Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಎ. ನಾಗರತ್ನ

ವೈದ್ಯಲೋಕದಲ್ಲಿ ಮಾನವೀಯ ಸೇವೆ-ಅಂತಃಕರಣದ ನಡೆಗೆ ಹೆಸರಾದ
ಡಾ|| ಎ.ನಾಗರತ್ನ, ಗಣಿನಾಡು ಬಳ್ಳಾರಿಯ ಹಿರಿಯ ವೈದ್ಯೆ, ಹಿರಿಯ ನಾಗರಿಕರ ಆಶ್ರಯದಾತೆ. ಅಪರೂಪದ ವೈದ್ಯೆ ೭೦ರ ದಶಕದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದ ಡಾ. ನಾಗರತ್ನ ಮಣೆ ಮತ್ತು ಮುಂಬಯಿಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರ್ಣಗೊಳಿಸಿದರು. ವೃದ್ಧರನ್ನು ಕಾಡುವ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಶೇಷ ಪರಿಣಿತಿ, ಬಳ್ಳಾರಿಯಲ್ಲಿ ಸ್ವಂತ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ ನಡೆಸುವುದರ ಜೊತೆಗೆ ಕೇಂದ್ರ ಸರ್ಕಾರದ పెటుంబ ಯೋಜನಾ ಸಂಸ್ಥೆಯ ಸಹಭಾಗಿತ್ವದಲ್ಲಿ ನೂರಾರು ಲಸಿಕಾ ಶಿಬಿರಗಳ ಆಯೋಜನೆ. ತಂದೆಯ ಕನಸಿನಂತೆ ೧೯೯೮ರಲ್ಲಿ ಹಿರಿಯ ನಾಗರಿಕರಿಗಾಗಿಯೇ ‘ಕೃಷ್ಣ ಸನ್ನಿಧಿ’ ಆಶ್ರಮ ಸ್ಥಾಪಿಸಿ ಮಾನವೀಯ ಸೇವೆ. ೨೦೧೨ರಲ್ಲಿ ಬಳ್ಳಾರಿಯ ಹೊರವಲಯದ ಸಂಗನಕಲ್ಲುನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಆಸ್ಪತ್ರೆಯಿರುವ ಬೃಹತ್ ವೃದ್ಧಾಶ್ರಮ ನಿರ್ಮಾಣ. ೮೦ ವೃದ್ಧರ ಆರೈಕೆಯಲ್ಲಿ ಅನವರತ ನಿರತರು. ವೃದ್ಧರ ಸೇವೆಯಲ್ಲೇ ಕೃಷ್ಣನ ಕಂಡ ಸೇವಾಸಿಂಧು.