Categories
ನೃತ್ಯ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ನಾಟ್ಯವಿದುಷಿ ಜ್ಯೋತಿ ಪಟ್ಟಾಭಿರಾಮ್

ನೃತ್ಯ ಕ್ಷೇತ್ರದ ಮಹೋನ್ನತ ಸಾಧಕಿ ನಾಟ್ಯಾಚಾರ್ಯ ಜ್ಯೋತಿ ಪಟ್ಟಾಭಿರಾಮ್, ನೂರಾರು ವಿದ್ಯಾರ್ಥಿಗಳ ನೃತ್ಯಗುರು, ಪ್ರತಿಭಾವಂತ ನೃತ್ಯ ಸಂಯೋಜಕಿ
ಶಿವಮೊಗ್ಗ ಜಿಲ್ಲೆ ಸಾಗರದವರು ಜ್ಯೋತಿ ಪಟ್ಟಾಭಿರಾಮ್. ಬಾಲ್ಯದಲ್ಲೇ ಅಜ್ಜಿಯ ಒತ್ತಾಸೆಯಿಂದ ಭಾರತಿ- ಮಣಿಯವರಲ್ಲಿ ನೃತ್ಯಾಭ್ಯಾಸ ಶುರು, ಅನಂತರ ಓಂಕಾರ್, ಮುರಳೀಧರರಾವ್, ಉಪಾದಾತಾರ್, ಎಚ್.ಆರ್. ಕೇಶವಮೂರ್ತಿ, ಕಲಾನಿಧಿ ಮಾಮಿ, ತಂಜಾವೂರಿನ ಕಿಟ್ಟಪ್ಪ ಪಿಳ್ಳೆ ಮುಂತಾದ ಗುರುವರ್ಯರಿಂದ ದಕ್ಕಿಸಿಕೊಂಡ ನೃತ್ಯಕಲಾವಂತಿಕೆ, ಸ್ನಾತಕೋತ್ತರ ಇಂಗ್ಲಿಷ್ ಪದವಿ ಪಡೆದು ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿದರೂ ಸೆಳೆತವೆಲ್ಲ ನೃತ್ಯದೆಡೆಗೆ, ಸಾಧನ ಸಂಗಮ ನಾಟ್ಯ ಸಂಸ್ಥೆ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಅನ್ನದಾಸೋಹ. ನಿರಂತರ ಶಾಸ್ತ್ರೀಯ ನೃತ್ಯೋತ್ಸವಗಳ ಆಯೋಜನೆ, ದೇಶ-ವಿದೇಶಗಳಲ್ಲಿ ನೂರಾರು ನೃತ್ಯಪ್ರದರ್ಶನ, ಅಮೆರಿಕಾದಲ್ಲಿ ನೃತ್ಯ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಉಪನ್ಯಾಸಗಳ ನೀಡಿಕೆ, ನ್ಯೂಜೆರ್ಸಿಯಲ್ಲೂ ನೃತ್ಯ ಸಂಸ್ಥೆ ಸ್ಥಾಪನೆ. ಜನಪ್ರಿಯ ನೃತ್ಯರೂಪಕಗಳ ನಿರ್ದೇಶನ, ನಾಟ್ಯಸಂಯೋಜನೆ, ಭರತನಾಟ್ಯ, ಸಂಗೀತ, ಯೋಗ, ಶ್ರೀವಿದ್ಯೆಯ ಧಾರೆಯೆರೆದ ಹೆಗ್ಗಳಿಕೆಯ ನಾಟ್ಯಕಲಾವಿಶಾರದೆ, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿ ಪುರಸ್ಕೃತೆ.

Categories
ನೃತ್ಯ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಶಾವಮ್ಮ

ವಿಶಿಷ್ಟ ರೀತಿಯ ಲಂಬಾಣಿ ಸಂಸ್ಕೃತಿಯ ವೇಷಭೂಷಣ ಹಾಗೂ ನರ್ತನವನ್ನು ಮೈಗೂಡಿಸಿಕೊಂಡಿರುವ ಶಾವಮ್ಮ ಅವರು ಕಳೆದ ಏಳು ದಶಕಗಳಿಂದ ಅದನ್ನು ಪ್ರದರ್ಶಿಸುತ್ತ ಜನಪ್ರಿಯರಾಗಿದ್ದಾರೆ.

ಲಂಬಾಣಿ ನೃತ್ಯಗಳನ್ನು ಅದ್ಭುತವಾಗಿ ಅಭಿನಯಿಸುವ ಶಾವಮ್ಮ ಅನೇಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಲಂಬಾಣಿ ಭಾಷೆ, ವೇಷಭೂಷಣ ಹಾಗೂ ಹಾಡು-ನೃತ್ಯಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುತ್ತಿರುವ ಶಾವಮ್ಮ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗೌರವವೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಉಳ್ಳಾಲ ಮೋಹನಕುಮಾರ್

ಶಾಲಾ ದಿನಗಳಲ್ಲಿಯೇ ನೃತ್ಯ ಶಿಕ್ಷಣವನ್ನು ಆರಂಭಿಸಿ ನಂತರ ಭರತನಾಟ್ಯದಲ್ಲಿ ಉನ್ನತ ಶಿಕ್ಷಣವನ್ನೂ ಪಡೆದ ಉಲ್ಲಾಳ ಮೋಹನಕುಮಾರ್ ನೃತ್ಯಕ್ಕಾಗಿಯೇ ಕಟ್ಟಿದ ಸಂಸ್ಥೆಯೊಂದರ ಸಕ್ರಿಯ ಸದಸ್ಯರಾಗಿ ನೃತ್ಯ ಕಲಿಸುವ ಕಾಯಕದಲ್ಲಿ ತೊಡಗಿದರು.ಇವರ ಶಿಷ್ಯವೃಂದ ದೇಶವಿದೇಶಗಳಲ್ಲಿ ನೆಲೆಸಿದ್ದು ನೃತ್ಯ ಪ್ರಸಾರದಲ್ಲಿ ನಿರತರಾಗಿದ್ದಾರೆ.

ಅನೇಕ ಪೌರಾಣಿಕ ಹಾಗೂ ಧಾರ್ಮಿಕ ನೃತ್ಯ ರೂಪಕಗಳನ್ನು ನಿರ್ದೇಶಿಸಿರುವ ಮೋಹನಕುಮಾರ್ ಅವರು ತುಳು ಭಾಷೆಯಲ್ಲಿಯೂ ನೃತ್ಯ ರೂಪಕ ಸಂಯೋಜಿಸಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ. ರಾಜ್ಯಮಟ್ಟದ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಇದ್ದ ಮೋಹನಕುಮಾರ್ ಅವರು ಸಾಕ್ಷ್ಯಚಿತ್ರಗಳಿಗೆ ನಾಟ್ಯ ಸಂಯೋಜನೆ ಮಾಡಿದ್ದಾರೆ. ಇವರಿಗೆ ಪ್ರತಿಷ್ಟಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ರಾಜೇಂದ್ರಸಿಂಗ್ ಪವಾರ್

ಹಾರ್ಮೋನಿಯಂ ವಾದ್ಯವನ್ನು ರಾಷ್ಟ್ರಮಟ್ಟದಲ್ಲಿಯೂ ಬೆಳಗುವಂತೆ ಮಾಡಿದ ಕೆಲವೇ ವಿದ್ವಾಂಸರಲ್ಲಿ ಬೀದರ್ ಜಿಲ್ಲೆಯ ರಾಜೇಂದ್ರ ಸಿಂಗ್ ಪವಾರ್ ಅವರು ಒಬ್ಬರು.

ನಾಲ್ಕು ದಶಕಗಳಿಂದ ಹಾರ್ಮೋನಿಯಂ ವಾದಕರಾಗಿದ್ದು, ಸಂಗೀತ ಸೇವೆ ಮಾಡುತ್ತಿರುವ ಇವರು ಬೀದರಿನಲ್ಲಿ ಸಂಗೀತ ಕಲಾಮಂಡಳವನ್ನು ಸ್ಥಾಪಿಸಿ ಭಕ್ತಿಗೀತೆ ಹಾಗು ಭಜನಾ ಹಾಡುಗಳಿಗೆ ಹೊಸ ಬಗೆಯ ಸಂಗೀತ ಸಂಯೋಜನೆ ಮಾಡಿ ಕೇಳುಗರ ಮನಗೆದ್ದಿದ್ದಾರೆ.

