Categories
ನೃತ್ಯ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ನಾಟ್ಯವಿದುಷಿ ಜ್ಯೋತಿ ಪಟ್ಟಾಭಿರಾಮ್

ನೃತ್ಯ ಕ್ಷೇತ್ರದ ಮಹೋನ್ನತ ಸಾಧಕಿ ನಾಟ್ಯಾಚಾರ್ಯ ಜ್ಯೋತಿ ಪಟ್ಟಾಭಿರಾಮ್, ನೂರಾರು ವಿದ್ಯಾರ್ಥಿಗಳ ನೃತ್ಯಗುರು, ಪ್ರತಿಭಾವಂತ ನೃತ್ಯ ಸಂಯೋಜಕಿ
ಶಿವಮೊಗ್ಗ ಜಿಲ್ಲೆ ಸಾಗರದವರು ಜ್ಯೋತಿ ಪಟ್ಟಾಭಿರಾಮ್. ಬಾಲ್ಯದಲ್ಲೇ ಅಜ್ಜಿಯ ಒತ್ತಾಸೆಯಿಂದ ಭಾರತಿ- ಮಣಿಯವರಲ್ಲಿ ನೃತ್ಯಾಭ್ಯಾಸ ಶುರು, ಅನಂತರ ಓಂಕಾರ್, ಮುರಳೀಧರರಾವ್, ಉಪಾದಾತಾರ್, ಎಚ್.ಆರ್. ಕೇಶವಮೂರ್ತಿ, ಕಲಾನಿಧಿ ಮಾಮಿ, ತಂಜಾವೂರಿನ ಕಿಟ್ಟಪ್ಪ ಪಿಳ್ಳೆ ಮುಂತಾದ ಗುರುವರ್ಯರಿಂದ ದಕ್ಕಿಸಿಕೊಂಡ ನೃತ್ಯಕಲಾವಂತಿಕೆ, ಸ್ನಾತಕೋತ್ತರ ಇಂಗ್ಲಿಷ್ ಪದವಿ ಪಡೆದು ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿದರೂ ಸೆಳೆತವೆಲ್ಲ ನೃತ್ಯದೆಡೆಗೆ, ಸಾಧನ ಸಂಗಮ ನಾಟ್ಯ ಸಂಸ್ಥೆ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಅನ್ನದಾಸೋಹ. ನಿರಂತರ ಶಾಸ್ತ್ರೀಯ ನೃತ್ಯೋತ್ಸವಗಳ ಆಯೋಜನೆ, ದೇಶ-ವಿದೇಶಗಳಲ್ಲಿ ನೂರಾರು ನೃತ್ಯಪ್ರದರ್ಶನ, ಅಮೆರಿಕಾದಲ್ಲಿ ನೃತ್ಯ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಉಪನ್ಯಾಸಗಳ ನೀಡಿಕೆ, ನ್ಯೂಜೆರ್ಸಿಯಲ್ಲೂ ನೃತ್ಯ ಸಂಸ್ಥೆ ಸ್ಥಾಪನೆ. ಜನಪ್ರಿಯ ನೃತ್ಯರೂಪಕಗಳ ನಿರ್ದೇಶನ, ನಾಟ್ಯಸಂಯೋಜನೆ, ಭರತನಾಟ್ಯ, ಸಂಗೀತ, ಯೋಗ, ಶ್ರೀವಿದ್ಯೆಯ ಧಾರೆಯೆರೆದ ಹೆಗ್ಗಳಿಕೆಯ ನಾಟ್ಯಕಲಾವಿಶಾರದೆ, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿ ಪುರಸ್ಕೃತೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶಿಲ್ಪಿ ಎನ್.ಎಸ್. ಜನಾರ್ಧನ ಮೂರ್ತಿ

ಸುಪ್ರಸಿದ್ಧ ಜಂಬೂಸವಾರಿ ಮೆರವಣಿಗೆಯ ಚಾಮುಂಡೇಶ್ವರಿ ವಿಗ್ರಹವನ್ನು ರೂಪಿಸಿದ ಖ್ಯಾತಿಯ ಅಪರೂಪದ ಶಿಲ್ಪಿ ಎನ್.ಎಸ್. ಜನಾರ್ಧನ ಮೂರ್ತಿ. ಲೋಹದ ಶಿಲ್ಪ ತಯಾರಿಕೆಯ ಮೇರು ಕಲಾವಿದ, ಕಲಾಶಿಕ್ಷಕ.

ಸಾಂಸ್ಕೃತಿಕ ನಗರಿ ಮೈಸೂರಿನ ಎನ್.ಎಸ್. ಜನಾರ್ಧನ ಮೂರ್ತಿ ಅವರಿಗೆ ಕಲೆಯೇ ಬದುಕು-ಜೀವಾಳ- ಕುಲಕಸುಬು, ತಂದೆ ಎನ್.ಪಿ. ಶ್ರೀನಿವಾಸಾಚಾರ್ ಜಿ. ಭಾಷ್ಯಂ ಸ್ಥಪತಿ ಅವರಿಂದ ಎಳವೆಯಲ್ಲೇ ಶಿಲ್ಪಕಲಾಭ್ಯಾಸ. ಓದಿದ್ದು ಎಸ್.ಎಸ್.ಎಲ್.ಸಿ. ಮಾತ್ರ ಅಖಿಲ ಭಾರತ ಕರಕುಶಲ ಮಂಡಳಿ ತರಬೇತಿ ಸಂಸ್ಥೆಯಲ್ಲಿ ಶಿಲ್ಪಕಲೆಯ ಡಿಪ್ಲೋಮಾ ಕಲಿಕೆ, ಕಂಚಿನ ಎರಕದ ಶಿಲ್ಪಕಲೆ ಕರಗತ. ಅನಂತರ ಕಲೆಯೇ ಆಸರೆ. ಮೈಸೂರಿನ ಚಾಮುಂಡೇಶ್ವರಿ ತಾಂತ್ರಿಕ ಸಂಸ್ಥೆಯಲ್ಲಿ ಸಹಬೋಧಕನಾಗಿ ನೇಮಕ, ೩೫ ವರ್ಷಗಳ ಸಾರ್ಥಕ ಸೇವೆ. ನೂರಾರು ವಿದ್ಯಾರ್ಥಿಗಳಿಗೆ ತರಬೇತಿ, ಅಸಾಮಾನ್ಯ ಕಲಾಕೃತಿಗಳ ರಚನೆ, ನಾಲ್ಕು ಬಾರಿ ದಸರಾ ಕಲಾಪ್ರದರ್ಶನದಲ್ಲಿ ಪ್ರಶಸ್ತಿ, ಜೀವಮಾನ ಪ್ರಶಸ್ತಿ, ಹೊಯ್ಸಳ, ಚೋಳ, ಪಲ್ಲವ ಶೈಲಿಯಲ್ಲಿ ರಚಿಸಿದ ಕಲಾಕೃತಿಗಳು ನೂರಾರು, ಹತ್ತಾರು ಪ್ರಮುಖ ದೇವಳದಲ್ಲಿ ಪೂಜಿತ. ಆರು ದಶಕದ ಕಲಾಸೇವೆಯ ಧನ್ಯತೆ.

Categories
ಜಾನಪದ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಹಂಪನಹಳ್ಳಿ ತಿಮ್ಮೇಗೌಡ

ಜನಪದ ಸಾಹಿತ್ಯ, ವಿಮರ್ಶೆ ಹಾಗೂ ಸಂಶೋಧನೆಯಲ್ಲಿ ಸಾಧನೆಗೈದ ಜಾನಪದ ವಿದ್ವಾಂಸರು ಡಾ. ಹಂಪನಹಳ್ಳಿ ತಿಮ್ಮೇಗೌಡ, ವಿದ್ಯಾರ್ಥಿಗಳ ನೆಚ್ಚಿನ ಗುರು, ಅತ್ಯುತ್ತಮ ಸಂಘಟಕರು.
ಹಾಸನ ತಾಲ್ಲೂಕಿನ ಹಂಪನಹಳ್ಳಿಯ ತಿಮ್ಮೇಗೌಡ ೧೯೫೭ರಲ್ಲಿ ಜನನ, ಸ್ನಾತಕೋತ್ತರ ಪದವಿ, ಪಿಎಚ್.ಡಿ.ಯಿಂದ ಸಂಪನ್ನ ವ್ಯಾಸಂಗ. ಹಾಸನದ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ, ಕನ್ನಡ ವಿಭಾಗದ ಮುಖ್ಯಸ್ಥ- ಡೀನ್ ಆಗಿ ಸೇವಾನಿವೃತ್ತಿ. ಜನಪದ ಸಂಶೋಧನೆ-ಬರವಣಿಗೆ-ಸಂಘಟನೆ ಸಾಧನಾಕ್ಷೇತ್ರ ತೊಗಲುಬೊಂಬೆ,
ಕರಪಾಲ, ರಂಗದ ಕುಣಿತ, ಜನಪದಗೀತೆ, ತಮಟೆ ವಾದನ ಮುಂತಾದ ಕಲೆಗಳ ಕಾರ್ಯಾಗಾರ ನಡೆಸಿದ ಸಂಚಾಲಕ. ಗುಣಮುಖ, ಹಿರಿಮೆಯ ಹಾಸನ, ಮನನ, ಕದಿರು, ಹಾಸನ ಜಿಲ್ಲೆಯ ಒಕ್ಕಲಿಗರು ಸೇರಿದಂತೆ ೩೧ ಮೌಲಿಕ ಕೃತಿಗಳ ಕರ್ತೃ. ಹಾಸನ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನಪದ ಕಲಾಮೇಳಗಳ ಸಂಘಟಕ, ೧೫೦ಕ್ಕೂ ಲೇಖನಗಳ ಬರಹಗಾರ, ಹಾಸನ ಜಿಲ್ಲಾ ಜಾನಪದ ಘಟಕದ ಅಧ್ಯಕ್ಷರಾಗಿ ಸಾರ್ಥಕ ಸೇವೆ. ಜಾನಪದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಜಾನಪದ ಚೇತನ, ಕುವೆಂಪು ವಿಶ್ವಮಾನವ ಪ್ರಶಸ್ತಿ ಸೇರಿ ಹಲವಾರು ಗೌರವಗಳಿಗೆ ಸತ್ಪಾತ್ರರು.

Categories
ಜಾನಪದ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಗುರುರಾಜ ಹೊಸಕೋಟೆ

ಹಳ್ಳಿಗಾಡಿನ ಬದುಕನ್ನು ಹಾಡಾಗಿಸಿದ ವಿಶಿಷ್ಟ ಜನಪದ ಪ್ರತಿಭೆ ಗುರುರಾಜ ಹೊಸಕೋಟೆ, ಗಾಯಕ, ಸ್ವರಸಂಯೋಜಕ, ಗೀತರಚನೆಕಾರ, ನಟ, ಚಿತ್ರ ನಿರ್ಮಾಪಕ-ನಿರ್ದೇಶಕರಾಗಿ ಅವರದ್ದು ಬಹುಮುಖಿ ಸಾಧನೆ.
ಗುರುರಾಜ ಹೊಸಕೋಟೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಗಟ್ಟಿ ಪ್ರತಿಭೆ. ಹಾಡುಗಾರಿಕೆಯ ಕಲೆ ಅಪ್ಪ-ಅಮ್ಮನ ಬಳುವಳಿ. ಕಲಿತದ್ದು ಪಿಯುಸಿ, ವೃತ್ತಿ ನೇಕಾರಿಕೆ. ಗಾಯನ, ಗೀತರಚನೆ, ಸ್ವರಸಂಯೋಜನೆ, ನಟನೆಯೇ ಪ್ರವೃತ್ತಿ-ಬದುಕು. ೧೯೭೮ರಲ್ಲಿ ಪ್ರಾರಂಭಿಸಿದ ಹಾಡುಗಾರಿಕೆಗೀಗ ೪೨ ವಸಂತದ ಪಕ್ವತೆ, ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದವ್ವ, ಕಲಿತ ಹುಡುಗಿ ಕುದುರಿ ನಡಿಗಿಯಂತಹ ಹಾಡುಗಳು ಸದಾಕಾಲಕ್ಕೂ ಜನಪ್ರಿಯ. ೬೦೦೦ ಹಾಡುಗಳ ರಚನೆ, ೧೫ ಸಾವಿರಕ್ಕೂ ಅಧಿಕ ಸಾರ್ವಜನಿಕ ಕಾರ್ಯಕ್ರಮಗಳು, ದೇಶಾದ್ಯಂತ ಕಲಾಸಂಚಾರ, ೧೫೦ ಚಿತ್ರಗಳಲ್ಲಿ ನಟನೆ, ೬೦೪ ಧ್ವನಿಸುರುಳಿಗಳಲ್ಲಿ ಗಾಯನ, ನಾಲ್ಕು ನಾಟಕಗಳ ರಚನೆ, ಸಿನಿಮಾ ನಿರ್ದೇಶನ-ನಿರ್ಮಾಣ. ಎಲ್ಲವೂ ಜನಮೆಚ್ಚಿದ ಕಲಾಸಾಧನೆ. ೫೦ಕ್ಕೂ ಹೆಚ್ಚು ಬಿರುದಾವಳಿಗಳಿಂದ ಭೂಷಿತ ಕಲಾವಂತಿಕೆಯ ಅಚ್ಚಳಿಯದ ಹೆಗ್ಗಳಿಕೆ.

Categories
ಚಿತ್ರಕಲೆ ರಾಜ್ಯೋತ್ಸವ 2020

ಎಂ.ಜಿ. ವಾಚೀದ ಮಠ

ದೃಶ್ಯಕಲೆಯನ್ನೇ ಬದುಕು-ಸಾಧನೆಯ ನೆಲೆಯಾಗಿಸಿಕೊಂಡ ಎಂ.ಜಿ.ವಾಚೀದ ಮಠ ನಾಡು ಕಂಡ ವಿಶಿಷ್ಟ ರೇಖಾಚಿತ್ರ ಕಲಾವಿದ, ಕಲಾಶಿಕ್ಷಕ ಮತ್ತು ಕಲಾಗುರು.
ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಕೊಗನೂರ ಗ್ರಾಮದ ಎಂ.ಜಿ.ವಾಚೀದ ಮಠ ಬಾಲ್ಯದಲ್ಲೇ ಚಿತ್ರಕಲೆಯೆಡೆಗೆ ಆಕರ್ಷಿತಗೊಂಡವರು. ಮುಂಬಯಿನ ಡ್ರಾಯಿಂಗ್ ಶಿಕ್ಷಕರ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಬಹುಮಾನ ಪಡೆದವರು. ವೃತ್ತಿ-ಪ್ರವೃತ್ತಿ ಎರಡೂ ಕಲೆಯೇ. ಕಲಾಶಿಕ್ಷಕರಾಗಿ ಮುಂಬಯಿ, ಸವದತ್ತಿ, ಧಾರವಾಡದಲ್ಲಿ ೩೭ ವರ್ಷಗಳ ಸುದೀರ್ಘ ಸೇವೆ. ವಿದ್ಯಾರ್ಥಿಗಳ ನೆಚ್ಚಿನ ಕಲಾಗುರು, ಸನ್ನಿವೇಶಕ್ಕನುಗುಣವಾಗಿ ಕೃತಿ ರಚಿಸುವ ವಿಶಿಷ್ಟ ಕಲೆಗಾರಿಕೆ, ಸರ್ಕಾರಿ ಪಠ್ಯಪುಸ್ತಕಗಳಿಗೆ ದಶಕಗಳ ಕಾಲ ಚಿತ್ರಗಳನ್ನು ರಚಿಸಿದ ಹೆಮ್ಮೆಯ ಕಲಾವಿದ. ಸಾವಿರಾರು ರೇಖಾಚಿತ್ರಗಳು, ಸಂಯೋಜನೆ ಮತ್ತು ಭಾವಚಿತ್ರಗಳನ್ನು ಕಣ್ಣಿಗೆ ಕಣ್ಣುವಂತೆ ರಚಿಸಿದ ಹಿರಿಮೆ. ಮಕ್ಕಳಿಗೆ ತರಬೇತಿ ನೀಡಿ ಅವರು ರಚಿಸಿದ ಕಲಾಕೃತಿಗಳನ್ನು ಸಭೆ-ಸಮಾರಂಭಗಳಲ್ಲಿ ಪ್ರದರ್ಶಿಸಿ ಕಲಾವಿದರ ರೂಪಿಸಿದ ಮಾರ್ಗದರ್ಶಿ, ೮೬ರ ಹರೆಯದಲ್ಲೂ ರೇಖೆಗಳ ಜೊತೆಗೆ ಒಡನಾಡುವ ಕಲಾಕಾರರು.

Categories
ಚಲನಚಿತ್ರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎ.ಟಿ. ರಘು

ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರನಿರ್ದೇಶಕರಲ್ಲಿ ಎ.ಟಿ. ರಘು ಸಹ ಒಬ್ಬರು. ೨೫ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ, ಉತ್ತಮ ಯಶಸ್ಸಿನ ಗರಿಮೆ ಅವರದ್ದು.
ಕನ್ನಡ ಚಿತ್ರಲೋಕಕ್ಕೆ ಕೊಡಗಿನ ಕೊಡುಗೆ ಎ.ಟಿ. ರಘು. ಕೊಡವ ಜನಾಂಗದವರಾದ ರಘು ಅವರಿಗೆ ಬಾಲ್ಯದಿಂದಲೇ ಸಿನಿಮಾಸಕ್ತಿ. ಚಿತ್ರನಿರ್ದೇಶಕನಾಗುವ ಹೊಂಗನಸು ಹೊತ್ತು ಗಾಂಧಿನಗರಕ್ಕೆ ಬಂದು ಬಹಳ ವರ್ಷಗಳ ಬಳಿಕ ಸ್ವತಂತ್ರ ನಿರ್ದೇಶಕರಾದರು. ೧೯೮೦ರಲ್ಲಿ ತೆರೆಕಂಡ ನ್ಯಾಯ ನೀತಿ ಧರ್ಮ ರಘು ನಿರ್ದೇಶನದ ಚೊಚ್ಚಲ ಚಿತ್ರ ರೆಬೆಲ್ ಸ್ಟಾರ್ ಅಂಬರೀಷ್ ನಾಯಕ, ಶಂಕರ್ ಸುಂದರ್, ಆಶಾ, ಅವಳ ನೆರಳು. ಧರ್ಮಯುದ್ಧ, ಗೂಂಡಾಗುರು. ಗುರು ಜಗದ್ಗುರು, ಪ್ರೀತಿ, ಕಾಡಿನ ರಾಜ, ಮಿಡಿದ ಹೃದಯಗಳು, ನ್ಯಾಯಕ್ಕಾಗಿ ನಾನು, ಮಂಡ್ಯದ ಗಂಡು ಮುಂತಾದ ೨೬ ಚಿತ್ರಗಳ ನಿರ್ದೇಶನ. ಬಹುತೇಕ ಚಿತ್ರಗಳಲ್ಲಿ ಅಂಬರೀಷ್ ಅವರೇ ನಾಯಕನಟ. ಗಲ್ಲಾಪೆಟ್ಟಿಗೆಯಲ್ಲಿ ರಘು ಚಿತ್ರಗಳು ಹಣ ಸೂರೆಗೊಂಡಿದ್ದರಿಂದ ಜಯಶೀಲ ನಿರ್ದೇಶಕರೆಂದೇ ಖ್ಯಾತಿ ಪಡೆದವರು. ಚಿತ್ರ ನಿರ್ಮಾಪಕರಾಗಿ ನಷ್ಟ ಅನುಭವಿಸಿದ ರಘು ಚಿತ್ರರಂಗದಿಂದ ಹಿಂಬದಿಗೆ ಸರಿದಿದ್ದರೂ ಅವರ ಚಿತ್ರಗಳಿಗೆ ಮಾತ್ರ ಅದೇ ಜನಪ್ರಿಯತೆ.

Categories
ಚಲನಚಿತ್ರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಬಿ.ಎಸ್. ಬಸವರಾಜು

ಕನ್ನಡದ ಬೆಳ್ಳಿಪರದೆಯನ್ನು ಚೆಂದಗಾಣಿಸಿ-ಸನ್ನಿವೇಶದ ಅರ್ಥಪೂರ್ಣತೆ ಹೆಚ್ಚಿಸಿದ ಛಾಯಾಗ್ರಾಹಕರಲ್ಲಿ ಬಿ.ಎಸ್. ಬಸವರಾಜು ಪ್ರಮುಖರು.
ತುಮಕೂರು ಜಿಲ್ಲೆ ತಿಪಟೂರು ಮೂಲದ ಬಿ.ಎಸ್. ಬಸವರಾಜು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ರಿಂದ ಸೈ ಎನಿಸಿಕೊಂಡ ಪ್ರತಿಭೆ, ಬಿಎಸ್ಸಿ ಪದವಿ ಮುಗಿದೊಡನೆ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ನಲ್ಲಿ ಛಾಯಾಗ್ರಾಹಣದಲ್ಲಿ ಡಿಪ್ಲೊಮಾ ಪಡೆದವರು. ಹೆಸರಾಂತ ಛಾಯಾಗ್ರಾಹಕರಾದ ವಿ.ಕೆ. ಮೂರ್ತಿ-ರಾಜೇಂದ್ರ ಮೆಲೋನ್, ಡಿ.ವಿ. ರಾಜಾರಾಂ ಬಳಿ ಸಹಾಯಕರಾಗಿದ್ದವರು. ೧೯೭೮ರಲ್ಲಿ ಒರಿಯಾ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾದರೂ ಕನ್ನಡ ಸಿನಿಪಯಣ ಆರಂಭವಾಗಿದ್ದು ೧೯೮೧ರ ‘ಅಂದದ ಅರಮನೆ’ ಚಿತ್ರದಿಂದ. ಪುಟ್ಟಣ್ಣ ಕಣಗಾಲ್ ಅಮೃತಘಳಿಗೆ, ಮಾನಸಸರೋವರ ಚಿತ್ರದ ಛಾಯಾಗ್ರಹಣದೊಂದಿಗೆ ಮುನ್ನೆಲೆಗೆ ಬಂದ ಬಸವರಾಜು ಅವರದ್ದು ೧೨೦ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಹೆಗ್ಗಳಿಕೆ. ೪೦ ವರ್ಷಗಳ ಸುದೀರ್ಘ ಚಿತ್ರಯಾನದಲ್ಲಿ ಹೊಸನೀರು, ಭೂತಾಯಿ ಮಕ್ಕಳು, ಉದ್ಭವ, ನೀ ಮುಡಿದಾ ಮಲ್ಲಿಗೆ ಮುಂತಾದವು ಹೆಸರು ತಂದುಕೊಟ್ಟ ಚಿತ್ರಗಳು. ಹತ್ತಾರು ಸಾಕ್ಷ್ಯಚಿತ್ರಗಳ ನಿರ್ದೇಶಕರು, ಅಮೃತಘಳಿಗೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ, ಬಿ.ಎಸ್.ರಂಗಾ ಪ್ರಶಸ್ತಿ, ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸನ್ಮಾನ ಸೇರಿ ಹಲವು ಪ್ರಶಸ್ತಿ-ಗೌರವಗಳಿಂದ ಭೂಷಿತರು.

Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ತಿಪ್ಪೇಸ್ವಾಮಿ ಆರ್.

