Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಹನುಮಂತ ಬೊಮ್ಮಗೌಡ

ಹನುಮಂತ ಬೊಮ್ಮಗೌಡ ಅವರು ಪಾರ್ಶ್ವ ರೋಗವನ್ನು ನಿವಾರಿಸುವಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದವರು. ತಮ್ಮ ತಂದೆಯವರಿಂದ ಕಲಿತ ಈ ಔಷಧಿ ಕೊಡುವ ಕಾಯಕವನ್ನು ವ್ಯಾಪಕವಾಗಿ ಕೈಗೊಳ್ಳಲು ಒಳರೋಗಿಗಳಿಗಾಗಿ ಕೇಂದ್ರವನ್ನು ಸ್ಥಾಪಿಸಿ ಪಾರ್ಶ್ವರೋಗ ಪೀಡಿತರಿಗೆ ಅವರು ನೆರವಾಗುತ್ತಿದ್ದಾರೆ.

ಹಾಲಕ್ಕಿ ಒಕ್ಕಲಿಗರ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ಇವರ ಪುರೋಭಿವೃದ್ಧಿಗೆ ಶ್ರಮಿಸುತ್ತಿರುವ ಹನುಮಂತ ಬೊಮ್ಮಗೌಡ ವನ ಔಷಧಗಳಿಂದ ಪಾರ್ಶ್ವರೋಗ ಪೀಡಿತರಿಗೆ ಲೇಪನ ಚಿಕಿತ್ಸೆಯನ್ನು ಮಾಡುವಲ್ಲಿ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ವಿಲಾಸ ನೀಲಗುಂದ

ವಿಲಾಸ ನೀಲಗುಂದ ಅವರು ನಾಡಿನ ಹೆಸರಾಂತ ಅಥ್ಲೆಟ್ ನೂರು ಹಾಗೂ ಇನ್ನೂರು ಮೀಟರ್ ಓಟದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ವಿಲಾಸ ನೀಲಗುಂದ್ ಒಂಭತ್ತನೆಯ ಸ್ಯಾಪ್ ಗೇಮ್ಸ್‌ನಲ್ಲಿ ೪x೧೦೦ ಮೀಟರ್ ರಿಲೇ ಸ್ಪರ್ಧೆಗಳಲ್ಲಿ ದಾಖಲೆಯ ಮೂಲಕ ಮೊದಲ ಸ್ಥಾನ ಪಡೆದ ಭಾರತೀಯ ತಂಡದ ಓಟಗಾರರಾಗಿದ್ದರು.

ಅನೇಕ ರಾಜ್ಯ ದಾಖಲೆಗಳನ್ನು ಸ್ಥಾಪಿಸಿರುವ ವಿಲಾಸ ನೀಲಗುಂದ್ ವಿಶ್ವ ರೈಲ್ವೆ ಅಥ್ಲೆಟಿಕ್ ಕೂಟದ ರಿಲೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ರೈಲ್ವೆ ತಂಡದಲ್ಲಿರುವ ವಿಲಾಸ ನೀಲಗುಂದ್ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ನಿರಂತರವಾಗಿ ಪಾಲುಗೊಂಡ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಮಮತಾ ಪೂಜಾಲ

ಶಾಲಾ ದಿನಗಳಿಂದಲೇ ಕಬ್ಬಡ್ಡಿ ಆಟದಲ್ಲಿ ಆಸಕ್ತಿ ಇಟ್ಟುಕೊಂಡು ರಾಜ್ಯ ಹಾಗೂ ರಾಷ್ಟ್ರ ತಂಡಗಳಿಗೆ ಆಯ್ಕೆಯಾದ ಮಮತಾ ಪೂಜಾರಿ ವಿಶ್ವಕಪ್ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ಭಾರತ ತಂಡದ ನಾಯಕಿಯಾಗಿ ಚಾಂಪಿಯನ್ಶಿಪ್ ಗೆದ್ದುಕೊಟ್ಟಿದ್ದಾರೆ.

ಯುವ ಕಬ್ಬಡ್ಡಿ ಆಟಗಾರ್ತಿಯರಲ್ಲಿ ಪ್ರಮುಖರಾಗಿರುವ ಮಮತಾ ಪೂಜಾರಿ ಹಿಂದಿನ ಏಷ್ಯನ್ ಕ್ರೀಡಾ ಕೂಟದಲ್ಲೂ ಭಾರತೀಯ ತಂಡದಲ್ಲಿದ್ದರು. ಈ ಸಾಲಿನ ಏಷ್ಯನ್ ಕ್ರೀಡಾಕೂಟದಲ್ಲಿ ಅಗ್ರ ಸ್ಥಾನ ಪಡೆದ ಭಾರತ ತಂಡದ ಆಟಗಾರ್ತಿಯಾಗಿದ್ದ ಮಮತಾ ಪೂಜಾರಿ ಅರ್ಜುನ ಪ್ರಶಸ್ತಿಗೆ ಕಿರಿಯ ವಯಸ್ಸಿನಲ್ಲಿಯೇ ಭಾಜನರಾಗಿರುವ ಪ್ರತಿಭಾವಂತೆ. ಎರಡು ಏಷ್ಯನ್ ಕ್ರೀಡಾಕೂಟಗಳಲ್ಲೂ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟ ಮಹಿಳಾ ಕಬ್ಬಡ್ಡಿ ತಂಡದ ಪ್ರಮುಖ ಆಟಗಾರ್ತಿಯರಲ್ಲಿ ಮಮತಾ ಪೂಜಾರಿಯವರೂ ಒಬ್ಬರು.

ಭಾರತೀಯ ಮಹಿಳಾ ಕಬ್ಬಡ್ಡಿ ಆಟಗಾರ್ತಿಯರಲ್ಲಿ ಅಗ್ರಗಣ್ಯರಾದ ಮಮತಾ ಪೂಜಾರಿ ಈಗಾಗಲೇ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಹಲವಾರು ಗೌರವ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಎಂ.ಆರ್. ಪೂವಮ್ಮ

ದೇಶದ ಉದಯೋನ್ಮುಖ ಅಥೀಟ್‌ಗಳಲ್ಲಿ ಒಬ್ಬರಾದ ಎಂ.ಆರ್.ಪೂವಮ್ಮ ಪ್ರಸ್ತುತ ೪೦೦ ಮೀಟರ್ ಓಟದಲ್ಲಿ ಚಾಂಪಿಯನ್. ವಿಶ್ವ ಯುವ ಅಥೇಟ್ ಚಾಂಪಿಯನ್ಶಿಪ್, ಕಾಮನ್ವೆಲ್ತ್‌ ಕ್ರೀಡಾ ಕೂಟ ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಎಂ.ಆರ್.ಪೂವಮ್ಮ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಾಮನ್ವೆಲ್ತ್ ಹಾಗೂ ಏಷ್ಯನ್ ಕ್ರೀಡಾ ಕೂಟದಲ್ಲಿ ೪೦೦ ಮೀಟರ್ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿರುವ ಪೂವಮ್ಮ ಭಾರತ ತಂಡಕ್ಕೆ ೪ x೧೦೦-೪೦೦ ರಿಲೇ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ದೇಶದ ಭರವಸೆಯ ಓಟಗಾರ್ತಿಯಾಗಿರುವ ಎಂ.ಆರ್.ಪೂವಮ್ಮ ಒಲಂಪಿಕ್ಸ್‌ನಲ್ಲೂ ಪದಕ ಗಳಿಸುವ ಗುರಿಯೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಪಿ. ಸತೀಶ್ ಚಂದ್ರ

ಡಾ|| ಪಿ. ಸತೀಶಚಂದ್ರ ಅವರು ನ್ಯೂರಾಲಜಿ ವಿಭಾಗದ ಮುಖ್ಯಸ್ಥರಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕೇಂದ್ರ ನಿಮ್ಹಾನ್ಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಪ್ರತಿಷ್ಟಿತ ಫೆಲೋಶಿಪ್‌ಗಳು ದೊರೆತಿವೆ. ಈವರೆಗೆ ೨೦೦ಕ್ಕೂ ಹೆಚ್ಚು ಪ್ರಕಟಣೆಗಳು, ೧೬೪ ಜರ್ನಲ್‌ಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.

