚಾರ್ಯರಾಗಿ ನಿವೃತ್ತಿ.
ವೇದಗಳನ್ನು ಕುರಿತು ೧೦ ಸಂಪುಟಗಳ ಕೃತಿಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ೧೩೦ಕ್ಕೂ ಹೆಚ್ಚು ಗ್ರಂಥಗಳು ಶ್ರೀಯುತರಿಂದ ರಚನೆ. ನೂರಾರು ಉಪನ್ಯಾಸಗಳನ್ನು ನೀಡಿದ ಹೆಗ್ಗಳಿಕೆ ಅವರದು. ಕನ್ನಡ, ಆಂಗ್ಲ ತಮಿಳು, ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ.
ಶ್ರೀಯುತರಿಂದ ಕೌಟಿಲ್ಯ ರಾಷ್ಟ್ರೀಯ ಅಧ್ಯಯನ ಸಂಸ್ಥೆ ಸ್ಥಾಪನೆ. ೨೦೦೫ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ಅವರಿಗೆ ಸಂದಿವೆ. ಗಮಕ ಪರಿಷತ್ತಿನ ಸಮ್ಮೇಳನದಲ್ಲಿ ಅಧ್ಯಕ್ಷತೆಯ ಗೌರವದ ಜತೆಗೆ ಗಮಕ ರತ್ನಾಕರ ಬಿರುದಿಗೆ ಅವರು ಪಾತ್ರರು.
ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಸಮಾನ ಸಾಧನೆ ಮಾಡಿದವರು ಶ್ರೀ ಕೆ.ಎಸ್.ನಾರಾಯಣಾಚಾರ್ಯ.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೆ. ಬಾಲವೀರ ರೆಡ್ಡಿ

ತಾಂತ್ರಿಕ ಶೈಕ್ಷಣಿಕ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿರುವವರು ಡಾ. ಕೆ. ಬಾಲವೀರ ರೆಡ್ಡಿ ಅವರು.
೧೯೪೧ರಲ್ಲಿ ಜನಿಸಿದ ಡಾ. ಕೆ. ಬಾಲವೀರ ರೆಡ್ಡಿ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯಲಂಗ್ ಪದವಿ, ಐಐಟಿ ಖರಗ್ಪುರದಿಂದ ಮಶಿನ್ ಡಿಸೈನ್ನಲ್ಲಿ ಎಂ.ಟೆಕ್, ಮದರಾಸಿನ ಐಐಟಿಯಿಂದ ಪಿಹೆಚ್.ಡಿ ಪದವಿ ಪಡೆದಿದ್ದಾರೆ. ಸುರತ್ಕಲ್ನ ಕರ್ನಾಟಕ ಲೀಜನಲ್ ಇಂಜಿನಿಯಲಿಂಗ್ ಕಾಲೇಜಿನಲ್ಲಿ ಸಹ ಉಪನ್ಯಾಸಕರಾಗಿ, ಉಪನ್ಯಾಸಕರಾಗಿ, ಸಹ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಆಯ ನಿರ್ದೇಶಕರಾಗಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅವರು ತಾಂತ್ರಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನನ್ಯ.
ಡಿಸೈನ್ ಮತ್ತು ಮಶಿನ್ ಎಅಮೆಂಟ್ಸ್, ಡಿಸೈನ್ ಮತ್ತು ಡ್ರಾಯಿಂಗ್, ವೈಬ್ರೇಶನ್ಸ್, ಅಲೈಯಅ ಮತ್ತು ಮಶಿನಲ ಡೈಗೊಸ್ಟಿಕ್ಸ್, ಟೊರೊಜನಲ್ ವೈಬ್ರೇಶನ್ಸ್, ನೀಯರ್ಸ್ ಮತ್ತು ನೀಯರ್ಸ್ ಶಾಫ್ಟ್, ಮಶಿನ್ ಟೂಲ್ಬ ಮುಂತಾದವು ಅವರ ಸಂಶೋಧನಾ ಕ್ಷೇತ್ರಗಳು.
ಸುಮಾರು ಹದಿನೈದು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಶ್ರೀಯುತರು ಡಿಸೈನ್ ಡೆಟಾ ಹ್ಯಾಂಡ್ ಬುಕ್-ಮೆಟ್ರಿಕ್ ಯುನಿಟ್ಸ್, ಡಿಸೈನ್ ಡೆಟಾ ಹ್ಯಾಂಡ್ ಬುಕ್-ಮೆಟ್ರಿಕ್ ಮತ್ತು ಎಸ್ಐ ಯುನಿಟ್ಸ್ ಪುಸ್ತಕಗಳ ಕರ್ತೃ.
ಚೆನ್ನೈ ಐಐಟಿಯ ಬೋರ್ಡ್ ಆಫ್ ಗವರ್ನರ್ಸ್, ಸದಸ್ಯರು ನವದೆಹಲಿಯ ಆಲ್ ಇಂಡಿಯಾ ಬೋರ್ಡ್ ಆಫ್ ಟೆಕ್ನಿಷಿಯನ್ ಎಜ್ಯುಕೇಶನ್ (ಎಐಸಿಟಿಇ) ಕಾರಾಧ್ಯಕ್ಷತೆ, ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಸಂಸ್ಥೆಗಳಲ್ಲ ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ಕರ್ನಾಟಕ, ಮಂಗಳೂರು, ಕುವೆಂಪು, ಗುಲ್ಬರ್ಗಾ ವಿಶ್ವವಿದ್ಯಾಲಯಗಳ, ಸಿಂಡಿಕೇಟ್ ಹಾಗೂ ಸೆನೆಟ್ ಸದಸ್ಯರು ಹೀಗೆ ಅನೇಕ ಸಂಸ್ಥೆಗಳಲ್ಲಿ ವಿವಿಧ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ ಕೀರ್ತಿಗೆ ಭಾಜನರು. ಯುಎಸ್ಎಯ ವರ್ಲ್ಡ್ ಅಕಾಡೆಮಿ ಆಫ್ ಪ್ರೊಡೆಕ್ಟಿನಿಟಿ ಸೈನ್ಸ್ ಫೆಲೋ, ಆರ್ಯಭಟ ಪ್ರಶಸ್ತಿ, ನವದೆಹಅಯ ಎಐಎಸ್ಇ ಗೌರವ ಫೆಲೋಷಿಪ್, ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ಮೊದಲಾದವು ಅವರಿಗೆ ಸಂದ ಮಹತ್ವದ ಪ್ರಶಸ್ತಿ ಪುರಸ್ಕಾರಗಳು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಬಿ.ಎನ್. ಬ್ರಹ್ಮಾಚಾರ್ಯ