ಸಂಗೀತ ಮತ್ತು ನಟನಾ ಕ್ಷೇತ್ರದ ದೈತ್ಯ ದೇಸಿ ಪ್ರತಿಭೆ ವಿದ್ವಾನ್ ತಿಪ್ಪೇಸ್ವಾಮಿ ಆರ್. ಪಾತ್ರಗಳಿಗೆ ಜೀವತುಂಬಿದ ಕಲಾವಿದರು, ಸಾವಿರಾರು ಶಿಷ್ಯರನ್ನು ರೂಪಿಸಿದ ಸಂಗೀತದ ಗುರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಉಪ್ಪಳಗೆರೆ ಗ್ರಾಮದ ತಿಪ್ಪೇಸ್ವಾಮಿ ಅವರದ್ದು ಕಲಾಕುಟುಂಬ. ಅಪ್ಪತಾತ ರಂಗಕಲಾವಿದರು, ಅಮ್ಮ ಜನಪದ ಗಾಯಕಿ, ಕಲೆ ರಕ್ತಗತ. ೬ನೇ ವಯಸ್ಸಿಗೇ ರಂಗಪ್ರವೇಶ. ಭಕ್ತಮಾರ್ಕಂಡೇಯ, ಅಣ್ಣತಂಗಿ, ಶ್ರೀಕೃಷ್ಣಗಾರುಡಿ, ಕುರುಕ್ಷೇತ್ರ ಮುಂತಾದ ಪೌರಾಣಿಕ-ಐತಿಹಾಸಿಕ ನಾಟಕಗಳಲ್ಲಿ ನಟನೆ. ದುರ್ಗದ ಸಿಂಹಿಣಿ ಒನಕೆ ಓಬವ್ವ ನಾಟಕದ ಅಸಂಖ್ಯ ಪ್ರದರ್ಶನಗಳಲ್ಲಿ ಮಿಂಚಿದ ಕಲಾವಿದ. ರಂಗ ಸಂಗೀತ- ನಿರ್ದೇಶನದಲ್ಲೂ ಎತ್ತಿದ ಕೈ. ಗಡಿಯಾರ ರಿಪೇರಿಯ ವೃತ್ತಿಯ ನಡುವೆ ಶಾಸ್ತ್ರೀಯ ಸಂಗೀತದ ಕಲಿಕೆ, ವಿದ್ವತ್ ಸಂಪಾದನೆ. ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಸ್ಥಾಪಿಸಿ ೧೨೦೦ಕ್ಕೂ ಅಧಿಕ ಶಿಷ್ಯರ ರೂಪಿಸಿದ ಗುರು. ೩೨ ವರ್ಷಗಳ ಸಾರ್ಥಕ ಕಲಾಸೇವೆ. ಹತ್ತಾರು ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಬೆಳಗಿದ ಕಲಾಚೇತನ.

Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಷಡಾಕ್ಷರಪ್ಪ ಹೊಸಮನಿ

ವೃತ್ತಿ ರಂಗಭೂಮಿ ಕಲಾವಿದರ ಪರಂಪರೆಯ ಹಿರಿಯ ಕೊಂಡಿ ಹೆಚ್. ಷಡಾಕ್ಷರಪ್ಪ, ಆರೂವರೆ ದಶಕಗಳ ಕಾಲ ಕಲೆಯನ್ನೇ ಉಸಿರಾಡಿದ ಅಪರೂಪದ ಕಲಾಚೇತನ,
ಬಳ್ಳಾರಿ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದ ಷಡಾಕ್ಷರಪ್ಪ ಬಹುಶ್ರುತ ಸಾಧಕರು. ಬಹುಮುಖ ಆಸಕ್ತಿಯಿಂದ ರಂಗದ ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡವರು. ನಟನೆ, ರಂಗಗಾಯನ, ಜನಪದ, ಯಕ್ಷಗಾನ, ಭಜನೆ, ಧಾರ್ಮಿಕ ಕಾರ್ಯಕ್ರಮ, ಸಂಗೀತ ಕಲಿಸುವಿಕೆಯಲ್ಲಿ ಅವಿರತ ನಿರತರು. ನಟನೆಯೇ ಪ್ರಧಾನ, ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಹಲವು ಬಗೆಯ ಪಾತ್ರಗಳ ಪೋಷಣೆ, ಗೋಣಿಬಸವೇಶ್ವರ ನಾಟಕದಲ್ಲಿ ಗೋಣಿಬಸವೇಶ್ವರ ಪಾತ್ರಕ್ಕೆ ೧೦೮೯ ಬಾರಿ ಬಣ್ಣ ಹಚ್ಚಿದ ದಾಖಲೆ. ಮಕ್ಕಳಿಗೆ ಸಂಗೀತ ಪಾಠ ಹೇಳಿದ ಗುರು, ನಾಟಕಗಳ ಮೂಲಕ ಸಾಮಾಜಿಕ ಜಾಗೃತಿಯ ಸಂದೇಶ ಸಾರಿದ ಹಿರಿಮೆ, ಅರವತ್ತೈದು ವರ್ಷಗಳಿಂದಲೂ ಅವಿರತವಾಗಿ ಕಲಾಸೇವೆಗೈದ ಕಲಾವಿದರು. ಬಸವರತ್ನ ಪ್ರಶಸ್ತಿ, ಮೈಸೂರಿನ ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ಗೆ ಭಾಜನರಾದ ಕಲಾವಂತರು.

Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಅನಸೂಯಮ್ಮ

ರಂಗಭೂಮಿಯನ್ನೇ ಬದುಕಿನ ವೃತ್ತಿ-ಭಾವದ ಬುತ್ತಿಯಾಗಿಸಿಕೊಂಡ ಕಲಾವಿದೆ ಅನಸೂಯಮ್ಮ, ಐದು ದಶಕಗಳ ಕಲಾನುಭವದ ನಟ, ಹಾಡುಗಾರ್ತಿ, ಪಕ್ಕವಾದ್ಯಪ್ರವೀಣೆ.
ಸಿಳ್ಳೇಕ್ಯಾತ ಕುಟುಂಬದ ಅಪ್ಪಟ ವೃತ್ತಿ ರಂಗಕಲಾವಿದೆ ಅನಸೂಯಮ್ಮ ತುಮಕೂರು ಜಿಲ್ಲೆಯ ಪ್ರತಿಭೆ, ಶಿರಾ ತಾಲ್ಲೂಕಿನ ನಾದೂರು ಹೋಬಳಿಯ ಉದ್ದರಾಮನಹಳ್ಳಿ ಕ್ರಾಸ್ ಹುಟ್ಟೂರು. ನಟನೆ-ಹಾಡುಗಾರಿಕೆ ಪರಂಪರಾನುಗತ ಬಂದ ಕಲಾಬಳುವಳಿ, ಅಕ್ಷರ ಕಲಿಕೆ ಅಸಾಧ್ಯದ ಮಾತು. ಅನಕ್ಷರಸ್ಥ ಬದುಕಿಗೆ ಕಲೆಯೇ ಆಸರೆ, ಕಲೆಯ ಹಲವು ಪ್ರಕಾರಗಳಲ್ಲಿ ಹಿಡಿತ ಸಾಧಿಸಿದ ಮೇಲೆ ಬಹುಮುಖಿ ಆಸಕ್ತಿಯ ಬಹುಮುಖಿ ಪ್ರತಿಭೆ. ೧೬ರ ಹರೆಯದಲ್ಲೇ ಕಲಾರಂಗ ಪ್ರವೇಶ. ನಟಿ, ಸಂಗೀತಗಾರ್ತಿ, ಹಾರ್ಮೋನಿಯಂ ಮತ್ತು ಕೀಬೋರ್ಡ್ ವಾದ್ಯಗಾರ್ತಿಯಾಗಿ ಅವ್ಯಾಹತ ಸೇವೆ. ಬರೋಬ್ಬರಿ ೫೦ ವರ್ಷಗಳ ಸುದೀರ್ಘ ರಂಗಾನುಭವ. ೭೬೦೦ಕ್ಕೂ ಹೆಚ್ಚು ಪ್ರದರ್ಶನದಲ್ಲಿ ಬಣ್ಣ ಹಚ್ಚಿದ ಹಿರಿಮೆ, ಹಾಡಿ ರಂಗಪ್ರೇಮಿಗಳ ತಣಿಸಿದ ಗರಿಮೆ. ವೃತ್ತಿ ರಂಗಭೂಮಿಯ ಅಗ್ಗಳಿಕೆ ಹೆಚ್ಚಿಸಿದ ಕಲಾವಿದೆ.

Categories
ಯಕ್ಷಗಾನ ರಾಜ್ಯೋತ್ಸವ 2020

ಎಂ.ಕೆ. ರಮೇಶ್ ಆಚಾರ್ಯ

ಮಲೆನಾಡು ಕಂಡ ಪ್ರತಿಭಾಶಾಲಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಎಂ.ಕೆ. ರಮೇಶ್ ಆಚಾರ್ಯ. ಬಡಗು ಮತ್ತು ತೆಂಕುತಿಟ್ಟು ಎರಡೂ ಪ್ರಕಾರದ ಸಮರ್ಥ ಪಾತ್ರಧಾರಿ.
ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಕಲು ಅಂಚೆಯ ಆಲ್ಮನೆ ಗ್ರಾಮದವರಾದ ಎಂ.ಕೆ. ರಮೇಶ್ ಆಚಾರ್ಯ ಐದನೇ ತರಗತಿಯಲ್ಲಿರುವಾಗಲೇ ಯಕ್ಷರಂಗ ಪ್ರವೇಶಿಸಿದ ಪಟು. ಬಡಗು ಮತ್ತು ತೆಂಕುತಿಟ್ಟು ಪ್ರಕಾರಗಳೆರಡರಲ್ಲೂ ಅನನ್ಯ ಸ್ತ್ರೀವೇಷ ಪಾತ್ರಧಾರಿ. ವೃತ್ತಿ ಕಲಾವಿದರಾಗಿ ಐದು ದಶಕಗಳ ಸಾರ್ಥಕ ಕಲಾಸೇವೆ. ಹತ್ತಾರು ಯಕ್ಷಗಾನ ಪ್ರಸಂಗಗಳಿಗೆ ಕಲಾ ನಿರ್ದೇಶನ ಮಾಡಿದ ಹೆಗ್ಗಳಿಕೆ. ಮಹಾಮಾತೆ ಕುಂತಿ, ಸಮಗ್ರ ವಿಶ್ವಾಮಿತ್ರ, ಅನಸೂಯಾ ಉಪಾಖ್ಯಾನ, ಶ್ರೀಕೃಷ್ಣ ತುಲಾಭಾರದಂತಹ ಪುರಾಣ ಪ್ರಸಂಗಗಳು, ಕಿಗ್ಗ ಕ್ಷೇತ್ರ ಮಹಾತ್ಮ, ಕಳಸ ಕ್ಷೇತ್ರ ಮಹಾತ್ಮ ಮುಂತಾದ ಕ್ಷೇತ್ರ ಮಹಾತ್ಮ ಪ್ರಸಂಗಗಳಲ್ಲಿ ಪಾತ್ರಧಾರಿ, ಮೂವತ್ತೈದು ಕಾಲ್ಪನಿಕ ಯಕ್ಷಗಾನ ಪ್ರಸಂಗಗಳ ಪದ್ಯ ರಚನಾಕಾರರು. ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರು.

Categories
ಯಕ್ಷಗಾನ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಬಂಗಾರಾಚಾರಿ

ಮೂಡಲಪಾಯ ಯಕ್ಷಗಾನ ಕಲಾಪ್ರಕಾರದ ಪ್ರಖರ ಕಲಾವಿದರು ಬಂಗಾರಾಚಾರಿ, ಹೊಸ ನಮೂನೆಯ ಕುಣಿತಗಳನ್ನು ಚಾಲ್ತಿಗೆ ತಂದ ಕಲಾಗುರು.
ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿಯ ಮೇರುಪ್ರತಿಭೆ ಬಂಗಾರಾಚಾರಿ, ೭ನೇ ತರಗತಿವರೆಗಷ್ಟೇ ಕಲಿಕೆ. ಅನಂತರ ಕುಲಕಸುಬಾದ ಮರಕೆಲಸ-ಕಬ್ಬಿಣದ ಕೆಲಸದಲ್ಲಿ ತಲ್ಲೀನ. ಕಲಾಕರ್ಷಣೆಯಿಂದ ಮದ್ದಳೆ ವಾದನ-ಹಾಡುಗಾರಿಕೆಯ ಕಲಿಕೆ. ತಂದೆಯೇ ಗುರು. ಮರದ ಗೊಂಬೆಗಳಿಗೆ ಯಕ್ಷಗಾನದ ಉಡುಪು ಧರಿಸಿ ಕುಣಿಸುತ್ತಿದ್ದಂತೆ ಮದ್ದಳೆವಾದಕರಾಗಿ ರೂಪಾಂತರ. ಗೊಂಬೆಯಾಟದಲ್ಲಿ ಪರಿಣಿತಿ ಸಾಧಿಸಿದ ಮೇಲೆ ಭಾಗವತಿಕೆ ಶುರು. ಆರು ದಶಕದಿಂದಲೂ ಕಬ್ಬಳ್ಳಿಯಲ್ಲಿ ಪಂಚವಟಿ ರಾಮಾಯಣಕ್ಕೆ ಮೂಡಲಪಾಯ ಯಕ್ಷಗಾನದ ರೂಪ ನೀಡಿ ಪ್ರದರ್ಶನ, ಗೊಂಬೆಯಾಟದಲ್ಲಿನ ಸ್ತ್ರೀವೇಷದ ಕುಣಿತವನ್ನು ಮೂಡಲಪಾಯದಲ್ಲಿಯೂ ಅಳವಡಿಸಿದ ಕೀರ್ತಿ, ಹೊಸ ಕುಣಿತಗಳನ್ನು ಅಳವಡಿಸಿದ ಹಿರಿಮೆ. ಸತ್ಯಹರಿಶ್ಚಂದ್ರ, ವಾಲಿಸುಗ್ರೀವರ ಕಾಳಗ, ಸುಭದ್ರಾ ಕಲ್ಯಾಣ, ಐರಾವತ ಮುಂತಾದ ಪ್ರಸಂಗಗಳನ್ನು ರಚಿಸಿ ಪ್ರದರ್ಶಿಸಿದ ಪ್ರಯೋಗಶೀಲರು. ಮರದ ಕಿರೀಟಗಳನ್ನು ರಟ್ಟಿನಲ್ಲಿ ಮಾಡಿ ಮೂಡಲಪಾಯ ಯಕ್ಷಗಾನದ ಪರಂಪರೆಗೆ ಮಾನ್ಯತೆ ತಂದುಕೊಟ್ಟ ಕಲಾಚೇತನ.

Categories
ಬಯಲಾಟ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಚನ್ನಬಸಪ್ಪ ಬಸಪ್ಪ ಬೆಂಡಿಗೇರಿ

ದೊಡ್ಡಾಟ ಕಲೆಯ ಅಪರೂಪದ ಮದ್ದಳೆ ಕಲಾವಿದ ಚನ್ನಬಸಪ್ಪ ಬೆಂಡಿಗೇರಿ, ಆರು ದಶಕಗಳ ಸಾರ್ಥಕ ಕಲಾಸೇವೆಗೈದ ಕಲಾಚೇತನ.
ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಮಾನಸನಕಟ್ಟಿಯ ಪ್ರತಿಭೆ ಚನ್ನಬಸಪ್ಪ ಬೆಂಡಿಗೇರಿ, ೧೯೩೭ರ ಜುಲೈ ೪ರಂದು ಜನಿಸಿದ ಚನ್ನಬಸಪ್ಪ ಅವರಿಗೆ ಬಾಲ್ಯದಿಂದಲೂ ಕಲಾ ಆಕರ್ಷಣೆ, ದೊಡ್ಡಾಟದ ಕಲಾಪ್ರಕಾರದ ಮೇಲೆ ಅಪರಿಮಿತ ಪ್ರೀತಿ. ಇಷ್ಟಪಟ್ಟು ರೂಢಿಸಿಕೊಂಡ ಕಲೆಯೇ ಬದುಕು-ಭಾವಕ್ಕೆ ಆಸರೆಯಾಗಿದ್ದು ವಿಶೇಷ, ದೊಡ್ಡಾಟದ ಬಹುಮುಖ್ಯ ಕಲೆಯಾದ ಮದ್ದಳೆ ವಾದನದಲ್ಲಿ ಅಸೀಮ ಹಿಡಿತ. ಬಯಲಾಟಕ್ಕಾಗಿ ಜೀವನ ಮುಡಿಪಿಟ್ಟ ಚನ್ನಬಸಪ್ಪ ಕರ್ನಾಟಕದ ನಾನಾ ಕಡೆ, ಗಡಿಭಾಗದಲ್ಲಿ ಅರವತ್ತು ವರ್ಷಗಳಿಂದಲೂ ದೊಡ್ಡಾಟದಲ್ಲಿ ಮದ್ದಳೆ ಬಾರಿಸುವ ಮೂಲಕ ನಿರಂತರ ಕಲಾಸೇವೆ. ನಶಿಸಿಹೋಗುತ್ತಿರುವ ದೊಡ್ಡಾಟ ಕಲೆಯ ಉಳಿವಿಗಾಗಿ ಹೊಸ ತಲೆಮಾರಿನ ಯುವಕ- ಯುವತಿಯರಿಗೆ ದೊಡ್ಡಾಟದ ಸಂಗೀತ ಮತ್ತು ಮದ್ದಳೆ ವಾದನದ ತರಬೇತಿ ನೀಡಿದ ಕಲಾಗುರು. ಅನೇಕ ರಾಜ್ಯ- ಜಿಲ್ಲಾಮಟ್ಟದ ಪ್ರಶಸ್ತಿಗಳಿಗೆ ಸತ್ತಾತರು.

Categories
ಬಯಲಾಟ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆಂಪವ್ವ ಯಲ್ಲಪ್ಪ ಹರಿಜನ

ಗ್ರಾಮೀಣ ಭಾಗದ ದಿಟ್ಟ ಪ್ರತಿಭೆ ಕೆಂಪವ್ವ ಯಲ್ಲಪ್ಪ ಹರಿಜನ, ನಾಡಿನುದ್ದಕ್ಕೂ ಸಣ್ಣಾಟ ಕಲೆಯ ಕಂಪು ಸೂಸಿ ಕಲಾರಸಿಕರ ಮನಗೆದ್ದ ಅಪೂರ್ವ ಕಲಾವಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಅರಭಾವಿಯ ಕೆಂಪವ್ವ ಹರಿಜನ ಕಲೆಯನ್ನೇ ಅಕ್ಷರವಾಗಿ ಕಲಿತು ಬೆಳಗಿದಾಕೆ. ಸಣ್ಣಾಟ ಕಲೆ ಕರಗತ ಮಾಡಿಕೊಂಡ ಕೆಂಪವ್ವ ‘ಸಂಗ್ಯಾ-ಬಾಳ್ಯಾ’ ಹಾಗೂ ರಾಧಾನಾಟ ಸಣ್ಣಾಟಗಳಲ್ಲಿ ಚಿಮನಾ ಪಾತ್ರಧಾರಿ, ಹಾಡುಗಾರಿಕೆ-ಕುಣಿತದಲ್ಲೂ ಸೈ ಎನಿಸಿಕೊಂಡ ಪ್ರತಿಭೆ. ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿ ಸಣ್ಣಾಟ ಕಲೆಯ ಮೂಲಕ ಭಾಷಾ ಬಾಂಧವ್ಯವೃದ್ಧಿಗೆ ಕೊಟ್ಟ ಕೊಡುಗೆ ಅಪಾರ. ಚೆನ್ನೈ, ದೆಹಲಿ, ಮುಂಬಯಿ, ಕಾಸರಗೋಡು, ಸೊಲ್ಲಾಪುರದಲ್ಲೂ ಕಲಾಪ್ರದರ್ಶನ. ನೂರಕ್ಕೂ ಅಧಿಕ ಜನರಿಗೆ ಕಲಾನಿರ್ದೇಶನ ಮಾಡಿದ ಗುರುಮಾತೆ. ನಾಲ್ಕು ದಶಕದಿಂದ ಸಣ್ಣಾಟ ಕಲಾಸೇವಾನಿರತೆ. ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹತ್ತಕ್ಕೂ ಅಧಿಕ ರಾಜ್ಯ ಪ್ರಶಸ್ತಿಗಳು, ೨೩ಕ್ಕೂ ಹೆಚ್ಚು ಜಿಲ್ಲಾ ಪ್ರಶಸ್ತಿ-ನೂರಾರು ಗೌರವ ಸನ್ಮಾನಗಳಿಂದ ಭೂಷಿತ ಕಲಾವಂತೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಹಕಾರ

ಡಾ. ಸಿ.ಎನ್. ಮಂಚೇಗೌಡ

ಸಹಕಾರ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದ ಮಹನೀಯರು ಡಾ. ಸಿ.ಎನ್. ಮಂಚೇಗೌಡ. ಅಪಾರ ತಜ್ಞತೆ, ದಕ್ಷತೆ, ವೃತ್ತಿಪರತೆಯಿಂದ ಸಾಧನೆಗೈದ ಕರ್ನಾಟಕದ ಕುರಿಯನ್.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಪುಟ್ಟಹಳ್ಳಿಯಲ್ಲಿ ಜನಿಸಿದ ಮಂಚೇಗೌಡರು ಬಿಎಸ್ಸಿ ಪದವೀಧರರು, ಡೈರಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಸಂಶೋಧಕರು. ಯಲಹಂಕ ಹಾಗೂ ಬೆಂಗಳೂರು ಡೈರಿಯ ಕಾರ್ಯನಿರ್ವಾಹಕರಾಗಿ ಬರೋಬ್ಬರಿ ನಾಲ್ಕು ದಶಕಗಳ ಕಾಲ ನಿಸ್ಪೃಹ ಸೇವೆ. ನಂದಿನಿ ಬ್ರಾಂಡ್ನ ರೂವಾರಿ. ಮುದ್ರಾ ಎಮ್ಮೆ ತಳಿಯಿಂದ ಬೆಂಗಳೂರು ಡೈರಿ ಉತ್ಪಾದನೆ ಹೆಚ್ಚಿಸಿದ ಹೆಗ್ಗಳಿಕೆ. ವಿದೇಶಗಳಿಂದ ವಿಶೇಷ ಪಶುತಳಿಗಳನ್ನು ತಂದು ಕ್ಷೀರಕ್ರಾಂತಿಗೆ ಕಾರಣೀಕರ್ತರಾದ ಅಗ್ಗಳಿಕೆ. ಬೆಂಗಳೂರು ಡೈರಿಗೆ ಅತ್ಯುತ್ತಮ ಡೈರಿ ರಾಷ್ಟ್ರಪತಿ ಪ್ರಶಸ್ತಿ ತಂದುಕೊಟ್ಟ ಸಾರ್ಥಕತೆ, ರಾಷ್ಟ್ರಪತಿಗಳ ಮೆರಿಟ್ ಅವಾರ್ಡ್, ಗ್ಲೋಬಲ್ ಉದ್ಯೋಗ ಅವಾರ್ಡ್, ಕೆಂಪೇಗೌಡ ಪ್ರಶಸ್ತಿ, ತುಮಕೂರು ವಿವಿ ಗೌರವ ಡಾಕ್ಟರೇಟ್ಗೆ ಭಾಜನರಾದ ಮಂಚೇಗೌಡರು ಭಾರತ ಸರ್ಕಾರದ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಹೆಮ್ಮೆಯ ಕನ್ನಡಿಗರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಚಿಂದಿ ವಾಸುದೇವಪ್ಪ

