Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಂ.ಜಿ.ನಾಗರಾಜ್‌

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿದ ಹಿರಿಯ ಶಾಸನತಜ್ಞರು ಡಾ. ಎಂ.ಜಿ.ನಾಗರಾಜ್‌, ಶಾಸನಶಾಸ್ತ್ರ ಕ್ಷೇತ್ರದ ಅದ್ವಿತೀಯ ಸಾಧಕರು, ಸಂಶೋಧಕರು ಪ್ರಾಚಾರ್ಯರು ಹಾಗೂ ದಕ್ಷ ಆಡಳಿತಗಾರರು. ಸಾಂಸ್ಕೃತಿಕ ನಗರ ಮೈಸೂರಿನ ಸಾಹಿತ್ಯಕ ಕೊಡುಗೆ ಡಾ. ಎಂ.ಜಿ.ನಾಗರಾಜ್‌, ೧೯೩೦ರಲ್ಲಿ ಜನಿಸಿದ ನಾಗರಾಜ್‌ ಪ್ರಖರ ಪಂಡಿತರು. ಎಂಎಸ್ಸಿ, ಎಂಎಸ್, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಇತಿಹಾಸದಲ್ಲಿ ಡಿ.ಲಿಟ್, ಶಾಸನಶಾಸ್ತ್ರದಲ್ಲಿ ಡ್ರೈಮಾಟಿಕ್ಸ್ ಪೂರೈಸಿದವರು. ಅಧ್ಯಯನ, ಅಧ್ಯಾಪನ, ಬರವಣಿಗೆ, ಸಂಶೋಧನಾನಿರತರು. ನಿವೃತ್ತ ಪ್ರಾಚಾರ್ಯರು. ಶಾಸನಕ್ಷೇತ್ರದಲ್ಲಿ ಅವರದ್ದು ತಳಸ್ಪರ್ಶಿ ಅಧ್ಯಯನ. ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಯ ೮ ರಿಂದ ೧೮ ಶತಮಾನದವರೆಗಿನ ಸುಮಾರು ೨೦ ಹೊಸ ಶಾಸನಗಳನ್ನು ಪತ್ತೆಹಚ್ಚಿದ ಅಪೂರ್ವ ಸಂಶೋಧಕರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿವಿ ಸೇರಿ ವಿವಿಧ ಅಧ್ಯಯನ ಕೇಂದ್ರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಾಸನಶಾಸ್ತ್ರ ಬೋಧಿಸಿದ ತಜ್ಞರು. ೪೦ಕ್ಕೂ ಹೆಚ್ಚು ಮಹತ್ವದ ಕೃತಿಗಳ ರಚನಕಾರರು. ಕನ್ನಡ-ಇಂಗ್ಲೀಷ್ ಎರಡರಲ್ಲೂ ಅತ್ಯುತ್ತಮ ಪ್ರಬಂಧಕಾರರು. ಮಿಥಿಕ್ ಸೊಸೈಟಿಯೂ ಸೇರಿದಂತೆ ಅನೇಕ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸಿದ ದಕ್ಷ ಆಡಳಿತಗಾರರು. ಜ್ಞಾನಶಾಖೆಯ ಹಲವು ಮಜಲುಗಳನ್ನು ತೋರ್ಗಾಣಿಸಿದವರು. ಹತ್ತಾರು ಪ್ರಶಸ್ತಿಗಳಿಗೆ ಪಾತ್ರವಾಗುತ್ತಲೇ ಅವುಗಳ ಗೌರವ-ಘನತೆ ಹೆಚ್ಚಿಸಿದ, ೯೨ರ ಇಳಿವಯಸ್ಸಿನಲ್ಲೂ ಸಾಹಿತ್ಯ-ಶಾಸನಚಿಂತನೆಯಲ್ಲಿ ತೊಡಗಿರುವ ಡಾ. ನಾಗರಾಜ್ ನಮ್ಮ ನಡುವಿರುವ ಅಪರೂಪದ ವಿದ್ವತ್ಮಣಿ.