ದೇಸೀ ವೈದ್ಯ ಪದ್ಧತಿಗಳನ್ನು ಅಳವಡಿಸುವುದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುವ ಪ್ರಸಿದ್ಧ ಪ್ರಕೃತಿ ಹಾಗೂ ಯೋಗ ಶಿಕ್ಷಣತಜ್ಞರು ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು.
ತುಮಕೂಲಿನವರಾದ ಬ್ರಹ್ಮಾಚಾರ್ಯ ಅವರು ಕರ್ನಾಟಕ ಸರ್ಕಾರದ ಭಾರತೀಯ ವೈದ್ಯಪದ್ಧತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಪ್ರಕೃತಿ ಚಿಕಿತ್ಸೆ ಹಾಗೂ ಅಕ್ಯೂಪಂಚರ್ ಆರೋಗ್ಯ ವಿಧಾನಗಳನ್ನು ಅಧ್ಯಯನ ಮಾಡಿರುವ ಇವರು ಪ್ರಸ್ತುತ ಅರೋಗ್ಯ ಮಂದಿರ ಟ್ರಸ್ಟ್ನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕುಲತ ನೂರಾರು ಶಿಬಿರಗಳನ್ನು ರಾಜ್ಯಾದ್ಯಂತ ಏರ್ಪಡಿಸಿ ದೇಸೀ ಪದ್ಧತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿರುವ ಇವರು ಪ್ರಕೃತಿ ಜೀವನ ಕೇಂದ್ರದ ಸಕ್ರಿಯ ಕಾರ್ಯಕರ್ತರಲ್ಲೊಬ್ಬರು. ಯೋಗ ಶಿಕ್ಷಣದ ಮೂಲಕ ನಗರ ಜೀವನದ ಒತ್ತಡಗಳ ನಿವಾರಣೆಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಮಲ್ಲಾಡಿ ಹಳ್ಳಿ, ಪಾಂಡಿಚೆಲ ಮುಂತಾದ ಕಡೆಗಳಲ್ಲಿ ಯೋಗಾಭ್ಯಾಸ ಶಿಬಿರಗಳನ್ನು ವ್ಯವಸ್ಥೆ ಮಾಡಿರುವ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಪ್ರಕೃತಿ ಚಿಕಿತ್ಸಾ ತರಗತಿಗಳನ್ನು ಸಾರ್ವಜನಿಕರಿಗಾಗಿ ಏರ್ಪಡಿಸುತ್ತಿದ್ದಾರೆ. ಅಕ್ಯೂಪಂಚ ವೈದ್ಯ ವಿಧಾನವನ್ನು ಅಭ್ಯಾಸ ಮಾಡಿ ಅನೇಕರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ಇವರು ಹಲವಾರು ದೇಸೀಯ ಚಿಕಿತ್ಸಾ ಸಮ್ಮೇಳನಗಳನ್ನು ರಾಜ್ಯಾದ್ಯಂತ ಏರ್ಪಡಿಸಿದ್ದಾರೆ.
ಪತಂಜಲಿ ಸ್ವರ್ಣ ಪದಕ, ಜಿಂದಾಲ್ ಟ್ರಸ್ಟ್ನ ಪ್ರಕೃತಿ ಚಿಕಿತ್ಸಾ ರತ್ನ ಹಾಗೂ ಭಾರತೀಯ ಪರ್ಯಾಯ ಔಷಧಿಗಳ ಸಂಸ್ಥೆಯ ಚಿನ್ನದ ಪದಕ ಪಡೆದಿರುವ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಬೆಂಗಳೂರು ಯೋಗಕೇಂದ್ರದಿಂದಲೂ ಸನ್ಮಾನಿತರು.
ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಯೋಗ ಸ್ಪರ್ಧೆಗಳ ತೀರ್ಪುಗಾರರಾಗಿ ಹಾಗೂ ಕರ್ನಾಟಕ ಯೋಗ ತಂಡದ ವ್ಯವಸ್ಥಾಪಕರಾಣ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು ಕಾರ್ಯನಿರ್ವಹಿಸಿದ್ದಾರೆ.
ಜನತೆಯ ಆರೋಗ್ಯದಲ್ಲಿ ಯೋಗದ ಮಹತ್ವವನ್ನು ಸಾರುತ್ತಿರುವ ಯೋಗ ಚಿಕಿತ್ಸಕ ಹಾಗೂ ಯೋಗ ಶಿಕ್ಷಕ ಶ್ರೀ ಬಿ.ಎನ್. ಬ್ರಹ್ಮಾಚಾರ್ಯ ಅವರು.

Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಚನ್ನಬಸಪ್ಪ ಹಾಲಹಳ್ಳಿ

ಬೀದರ್ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದವರು ಶ್ರೀ ಚನ್ನಬಸಪ್ಪ ಹಾಲಹಳ್ಳಿ ಅವರು.
೧೯೪೭ರಲ್ಲಿ ಜನನ. ಸುಮಾರು ೩೫ ವರ್ಷಗಳಿಂದ ಕನ್ನಡ ನಾಡುನುಡಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಕೆ. ಬೀದರ್ನ ಭೂಮರೆಡ್ಡಿ ಮಹಾವಿದ್ಯಾಲಯದ ಬಿ.ಎ.ಪದವಿ, ಬೆಳಗಾಂವ್ನ ಆರ್.ಎಲ್. ಕಾನೂನು ಕಾಲೇಜಿನಿಂದ ಎಲ್.ಎಲ್.ಬಿ. ಪದವಿ ಗಳಿಕೆ. ೧೯೬೮ ಲಂದ ವಕೀಲ ವೃತ್ತಿಗೆ ಪದಾರ್ಪಣೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶ್ರೀಯುತರು ಚೀದರ್ನ ಚಿದಂಬರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ-ಕಾರ್ಯದರ್ಶಿ, ಶ್ರೀ ಚನ್ನಬಸಪ್ಪ ಹಾಲಹಳ್ಳಿ ಅವರು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸಲ್ಲಿಸುತ್ತಿರುವ ಸೇವೆ ಮಹತ್ತರವಾದುದು. ಈ ಸಂಸ್ಥೆಯ ಅಡಿಯಲ್ಲಿ ಇಪ್ಪತ್ತೈದು ಅಂಗಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ. ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯಡಿ ಆಯುರ್ವೇಕ್ ಮೆಡಿಕಲ್ ಕಾಲೇಜು ಸೇಲದಂತೆ ಹನ್ನೆರಡು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಬೀದರ್-ಗುಲಬರ್ಗಾ ರೈಲು ಮಾರ್ಗ, ಬೀದರ್ ನಾಗಲಕ ವಿಮಾನಯಾನ, ಬೀದರ್ ಪ್ರವಾಸೋದ್ಯಮದ ಕೇಂದ್ರವಾಗಬೇಕೆಂಬ ಆಶಯದಿಂದ ರಚನಾತ್ಮಕ ಯೋಜನೆಗಳನ್ನು ರೂಪಿಸಿ ಬೀದರ್ಭಾಗದ ಸರ್ವಾಂಗೀಣ ಉನ್ನತಿಗಾಗಿ ಶ್ರಮಿಸುತ್ತಿರುವ ಶ್ರೀ ಚೆನ್ನಬಸಪ್ಪ ಹಾಲಹಳ್ಳಿ ಅವರು ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ, ಪದಾಧಿಕಾಲಿಯಾಗಿ ಸಲ್ಲಿಸಿರುವ ಸೇವೆ ಗಣನೀಯವಾದುದು.
ನಿರಂತರ ಶೈಕ್ಷಣಿಕ ಸೇವೆಗಾಗಿ ಬೀದರ್ ಜಿಲ್ಲಾ ಆಡಳತದಿಂದ ಸನ್ಮಾನ, ಪ್ರಭುರಾವ್ ಕಂಬಳವಾಲೆ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪಲಷತ್ತಿನ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ಬೀದಲಿಗೆ ಪಶುವೈದ್ಯಕೀಯ ವಿದ್ಯಾಲಯ, ಸರಕಾಲ ಕಾಲೇಜು ಬರಲು ಶ್ರಮಿಸಿದವರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ವ್ಯಕ್ತಿ ಶ್ರೀ ಚೆನ್ನಬಸಪ್ಪ ಹಾಲಹಳ್ಳಿ ಅವರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಂ.ಜಿ.ನಾಗರಾಜ್‌