ಮೀನು ಕೃಷಿ ವಿಜ್ಞಾನದಲ್ಲಿ ರಾಷ್ಟ್ರದಲ್ಲೇ ಅಚ್ಚಳಿಯದ ಹೆಸರು ಡಾ. ಚಿಂದಿ ವಾಸುದೇವಪ್ಪ, ಪ್ರಖರ ಪಾಂಡಿತ್ಯ, ದಕ್ಷ ಆಡಳಿತ, ಜ್ಞಾನದ ಶಿಖರವೆನಿಸಿದ ಕೃಷಿ ತಜ್ಞರು.
ಕೃಷಿ ವಿಜ್ಞಾನ ಕ್ಷೇತ್ರಕ್ಕೆ ಮಲೆನಾಡಿನ ಕೊಡುಗೆ ಡಾ. ಚಿಂದಿ ವಾಸುದೇವಪ್ಪ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ಹುಟ್ಟೂರು. ತವರೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮಂಗಳೂರು ವಿವಿಯಲ್ಲಿ ಮೀನುಗಾರಿಕೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ. ಕೇರಳದ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿಎಚ್ಡಿ ಪಡೆದ ಬಳಿಕ ಅನೇಕ ಕೃಷಿ ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ನಿರಂತರ ಸೇವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳ ನಿರ್ದೇಶಕ- ಸಲಹೆಗಾರರಾಗಿಯೂ ದುಡಿದ ಕೀರ್ತಿ, ಬೆಂಗಳೂರು ಕೃಷಿ ವಿವಿಯ ಡೀನ್ ಆಗಿದ್ದ ಡಾ. ಚಿಂದಿ ವಾಸುದೇವಪ್ಪ ಹರಿಯಾಣದ ರಾಷ್ಟ್ರೀಯ ಆಹಾರ ಸಂಸ್ಕರಣಾ ಸಂಸ್ಥೆ ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯ ಅಭಿವೃದ್ಧಿಗೆ ಜ್ಞಾನಧಾರೆಯೆರೆದ ವಿಶ್ರಾಂತ ಕುಲಪತಿಗಳು,

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ. ಉಡುಪಿ ಶ್ರೀನಿವಾಸ

ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಕೀರ್ತಿ ಬೆಳಗಿದ ಸಾಧಕಚೇತನ ಪ್ರೊ. ಉಡುಪಿ ಶ್ರೀನಿವಾಸ, ನಾಡಿನ ಅತ್ಯುತ್ತಮ ಅಭಿಯಂತರರು, ವೈಜ್ಞಾನಿಕ ಸಂಶೋಧಕರು ಮತ್ತು ದಕ್ಷ ಉದ್ಯಮಿ.
ಉಡುಪಿಯಲ್ಲಿ ೧೯೪೭ರ ಫೆಬ್ರವರಿ ೧೪ರಂದು ಜನಿಸಿದ ಶ್ರೀನಿವಾಸ ಬಡಕುಟುಂಬದ ಕೂಸು. ಅಕ್ಷರದಿಂದಲೇ ಅರಳಿದ ಮೇರು ಪ್ರತಿಭೆ, ಶಾಲಾ ದಿನಗಳಿಂದಲೂ ಅತ್ಯುತ್ತಮ ವಿದ್ಯಾರ್ಥಿಯಾದ ಉಡುಪಿ ಶ್ರೀನಿವಾಸ ಮದ್ರಾಸ್ನ ಪ್ರತಿಷ್ಠಿತ ಐಐಟಿ ಸಂಸ್ಥೆಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್., ಎಂ.ಟೆಕ್. ಮಾಡಿದರು. ಬೆಂಗಳೂರು ಐಐಎಸ್ಸಿಯಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದ ಪ್ರತಿಭಾಶಾಲಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಯೋಜನಾ ಸಿಬ್ಬಂದಿಯಾಗಿ ವೃತ್ತಿ ಬದುಕು ಆರಂಭಿಸಿ ಸಹಾಯಕ ಪ್ರಾಧ್ಯಾಪಕ, ಸಹಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಅನನ್ಯ ಸೇವೆ. ಭಾರತಕ್ಕೆ ಕ್ಯಾಪಿಡ್ ಪ್ರೋಟೋಟೈಪಿಂಗ್ ಪರಿಚಯಿಸಿದ ಮಹನೀಯರು, ತಂತ್ರಜ್ಞಾನದ ಹಲವು ಉಪಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು.

Categories
ಪರಿಸರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎನ್.ಡಿ. ಪಾಟೀಲ

ಸರ್ಕಾರಿ ಕೆಲಸದ ನಡುವೆಯೂ ಪರಿಸರ ರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡವರು ಎನ್.ಡಿ. ಪಾಟೀಲ. ೨೦ ಸಾವಿರಕ್ಕೂ ಅಧಿಕ ಸಸಿಗಳ ನೆಟ್ಟು ಪೋಷಿಸಿದ ಪರಿಸರ ಸಂರಕ್ಷಕ.
ವಿಜಯಪುರ ಜಿಲ್ಲೆಯ ಡೂಮನಾಳದ ನಾನಾಸಾಹೇಬ ದ್ಯಾಮನಗೌಡ ಪಾಟೀಲರು ಹುಟ್ಟಿದ್ದು ೧೯೫೫ರ ಏಪ್ರಿಲ್ ೧೩ರಂದು. ಬಿ.ಎ. ಪದವೀಧರರು. ವೃತ್ತಿ ಕಂದಾಯ ಇಲಾಖೆಯ ಸರ್ಕಾರಿ ನೌಕರಿ, ಪ್ರವೃತ್ತಿ ಪರಿಸರ ಸಂರಕ್ಷಣೆ. ೩೮ ವರ್ಷಗಳ ಸುದೀರ್ಘ ಸೇವಾವಧಿಯ ಉದ್ದಕ್ಕೂ ಸಸಿಗಳ ಪೋಷಣೆಗೈದ, ನಿವೃತ್ತಿಯ ಹಣವನ್ನೆಲ್ಲಾ ಗಿಡಗಳನ್ನು ನೆಡಲು ವ್ಯಯಿಸಿದ ಪರಿಸರಪ್ರೇಮಿ. ವಿಜಯಪುರ ಹಾಗೂ ಇಂಡಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದ ಸಾರ್ಥಕತೆ. ಬೆಂಗಳೂರಿನ ತಿಂಡ್ಲುವಿನಲ್ಲೂ ೩೩೦ ಸಸಿ ನೆಟ್ಟಿರುವ ಎನ್.ಡಿ. ಪಾಟೀಲರ ಪರಿಸರಪೂರಕ ಚಟುವಟಿಕೆಗಳಿಗೆ ಆದಿ ಮಾತ್ರ ಅಂತ್ಯವೆಂಬುದೇ ಇಲ್ಲ. ಅನುದಿನ ಅನುಕ್ಷಣ ಪರಿಸರದ್ದೇ ಧ್ಯಾನ, ಸಂರಕ್ಷಣೆಯದ್ದೇ ಆಲೋಚನೆ. ಜಿಲ್ಲಾ ರಾಜ್ಯ ಮಟ್ಟದ ಹಲವು ಪ್ರಶಸ್ತಿ-ಸನ್ಮಾನಗಳಿಗೆ ಪಾತ್ರರಾಗಿರುವ ಪಾಟೀಲರು ನೈಜ ಪರಿಸರಮಿತ್ರ

Categories
ಪರಿಸರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆಂಪರೆಡ್ಡಿ ಅಮರನಾರಾಯಣ

ಪರಿಸರ ಸಂರಕ್ಷಣೆ-ಪೋಷಣೆಗಾಗಿ ಶ್ರಮಿಸಿದ ವಿರಳಾತಿವಿರಳ ನಿವೃತ್ತ ಐ.ಎ.ಎಸ್. ಕೆಂಪರೆಡ್ಡಿ ಅಮರನಾರಾಯಣ. ಪ್ರತಿದಿನವೂ ಪರಿಸರದಿನವಾಗಬೇಕೆಂಬ ಉದ್ವೇಷವನ್ನು ನಿಜವಾಗಿಸಿದ ಅಪ್ಪಟ ಹಸಿರು ಜಿಲ್ಲಾಧಿಕಾರಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮದ ಕೆಂಪರೆಡ್ಡಿ ಅಮರನಾರಾಯಣರು ಸ್ನಾತಕೋತ್ತರ ಪದವಿ, ಎಲ್.ಎಲ್.ಬಿ. ಬಳಿಕ ಇಂಗ್ಲೆಂಡ್ನ ಲೆಸ್ಟರ್ ವಿವಿಯಲ್ಲಿ ಟಿ.ಸಿ.ಟಿ. ಫೆಲೋಶಿಪ್ ಪಡೆದು ಐ.ಎ.ಎಸ್. ಅಧಿಕಾರಿಯಾದವರು. ಬಾಲ್ಯದಿಂದಲೂ ಉತ್ಕಟ ಪರಿಸರ ಪ್ರೇಮ. ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಯಾಗಿದ್ದಾಗ ಅಮರನಾರಾಯಣ ಅವರು ಜಾರಿಗೊಳಿಸಿದ ಪರಿಸರಪೂರಕ ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲ. ಕೋಟಿನಾಟ, ಕೃಷಿ ಅರಣ್ಯ, ವೃಕ್ಷ ರಕ್ಷ, ಕಲ್ಲರಳಿ ಹಣ್ಣಾಗಿ, ಪರಿಮಳ ವನ, ದುರ್ಗದ ಮೊರೆ-ಹಸಿರಿಗೆ ಕೆರೆ, ಸ್ವಚ್ಛತೆಯೆ ಸ್ವರ್ಗ, ಕಸದಿಂದ ಕಾಸು, ಪ್ಲಾಸ್ಟಿಕ್ ಮುಕ್ತ ವಲಯ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಪರಿಸರಮಿತ್ರ ಕಲ್ಯಾಣಿಗಳ ಜೀರ್ಣೋದ್ಧಾರ, ಉದ್ಯಾನವನಗಳ ರಕ್ಷಣೆ, ೩೫ ಸಾವಿರಕ್ಕೂ ಹೆಚ್ಚು ಸಸಿ, ೧೪೦೦ಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದ, ನಿವೃತ್ತಿಯ ನಂತರವೂ ಪರಿಸರ ರಕ್ಷಣೆಯಲ್ಲಿ ತೊಡಗಿರುವ ಸಾಧಕರು.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಸಿದ್ರಾಮಪ್ಪ ಬ. ಪಾಟೀಲ

ಭೂತಾಯಿ ಮಕ್ಕಳ ಹಿತರಕ್ಷಣೆಗೆ ಬದುಕನ್ನೆ ಮೀಸಲಿಟ್ಟ ರೈತಪರ ಚಿಂತಕ ಡಾ. ಸಿದ್ರಾಮಪ್ಪ ಬ. ಪಾಟೀಲ. ಕೃಷಿ ಸಾಹಿತಿ, ಸಂಘಟನಾಕಾರರಾಗಿ ಅವರದ್ದು ಅನನ್ಯ ಸೇವೆ.
ಕಲಬುರಗಿ ತಾಲ್ಲೂಕಿನ ಶಾಂತಿನಗರದವರಾದ ಸಿದ್ರಾಮಪ್ಪ ಬಿ.ಎ., ಎಲ್ಎಲ್ಬಿ ಪದವೀಧರರು. ಆದಾಯ ತರುವ ವಕಾಲತ್ತು ತೊರೆದು ರೈತಪರ ಹೋರಾಟಕ್ಕೆ ಧುಮುಕಿದವರು. ಸಾವಯವ ಕೃಷಿಗೆ ಬೆಂಬಲ, ರೈತಪರ ಹೋರಾಟದ ಮುಂದಾಳತ್ವ, ನೊಂದ ರೈತರಲ್ಲಿ ಆತ್ಮವಿಶ್ವಾಸ ತುಂಬುವಿಕೆ, ಚಳವಳಿಗಳಿಗೆ ರೈತರ ಸಂಘಟನೆ-ರವಾನೆ, ಕೃಷಿಕರಿಗಾಗಿಯೇ ಕವನ ರಚನೆ, ಆಳಂದ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಸೇವೆ. ಬಸವತತ್ವ ಪ್ರಚಾರ, ಹತ್ತಾರು ಸಂಘಟನೆಗಳಲ್ಲಿ ಸೇವೆ ಮುಂತಾದ ಬಹುಕೃತ ಸಾಮಾಜಿಕ ಕಾರ್ಯಗಳಲ್ಲಿ ಬಹುದಶಕಗಳಿಂದಲೂ ತನ್ಮಯರಾಗಿರುವ ಸಿದ್ರಾಮಪ್ಪ ರೈತರಿಗಾಗಿ ಕಾರಾಗೃಹವಾಸ ಅನುಭವಿಸಿದ ರೈತರಕ್ಷಕ. ಭಾರತ ಕೃಷಿಕ ಸಮಾಜದ ಸದಸ್ಯರಾಗಿ 30 ವರ್ಷಗಳಿಂದ ಸೇವೆಗೈಯುತ್ತಿರುವ, ಗೌರವ ಡಾಕ್ಟರೇಟ್ಗೆ ಪಾತ್ರವಾಗಿರುವ ರೈತಜೀವಿ.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ

ಕೃಷಿ ಕ್ಷೇತ್ರದ ಅನನ್ಯ ಸಾಧಕಿಯರಲ್ಲಿ ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ಪ್ರಮುಖರು. ವಿಶ್ವವಿದ್ಯಾಲಯಕ್ಕೂ ಸಾಟಿ ಇಲ್ಲದಂತಹ ಕೃಷಿ ಕ್ಷೇತ್ರ ಸ್ಥಾಪಿಸಿದ ಹೆಮ್ಮೆಯ ರೈತಮಹಿಳೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲೂರು ತಾಲ್ಲೂಕಿನ ಬಿ.ಜಿ. ಕೆರೆಯವರಾದ ಸುಮಂಗಲಮ್ಮ ಓದಿದ್ದು ಪಿಯುಸಿವರೆಗೆ ಮಾತ್ರ ಆದರೆ ಸಾಧನೆ ವಿವಿ ಮಟ್ಟದ್ದು. ೮೦ ಎಕರೆ ವಿಶಾಲವಾದ ಜಾಗದಲ್ಲಿ ತಮ್ಮದೇ ‘ವಸುಂಧರ ಕೃಷಿ ಕ್ಷೇತ್ರ’ ಸ್ಥಾಪಿಸಿದ ಕೃಷಿಪಂಡಿತೆ. ತೆಂಗು ಬೆಳೆ, ಹುಣಸೆ ಮರಗಳ ಪೋಷಣೆ, ರೇಷ್ಮೆ ಬೆಳೆ, ರೇಷ್ಮೆ ಹುಳುಗಳ ಸಾಕಾಣಿಕೆ, ಅರಣ್ಯ ಬೆಳೆಗಳ ಅಭಿವೃದ್ಧಿ, ಪಶುಸಂಗೋಪನೆ, ಮೇಕೆ ಸಾಕಾಣಿಕೆ, ಎರೆಹುಳು ಗೊಬ್ಬರ ಮತ್ತು ಜೇನು ಸಾಕಾಣಿಕೆಯಲ್ಲಿ ಅನವರತ ನಿರತರು. ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆ ಪರವಾನಿಗೆ ಪಡೆದ ಮೊದಲ ಮಹಿಳೆ, ೬೦ ಕೃಷಿ ಕಾರ್ಮಿಕರ ಅನ್ನದಾತೆ. ನಲವತ್ತು ವರ್ಷಗಳಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸುಮಂಗಲಮ್ಮ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಉತ್ತಮ ಸಾಧಕಿ ಮತ್ತಿತರ ಗೌರವಗಳ ಪುರಸ್ಕೃತರು.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಸೂರಜಸಿಂಗ್ ಕನ್ಸಿಂಗ್ ರಜಪೂತ

ಸಾವಯವ ಕೃಷಿಯಲ್ಲಿ ಅಚ್ಚರಿಯ ಸಾಧನೆಗೈದವರು ಸೂರಜಸಿಂಗ್ ರಜಪೂತ, ಗೋ ಆಧಾರಿತ ಒಕ್ಕಲುತನದ ಮೂಲಕ ಗಮನಸೆಳೆದಿರುವ ಪ್ರಗತಿಪರ ಕೃಷಿಕ.
ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಮದಕಟ್ಟಿ ಗ್ರಾಮದ ಸೂರಜ್ ಸಿಂಗ್ ಹಿರಿಯ ಹೋರಾಟಗಾರರು. ೧೯೫೨ರ ಫೆಬ್ರವರಿ ೨ರಂದು ಕೃಷಿಕುಟುಂಬದಲ್ಲಿ ಜನನ. ಸೇನೆ ಸೇರುವ ಕನಸು ನನಸಾಗದಾಗ ಕೃಷಿಯತ್ತ ಒಲವು. ೧೯೯೭ರಲ್ಲಿ ಒಂದೂವರೆ ಎಕರೆ ಭೂಮಿಯಲ್ಲಿ ಕುಂಬಳಕಾಯಿ ಬೆಳೆದು ಪಡೆದ ಐದು ಲಕ್ಷ ರೂಪಾಯಿ ಆದಾಯದಿಂದ ಖರೀದಿಸಿದ ಆರು ಎಕರೆ ಭೂಮಿಯಲ್ಲಿ ಹಣ್ಣು ಮತ್ತು ತರಕಾರಿಯ ಭರ್ಜರಿ ಇಳುವರಿ ತೆಗೆದವರು. ಆರು ಸಾವಿರ ಗಿಡಗಳ ನೆಡುವಿಕೆ, ೩೦ ಗೋವುಗಳ ಪೋಷಣಾನಿರತ ಸೂರಜಸಿಂಗ್ರ ನಿರಂತರ ಹೊಸತನ, ಪ್ರಯೋಗಶೀಲತೆ ಬೇಸಾಯಗಾರರಿಗೆ ಸದಾ ಮಾದರಿ, ನಾಲ್ಕು ದಶಕಗಳಿಂದಲೂ ಸಾವಯವ ಕೃಷಿಯಲ್ಲೇ ತನ್ಮಯರಾಗಿರುವ ಸೂರಜಸಿಂಗ್ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸದಸ್ಯತ್ವ ಸೇರಿ ಹಲವು ಪ್ರಶಸ್ತಿ-ಗೌರವಗಳಿಗೂ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಹೆಚ್.ಎಂ. ವೆಂಕಟಪ್ಪ

ಗ್ರಾಮೀಣ ಜನರ ಆರೋಗ್ಯ ರಕ್ಷಣೆಯಲ್ಲಿ ಸಾರ್ಥಕತೆ ಕಂಡವರು ಡಾ|| ಹೆಚ್.ಎಂ. ವೆಂಕಟಪ್ಪ. ನಿಸ್ಪೃಹ ಸೇವೆ, ದಕ್ಷ ಆಡಳಿತ, ಅತ್ಯುತ್ತಮ ಪರಿಚಾರಿಕೆಗೆ ಹೆಸರಾದ ವೈದ್ಯಶಿರೋಮಣಿ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದ ರೈತಾಪಿ ಕುಟುಂಬದವರಾದ ವೆಂಕಟಪ್ಪ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ, ಬಿ.ಎಂ.ಸಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಸೇವೆ ಆರಂಭ, ಸತತ ೨೪ ವರ್ಷಗಳ ಕಾಲ ಹಳ್ಳಿಗರ ಜೀವರಕ್ಷಕರಾಗಿ ಸಾರ್ಥಕ ಸೇವೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಿದ ವೈದ್ಯಾಧಿಕಾರಿ, ಬೆಂಗಳೂರಿನ ಕುಷ್ಟರೋಗಿಗಳ ಆಸ್ಪತ್ರೆಯಲ್ಲೂ ಮಾನವೀಯ ಸೇವೆ. ೧೯೯೪ರಲ್ಲಿ ಸ್ವಯಂ ನಿವೃತ್ತಿ, ಬೆಂಗಳೂರಿನ ಎರಡು ಕಡೆ ಅತ್ಯಾಧುನಿಕ ಉಪಕರಣಗಳುಳ್ಳ ಕಣ್ವ ಡಯಾಸ್ಪೋಸ್ಟಿಕ್ ಕೇಂದ್ರ’ ಸ್ಥಾಪನೆ. ಕಡಿಮೆ ದರದಲ್ಲಿ ವೈದ್ಯಕೀಯ ತಪಾಸಣೆ-ಪರಿಣಿತರಿಂದ ಮಾಹಿತಿ-ಮಾರ್ಗದರ್ಶನ ನೀಡುವ ಕಾಯಕದಲ್ಲಿ ಇದೀಗ ನಿರತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಎ. ನಾಗರತ್ನ

ವೈದ್ಯಲೋಕದಲ್ಲಿ ಮಾನವೀಯ ಸೇವೆ-ಅಂತಃಕರಣದ ನಡೆಗೆ ಹೆಸರಾದ
ಡಾ|| ಎ.ನಾಗರತ್ನ, ಗಣಿನಾಡು ಬಳ್ಳಾರಿಯ ಹಿರಿಯ ವೈದ್ಯೆ, ಹಿರಿಯ ನಾಗರಿಕರ ಆಶ್ರಯದಾತೆ. ಅಪರೂಪದ ವೈದ್ಯೆ ೭೦ರ ದಶಕದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದ ಡಾ. ನಾಗರತ್ನ ಮಣೆ ಮತ್ತು ಮುಂಬಯಿಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರ್ಣಗೊಳಿಸಿದರು. ವೃದ್ಧರನ್ನು ಕಾಡುವ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಶೇಷ ಪರಿಣಿತಿ, ಬಳ್ಳಾರಿಯಲ್ಲಿ ಸ್ವಂತ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ ನಡೆಸುವುದರ ಜೊತೆಗೆ ಕೇಂದ್ರ ಸರ್ಕಾರದ పెటుంబ ಯೋಜನಾ ಸಂಸ್ಥೆಯ ಸಹಭಾಗಿತ್ವದಲ್ಲಿ ನೂರಾರು ಲಸಿಕಾ ಶಿಬಿರಗಳ ಆಯೋಜನೆ. ತಂದೆಯ ಕನಸಿನಂತೆ ೧೯೯೮ರಲ್ಲಿ ಹಿರಿಯ ನಾಗರಿಕರಿಗಾಗಿಯೇ ‘ಕೃಷ್ಣ ಸನ್ನಿಧಿ’ ಆಶ್ರಮ ಸ್ಥಾಪಿಸಿ ಮಾನವೀಯ ಸೇವೆ. ೨೦೧೨ರಲ್ಲಿ ಬಳ್ಳಾರಿಯ ಹೊರವಲಯದ ಸಂಗನಕಲ್ಲುನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಆಸ್ಪತ್ರೆಯಿರುವ ಬೃಹತ್ ವೃದ್ಧಾಶ್ರಮ ನಿರ್ಮಾಣ. ೮೦ ವೃದ್ಧರ ಆರೈಕೆಯಲ್ಲಿ ಅನವರತ ನಿರತರು. ವೃದ್ಧರ ಸೇವೆಯಲ್ಲೇ ಕೃಷ್ಣನ ಕಂಡ ಸೇವಾಸಿಂಧು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಬಿ.ಎಸ್. ಶ್ರೀನಾಥ್

ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಸಾಧನೆ ಮತ್ತು ಸೇವೆಗೈದವರು ಡಾ|| ಬಿ.ಎಸ್. ಶ್ರೀನಾಥ್. ನಾಡಿನ ಅತ್ಯುತ್ತಮ ಶಸ್ತ್ರಚಿಕಿತ್ಸಕ, ದಕ್ಷ ಆಡಳಿತಗಾರ, ಕ್ಯಾನ್ಸರ್ ಪೀಡಿತರ ದಯಾಬಂಧು.
ವೈದ್ಯಲೋಕಕ್ಕೆ ಮಲೆನಾಡಿನ ಕೊಡುಗೆ ಡಾ|| ಬಿ.ಎಸ್. ಶ್ರೀನಾಥ್, ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ೧೯೫೦ರಲ್ಲಿ ಜನಿಸಿದ ಶ್ರೀನಾಥ್ ಬಾಲ್ಯದಲ್ಲೇ ವೈದ್ಯರಾಗುವ ಕನಸು ಕಂಡವರು. ಮೈಸೂರಲ್ಲಿ ಎಂ.ಬಿ.ಬಿ.ಎಸ್, ಚಂಡೀಗಢದಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲೆಂಡ್ನಲ್ಲಿ ವಿಶೇಷ ತರಬೇತಿ ಪಡೆದ ಪ್ರತಿಭಾವಂತ ವೈದ್ಯ ವಿದ್ಯಾರ್ಥಿ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶೇಷ ಪರಿಣಿತಿ, ಪುದುಚೇರಿ, ಚಂಡೀಗಢ, ಕೇರಳ, ಇಂಗ್ಲೆಂಡ್, ಬೆಂಗಳೂರಿನ ಕಿದ್ವಾಯಿ, ಬೆಂಗಳೂರು ಕ್ಯಾನ್ಸರ್ ಸಂಸ್ಥೆ, ಎಚ್ಸಿಜಿ, ರಂಗದೊರೈ ಹಾಗೂ ಶಂಕರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಮಹತ್ವದ ಸೇವೆ. ಕ್ಯಾನ್ಸರ್ ರೋಗಿಗಳಿಗೆ ಹೊಸ ಬದುಕು ಕೊಟ್ಟ ಧನ್ವಂತರಿ, ಸದ್ಯ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ, ಹತ್ತಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಡಾ. ಶ್ರೀನಾಥ್ ರಾಜ್ಯದ ಹೆಮ್ಮೆಯ ವೈದ್ಯರಲ್ಲೊಬ್ಬರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಅಶೋಕ್ ಆರ್. ಸೊನ್ನದ್

ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ಅನ್ವರ್ಥಕ ಡಾ|| ಅಶೋಕ್ ಆರ್. ಸೊನ್ನದ್. ನಾಡು ಕಂಡ ಅಪರೂಪದ ಅನುಭವಿ ವೈದ್ಯ, ಸೇವೆಗೆ ನಿಂತ ಸಂತ. ಲಕ್ಷಾಂತರ ಜನರ ಆರೋಗ್ಯ ರಕ್ಷಿಸಿದ ಸಂಜೀವಿನಿ.
ಬಾಗಲಕೋಟೆ ಜಿಲ್ಲೆ ಮುಧೋಳದವರಾದ ಅಶೋಕ್ ಸೊನ್ನದ್ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯ ಪದವಿ, ಗುಜರಾತ್ ಅಹಮದಾಬಾದ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಮೆರಿಕಾಗೆ ತೆರಳಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಫಿಲೆಡಾಲ್ಪಿಯಾದಲ್ಲಿ ತರಬೇತಿಗೊಂಡವರು. ಅಮೆರಿಕಾದ ವಿವಿಧ ಆಸ್ಪತ್ರೆಗಳಲ್ಲಿ ೩೬ ವರ್ಷಗಳ ಸುದೀರ್ಘ ಸೇವೆ, ನೂರಾರು ಯಶಸ್ವಿ ಶಸ್ತ್ರಚಿಕಿತ್ಸೆ, ಅಪಾರ ಅನುಭವ-ಗೌರವ ಸಂಪಾದನೆ. ೨೦೧೦ರಲ್ಲಿ ವೈಭೋಗದ ಜೀವನ-ಕುಟುಂಬ ತೊರೆದು ಭಾರತಕ್ಕೆ ವಾಪಸ್, ಹುಟ್ಟೂರಿನಲ್ಲಿ ತಾಯಿಯ ಹೆಸರಿನಲ್ಲಿ ಮಧುಮೇಹ ತಪಾಸಣೆ ಹಾಗೂ ಸಂಶೋಧನೆ ಕೇಂದ್ರ ಸ್ಥಾಪನೆ, ದಶಕದ ಅವಧಿಯಲ್ಲಿ ಲಕ್ಷಾಂತರ ಜನರಿಗೆ ಉಚಿತ ಸೇವೆ, ಹೊಸ ಬದುಕು ನೀಡಿದ ಮಾನವೀಯ ಕಾರ್ಯ. ಜಿಲ್ಲೆಯಲ್ಲಿ ಆರೋಗ್ಯಕ್ರಾಂತಿಗೆ ಮುನ್ನುಡಿ ಬರೆದ ಧನ್ವಂತರಿ ಅಶೋಕ್ ಅವರ ಪಾಲಿಗೆ ಚಿಕಿತ್ಸೆಯೇ ಪ್ರಜೆ, ರೋಗಿಗಳೇ ದೇವರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೋಹಿನಿ ಸಿದ್ದೇಗೌಡ

ಶೋಷಿತ ಮಹಿಳೆಯರನ್ನು ಸಲುಹಿದ ಅಪರೂಪದ ಸಮಾಜಸೇವಕಿ ಮೋಹಿನಿ ಸಿದ್ದೇಗೌಡ, ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶ್ರಮಿಸಿದ ಅಪ್ಪಟ ಅಬಲೆಯರ ಆಶಾಕಿರಣ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಅಂಜುಗೊಂಡನಹಳ್ಳಿಯಲ್ಲಿ ಜನಿಸಿದ ಮೋಹಿನಿ ಸಿದ್ದೇಗೌಡ ಚಿಕ್ಕಮಗಳೂರಿನ ಸೊಸೆ. 23ನೇ ವಯಸ್ಸಿನಿಂದಲೇ ಮಹಿಳಾ ಸಮಾಜದ ಸದಸ್ಯೆಯಾಗಿ ಸಮಾಜಸೇವಾ ಕಾರ್ಯಾರಂಭ. ಮಹಿಳಾ ಶೋಷಣೆ, ಮದ್ಯಪಾನ, ವರದಕ್ಷಿಣೆ ಕಿರುಕುಳ, ಸಾರಾಯಿ ಮಾರಾಟದ ವಿರುದ್ಧ ಗುಡುಗಿದ ಸ್ತ್ರೀದನಿ. ಕಸ್ತೂರಿಬಾ ಕೌಟುಂಬಿಕ ಸಲಹಾ ಕೇಂದ್ರದ ಕಾರ್ಯದರ್ಶಿಯಾಗಿ ನೊಂದ ಮಹಿಳೆಯರಿಗೆ ಆಸರೆ. ನಾಲ್ಕು ದಶಕದ ಅನನ್ಯ ಸೇವೆ. ವಿದ್ಯುಚ್ಛಕ್ತಿ ಮಂಡಳಿಯ ಮಹಿಳೆಯರ ಕ್ಲಬ್ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಿಮ್ಯಾಂಡ್ ಹೋಂ ಸದಸ್ಯೆ, ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯೆ, ಸಹಕಾರಿ ಸಂಘದ ಸದಸ್ಯೆ, ನಗರಸಭೆಯ ಸದಸ್ಯೆ ಸೇರಿದಂತೆ ಹತ್ತಾರು ಸಂಸ್ಥೆಗಳ ವಿವಿಧ ಹುದ್ದೆಗಳ ನಿರ್ವಹಣೆ-ಅನುಗಾಲವೂ ಸಮಾಜಸೇವೆ. ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಂದ ಭೂಷಿತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೊಹಮದ್ ಮೀರಾನ್ ಸಾಹೇಬ್

ವಿದೇಶದಲ್ಲಿದ್ದೂ ತಾಯ್ತಾಡಿನ ಸಮಾಜಸೇವೆಯಲ್ಲಿ ಅನವರತ ನಿರತರು ಮೊಹಮದ್ ಮೀರಾನ್ ಸಾಹೇಬ್. ಬಡಕುಟುಂಬಗಳ ಬಾಳು ಬೆಳಗಿದ ಹೆಮ್ಮೆಯ ಅನಿವಾಸಿ ಕನ್ನಡಿಗ
ದಕ್ಷಿಣ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಜನಿಸಿದ ಮೊಹಮದ್ ಮೀರಾನ್ ಸಾಹೇಬ್ ಶಿಕ್ಷಣದ ಬಳಿಕ ಬದುಕು ಅರಸಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದರು. ಅನಿವಾಸಿ ಭಾರತೀಯ ಉದ್ಯಮಿಯಾಗಿ ಛಾಪು ಮೂಡಿಸಿರುವ ಮೊಹಮದ್ ಮೀರಾನ್ ಸಾಹೇಬ್ ಅವರಿಗೆ ತಾಲ-ತಾಯ್ತುಡಿಯೆಂದರೆ ಅಪಾರ ಪ್ರೀತಿ. ವಿದೇಶದಲ್ಲಿದ್ದುಕೊಂಡೇ ತವರೂರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿರಳ ಕನ್ನಡಿಗ, ಗಲ್ಫ್ನ ಕುಂದಾಪ್ರ ಕನ್ನಡ ಬಳಗ, ಶಿರೂರು ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ನಲವತ್ತು ವರ್ಷಗಳಿಂದಲೂ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡ ನಾಡು-ನುಡಿಯ ಸೇವೆ. ಕರ್ನಾಟಕದ ಹಲವೆಡೆ ಜನಪರ ಕಾರ್ಯಕ್ರಮಗಳ ಮುಖೇನ ನೂರಾರು ಬಡಕುಟುಂಬಗಳಿಗೆ ನೆರವಾದ ದಯಾಳು. ಹುಟ್ಟೂರಿಗೆ ಆ್ಯಂಬುಲೆನ್ಸ್, ಕಸದ ವಾಹನ ಸೇರಿದಂತೆ ಹಲವು ಸೌಲಭ್ಯಗಳ ಧಾರೆಯೆರೆದಿರುವ ಸಮಾಜಸೇವಕರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎಂ.ಕೆ. ಪ್ರೇಮಾ

ಧರ್ಮ-ಸಾಹಿತ್ಯ-ಸಂಗೀತದ ಮೂಲಕ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಗೆ ಶ್ರಮಿಸಿದ ಸೇವಾಚೇತನ ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಬಹುಮುಖಿ ಆಸಕ್ತಿಯ ಬಹುಶ್ರುತ ಸಾಧಕಿ.
ಕೋಲಾರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಜನಿಸಿದ ಪ್ರೇಮಾ ಅವರು ಆಗಿನ ಕಾಲದಲ್ಲೇ ಎಲ್.ಎಸ್. ಪರೀಕ್ಷೆ ಪಾಸು ಮಾಡಿದ ವಿದ್ಯಾವಂತೆ, ಭಗವದ್ಗೀತೆ ಪಠಣದಲ್ಲಿ ಪ್ರಾವೀಣ್ಯತೆ, ಹದಿನೈದನೇ ವಯಸ್ಸಿನಿಂದಲೇ ಮಕ್ಕಳಿಗೆ ‘ಗೀತಾಪಾಠ’, ಪ್ರೇಮಾರದ್ದು ಸಾಹಿತ್ಯ, ಧರ್ಮ ಮತ್ತು ಸಂಗೀತದಿಂದ ಮುಪ್ಪರಿಗೊಂಡ ವ್ಯಕ್ತಿತ್ವ, ಗಾಯಕಿ, ಗಮಕಿ, ಆಶುಕವಿಯೂ ಸಹ, ಚಿಕ್ಕಮಗಳೂರಿನ ಕೋದಂಡರಾಮ ಶ್ರೇಷ್ಠ ಅವರೊಡನೆ ಮದುವೆಯಾದ ಬಳಿಕ ಸಮಾಜಸೇವಾ ಕಾರ್ಯದಲ್ಲಿ ಪೂರ್ಣ ತಲ್ಲೀನ. ಕಾಫಿನಾಡಲ್ಲಿ ಸಮೃದ್ಧ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ಪರಿಶ್ರಮ. ಪ್ರತಿ ವರ್ಷ ಗೀತಾಜ್ಞಾನ ಯಜ್ಞ ಆಯೋಜನೆ. ಸಾವಿರಾರು ಜನರಿಗೆ ಗೀತಬೋಧನೆ-ಗೀತಾ ಪುಸ್ತಕ ವಿತರಣೆ. ವಿದೇಶಗಳಲ್ಲೂ ಹಿಂದು ಧರ್ಮದ ಪ್ರಚಾರಕಾರ್ಯ. ರಾಜ್ಯಮಟ್ಟದ ಆರವೈಶ್ಯ ಮಹಿಳಾ ಸಮ್ಮೇಳನ ಆಯೋಜಿಸಿದ ಕೀರ್ತಿ. ಪರಮಾರ್ಥ ಕೃತಿಗಾರ್ತಿ, ಆರೂವರೆ ದಶಕಗಳಿಂದ ಆಧ್ಯಾತ್ಮ-ಗಾಯನ ಕ್ಷೇತ್ರದ ಕೃಷಿಯಲ್ಲಿ ನಿರತವಾಗಿರುವ ‘ಗುರುಭಕ್ತಿರತ್ನ’ ಬಿರುದಾಂಕಿತ ಸೇವಾಮೂರ್ತಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ನಾರಾಯಣ ಸುಬ್ರಾಯ ಹೆಗಡೆ

ಬಹುರಂಗಗಳಲ್ಲಿ ಸಾರ್ಥಕ ಸಮಾಜಸೇವೆಗೈದ ಬಹುರೂಪಿ ಎನ್.ಎಸ್. ಹೆಗಡೆ (ಕುಂದರಗಿ, ಗ್ರಾಮೀಣ ಭಾಗದ ಏಳೆಗೆ ಆರು ದಶಕಗಳಿಂದಲೂ ಪರಿಶ್ರಮಿಸುತ್ತಿರುವ ಸಮಾಜಬಂಧು.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಕುಂದರಗಿಯವರಾದ ನಾರಾಯಣ ಸುಬ್ರಾಯ ಹೆಗಡೆ ಅವರು ಹರೆಯದಿಂದಲೂ ಸಮಾಜಸೇವಾನಿರತರು. ಹಿಂದುಳಿದ ಪ್ರದೇಶವೆನಿಸಿದ್ದ ಕುಂದರಗಿಯಲ್ಲಿ ಪ್ರಪ್ರಥಮ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ತೆರೆದವರು. ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರು. ಬಡಮಕ್ಕಳಿಗೆ ಅನಾಥಾಲಯ, ವಾಚನಾಲಯ ಸೌಲಭ್ಯ, ಸಹಕಾರ ಸಂಘಗಳ ಸ್ಥಾಪನೆ-ಸೇವೆ, ಹಲವು ದೇವಸ್ಥಾನಗಳ ಆಡಳಿತ ಮಂಡಳಿಯ ಸದಸ್ಯರಾಗಿ ದುಡಿಮೆ. ಸಾಹಿತ್ಯ ಪರಿಷತ್ತಿನ ಪ್ರಥಮ ಜಿಲ್ಲಾಧ್ಯಕ್ಷ, ಸಮ್ಮೇಳನಗಳ ಸಂಘಟನೆ, ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕನ್ನಡದ ಕೈಂಕರ್ಯ, ಹತ್ತಾರು ಸಂಘಟನೆಗಳ ಹೊಣೆಗಾರಿಕೆಯ ಸಮರ್ಥ ನಿರ್ವಹಣೆ, ಪತ್ರಕರ್ತ, ಅಂಕಣಕಾರರಾಗಿಯೂ ಅಕ್ಷರಸೇವೆಗೈದ ಎನ್.ಎಸ್. ಹೆಗಡೆ ಅವರು ಶ್ರಮಿಸಿದ ಕ್ಷೇತ್ರಗಳಿಲ್ಲ. ೮೭ರ ವಯದಲ್ಲೂ ಸಮಾಜಸೇವೆಗೆ ಮಿಡಿವ ವಿರಳಾತಿವಿರಳ ಜೀವಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ (ರಿ), ಧರ್ಮಸ್ಥಳ

ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ನಿರತ ಮೈಲಿಗಲ್ಲಿನ ಸಂಸ್ಥೆ ಧರ್ಮೋತ್ಥಾನ ಟ್ರಸ್ಟ್ (ರಿ), ಪುರಾತನ ಸ್ಮಾರಕಗಳ ರಕ್ಷಣೆಯಲ್ಲೂ ತೊಡಗಿರುವ ಸಮಾಜಸೇವಾ ಸಂಸ್ಥೆ.
ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾತನ ಸ್ಮಾರಕಗಳ ರಕ್ಷಣೆ ಬಲುಮುಖ್ಯವೆಂಬ ಸದಾಶಯದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ ಸಂಸ್ಥೆ ‘ಧರ್ಮೋತ್ಥಾನ ಟ್ರಸ್ಟ್’. ಕೆಲವೇ ವರ್ಷಗಳಲ್ಲಿ ರಾಜ್ಯದ ೨೫ ಜಿಲ್ಲೆಗಳಲ್ಲಿ ಒಟ್ಟು ೨೫೩ ಪುರಾತನ, ಶಿಥಿಲಗೊಂಡ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಿದ ಹೆಗ್ಗಳಿಕೆ ಈ ಟ್ರಸ್ಟ್ನದ್ದು. ಟ್ರಸ್ಟ್ನ ಸಂರಕ್ಷಣಾ ಕಾರ್ಯದ ಗುಣಮಟ್ಟ ಹಾಗೂ ಪ್ರಗತಿ ಪರಿಶೀಲಿಸಿ ಸಹಭಾಗಿತ್ವದ ಸಂಸ್ಥೆಯೆಂದು ಸರ್ಕಾರದಿಂದ ಮಾನ್ಯತೆ, ವಾರ್ಷಿಕ ಕ್ರಿಯಾಯೋಜನೆಯಡಿ ಅನುದಾನ ಬಿಡುಗಡೆ, ರಾಜ್ಯದುದ್ದಗಲಕ್ಕೂ ಶಿಥಿಲಗೊಳ್ಳುತ್ತಿರುವ ಅನೇಕ ಪುರಾತನ ದೇವಾಲಯಗಳನ್ನು ಜೀರ್ಣೋದ್ದಾರ ಮಾಡುವ ಹೆಗ್ಗುರಿಯಿಂದ ಮುನ್ನಡೆದಿರುವ ಟ್ರಸ್ಟ್ನ ಸಾಮಾಜಿಕ-ಧಾರ್ಮಿಕ ಕೈಂಕರ್ಯ ಪ್ರಶಂಸನೀಯವೂ ಹೌದು, ಮಾದರಿಯೂ ಸಹ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯುವ ಬ್ರಿಗೇಡ್

ಕೆರೆಗಳ ಸಂರಕ್ಷಣೆ, ಕಲ್ಯಾಣಿಗಳ ಜೀರ್ಣೋದ್ದಾರದಂತಹ ಸಮಾಜಮುಖಿ ಕಾರ್ಯದಲ್ಲಿ ಅನವರತ ನಿರತವಾಗಿರುವ ಅಪ್ಪಟ ಕನ್ನಡ ಸಂಸ್ಥೆ ಯುವ ಬ್ರಿಗೇಡ್, ಯುವ ಸಮುದಾಯದ ಹೊಸ ಆಶಾಕಿರಣ.
ಯುವಕರ ಶಿಕ್ಷಣ, ಸಮಾಜದ ಸ್ವಾಸ್ಥ ರಕ್ಷಣೆ, ಸಾಮರಸ್ಯ ಕಾಪಾಡುವಿಕೆಯಂತಹ ಮಹತ್ತರ ಧೈಯಗಳೊಂದಿಗೆ ಸ್ಥಾಪಿತವಾದ ಸಂಸ್ಥೆ ‘ಯುವ ಬ್ರಿಗೇಡ್’, ಲೇಖಕ, ವಾಗ್ನಿ, ಸಮಾಜಮುಖಿ ಚಕ್ರವರ್ತಿ ಸೂಲಿಬೆಲೆ ಸ್ಥಾಪಿಸಿದ ಈ ಸಂಸ್ಥೆ ಅಲ್ಪಾವಧಿಯಲ್ಲಿ ಕೈಗೊಂಡ ಕೈಂಕರ್ಯಗಳು ಅನೇಕಾನೇಕ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಕೊಟ್ಟ ಕೊಡುಗೆ ಅಪಾರ. ರಾಜ್ಯಾದ್ಯಂತ ೨೦೦ಕ್ಕೂ ಹೆಚ್ಚು ಕಲ್ಯಾಣಿಗಳ ಜೀರ್ಣೋದ್ದಾರ, ಕಾವೇರಿ, ನೇತ್ರಾವತಿ, ಭೀಮಾ, ಕಪಿಲೆ ಸೇರಿದಂತೆ ೮ ನದಿಗಳ ಸ್ವಚ್ಛಗೊಳಿಸುವಿಕೆ, ಮಳೆನೀರು ಸಂಗ್ರಹಣೆಯ ಮಹತ್ವ ಪಸರಿಸುವಿಕೆ, ಹುತಾತ್ಮ ಯೋಧರ ಸ್ಮರಣೆ, ಪ್ರವಾಹ ಪೀಡಿತರಿಗೆ ನೆರವು, ಕಾರ್ಗಿಲ್ ವಿಜಯ ದಿನದ ಆಚರಣೆ, ಯುವಕರಲ್ಲಿ ರಾಷ್ಟ್ರಪ್ರೇಮದ ಜಾಗೃತಿ, ಕನ್ನಡ ಕಲೆ, ಸಂಸ್ಕೃತಿ ಕುರಿತ ಪ್ರವಚನ-ನೃತ್ಯ ಮಾಲಿಕೆ, ಪರಭಾಷಿಕರಿಗೆ ಕನ್ನಡ ಕಲಿಸುವಿಕೆ, ಸ್ವಚ್ಛ ಭಾರತ ಯೋಜನೆಯ ಅನುಷ್ಠಾನ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಕೊರೊನಾ ಪೀಡಿತರು-ಸಂತ್ರಸ್ತರಿಗೆ ಮಾನವೀಯ ನೆರವು, ಗ್ರಾಮಸ್ವರಾಜ್ಯ ಕಲ್ಪನೆಯ ಸಾಕಾರ ಮುಂತಾದ ಹತ್ತಾರು ಸಮಾಜಸೇವಾ ಕಾರ್ಯಗಳಲ್ಲಿ ನಿರತವಾಗಿರುವ ಯುವ ಬ್ರಿಗೇಡ್ ನಾಡಿನ ಹೆಮ್ಮೆಯ ಮಾದರಿ ಯುವ ಸಂಸ್ಥೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ದಿ ಬೆಟರ್ ಇಂಡಿಯಾ