HotWater Epilepsy ಕುರಿತಾದ ವಿಶೇಷ ಅಧ್ಯಯನ ಮಾಡಿರುವ ಡಾ|| ಪಿ. ಸತೀಶಚಂದ್ರ ಅವರಿಗೆ ಸಿ.ವಿ.ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ಮತ್ತು ಬಿ.ಸಿ.ರಾಯ್ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳು ದೊರೆತಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಜಿ.ಎನ್. ಸುರೇಶ್

ಬಿ.ಎನ್.ಸುರೇಶ ಅವರು ಪ್ರತಿಷ್ಠಿತ ವಿಕ್ರಮ ಸಾರಾಭಾಯ್ ಅಂತರಿಕ್ಷ ಕೇಂದ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಭಾರತೀಯ ಪ್ರಸಿದ್ದ ಅಂತರಿಕ್ಷ ವಿಜ್ಞಾನಿ. ಸ್ಯಾಟಲೈಟ್ ಉಡ್ಡಯನ ಯಂತ್ರದ ವಿನ್ಯಾಸಗೊಳಿಸುವಲ್ಲಿ ನೈಪುಣ್ಯತೆ ಸಾಧಿಸಿರುವ ಬಿ.ಎನ್.ಸುರೇಶ ಅವರು ಭಾರತೀಯ ಅಂತರಿಕ್ಷ ವಿಜ್ಞಾನ ಸಂಸ್ಥೆಯ ಸ್ಥಾಪಕ ನಿರ್ದೇಶಕರು.

ದೇಶದ ಪ್ರಸಿದ್ಧ ಐಐಟಿ ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳಲ್ಲಲಿ ಪ್ರಾಧ್ಯಾಪಕರಾಗಿದ್ದ ಬಿ.ಎನ್. ಸುರೇಶ ಅವರು ಸ್ಪೇನ್ ಕ್ಯಾಪ್ಸಲ್ ರಿಕವರಿ ಎಕ್ವಿಪ್‌ಮೆಂಟ್ ತಯಾರಿಕೆಯಲ್ಲಿ ನೀಡಿರುವ ಕೊಡುಗೆ ಅಪಾರವಾದುದು. ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿರುವ ಸುರೇಶ ಅವರು ದೇಶ-ವಿದೇಶಗಳ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಕಸ್ತೂರಿ ರಂಗನ್

ವಿಶ್ವದ ಪ್ರಸಿದ್ದ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ|| ಕೆ. ಕಸ್ತೂರಿ ರಂಗನ್ ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಬೆಳವಣಿಗೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಮುಖ್ಯಸ್ಥರಾಗಿ ಜಾಗತಿಕ ಮಟ್ಟದಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಔನ್ನತ್ಯ ಸಾಧಿಸಲು ದುಡಿದ ಡಾ|| ಕಸ್ತೂರಿ ರಂಗನ್ ಅವರು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರತಿಷ್ಠಿತ ಪದ್ಮ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಜಯಾ ಸುವರ್ಣ

ಜಯಾ ಸುವರ್ಣ ಅವರು ಮುಂಬಯಿಯಲ್ಲಿ ನೆಲೆನಿಂತು ಹೋಟೆಲ್ ಉದ್ಯಮಿಯಾಗಿ ವಲಸೆ ಬರುವ ಕರಾವಳಿಯ ಕನ್ನಡಿಗರಿಗೆ ಆಶ್ರಯದಾತರಾಗಿದ್ದಾರೆ. ಅತ್ಯುತ್ತಮ ಸಂಘಟನಕಾರರೂ ಆದ ಜಯಾ ಸುವರ್ಣ ರಾಷ್ಟ್ರೀಯ ಬಿಲ್ಲವ ಮಹಾಮಂಡಲವನ್ನು ರೂಪಿಸಿ ಎಲ್ಲ ಬಿಲ್ಲವರನ್ನೂ ಒಗ್ಗೂಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿಯೂ ತಮ್ಮ ಪ್ರಾವೀಣ್ಯತೆ ತೋರಿರುವ ಜಯಾ ಸುವರ್ಣ ಅವರು ಭಾರತ್ ಕೋ-ಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕನ್ನು ರೂ.೬.೩೨ಲಕ್ಷಗಳ ಬಂಡವಾಳದಿಂದ ೧೦೫ ಕೋಟಿ ರೂಗಳ ಲಾಭ ಗಳಿಸುವ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಂಘಟನಾ ಚತುರತೆಯನ್ನು ತೋರಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.

Categories
ಕನ್ನಡ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶಾಂತಿ ಕುಟೀರ

ಶಾಂತಿ ಕುಟೀರ ಸಂಸ್ಥೆಯು ನಾಡಿನ ಅಸಂಖ್ಯಾತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತಿರುವ ಸಂಸ್ಥೆಗಳಲ್ಲೊಂದು. ಈ ಆಧ್ಯಾತ್ಮಿಕ ಸಂಸ್ಥೆಯನ್ನು ಆರಂಭಿಸಿದ ಶ್ರೀ ಗಣಪತರಾವ ಮಹಾರಾಜರಿಗೆ ಈಗ ನೂರು ವರ್ಷ

ಲೌಕಿಕ ಶಿಕ್ಷಣ ಪಡೆದರೂ ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡ ಗಣಪತರಾವ್ ಮಹಾರಾಜರು ಆಧ್ಯಾತ್ಮ ಸಾಧನೆಯಿಂದ ಹೊಸ ಹಾದಿಯನ್ನು ಹುಡುಕಿಕೊಟ್ಟರಲ್ಲದೆ ಅದನ್ನು ಸಮರ್ಥವಾಗಿ ಮುಂದುವರೆಸಲು ಅನುಕೂಲವಾಗುಂತೆ ವಿಜಾಪುರ ಜಿಲ್ಲೆಯ ಕನ್ನೂರಿನಲ್ಲಿ ಶಾಂತಿ ಕುಟೀರವನ್ನು ಸ್ಥಾಪಿಸಿದರು. ಐದು ದಶಕಗಳ ಕಾಲ ಅಸಂಖ್ಯಾತ ಶಿಷ್ಯರಿಗೆ ನಾಮಮಂತ್ರವನ್ನು ಉಪದೇಶಿಸಿದ ಶ್ರೀ ಗಣಪತರಾವ್ ಮಹಾರಾಜ್ ಹಲವು ಮೌಲ್ಯಯುತ ಗ್ರಂಥಗಳನ್ನು ರಚಿಸಿರುವುದೇ ಅಲ್ಲದೇ ಸತತವಾಗಿ ತಮ್ಮ ಪ್ರವಚನಗಳಿಂದ ಅಸಂಖ್ಯಾತ ಜನರನ್ನು ತಲುಪಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಕನ್ನಡ ಸಾಹಿತ್ಯ ಪರಿಷತ್ತು

೧೯೧೫ರಲ್ಲಿ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದರ್ಶಿತ್ವದ ಫಲವಾಗಿ ನಾಡಿಗೆ ದೊರಕಿದ ಹಲವು ಪ್ರಗತಿಪರ ಸಂಸ್ಥೆಗಳಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಸ್ಥಾಪಿಸಿದ ಸಂಸ್ಥೆ, ಕಾಲಾಂತರದಲ್ಲಿ ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆಯಾಗಿ ರೂಪುಗೊಂಡಿತು.