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿದ ಹಿರಿಯ ಶಾಸನತಜ್ಞರು ಡಾ. ಎಂ.ಜಿ.ನಾಗರಾಜ್‌, ಶಾಸನಶಾಸ್ತ್ರ ಕ್ಷೇತ್ರದ ಅದ್ವಿತೀಯ ಸಾಧಕರು, ಸಂಶೋಧಕರು ಪ್ರಾಚಾರ್ಯರು ಹಾಗೂ ದಕ್ಷ ಆಡಳಿತಗಾರರು. ಸಾಂಸ್ಕೃತಿಕ ನಗರ ಮೈಸೂರಿನ ಸಾಹಿತ್ಯಕ ಕೊಡುಗೆ ಡಾ. ಎಂ.ಜಿ.ನಾಗರಾಜ್‌, ೧೯೩೦ರಲ್ಲಿ ಜನಿಸಿದ ನಾಗರಾಜ್‌ ಪ್ರಖರ ಪಂಡಿತರು. ಎಂಎಸ್ಸಿ, ಎಂಎಸ್, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಇತಿಹಾಸದಲ್ಲಿ ಡಿ.ಲಿಟ್, ಶಾಸನಶಾಸ್ತ್ರದಲ್ಲಿ ಡ್ರೈಮಾಟಿಕ್ಸ್ ಪೂರೈಸಿದವರು. ಅಧ್ಯಯನ, ಅಧ್ಯಾಪನ, ಬರವಣಿಗೆ, ಸಂಶೋಧನಾನಿರತರು. ನಿವೃತ್ತ ಪ್ರಾಚಾರ್ಯರು. ಶಾಸನಕ್ಷೇತ್ರದಲ್ಲಿ ಅವರದ್ದು ತಳಸ್ಪರ್ಶಿ ಅಧ್ಯಯನ. ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಯ ೮ ರಿಂದ ೧೮ ಶತಮಾನದವರೆಗಿನ ಸುಮಾರು ೨೦ ಹೊಸ ಶಾಸನಗಳನ್ನು ಪತ್ತೆಹಚ್ಚಿದ ಅಪೂರ್ವ ಸಂಶೋಧಕರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿವಿ ಸೇರಿ ವಿವಿಧ ಅಧ್ಯಯನ ಕೇಂದ್ರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಾಸನಶಾಸ್ತ್ರ ಬೋಧಿಸಿದ ತಜ್ಞರು. ೪೦ಕ್ಕೂ ಹೆಚ್ಚು ಮಹತ್ವದ ಕೃತಿಗಳ ರಚನಕಾರರು. ಕನ್ನಡ-ಇಂಗ್ಲೀಷ್ ಎರಡರಲ್ಲೂ ಅತ್ಯುತ್ತಮ ಪ್ರಬಂಧಕಾರರು. ಮಿಥಿಕ್ ಸೊಸೈಟಿಯೂ ಸೇರಿದಂತೆ ಅನೇಕ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸಿದ ದಕ್ಷ ಆಡಳಿತಗಾರರು. ಜ್ಞಾನಶಾಖೆಯ ಹಲವು ಮಜಲುಗಳನ್ನು ತೋರ್ಗಾಣಿಸಿದವರು. ಹತ್ತಾರು ಪ್ರಶಸ್ತಿಗಳಿಗೆ ಪಾತ್ರವಾಗುತ್ತಲೇ ಅವುಗಳ ಗೌರವ-ಘನತೆ ಹೆಚ್ಚಿಸಿದ, ೯೨ರ ಇಳಿವಯಸ್ಸಿನಲ್ಲೂ ಸಾಹಿತ್ಯ-ಶಾಸನಚಿಂತನೆಯಲ್ಲಿ ತೊಡಗಿರುವ ಡಾ. ನಾಗರಾಜ್ ನಮ್ಮ ನಡುವಿರುವ ಅಪರೂಪದ ವಿದ್ವತ್ಮಣಿ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಪ್ರಭಾಕರ ಕೋರೆ

ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಬೆಳಗಾವಿಯ ಶ್ರೀ ಪ್ರಭಾಕರ ಕೋರೆ ಅವರದು ಪ್ರಮುಖವಾಗಿ ನಿಲ್ಲುವ ಹೆಸರು.
ಬೆಳಗಾವಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಚುಕ್ಕಾಣಿ ಹಿಡಿದಿರುವ ಶ್ರೀ ಪ್ರಭಾಕರ ಕೋರೆ ಸ್ವಾತಂತ್ರ ಹೋರಾಟಗಾರರ ಕುಟುಂಬದಿಂದ ಬಂದವರು.
ಶಿಕ್ಷಣ, ಕೃಷಿ, ಸಹಕಾರ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀ ಪ್ರಭಾಕರ ಕೋರೆ ಅವರು ೬೫ ಸಾವಿರ ವಿದ್ಯಾರ್ಥಿಗಳು, ೬,೫೦೦ ಸಿಬ್ಬಂದಿಯುಳ್ಳ ಶಿಕ್ಷಣ ಸಂಸ್ಥೆಗಳ ನಿರ್ವಾಹಕರು. ರಾಷ್ಟ್ರೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ನಿರ್ದೆಶಕರಾಗಿರುವ ಶ್ರೀ ಕೋರೆ ಅವರು ದೇಶದ ಹಲವು ತಾಂತ್ರಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದ ಶ್ರೀ ಪ್ರಭಾಕರ ಕೋರೆಯವರು ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಸದಸ್ಯರು.
ಕರ್ನಾಟಕ ಏಕೀಕರಣದ ನಂತರ ಪ್ರಥಮವಾಗಿ ಬೆಂಗಳೂರಿನಿಂದ ಹೊರಗಡೆ ಬೆಳಗಾವಿಯಲ್ಲಿ ನಡೆದ ಕರ್ನಾಟಕ ವಿಧಾನ ಮಂಡಲದ ಅಧಿವೇಶನವನ್ನು ಅಚ್ಚುಕಟ್ಟಾಗಿ ವ್ಯವಸ್ಥೆಮಾಡಿ ಮೆಚ್ಚುಗೆ ಗಳಿಸಿದವರು ಶ್ರೀ ಪ್ರಭಾಕರ ಕೋರೆ ಅವರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೋಡಿ ರಂಗಪ್ಪ