ಉತ್ತಮ ಭಾರತ ನಿರ್ಮಾಣಕ್ಕಾಗಿ ಮಿಡಿದು ದುಡಿಯುತ್ತಿರುವ ಹೆಮ್ಮೆಯ ಸುದ್ದಿಸಂಸ್ಥೆ ‘ದಿ ಬೆಟರ್ ಇಂಡಿಯಾ’. ಸತ್ಯ, ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸುತ್ತಿರುವ ವೆಬ್ ತಾಣ.
ಸಿವಿಲ್ ಎಂಜಿನಿಯರಿಂಗ್ ಪದವಿ ಹಾಗೂ ವಾಣಿಜ್ಯ ಆಡಳಿತದ ಸ್ನಾತಕೋತ್ತರ ಪದವೀಧರಾದ ಬೆಂಗಳೂರು ಮೂಲದ ಧೀಮಂತ್ ಪರೇಖ್ ಮತ್ತು ಅನುರಾಧ ಪರೇಖ್ರವರು ದಿ ಬೆಟರ್ ಇಂಡಿಯಾದ ಸಂಸ್ಥಾಪಕರು. ಸುಳ್ಳು ಮತ್ತು ಸಮಾಜವಿರೋಧಿ ಸುದ್ದಿ ಮಾಧ್ಯಮಗಳಿಂದ ಬೇಸತ್ತು ಸತ್ಯ, ಸಕಾರಾತ್ಮಕ, ಸಮಾಜಮುಖಿ ಪತ್ರಿಕೋದ್ಯಮದ ಕನಸು ಹೊತ್ತು ೨೦೦೮ರಲ್ಲಿ ಆರಂಭಿಸಲಾದ ಈ ಸುದ್ದಿ ವೆಬ್ ತಾಣ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದಿದೆ. ನಿರ್ಲಕ್ಷಿತ ಭಾರತೀಯ ಕಲೆ, ಗ್ರಾಮೀಣ ಭಾಗದ ಅನಕ್ಷರತೆ, ಸಮಸ್ಯೆಗಳನ್ನು ಬಿಂಬಿಸುತ್ತಾ ಬಂದಿರುವ ಸಂಸ್ಥೆ ಅನೇಕ ಹಳ್ಳಿಗಳಿಗೆ ತನ್ನ ವರದಿಗಳಿಂದ ನೀರು, ವಿದ್ಯುತ್ಗಳು ದೊರೆಯುವಂತೆ ಮಾಡಿದೆ. ಬಡಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಸರ್ಕಾರದ ಅವೈಜ್ಞಾನಿಕ ನೀತಿಗಳ ಬಗ್ಗೆ ಬೆಳಕು ಚೆಲ್ಲಿ ಆಡಳಿತಗಾರರ ಕಣ್ಣು ತೆರೆಸಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕ ದೇಣಿಗೆ ಸಂಗ್ರಹಿಸಿ ಶ್ರೀಸಾಮಾನ್ಯರಿಗೆ ಪರಿಹಾರ ದೊರಕಿಸಿರುವ ದಿ ಬೆಟರ್ ಇಂಡಿಯಾ ಸಂಸ್ಥೆ ವಿಶ್ವಾದ್ಯಂತ ೯ ಕೋಟಿ ಜನರನ್ನು ತಲುಪುತ್ತಿದ್ದು ಸಮಾಜಮುಖಿ ಕೈಂಕರ್ಯದಲ್ಲಿ ಸಾರ್ಥಕತೆ ಕಂಡಿದೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಊರಮ್ಮದೇವಿ ಸೇವಾ ಟ್ರಸ್ಟ್

ದೇವದಾಸಿಯರ ಬಾಳಲ್ಲಿ ಸ್ವಾಭಿಮಾನದ ಬೆಳಕು ಹರಿಸಿದ ಸಂಸ್ಥೆ ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ ಉದ್ಯೋಗಿಗಳಾಗಿ ಹೊಸ ಬದುಕು ಕಂಡುಕೊಂಡ ನಿರ್ಭಾಗ್ಯರು.
ಬಳ್ಳಾರಿ ಜಿಲ್ಲೆಯ ೧೦,೫೪೦ ಮಾಜಿ ದೇವದಾಸಿಯರ ಪೈಕಿ ಕೂಡ್ಲಿಗಿಯಲ್ಲೇ ಅಗ್ರಪಾಲು, ಈ ಮಾಜಿ ದೇವದಾಸಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಜಿಲ್ಲಾಡಳಿದಿಂದ ಶೇಂಗಾ ಚಿಕ್ಕಿ ತಯಾರಿಕಾ ಘಟಕ ಸ್ಥಾಪಿಸಿ ಉದ್ಯೋಗಿನಿ ಯೋಜನೆಯಡಿ ಸಾಲ ಒದಗಿಸುವಿಕೆ. ಆ ಘಟಕದ ನಿರ್ವಹಣೆಯ ಹೊಣೆ ಹೊತ್ತಿದ್ದು ದೇವದಾಸಿ ಸ್ವಾವಲಂಬನ ಕೇಂದ್ರ ಮುಂದಿನದ್ದು ಪರಿಶ್ರಮಕ್ಕೆ ದೊರೆತ ಯಶಸ್ಸಿನ ಕಥೆ. ನಿತ್ಯ ನಾಲ್ಕು ಸಾವಿರ ಚಿಕ್ಕಿ ತಯಾರಿಕೆಯಲ್ಲಿ ತೊಡಗಿರುವ ಕೇಂದ್ರದ ಮಾಜಿ ದೇವದಾಸಿಯರು ತಾಲ್ಲೂಕಿನ ೩೦೦ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಚಿಕ್ಕಿ ಪೂರೈಸುತ್ತಿರುವುದು ವಿಶೇಷ, ಮಾಸಿಕ ೭ ಲಕ್ಷ ಚಿಕ್ಕಿಗೆ ಬೇಡಿಕೆಯಿದ್ದು ಆ ಬೇಡಿಕೆ ಪೂರೈಸಲು ಹಗಲಿರುಳು ಶ್ರಮಿಸುತ್ತಿರುವ ಮಾಜಿ ದೇವದಾಸಿಯರ ಶ್ರಮದಾನಕ್ಕೆ ಇದೀಗ ಪ್ರಶಸ್ತಿಯಿಂದ ಸಾರ್ಥಕತೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯೂತ್ ಫಾರ್ ಸೇವಾ

ರಾಷ್ಟ್ರೀಯ ಮಟ್ಟದ ಸ್ವಯಂಸೇವಾ ಆಂದೋಲನದ ರೂವಾರಿ ಯೂತ್ ಫಾರ್ ಸೇವಾ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರವ್ಯಾಪಿ ಸಕ್ರಿಯವಾಗಿರುವ ಸ್ವಯಂಸೇವಾ ಸಂಸ್ಥೆ.
ಬೆಂಗಳೂರಿನಲ್ಲಿ ನೆಲೆನಿಂತಿರುವ ಯುತ್ ಫಾರ್ ಸೇವಾ ಸ್ಥಾಪನೆಯಾಗಿದ್ದು ೨೦೦೭ರಲ್ಲಿ, ಸ್ವಯಂಸೇವಾ ಸಂಸ್ಕೃತಿಯನ್ನು ಪಸರಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಂಸ್ಥೆಯ ಪರಮೋದ್ದೇಶ. ದೇಶದ ೧೨ ರಾಜ್ಯಗಳ ೪೨ ನಗರಗಳು ಒಂದು ಲಕ್ಷದ ಹದಿನೈದು ಸಾವಿರ ಸ್ವಯಂಸೇವಕರನ್ನೊಳಗೊಂಡ ವಿಶಾಲ ಜಾಲ ಹೊಂದಿರುವ ಯೂತ್ ಫಾರ್ ಸೇವಾ ಯುವಕರನ್ನು ಶಿಕ್ಷಣ, ಪರಿಸರ ಮತ್ತು ಆರೋಗ್ಯ ಕ್ಷೇತ್ರದ ಯೋಜನೆಗಳ ಬೇರಿಗೆ ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿದೆ. ಈವರೆಗೆ ೬,೭೮,೪೫೦ ಮಂದಿ ಫಲಾನುಭವಿಗಳನ್ನು ತಲುಪಿರುವ ಸಂಸ್ಥೆ ೧೬,೭೨೨ ವಿದ್ಯಾರ್ಥಿಗಳಿಗೆ ತರಬೇತಿ, ೫೦೦೦ಕ್ಕೂ ಅಧಿಕ ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ೧೮, ೨೭೯ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಉಚಿತ ವೈದ್ಯಕೀಯ ನೆರವನ್ನೂ ಒದಗಿಸುತ್ತಿದೆ. ಕೊರೊನಾದಿಂದ ಸಂಕಷ್ಟಕ್ಕೀಡಾದ ೬,೪೫,೭೬೦ ಜನರಿಗೆ ನೆರವಾಗಿದ್ದು ೧,೩೫,೪೦೫ ಮಂದಿಗೆ ಆಹಾರದ ಕಿಟ್ಗಳನ್ನು ನೀಡಿ ಮಾನವೀಯತೆ ಮೆರೆದಿದೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿ. ಲಕ್ಷ್ಮಿನಾರಾಯಣ

ಸಕ್ಕರೆ ನಾಡಿನ ಅಕ್ಕರೆಯ ವ್ಯಕ್ತಿತ್ವದ ವಿ. ಲಕ್ಷ್ಮಿನಾರಾಯಣ ಮೌನಸಾಧಕರು. ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಅವರದ್ದು ಅಚ್ಚಳಿಯದ ಹೆಜ್ಜೆಗುರುತು.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹರದನಹಳ್ಳಿ ಹುಟ್ಟೂರು. ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮಾ, ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣ, ೧೯೬೮ರಲ್ಲೇ ವಸತಿ ನಿರ್ಮಾಣದಲ್ಲಿ ತೊಡಗಿಕೊಂಡ ಉದ್ಯಮಿ, ಗುಣಮಟ್ಟದ ಕಾಮಗಾರಿ-ರಚನಾತ್ಮಕ ಕಾರ್ಯಗಳಿಗೆ ಹೆಸರುವಾಸಿ. ೧೯೯೦ರಲ್ಲಿ ‘ನಿರ್ಮಾಣ್ ಶೆಲ್ಟರ್’ ಸಂಸ್ಥೆ ಸ್ಥಾಪಿಸಿ ಬಡ-ಮಧ್ಯಮ ವರ್ಗದ ಜನರಿಗೆ ಸುಲಭ ಬೆಲೆಯಲ್ಲಿ ನಿವೇಶನ-ಮನೆಗಳ ನಿರ್ಮಾಣ. ಆರು ಸುಸಜ್ಜಿತ ಬಡಾವಣೆಗಳ ನಿರ್ಮಾತೃ, ಸಾಹಿತ್ಯ, ಸಮಾಜಸೇವೆ ಲಕ್ಷ್ಮಿನಾರಾಯಣರ ವ್ಯಕ್ತಿತ್ವದ ಹೆಗ್ಗುರುತು. ಆಯುರ್ವೇದ ಆಸ್ಪತ್ರೆ, ಪುರಂದರ ಪ್ರತಿಷ್ಠಾನ, ಅ.ನ.ಕೃ ಪ್ರತಿಷ್ಠಾನ, ಹಿರಿಯ ನಾಗರಿಕರ ವಸತಿ ತಾಣ ಪ್ರಬುದ್ಧಾಲಯ, ‘ವಾತ್ಸಲ್ಯ’, ದೇವಸ್ಥಾನಗಳ ನಿರ್ಮಾಣ, ಧ್ಯಾನಮಂದಿರ ಬಡಮಕ್ಕಳಿಗೆ ಮಧ್ಯಾಹ್ನದೂಟದ ವ್ಯವಸ್ಥೆ, ಸುಸಜ್ಜಿತ ಅಡುಗೆಕೋಣೆ, ಭೋಜನಾ ಶಾಲೆ, ಕಲಾಭವನಗಳ ನಿರ್ಮಾಣದಂತಹ ಹತ್ತಾರು ಸೇವಾಕಾರ್ಯಗಳಲ್ಲಿ ತೊಡಗಿರುವ ದೀನಬಂಧು. ಆರ್ಯಭಟ ಪ್ರಶಸ್ತಿ, ಡಾ.ಅ.ನ.ಕೃ ಸಾರ್ವಭೌಮ, ರಾಜ್ಯ ಪ್ರಶಸ್ತಿಯಿಂದ ಭೂಷಿತವಾದ ಸಾರ್ಥಕ ಜೀವನ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ಎಸ್. ರಾಜಣ್ಣ (ವಿಶೇಷ ಚೇತನ)

ಅಂಗವೈಕಲ್ಯವನ್ನೇ ಮೆಟ್ಟಿನಿಂತು ಉತ್ತುಂಗ ಸಾಧನೆಗೈದ ವಿಶೇಷ ಚೇತನ ಡಾ. ಕೆ.ಎಸ್. ರಾಜಣ್ಣ, ದಿವ್ಯಾಂಗರ ಕಣ್ಮಣಿಯಾದ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಉದ್ಯಮಿ.
ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ೧೯೫೯ರಲ್ಲಿ ಜನಿಸಿದ ರಾಜಣ್ಣ ೧೧ ತಿಂಗಳ ಮಗುವಾಗಿದ್ದಾಗಲೇ ಪೋಲಿಯೋಗೆ ತುತ್ತಾಗಿ ಎರಡು ಕೈ, ಕಾಲಿನ ಸ್ವಾಧೀನ ಕಳೆದುಕೊಂಡರಾದರೂ ಧೃತಿಗೆಡಲಿಲ್ಲ. ಎಸ್.ಎಸ್.ಎಲ್.ಸಿ., ಮೈಕಾನಿಕಲ್ ಡಿಪ್ಲೋಮಾವರೆಗೆ ವ್ಯಾಸಂಗ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಕ್ರೀಡೆಯಲ್ಲೂ ಆಸಕ್ತರು. ೧೯೮೦ರಲ್ಲಿ ಸ್ವಂತದ್ದೇ ಉದ್ಯಮ ಸ್ಥಾಪಿಸಿ ೫೦೦ ಮಂದಿ ಅಂಗವಿಕಲರ ಉದ್ಯೋಗದಾತರು. ಬದುಕಿನುದ್ದಕ್ಕೂ ವಿಶೇಷಚೇತನರ ಸೇವೆಗೆ ಮಿಡಿದ ರಾಜಣ್ಣ ಸಾವಿರಾರು ಮಂದಿ ನಿರುದ್ಯೋಗಿ ಅಂಗವಿಕಲರಿಗೆ ಮಾರ್ಗದರ್ಶನ, ಸ್ವಯಂ ಉದ್ಯೋಗಕ್ಕೆ ನೆರವು ನೀಡಿದ ಹೆಗ್ಗಳಿಕೆ. ೨೦೧೭ರಲ್ಲಿ ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಅಧಿನಿಯಮಕ್ಕೆ ರಾಜ್ಯ ಆಯುಕ್ತರಾಗಿ ನೇಮಕಗೊಂಡ ಹಿರಿಮೆ, ರಾಜ್ಯದ ೩೦ ಲಕ್ಷ ದಿವ್ಯಾಂಗರಿಗೆ ನೆರವಿನ ಹಸ್ತ ಚಾಚಿದ ಸಾರ್ಥಕತೆ. ಅಂತಾರಾಷ್ಟ್ರೀಯ ಕ್ರೀಡಾಪಟುವೂ ಆಗಿರುವ ರಾಜಣ್ಣ ೨೦೦೨ರ ಪ್ಯಾರಾ ಒಲಂಪಿಕ್ಸ್ನಲ್ಲಿ ಹಾಗೂ ಮೈಸೂರಿನ ರೋಟರಿ ಕ್ಲಬ್ ಕ್ರೀಡಾಕೂಟದಲ್ಲಿ ಚಿನ್ನ-ಬೆಳ್ಳಿ ಪದಕ ವಿಜೇತರು. ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಅಪೂರ್ವ ಸಾಧಕರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಪ್ರೊ. ಎನ್. ವೆಂಕೋಬರಾವ್

ಸಮಾಜಸೇವೆಯಲ್ಲೇ ಬದುಕಿನ ಸಾರ್ಥಕತೆ ಕಾಣುವ ಅಪ್ರತಿಮ ವ್ಯಕ್ತಿ ಪ್ರೊ, ನಂಜಪ್ಪ ವೆಂಕೋಬರಾವ್. ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ವಾಗಿ ಹಾಗೂ ಸೇವಾದುರಂಧರ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಾಂತರಾಜಪುರದಲ್ಲಿ ೧೯೩೬ರಲ್ಲಿ ಜನಿಸಿದ ವೆಂಕೋಬರಾವ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವೀಧರರು. ಮೈಸೂರಿನ ಬನುಮಯ್ಯ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು. ಎಳವೆಯಲ್ಲೇ ಬ್ರಿಟಿಷರ ವಿರುದ್ಧ ಭಾಷಣ ಮಾಡಿ ಬಂಧನಕ್ಕೊಳಗಾದ ನಾಡಪ್ರೇಮಿ. ಅ.ನ.ಕೃ. ಪ್ರೇರಣೆಯಿಂದ ಖಾದಿ ಧರಿಸುವಿಕೆ-ಗ್ರಾಮೋತ್ಥಾನ ಕೈಂಕರ್ಯ. ಬರೆವಣಿಗೆ, ಸಮಾಜ ಸೇವೆಯೇ ಉಸಿರು, ಹೋರಾಟವೇ ಬದುಕು. ಅಂತಾರಾಷ್ಟ್ರೀಯ ಲಯನ್ಸ್ನ ಭೀಷ್ಮ ಬಿರುದಾಂಕಿತರು, ಜನಮಾನಸದ ನೆಚ್ಚಿನ ಮೇಷ್ಟ್ರು, ಭೂಮಿ ಕಂಪಿಸಲಿಲ್ಲ, ಪಾಪು ಮುಟ್ಟು, ಕೀಚಕರು ಮುಂತಾದ ಕೃತಿಗಳ ರಚನಕಾರರು. ಮೂರು ದಶಕಗಳ ಕಾಲ ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸಿದ ಹೆಗ್ಗಳಿಕೆ. ರಾಷ್ಟ್ರೀಯ ಸ್ವಯಂಸೇವಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ, ಎಬಿವಿಪಿ ರಾಜ್ಯ ಕಾರ್ಯದರ್ಶಿ, ವಿಕ್ರಮ ಪತ್ರಿಕೆಯ ಉಪಾಸಂಪಾದಕ ಮತ್ತಿತರ ಗುರುತರ ಹೊಣೆಗಾರಿಕೆ ನಿರ್ವಹಿಸಿ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ವಿಶಿಷ್ಟ ಘನವ್ಯಕ್ತಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ವಿ. ರಾಜು

ಹೆಸರಾಂತ ಆರ್ಥಿಕ ತಜ್ಞರು, ಅತ್ಯುತ್ತಮ ಆರ್ಥಿಕ ಸಲಹೆಗಾರರು ಡಾ. ಕೆ.ವಿ. ರಾಜು. ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಆರ್ಥಿಕ ವಿಷಯಗಳ ಅಪಾರ ಜ್ಞಾನವಂತರು.
ಮೂಲತಃ ಕೋಲಾರದವರಾದ ಕೆ.ವಿ. ರಾಜು ಬಿ.ಎ. ಪದವೀಧರರು, ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ, ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ. ಪಡೆದವರು, ಆರ್ಥಿಕ ವಿಷಯಗಳಲ್ಲಿ ಕರಾರುವಾಕ್ಕಾದ ಜ್ಞಾನವುಳ್ಳ ಕೆ.ವಿ. ರಾಜು ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕಾನಮಿಕ್ ಚೇಂಚ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಅಂತರ್ಜಲ ವೃದ್ಧಿ, ಬೇಸಾಯದ ನಿರ್ವಹಣೆ, ಗ್ರಾಮೀಣಾಭಿವೃದ್ಧಿ, ವಿಶ್ವಬ್ಯಾಂಕ್ನ ಸಾಮಾಜಿಕ-ಆರ್ಥಿಕ ಪರಿಣಾಮಗಳ ಮೌಲ್ಯಮಾಪನದಂತಹ ಹತ್ತಾರು ವಿಷಯಗಳ ಅಧ್ಯಯನಶೀಲರು, ಯೋಜನಾಕರ್ತೃ. ೨೨ ಮಹತ್ವದ ಕೃತಿ ಹಾಗೂ ೯೮ ಸಂಶೋಧನಾ ಪ್ರಬಂಧಗಳ ರಚನಕಾರರು. ಯಡಿಯೂರಪ್ಪ ಅವರು ಚೊಚ್ಚಲಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಐದು ವರ್ಷ ಹಾಗೂ ಈಗ ಉತ್ತರಪ್ರದೇಶ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಹತ್ತಾರು ಯೋಜನೆಗಳ ಹಿಂದಿನ ರೂವಾರಿಯಾದ ಹೆಗ್ಗಳಿಕೆ. ಹಲವು ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲೂ ತಮ್ಮ ವಿದ್ವತ್ ಮೆರೆದಿರುವ ಡಾ. ಕೆ.ವಿ. ರಾಜು ಅವರ ಪಾಂಡಿತ್ಯ-ಆರ್ಥಿಕ ಜ್ಞಾನಕ್ಕೆ ಅವರಷ್ಟೇ ಸಾಟಿ, ಕರುನಾಡಿನ ಹೆಮ್ಮೆ.

Categories
ಕ್ರೀಡೆ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಉಷಾರಾಣಿ ಎನ್.

