Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ್ ಅಂಬಯ್ಯ ನುಲಿ

ಅಂಬಯ್ಯ ನುಲಿ ಹಿಂದೂಸ್ತಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕ್ಷೇತ್ರದ ಮೇರುಸದೃಶ ಪ್ರತಿಭೆ, ಪಂಡಿತ್ ಅಂಬಯ್ಯ ನುಲಿ, ಅಪ್ಪಟ ಸಂಗೀತಗಾರ, ಸ್ವರಸಂಯೋಜಕ, ತೀರ್ಪುಗಾರರು.
ರಾಯಚೂರು ಜಿಲ್ಲೆ, ಹೂಸೂರಿನಲ್ಲಿ ೧೯೫೯ರಲ್ಲಿ ಜನಿಸಿದ ಅಂಬಯ್ಯರ ಪರಿವಾರವೇ ಸಂಗೀತಶಾಲೆ. ನಾದೊಲುಮೆ ಹುಟ್ಟಿನಿಂದಲೇ ಬಂದ ಬಳುವಳಿ. ಶಾಲಾಶಿಕ್ಷಕನಾಗಿ ವೃತ್ತಿ ಬದುಕು ಸಂಪನ್ನ. ಶರಣರ ವಚನ, ದಾಸರ ಕೀರ್ತನೆ, ಭಾವಗೀತೆಗಳ ಗಾಯನದಲ್ಲಿ ಸದಾ ತನ್ಮಯರು. ಅದ್ಭುತ ಕಂಠಸಿರಿಯ ಅನನ್ಯ ಗಾಯಕರು. ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರು. ಗಾಯನವೇ ಜೀವ-ಭಾವ. ೧೮೫ಕ್ಕೂ ಅಧಿಕ ಧ್ವನಿಸುರುಳಿ, ೧೫೦೦ಕ್ಕೂ ಹೆಚ್ಚು ಗೀತೆಗಳಿಗೆ ಸ್ವರಸಂಯೋಜನೆ, ನಾಟಕಗಳಿಗೆ ಗೀತರಚನೆ-ಸ್ವರಧಾರೆ, ಸುಪ್ರಸಿದ್ಧ ಟಿ.ವಿ. ಕಾರ್ಯಕ್ರಮಗಳ ತೀರ್ಪುಗಾರಿಕೆ, ಅಮೆರಿಕಾದ ಅಕ್ಕ ಸಮ್ಮೇಳನ, ದುಬೈನ ಉತ್ಸವ, ವಿಶ್ವಕನ್ನಡ ಸಮ್ಮೇಳನ, ದಸರಾ ಉತ್ಸವ, ಹಂಪಿ ಉತ್ಸವ ಮುಂತಾದ ದೇಶ-ವಿದೇಶಗಳ ಸಂಗೀತೋತ್ಸವಗಳಲ್ಲಿ ಹಾಡುಗಾರಿಕೆಯ ಹೆಚ್ಚುಗಾರಿಕೆ. ಸ್ವರಮಂದಾರ, ಗಾನಕೋಗಿಲೆ ಮುಂತಾದ ಹತ್ತಾರು ಪ್ರಶಸ್ತಿ-ಬಿರುದಾವಳಿಗಳಿಂದ ಅಲಂಕೃತರು.