ಕರ್ನಾಟಕ ಏಕೀಕರಣವೂ ಸೇರಿದಂತೆ, ಕನ್ನಡ ನಿಘಂಟು, ಸಾಹಿತ್ಯ-ಸಂಸ್ಕೃತಿಗಳ ಪುನರುತ್ಥಾನಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್, ಮಹಾಜನ ವರದಿ, ಸರೋಜಿನಿ ಮಹಿಷಿ ವರದಿ, ಗೋಕಾಕ್ ಚಳುವಳಿಯಂತಹ ಸಂದರ್ಭಗಳಲ್ಲಿ ಹೋರಾಟದ ಮುಂಚೂಣಿಯಲ್ಲಿತ್ತು.

ಕನ್ನಡ ಭಾಷೆ ಹಾಗೂ ಬದುಕಿನ ಹಾದಿಯಲ್ಲಿ ಗಮನಾರ್ಹ ಸೇವೆ ಸಲ್ಲಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ. ಭಾಷೆಯ ತಳಹದಿಯ ಮೇಲೆ ಒಂದು ಶತಮಾನದಷ್ಟು ಕಾಲ ಜೀವಂತವಾಗಿರುವ ಸಂಸ್ಥೆ ಇಡೀ ಭಾರತದಲ್ಲಿ ಇದೊಂದೇ ಆಗಿದೆ. ನೂರು ವರುಷ ಕಂಡಿರುವ ಕ.ಸಾ.ಪ. ಈಗ ತನ್ನ ಕಾರ್ಯಚಟುವಟಿಕೆಗಳನ್ನು ಹಳ್ಳಿಯವರೆಗೆ ವಿಸ್ತರಿಸಿದೆ.

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಸಂಧ್ಯಾ ಸತೀಶ್ ಪೈ

ಮಣಿಪಾಲದ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕಿಯಾಗಿರುವ ಡಾ|| ಸಂಧ್ಯಾ ಪೈ ವಾರಪತ್ರಿಕೆ ‘ತರಂಗ’ದ ಪ್ರಧಾನ ಸಂಪಾದಕರಾಗಿ ಓದುಗರ ಮನ ಮುಟ್ಟುವಂತೆ ಅನೇಕ ಅಂಕಣಗಳನ್ನು ಸತತವಾಗಿ ಬರೆಯುತ್ತಾ ಬಂದಿದ್ದಾರೆ.

ಸಮಾಜದಲ್ಲಿ ಘಟಿಸುವ ಸಣ್ಣ ಸಣ್ಣ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಅಮೂಲಾಗ್ರವಾದ ಚಿಂತನೆಗಳನ್ನು ಹರಿಯ ಬಿಡುವ ಅಂಕಣಗಳನ್ನು ಸಂಧ್ಯಾ ಪೈ ಅವರು ಓದುಗರಿಗೆ ದಾಟಿಸುತ್ತಿದ್ದಾರೆ. ಓದುಗರನ್ನು ಚಿಂತನೆಗೆ ಹಚ್ಚುವಂತಹ ಲೇಖನಗಳ ಮೂಲಕ ಮನಮುಟ್ಟುತ್ತಿರುವ ಸಂಧ್ಯಾ ಪೈ ಮಕ್ಕಳಿಗಾಗಿ ಅನೇಕ ವಿಚಾರಗಳನ್ನು ಸರಳವಾಗಿ ಹೇಳುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸಂಧ್ಯಾ ಅವರ ಕೃತಿಗಳು ಓದುಗರನ್ನು ಮುಟ್ಟುತ್ತಿದೆ. ಡಾ|| ಸಂಧ್ಯಾ ಪೈ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಎಂ.ಬಿ.ದೇಸಾಯಿ

ಎಂ.ಬಿ.ದೇಸಾಯಿ ಅವರು ಗಡಿನಾಡ ಪ್ರದೇಶದಲ್ಲಿ ಕನ್ನಡದ ಪತ್ರಿಕೆಗಳನ್ನು ಯಶಸ್ವಿಯಾಗಿ ನಡೆಸಿದವರು. ಬೆಳಗಾವಿಯ ಲೋಕದರ್ಶನ ಪತ್ರಿಕೆಯ ಮೂಲಕ ಜಿಲ್ಲೆಯ ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸುವ ಕೆಲಸವನ್ನು ದೇಸಾಯಿಯವರು ದಶಕಗಳಿಂದ ಮಾಡಿಕೊಂಡು ಬಂದಿದ್ದಾರೆ. ಸಮಾಜದ ಆಗುಹೋಗುಗಳನ್ನು ಆಡಳಿತ ಗಾರರ ಹಾಗೂ ಅಧಿಕಾರಸ್ಥರ ಗಮನಕ್ಕೆ ಸಮರ್ಥವಾಗಿ ತರುವ ಪ್ರಯತ್ನವನ್ನು ತಮ್ಮ ಪತ್ರಿಕೆಯ ಮೂಲಕ ಎಂ.ಬಿ.ದೇಸಾಯಿ ಅವರು ಮಾಡುತ್ತಿದ್ದಾರೆ.

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಲಕ್ಷ್ಮಣ ಕೊಡಸೆ

ಹಿರಿಯ ಪತ್ರಕರ್ತರಾದ ಲಕ್ಷ್ಮಣ ಕೊಡಸೆ ಪ್ರಜಾವಾಣಿ ಪತ್ರಿಕೆಯ ಸಹಾಯಕ ಸಂಪಾದಕರಾಗಿ ನಿವೃತ್ತರಾಗಿದ್ದಾರೆ. ಪ್ರಜಾವಾಣಿಯ ಸುದ್ದಿ ವಿಭಾಗ, ಪುರವಣಿ ವಿಭಾಗ, ಚಲನಚಿತ್ರ ವಿಭಾಗಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿರುವ ಕೊಡಸೆ ಜನಪ್ರಿಯ ಅಂಕಣಕಾರರೂ ಹೌದು.