ಪವಾರ್ ಅವರ ಹಾರ್ಮೋನಿಯಂ ಸೋಲೋ ಪ್ರಯೋಗ ರಾಷ್ಟ್ರ ಹಾಗೂ ರಾಜ್ಯಮಟ್ಟದ ಸಂಗೀತ ಸಮ್ಮೇಳನಗಳಲ್ಲಿ ಜನಪ್ರಿಯವಾಗಿದ್ದು, ಅದಕ್ಕಾಗಿ ಇವರಿಗೆ ಹಲವು ಗೌರವ ಸನ್ಮಾನಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ. ಕಮಲಾಕ್ಷ ಆಚಾರ್

ಕರ್ನಾಟಕದ ನೃತ್ಯ ಕಲಾಕ್ಷೇತ್ರದಲ್ಲಿ ನೃತ್ಯಪಟು, ಗುರು, ಸಂಘಟಕರಾಗಿ ಹೆಗ್ಗುರುತಿನ ಸಾಧನೆ ದಾಖಲಿಸಿದವರು ಪಿ.ಕಮಲಾಕ್ಷ ಆಚಾರ್, ಬಹುಕಲಾ ಆಸಕ್ತಿಯ ಬಹುಮುಖ ಪ್ರತಿಭೆ, ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಪಡ್ಡಿರೆಯಲ್ಲಿ ೧೯೪೭ರಲ್ಲಿ ಜನಿಸಿದ ಕಮಲಾಕ್ಷ ಆಚಾರ್ ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಬಹುಕಲಾವಿದರು. ಕುಲಕಸುಬು ಬಡಗಿ ಕೆಲಸ ಮಾಡುತ್ತಲೇ ಎಸ್‌ಎಸ್‌ಎಲ್‌ಸಿ ಪೂರೈಸಿದ ಕಮಲಾಕ್ಷ ಅವರು ಚಿತ್ರಕಲೆ, ಛಾಯಾಗ್ರಹಣದಲ್ಲೂ ದುಡಿದವರು. ಪ್ರಾಥಮಿಕ ಶಾಲಾಶಿಕ್ಷಕನಾಗಿರುವಾಗ ನೃತ್ಯಕಲೆಯ ಮೋಹಕ್ಕೊಳಗಾಗಿ ಹಲವು ಗುರುಗಳ ಗರಡಿಯಲ್ಲಿ ನೃತ್ಯಪಟುವಾಗಿ ರೂಪಗೊಂಡ ಹೆಗ್ಗಳಿಕೆ. ೧೯೭೮ರಲ್ಲಿ ನೃತ್ಯನಿಕೇತನ ಸಂಸ್ಥೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣ, ಅನೇಕ ಪ್ರತಿಭಾವಂತ ನೃತ್ಯಪಟುಗಳನ್ನು ಕ್ಷೇತ್ರಕ್ಕೆ ಕೊಟ್ಟ ಹಿರಿಮೆ, ಸಾವಿರಾರು ಕಲಾವಿದರನ್ನು ರೂಪಿಸಿದ ಗುರು. ಉತ್ತಮ ಶಿಕ್ಷಕನಾಗಿ ಗೌರವಿಸಲ್ಪಟ್ಟ ಸಂತೃಪ್ತಿ, ಬೆಳ್ತಂಗಡಿಯಲ್ಲಿ ದೇಶದ ಹೆಸರಾಂತ ನೃತ್ಯಗುರುಗಳ ಭರತನಾಟ್ಯ ಕಾರ್ಯಕ್ರಮವನ್ನು ಸಂಘಟಿಸಿ ಕಲಾರಸಧಾರೆ ಉಣಬಡಿಸಿದ ಕಮಲಾಕ್ಷ ಆಚಾರ್ ಸ್ವತಃ ನಡೆಸಿಕೊಟ್ಟ ಕಾರ್ಯಕ್ರಮಗಳು ಅಗಣಿತ. ಶಿಷ್ಯರನ್ನು ರಂಗಪ್ರವೇಶ ಮಾಡಿಸಿ ನೃತ್ಯಗಾರರಾಗಿಸುವಲ್ಲಿ ಸಾರ್ಥಕತೆ ಕಂಡ ಕಮಲಾಕ್ಷ ಆಚಾರ್ ಅವರು ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸಿಸಿರುವ ಬಹುಕಲಾಸಕ್ತರು, ನೃತ್ಯಕಲಾಸಂಸ್ಕಾರರತ್ನ, ನೃತ್ಯಸೌರಭ, ನೃತ್ಯನಿಧಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಸತ್ಪಾತ್ರರು.

Categories
ನೃತ್ಯ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಎಂ.ಆರ್.ಕೃಷ್ಣಮೂರ್ತಿ

ನಾಟ್ಯರಂಗದಲ್ಲಿ ದಶಕಗಳಿಂದಲೂ ತೊಡಗಿಸಿಕೊಂಡಿರುವ ಪ್ರೊ ಎಂ.ಆರ್.ಕೃಷ್ಣಮೂರ್ತಿ ನಾಟ್ಯಾಚಾರರೆಂದೇ ಹೆಸರುವಾಸಿ. ಬೆಳ್ಳಿಹಬ್ಬದ ಸಂಭ್ರಮ ಕಂಡಿರುವ ಕಲಾಕ್ಷಿತ್ರಿಯ ಸಂಸ್ಥೆಯ ಸಂಸ್ಥಾಪಕರು, ನಾಟ್ಯ ಗುರು.
ಮೂಲತಃ ಬೆಂಗಳೂರಿನವರಾದ ಕೃಷ್ಣಮೂರ್ತಿ ಅವರು ಹುಟ್ಟಿದು ೧೯೩೬ರ ಡಿಸೆಂಬರ್ ೧೯ರಂದು. ಬಾಲ್ಯದಿಂದಲೂ ನಾಟ್ಯ, ಗಾಯನದಲ್ಲಿ ಒಲವು. ಹದಿನೈದನೇ ವಯಸ್ಸಿಗೆ ನಾಟ್ಯದಂಪತಿಗಳಾದ ಪ್ರೊ. ಯು.ಎಸ್.ಕೃಷ್ಣರಾವ್-ಚಂದ್ರಭಾಗಾದೇವಿ ಅವರ ಮಾರ್ಗದರ್ಶನದಲ್ಲಿ ಮದ್ರಾಸಿನ ರುಕ್ಷಿಣಿದೇವಿ ಅರುಂಡೇಲರ ಕಲಾಕ್ಷೇತ್ರದಲ್ಲಿ ನೃತ್ಯಾಭ್ಯಾಸ, ಮೈಲಾಪುರ್ ಗೌರಿ ಅಮ್ಮಾಳರಲ್ಲಿ ನೃತ್ಯಾಭಿನಯ, ಚಂದುಪಣಿಕ್ಕರ್ರವರಲ್ಲಿ ಕಥಕ್ಕಳಿ ಕಲಿಕೆ. ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ. ನಾಟ್ಯಶಾಸ್ತ್ರ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಕೃಷ್ಣಮೂರ್ತಿ ಅವರದ್ದು ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕಲಾಪ್ರದರ್ಶನ ನೀಡಿದ ಹೆಗ್ಗಳಿಕೆ. ೧೯೯೧ರಲ್ಲಿ ಬೆಂಗಳೂರಿಗೆ ಮರಳಿ ‘ಕಲಾಕ್ಷಿತಿಯ’ ಸಂಸ್ಥೆ ಸ್ಥಾಪನೆ, ನೂರಾರು ಮಕ್ಕಳಿಗೆ ಭರತನಾಟ್ಯ ಕಲೆಯ ಧಾರೆಯೆರೆಯುವಿಕೆ. ಹಲವು ಜನಪ್ರಿಯ ನೃತ್ಯರೂಪಕಗಳನ್ನು ಸಂಯೋಜಿಸಿರುವ ಕೃಷ್ಣಮೂರ್ತಿ ಅವರ ಸಾರ್ಥಕ ಕಲಾಸೇವೆಗೆ ಕರ್ನಾಟಕ ಕಲಾಶ್ರೀ, ನಾಟ್ಯತಪಸ್ವಿ ಬಿರುದು, ಪುರ್ವಂಕರ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.

Categories
ನೃತ್ಯ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಕೆ. ಮುರಳೀಧರರಾವ್

ಯಕ್ಷಗಾನ ಕಲಾವಿದರ ಮನೆತನದವರಾದ ಕೆ.ಮುರಳೀಧರರಾವ್ ಮೈಸೂರಿನಲ್ಲಿ ನಾಟ್ಯಾಚಾರ್ಯರಾಗಿ ಪ್ರಸಿದ್ಧರು. ಪಂದಾನಲ್ಲೂರು ಶೈಲಿಯ ಭರತನಾಟ್ಯ ಶಿಕ್ಷಣವನ್ನು ಪಡೆದು ನಂತರ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸಿದ ಮುರಳೀಧರರಾವ್ ನಾಡಿನುದ್ದಕ್ಕೂ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಉಭಯ ನೃತ್ಯ ಪ್ರಕಾರಗಳಲ್ಲಿ ಹಲವು ಮಂದಿಗೆ ಶಿಕ್ಷಣ ನೀಡಿರುವ ಮುರಳೀಧರರಾವ್ ಅವರಿಗೆ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ.