ಶಿಕ್ಷಣ ಕ್ಷೇತ್ರದಲ್ಲಿ ಬಹುರೂಪಿಯಾಗಿ ಸಾರ್ಥಕ ಸೇವೆ ಸಲ್ಲಿಸಿದ ತಜ್ಞರು ಡಾ. ಕೋಡಿ ರಂಗಪ್ಪ. ಪ್ರಾಧ್ಯಾಪಕರು, ಸಾಕ್ಷರತಾ ಆಂದೋಲನದ ಸಂಪನ್ಮೂಲ ವ್ಯಕ್ತಿ, ಲೇಖಕರು, ಪಠ್ಯಪುಸ್ತಕ ರಚನಾಕಾರರರು, ಕನ್ನಡ ಪರಿಚಾರಕರು.
ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಕೋಡಿ ರಂಗಪ್ಪ ಅವರು ರೈತ ಕುಟುಂಬದ ಕುಡಿ, ಬಡತನದ ನಡುವೆಯೇ ಅಕ್ಷರದಿಂದ ಅರಳಿದ ಪ್ರತಿಭೆ, ಕನ್ನಡ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್, ಎಂ.ಎಡ್ ಪದವೀಧರರು. ಶಿಕ್ಷಣದಲ್ಲಿ ಲಿಂಗಸಮಾನತೆ ಕುರಿತು ಬೆಂಗಳೂರು ವಿವಿಯಿಂದ ಪಿಎಚ್‌ಡಿ. (೧೯೮೫ರಲ್ಲಿ ಚಿಕ್ಕಬಳ್ಳಾಪುರ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ವೃತ್ತಿಬದುಕಿನಾರಂಭ. ೩೨ ವರ್ಷಗಳ ಸುದೀರ್ಘ ಸೇವೆ, ಪ್ರಾಂಶುಪಾಲರಾಗಿ ನಿವೃತ್ತಿ. ವೃತ್ತಿಯ ಜೊತೆ ಭಾಷೆ ಸಾಹಿತ್ಯ ಸಂಸ್ಕೃತಿ ಚಿಂತನೆ ಮತ್ತು ಸಾಕ್ಷರತಾ ಆಂದೋಲನದಲ್ಲಿ ಸೇವೆ. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಕೈಂಕರ್ಯ, ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷನಾಗಿ ಮಾನವೀಯ ಸೇವೆ. ಬಿಎಡ್, ಡಿಎಡ್ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ, ಕನ್ನಡ ಕಲಿಕಾ ಮಾನಕಗಳ ರಚನೆ ಅಧ್ಯಕ್ಷ, ರಾಷ್ಟ್ರೀಯ ಸಾಕ್ಷರತಾ ಮಿಷನ್‌ಯಡಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ತರಬೇತಿ ಸಂಯೋಜಕ, ಮನೆಯಲ್ಲೇ ಗ್ರಂಥಾಲಯ ತೆರೆದು ೧೦ ಸಾವಿರ ಪುಸ್ತಕಗಳ ಸಂಗ್ರಹ ಹಾಗೂ ಹಳ್ಳಿಹಳ್ಳಿಗೆ ತೆರಳಿ ರಾತ್ರಿಪಾಠಶಾಲೆಗಳನ್ನು ನಡೆಸಿದ, ಹಲವು ಕೃತಿಗಳ ಲೇಖಕರೂ ಆಗಿರುವ ಕೋಡಿರಂಗಪ್ಪ ಅಪ್ಪಟ ಶಿಕ್ಷಣಬಂಧು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಹೆಚ್.ಎಸ್. ನಿಂಗಪ್ಪ

ಮಹಾವಿದ್ಯಾಲಯದ ಡಾ. ಹೆಚ್. ಎಸ್. ನಿಂಗಪ್ಪ. ಜನಾನುರಾಗಿ ಪ್ರಾಂಶುಪಾಲರು ೧೯೩೭ರಲ್ಲಿ ಹಾಸನ ಜಿಲ್ಲೆಯ ಹೊನ್ನೇನಹಳ್ಳಿ ಜನನ. ೧೯೫೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ, ೧೯೬೪ರಲ್ಲಿ ಬಿ.ಇ, ೧೯೬೯ರಲ್ಲಿ ಐ.ಐ.ಟಿ. ಮುಂಬಯಿನಿಂದ ಎಂ.ಟೆಕ್ ಮತ್ತು ೧೯೮೩ರಲ್ಲಿ ಐ.ಐ.ಟಿ. ಕಾನ್ಸುರದಿಂದ ಪಿಎಚ್.ಡಿ. ಪದವಿ. ೧೯೬೪ರಲ್ಲಿ ಹಾಸನದ ಎಂ.ಸಿ.ಇ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನದ ಆರಂಬ ಪ್ರಸ್ತುತ ಚಿಕ್ಕಬಳ್ಳಾಪುರದ ಎಸ್. ಜೆ. ಸಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಪ್ರಾಂಶುಪಾಲರಾಗಿದ್ದಾರೆ.
ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿ ಪ್ರಬಂಧಗಳ ಮಂಡನೆ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ, ಜಿಲ್ಲಾಧ್ಯಕ್ಷರಾಗಿ ಕನ್ನಡಪರ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಸರಳ ಸಜ್ಜನಿಕೆಗೆ, ಅಪ್ಪಟ ದೇಶೀಯತೆ, ಉತ್ತಮ ಸಂಘಟನೆಗೆ ಹೆಸರಾದ ಜನಪ್ರಿಯ ಪ್ರಾಧ್ಯಾಪಕರು ಡಾ. ಹೆಚ್. ಎಸ್. ನಿಂಗಪ್ಪ ಅವರು