ಪತ್ರಿಕೋದ್ಯಮವಲ್ಲದೆ, ಸಾಹಿತ್ಯದಲ್ಲೂ ಹೆಸರು ಮಾಡಿರುವ ಲಕ್ಷ್ಮಣ ಕೊಡಸೆ ಅವರು ಹಲವಾರು ಕಥಾ ಸಂಕಲನಗಳನ್ನು ಹೊರತಂದಿದ್ದು, ಪತ್ರಿಕೋದ್ಯಮದಲ್ಲಿ ವಿಶಿಷ್ಟ ಬರವಣಿಗೆಯ ಮೂಲಕ ಹೆಸರು ಮಾಡಿದ್ದಾರೆ. ಅನೇಕ ಚಲನಚಿತ್ರೋತ್ಸವಗಳಿಗೆ ವಿಶೇಷ ಪ್ರತಿನಿಧಿಯಾಗಿ ಪಾಲುಗೊಂಡಿರುವ ಲಕ್ಷ್ಮಣ ಕೊಡಸೆ ಈಗಲೂ ಬರವಣಿಗೆಯಲ್ಲಿ ಸಕ್ರಿಯರು

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಹಫೀಜ್

ಅಬ್ದುಲ್ ಹಫೀಜ್ ಅವರು ನಾಡಿನ ಹಿರಿಯ ಪತ್ರಿಕಾ ಛಾಯಾಗ್ರಾಹಕರಲ್ಲೊಬ್ಬರು. ಹಿಂದೂ ಪತ್ರಿಕೆಯಲ್ಲಿ ಹಲವಾರು ವರ್ಷಗಳ ಕಾಲ ಛಾಯಾಗ್ರಾಹಕರಾಗಿದ್ದು ಅನೇಕ ಮಹತ್ವದ ಸಮಾರಂಭಗಳನ್ನು, ಘಟನೆಗಳನ್ನು ತಮ್ಮ ಕ್ಯಾಮೆರಾದಿಂದ ಸೆರೆ ಹಿಡಿದು ಓದುಗರಿಗೆ ಉಣಬಡಿಸಿದವರು.

ಫ್ರೆಂಟ್ ಲೈನ್, ಬಿಸಿನೆಸ್ ಲೈನ್ ಮೊದಲಾದ ಪತ್ರಿಕೆಗಳಿಗೂ ಛಾಯಾಚಿತ್ರಗಳನ್ನು ಒದಗಿಸಿರುವ ಅಬ್ದುಲ್ ಹಫೀಜ್ ನಿವೃತ್ತಿಯ ನಂತರ ಈಗಲೂ ಫ್ರೀಲ್ಯಾನ್ಸ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪುರಸ್ಕಾರವೂ ಸೇರಿದಂತೆ ಹಲವು ಗೌರವಗಳು ದೊರೆತಿವೆ.

Categories
ಮಾಧ್ಯಮ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಖಾದ್ರಿ ಎಸ್. ಅಚ್ಯುತನ್

ಭಾರತೀಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾದ ಖಾದ್ರಿ ಎಸ್.ಅಚ್ಯುತನ್ ದೂರದರ್ಶನ, ಆಕಾಶವಾಣಿ, ಸೆನ್ಸಾರ್ ಬೋರ್ಡ್ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿದವರು. ಅಂಡಮಾನ್‌ನಲ್ಲಿಯೂ ಆಕಾಶವಾಣಿ ಪ್ರತಿನಿಧಿಯಾಗಿದ್ದ ಖಾದ್ರಿ ಅಚ್ಯುತನ್ ಅವರು ಕ್ಷೇತ್ರ ಪ್ರಚಾರ ವಿಭಾಗದಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡವರು.

ದೂರದರ್ಶನ ಮತ್ತು ಆಕಾಶವಾಣಿ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಅಚ್ಯುತನ್ ಅನೇಕ ಹೊಸ ಹೊಸ ವಿಚಾರಗಳನ್ನು ಸುದ್ದಿ ವಿಭಾಗದಲ್ಲಿ ಅಳವಡಿಸಿಕೊಂಡು ಕೇಳುಗರಿಗೆ ಹಾಗೂ ನೋಡುಗರಿಗೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಆಶಾ ಶೇಷಾದ್ರಿ

ಶ್ರೀಮತಿ ಆಶಾ ಶೇಷಾದ್ರಿ ಅವರು ಸಸ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪುಷೋದ್ಯಮದ ಕ್ರಾಂತಿಗೆ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಆರ್ಥಿಕತೆಗೆ ಹೊಸ ಪ್ರೋತ್ಸಾಹ ಕೊಡುತ್ತಿರುವ ಪುಷ್ಪ ರಫ್ತು ಉದ್ಯಮದಲ್ಲಿಯೂ ಸಾಕಷ್ಟು ಪರಿಣತಿ ಪಡೆದಿರುವ ಆಶಾ ಶೇಷಾದ್ರಿ ಅವರು ಕೃಷಿ ಕ್ಷೇತ್ರದಲ್ಲಿ ವಾಣಿಜ್ಯ ಕೃಷಿಯ ರಬ್ಬರ್, ವೆನಿಲ್ಲಾ, ಅಡಿಕೆ, ಭತ್ತ, ಆರ್ಕಿಡ್‌ಗಳನ್ನು ಬೆಳೆಯುವಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕಸಿ ಕೃಷಿಯ ಮೂಲಕ ಬಾಳೆ ಹಣ್ಣು ಬೆಳೆಯನ್ನು ಇತರ ತರಕಾರಿ ಬೆಳೆಗಳೊಂದಿಗೆ ಬೆಳೆಯುವ ಹೊಸ ಪದ್ಧತಿಯೊಂದನ್ನು ಕಂಡು ಹಿಡಿದಿರುವ ಆಶಾ ಶೇಷಾದ್ರಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಕೀರಣಗೆರೆ ಜಗದೀಶ್

ಕೀರಣಗೆರೆ ಜಗದೀಶ ಅವರು ರೇಷ್ಮೆ ಕೃಷಿಕರಿಗೆ ಬಹುಬಗೆಯ ಸೌಲಭ್ಯಗಳನ್ನು ಒದಗಿಸಿಕೊಡುವ ಅತ್ಯಾಧುನಿಕ ಚಾಕಿ ಸಾಕಾಣಿಕಾ ಕೇಂದ್ರವನ್ನು ಸ್ಥಾಪಿಸಿ ಅಸಂಖ್ಯಾತ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತಾ ಬಂದಿದ್ದಾರೆ.

ರೇಷ್ಮೆ ಕೃಷಿ ಬೆಳೆಗಾರರಿಗೆ ಒಳ್ಳೆಯ ಆದಾಯ ಗಳಿಸಿಕೊಡುವಂತೆ ಆಧುನಿಕ ತಂತ್ರಜ್ಞಾನ ಹಾಗೂ ತರಬೇತಿಯನ್ನು ೬,೦೦೦ಕ್ಕೂ ಹೆಚ್ಚು ಮಂದಿಗೆ ತಮ್ಮ ಕೇಂದ್ರದ ಮೂಲಕ ನೀಡಿರುವ ಜಗದೀಶ್ ಅವರು ಉತ್ತಮ ಗುಣಮಟ್ಟದ ಚಾಕಿ ಹುಳುಗಳನ್ನು ರೈತರಿಗೆ ವಿತರಿಸುವ ಮೂಲಕ ಹೆಚ್ಚಿನ ಇಳುವರಿ ಹಾಗೂ ಆದಾಯ ಪಡೆಯಲು ನೆರವಾಗಿದ್ದಾರೆ. ಅತಿ ದೊಡ್ಡ ಹಾಗೂ ಅತ್ಯುತ್ತಮ ಜಾಕಿ ಕೇಂದ್ರವೆಂಬ ಹೆಗ್ಗಳಿಕೆಗೂ ಜಗದೀಶ ಅವರ ಕೀರಣಕೆರೆ ಚಾಕಿ ಕೇಂದ್ರ ಪಾತ್ರವಾಗಿದೆ.

Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಶಿವಾನಂದ ಕಳವೆ

ನಾಡಿನ ಹೆಸರಾಂತ ಪರಿಸರ ಹಾಗೂ ಅಭಿವೃದ್ಧಿ ಬರಹಗಾರರಾದ ಶಿವಾನಂದ ಕಳವೆ ನಾಡಿನ ಪರಿಸರ ಕುರಿತ ಹಲವಾರು ಲೇಖನಗಳನ್ನು ಹಾಗೂ ಅಂಕಣಗಳನ್ನು ನಿಯತವಾಗಿ ವಿವಿಧ ಪತ್ರಿಕೆಗಳಿಗೆ ಬರೆಯುತ್ತಾ ಬಂದಿದ್ದಾರೆ. ಮಾಲಿನ್ಯದಿಂದ ವಾತಾವರಣದ ಮೇಲೆ ಉಂಟಾಗುವ ಅಪಾಯಗಳನ್ನು ಜನತೆಗೆ ತಿಳಿಸಿಕೊಡುವಲ್ಲಿ ಅನೇಕ ಕಾರ್ಯಾಗಾರಗಳನ್ನು ವ್ಯವಸ್ಥೆ ಮಾಡಿರುವ ಶಿವಾನಂದ ಕಳವೆ ಕೃಷಿ ಪತ್ರಿಕೋದ್ಯಮದಲ್ಲಿ ಹಲವರನ್ನು ತರಬೇತುಗೊಳಿಸಿದ್ದಾರೆ.

ಪ್ರತಿಷ್ಟಿತ ಅಭಿವೃದ್ಧಿ ವರದಿಗಾರಿಕೆ ಪ್ರಶಸ್ತಿಯನ್ನು ರಾಜ್ಯ ಸರ್ಕಾರದಿಂದ ಪಡೆದಿರುವ ಶಿವಾನಂದ ಕಳವೆ ಉತ್ತರ ಕನ್ನಡದಲ್ಲಿ ಪ್ರಾತ್ಯಕ್ಷಿಕೆಗಾಗಿ ಕೇಂದ್ರವೊಂದನ್ನು ನಿರ್ಮಿಸಿ ಪರಿಸರ ಹಾಗೂ ಕೃಷಿ ಕುರಿತ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಡಿ.ಎ. ಚೌಡಪ್ಪ

ಚೌಡಪ್ಪ ಅವರು ಪಿನಾಕಿನಿ ನದಿಯಲ್ಲಿ ಮರಳು ಅಕ್ರಮ ದಂಧೆಯನ್ನು ವಿರೋಧಿಸುವ ಹೋರಾಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಅಪಾರ ಮಾಹಿತಿಯನ್ನು ನೀಡಿ ಮೆಚ್ಚುಗೆಯನ್ನು ಪಡೆದಿರುವ ಚೌಡಪ್ಪ ಅನೇಕ ಬಾರಿ ಮಾರಣಾಂತಿಕ ಹಲ್ಲೆಗಳಿಂದ ಪಾರಾಗಿದ್ದಾರೆ. ವೃತ್ತಿಯಿಂದ ನೇಕಾರರಾದ ಚೌಡಪ್ಪ ಕೃಷಿಯನ್ನು ತಮ್ಮ ಬದುಕನ್ನಾಗಿ ಮಾಡಿಕೊಂಡು ಮರಳು ನಿಕ್ಷೇಪಗಳನ್ನು ಉಳಿಸುವ ಹೋರಾಟದಲ್ಲಿ ಈಗಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Categories
ರಾಜ್ಯೋತ್ಸವ 2014 ಲಲಿತಕಲೆ ಶಿಲ್ಪಕಲೆ

ಖಾಸೀಂ ಕನ್ಧಾವಿ

ಖಾಸೀಮ್ ಕಾವಿ ಅವರು ನಾಡಿನ ಹೆಸರಾಂತ ಚಿತ್ರ ಕಲಾವಿದರು. ಚಿತ್ರಕಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದ ಇವರು ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಬಹುಮಾನಗಳಿಗೆ ಪಾತ್ರರಾಗಿದ್ದರು. ಆ ನಂತರ ದೇಶದ ಅನೇಕ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲುಗೊಂಡಿದ್ದ ಖಾಸೀಂ ಕಾವಿ ಅವರು ಏಕ ವ್ಯಕ್ತಿ ಪ್ರದರ್ಶನಗಳನ್ನು ಸಮೂಹ ಚಿತ್ರಕಲಾ ಪ್ರದರ್ಶನಗಳನ್ನು ನಾಡಿನುದ್ದಕ್ಕೂ ನಡೆಸಿದ್ದು ಅನೇಕ ರಾಷ್ಟ್ರಮಟ್ಟದ ಕಲಾವಿದರ ಶಿಬಿರಗಳಲ್ಲಿಯೂ ಪಾಲುಗೊಂಡಿದ್ದಾರೆ. ಇವರ ಚಿತ್ರಕಲಾಕೃತಿಗಳು ದೇಶ ವಿದೇಶಗಳ ಸಂಗ್ರಹಗಳಲ್ಲಿದೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ಲಕ್ಷ್ಮೀ ರಾಮಪ್ಪ

ಲಕ್ಷ್ಮೀ ರಾಮಪ್ಪ ಅವರು ಕಳೆದ ೪೦ ವರ್ಷಗಳಿಂದ ಅವರ ವಂಶ ಪರಂಪರೆಯಾದ ಹಸೆ ಚಿತ್ತಾರವನ್ನು ಹಸೆಗೋಡೆ ಚಿತ್ತಾರ, ತೇರಿನ ಚಿತ್ತಾರ, ಭೂಮಿ ಹುಣ್ಣಿಮೆ ಬುಟ್ಟಿ, ಭತ್ತದಿಂದ ಮಾಡುವ ತೋರಣ, ಗೂಡು, ಅರಳಿಎಲೆ, ಜುಮುಕಿ ಹಾಗೂ ಕಳಸದಕಡಿ, ವಿವಿಧ ಕಲಾಕೃತಿಗಳ ನಿರ್ಮಾಣ ಮತ್ತು ಸೋಬಾನೆ ಪದ, ಭತ್ತ ಕಟ್ಟುವ ಹಾಡು, ಬೀಡುವ ಹಾಡು, ನಾಟ ಹಾಡು, ದೀಪಾವಳಿ ಹಾಗೂ ಗೌರಿ-ಗಣೇಶ ಹಬ್ಬದ ಹಾಡುಗಳನ್ನು ಹಾಡುತ್ತಾರೆ.

ಚಿತ್ತಾರ ಕಲೆಯ ಜೊತೆಗೆ ಗ್ರಾಮ್ಯ ಜಗತ್ತಿನಲ್ಲಿ ಜನಪ್ರಿಯವಾದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಲಕ್ಷ್ಮಿ ರಾಮಪ್ಪ ಅವರ ಕಲಾ ಪ್ರತಿಭೆಯನ್ನು ಗುರುತಿಸಿ ಹಲವಾರು ಗೌರವ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ವೈ. ಯಂಕಪ್ಪ

ಕರ್ನಾಟಕದಲ್ಲಿ ದೇವಾಲಯಗಳಿಗೆ ಗೋಪುರಗಳನ್ನು ನಿರ್ಮಿಸುವಲ್ಲಿ ನೈಪುಣ್ಯತೆ ಹೊಂದಿರುವ ವೈ, ಯಂಕಪ್ಪ ಅವರು ವಿದ್ಯಾಭ್ಯಾಸದಲ್ಲಿ ಹೆಚ್ಚು ದಿನ ಮುಂದುವರೆಯದಿದ್ದರೂ ಶಿಲ್ಪಕಲೆಯಲ್ಲಿ ವಿಶೇಷವಾಗಿ ಗೋಪುರ ಹಾಗೂ ಸಭಾಮಂಟಪಗಳನ್ನು ನಿರ್ಮಿಸುವಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡವರು.