Categories
ನೃತ್ಯ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಗೀತಾ ಬಾಲಿ

ಅಂಗವಿಕಲರ ಸೇವೆಯೇ ಜೀವನದ ಗುರಿ ಎಂದು ಭಾವಿಸಿ, ತಮ್ಮ ಜೀವನವನ್ನು ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮುಡುಪಿಟ್ಟ ಶಾಸ್ತ್ರೀಯ ನೃತ್ಯಪಟು ಗೀತಾ ಬಾಲಿ ಅವರು.
ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಗಳಲ್ಲಿ ಪರಿಣತಿ ಪಡೆದಿರುವ ೫೮
ವರ್ಷದ ಗೀತಾ ಬೆಂಗಳೂರಿನವರು.
ಅವರು ಕಳೆದ ೪೦ ವರ್ಷಗಳಿಂದ ನೃತ್ಯ ಕ್ಷೇತ್ರದ ಸಾಧನೆಯಲ್ಲಿ ತೊಡಗಿರುವರು. ಶ್ರೀ ರಮಣ ಮಹರ್ಷಿ ಅಂಧರ ಅಕಾಡೆಮಿಯ ಮಕ್ಕಳಿಗೆ ನೃತ್ಯ ಶಿಕ್ಷಣ ಧಾರೆಯೆರೆಯುತ್ತಿರುವರು. ನೃತ್ಯ ಕಲಿತ ಅಂಧ ಮಕ್ಕಳು ಹಲವೆಡೆ ಕಾರ್ಯಕ್ರಮ ನೀಡಿ ಮೆಚ್ಚುಗೆಗೆ ಪಾತ್ರರು.
ಗೀತಾ ಅವರು ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪರಿಮಿತ ಸೇವೆಗಾಗಿ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ೨೦೦೧ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಹಾಗೂ ೨೦೦೩ರಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಶಿಕ್ಷಕಿ ಪ್ರಶಸ್ತಿಗಳು ಸಂದಿವೆ.
ಕಲಿತ ವಿದ್ಯೆ, ಕಲೆಯನ್ನು ಇತರರಿಗೆ ಕಲಿಸಿಕೊಟ್ಟಾಗ ಜ್ಞಾನ ದಿಗಂತ ವಿಸ್ತರಿಸುವುದು ಎಂಬ ಮಾತಿನಂತೆ ಬದುಕುತ್ತಿರುವವರು ನೃತ್ಯ ಕಲಾವಿದೆ ಶ್ರೀಮತಿ ಗೀತಾ ಬಾಲಿ.

Categories
ನೃತ್ಯ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಚಿತ್ರಾ ವೇಣುಗೋಪಾಲ್

ಕರ್ನಾಟಕದ ಅಗ್ರಮಾನ್ಯ ಕಥಕ್ ನರ್ತಕಿಯರಲ್ಲಿ ಒಬ್ಬರಾದ ಚಿತ್ರಾ ವೇಣುಗೋಪಾಲ್ ಹೆಸರಾಂತ ಕಥಕ್ ನೃತ್ಯಪಟು ಮಾಯಾರಾವ್ ಅವರಿಂದ ಶಿಕ್ಷಣ ಪಡೆವರು. ನಾಟ್ಯ ಸರಸ್ವತಿ ನೃತ್ಯಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಚಿತ್ರಾ ಅವರು ಶಂಭು ಮಹಾರಾಜರಿಂದ ಕಥಕ್ ನೃತ್ಯದಲ್ಲಿ ಹೆಚ್ಚಿನ ತರಬೇತಿ ಪಡೆದರಲ್ಲದೆ ಡಾಗರ್ ಸಹೋದರರಿಂದ ಸಂಗೀತಾಭ್ಯಾಸವನ್ನೂ ಮಾಡಿದರು.
ಕಥಕ್ ನೃತ್ಯ ಕಾರ್ಯಕ್ರಮಗಳನ್ನು ದೇಶ ವಿದೇಶಗಳಲ್ಲಿ ನೀಡಿರುವ ಚಿತ್ರಾ ವೇಣುಗೋಪಾಲ್ ಅವರಿಗೆ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಕಜಾ ರಾಮಕೃಷ್ಣಯ್ಯ

ಪಂಕಜಾ ರಾಮಕೃಷ್ಣಯ್ಯನವರು ಪದವಿಯ ನಂತರ ನೃತ್ಯದತ್ತ ಒಲವು ಬೆಳಸಿಕೊಂಡು ನಾಟ್ಯಾಚಾರ್ಯ ಎಂ. ವಿಷ್ಣುದಾಸ್ ಗುರುಗಳನ್ನಾಗಿ ಸ್ವೀಕರಿಸಿ ನಾಟ್ಯವನ್ನು ಅಭ್ಯಾಸ ಮಾಡಿದರು. ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯಲ್ಲೂ ತೇರ್ಗಡೆಯಾಗಿ ನಂತರ ಕಥಕ್ ಪ್ರಾಕಾರವನ್ನೂ ತಮ್ಮದಾಗಿಸಿಕೊಂಡರು.

ತಾವು ಕಲಿತ ವಿದ್ಯೆಯನ್ನು ಆಸಕ್ತರಿಗೆ ಕಲಿಸುವ ಉದ್ದೇಶದಿಂದ ಪಂಕಜಾ ರಾಮಕೃಷ್ಣಯ್ಯ ಅವರು ಮೈಸೂರಿನಲ್ಲಿ ಸರ್ವೇಶ್ವರ ನೃತ್ಯ ಮಂದಿರದ ಮೂಲಕ ಆಸಕ್ತ ಯುವ ಯುವತಿಯರಿಗೆ, ವಿಶೇಷವಾಗಿ ಹಿಂದುಳಿದ ವರ್ಗಗಳ ಮತ್ತು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೃತ್ಯ, ಸಂಗೀತ, ವಾದ್ಯ ಸಂಗೀತ, ಚಿತ್ರಕಲೆ ತರಬೇತಿ ನೀಡುವ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಇಂದೂ ವಿಶ್ವನಾಥ್

ಚಿಕ್ಕಂದಿನಲ್ಲಿಯೇ ಸಾಂಪ್ರದಾಯಿಕ ಸಂಗೀತ ಶಿಕ್ಷಣ ಪಡೆದ ಇಂದೂ ವಿಶ್ವನಾಥ್ ಅವರು ನಂತರದ ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದಲ್ಲಿ ತರಬೇತಿ ಪಡೆದರು. ಹಿನ್ನೆಲೆ ಗಾಯನದಲ್ಲಿ ಡಿಪ್ಲೋಮಾ ಗಳಿಸಿರುವ ಇಂದೂ ವಿಶ್ವನಾಥ್‌ ಅವರ ಆಕಾಶವಾಣಿ, ದೂರದರ್ಶನದ ‘ಎ’ ಶ್ರೇಣಿ ಕಲಾವಿದೆ.

೧೦೦ಕ್ಕೂ ಹೆಚ್ಚು ಧ್ವನಿಸುರಳಿಗಳಿಗೆ ಕಂಠದಾನ ಮಾಡಿರುವ ಇಂದೂ ವಿಶ್ವನಾಥ್ ಅವರು ಸ್ವತಂತ್ರವಾಗಿ ೨೫ಕ್ಕೂ ಹೆಚ್ಚು ಧ್ವನಿಸುರಳಿಗಳನ್ನು ತಾವೇ ತಯಾರಿಸಿದ್ದಾರೆ. ಚಲನಚಿತ್ರ ಹಿನ್ನಲೆ ಗಾಯಕಿಯಾಗಿ ಹೆಸರು ಮಾಡಿರುವ ಅವರು ದಕ್ಷಿಣ ಭಾರತದ ಹಲವಾರು ಗಾಯಕರೊಂದಿಗೆ ಹಾಡಿದ್ದಾರೆ. ಚಲನಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿರುವ ಇವರು

ಅನೇಕ ನೃತ್ಯ ರೂಪಕಗಳಿಗೆ ಟೆಲಿ ಧಾರವಾಹಿಗಳಿಗೆ ಸಂಗೀತ ನೀಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳಿಗೆ ಇಂದೂ ವಿಶ್ವನಾಥ್ ಅವರು ಪಾತ್ರರಾಗಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಎಸ್. ಶಂಕರ್