ಕರ್ನಾಟಕ ಕಂಡ ಪ್ರತಿಭಾವಂತ ಕ್ರೀಡಾಪಟು ಉಷಾರಾಣಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪದಕಗಳ ಭೇಟೆಯಾಡಿದ ಕಬಡ್ಡಿ ಪಟು.
ಮೂಲತಃ ಮಂಡ್ಯದವರಾದ ಉಷಾರಾಣಿ ಬಿ.ಎ. ಪದವೀಧರರು. ವೃತ್ತಿಯಲ್ಲಿ ಪೊಲೀಸ್ ಪೇದೆ. ಸದ್ಯ ಕೋರಮಂಗಲದ ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ಕಾರ್ಯನಿರತರು. ಬಾಲ್ಯದಿಂದಲೂ ಕಬಡ್ಡಿ ಪ್ರೇಮ. ಇಲಾಖೆಯಲ್ಲಿ ಸಿಕ್ಕ ಪ್ರೋತ್ಸಾಹವೇ ಸಾಧನೆಗೆ ಹಾದಿ. ಒಂದೂವರೆ ದಶಕಗಳ ಕ್ರೀಡಾ ಜೀವನದಲ್ಲಿ ಸಾಧಿಸಿದ್ದು ಅಪಾರ, ಬೇಟೆಯಾಡಿದ ಪದಕಗಳು ಅನೇಕಾನೇಕ. ಕರ್ನಾಟಕ ಪೊಲೀಸ್ ಮಹಿಳಾ ಕಬ್ಬಡಿ ತಂಡಕ್ಕೆ ನಾಲ್ಕು ಬಾರಿ ನಾಯಕಿಯಾಗಿದ್ದ ಹೆಗ್ಗಳಿಕೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಬಾರಿ ಪದಕ ಗೆದ್ದ ಕ್ರೀಡಾಚೇತನ. ಅಖಿಲ ಭಾರತ, ರಾಜ್ಯಮಟ್ಟದ, ದಕ್ಷಿಣವಲಯ ಮಟ್ಟದ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಹತ್ತಕ್ಕೂ ಹೆಚ್ಚು ಚಿನ್ನ, ಅನೇಕ ಬೆಳ್ಳಿ ಮತ್ತು ಕಂಚು ಪದಕಗಳನ್ನು ಪಡದ ಪ್ರತಿಭಾವಂತೆ, ಅನೇಕ ಬಾರಿ ಅತ್ಯುತ್ತಮ ಆಟಗಾರ ಪ್ರಶಸ್ತಿ, ನಾಲ್ಕು ಬಾರಿ ವರ್ಷದ ಅತ್ಯುತ್ತಮ ಕ್ರೀಡಾವ್ಯಕ್ತಿ ಗೌರವ ಹಾಗೂ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಗಳಿಗೆ ಪಾತ್ರವಾಗಿರುವ ಹೆಮ್ಮೆಯ ಕ್ರೀಡಾಪಟು.

Categories
ಕ್ರೀಡೆ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಹೆಚ್.ಬಿ. ನಂಜೇಗೌಡ

ಕರ್ನಾಟಕದ ವಾಲಿಬಾಲ್ ‘ಮಾರ್ಗನ್’ ಎಂದೇ ಹೆಸರುವಾಸಿಯಾದವರು ಹೆಚ್.ಬಿ. ನಂಜೇಗೌಡ, ರಾಷ್ಟ್ರಮಟ್ಟದಲ್ಲಿ ಕರುನಾಡಿನ ಕೀರ್ತಿ ಬೆಳಗಿದ ಗ್ರಾಮೀಣ ಕ್ರೀಡಾ ಪ್ರತಿಭೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಪುರದ ಹೊಸಹಳ್ಳಿಯ ರೈತ ಕುಟುಂಬದವರಾದ ನಂಜೇಗೌಡರಿಗೆ ಬಾಲ್ಯದಿಂದಲೂ ವಾಲಿಬಾಲ್ ಆಟವೆಂದರೆ ಪಂಚಪ್ರಾಣ. ಬಿ.ಎ., ಬಿ.ಪಿ.ಇಡಿ., ಡಿಪ್ಲೋಮಾ ಇನ್ ಕೋಚಿಂಗ್ನಲ್ಲಿ ವ್ಯಾಸಂಗ, 70ರ ದಶಕದಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿರುವಾಗಲೇ ವಾಲಿಬಾಲ್ ಪಟುವಾಗಿ ರೂಪಾಂತರ. ಕಾಲೇಜು ತಂಡದ ಆಟಗಾರನಾಗಿ ಗಮನಸೆಳೆಯುವಿಕೆ. ಹಲವು ರಾಜ್ಯ-ಅಂತಾರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರತಿಭಾ ಪ್ರದರ್ಶನ. ಅನಂತರ ತರಬೇತುದಾರರಾಗಿ ಮಾರ್ಪಾಡು, ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ತರಬೇತುದಾರ, ತೀರ್ಪುಗಾರರಾಗಿ ಅನನ್ಯ ಸೇವೆ. ಹಳ್ಳಿಮಟ್ಟದಿಂದಿಡಿದು ರಾಷ್ಟ್ರೀಯ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಅದ್ಭುತ ಕ್ರೀಡಾಸಂಘಟನಕಾರರೆಂಬ ಅಚ್ಚಳಿಯದ ಹೆಗ್ಗಳಿಕೆ. ವಾಲಿಬಾಲ್ ಆಟದ ಜ್ಞಾನವನ್ನು ಹಳ್ಳಿಪ್ರತಿಭೆಗಳಿಗೆ ಹಂಚಿದ ‘ಆಚಾರ್ಯ’ರು. ಹತ್ತಾರು ಪ್ರಶಸ್ತಿ-ಗೌರವಗಳಿಂದ ಭೂಷಿತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ವಿದ್ಯಾಸಿಂಹಾಚಾರ್ಯ ಮಾಹುಲಿ

ಮುಂಬಯಿಯಲ್ಲಿ ಸನಾತನ ವೈದಿಕ ಸಂಸ್ಕೃತಿ ಉಳಿವಿಗೆ ಅಹರ್ನಿಶಿ ಶ್ರಮಿಸುತ್ತಿರುವ ಮಹಾಗುರು, ಘನ ವಿದ್ವಾಂಸರು ಪಂಡಿತ್ ವಿದ್ಯಾಸಿಂಹಾಚಾರ್ಯ ಮಾಹುಲಿ. ಹರಿದಾಸ ಸಾಹಿತ್ಯದ ಪ್ರಚಾರಕರು, ಹೊರನಾಡಿನ ಕನ್ನಡದ ಕಟ್ಟಾಳು.
ಮುಂಬಯಿನ ಮಾಳುಂದದಲ್ಲಿ ಮಾಳುಂದದಲ್ಲಿ ಮಧ್ವಸಿದ್ಧಾಂತದ ವಾಣಿ ವಿಹಾರ ಸಿದ್ಧಪಡಿಸಿದ ಮಾಹುಲಿ ಗೋಪಾಲಾಚಾರ್ಯರ ಸುಪುತ್ರರಾದ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ಬಾಲ್ಯದಲ್ಲೇ ಶಾಸ್ತ್ರಪಾರಂಗತರು. ತಂದೆ ಕಟ್ಟಿದ ಮಹಾವಿದ್ಯಾಲಯ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾಗಿ ಅನನ್ಯ ಸೇವೆ. ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನವಸ್ತ್ರದಾನ, ಆಶ್ರಯ ನೀಡಿ ೧೪ ವರ್ಷ ವಿದ್ಯಾದಾನ ಮಾಡುವಲ್ಲಿ ಸದಾ ನಿರತರು. ಪಂಡಿತರನ್ನು ರೂಪಿಸಿದ ಪಂಡಿತೋತ್ತಮರು. ಮುಂಬಯಿ ನೆಲೆದಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸಿದ ಅಗ್ರಗಣ್ಯ ಆಚಾರ್ಯರು, ಹರಿದಾಸ ಸಾಹಿತ್ಯದಲ್ಲಿ ಅಪಾರ ವಿದ್ವತ್ತು, ಸಿಡಿಗಳ ಮೂಲಕ ಹರಿಭಕ್ತಿಸಾರವನ್ನು ಪ್ರಚುರಪಡಿಸಿದ ಮಹನೀಯರು. ನಾನಾ ನಗರಗಳಿಗೆ ತೆರಳಿ ಜ್ಞಾನಸತ್ರ ನಡೆಸುವ ಅಪ್ಪಟ ಕನ್ನಡಪ್ರೇಮಿ, ಪಂಡಿತ ಪರಂಪರೆ ನಿರ್ಮಾಣಕ್ಕೆ ಬದುಕು ಮೀಸಲಿಟ್ಟಿರುವ ಕರ್ಮಯೋಗಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ

ಮುಂಬಯಿ ನೆಲದಲ್ಲಿ ಕನ್ನಡದ ಕೀರ್ತಿ ಬೆಳಗಿದ ಹೆಮ್ಮೆಯ ಹೊರನಾಡು ಕನ್ನಡಿಗ ಕುಸಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ, ಉದ್ಯಮ-ಸಮಾಜಸೇವಾ ಕ್ಷೇತ್ರದ ಸಾಧನಾಶೀಲರು.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಚೆಲ್ಲಡ್ಕ ಗುತ್ತು ಹುಟ್ಟೂರು, ತಾಯ್ಕೆಲದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಂಬಯಿಯಲ್ಲಿ ವಾಣಿಜ್ಯ ಪದವಿ. ಶಿಪ್ಪಿಂಗ್ ಕಂಪನಿಯಲ್ಲಿ ವೃತ್ತಿ ಬದುಕಿನಾರಂಭ. ಸತತ ೨೮ ವರ್ಷಗಳ ಕಾಲ ವಿವಿಧ ಶಿಪ್ಪಿಂಗ್ ಕಂಪನಿಗಳಲ್ಲಿ ಗುರುತರ ಸೇವೆ. ೨೦೦೭ರಲ್ಲಿ ಸ್ವಂತದ್ದೇ ಭವಾನಿ ಶಿಪ್ಪಿಂಗ್ ಸರ್ವಿಸಸ್ ಕಂಪನಿ ಆರಂಭ. ಮುಂದಿನದು ಅಪ್ರತಿಮ ಯಶೋಗಾಥೆ, ದೇಶದ ೧೮ ವಲಯಗಳಲ್ಲಿ ಕಛೇರಿಗಳು, ನಾಲ್ಕು ವಿದೇಶಗಳಲ್ಲಿ ಶಿಪ್ಪಿಂಗ್ ಲೈನ್ಗಳು, ಶಿಪ್ಪಿಂಗ್ ಉದ್ಯಮದಲ್ಲಿ ಅಚ್ಚರಿಯ ಸಾಧನೆ. ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಿದ ಹಿರಿಮೆ. ಅಬಲ ಹೆಣ್ಣುಮಕ್ಕಳ ವಿವಾಹಕ್ಕೆ ನಿರಂತರ ನೆರವು, ಸಾಮಾಜಿಕ ಕಾರ್ಯಗಳಲ್ಲಿ ನಿಸ್ಪೃಹ ನಡೆ, ಶಿಪ್ಪಿಂಗ್ ನೋಬಲ್, ಸ್ವಸ್ತಿಶ್ರೀ ರಾಜ್ಯ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿಗಳಿಂದ ಭೂಷಿತರಾದ ಸಮಾಜಮುಖಿ ಸಹೃದಯಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಬಿಷ್ಟಪ್ಪ ಫಕೀರಪ್ಪ ದಂಡಿನ

ಸಾವಿರಾರು ಬಡಮಕ್ಕಳ ಬಾಳಿನಲ್ಲಿ ಅಕ್ಷರದ ಜ್ಯೋತಿ ಬೆಳಗಿದ ಶಿಕ್ಷಣ ಚೇತನ ಡಾ. ಬಿ.ಎಫ್. ದಂಡಿನ. ೬೦ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಹಳ್ಳಿಮಕ್ಕಳ ಹಿತಚಿಂತಕ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ದ್ಯಾಮಣಸಿಯಲ್ಲಿ ಜನಿಸಿದ ದಂಡಿನ ಕಡುಬಡತನದಲ್ಲಿ ಅರಳಿದ ಪ್ರತಿಭೆ. ಕೂಲಿ ಮಾಡುತ್ತಲೇ ವ್ಯಾಸಂಗ. ಬಿ.ಎಸ್ಸಿ. ಪದವಿ, ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಾಧ್ಯಾಪಕರಾಗಿ ಒಂದೂವರೆ ದಶಕಗಳ ಕಾಲ ಸೇವೆ. ಪ್ರಾಚಾರ್ಯರಾಗಿಯೂ ದುಡಿತ. ಉದ್ಯೋಗಕ್ಕೆ ರಾಜೀನಾಮೆಯಿತ್ತು ಬಡಮಕ್ಕಳ ಶಿಕ್ಷಣಕ್ಕಾಗಿ ಜೀವನ ಅರ್ಪಣೆ, ಕನಕದಾಸ ಶಿಕ್ಷಣ ಸಂಸ್ಥೆ ಮೂಲಕ ಬಡ, ಹಿಂದುಳಿದ ಗ್ರಾಮೀಣ ಮಕ್ಕಳಿಗಾಗಿ ವಸತಿನಿಲಯ ಸ್ಥಾಪಿಸಿ ಉಚಿತ ಶಿಕ್ಷಣ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣ ಒದಗಿಸುವ ಹೈಸ್ಕೂಲ್, ಪದವಿಪೂರ್ವ ಕಾಲೇಜು, ಪದವಿ, ಬಿ.ಎಡ್, ಡಿ.ಎಡ್ ಹಾಗೂ ಸ್ನಾತಕೋತ್ತರ ಸಂಸ್ಥೆ ಸೇರಿದಂತೆ ಒಟ್ಟು ೬೦ ಶಿಕ್ಷಣ ಸಂಸ್ಥೆಗಳನ್ನು ನಡೆಸಿದ ಹೆಗ್ಗಳಿಕೆ. ಸಾವಿರಾರು ಬಡ ವಿದ್ಯಾರ್ಥಿಗಳ ಬದುಕು ರೂಪಿಸಿದ ಧನ್ಯತೆ. ೮೬ರ ಇಳಿ ವಯಸಿನಲ್ಲೂ ಕ್ರಿಯಾಶೀಲವಾಗಿರುವ ಅಕ್ಷರದಾಸೋಹಿ, ಶಿಕ್ಷಣ ಪ್ರದೀಪ, ಅತ್ಯುತ್ತಮ ಸಮಾಜ ಸೇವಕ ಮುಂತಾದ ಪ್ರಶಸ್ತಿಗಳಿಗೆ ಪಾತ್ರವಾಗಿರುವ ವಿರಳಾತಿವಿರಳ ಶಿಕ್ಷಣ ಶಿಲ್ಪಿ,

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಅಶೋಕ್ ಎಸ್. ಶೆಟ್ಟರ್

ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಅಪರೂಪದ ಶಿಕ್ಷಣ ತಜ್ಞರು ಡಾ. ಅಶೋಕ್ ಎಸ್. ಶೆಟ್ಟರ್, ಕುಲಪತಿ, ದಕ್ಷ ಆಡಳಿತಗಾರ, ಮೇರುಸಾಧನೆಯ ಶಿಕ್ಷಣಶಿಲ್ಪಿ.
ಧಾರವಾಡ ಮೂಲದ ಅಶೋಕ್ ಎಸ್. ಶೆಟ್ಟರ್ ೧೯೮೧ರಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ, ಬೆಂಗಳೂರಿನ ಐಐಎಸ್ಸಿಯಲ್ಲಿ ಸ್ನಾತಕೋತ್ತರ ಪದವಿ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದವರು. ೩೫ ವರ್ಷಗಳ ಸುದೀರ್ಘ ಬೋಧನಾನುಭವ. ಪ್ರಾಧ್ಯಾಪಕ, ಪ್ರಾಚಾರ್ಯ, ಡೀನ್, ಸಂಸ್ಥಾಪಕ ನಿರ್ದೇಶಕರಾಗಿ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಗುರುತರ ಸೇವೆ. ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿ, ಸಂಶೋಧನೆ, ಯೋಜನಾ ಮಾರ್ಗದರ್ಶನ, ತರಬೇತಿ ನೀಡುವಿಕೆಯಲ್ಲಿ ವಿಶೇಷ ಪ್ರಾವೀಣ್ಯತೆ. ಎಂಜಿನಿಯರಿಂಗ್ ಶಿಕ್ಷಣವನ್ನು ಉದ್ಯಮಕ್ಕೆ ಪೂರಕವಾಗಿಸಿದ ಬಗೆ ಅನನ್ಯ. ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿಗೆ ಭದ್ರ ಅಡಿಪಾಯ ಹಾಕಿದ ಶಿಲ್ಪಿ. ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ವಿವಿಯನ್ನು ಕಟ್ಟಿ ಬೆಳೆಸಿದ ಪರಿ ನಿಜಕ್ಕೂ ಸೋಜಿಗವೇ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಟೆಕ್ನ ವಿಜಿನರಿ ಮುಂತಾದ ಪ್ರಶಸ್ತಿಗಳು ಅಶೋಕ್ ಶೆಟ್ಟರ್ರವರ ಅಪ್ರತಿಮ ಸಾಧನೆಗೆ ಸಂದ ಸತ್ಪಲಗಳು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಪುಟ್ಟಸಿದ್ಧಯ್ಯ

ತಳಸಮುದಾಯದ ಶೈಕ್ಷಣಿಕ ಏಳೆಗೆ ಅಹರ್ನಿಶಿ ಶ್ರಮಿಸಿದವರು ಡಾ. ಪುಟ್ಟಸಿದ್ಧಯ್ಯ, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ವೈದ್ಯ, ಸಮಾಜಸೇವಕರಾದ ಬಹುರೂಪಿ,
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದಾಸನಪುರದಲ್ಲಿ ಹುಟ್ಟಿದ ಪುಟ್ಟಸಿದ್ಧಯ್ಯ ಎಂ.ಬಿ.ಬಿ.ಎಸ್. ಪದವೀಧರರು. ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲಾ ವೈದ್ಯಾಧಿಕಾರಿಯಾಗಿ ದಶಕಗಳ ಕಾಲ ಸೇವೆ. ಉಪಮುಖ್ಯ ವೈದ್ಯಾಧಿಕಾರಿಯಾಗಿ ನಿವೃತ್ತಿ. 1991ರಲ್ಲಿ ಬಾಬು ಜಗಜೀವನರಾಂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಚನೆ. ದಮನಿತ ಸಮುದಾಯದ ಶೈಕ್ಷಣಿಕ ಏಳೆಗಾಗಿಯೇ ಪ್ರೌಢಶಾಲೆ, ಬಾಲಕರ ವಿದ್ಯಾರ್ಥಿ ನಿಲಯ, ಪ್ರಾಥಮಿಕ ಶಾಲೆ, ಸಂಸ್ಕೃತ ಪಾಠಶಾಲೆ ಹಾಗೂ ಪದವಿಪೂರ್ವ ಕಾಲೇಜು ಸೇರಿದಂತೆ ಆರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಹಿರಿಮೆ. ನಾಲ್ಕು ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆ. ದಕ್ಷಿಣ ಭಾರತದ ಹಲವೆಡೆ ತಳಸಮುದಾಯದವರಲ್ಲಿ ಸಾಮಾಜಿಕ ಅರಿವು ಮೂಡಿಸುವಿಕೆ, ದಲಿತ ಮಕ್ಕಳಿಗಾಗಿ ಸಾಂಸ್ಕೃತಿಕ-ಕ್ರೀಡಾ ಕಾರ್ಯಕ್ರಮಗಳ ಆಯೋಜನೆ. ಉತ್ತಮ ಸೇವಾ ಪ್ರಶಸ್ತಿ, ಜಾಂಬವಶ್ರೀ ಪ್ರಶಸ್ತಿ, ದಲಿತಶ್ರೀ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾದ ಸಮಾಜಬಂಧು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಆರ್. ರಾಮಕೃಷ್ಣ

ಅಧ್ಯಯನ, ಅಧ್ಯಾಪನ ಮತ್ತು ಬರವಣಿಗೆಯನ್ನೇ ಬದುಕಿನ ಡಾ. ಆರ್. ರಾಮಕೃಷ್ಣ. ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಗುರು. ಡಾ. ಆರ್. ರಾಮಕೃಷ್ಣ ಉಸಿರಾಗಿಸಿಕೊಂಡ ಶಿಕ್ಷಣ ತಜ್ಞರು
ಸಾಂಸ್ಕೃತಿಕ ನಗರಿ ಮೈಸೂರು ರಾಮಕೃಷ್ಣರ ಹುಟ್ಟೂರು, ಮಾತ್ರವಲ್ಲ ಸಾಧನೆಯ ಕರ್ಮಭೂಮಿಯೂ ಸಹ. ಕನ್ನಡ, ಭಾಷಾ-ವಿಜ್ಞಾನಗಳೆರಡರಲ್ಲೂ ಸ್ನಾತಕೋತ್ತರ ಪದವಿ, ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ, ಭಾರತೀಯ ಸಾಹಿತ್ಯದಲ್ಲಿ ಡಿಪ್ಲೋಮಾ ವ್ಯಾಸಂಗ, ಬ್ಯಾಂಕ್ ವಿಜೇತ ವಿದ್ಯಾರ್ಥಿ, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ಮುಖ್ಯಸ್ಥರಾಗಿ ವೃತ್ತಿಬದುಕು ಸಂಪನ್ನ, ಅಧ್ಯಯನ, ಬರೆವಣಿಗೆ ಸಾಧನೆಯ ಕಾರ್ಯಕ್ಷೇತ್ರ ಸಾಮಾನ್ಯ ಮತ್ತು ದ್ರಾವಿಡ ಭಾಷಾ ವಿಜ್ಞಾನ, ಭಾರತೀಯ ಸಾಹಿತ್ಯ ವಿಮರ್ಶೆ, ವ್ಯಾಕರಣ ಶಾಸ್ತ್ರ, ಮಧ್ಯಕಾಲೀನ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ವಿಶೇಷ ಪರಿಣಿತಿ. ೧೫ ಕೃತಿಗಳ ಲೇಖಕರು, ೧೦ ಮೌಲಿಕ ಸಂಶೋಧನಾ ಪ್ರಕಟಣೆಗಳ ಕರ್ತೃ. ಪ್ರಕಟಿತ ಲೇಖನಗಳು ಐವತ್ತಕ್ಕೂ ಹೆಚ್ಚು. ವಿಚಾರಸಂಕಿರಣ-ಕಾರ್ಯಾಗಾರಗಳಲ್ಲಿ ಪ್ರಜ್ವಲಿಸಿದ ಪಾಂಡಿತ್ಯ. ೨೮ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡಿದ ಗುರುವರ್ಯರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಎಂ.ಎನ್. ಷಡಕ್ಷರಿ

ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸೇವೆಗೈದ ಸಾರ್ಥಕ ಜೀವಿ ಎಂ.ಎನ್. ಷಡಕ್ಷರಿ. ಶಾಲಾ ಸಂಸ್ಥಾಪಕ, ಪ್ರಾಚಾರ್ಯ, ಸೌಟ್ಸ್ ಶಿಕ್ಷಕ, ಬರಹಗಾರ, ಶಿಕ್ಷಣ ತಜ್ಞರಾಗಿ ಅವರದ್ದು ಅನುಪಮ ಸೇವೆ.
ಚಿಕ್ಕಮಗಳೂರು ತಾಲ್ಲೂಕಿನ ಮುಗುಳವಳ್ಳಿ ತವರುನೆಲ. ೧೯೪೭ರಲ್ಲಿ ಜನನ. ಬಿ.ಎಸ್ಸಿ, ಬಿಇಡಿ ಪದವೀಧರರು. ಚಿಕ್ಕಮಗಳೂರಿನ ಮೌಂಟೆನ್ ವಿದ್ಯಾಲಯದಲ್ಲಿ ೨೩ ವರ್ಷಗಳ ಶಿಕ್ಷಕ ಸೇವೆ. ಸೈಟ್ಸ್ ಶಿಕ್ಷಕರಾಗಿಯೂ ವಿಶಿಷ್ಟ ಛಾಪು. ನೂರಾರು ಮಕ್ಕಳನ್ನು ಸೈಟ್ಸ್ನಲ್ಲಿ ರಾಷ್ಟ್ರಪತಿ ಪುರಸ್ಕಾರಕ್ಕೆ ಅರ್ಹರನ್ನಾಗಿಸಿದ ಅಚ್ಚಳಿಯದ ಹೆಗ್ಗಳಿಕೆ. ಉಪ್ಪಳಿಯ ಮಾಡೆಲ್ ಇಂಗ್ಲಿಷ್ ಶಾಲೆಯ ಸಂಸ್ಥಾಪಕ-ಪ್ರಾಚಾರ್ಯರಾಗಿ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಮಹತ್ತರ ಕೊಡುಗೆ. ಸೌಟ್ಸ್ ಮತ್ತು ಗೈಡ್ಸ್ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಸಿಲ್ವರ್ಸ್ಟಾರ್ ಪುರಸ್ಕಾರ ಪಡೆದ ವಿಶೇಷ ವ್ಯಕ್ತಿ. ಅಂಚೆ ಚೀಟಿ, ನಾಟ್ಯ, ಶಂಖ, ಚಿಪ್ಪು ಸಂಗ್ರಹ ನೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ಲೇಖನಗಳನ್ನು ಬರೆದ ಬರಹಗಾರ. ಗ್ರೀನ್ ಟೀಚರ್ ರಾಷ್ಟ್ರೀಯ ಪುರಸ್ಕಾರ, ಜಿಲ್ಲಾ ವಿಜ್ಞಾನ ಪ್ರಶಸ್ತಿ, ಪರಿಸರ ಶಿಕ್ಷಣ ಪ್ರಶಸ್ತಿ ಮೊದಲಾದ ಪುರಸ್ಕಾರಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಂ.ಜಿ. ಈಶ್ವರಪ್ಪ