ನಮ್ಮ ನಾಡಿನ ಶ್ರೇಷ್ಠ ವಾಸ್ತು ಶಿಲ್ಪ ಶೈಲಿಯನ್ನು ವಿಶ್ವನಾಥ ನಾಯ್ಡು ಅವರಿಂದ ಕಲಿತು ವಾಸ್ತು ಶಿಲ್ಪವನ್ನು ಬದುಕಿಗಾಗಿ ಆರಿಸಿಕೊಂಡು ನಡೆದದ್ದು ಗ್ರಾಮೀಣ ಪ್ರದೇಶಕ್ಕೆ ದಾವಣಗೆರೆಯವರಾದ ಯಂಕಪ್ಪ ಸುತ್ತಮುತ್ತಲ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅಸಂಖ್ಯಾತ ಗುಡಿ ಗೋಪುರಗಳನ್ನು ಸಭಾ ಮಂಟಪಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಮೂರು ದಶಕಗಳಿಂದ ಅನೇಕ ಗೋಪುರ ಹಾಗೂ ಸಭಾಮಂಟಪಗಳನ್ನು ವಿಭಿನ್ನ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಶಿಲ್ಪಿ ಯಂಕಪ್ಪ ಅವರು ಒಂದೊಂದು ದೇವಾಲಯವನ್ನೂ ವಿಭಿನ್ನ ರೀತಿಯಲ್ಲಿ ನಿರ್ಮಾಣ ಮಾಡುವಲ್ಲಿ ನಿಪುಣರು. ಶಿಲ್ಪಕಲಾ ಅಕಾಡೆಮಿಯ ಗೌರವವನ್ನೂ ಪಡೆದಿರುವ ಯಂಕಪ್ಪನವರು ಅನೇಕ ಪ್ರಶಸ್ತಿ – ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ಚಂದ್ರಶೇಖರ್ ವೈ. ಶಿಲ್ಪ

ಚಂದ್ರಶೇಖರ .ವೈ. ಶಿಲ್ಪಿ ಅವರು ಲೋಹ, ಶಿಲೆ ಹಾಗೂ ಕಾಷ್ಠ ಶಿಲ್ಪಿಗಳಾಗಿ ಹೆಸರು ಮಾಡಿದವರು. ಕಠಿಣ ಅಭ್ಯಾಸದಿಂದ ಶಿಲ್ಪಕಲೆಯಲ್ಲಿ ನೈಪುಣ್ಯತೆ ಪಡೆದ ಚಂದ್ರಶೇಖರ .ವೈ. ಶಿಲ್ಪಿ ಅವರು ದ್ವಾರಬಾಗಿಲುಗಳು, ದೇವರಮನೆ ಬಾಗಿಲು ಕೆತ್ತುವಲ್ಲಿ ಪರಿಣತರು. ಚಾಳುಕ್ಯ ಹಾಗೂ ರಾಷ್ಟ್ರಕೂಟ ಶೈಲಿಯಲ್ಲಿ ಶಾಸ್ತ್ರಬದ್ಧವಾದ ವಿಗ್ರಹಗಳ ರಚನೆಯಲ್ಲಿ ನೈಮಣ್ಯತೆ ಪಡೆದಿರುವ ಇವರು ದೇವಾನುದೇವತೆಗಳ ವಿಗ್ರಹಗಳ ಕೆತ್ತನೆಯಲ್ಲಿ ಖ್ಯಾತಿ ಪಡೆದಿದ್ದಾರೆ.

ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದು ಇವರ ಅನೇಕ ಕೃತಿಗಳು ದೇಶ-ವಿದೇಶಗಳ ಅನೇಕ ಸಂಗ್ರಹಗಳಲ್ಲಿದ್ದು ಶಿಲ್ಪಕಲೆಯಲ್ಲಿ ಅನೇಕ ಯುವಜನರನ್ನು ಚಂದ್ರಶೇಖರ .ವೈ. ಶಿಲ್ಪಿಗಳು ಗುರುಕುಲ ಪದ್ಧತಿಯಲ್ಲಿ ತಯಾರು ಮಾಡುತ್ತಿದ್ದಾರೆ. ಇವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಎಂ.ಎಸ್. ರಾಜಶೇಖರ್

ಎಂ.ಎಸ್. ರಾಜಶೇಖರ್ ಅವರು ಕನ್ನಡದ ಹಿರಿಯ ಮೇಕಪ್ ಮ್ಯಾನ್ ಹಾಗೂ ಕಲಾವಿದ ಸುಬ್ಬಣ್ಣನವರ ಪುತ್ರ. ಚಿಕ್ಕಂದಿನಿಂದಲೇ ಚಲನಚಿತ್ರ ತಯಾರಿಕೆಯ ವಿವಿಧ ವಿಭಾಗಗಳಲ್ಲಿ ಪರಿಣತಿ ಪಡೆದ ಎಂ.ಎಸ್‌.ರಾಜಶೇಖರ್ ಅವರಿಗೆ ಹೆಸರು ತಂದುಕೊಟ್ಟ ಮೊದಲ ಚಿತ್ರ ‘ನಂಜುಂಡಿ ಕಲ್ಯಾಣ’.

ಡಾ|| ರಾಜಕುಮಾರ್ ಅವರ ನಿರ್ಮಾಣ ಸಂಸ್ಥೆಯ ಬಹಳಷ್ಟು ಚಿತ್ರಗಳಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಎಂ.ಎಸ್.ರಾಜಶೇಖರ್ ಅನೇಕ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರಿಗೆ ಪ್ರತಿಷ್ಟಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯೂ ಸಂದಿದೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಆರ್.ಟಿ. ರಮಾ

ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಜನಪ್ರಿಯ ನಟಿಯಾಗಿದ್ದ ಆರ್.ಟಿ.ರಮಾ ಅವರು ಚಲನಚಿತ್ರಗಳಲ್ಲೂ ನಾಯಕಿಯಾಗಿ ಪೋಷಕ ನಟಿಯಾಗಿ ನಾಲ್ಕು ದಶಕಗಳಿಂದ ದುಡಿಯುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನ ಕಲಾವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದು, ಪ್ರೌಢ ಪ್ರಬಂಧವನ್ನು ರಚಿಸಿರುವ ಆರ್.ಟಿ.ರಮಾ ಏಕಪಾತ್ರಗಳ ನಾಟಕಗಳಿಂದ ಪ್ರಖ್ಯಾತರಾದವರು.