ವಿದ್ವಾನ್ ಎಸ್. ಶಂಕರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸಿಸಿ ಎಲ್ಲಾ ವಾಗ್ಗೇಯಕಾರರ ಕೃತಿಗಳನ್ನು ಜನಮನಕ್ಕೆ ತಲುಪಿಸಿದವರು. ಆಕಾಶವಾಣಿ ಎ ಟಾಪ್ ಕಲಾವಿದರಾಗಿ ವಿದ್ವಾನ್ ಎಸ್. ಶಂಕರ್ ಅವರು ದೇಶ ವಿದೇಶಗಳ ಹಲವಾರು ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಗೌರವ ಪುರಸ್ಕಾರವೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಗೌರವ ಪುರಸ್ಕಾರಗಳೂ ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಿ. ಕುಮಾರವಾಸ್

ಸುಪ್ರಸಿದ್ಧ ಹಿಂದೂಸ್ತಾನಿ ಗ್ವಾಲಿಯರ್ ಮತ್ತು ಕಿರಾಣ ಘರಾನದಲ್ಲಿ ಮೂರು ದಶಕಗಳಿಂದ ಗಾಯಕರಾಗಿರುವ ಡಿ. ಕುಮಾರದಾಸ್ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ‘ಎ’ ಶ್ರೇಣಿ ಗಾಯಕರಾಗಿ ಕಾಲು ಶತಮಾನ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರಮಟ್ಟದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದುಕೊಂಡ ಕುಮಾರವಾಸ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನದ ಜೊತೆಗೆ ವಚನ ಸಾಹಿತ್ಯ ಮತ್ತು ದಾಸರ ಕೀರ್ತನ ಗಾಯನದಲ್ಲೂ ಖ್ಯಾತಿ ಪಡೆದಿದ್ದಾರೆ.

ಕನ್ನಡ ಸಾಹಿತ್ಯವನ್ನು ಸಂಗೀತದಲ್ಲಿ ಅಳವಡಿಸಿಕೊಂಡು ನಾಡು-ನುಡಿ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಿರುವ ಕುಮಾರದಾಸ್ ಅವರು ವಚನ ಹಾಗೂ ಭಜನೆ ಗಾಯಕರಾಗಿ ದೇಶದ ತುಂಬಾ ಹೆಸರು ಪಡೆದವರು. ಇವರಿಗೆ ರಮಣಶ್ರೀ ಶರಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿ. ಮಣಿ

ಪರಂಪರೆಯಿಂದ ಬಂದ ಕಲೆಯನ್ನು ಮುಂದುವರಿಸುತ್ತಿರುವ ವಿ. ಮಣಿ ಅವರು ಚಿಕ್ಕಂದಿನಿಂದಲೇ ಸಂಗೀತದೆಡೆಗೆ ನಡೆದರು. ತಂದೆಯಿಂದ ಡೋಲು ವಾದನ ಕಲಿತ ವಿ. ಮಣಿ ನಂತರ ಅನೇಕ ಹಿರಿಯ ಡೋಲು ವಿದ್ವಾಂಸರಲ್ಲಿ ತರಬೇತಿ ಪಡೆದರು. ದಕ್ಷಿಣ ಭಾರತದ ಹಲವಾರು ಹಿರಿಯ ವಿದ್ವಾಂಸರೊಂದಿಗೆ ವಿ. ಮಣಿ ಅವರು ದೇಶ-ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕುನ್ನ ಕುಡಿ ವೈದ್ಯನಾಥನ್, ಕದ್ರಿ ಗೋಪಾಲನಾಥ್ ಮೊದಲಾದ ವಿದ್ವಾಂಸರ ಜೊತೆ ಡೋಲುವಾದಕರಾಗಿ ನೂರಾರು ಕಚೇರಿಗಳಲ್ಲಿ ಸಂಗಾತಿಯಾಗಿದ್ದ ವಿ. ಮಣಿ ಅವರು ಅನೇಕ ಧ್ವನಿಸುರಳಿಗಳನ್ನು ಹಾಗೂ ಧ್ವನಿ ಸಾಂದ್ರಿಕೆಗಳನ್ನು ಹೊರತಂದಿದ್ದಾರೆ. ಡೋಲು ವಾದನದಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿರುವ ಮಣಿ ಅವರು ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ನಾಲ್ಕೂವರೆ ದಶಕಗಳಿಂದ ನಿರಂತರವಾಗಿ ಡೋಲು ಕಚೇರಿಗಳನ್ನು ಮಾಡುತ್ತಿರುವ ವಿ. ಮಣಿ ಅವರು ವೀಣೆ, ಮ್ಯಾಂಡೊಲೀನ್ ವಾದನ ಹಾಗೂ ಗಾಯನದಲ್ಲಿಯೂ ಪರಿಣತಿ ಹೊಂದಿದ್ದಾರೆ. ಇವರಿಗೆ ಕಲೆ ಮಾಮಣಿ ಗೌರವವೂ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಗೀತಾ ದಾತಾರ್

ಎಳೆಯ ವಯಸ್ಸಿನಿಂದಲೇ ನೃತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಶ್ರೀಮತಿ ಗೀತಾ ದಾತಾರ್ ಈಗ ನಾಡಿನ ಹೆಸರಾಂತ ನೃತ್ಯಪಟುಗಳಲ್ಲೊಬ್ಬರು.
ಹಾಸನ ಜಿಲ್ಲೆಯ ಅರಸೀಕೆರೆಯವರಾದ ಗೀತಾ ದಾತಾರ್ ಅವರು ಭರತನಾಟ್ಯ, ಮೋಹಿನಿಅಟ್ಟಂ ಹಾಗೂ ಕುಚುಪುಡಿ ನೃತ್ಯಶೈಲಿಗಳಲ್ಲಿ ಪರಿಣತಿ ಹೊಂದಿದವರು.
ತಾಯಿ ಸ್ನೇಹಪ್ರಭಾರಿಂದ ನೃತ್ಯದ ಮೊದಲ ಪಾಠಗಳನ್ನು ಕಲಿತ ಗೀತಾ ಅವರು ಅಕ್ಕ ಖ್ಯಾತ ನೃತ್ಯಗಾರ್ತಿ ಉಷಾದಾತಾರ್ ಅವರಿಂದ ಅನೇಕ ನೃತ್ಯಶೈಲಗಳಲ್ಲಿ ತರಬೇತಿ ಹೊಂದಿದವರು. ನೃತ್ಯ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಗೀತಾ ಅವರು ಚಿಕ್ಕವಯಸ್ಸಿನಲ್ಲಿಯೇ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನು ತಮ್ಮದಾಗಿಸಿಕೊಂಡವರು.
ಅರಸೀಕೆರೆಯ ಭರತ ಕಲಾನಿಕೇತನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಗೀತಾ ಅವರು ಅಕ್ಕ ಉಷಾ ಅವರ ಹಲವಾರು ನೃತ್ಯ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಪಾಲ್ಗೊಂಡು ನೋಡುಗರ ಮೆಚ್ಚುಗೆ ಪಡೆದವರು.
ನೃತ್ಯ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಗೀತಾ ದಾತಾರ್ ಅವರು ಅನೇಕ ಕಡೆ ತಮ್ಮ ನೃತ್ಯಶಾಲೆಯ ಶಾಖೆಗಳನ್ನು ತೆರೆದದ್ದು ವಿದ್ಯಾರ್ಥಿಗಳಿಗೆ ನೃತ್ಯದಲ್ಲಿ ತರಬೇತಿ ನೀಡುತ್ತಿದ್ದಾರೆ. ಉತ್ತಮ ನೃತ್ಯಪಟುವೆಂದು ಹೆಸರಾಗಿರುವ ಇವರು ಹಾಡುಗಾರಿಕೆ ಹಾಗೂ ನಟವಾಂಗಗಳಲ್ಲೂ ಪರಿಶ್ರಮ ಪಡೆದವರು.