ಶಿಕ್ಷಣ, ರಂಗಭೂಮಿ ಮತ್ತು ಜನಪದ ಕ್ಷೇತ್ರದ ಸಾಧಕಮಣಿ ಡಾ. ಎಂ.ಜಿ. ಈಶ್ವರಪ್ಪ, ಶಿಕ್ಷಣ ತಜ್ಞ ಸಂಶೋಧಕ, ಲೇಖಕ, ಅಧ್ಯಾಪಕರಾಗಿ ಅವರದ್ದು ಪರಿಪಕ್ವ ಸಾಧನೆ.
ಬಯಲುಸೀಮೆ ದಾವಣಗೆರೆಯ ಎಂ.ಜಿ. ಈಶ್ವರಪ್ಪ ಸ್ನಾತಕೋತ್ತರ ಪದವೀಧರರು. ಮೈಸೂರು ವಿವಿಯಿಂದ ಪಿ.ಎಚ್ಡಿ ಪಡೆದವರು. ೩೮ ವರ್ಷಗಳ ಸಾರ್ಥಕ ಅಧ್ಯಾಪಕ ವೃತ್ತಿ. ಬೋಧನೆಯಲ್ಲಿ ಅಮಿತಾನಂದ ಕಂಡುಕೊಂಡ ಗುರುವರ್ಯ. ಜನಪದ ಸಂಶೋಧನೆ, ರಂಗನಿರ್ದೇಶನ, ಉಪನ್ಯಾಸ, ಬರವಣಿಗೆಯಲ್ಲಿ ಅಪರಿಮಿತ ಕೃಷಿ, ಜಾತ್ರೆ, ಸಾಯೋಆಟ, ಕಡೇಮನೆ ಕಡೇ ಗಲ್ಲಿ, ಹಳ್ಳಿಮೇಷ್ಟ್ರು ಮತ್ತಿತರ ನಾಟಕಗಳ ನಿರ್ದೇಶನ, ಜನಪದ ರಂಗಭೂಮಿ ಕುರಿತು ಅನೇಕ ಉಪನ್ಯಾಸ ನೀಡಿದ ಪ್ರಖರ ವಾಗ್ನಿ, ಚಿಂತಕ, ಮ್ಯಾಸಬೇಡರು, ಬೇಸಾಯ ಪದ್ಧತಿ, ಬಂಗಾರ ಕೊದಲಜೈರಾನಿ ಮತ್ತಿತರ ೧೬ ಕೃತಿಗಳ ಲೇಖಕರು. ಮೈಸೂರು ವಿವಿ ಸೆನೆಟ್ ಸದಸ್ಯ, ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ, ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಕುವೆಂಪು ವಿವಿ ಶಿಕ್ಷಣ ಮಂಡಳಿ ಸದಸ್ಯರಾಗಿ ಅನನ್ಯ ಶೈಕ್ಷಣಿಕ ಸೇವೆ. ಜನಪದ ತಜ್ಞ ಮಹಾಲಿಂಗ ರಂಗಪ್ರಶಸ್ತಿ ಮುಂತಾದ ಗೌರವಗಳಿಗೆ ಭಾಜನರಾದ ಚಿಂತಕರು-ಹೆಮ್ಮೆಯ ಸಾಧಕರು.

Categories
ಯೋಗ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಎ.ಎಸ್. ಚಂದ್ರಶೇಖರ

ಆಯುರ್ವೇದ ಚಿಕಿತ್ಸೆ ಹಾಗೂ ಯೋಗ ಕ್ಷೇತ್ರದ ಅನನ್ಯ ಸಾಧಕರು ಡಾ. ಎ.ಎಸ್. ಚಂದ್ರಶೇಖರ. ಯೋಗ ಕೇಂದ್ರಗಳ ಸ್ಥಾಪಕರು, ಸಮಾಜಮುಖಿ ಸಹ.
ಮೈಸೂರಿನವರಾದ ಎ.ಎಸ್. ಚಂದ್ರಶೇಖರ ವೃತ್ತಿಯಲ್ಲಿ ಆಯುರ್ವೇದ ವೈದ್ಯರು, ಪ್ರವೃತ್ತಿಯಲ್ಲಿ ಯೋಗ ಶಿಕ್ಷಕರು, ಸಮಾಜಸೇವೆ, ನೈಸರ್ಗಿಕ ಚಿಕಿತ್ಸೆಯಲ್ಲಿ ಹೆಸರುವಾಸಿ. ಹತ್ತು ಯೋಗ ಕೇಂದ್ರಗಳ ಸ್ಥಾಪಕರು. ೩೬ ವರ್ಷಗಳಿಂದಲೂ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ನಿರತರು. ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ ಹೆಗ್ಗಳಿಕೆ. ಬಡವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಪುಸ್ತಕ ವಿತರಣೆ, ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ, ಹಳ್ಳಿಗಳಲ್ಲಿ ೩೦ ವರ್ಷಗಳಿಂದಲೂ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ತಲಕಾಡು ಪಂಚಲಿಂಗ ದರ್ಶನದ ವೇಳೆ ಒಂದು ಲಕ್ಷ ಜನರಿಗೆ ಉಚಿತ ಊಟದ ವ್ಯವಸ್ಥೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲೂ ನಿರತರಾಗಿರುವ ಸೇವಾಸಿಂಧು. ೨೭ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಗುರುತರ ಸೇವೆ. ಯೋಗಾರ್ಥ ಸಂಗ್ರಹ, ಎ ಹ್ಯಾಂಡ್ ಬುಕ್ ಆಫ್ ಯೋಗ, ನೇಚರ್ ಕೇರ್ ಮತ್ತಿತರ ಕೃತಿಗಳ ರಚನಾಕಾರರು. ಹಲವು ಪ್ರಶಸ್ತಿ-ಗೌರವ-ಸನ್ಮಾನಗಳಿಗೆ ಸತ್ಪಾತ್ರರು.

Categories
ಮಾಧ್ಯಮ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಟಿ. ವೆಂಕಟೇಶ್ (ಈ ಸಂಜೆ)

ಮಾಧ್ಯಮ ಮತ್ತು ಮುದ್ರಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ವಿರಳ ಪತ್ರಿಕೋದ್ಯಮಿ ಟಿ. ವೆಂಕಟೇಶ್, ಕನ್ನಡಾಭಿಮಾನದಿಂದಲೇ ಮೈದಳೆದ ಅಭಿಮಾನಿ ಸಂಸ್ಥೆಯ ಒಡೆಯ.
ಸಾಮಾನ್ಯ ರೈತಾಪಿ ಕುಟುಂಬದವರಾದ ವೆಂಕಟೇಶ್ಗೆ ಜೀವನಾಧಾರವಾಗಿದ್ದ ಭೂಮಿಯನ್ನು ಮಠಕ್ಕೆ ದಾನ ಮಾಡಿದ ತಾಯಿಯೇ ಆದರ್ಶ. ಬಡತನದ ನಡುವೆ ಡಿಪ್ಲೊಮಾ ವ್ಯಾಸಂಗ, ಸರ್ಕಾರಿ ನೌಕರಿಗೆ ಹೋಗದೆ ಸ್ವಂತ ಉದ್ಯೋಗಕ್ಕೆ ಮಿಡಿದ ಮನಸ್ಸು, ಎಲೆಕ್ಟಿಕಲ್ ಗುತ್ತಿಗೆದಾರರಾಗಿದ್ದವರಿಗೆ ವರನಟ ರಾಜ್ ಕಂಡರೆ ಪಂಚಪ್ರಾಣ. ಗೋಕಾಕ್ ಚಳವಳಿಗೆ ಧುಮುಕಿದ ಮೇಲೆ ಮೈಮನಗಳಲ್ಲಿ ಕನ್ನಡದ್ದೇ ಝೇಂಕಾರ. ಕನ್ನಡಪರ ದನಿಯಾಗಿ ೧೯೮೨ರಲ್ಲಿ ‘ಅಭಿಮಾನಿ’ ದಿನಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ. ೧೯೮೬ರಲ್ಲಿ ‘ಅಭಿಮಾನಿ’ ಸಂಸ್ಥೆ ಸ್ಥಾಪಿಸಿ ಮುದ್ರಣ ಕ್ಷೇತ್ರಕ್ಕೂ ಅಡಿ. ಮುಂದಿನದ್ದು ಇತಿಹಾಸ. ೧೯೮೫ರಲ್ಲಿ ಆರಂಭಿಸಿದ ‘ಅರಗಿಣಿ’ ಸಿನಿಮಾ ವಾರಪತ್ರಿಕೆ, ೧೯೮೯ರಲ್ಲಿ ಶುರು ಮಾಡಿದ ‘ಈ ಸಂಜೆ’ ಸಂಜೆಪತ್ರಿಕೆಗಳ ಮುಖೇನ ಮಾಧ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆಗುರುತು. ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಮುದ್ರಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಷ್ಟು ಅಪೂರ್ವ ಸಾಧನೆ. ಮೂರೂವರೆ ದಶಕದ ಬಳಿಕವೂ ಜನಪ್ರಿಯತೆ-ಉದ್ಯಮಶೀಲತೆ ಉಳಿಸಿಕೊಂಡು ಮುನ್ನಡೆದಿರುವ ಸಾಧಕ ಪತ್ರಿಕೋದ್ಯಮಿ.

Categories
ಮಾಧ್ಯಮ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಸಿ. ಮಹೇಶ್ವರನ್

ಮಾಧ್ಯಮ ಲೋಕದ ವಿಶೇಷ ಪ್ರತಿಭೆ ಹಿರಿಯ ಪತ್ರಿಕೋದ್ಯಮಿ ಸಿ. ಮಹೇಶ್ವರನ್. ಶತಮಾನದ ಇತಿಹಾಸವುಳ್ಳ ‘ಸಾಫ್ಟಿ’ ಪತ್ರಿಕೆಯ ಸಂಪಾದಕರು, ಪ್ರಸಿದ್ಧ ಅಂಕಣಕಾರರೂ ಸಹ.
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಸಿ. ಮಹೇಶ್ವರನ್ ಅವರು ಬಿ.ಎ. ಪದವೀಧರರು. ಬರೆವಣಿಗೆ ಆಸಕ್ತಿಯ ಕ್ಷೇತ್ರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮಾನ ಹಿಡಿತದ ವಿಶೇಷ. 1985ರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಅಂಕಣ ಬರೆಯುವ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ, ಪ್ರಜಾವಾಣಿ, ಸುಧಾ, ಸುದ್ದಿಸಂಗಾತಿ, ಮುಂಬಯಿನ ಪಯೋನೀ ಆಂಗ್ಲ ಪತ್ರಿಕೆಗಳ ಅಂಕಣಕಾರ. 35 ವರ್ಷಗಳ ಸುದೀರ್ಘ-ಪಕ್ವ ಅನುಭವ. ಸ್ವಾತಂತ್ರ್ಯ ಸಂಗ್ರಾಮಕ್ಕೆ ದನಿಯಾಗಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ 121 ವರ್ಷಗಳ ಇತಿಹಾಸವುಳ್ಳ ಸಾದ್ವಿ ಕನ್ನಡ ಸಂಜೆ ದಿನಪತ್ರಿಕೆಗೆ 1995ರಲ್ಲಿ ಮಾಲೀಕ-ಸಂಪಾದಕರಾಗಿ ಹೊಸ ಹೆಜ್ಜೆ. 25 ವರ್ಷಗಳಿಂದಲೂ ಪತ್ರಿಕೆ ಮುನ್ನಡೆಸಿದ ಹೆಗ್ಗಳಿಕೆ. ‘ಸಾಧಿ’ ಇನ್ಬೈಲ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ. ಸಾದ್ವಿ ಫೌಂಡೇಶನ್ ಮೂಲಕ ಹತ್ತಾರು ಸಾಮಾಜಿಕ ಕಾರ್ಯ- ಜನಜಾಗೃತಿ ಕೈಗೊಂಡ ಹಿರಿಮೆ. ಅವಿಚ್ಛಿನ್ನ ರಾಷ್ಟ್ರೀಯತೆ, ಆದರ್ಶದಿಂದಲೇ ನೆಲೆ-ಬೆಲೆ ದಕ್ಕಿಸಿಕೊಂಡ ವಿಶಿಷ್ಟ-ಮಾದರಿ ಪತ್ರಿಕೋದ್ಯಮಿ.

Categories
ನ್ಯಾಯಾಂಗ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎಂ.ಕೆ. ವಿಜಯಕುಮಾರ್

ನ್ಯಾಯಾಂಗ ನ್ಯಾಯಾಂಗ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಎಂ.ಕೆ. ವಿಜಯಕುಮಾರ್ ಪ್ರಮುಖರು ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್. ಸಮಾಜಸೇವೆ, ಧಾರ್ಮಿಕ ಕ್ಷೇತ್ರಗಳಲ್ಲೂ ಕ್ರಿಯಾಶೀಲ ಸಾಧಕರು.
ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳದವರಾದ ವಿಜಯಕುಮಾರ್ ವಿಜ್ಞಾನ ಕಾನೂನು ಪದವೀಧರರು. ೧೯೬೮ರಲ್ಲಿ ವಕೀಲಿ ವೃತ್ತಿ ಆರಂಭಿಸಿ ದೇಶದ ವಿವಿಧೆಡೆ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಕೃಷಿಕಾರ್ಮಿಕರು, ಹಳ್ಳಿಗರು, ಬಡವರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸಿದವರು. ಅಸಂಖ್ಯ ಸಾಮಾಜಿಕ, ಪರಿಸರಾತ್ಮಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ನ್ಯಾಯಾಂಗದಲ್ಲಿ ಎತ್ತಿಹಿಡಿದ ಹಿರಿಮೆ, ಕಾನೂನು ಉಪನ್ಯಾಸ, ನ್ಯಾಯವಾದಿಗಳ ಸಂಘಟನೆಯ ಆಡಳಿತದಲ್ಲಿ ದಕ್ಷತೆ ಮೆರೆದವರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನೊಳಗೊಂಡಂತೆ ೫೪ ಮಂದಿ ನ್ಯಾಯವಾದಿಗಳನ್ನು ರೂಪಿಸಿದ ಗುರು. ನ್ಯಾಯವಾದಿಯಾಗಿ ಐದು ದಶಕಕ್ಕೂ ಮೀರಿ ದುಡಿದ ಸೇವೆಯ ಹೆಗ್ಗುರುತು. ಅನೇಕ ಸಾಮಾಜಿಕ-ಧಾರ್ಮಿಕ ಸಂಘಟನೆಗಳ ಕಾರ್ಯದಲ್ಲಿ ಸದಾ ಸಕ್ರಿಯರು. ಜನಪರ ನ್ಯಾಯವಾದಿಯೆಂದೇ ಜನಜನಿತರು.

Categories
ಕಾನೂನು ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆ.ಎನ್. ಭಟ್

ಕರ್ನಾಟಕ ಕಂಡ ಅಪ್ರತಿಮ ಪ್ರತಿಭಾವಂತ ನ್ಯಾಯವಾದಿ ಕೆ.ಎನ್. ಭಟ್, ಹೈಕೋರ್ಟ್-ಸುಪ್ರೀಂಕೋರ್ಟ್ ನ್ಯಾಯವಾದಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನ್ಯಾಯದಾನ ವ್ಯವಸ್ಥೆಗೆ ಅಪೂರ್ವ ಕಾಣಿಕೆ ನೀಡಿದ ನ್ಯಾಯಚಿಂತಕರು.
ಕಾಸರಗೋಡು ಜಿಲ್ಲೆಯ ಪೆರ್ಲ ಗ್ರಾಮದಲ್ಲಿ ೧೯೪೦ರಲ್ಲಿ ಜನಿಸಿದ ಕೆ.ಎನ್. ಭಟ್ ೧೯೬೨ರಲ್ಲಿ ಕಾನೂನು ಪದವಿ ಪಡೆದವರು. ಬೆಂಗಳೂರಿನಲ್ಲಿ ವೃತ್ತಿ ಬದುಕಿನಾರಂಭ. ೧೯೮೬ರಲ್ಲಿ ಸುಪ್ರೀಂಕೋರ್ಟ್ನ ಹಿರಿಯ ವಕೀಲರಾಗಿ ಪದೋನ್ನತಿ ಪಡೆದವರು. ೧೯೯೬ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ಕೆ.ಎನ್. ಭಟ್ ಅವರದ್ದು ಅಯೋಧ್ಯೆ ಪ್ರಕರಣದಲ್ಲಿ ಗುರುತರ ನಿರ್ವಹಣೆ, ಅಲಹಾಬಾದ್ ಹೈಕೋರ್ಟ್ನಲ್ಲಿ ಭಗವಾನ್ ಶ್ರೀರಾಮನನ್ನು ಕಕ್ಷಿದಾರರನ್ನಾಗಿ ಮಾಡಿ ವಾದ ಮಂಡಿಸಿದ ಹಿರಿಮೆ. ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದ್ದಕ್ಕೆ ಕೆ.ಎನ್. ಭಟ್ ಅವರು ಒದಗಿಸಿದ ಪೂರಕ ದಾಖಲೆಗಳೇ ಮುಂದೆ ಸುಪ್ರೀಂಕೋರ್ಟ್ನಲ್ಲಿ ತೀರ್ಪು ಬರಲು ಕಾರಣೀಭೂತವಾಗಿದ್ದು ವಿಶೇಷ. ಅತಿಥಿ ಪ್ರಾಧ್ಯಾಪಕ, ಕಾನೂನು ಬರಹಗಳ ಅಂಕಣಕಾರರಾಗಿಯೂ ಸುಪ್ರಸಿದ್ಧರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಕೆ. ಲಿಂಗಪ್ಪ ಶೇರಿಗಾರ ಕಟೀಲು

ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಪ್ರತಿಭೆ ಕೆ. ಲಿಂಗಪ್ಪ ಶೇರಿಗಾರ. ನಾಡು ಕಂಡ ಶ್ರೇಷ್ಠ ನಾಗಸ್ವರ ವಾದಕರು, ಪಕ್ಕವಾದ್ಯ ಪ್ರವೀಣರು. ಹೆಮ್ಮೆಯ ಸಾಧಕರು ಕೂಡ.
ಲಿಂಗಪ್ಪ ಶೇರಿಗಾರ ತಂದೆ ವಾಸು ಶೇರಿಗಾರ ಸುಪ್ರಸಿದ್ಧ ನಾಗಸ್ವರ ವಾದಕರು, ಬಾಲ್ಯದಲ್ಲೇ ಸ್ವರಾಭ್ಯಾಸ, ತಂದೆಯೇ ಮೊದಲ ಗುರು, ವಿದ್ವಾನ್ ಕೃಷ್ಣಭಟ್ರಿಂದ ಕೊಳಲು ವಾದನ, ಮಧುರೈನ ಎಂ.ಪಿ.ಆರ್. ಅಯ್ಯಾ ಸ್ವಾಮಿ ಅವರಿಂದ ನಾಗಸ್ವರ ಕಲಾದೀಕ್ಷೆ, ಒಲಿದ ನಾದವೇ ಬದುಕು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಲಾಜೀವನದ ಆರಂಭ, ನಲವತ್ತು ವರ್ಷಗಳಿಂದಲೂ ದೇವಳದಲ್ಲಿ ಸ್ವರಸೇವೆ. ವಾರ್ಷಿಕ ಉತ್ಸವ, ನವರಾತ್ರಿ ಮೊದಲಾದ ವಿಶೇಷ ಸಂದರ್ಭಗಳಲ್ಲಿ ನಾಗಸ್ವರ ಕಛೇರಿ ಮೂಲಕ ದೇವಿಕೃಪೆಗೆ ಪಾತ್ರರು. ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿ ಪ್ರಮುಖ ದೇವಾಲಯಗಳಲ್ಲೂ ಕಛೇರಿ ನಡೆಸಿಕೊಟ್ಟ ಹಿರಿಮೆ. ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ನಾಗಸ್ವರ ವಿಶಾರದ ಮುಂತಾದ ಪ್ರಶಸ್ತಿಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಗಿರಿಜಾ ನಾರಾಯಣ

ಸುಗಮ ಸಂಗೀತ ಕ್ಷೇತ್ರದ ಅನನ್ಯ ಸಾಧಕಿ ಗಿರಿಜಾ ನಾರಾಯಣ. ಸಂಗೀತಕ್ಕೇ ಬದುಕು ಮೀಸಲಿಟ್ಟ ಗಾಯಕಿ, ಸ್ವರಸಂಯೋಜಕಿ, ಸಂಘಟಕಿ ಹಾಗೂ ಸಮಾಜಸೇವಕಿ,
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಗಿರಿಜಾ ನಾರಾಯಣ ಅವರದ್ದು ಸಂಗೀತದ ಕುಟುಂಬ. ಅಪ್ಪ-ಅಮ್ಮ ಇಬ್ಬರೂ ಸಂಗೀತಜ್ಞರೇ. ಸಹಜವಾಗಿ ಬಾಲ್ಯದಲ್ಲೇ ಸ್ವರಾಭ್ಯಾಸ, ವಿದ್ವಾನ್ ಗುರುರಾಜಾಚಾರ್, ವೆಂಕಟರಾಂ, ಎಸ್. ಸೋಮಸುಂದರಂ, ಪಾರ್ವತಿಸುತ, ಶ್ಯಾಮಲಾ ಜಿ. ಭಾವೆ ಮುಂತಾದವರಿಗೆ ಸಂಗೀತಪಾಠದ ಯೋಗ. ೧೯೮೩ರಲ್ಲೇ ಆಕಾಶವಾಣಿ ‘ಬಿ ಹೈ’ ಗ್ರೇಡ್ ಕಲಾವಿದೆ. ಸುಗಮಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ. ಕವಿಕಾವ್ಯಕ್ಕೆ ಸ್ವರಧಾರೆ. ಜನಪದ, ದೇವರನಾಮ, ವಚನಗಳ ಗಾಯನದಲ್ಲೂ ಸುಪ್ರಸಿದ್ಧಿ. ೧೦೦೦ಕ್ಕೂ ಹೆಚ್ಚು ವೇದಿಕೆಗಳಲ್ಲಿ ಗಾನಸುಧೆ. ‘ಸ್ವರ’ ಸಂಸ್ಥೆ ಮುಖೇನ ನೂರಾರು ಶಿಷ್ಯರ ರೂಪಿಸಿದ ಗುರು. ‘ಸ್ವರಾಲಯ’ ಸಂಸ್ಥೆ ಸ್ಥಾಪಿಸಿ ೨೦೦ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ೨೦೦ ಗೀತೆಗಳಿಗೆ ಸ್ವರಸಂಯೋಜನೆ. ದೇಶಾದ್ಯಂತ ಸಂಗೀತ ಕಾರ್ಯಕ್ರಮ, ನೊಂದವರಿಗೆ ನೆರವಾದ ಸಮಾಜಸೇವಕಿ. ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿಯ ಗೌರವಗಳಿಂದ ಸಂಪನ್ನವಾದ ಕಲಾಬದುಕು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಬಿ.ವಿ. ಶ್ರೀನಿವಾಸ್

