Categories
ನೃತ್ಯ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರತಿಭಾ ಪ್ರಹ್ಲಾದ್

ಭರತನಾಟ್ಯ ಹಾಗೂ ಕೂಚಿಪುಡಿ ಎರಡೂ ಶೈಲಿಯಲ್ಲಿ ಕಲಾಭಿಮಾನಿಗಳ ಮನ್ನಣೆ ಪಡೆದ ಪ್ರಸಿದ್ಧ ಕಲಾವಿದೆ ಶ್ರೀಮತಿ ಪ್ರತಿಭಾ ಪ್ರಹ್ಲಾದ್ ಅವರು.

೧೯೫೫ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ರೀಮತಿ ಪ್ರತಿಭಾ ಎಂ.ಎಸ್ ಹಾಗೂ ಬಿ.ಎಡ್. ಪದವಿ ಪಡೆದರೂ ಆಯ್ಕೆ ನೃತ್ಯರಂಗವಾಯಿತು. ಶ್ರೀ ಯು ಎಸ್ ಕೃಷ್ಣರಾವ್ ದಂಪತಿಗಳಲ್ಲಿ ಭರತನಾಟ್ಯ ಹಾಗೂ ಶ್ರೀಮತಿ ಸುನಂದಾದೇವಿಯವರಲ್ಲಿ ಕೂಚಿಪುಡಿ ಶಿಕ್ಷಣ ಪಡೆದರು. ೧೯೭೧ರಲ್ಲಿ ರಂಗಪ್ರವೇಶ ಮಾಡಿದ ಇವರು ಮತ್ತೆ ಹಿಂದಿರುಗಿ ನೋಡಲಿಲ್ಲ.

ನಾಡಿನಲ್ಲಿ ಹಾಗೂ ಹೊರನಾಡಿನಲ್ಲಿ ೨೦೦ಕ್ಕೂ ಮೀರಿ ನೃತ್ಯ ಪ್ರದರ್ಶನಗಳನ್ನು ನೀಡಿದ ಹಿರಿಮೆ ಇವರದು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಉತ್ಸವಗಳಲ್ಲಿ ಭಾಗವಹಿಸಿ, ನೃತ್ಯಪ್ರದರ್ಶನ ನೀಡಿದ್ದಾರೆ. ನೃತ್ಯ ಪ್ರದರ್ಶನ, ಶಿಕ್ಷಣ, ಪ್ರಾತ್ಯಕ್ಷಿಕೆ, ಉಪನ್ಯಾಸ, ಪ್ರಬಂಧ ಮಂಡನೆ ಹೀಗೆ ಅವರ ಕಲೆಯ ವ್ಯಾಪ್ತಿ ವಿಸ್ತಾರವಾಗಿ ಮುಂದುವರಿದು ಹೊರನಾಡಿನಲ್ಲಿಯೂ ಸೌರಭವನ್ನು ಸೂಸಿದೆ.

ಪ್ರಸಿದ್ಧ ಫೌಂಡೇಶನ್ ಎಂಬ ಸ್ವಂತ ನೃತ್ಯಕೇಂದ್ರವನ್ನು ಸ್ಥಾಪಿಸಿ, ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ಪರ್‌ ಫಾರ್ಮಿಂಗ್ ಆರ್ಟ್ಸ್ ವಿಭಾಗದಲ್ಲಿ ನೃತ್ಯ, ಮಾನವಶಾಸ್ತ್ರ ಮತ್ತು ಭಾಷಾಶಾಸ್ತ್ರ ಕುರಿತು ಉನ್ನತ ಸ್ತರದ ತರಗತಿಗಳನ್ನು ನಡೆಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಅಪ್ರತಿಮ ಪ್ರತಿಭೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪಡೆದಿರುವ ಶ್ರೀಮತಿ ಪ್ರತಿಭಾ ಪ್ರಹ್ಲಾದ್ ಅವರು ನೃತ್ಯ ಕಲೆಗೆ ತಮ್ಮನ್ನೇ ಅರ್ಪಿಸಿಕೊಂಡ ಅನನ್ಯ ಕಲಾವಿದೆ.