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ದೇವರಾಜ ಸರ್ಕಾ

ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ತಾವೇ ಒಂದು ಪ್ರಯೋಗಾಲಯವಾಗಿ ದುಡಿದ ಅದ್ಭುತ ಶಿಕ್ಷಣ ತಜ್ಞ ಎಚ್.ಬಿ. ದೇವರಾಜ ಸರ್ಕಾ.
೧೯೨೯ರಲ್ಲಿ ಹಾಸನದಲ್ಲಿ ಜನಿಸಿದ ಶ್ರೀಯುತರು ಹಂತ ಹಂತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮೇಲೇರಿ ಪೋಸ್ಟ್ ಡಾಕ್ಟೋರಲ್ವರೆಗೆ ತಮ್ಮ ಶಿಕ್ಷಣವನ್ನು ವಿಸ್ತರಿಸಿದರು. ೧೯೫೦ರಲ್ಲಿ ಜೀವಶಾಸ್ತ್ರ ಅಧ್ಯಾಪಕನಾಗಿ ವೃತ್ತಿ ಬದುಕನ್ನು ಆರಂಭಿಸಿ ೧೯೯೩ರವರೆಗೆ ಪ್ರಾಣಿಶಾಸ್ತ್ರ ಅಧ್ಯಾಪಕ, ಪ್ರವಾಚಕ, ಮುಖ್ಯಸ್ಥರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ, ಡೀನ್ ಆಗಿ ಯು.ಜಿ.ಸಿ. ಎಮರೇಟಸ್ ಫೆಲೋ ಆಗಿ ಮೈಸೂರು, ಕೊಮೇನಿಯನ್, ಜಪಾನ್, ಸಿಂಗಪೂರ್, ಅಹಮದಾಬಾದ್, ವಿಶ್ವವಿದ್ಯಾಲಯಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸರ್ಕಾರ್ ಅವರು ವಿಜ್ಞಾನ ಸಂಸ್ಥೆಗಳ ಸದಸ್ಯರಾಗಿ, ವಿಜ್ಞಾನ ಪತ್ರಿಕೆಗಳ ಸಂಪಾದಕರಾಗಿ, ವಿಜ್ಞಾನ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ ವಿಜ್ಞಾನ ಶಿಬಿರಗಳ ಸಂಘಟಕರಾಗಿ, ಸಂಶೋಧಕರಾಗಿಯೂ ದುಡಿದ ಮೇಧಾವಿ, ಜೀವಶಾಸ್ತ್ರ, ಪ್ರಾಣಿಶಾಸ್ತ್ರದ ಕುರಿತು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಶ್ರೀ ಎಚ್.ಬಿ. ದೇವರಾಜ ಸರ್ಕಾರ್ ಅವರು ಕನ್ನಡ ನಾಡಿನ ಹೆಮ್ಮೆಯ ಶಿಕ್ಷಣ ತಜ್ಞರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಚ್.ಜೆ. ಲಕ್ಕಪ್ಪಗೌಡ

ಸಾಹಿತ್ಯ, ಸಂಸ್ಕೃತಿ, ಜಾನಪದ, ಆಡಳಿತ, ಕಾನೂನು, ಸಂಘಟನೆಗಳಲ್ಲಿ ವಿಶೇಷ ಸಾಮರ್ಥ್ಯವನ್ನು ಪ್ರಕಟಿಸಿದ ಕ್ರಿಯಾಶೀಲ ಚೇತನ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು.
ಕರ್ನಾಟಕ ಜಾನಪದ ಅಧ್ಯಯನದಲ್ಲಿ ಅದಕ್ಕೆ ಹೊಸ ಚಿಂತನೆಯನ್ನು ಮೂಡಿಸಿದವರು. ಸಮಕಾಲೀನ ಜಾನಪದ ಅಸ್ತಿತ್ವಕ್ಕೆ ಭದ್ರ ಬುನಾದಿ ಹಾಕಿದವರು. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಶಾರದಾ ವಿಲಾಸ ಕಾಲೇಜು ಹಾಗೂ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮುಂದೆ ಬಿ.ಆರ್.ಪ್ರಾಜೆಕ್ಟ್ನ ಸ್ನಾತಕೋತ್ತರ ಕೇಂದ್ರ ಸೇರಿ, ವಿಭಾಗದ ಮುಖ್ಯಸ್ಥರಾಗಿ, ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ದಕ್ಷ ಆಡಳಿತಗಾರರೆಂದು ಹೆಸರು ಪಡೆದವರು. ಅಧ್ಯಾಪಕ ವೃತ್ತಿಯಲ್ಲಿರುವಾಗಲೇ ಹಲವಾರು ಸಂಘ ಸಂಸ್ಥೆಗಳ ಆಡಳಿತಗಾರರಾಗಿ, ಸಲಹೆಗಾರರಾಗಿ ಕೆಲಸ ಮಾಡಿದರು. ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಲಹೆಗಾರರಾಗಿ, ಕಲಾ ವಿಭಾಗದ ಕ್ಷೇಮಪಾಲಕರಾಗಿ, ಸೆನೆಟ್ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲಕ್ಕಪ್ಪಗೌಡರು ಮಾಡಿದ ಸಾಧನೆ ಅಪಾರವಾದದ್ದಷ್ಟೇ ಅಲ್ಲ, ವೈವಿಧ್ಯಮಯ ಮತ್ತು ಆದರ್ಶಪ್ರಾಯವಾದದ್ದು. ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಕನ್ನಡ ನಾಡು ನುಡಿ ಸಂಸ್ಕೃತಿ ಕುರಿತ ಕಾಳಜಿಯನ್ನು ಒಂದು ವಿಶ್ವವಿದ್ಯಾಲಯದ ಮೂಲಕ ತೋರಿಸಿ, ಅದನ್ನು ನೆರವೇರಿಸುವ ಹೊಣೆಗಾರಿಕೆಯನ್ನು ನಿಭಾಯಿಸಿದ್ದು ಅತ್ಯಂತ ಮಹತ್ವಪೂರ್ಣವಾದದ್ದು.
ಸ್ವಾತಂತ್ರ್ಯಾನಂತರದಲ್ಲಿ ಜಾನಪದವನ್ನು ಉಳಿಸಲು ಮತ್ತು ಬೆಳೆಸಲು ಶ್ರಮಿಸಿದ ಅಗ್ರಪಂಕ್ತಿಯ ಜಾನಪದ ವಿದ್ವಾಂಸರಲ್ಲಿ ಡಾ. ಎಚ್.ಜೆ. ಲಕ್ಕಪ್ಪಗೌಡರು ಒಬ್ಬರಾಗಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಷಡಕ್ಷರಪ್ಪ ಲಿಂಗಸುಗೂರು