Categories
ನೃತ್ಯ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಮಾಸ್ಟರ್ ವಿಠಲ್ ಶೆಟ್ಟ

ಕರಾವಳಿ ಜಿಲ್ಲೆಗೆ ರಾಜನ್ ಅಯ್ಯರ್, ರಾಜರತ್ನಂ ಪಿಳ್ಳೆ ಅವರಿಂದ ಹಲದು ಬಂದ ಭರತನಾಟ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರಲ್ಲಿ ಒಬ್ಬರು
ನಾಟ್ಯಾಚಾರ್ಯ ಮಾಸ್ಟರ್ ವಿಠಲ್ ಅವರು.
ಸುಮಾರು ಅರವತ್ತು ವರ್ಷಗಳಿಂದಲೂ ನೃತ್ಯಾಸಕ್ತ ವಿದ್ಯಾರ್ಥಿಗಳಿಗೆ ಭರತನಾಟ್ಯ ಶಿಕ್ಷಣವನ್ನು ನೀಡುತ್ತಿರುವ ವಿಠಲ್ ಶೆಟ್ಟಿ ಮಾಸ್ಟರ್ ಏಠಲ್ ಎಂದೇ ಚಿರಪಲಚಿತರು. ಲವಂಗತ ಎಂ.ಎ. ದೇವಾಡಿಗರಿಂದ ಪ್ರಾಥಮಿಕ ನೃತ್ಯಾಭ್ಯಾಸ. ನಂತರ ರಾಜನ್ ಅಯ್ಯರ್ ಅವರಲ್ಲಿ ಹೆಚ್ಚಿನ ನೃತ್ಯ ಶಿಕ್ಷಣ. ೧೯೬೪ರಲ್ಲಿ ನೃತ್ಯ ಕೌಸ್ತುಭ ಎಂಬ ನೃತ್ಯ ಶಾಲೆಯನ್ನು ಆರಂಭಿಸಿ ಅನೇಕ ನೃತ್ಯ ಕಲಾವಿದರನ್ನು ರೂಪಿಸಿದ ಕೀರ್ತಿಗೆ ಭಾಜನರು.
೧೯೪೦ಲಿಂದ ನೃತ್ಯರಂಗದಲ್ಲಿ ತಮ್ಮನ್ನು ತೊಡಲಿಸಿಕೊಂಡು ಮಹಾಭಾರತ, ರಾಮಾಯಣ ಕಥೆಗಳ ಆಧಾಲತ ನೃತ್ಯರೂಪಕಗಳು, ಬೈಬಲ್ ಕಥಾಧಾಲತ ನೃತ್ಯ ರೂಪಕಗಳನ್ನು ನೃತ್ಯ ರಂಗಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಆಕೆ ಶ್ರೀಯುತರದು. ಮಿನಗುತಾರೆ ಕಲ್ಪನಾ,ಉಳ್ಳಾಲ್ ಮೋಹನ್ಕುಮಾರ್,ಡಾ.ಮೋಹನ್ ಆಳ್ವ, ಪ್ರೇಮನಾಥ್ ಮೊದಲಾದವರು ಮಾಸ್ಟರ್ ಏಠಲ್ ಅವರ ಶಿಷ್ಯರು. ದೇಶ್,ಅಠಾಣ, ಯಮನ್ ಮುಂತಾದ ರಾಗಗಳನ್ನು ಬಳಸಿ ಪ್ರದರ್ಶಿಸಿದ ‘ಶಿಯ ಸ್ವಪ್ನ’ ಮಾಸ್ಟರ್ ಏಠಲ್ ಅವರಿಗೆ ವಿಶೇಷ ಹೆಸರು ಗಳಿಸಿಕೊಟ್ಟ ನೃತ್ಯರೂಪಕ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿಯ ಪುರಸ್ಕೃತರಾದ ಮಾಸ್ಟರ್ ಏಠಲ್ ಅವರು ೧೯೮೧ರಲ್ಲಿ ಸ್ವೀಡನ್ ದೇಶದ ಪ್ರಸಿದ್ಧ ಸೇನೇಷಿಯ ವರ್ಲ್ಡ್ ಟೂರ್ಸ್ ಸಂಸ್ಥೆಯ ಆಹ್ವಾನದ ಮೇರೆಗೆ ಸ್ವೀಡನ್ನಿಗೆ ಹೋಗಿ ಸ್ವೀಡನ್, ಸ್ಟೋಖೋಲ್ಡ್, ಓಸ್ತೆ, ಕೋಪೆನ್ ಹೆಗನ್ಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಪಾತ್ರರು. ಭರತನಾಟ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಕಾರ್ಯನಿರ್ವಹಣೆ, ಮಾಸ್ಟರ್ ವಿಠಲ್ ಅವರಿಗೆ ಶಾಸ್ತ್ರೀಯ ನೃತ್ಯಗಳೀಗಿಂತ ನೃತ್ಯರೂಪಕಗಳತ್ತ ಒಲವು. ಪೃಥ್ವಿರಾಜ ಸಂಯುಕ್ತ, ಸುಕೋಮಲೆ ಸೋಫಿಯಾಳ ಸುವರ್ಣ ಸ್ವಪ್ನ, ಟೆನ್ ಕಮಾಂಡೆಂಟ್ಸ್, ಚಿತ್ರಾಂಗದಾ, ಶಾಕುಂತಲಾ ಮೊದಲಾದ ನೃತ್ಯರೂಪಕಗಳು ಹಲವಾರು ಪ್ರದರ್ಶನಗಳನ್ನು ಕಂಡಿವೆ.
ಅನೇಕ ಪ್ರಸಿದ್ಧ ನೃತ್ಯರೂಪಕಗಳ ರೂವಾಲಿ ಹಾಗೂ ಎಂಬತ್ತರ ಇವಯಸ್ಸಿನಲ್ಲೂ ನೃತ್ಯಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ನೃತ್ಯ ಕೌಸ್ತುಭ ಮಾಸ್ಟರ್ ಏಠಲ್ ಅವರು.

Categories
ನೃತ್ಯ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪದ್ಮನಿ ರಾವ್ಯ

ಪಾರಂಪಾರಿಕ ಶಾಸ್ತ್ರೀಯ ಪದ್ಧತಿಯಲ್ಲಿ ನೃತ್ಯ ಪ್ರದರ್ಶನ ಹಾಗೂ ನೃತ್ಯ ಶಿಕ್ಷಣವನ್ನು ನಾಲ್ಕು ದಶಕಗಳಿಂದ ನೀಡುತ್ತಿರುವವರು ಹಿರಿಯ ನೃತ್ಯಪಟು ಶ್ರೀಮತಿ ಪದ್ಮನಿರಾವ್.
ಗುರುಕುಲ ಪದ್ಧತಿಯಲ್ಲಿ ಗುರು ಕಿಟ್ಟಪ್ಪ ಪಿಳ್ಳೆ ಡಾ. ಕೆ. ವೆಂಕಟಲಕ್ಷ್ಮಮ್ಮ, ಕೊರಾಡ ನರಸಿಂಹರಾವ್ ಮೊದಲಾದವರಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಶಿಕ್ಷಣ ಪಡೆದ ಶ್ರೀಮತಿ ಪದ್ಮನಿರಾವ್ ಅವರಿಗೆ ರಾಷ್ಟ್ರದಾದ್ಯಂತ ತನಿ ನೃತ್ಯ ಕಾರ್ಯಕ್ರಮಗಳನ್ನು ಕೊಟ್ಟಿರುವ ಅನುಭವ.
ಭರತನಾಟ್ಯ ಹಾಗೂ ನಟನಾಂಗಕ್ಕಾಗಿ ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ವಿದ್ಯಾರ್ಥಿ ವೇತನ ಪಡೆದಿರುವ ಶ್ರೀಮತಿ ಪದ್ಮನಿರಾವ್ ಅವರು ಸಂಯೋಜಿಸಿರುವ ತನಿ ನೃತ್ಯಗಳು, ನೃತ್ಯನಾಟಕಗಳು ಹಲವಾರು.
ದೇಶವಿದೇಶಗಳಲ್ಲಿ ನೃತ್ಯಪ್ರದರ್ಶನ, ನೃತ್ಯ ಪ್ರಾತ್ಯಕ್ಷಿಕೆ ಹಾಗೂ ನೃತ್ಯತರಬೇತಿ ನೀಡಿರುವ ಶ್ರೀಮತಿ ಪದ್ಮನಿ ಅವರು ಪೊನ್ನಯ್ಯ ಲಲಿತ ಕಲಾ ಅಕಾಡಮಿ ಮೂಲಕ ಕಲೆ ಹಾಗೂ ಸಂಸ್ಕೃತಿ ಪರಿಸರ ಪಸರಿಸುತ್ತಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ ಸೇರಿದಂತೆ ದೇಶದ ಹಲವು ಸಂಗೀತ ನೃತ್ಯ ಸಂಸ್ಥೆಗಳ ಗೌರವ ಪುರಸ್ಕಾರಗಳು ಶ್ರೀಮತಿ ಪದ್ಮನಿರಾವ್ ಅವರಿಗೆ ಸಂದಿದೆ.

Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ.ಸಿ. ಸುಬ್ರಹ್ಮಣ್ಯ

– ನೃತ್ಯ ಪ್ರಕಾರವನ್ನು ಪೋಷಿಸಿಕೊಂಡು ಬರುತ್ತಿರುವ ಸ್ವತಃ ಉತ್ತಮ ನೃತ್ಯಪಟು ಶ್ರೀ ಪಿ.ಸಿ. ಸುಬ್ರಹ್ಮಣ್ಯಮ್ ಅವರು.
ಸುಮಾರು ೬೦ ವರ್ಷದ ಹಿಂದೆ ಪಣಂಬೂರಿನಲ್ಲಿ ಜನನ, ವಿದ್ವಾನ್ ಸಿ. ರಾಧಾಕೃಷ್ಣ ಮತ್ತು ದಿವಂಗತ ವಿ.ಸಿ. ಲೋಕಯ್ಯ ಅವರ ಬಳಿ ಭರತನಾಟ್ಯದ ಕಲಿಕೆ. ವಿದ್ವಾನ್ ಜೆ.ವಿ. ರಮಣಮೂರ್ತಿ ಹಾಗೂ ಡಾ. ಪದ್ಮಾಸುಬ್ರಹ್ಮಣ್ಯಮ್ರವರ ಬಳಿ ಕೂಚಿಪುಡಿ ಮತ್ತು ಭರತನಾಟ್ಯದ ತರಬೇತಿ, ಶ್ರೀ ಬಳ್ಳಾರಿ ಸಹೋದರರು ಮತ್ತು ಶ್ರೀ ನಾರಾಯಣ ಮೂರ್ತಿಗಳ ಬಳಿ ಸಂಗೀತಾಭ್ಯಾಸ
೧೯೮೭ರಲ್ಲಿ ಭಾರತ – ರಷ್ಯಾ ಸಾಂಸ್ಕೃತಿಕ ಉತ್ಸವದಲ್ಲಿ ಕಲಾವಿದರ ತಂಡದ ಹೊಣೆಗಾರಿಕೆಯನ್ನು ಹೊತ್ತು ಶಾಸ್ತ್ರೀಯ ಮತ್ತು ಜನಪದ ನೃತ್ಯ ಪ್ರದರ್ಶನ ನೀಡಿದ್ದಾರೆ. ರಷ್ಯಾ ಕಲಾವಿದರುಗಳಿಗೆ ನೃತ್ಯಭ್ಯಾಸದ ಮಾರ್ಗದರ್ಶನ ಮಾಡಿದ್ದಾರೆ.
ನೃತ್ಯಗಾರರಾದರೂ ಕೇವಲ ನೃತ್ಯ ಪ್ರದರ್ಶನಕ್ಕೆ ಸೀಮಿತವಾಗದೆ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ನೃತ್ಯ ನಾಟಕಗಳಿಗೆ ನಿರ್ದೆಶನ ಮಾಡುವ ನೃತ್ಯ ಸಂಯೋಜಿಸುವುದರ ಜೊತೆಗೆ ಪ್ರತಿಭಾನ್ವಿತ ಯುವ ಕಲಾವಿದರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ವೇದಿಕೆಯನ್ನು ಒದಗಿಸುತ್ತಿರುವ ನೃತ್ಯ ಪಟು ಮತ್ತು ಕಲಾ ವಿಮರ್ಶಕ ಶ್ರೀ ಪಿ. ಸಿ. ಸುಬ್ರಹ್ಮಣ್ಯಮ್
ಅವರು.

Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಂಜು ಭಾರ್ಗವಿ

ಒಂಬತ್ತನೇ ವರ್ಷದಲ್ಲೇ ನಾಟ್ಯರಂಗ ಪ್ರವೇಶಿಸಿದ ಮಿಂಚಿನ ಬಳ್ಳಿ ಮಂಜು ಭಾರ್ಗವಿ ತಮ್ಮ ಅವಿರತ ಸಾಧನೆಯಿಂದ ನಾಟ್ಯರಾಣಿ, ನಾಟ್ಯ ಮಯೂರಿ ಎನಿಸಿದ ವಿಶಿಷ್ಟ ಕಲಾವಿದೆ.
ಗುರು ವೆಂಪಟ್ಟಿ ಚಿನ್ನಸತ್ಯಂ ಅವರಿಂದ ಕೂಚಿಪುಡಿ ಕಲೆಯಲ್ಲಿ ಶಿಕ್ಷಣ ಪಡೆದ ಇವರು ಈ ವರೆಗೆ ಎರಡು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ನಡೆಸಿಕೊಟ್ಟಿದ್ದಾರೆ. ಅಮೆರಿಕಾ, ಕೆನಡಾ, ಯೂರೋಪ್, ಆಫ್ರಿಕಾ, ಶ್ರೀಲಂಕಾ, ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಇವರು ನೃತ್ಯದ ಕಂಪನ್ನು ಪ್ರಸರಿಸಿದ್ದಾರೆ.ದಕ್ಷಿಣ ಭಾರತದ ಚಲನಚಿತ್ರ ಕ್ಷೇತ್ರದಲ್ಲಿ ನೃತ್ಯನಟಿಯಾಗಿಯೂ ಹೆಸರು ಗಳಿಸಿರುವ ಮಂಜು ಭಾರ್ಗವಿಯವರು ತೆಲುಗು “ಶಂಕರಾಭರಣಮ್” ಚಿತ್ರದ ಅಭಿನಯದಿಂದ ಜನಮನ ಗೆದ್ದವರು. ಇವರ ಕಲಾಪ್ರತಿಭೆಗೆ ಸಂದ ಗೌರವ ಸಮ್ಮಾನಗಳು ಅರಸಿ ಬಂದ ಬಿರುದು, ಪ್ರಶಸ್ತಿಗಳು ನೂರಾರು.
ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಯುವ ಪ್ರತಿಭೆಗಳ ಮೂಲಕ ವಿಸ್ತರಿಸುವ ಹಂಬಲದೊಂದಿಗೆ ಕೂಚಿಪುಡಿ ಸಂಶೋಧನಾ ಕೇಂದ್ರವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಸದಾಶಯ ಹೊಂದಿರುವ ಅಪೂರ್ವ ಕಲಾವಿದೆ ಶ್ರೀಮತಿ ಮಂಜು ಭಾರ್ಗವಿ ಅವರು.

Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪದ್ಮನಿ ರಾಮಚಂದ್ರನ್

ಈ ಭರತನಾಟ್ಯ ಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅದ್ಭುತ ನೃತ್ಯಕಲಾವಿದೆ ಶ್ರೀಮತಿ ಪದ್ಮನಿ ರಾಮಚಂದ್ರನ್ ಅವರು.
ಕೇವಲ ಒಂಬತ್ತನೇ ವಯಸ್ಸಿಗೆ ರಂಗಪ್ರವೇಶ ಮಾಡಿದ ಪದ್ಮನಿ ಅವರು ನೃತ್ಯ ಕಲೆಯನ್ನು ಒಂದು ತಪಸ್ಸಿನಂತೆ ಸ್ವೀಕರಿಸಿ ಬೆಳೆದುಬಂದ ಬಗೆ ಅದ್ಭುತ. ಅತಿ ಚಿಕ್ಕವಯಸ್ಸಿನಲ್ಲೇ ಬಾಲ ನಟಿಯಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಪದ್ಮನಿ ಪ್ರಿಯ ದರ್ಶಿನಿ ತಮಿಳು, ಮಲೆಯಾಳ, ಕನ್ನಡ ಚಿತ್ರಗಳಲ್ಲಿ ನೃತ್ಯ-ನಟಿಯಾಗಿ ತಮ್ಮ ಬಾಲ ಪ್ರತಿಭೆ ಬೆಳಗಿಸಿದವರು, ಮುಂದೆ ಶ್ರೀ ರಾಮಚಂದ್ರನ್ ಅವರ ಕೈಹಿಡಿದು ಪದ್ಮನಿ ರಾಮಚಂದ್ರನ್ ಆಗಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ನೆಲೆಸಿ ಚಿತ್ರರಂಗಕ್ಕೆ ವಿದಾಯ ಹೇಳಿ ನಾಟ್ಯಕ್ಷೇತ್ರವನ್ನೇ ತಮ್ಮ
ಜೀವನಾಡಿಯಾಗಿಸಿಕೊಂಡರು.
ಕನ್ನಡ ನಾಡಿನಿಂದಾಚೆಗೂ ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಹೆಸರು ಗಳಿಸಿದ್ದಾರೆ. (೧೯೭೫ರಿಂದ ಬೆಂಗಳೂರಿನಲ್ಲಿ ನಾಟ್ಯಪ್ರಿಯ ನೃತ್ಯಶಾಲೆಯನ್ನು ಸ್ಥಾಪಿಸಿ, ಅನೇಕ ನೃತ್ಯ ಕಲಾವಿದರನ್ನು ಆ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇವರ ನೃತ್ಯ ಕಲೆಯ ನೈಪುಣ್ಯಕ್ಕೆ ಒಲಿದು ಬಂದ ಬಹುಮಾನಗಳು ಅಗಣಿತ ತಮ್ಮ ನಾಟ್ಯಪ್ರಿಯ ಶಾಲೆಯ ಮೂಲಕ ನೃತ್ಯಪ್ರಿಯರನ್ನು ಗಳಿಸಿಕೊಂಡ ಹಿರಿಯ ನೃತ್ಯ ಗುರು ಶ್ರೀಮತಿ ಪದ್ಮನಿ ರಾಮಚಂದ್ರನ್ ಅವರು.)

Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಡಾ. ತುಳಸಿ ರಾಮಚಂದ್ರ

ಕಲೆ ಇವರಿಗೆ ಹುಟ್ಟಿನಿಂದಲೇ ಬಂದದ್ದು ತಂದೆ ಹೆಸರಾಂತ ರಂಗ ಕಲಾವಿದರಾಗಿದ್ದ ತಮಾಷ್ ಮಾಧವರಾಯರೆಂದೇ ಪ್ರಸಿದ್ದರಾಗಿದ್ದ ಎಮ್.ಎಸ್.ಮಾಧವರಾಯರು. ಮಾವ ಗಮಕ ಭಗೀರಥರಲ್ಲಿ ಒಬ್ಬರೆನೆಸಿದ್ದ ಗಮಕ ರಸಋಷಿ ಮೈಸೂರಿನ ಕೃಷ್ಣಗಿರಿ ಕೃಷ್ಣರಾಯರು, ನೃತ್ಯಾಭಿನಯ ಕಲೆ ಇವರನ್ನ ತಾನೇ ತಾನಾಗಿ ಬಂದು ಬಾಚಿಕೊಂಡಿತು. ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ಇವರ ಗುರುಗಳೂ ಸಹ. ಕೇವಲ ಭರತ ನಾಟ್ಯವೇ ಅಲ್ಲದೆ ದೆಹಲಿಯ ಗಂಧರ್ವ ಮಹಾವಿದ್ಯಾಲಯದಲ್ಲಿ ಪಂ. ತಿರ್ಥರಾಮ್ ಅಜಾದ್ ಅವರಲ್ಲಿ ಕಥಕ್, ಅಹಮದಾಬಾದಿನ ದರ್ಪಣ ನಾಟ್ಯಶಾಲೆಯಲ್ಲಿ ಆಚಾರ್ಯ ಸಿ.ಆರ್. ಆಚಾರ್ಯುಲು ಅವರಲ್ಲಿ ಕೂಚಿಪುಡಿ ಶೈಲಿಯ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ.
ಮುಂದೆ ಮೈಸೂರಿಗೆ ಬಂದು ನೆಲಸಿದ ಮೇಲೆ ನೃತ್ಯಕಲೆಯ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ಹಾಗೂ ಇನ್ನಿತರ ಹಿರಿಯರ ಮಾರ್ಗದರ್ಶನ ಪಡೆದು ನೃತ್ಯಕಲೆ ಪರಂಪರೆ ಕುರಿತು ಮಹಾ ಪ್ರಭಂಧವನ್ನು ಬರೆದು ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗಳಿಸಿದ್ದಾರೆ.
ರಾಜ್ಯ, ಹೊರರಾಜ್ಯ ಹಾಗೂ ಹೊರ ರಾಷ್ಟ್ರಗಳಲ್ಲೆಲ್ಲಾ ಸಂಚರಿಸಿ ಆನೇಕ ಕಾರ್ಯಕ್ರಮಗಳನ್ನು ನೀಡಿ ಯಶಸ್ಸು ಪಡೆದಿರುವ ಡಾ.ತುಳಸಿ ರಾಮಚಂದ್ರ ಅವರು ಪ್ರಸ್ತುತ ಮೈಸೂರಿನಲ್ಲಿ ನೃತ್ಯಾಲಯ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಬಿ ಭಾನುಮತಿ

ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ, ನೂರಾರು ಶಿಷ್ಯರ ಗುರು ಶ್ರೀಮತಿ ಭಾನುಮತಿ ಅವರು.

ಸುಪ್ರಸಿದ್ಧಕ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ ಇಶ್ಚಿಮಣಿ ಎಲ್.ಆರ್. ಲಕ್ಷ್ಮಿ ಅವರ ಸುಪುತ್ರಿ. ಸಂಗೀತ ನಾಟ್ಯಗಳ ರಸಗಂಗೆಯ ಮನೆತನದಲ್ಲಿ ಹುಟ್ಟಿದ ಇವರು ನಾಟ್ಯದಲ್ಲಿ ನೈಪುಣ್ಯತೆ ಪಡೆಯಲು ಮನೆಯ ಪರಿಸರಕ್ಕಿಂತ ಮಿಗಿಲಾದ ಬೇರೆ ಪ್ರಭಾವ, ಪ್ರೇರಣೆಗಳು ಬೇಕಾಗಲಿಲ್ಲ.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿದ ಭಾನುಮತಿ ಅವರು ಮುಂದೆ ಅಂತರಾಷ್ಟ್ರೀಯ ಖ್ಯಾತಿಯ ಶ್ರೀಮತಿ ಕಮಲಾಲಕ್ಷ್ಮಣ್ ಹಾಗೂ ಪದ್ಮಶ್ರೀ ಶ್ರೀ ಕೆ.ಎನ್. ದಂಡಾಯುಧಪಾಣಿ ಪಿಳ್ಳೆ ಅವರಲ್ಲಿ ಶಿಷ್ಯಳಾಗಿ ಅವಿರತ ಸಾಧನೆಯೊಂದಿಗೆ ತಮ್ಮ ನೃತ್ಯಕಲೆಗೆ ಅಗತ್ಯವಾದ ಅಖಂಡತೆಯನ್ನು ಮೈಗೂಡಿಸಿಕೊಂಡರು. ದೇಶದಾದ್ಯಂತ ಕುಣಿದೂ ತಣಿಯದ ಈ ನಾಟ್ಯ ಪ್ರತಿಭೆ ವಿಶೇಷ ಆಹ್ವಾನದ ಮೇರೆಗೆ ಬ್ರಿಟಿಷ್ ಐಲ್ಯಾಂಡ್, ಈಶಾನ್ಯ ಏಷ್ಯಾ, ಸಿಂಗಾಪುರ ಮತ್ತು ಮಲೇಷಿಯಾದಂತಹ ದೂರ ದೇಶಗಳಲ್ಲಿಯೂ ತಮ್ಮ ನೃತ್ಯದ ಪಲುಕುಗಳು ರಿಂಗಣಿಸುವಂತೆ ಮಾಡಿದರು.

ಅಭಿನಯ ಶಾರದೆಯನ್ನು ಬೆನ್ನತ್ತಿ ಹೋದ ಇವರ ಪ್ರತಿಭೆಯನ್ನು ಅರಸಿ ಬಂದ ಹತ್ತಾರು ಪ್ರಶಸ್ತಿ ಪುರಸ್ಕಾರಗಳಲ್ಲಿ ‘ಸುರ್‌ ಸಿಂಗಾ‌ ಸಂಸದ್ -೧೯೮೩’ ಅತ್ಯುನ್ನತ ಪ್ರಶಸ್ತಿಯಾಗಿದೆ. ಎಷ್ಟು ಕಲಿತರೂ ಮತ್ತಷ್ಟು ವೈವಿಧ್ಯತೆಯನ್ನು ಅರಸುತ್ತಿರುವ ಇವರು ಡಾ. ಕೆ. ವೆಂಕಟಲಕ್ಷ್ಮಮ್ಮ ಹಾಗೂ ಕಲಾನಿಧಿ ಡಾ. ನಾರಾಯಣನ್ ಅವರಲ್ಲಿ ವಿಶೇಷ ನೃತ್ಯ ಶಿಕ್ಷಣ ಪಡೆದಿದ್ದಾರೆ.

ನೃತ್ಯ ಕಲಾಮಂದಿರ ಎಂಬ ನೃತ್ಯಶಾಲೆಯನ್ನು ಸ್ಥಾಪಿಸಿ, ನೃತ್ಯಾಸಕ್ತ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ನೀಡುತ್ತಿರುವ ನೃತ್ಯ ತಾರೆ ಶ್ರೀಮತಿ ಬಿ. ಭಾನುಮತಿ ಅವರು.

Categories
ನೃತ್ಯ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರತಿಭಾ ಪ್ರಹ್ಲಾದ್

ಭರತನಾಟ್ಯ ಹಾಗೂ ಕೂಚಿಪುಡಿ ಎರಡೂ ಶೈಲಿಯಲ್ಲಿ ಕಲಾಭಿಮಾನಿಗಳ ಮನ್ನಣೆ ಪಡೆದ ಪ್ರಸಿದ್ಧ ಕಲಾವಿದೆ ಶ್ರೀಮತಿ ಪ್ರತಿಭಾ ಪ್ರಹ್ಲಾದ್ ಅವರು.

೧೯೫೫ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ರೀಮತಿ ಪ್ರತಿಭಾ ಎಂ.ಎಸ್ ಹಾಗೂ ಬಿ.ಎಡ್. ಪದವಿ ಪಡೆದರೂ ಆಯ್ಕೆ ನೃತ್ಯರಂಗವಾಯಿತು. ಶ್ರೀ ಯು ಎಸ್ ಕೃಷ್ಣರಾವ್ ದಂಪತಿಗಳಲ್ಲಿ ಭರತನಾಟ್ಯ ಹಾಗೂ ಶ್ರೀಮತಿ ಸುನಂದಾದೇವಿಯವರಲ್ಲಿ ಕೂಚಿಪುಡಿ ಶಿಕ್ಷಣ ಪಡೆದರು. ೧೯೭೧ರಲ್ಲಿ ರಂಗಪ್ರವೇಶ ಮಾಡಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ.