ಸುಗಮ ಸಂಗೀತ ಕ್ಷೇತ್ರದಲ್ಲಿ ಸ್ವರಸಂಯೋಜಕ ಬಿ.ವಿ. ಶ್ರೀನಿವಾಸ್ ಅವರದ್ದು ಅಚ್ಚಳಿಯದ ಹೆಸರು, ನಾಲ್ಕು ದಶಕಕ್ಕೂ ಮೀರಿ ಸಂಗೀತ ಸೇವಾನಿರತ ಸಾಧಕರು.
ಹಾರ್ಮೋನಿಯಂ ವಿದ್ವಾನ್ ವೆಂಕಟೇಶಮೂರ್ತಿ ಹಾಗೂ ಚೆಲುವರಂಗಮ್ಮರ ಸುಪುತ್ರರಾದ ಬಿ.ವಿ. ಶ್ರೀನಿವಾಸ್ ಬಾಲ್ಯದಲ್ಲೇ ಸಂಗೀತಾಸಕ್ತರು, ಭಜನೆಮನೆಯೇ ಸ್ವರಪ್ರೇಮ ಪಲ್ಲವಿಸಿದ ಮಂದಿರ. ತಂದೆಯಿಂದ ಹಾರ್ಮೋನಿಯಂ ಪಾಠ. ಚೆಲುವೀರಯ್ಯ ಹಾಗೂ ವಿದ್ವಾಂಸರಾದ ಬಾಲಕೃಷ್ಣಪ್ಪರಿಂದ ಕರ್ನಾಟಕ ಸಂಗೀತದಲ್ಲಿ ವಯಲಿನ್ ಅಭ್ಯಾಸ, ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿಯವರಿಂದ ಸಿತಾರ್ ವಾದನ ಕಲಿಕೆ. ಕವಿಗೀತೆಗಳಿಗೆ ರಾಗ ಸಂಯೋಜಿಸುವ ಮೂಲಕ ಸುಗಮ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ. ೪೨ ವರ್ಷಗಳಿಂದ ಅಹರ್ನಿಶಿ ಸೇವೆ. ೨೦೦೦ಕ್ಕೂ ಅಧಿಕ ಗೀತೆಗಳಿಗೆ ಸಂಗೀತ ನಿರ್ದೇಶನ, ಅಪರಂಜಿ ಹಾಗೂ ಭಾಗ್ಯದ ಬೆಳೆಗಾರ ಜನಪ್ರಿಯ ಧ್ವನಿಸುರುಳಿಗಳು. ನಾಡಿನ ಬಹುತೇಕ ಗಾಯಕರೆಲ್ಲರಿಗೂ ಹಾರ್ಮೋನಿಯಂ-ಕೀಬೋರ್ಡ್ ಸಹಕಾರ, ಅಮೆರಿಕಾ, ಯೂರೋಪ್ ದೇಶಗಳಲ್ಲೂ ಪಕ್ಕವಾದ್ಯ ಸೇವೆ. ಕರ್ನಾಟಕ ಕಲಾಶ್ರೀ ಸೇರಿದಂತೆ ನಾಡಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿಂದ ಗೌರವಿಸಲ್ಪಟ್ಟ ಹಿರಿಮೆ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಅನಂತ ತೇರದಾಳ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಹಾಡುಗಾರರಲ್ಲಿ ಪಂಡಿತ್ ಅನಂತ ತೇರದಾಳ ಪ್ರಮುಖರು. ಆರು ದಶಕಕ್ಕೂ ಮೀರಿ ಸಂಗೀತಸೇವಾ ನಿರತ ಗಾಯಕಮಣಿ.
ಬೆಳಗಾವಿ ಜಿಲ್ಲೆಯ ಗಡಿನಾಡ ಪ್ರತಿಭೆ ಅನಂತ ತೇರದಾಳರ ಸ್ವರಪ್ರೇಮಕ್ಕೆ ಅಮ್ಮ ಹಾಡುತ್ತಿದ್ದ ದೇವರನಾಮವೇ ಸ್ಫೂರ್ತಿ. ಏಳನೇ ವಯಸ್ಸಿಗೆ ಹಾರ್ಮೋನಿಯಂ ವಾದಕ ಬಾಬುರಾವ್ ಬೋರಕರರಲ್ಲಿ ಸಂಗೀತಾಭ್ಯಾಸ. ಬಿ.ಡಿ. ಜೋಷ್ಯ ಅವರಿಂದ ಗ್ವಾಲಿಯರ್ ಘರಾಣೆ ತರಬೇತಿ. ಸಂಗೀತ ಮಾಂತ್ರಿಕ ಪಂಡಿತ್ ಭೀಮಸೇನ ಜೋಷಿ ಅವರ ಶಿಷ್ಯಗಾರಿಕೆಯ ಭಾಗ್ಯ ಒಲಿದದ್ದು ಪೂರ್ವಜನ್ಮದ ಸುಕೃತ. ‘ಸಂಗೀತ ವಿಶಾರದ’ ಪದವಿ ಬಳಿಕ ಸಂಗೀತವೇ ಬದುಕು-ಉಸಿರು. ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರಾಗಿ ಬಡ್ತಿ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ದುಬೈ, ಅಬುದಾಬಿ, ಶಾರ್ಜಾ ಸೇರಿದಂತೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಸಭೆಗಳಲ್ಲಿ ಸ್ವರಸೇವೆ. ರಸಿಕರ ಮನಗೆದ್ದ ಹಾಡುಗಾರಿಕೆ. ಕರ್ನಾಟಕ ಕಲಾಶ್ರೀ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ಅಂಬಯ್ಯ ನುಲಿ

ಅಂಬಯ್ಯ ನುಲಿ ಹಿಂದೂಸ್ತಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕ್ಷೇತ್ರದ ಮೇರುಸದೃಶ ಪ್ರತಿಭೆ, ಪಂಡಿತ್ ಅಂಬಯ್ಯ ನುಲಿ, ಅಪ್ಪಟ ಸಂಗೀತಗಾರ, ಸ್ವರಸಂಯೋಜಕ, ತೀರ್ಪುಗಾರರು.
ರಾಯಚೂರು ಜಿಲ್ಲೆ, ಹೂಸೂರಿನಲ್ಲಿ ೧೯೫೯ರಲ್ಲಿ ಜನಿಸಿದ ಅಂಬಯ್ಯರ ಪರಿವಾರವೇ ಸಂಗೀತಶಾಲೆ. ನಾದೊಲುಮೆ ಹುಟ್ಟಿನಿಂದಲೇ ಬಂದ ಬಳುವಳಿ. ಶಾಲಾಶಿಕ್ಷಕನಾಗಿ ವೃತ್ತಿ ಬದುಕು ಸಂಪನ್ನ. ಶರಣರ ವಚನ, ದಾಸರ ಕೀರ್ತನೆ, ಭಾವಗೀತೆಗಳ ಗಾಯನದಲ್ಲಿ ಸದಾ ತನ್ಮಯರು. ಅದ್ಭುತ ಕಂಠಸಿರಿಯ ಅನನ್ಯ ಗಾಯಕರು. ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರು. ಗಾಯನವೇ ಜೀವ-ಭಾವ. ೧೮೫ಕ್ಕೂ ಅಧಿಕ ಧ್ವನಿಸುರುಳಿ, ೧೫೦೦ಕ್ಕೂ ಹೆಚ್ಚು ಗೀತೆಗಳಿಗೆ ಸ್ವರಸಂಯೋಜನೆ, ನಾಟಕಗಳಿಗೆ ಗೀತರಚನೆ-ಸ್ವರಧಾರೆ, ಸುಪ್ರಸಿದ್ಧ ಟಿ.ವಿ. ಕಾರ್ಯಕ್ರಮಗಳ ತೀರ್ಪುಗಾರಿಕೆ, ಅಮೆರಿಕಾದ ಅಕ್ಕ ಸಮ್ಮೇಳನ, ದುಬೈನ ಉತ್ಸವ, ವಿಶ್ವಕನ್ನಡ ಸಮ್ಮೇಳನ, ದಸರಾ ಉತ್ಸವ, ಹಂಪಿ ಉತ್ಸವ ಮುಂತಾದ ದೇಶ-ವಿದೇಶಗಳ ಸಂಗೀತೋತ್ಸವಗಳಲ್ಲಿ ಹಾಡುಗಾರಿಕೆಯ ಹೆಚ್ಚುಗಾರಿಕೆ. ಸ್ವರಮಂದಾರ, ಗಾನಕೋಗಿಲೆ ಮುಂತಾದ ಹತ್ತಾರು ಪ್ರಶಸ್ತಿ-ಬಿರುದಾವಳಿಗಳಿಂದ ಅಲಂಕೃತರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಿ.ಎನ್. ಅಕ್ಕಿ

ಆದರ್ಶ ಶಿಕ್ಷಕ, ಕವಿ, ಲೇಖಕ, ಚಿತ್ರಕಲಾವಿದ, ಇತಿಹಾಸ ಸಂಶೋಧಕ ಡಿ.ಎನ್. ಅಕ್ಕಿ ಸದ್ದುಗದ್ದಲವಿಲ್ಲದ ಅಪರೂಪದ ಸಾಧಕರು. ಕಲ್ಯಾಣ ಕರ್ನಾಟಕದ ಮೇರು ಪ್ರತಿಭೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ದೇವೀಂದ್ರಪ್ಪ ನಾಭಿರಾಜ ಅಕ್ಕಿ ಚಿತ್ರಕಲೆಯಲ್ಲಿ ಡಿಪ್ಲೋಮಾ-ಆರ್ಟ್ ಮಾಸ್ಟರ್ ಪದವೀಧರರು. ಮೂರೂವರೆ ದಶಕದ ಚಿತ್ರಕಲಾ ಶಿಕ್ಷಕ ವೃತ್ತಿಯ ಜೊತೆಗೆ ಚಿತ್ರಕಲೆ, ಕಾವ್ಯ, ಲೇಖನ, ಸಂಶೋಧನಾ ಬರಹಗಳಲ್ಲಿ ತೊಡಗಿಸಿಕೊಂಡ ಕ್ರಿಯಾಶೀಲರು, ಶಹಾಪುರ ತಾಲ್ಲೂಕು ದರ್ಶನ, ಮುಂಬೆಳಗು, ಚಿಗುರು ಚಿಂತನ, ಸಗರನಾಡು ಸಿರಿ, ಹಡದವ್ವ ಹಾಡ್ಯಾಳ, ಯಕ್ಷಪ್ರಶ್ನೆ ಮುಂತಾದ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ ಹೆಗ್ಗಳಿಕೆ. ಇತಿಹಾಸದ ಕಾಲಘಟ್ಟಗಳ ಮೇಲೆ ಬೆಳಕು ಚೆಲ್ಲಿದ ಸಂಶೋಧಕರು. ಶಾತವಾಹನರ ಕಾಲದ ೨೦೦೦ ವರ್ಷಗಳ ಹಿಂದಿನ ಸೀಸದ ನಾಣ್ಯಗಳ ಶೋಧನೆ-ಸಂಗ್ರಹ ಸ್ಮರಣೀಯ ಕ್ಷೇತ್ರಕಾರ್ಯ. ರಾಜ್ಯ- ಕೇಂದ್ರದ ಆದರ್ಶ ಶಿಕ್ಷಕ ಸೇರಿ ಅನೇಕ ಪ್ರಶಸ್ತಿಗಳಿಂದ ಸಂಪನ್ನರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ವಲೇರಿಯನ್ ಡಿಸೋಜ (ವಲ್ಲಿ ವಗ್ಗ)

ಕೊಂಕಣಿ ಪ್ರಾದೇಶಿಕ ಭಾಷೆಯ ವಿಶಿಷ್ಟ ಪ್ರತಿಭೆ ವಲೇರಿಯನ್ ಡಿಸೋಜ, ಕೊಂಕಣಿ ಸಾಹಿತಿ, ಕನ್ನಡ ಕಥೆಗಾರರಾಗಿ ಅವರದ್ದು ಅಚ್ಚಳಿಯದ ಸಾಧನೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ವಗ್ಗದವರಾದ ವಲೇರಿಯನ್ ಡಿಸೋಜ 17ರ ಹರೆಯದಲ್ಲೇ ಸಾಹಿತ್ಯ ಲೋಕ ಪ್ರವೇಶಿಸಿದ ಕಥೆಗಾರ. ವೃತ್ತಿಯಲ್ಲಿ ಕೈಗಾರಿಕೋದ್ಯಮಿ, ಪ್ರವೃತ್ತಿಯಲ್ಲಿ ಬರಹಗಾರ- ಪ್ರಕಾಶಕ, ಚೊಚ್ಚಲ ಕೊಂಕಣಿ ಕಥೆ ‘ರಾಕೆ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದೇ ಬರವಣಿಗೆಗೆ ಮಹಾಸ್ಫೂರ್ತಿ. ಕಥೆ, ಕವನ, ಲೇಖನ, ಅಂಕಣಬರಹ, ನಾಟಕ ಪ್ರಕಾರಗಳಲ್ಲಿ 56 ವರ್ಷಗಳಿಂದ ನಿರಂತರ ಸಾಹಿತ್ಯ ಕೃಷಿ, ಕವಿಗೋಷ್ಠಿ- ವಿಚಾರಗೋಷ್ಠಿಯಲ್ಲಿ ವಿದ್ವತ್ತಿನ ಮಂಡನೆ, ಕೊಂಕಣಿಯಲ್ಲಿ ಏಳು, ಕನ್ನಡದ ಒಂದು ಕೃತಿ ಪ್ರಕಟಣೆ, ಕೊಂಕಣಿ ನಿಯತಕಾಲಿಕಗಳಲ್ಲಿ 150, ಕನ್ನಡದ ಪತ್ರಿಕೆಗಳಲ್ಲಿ 40 ಕಥೆಗಳು ಪ್ರಕಟ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಗೌರವ ಪ್ರಶಸ್ತಿ, ಬೆಹರಾನ್-ದುಬೈ ಸಂಘಟನೆಗಳಿಂದಲೂ ಗೌರವಕ್ಕೆ ಭಾಜನರಾದ ಸಾಧಕ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ರಾಮಣ್ಣ ಬ್ಯಾಟಿ (ವಿಶೇಷ ಚೇತನ)

ಗದಗ ಜಿಲ್ಲೆಯ ವಿಶೇಷ ಚೇತನ ರಾಮಣ್ಣ ಬ್ಯಾಟಿ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಅನನ್ಯ ಸಾಧಕರು. ಅಂಧತ್ವದಲ್ಲೇ ಸಾಹಿತ್ಯದ ಬೆಳಕು ಹರಿಸಿದ ಮಹಾಪ್ರತಿಭೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮನಿಹಾಳ-ಸುರೇಖಾನ ರಾಮಣ್ಣರ ಹುಟ್ಟೂರು. ಓದಿದ್ದು ನಾಲ್ಕ ತರಗತಿಯಾದರೂ ಬೆಳೆದದ್ದು ಆಗಸದೆತ್ತರಕ್ಕೆ, ಹೊರಗಣ್ಣಿನ ಅಂಧತ್ವ ಮೀರಿ ಒಳಗಣ್ಣಿಂದ ಲೋಕ ಅರಿತವರು. ಆಂತರ್ಯದ ಭಾವಗಳಿಗೆ ಅಕ್ಷರ ರೂಪವಿತ್ತು ಕಾವ್ಯಕಟ್ಟಿದ ಆಶುಕವಿ. ಗದ್ಯ-ಪದ್ಯಗಳ ರಚನೆಯಲ್ಲಿ ನಿಸ್ಸಿಮರು. ಚೌಪದಿ ಕಾವ್ಯ, ಭಾಮಿನಿ ಷಟ್ನದಿಯಲ್ಲಿ ರಚಿಸಿದ ಉದ್ಭಂಥಗಳು ಜನಾನುರಾಗಿ, ಸಿದ್ದಲಿಂಗ ಕಾವ್ಯಸುಧೆ, ಹೊಳಲಮ್ಮದೇವಿ ಶತಕ, ರಂಗಾವಧೂತರ ಚರಿತ್ರೆ ಗೌರಿಶಂಕರ ಚರಿತಾಮೃತ, ಹುಲಿಗೆಮ್ಮದೇವಿ ವ್ರತ ಮಹಾತ್ಮ ಮುಂತಾದ ೬೦ ಗ್ರಂಥಗಳು ಸಾಹಿತ್ಯಲೋಕಕ್ಕೆ ಕೊಟ್ಟ ಅನನ್ಯ ಕೊಡುಗೆ. ಗದಗ-ರಾಮದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅವ್ವ ಪ್ರಶಸ್ತಿ, ದೇವರ ದಾಸಿಮಯ್ಯ ಮುಂತಾದ ಪ್ರಶಸ್ತಿಗಳಿಗೆ ಸತ್ಪಾತ್ರರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ವಿ. ಮುನಿವೆಂಕಟಪ್ಪ

ಕವಿ, ವಿಮರ್ಶಕ, ಚಿಂತಕ, ಸಂಶೋಧಕ, ಬಂಡಾಯ ಸಾಹಿತಿ ಹಾಗೂ ಹೋರಾಟಗಾರರಾದ ಡಾ. ವಿ. ಮುನಿವೆಂಕಟಪ್ಪ ಬಹುಮುಖಿ ವ್ಯಕ್ತಿತ್ವದ ಸಾಧನಾಶೀಲರು.
ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕಿನ ಯಡಹಳ್ಳಿಯಲ್ಲಿ ಜನಿಸಿದ ಮುನಿವೆಂಕಟಪ್ಪ ಅವರು ಕೃಷಿ ಪದವಿ, ಸ್ನಾತಕೋತ್ತರ ಪದವೀಧರರು. ಪಿ.ಎಚ್ಡಿ ಪುರಸ್ಕೃತರು. ಬಂಡಾಯ ಸಾಹಿತ್ಯ-ದಲಿತ ಚಳವಳಿಯ ಅಂಗಳದಲ್ಲಿ ಅರಳಿದ ಸಮಸಮಾಜದ ಕನಸುಗಾರ. ದಲಿತ ಸಂಘರ್ಷ ಸಮಿತಿಯ ಮೂಲಕ ಸಾಮಾಜಿಕ ಬದುಕಿಗೆ ಪ್ರವೇಶ. ಬಂಡಾಯ ಸಾಹಿತ್ಯ ಚಳವಳಿಯ ಸಂಸ್ಥಾಪಕ ಸದಸ್ಯರು. ಕರ್ನಾಟಕ ವಿಚಾರವಾದಿ ಒಕ್ಕೂಟ, ಚೇತನ ಟ್ರಸ್ಟ್ನ ಅಧ್ಯಕ್ಷರಾಗಿ ದುಡಿದವರು. ಲೋಕಾಭನುವ ಒಳಬೇಗುದಿಯನ್ನೇ ಕಾವ್ಯವಾಗಿಸಿದ ಕವಿ. ಕೆಂಡದ ನಡುವೆ, ಸ್ವಾಭಿಮಾನದ ಬೀಡಿಗೆ, ಕಾಡು ಕಣಿವೆಯ ಹಕ್ಕಿ, ಬಾಲಕ ಅಂಬೇಡ್ಕರ್್ರ ಮುಂತಾದ ಮಹತ್ವದ ೬೨ ಕೃತಿಗಳ ಕರ್ತೃ, ವಿಚಾರವಾದಿ, ಲೇಖಕ, ಚಳವಳಿಗಾರರಾಗಿ ಅವರದ್ದು ಹೆಗ್ಗುರುತಿನ ಸಾಧನೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ಸಾಹಿತ್ಯಶ್ರೀ ಮತ್ತಿತರ ಪ್ರಶಸ್ತಿ ಪುರಸ್ಕೃತ ಸಶಕ್ತ ದಲಿತಧ್ವನಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸಿ.ಪಿ. ಸಿದ್ಧಾಶ್ರಮ

ಕನ್ನಡದ ಸಾರಸ್ವತ ಲೋಕ ಕಂಡ ಬಹುಮುಖ ಪ್ರತಿಭೆ ಪ್ರೊ. ಸಿ.ಪಿ. ಸಿದ್ಧಾಶ್ರಮ. ಸಾಹಿತ್ಯಾಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರದ ಬಹುಶ್ರುತ ಸಾಧಕರು.
ಧಾರವಾಡ ಜಿಲ್ಲೆ, ಹುಲ್ಲಂಬಿ ಗ್ರಾಮದ ಪ್ರೊ. ಚಿದಾನಂದ ಪರಸಪ್ಪ ಸಿದ್ಧಾಶ್ರಮ ಕರ್ನಾಟಕ ಕಲಾ ಕಾಲೇಜಿನಲ್ಲಿ ಪದವಿ, ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ಡಿ ಪಡೆದವರು. ಕನ್ನಡ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕರಾಗಿ ನಾಲ್ಕೂವರೆ ದಶಕಗಳ ಕಾಲದ ಅನನ್ಯ ಸೇವೆ. ಮೈಸೂರು ವಿವಿ ಪ್ರಭಾರ ಕುಲಪತಿ, ಕಲಾನಿಕಾಯದ ಡೀನ್, ಸಿಂಡಿಕೇಟ್ ಸದಸ್ಯ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಪಾರ ಆಡಳಿತಾತ್ಮಕ-ಶೈಕ್ಷಣಿಕ ಅನುಭವ. ವಿಮರ್ಶಕ, ಸಂಶೋಧಕ, ಕವಿ, ಆಧುನಿಕ ವಚನಕಾರ, ಸಂಸ್ಕೃತಿ ಚಿಂತಕರಾಗಿ ಅಮೂಲ್ಯ ಸಾಹಿತ್ಯಾರಾಧನೆ. ಹೊಸ ಅಲೆ, ಹೊಳಹು, ನಿಕಷ, ದಿಟದ ದಿಟ್ಟಿಯ ಪಯಣ ಸೇರಿದಂತೆ ೨೪ ಕೃತಿಗಳ ರಚನಕಾರರು. ಹಲವಾರು ಪ್ರಶಸ್ತಿ- ಗೌರವಗಳಿಂದ ಭೂಷಿತರು. ಭೂಷಿತರ