ಕನ್ನಡ ಚಲನಚಿತ್ರ ರಂಗಕ್ಕೆ ನಾಯಕಿಯಾಗಿ ಪ್ರವೇಶ ಮಾಡಿದ ಆರ್.ಟಿ.ರಮಾ ಅನುಭವಿ ನೃತ್ಯ ಕಲಾವಿದೆ. ಅನೇಕ ನಾಯಕನಟರೊಂದಿಗೆ ಪ್ರಧಾನಪಾತ್ರಗಳಲ್ಲಿ ಕಾಣಿಸಿಕೊಂಡ ರಮಾ ಅವರು ಈಗ ಕಿರುತೆರೆಯಲ್ಲಿ ಬೇಡಿಕೆ ನಟಿಯಾಗಿರುವ ಆರ್.ಟಿ.ರಮಾ ರಂಗಭೂಮಿಯಲ್ಲಿ ಅಗಾಗ ಹೊಸ ಪ್ರಯೋಗಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರಿಯರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ವೈಜನಾಥ ಬಿರಾದಾರ

ರಂಗಭೂಮಿಯ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ವೈಜನಾಥ ಬಿರಾದಾರ್ ಕನ್ನಡದ ಹಿರಿಯ ಪೋಷಕ ನಟರಲ್ಲೊಬ್ಬರು. ಹಾಸ್ಯ ಪಾತ್ರಗಳಿಂದ ಕನ್ನಡ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ವೈಜನಾಥ ಬಿರಾದಾರ್ ಅವರು ನಾಲ್ಕು ದಶಕಗಳಿಂದ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ದೊರೆಯುವ ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬಿ ಅಭಿನಯಿಸುವ ವೈಜನಾಥ ಬಿರಾದಾರ್ ಅವರು ಅಂತರರಾಷ್ಟ್ರೀಯ ಖ್ಯಾತಿ ಪಡೆದ ಚಲನಚಿತ್ರ ನಿದೇಶಕ ಗಿರೀಶ ಕಾಸರವಳ್ಳಿ ಅವರ ಕನಸೆಂಬ ಕುದುರೆಯನೇರಿ ಚಿತ್ರದಲ್ಲಿ ಮನೋಜ್ಞ ಅಭಿನಯದಿಂದ ರಾಷ್ಟ್ರಮಟ್ಟದಲ್ಲೂ ಪ್ರೇಕ್ಷಕರ ಗಮನ ಸೆಳೆದರು. ಹೀಗಾಗಿ ಅವರ ಹೆಸರು ರಾಷ್ಟ್ರ ಪ್ರಶಸ್ತಿಯ ವೇಳೆ ಚರ್ಚೆಯಾಯಿತು. ಅತ್ಯಂತ ನೈಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿರುವ ವೈಜನಾಥ ಬಿರಾದಾರ್ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ನಿರಂತರವಾಗಿ ಅಭಿನಯಿಸುತ್ತಿರುವ ಕಲಾವಿದರು.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಎಸ್. ಜಾನಕಿ

ದಕ್ಷಿಣ ಭಾರತದ ಹೆಸರಾಂತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಹದಿನಾಲ್ಕಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ದಾಖಲೆ ಹೊಂದಿದ್ದಾರೆ. ಕನ್ನಡದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಎಸ್.ಜಾನಕಿ ಅವರು ಹೆಚ್ಚಾಗಿ ಹಾಡಿರುವುದು ಮಾಧುರ್ಯ ಪ್ರಧಾನ ಗೀತೆಗಳನ್ನು,

ಸಂಧ್ಯಾರಾಗ, ಗೆಜ್ಜೆಪೂಜೆ, ಉಪಾಸನೆ, ಮೊದಲಾದ ಚಿತ್ರಗಳಲ್ಲಿ ಬಹುಕಾಲ ನೆನಪಿನಲ್ಲುಳಿಯುವಂತಹ ಗೀತೆಗಳಿಗೆ ಕಂಠ ನೀಡಿರುವ ಎಸ್.ಜಾನಕಿ ಅವರು ಸಂಗೀತ ನಿರ್ದೇಶಕಿಯಾಗಿ ರಾಗ ಸಂಯೋಜಕಿಯಾಗಿ ಹಾಗೂ ಕವಿಯತ್ರಿಯಾಗಿ ಪ್ರಸಿದ್ದರು. ಹಿನ್ನೆಲೆ ಗಾಯನಕ್ಕಾಗಿ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಎಸ್.ಜಾನಕಿ ಅವರು ಕವಿ ಗೀತೆಗಳಿಗೆ ವಿಶೇಷವಾದ ಕಂಠ ನೀಡಿ ಹೆಸರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕಾಂಚ್ಯಾಣಿ ಶರಣಪ್ಪ

ನಾಡಿನ ಹೆಸರಾಂತ ಶಿಶು ಸಾಹಿತಿಗಳಲ್ಲಿ ಒಬ್ಬರಾಗಿರುವ ಕಂಚ್ಯಾಣಿ ಶರಣಪ್ಪ ಶಿವಸಂಗಪ್ಪನವರ ಕಾವ್ಯ ಕಾವ್ಯನಾಮ ಕಂಚ್ಯಾಣಿ ಶರಣಪ್ಪ, ಶಿಕ್ಷಕರಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಮಾಡಿರುವ ಶರಣಪ್ಪನವರು ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ.

ಮೊದಮೊದಲಿಗೆ ಪ್ರೌಢ ಸಾಹಿತ್ಯವನ್ನು ಕಾವ್ಯವನ್ನು, ರಚಿಸಿದ ಶರಣಪ್ಪನವರು ಮುಂದೆ ಬರೆದಿದ್ದೆಲ್ಲವೂ ಮಕ್ಕಳಿಗಾಗಿಯೇ. ಮಕ್ಕಳ ಗೀತೆಗಳನ್ನು ಪುಟಾಣಿಗಳಿಗೆ ಸರಳವಾಗಿ ಅರ್ಥವಾಗುವಂತೆ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡ ಶರಣಪ್ಪನವರು ಇಪ್ಪತ್ತಕ್ಕೂ ಹೆಚ್ಚು ಶಿಶುಗೀತೆಗಳ ಸಂಕಲನಗಳನ್ನು ಹೊರತಂದಿದ್ದಾರೆ.

ಮಕ್ಕಳಿಗಾಗಿಯೇ ಕಥೆಗಳನ್ನು ಆಧ್ಯಾತ್ಮ ಸಾಧಕರ ಜೀವನಚರಿತ್ರೆಗಳನ್ನು ರಚಿಸಿರುವ ಶರಣಪ್ಪನವರಿಗೆ ರಾಷ್ಟ್ರೀಯ ಬಾಲ ಸಾಹಿತ್ಯ ಪುರಸ್ಕಾರವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವ ಸನ್ಮಾನಗಳು ಸಂದಿವೆ. ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದ ಶರಣಪ್ಪನವರು ಈಗಲೂ ಶಿಶುಸಾಹಿತ್ಯ ರಚನೆಯಲ್ಲಿ ಸಕ್ರಿಯರು.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ದಾದ ಫೀರ್ ಪಂಜರ್ಲೆ

ದಾದಾಪೀರ್ ಮಂಜರ್ಲಾ ಅವರು ತತ್ವಪದಗಳ ಮೂಲಕ ಭಾವೈಕ್ಯತೆ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಅದನ್ನು ವ್ಯಾಪಕವಾಗಿ ಪಸರಿಸುವ ಕೆಲಸದಲ್ಲಿ ಮಂಜರ್ಲಾ ಅವರು ನಿರತರಾಗಿದ್ದಾರೆ.