ಗುರುವಿನ ಮಾರ್ಗದರ್ಶನದಂತೆ ಅರಿವಿನ ದಾರಿಗೆ ಬೆಳಕಾಗಿ ಬಾಳಿದ ಶಿಕ್ಷಣ ತಜ್ಞ ಹಿರಿಯ ಚೇತನ ಲಿಂಗಸುಗೂರು ಷಡಕ್ಷರಪ್ಪನವರು.
ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಲಿಂಗಸುಗೂರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕನ್ನಡ ಉಸಿರಾಡುವಂತೆ ಮಾಡಿದ ಧೀಮಂತ ವ್ಯಕ್ತಿ ಷಡಕ್ಷರಪ್ಪನವರು. ಕಡುಬಡತನ ಬೆನ್ನಿಗೆ ಕಟ್ಟಿಕೊಂಡು ಮುಂದೆ ಓದಲಾಗದೆ ಅನಿವಾರ್ಯವಾಗಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಶ್ರೀಯುತರು ಹಿರಿಯರ ಮಾರ್ಗದರ್ಶನದಲ್ಲಿ ಬಹುಬೇಗನೇ ಉತ್ತಮ ಶಿಕ್ಷಕರೆನಿಸಿದರು. ನೇರ ನುಡಿಯ ಶಿಸ್ತಿನ ಸಿಪಾಯಿ ಷಡಕ್ಷರಪ್ಪನವರು ತಾವು ವರ್ಗವಾದ ಶಾಲೆಗಳಲ್ಲೆಲ್ಲಾ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
ಇಸ್ಲಾಂ ಆಳ್ವಿಕೆಯಲ್ಲಿದ್ದ ಬೀದರ್ನಲ್ಲಿ ಕನ್ನಡ ಭಾಷೆ ಪ್ರಚಾರ ಮಾಡಿ ಜನಮನವನ್ನು ಕನ್ನಡದೆಡೆಗೆ ಸೆಳೆದ ಶ್ರೀಯುತರು ೧೯೭೦ರಲ್ಲೇ ಅವರ ಶೈಕ್ಷಣಿಕ ಸಾಧನೆಗೆ ರಾಜ್ಯ ಪ್ರಶಸ್ತಿ ಪಡೆದರು. ೧೯೭೪ರಲ್ಲಿ ಸೇವೆಯಿಂದ ನಿವೃತ್ತರಾದರೂ ಶೈಕ್ಷಣಿಕ ಸಂಸ್ಥೆಯೊಂದಿಗಿನ ಸಂಬಂಧ ಅವರನ್ನು ಬಿಡಲಿಲ್ಲ. ಅವರ ಶಿಕ್ಷಣ ಪ್ರೇಮ, ಶಿಕ್ಷಣ ಪ್ರಸಾರಕ್ಕೆ ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ತಮ್ಮ ಇಳಿವಯಸ್ಸಿನಲ್ಲೂ ಶಿಕ್ಷಣ ಪ್ರಸಾರವನ್ನೇ ಕಾಯಕವೆಂದು ನಂಬಿ ಬದುಕುತ್ತಿರುವ ಹಿರಿಯ ಜೀವ ಶ್ರೀ ಷಡಕ್ಷರಪ್ಪನವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಎನ್ ಸಿ ಪರಪ್ಪ

ಕರ್ನಾಟಕದ ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ ಪ್ರಮುಖರಲ್ಲಿ ಒಬ್ಬರಾದ ಪ್ರೊ. ಎನ್ ಸಿ ಪರಪ್ಪ ಅವರು ೧೯೨೬ರಲ್ಲಿ ಜನಿಸಿದರು.

ತಮ್ಮ ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ಕುಸ್ತಿ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಾರರಾಗಿ, ಮೈಸೂರು ವಿಶ್ವವಿದ್ಯಾನಿಲಯದ ತಂಡಗಳ ನಾಯಕರಾಗಿ ಹೆಸರು ಮಾಡಿದ ಪರಪ್ಪನವರು ೧೯೪೬-೪೭ರಲ್ಲಿ ನಡೆದ ಅಖಿಲಭಾರತ ಕುಸ್ತಿ ಪಂದ್ಯಾಟದಲ್ಲಿ ಬೆಳ್ಳಿ ಪದಕ ಪಡೆದ ನಮ್ಮ ನಾಡಿನ ಏಕೈಕ ಕುಸ್ತಿ ಪಟು ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ದೈಹಿಕ ಶಿಕ್ಷಣ ಕಾಲೇಜಿನ ಸ್ಥಾಪನೆಗೆ ಒಬ್ಬ ಮುಖ್ಯ ಕಾರಣಕರ್ತರಾದ ಪ್ರೊ. ಪರಪ್ಪನವರು ಈ ಕ್ಷೇತ್ರದಲ್ಲಿ ಇಪ್ಪತ್ತೆಂಟು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಬಿ.ಪಿ.ಇಡಿ., ಎಂ.ಪಿ.ಇಡಿ. ಮತ್ತು ದೈಹಿಕ ಶಿಕ್ಷಣದಲ್ಲಿ ಪಿಎಚ್.ಡಿ. ಈ ಕೋರ್ಸುಗಳ ಪ್ರಾರಂಭಕ್ಕೆ ಒತ್ತಾಸೆಯಾದ ಇವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣವನ್ನು ಜನಪ್ರಿಯಗೊಳಿಸಲು ನಿರಂತರವಾಗಿ ಶ್ರಮಿಸಿದ್ದಾರೆ. (

‘ಕರ್ನಾಟಕ ರಾಜ್ಯದ ಕ್ರೀಡಾ ಬೆಳವಣಿಗೆಗೆ ಹತ್ತು ಸೂತ್ರಗಳು’ ಎಂಬ ಕ್ರಿಯಾ ಯೋಜನೆಯೊಂದನ್ನು ಪ್ರೊ. ಪರಪ್ಪನವರು ಸರ್ಕಾರಕ್ಕೆ ಸಲ್ಲಿಸಿ ಅದರ ಅನುಷ್ಠಾನಕ್ಕೂ ಪ್ರೇರಣೆ ಒದಗಿಸಿದ್ದಾರೆ. ‘ದೈಹಿಕ ಶಿಕ್ಷಣ, ಸಂಘಟನೆ ಮತ್ತು ಮನೋಲ್ಲಾಸ’ ಎಂಬ ಇವರ ಕೃತಿ ಒಂದು ಮಾರ್ಗದರ್ಶಕ ಪುಸ್ತಕವಾಗಿದೆ.

ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ, ದೈಹಿಕ ಶಿಕ್ಷಣದ ಪ್ರಮುಖರಾಗಿ ಪ್ರೊ. ಪರಪ್ಪನವರು ಸಲ್ಲಿಸಿರುವ ಸೇವೆ ಸದಾ ಪ್ರಶಂಸನೀಯವಾದುದು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ|| ಎಂ.ಆರ್. ಹೊಳ್ಳ

ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವ ಸೇವೆ ಸಲ್ಲಿಸಿರುವ ಆಡಳಿತ ರಂಗದಲ್ಲಿ ದಕ್ಷ ಮುಂದಾಳೆನಿಸಿರುವ, ಶಿಸ್ತು, ಅಚ್ಚುಕಟ್ಟಿಗೆ ಹೆಸರುವಾಸಿಯಾಗಿರುವ ಹಿರಿಯ ಪ್ರಾಧ್ಯಾಪಕ, ಪ್ರಿನ್ಸಿಪಾಲರು ಪ್ರೊ|| ಎಂ. ಆರ್. ಹೊಳ್ಳ ಅವರು.
ಉಡುಪಿ ಜಿಲ್ಲೆಯ ಮಣೂರ ಎಂಬ ಕುಗ್ರಾಮದಲ್ಲಿ ೧೯೩೬ರಲ್ಲಿ ಜನಿಸಿರುವ ಶ್ರೀ ಹೊಳ್ಳ ಅವರು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರ್. ವಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಅವರು ಕಾಲೇಜಿಗೆ ಮಾತ್ರವಲ್ಲದೇ ಇಂಜಿನಿಯರಿಂಗ್‌ ಕ್ಷೇತ್ರಕ್ಕೆ ತಮ್ಮ ಸೇವೆಯನ್ನು ಧಾರೆ ಎರೆದಿದ್ದಾರೆ. ಪ್ರಸಕ್ತ, ಆರ್.ಎನ್.ಎಸ್. ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎನ್.ಸಿ.ಸಿ.ಯಲ್ಲಿ ಅತ್ಯಂತ ಕ್ರಿಯಾಶೀಲ ಅಧಿಕಾರಿಯಾಗಿ ಕಾರ ನಿರ್ವಹಿಸಿದ ಶ್ರೀಯುತರು ೧೯೭೪ರಲ್ಲಿ ಎನ್.ಸಿ.ಸಿ.ಯ ಕರ್ನಾಟಕ ಗೋವಾ ಪಡೆಯ ಮುಖಂಡತ್ವವನ್ನು ವಹಿಸಿ ಭಾರತದ ಗಣರಾಜ್ಯೋತ್ಸವದ ಪೆರೇಡಿನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
ವೃತ್ತಿ ಜೀವನದಲ್ಲಿ ಹಾಗೂ ಕಾಠ್ಯಕ್ರಮಗಳಲ್ಲಿ ಕಟ್ಟುನಿಟ್ಟಿನ ಶಿಸ್ತನ್ನು ಪರಿಪಾಲಿಸುವ ಶ್ರೀ ಹೊಳ್ಳ ಅವರು ಎಂತಹ ಸಂದರ್ಭದಲ್ಲೂ ಉದ್ವೇಗ, ಕೋಪ, ನಿರಾಸೆಯನ್ನು ಪ್ರದರ್ಶಿಸದೇ ಸ್ವಯಂ ನಿಯಂತ್ರಣವನ್ನು ಸಾಧಿಸಿಕೊಂಡಿದ್ದಾರೆ. ಸಹೋದ್ಯೋಗಿಗಳೊಡನೆ, ವಿದ್ಯಾರ್ಥಿಗಳೊಡನೆ ಸ್ನೇಹಮಯವಾಗಿ ವರ್ತಿಸುವ ಶ್ರೀಯುತರು ಯಾವುದೇ ಸನ್ನಿವೇಶದಲ್ಲೂ ಮೌಲ್ಯಗಳನ್ನು ಬಲಿಗೊಡದ ನಿಷ್ಟುರ ಸ್ವಭಾವದವರು. ದಕ್ಷ ನಾಯಕತ್ವ, ಶಿಸ್ತಿನ ಕಾರನಿರ್ವಹಣೆಯಿಂದಾಗಿ ಕಾಲೇಜನ್ನು ರಾಷ್ಟ್ರೀಯ ಮಟ್ಟದ ಖ್ಯಾತಿಗೆ ಏರಿಸಿದ್ದಾರೆ. ಬಿಡುವಿಲ್ಲದ ದಣಿವರಿಯದ ಚಟುವಟಿಕೆಗಳ ನಡುವೆಯೂ ಅನೇಕ ವಿಚಾರಸಂಕಿರಣ, ಸಮ್ಮೇಳನ ಹಾಗೂ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವುದಲ್ಲದೆ ದೇಶದ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿಶ್ವವಿದ್ಯಾನಿಲಯಗಳ ಆಡಳಿತ ಮಂಡಳಿಯಲ್ಲಿ ಶ್ರೀಯುತರು ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಪೋಲೆಂಡಿನಲ್ಲಿ ಯುನೆಸ್ಕೋ ಪ್ರಾಯೋಜಿಸಿದ ಇಂಜಿನಿಯರಿಂಗ್ ಶಿಕ್ಷಣದ ಬಗ್ಗೆ ನಡೆದ ಗ್ಲೋಬಲ್ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ರೋಟರಿ ಕ್ಲಬ್ ಪುರಸ್ಕಾರವು ಇವರಿಗೆ
ದೊರೆತಿದೆ.
ತಾಂತ್ರಿಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿರುವ, ಉದ್ಯಮ ಹಾಗೂ ಇಂಜನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪರಸ್ಪರ ಸಹಕಾರ ರೂಪಿಸಲು ಶ್ರಮಿಸುತ್ತಿರುವ ಅರ್ಪಣಾ ಮನೋಭಾವದ ಶಿಕ್ಷಣ ತಜ್ಞ ಪ್ರೊ|| ಎಂ. ಆರ್. ಹೊಳ್ಳ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಎಚ್ ಎಚ್ ಅಣ್ಣಯ್ಯಗೌಡ

ಇಂಗ್ಲಿಷ್ ಬೋಧನೆ ಹಾಗೂ ಕನ್ನಡ ಸಾಹಿತ್ಯ ರಚನೆ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರು ಪ್ರೊ. ಎಚ್ ಎಚ್ ಅಣ್ಣಯ್ಯಗೌಡರು.

ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇರಿದ ಶ್ರೀ ಅಣ್ಣಯ್ಯಗೌಡರು ಹಿರಿಯ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡ್‌ನ ದರ್‌ ಹ್ಯಾಂ ವಿಶ್ವವಿದ್ಯಾನಿಲಯದಿಂದ ಎಂ.ಲಿಟ್. ಪದವಿ ಪಡೆದ ಶ್ರೀಯುತರು ದೇಶ ವಿದೇಶಗಳಲ್ಲಿ ಅನೇಕ ಸಭೆ ಸಮ್ಮೇಳನಗಳಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ವಿದ್ವತ್‌ ಪೂರ್ಣ ಪ್ರಬಂಧಗಳನ್ನು ಮಂಡಿಸಿದ ಖ್ಯಾತಿ ಪಡೆದಿದ್ದಾರೆ. ಇಂಗ್ಲೆಂಡ್‌ ಸ್ಟಾರ್ಟ್‌ ಫರ್ಡ್ ಅಪಾನ್ ಏವನ್‌ ಶೇಕ್ಸ್‌ಪಿಯ‌ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಪ್ರಬಂಧ ಮಂಡಿಸಿದ ಕೀರ್ತಿ ಇವರದು. ಫುಲ್‌ ಬೈಟ್ ಅಧ್ಯಾಪಕರಾಗಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಬೋಧನೆ. ಆಫ್ರಿಕಾ, ಆಸ್ಟ್ರೇಲಿಯಾ, ಕೆನಡಾ ವಿಶ್ವವಿದ್ಯಾಲಯಗಳಲ್ಲಿ ಕಾಮನ್‌ವೆಲ್ತ್‌ ವೇತನ ಪಡೆದು ಭಾಷಣ ಮಾಡಿದ ಹಿರಿಮೆ ಇವರದು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಲಾವಿಭಾಗದ ಡೀನ್ ಆಗಿ, ಕಾಮನ್‌ವೆಲ್ತ್ ಸಂಸ್ಥೆಯ ಸ್ಥಾಪಕ, ಅಧ್ಯಾಪಕರಾಗಿ ಹೀಗೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿದ್ದಾರೆ. ಇವರ ಮೊದಲ ಕೃತಿ ‘ಮೃಗ ಪ್ರಭುತ್ವ’ ೧೯೫೦ರಲ್ಲಿ ಪ್ರೌಢಶಾಲೆಯ ಪಠ್ಯಗ್ರಂಥವಾಗಿತ್ತು.

‘ಡ್ರಾಮೆಟಿಕ್ ಪೊಯಿಟ್ರಿ ಫ್ರಂ ಮೆಡಿವಲ್ ಟು ಮಾಡರ್ನ್ ಟೈಮ್ಸ್’ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಪ್ರಶಸ್ತಿ ದೊರೆತಿದೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಪಾರಂಗತರಾದ ಹಲವಾರು ಉತ್ತಮ ಕೃತಿಗಳನ್ನು ರಚಿಸಿರುವ ಬಹುಸಂಖ್ಯೆಯ ಸಾಹಿತ್ಯಕ ಮತ್ತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿರುವ ಪ್ರೊ. ಎಚ್ ಎಚ್ ಅಣ್ಣಯ್ಯಗೌಡ ಅವರ ಕೊಡುಗೆ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದದ್ದು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ।। ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿ ಹಿರೇಮಠ

ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸಿದ ಹಿರಿಯ ಸಾಮಾಜಿಕ ಧುರೀಣರು ಹಾಗೂ ಶಿಕ್ಷಣ ತಜ್ಞರು ಡಾ|| ಸಿದ್ದಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು.
* ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಾಲಕೆರೆಯಲ್ಲಿ ೧೯೩೩ರಲ್ಲಿ ಜನಿಸಿದ ಡಾ. ಸಿದ್ಧಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಹುಬ್ಬಳ್ಳಿಯಲ್ಲಿ ವೈದ್ಯವಿಶಾರದ ಪದವಿ ಪಡೆದು ಆಯುರ್ವೇದ ವೈದ್ಯಪದ್ಧತಿಯನ್ನು ವೃತ್ತಿಯನ್ನಾಗಿಸಿಕೊಂಡರು.
ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅನ್ನದಾನೇಶ್ವರ ಕಿವುಡ, ಮೂಗರ ಶಾಲೆಯ ಅಧ್ಯಕ್ಷರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಶಿಕ್ಷಣ ಕ್ಷೇತ್ರದೊಂದಿಗೆ, ಸಹಕಾರ, ಕೃಷಿ, ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಅಪಾರ ಸೇವೆ ಸಲ್ಲಿಸಿರುವ ಡಾ. ಸಿದ್ಧಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಸಿದ್ಧನಕೊಳ್ಳದ ಅಜ್ಜರೆಂದು ಹೆಸರುವಾಸಿಯಾದ ತಪಸ್ವಿ ಮನೆತನದವರು. ದೀನದಲಿತರು, ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸುತ್ತಿರುವ ಶ್ರೀಯುತರು ಬಡಕುಟುಂಬಗಳಿಗೆ ಉಚಿತ ಚಿಕಿತ್ಸೆ, ಮಕ್ಕಳ ರೋಗನಿವಾರಣೆಗೆ ಆದ್ಯತೆ, ಉಚಿತ ನೇತ್ರ ಚಿಕಿತ್ಸಾ ಶಿಬಿರ, ರೈತರ ಸಮಾವೇಶ ಮೊದಲಾದ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.
ಹಾಲಕೆರೆ ಗ್ರಾಮ ಪಂಚಾಯಿತಿ ನಿರ್ದೇಶಕರಾಗಿ, ಹೊಳೆ ಆಲೂರು ಎ.ಪಿ.ಎಂ.ಸಿ. ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ದೊಡ್ಡ ಪ್ರಮಾಣದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಹೀಗೆ ಸಹಕಾರಿ ರಂಗದಲ್ಲಿ ಮೂವತ್ತೆರಡು ವರ್ಷಗಳು ಅಧ್ಯಕ್ಷರಾಗಿ ಜನಪ್ರೀತಿ, ಗೌರವಕ್ಕೆ ಪಾತ್ರರಾದ ಡಾ. ಸಿದ್ದಲಿಂಗಯ್ಯಸ್ವಾಮಿ ಸೊಪ್ಪಿ ಹಿರೇಮಠ ಅವರು ಹಾಲಕೆರೆ ಸಹಕಾರಿ ಸಂಘವನ್ನು ದಕ್ಷ ಆಡಳಿತ ಸೇವಾ ಸೌಲಭ್ಯದ ಮೂಲಕ ಬೃಹತ್ ಸಂಸ್ಥೆಯಾಗಿ ಬೆಳಸಿದ ಕೀರ್ತಿಗೆ ಭಾಜನರು.
ವೃತ್ತಿಯ ಅನುಭವವನ್ನು ತಮಗೆ ಪ್ರಿಯವಾದ ಶೈಕ್ಷಣಿಕ ಕ್ಷೇತ್ರದಲ್ಲಿ ಬಳಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವವರು ಡಾ|| ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿ ಹಿರೇಮಠ ಅವರು.