ನಾಡಿನಲ್ಲಿ ಹಾಗೂ ಹೊರನಾಡಿನಲ್ಲಿ ೨೦೦ಕ್ಕೂ ಮೀರಿ ನೃತ್ಯ ಪ್ರದರ್ಶನಗಳನ್ನು ನೀಡಿದ ಹಿರಿಮೆ ಇವರದು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಉತ್ಸವಗಳಲ್ಲಿ ಭಾಗವಹಿಸಿ, ನೃತ್ಯಪ್ರದರ್ಶನ ನೀಡಿದ್ದಾರೆ. ನೃತ್ಯ ಪ್ರದರ್ಶನ, ಶಿಕ್ಷಣ, ಪ್ರಾತ್ಯಕ್ಷಿಕೆ, ಉಪನ್ಯಾಸ, ಪ್ರಬಂಧ ಮಂಡನೆ ಹೀಗೆ ಅವರ ಕಲೆಯ ವ್ಯಾಪ್ತಿ ವಿಸ್ತಾರವಾಗಿ ಮುಂದುವರಿದು ಹೊರನಾಡಿನಲ್ಲಿಯೂ ಸೌರಭವನ್ನು ಸೂಸಿದೆ.

ಪ್ರಸಿದ್ಧ ಫೌಂಡೇಶನ್ ಎಂಬ ಸ್ವಂತ ನೃತ್ಯಕೇಂದ್ರವನ್ನು ಸ್ಥಾಪಿಸಿ, ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಪರ್‌ ಫಾರ್ಮಿಂಗ್ ಆರ್ಟ್ಸ್ ವಿಭಾಗದಲ್ಲಿ ನೃತ್ಯ, ಮಾನವಶಾಸ್ತ್ರ ಮತ್ತು ಭಾಷಾಶಾಸ್ತ್ರ ಕುರಿತು ಉನ್ನತ ಸ್ತರದ ತರಗತಿಗಳನ್ನು ನಡೆಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಅಪ್ರತಿಮ ಪ್ರತಿಭೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪಡೆದಿರುವ ಶ್ರೀಮತಿ ಪ್ರತಿಭಾ ಪ್ರಹ್ಲಾದ್ ಅವರು ನೃತ್ಯ ಕಲೆಗೆ ತಮ್ಮನ್ನೇ ಅರ್ಪಿಸಿಕೊಂಡ ಅನನ್ಯ ಕಲಾವಿದೆ.

Categories
ನೃತ್ಯ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಬಿ.ಎಸ್. ಸುನಂದಾದೇವಿ

ಶ್ರೀಮತಿ ಬಿ. ಎಸ್. ಸುನಂದಾ ದೇವಿ ಕರ್ನಾಟಕದ ಪ್ರತಿಷ್ಠಿತ ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ ಮತ್ತು ಗುರು, ಪ್ರಖ್ಯಾತ ಗುರುಗಳಿಂದ ಕಲಿತು ಚಿಕ್ಕ ವಯಸ್ಸಿನಲ್ಲಿಯೇ ಎರಡೂ ಶೈಲಿಯ ನೃತ್ಯಗಳನ್ನು ಪಳಗಿಸಿಕೊಂಡವರು.
ಕಳೆದ ಮೂವತ್ತು ವರ್ಷಗಳಿಂದ “ಛಾಯಾ ನೃತ್ಯ ನಿಕೇತನ’ ಎಂಬ ಸಂಸ್ಥೆಯನ್ನು ನಡೆಸುತ್ತಾ ನೂರಾರು ಕಲಾ ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುವ ಮೂಲಕ ಕಲಾ ಪ್ರಪಂಚಕ್ಕೆ ಅವರನ್ನು ಪರಿಚಯಿಸಿದ್ದಾರೆ.
ವೀಣಾವಾದನದಲ್ಲೂ ಸೈ ಎನ್ನಿಸಿಕೊಂಡವರು ಸುನಂದಾ ದೇವಿ. ಕರ್ನಾಟಕದಲ್ಲಿ ಕೂಚುಪುಡಿ ನೃತ್ಯವನ್ನು ಪದವಿ ಪರೀಕ್ಷೆಗೆ ಒಳಪಡಿಸುತ್ತಿರಲಿಲ್ಲ ಎನ್ನುವುದನ್ನು ಗಮನಿಸಿ ಮೊಟ್ಟಮೊದಲ ಬಾರಿಗೆ ಕೂಚುಪುಡಿಗೆ ಪಠ್ಯಪುಸ್ತಕ ರಚಿಸಿ ಕಿರಿಯರ ವಿಭಾಗದ ಕೂಚುಪುಡಿ ಪರೀಕ್ಷೆಗೆ ಅಳವಡಿಸಬೇಕಾದ ಪಠ್ಯಕ್ರಮ ಕುರಿತು ಪಟ್ಟಿ ತಯಾರಿಸಿದ್ದಾರೆ. ಇವರ ಈ ಕ್ರಮವನ್ನು ಅನುಸರಿಸಿಯೇ ಪ್ರಸ್ತುತ ತಜ್ಞರ ತಂಡವು ಹಿರಿಯರ ವಿಭಾಗದ ಕೂಚುಪುಡಿ ಪರೀಕ್ಷೆಗೂ ಸಹ ಪಠ್ಯಕ್ರಮವನ್ನು ಸಿದ್ಧಪಡಿಸುತ್ತಿದೆ.
‘ಸುಭದ್ರಾ ಕಲ್ಯಾಣ’, ‘ಮೋಹಿನಿ ಭಸ್ಮಾಸುರ’, ‘ಶ್ರೀ ವೆಂಕಟೇಶ್ವರ ಕಲ್ಯಾಣ’, ‘ರತಿಮನ್ಮಥ’, ‘ಶಿವರಂಜಿನಿ’, ‘ಕುಮಾರಸಂಭವ’ ಮೊದಲಾದ ರೂಪಕಗಳನ್ನು ನೃತ್ಯಕ್ಕೆ ಅಳವಡಿಸಿ ನಾಟ್ಯ ಸಂಯೋಜನೆ ಮಾಡಿದ್ದು ಇವು ಅಪಾರ ಜನಮೆಚ್ಚುಗೆಯನ್ನು ಗಳಿಸಿವೆ.
ಸುನಂದಾ ದೇವಿ ಅವರನ್ನು ಅರಸಿ ಬಂದ ಪ್ರಶಸ್ತಿ ಸನ್ಮಾನಗಳು ಅನೇಕ. ಶೃಂಗೇರಿ ಮಠದ ಜಗದ್ಗುರುಗಳಿಂದ ‘ನಾಟ್ಯ ಕಲಾಧರೆ’ ಬಿರುದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ, ಆರ್ಯಭಟ ಸಾಂಸ್ಕೃತಿಕ ಸಂಘದಿಂದ ‘ನಾಟ್ಯ ಶಾಂತಲಾ’ ಪ್ರಶಸ್ತಿ, ಸಿದ್ದಗಂಗಾ ಮಠದ ಸ್ವಾಮಿಗಳಿಂದ ಪುರಸ್ಕಾರಗಳೇ ಅಲ್ಲದೇ ಅನೇಕ ಸಂಘ ಸಂಸ್ಥೆಗಳು ಸಹ ಸುನಂದಾ ದೇವಿಯವರನ್ನು ಸನ್ಮಾನಿಸಿವೆ.
ದೇಶ ವಿದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿರುವ ಸುನಂದಾ ದೇವಿ ಪ್ರಮುಖವಾಗಿ ಚೀನಾ ದೇಶದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರಿಂದಲೇ ‘ಕಿಸಾಗೌತಮಿ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ದಲಾಯಿಲಾಮಾ ಅವರು ಆ ನೃತ್ಯ ಪ್ರದರ್ಶನವನ್ನು ಅಪಾರವಾಗಿ ಮೆಚ್ಚಿಕೊಂಡರು.
ಎಸ್. ರಾಧಾಕೃಷ್ಣನ್, ಪಂಡಿತ ನೆಹರು, ಇಂದಿರಾ ಗಾಂಧಿ ಮೊದಲಾದವರ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿ ಭರತ ನಾಟ್ಯ ಮತ್ತು ಕೂಚುಪುಡಿ ಶೈಲಿಗಳೆರಡರಲ್ಲೂ ಪರಿಣತಿ ಪಡೆದವರು ಶ್ರೀಮತಿ ಸುನಂದಾದೇವಿ ಅವರು.