 

ಗಾಯನವನ್ನು ವಿಜಯಶಾಂತಿ ಫಿಲ್ಡ್ ಇನ್ಸಿಟ್ಯೂಟ್‌ನಿಂದ ಕಲಿತ ದಾದಾಪೀರ್ ಹಿಂದೂಸ್ಥಾನಿ ಗಾಯನವನ್ನು ಅಭ್ಯಾಸ ಮಾಡಿದ್ದು, ಹೆಸರಾಂತ ಹಿಂದೂಸ್ಥಾನಿ ಗಾಯಕ ಕಲ್ಕತ್ತೆಯ ಉಸ್ತಾದ್ ರಶೀದ್ ಖಾನ್ ಅವರಿಂದ ತತ್ವಪದ ಹಾಗೂ ಧಾರ್ಮಿಕ ಸಾಮರಸ್ಯ ಹರಡುವ ಸಂಗೀತವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ದಾದಾಪೀರ್ ಅವರು ಈವರೆಗೆ ನೂರಿಪ್ಪತ್ತೆಂಟು ತತ್ವಪದ ಹಾಗೂ ಧಾರ್ಮಿಕ ಪದಗಳ ಆಲ್ಬಂ ಹಾಗೂ ಕ್ಯಾಸೆಟ್ ಹೊರತಂದಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಉರ್ದು, ಮತ್ತು ಹಿಂದಿ ಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡುವ ದಾದಾಪೀರ್ ಮಂಜರ್ಲಾ ಪುರಂದರ ದಾಸರ, ಸಂತ ಶಿಶುನಾಳ ಷರೀಫರ ಕೃತಿಗಳನ್ನು ಮನದುಂಬಿ ಹಾಡುತ್ತಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಅಂಕೇಗೌಡ

ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಲೇ ಪುಸ್ತಕ ಸಂಗ್ರಹಿಸುವ ಹವ್ಯಾಸವನ್ನು ಆರಂಭಿಸಿದ ಎಂ.ಅಂಕೇಗೌಡರು ಕಳೆದ ಐದು ದಶಕಗಳಿಂದ ಪುಸ್ತಕ ಸಂಗ್ರಹಿಸುವ ಕಾಯಕದಲ್ಲಿದ್ದಾರೆ. ಎಲ್ಲಾ ಭಾಷೆಯ ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಳ್ಳುವ ಅಭ್ಯಾಸ ಶುರು ಮಾಡಿದ ಅಂಕೇಗೌಡರಲ್ಲಿ ಎಲ್ಲಾ ಭಾರತೀಯ ಭಾಷೆಗಳ ಅಸಂಖ್ಯ ಕೃತಿಗಳು ಲಭ್ಯವಿದೆ.

ಬಾಪೂಜಿ ಅವರನ್ನು ಕುರಿತಂತಹ ಒಂದು ಸಾವಿರಕ್ಕೂ ಹೆಚ್ಚು ಬಗೆಯ ವಿವಿಧ ಭಾಷೆಗಳ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಅಂಕೇಗೌಡರು ರಾಮಾಯಣ, ಮಹಾಭಾರತ, ಹಾಗೂ ಭಗವದ್ಗೀತೆಯ ಸಾವಿರಾರು ಆವೃತ್ತಿಗಳನ್ನು ಜೋಡಿಸಿಟ್ಟಿದ್ದಾರೆ. ಮನೆ ತುಂಬಾ ಲಕ್ಷ ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಅಂಕೇಗೌಡರು ನಾಡಿನ ಹಲವು ಸ್ಥಳಗಳಲ್ಲಿ ವಿಶೇಷ ಪುಸ್ತಕಗಳ ಪ್ರದರ್ಶನಗಳನ್ನು ಮಾಡುವ ಮೂಲಕವೂ ಪುಸ್ತಕ ಹವ್ಯಾಸವನ್ನು ಹಬ್ಬಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿಯೇ ಪುಸ್ತಕ ಸಂಗ್ರಹ ಹವ್ಯಾಸಕ್ಕೆ ತಮ್ಮನ್ನು ತೊಡಗಿಸಿಕೊಂಡ ಅಂಕೇಗೌಡರು ಗ್ರಂಥಾಲಯದಂತೆ ತಮ್ಮ ಮನೆಯಲ್ಲಿ ಪುಸ್ತಕಗಳನ್ನು ಶೀರ್ಷಿಕೆಗೆ ಅನುಗುಣವಾಗಿ ಜೋಡಿಸುತ್ತಾ ಹೋಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ನ್ಯಾ. ಎಂ.ಎನ್. ವೆಂಕಟಾಚಲಯ್ಯ

ಭಾರತೀಯ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿರುವ ಎಂ.ಎನ್. ವೆಂಕಟಾಚಲಯ್ಯನವರು ನ್ಯಾಯಾಂಗ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟುಗಳಲ್ಲಿ ಹಲವಾರು ಮಹತ್ವದ ತೀರ್ಮಾನಗಳನ್ನು ನೀಡುವ ಮೂಲಕ ಖ್ಯಾತಿ ಪಡೆದವರು.

ನಿವೃತ್ತಿಯ ನಂತರ ಕೆಲವು ಸರ್ಕಾರದ ಹಲವು ಆಯೋಗಗಳ ಮುಖ್ಯಸ್ಥರಾಗಿಯೂ, ಭಾರತೀಯ ವಿದ್ಯಾಭವನದಂತಹ ಸಾರ್ವಜನಿಕ ಸಂಸ್ಥೆಗಳ ನಿಕಟವರ್ತಿಯಾಗಿಯೂ ಕೆಲಸ ಮಾಡಿರುವ ವೆಂಕಟಾಚಲಯ್ಯನವರು ನ್ಯಾಯಾಂಗ ಕುರಿತ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಕಾನೂನು ಶಾಸ್ತ್ರ ಕುರಿತಂತೆ ಹಲವಾರು ಪ್ರೌಢ ಲೇಖನಗಳನ್ನು ಪ್ರಕಟಿಸಿರುವ ವೆಂಕಟಾಚಲಯ್ಯನವರು ದೇಶ-ವಿದೇಶಗಳಲ್ಲಿ ಕಾನೂನು ಕುರಿತಂತೆ ಅನೇಕ ಸಮ್ಮೇಳನಗಳಲ್ಲಿ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಉನ್ನತ ಗೌರವ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಲೀಲಾ ಸಂಪಿಗೆ

ಸ್ತ್ರೀವಾದಿ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಡಾ. ಲೀಲಾ ಸಂಪಿಗೆ ಅವರು ಏಡ್ಸ್ ಸಂತ್ರಸ್ಥರ ಪುನರ್ವಸತಿ ಕುರಿತಂತೆ ರಾಜ್ಯದಾದ್ಯಂತ ಶಿಬಿರಗಳನ್ನು ಆಯೋಜಿಸುವ ಮೂಲಕ ಹೆಸರು ಮಾಡಿದವರು. ವೇಶ್ಯಾವೃತ್ತಿಯ ದುಷ್ಪರಿಣಾಮಗಳನ್ನು ಮನದಟ್ಟು ಮಾಡಿಕೊಡುವ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಲೀಲಾ ಸಂಪಿಗೆ ಅವರು ವೇಶ್ಯಾ ಸಮಸ್ಯೆಯ ವಿವಿಧ ಮುಖಗಳನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಏಡ್ಸ್ ಮಾರಣಾಂತಿಕ ರೋಗ ಕುರಿತು ಜನಜಾಗೃತಿ ಮೂಡಿಸುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಏಡ್ಸ್‌ ಪ್ರಿವೆನನ್ ಸಂಸ್ಥೆ ಮೂಲಕ ಡಾ|| ಲೀಲಾ ನಡೆಸಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎನ್. ವೆಂಕಟೇಶ್

ಎನ್. ವೆಂಕಟೇಶ್ ಅವರು ಹಿರಿಯ ದಲಿತ ಹೋರಾಟ ಕಾರ್ಯಕರ್ತರಲ್ಲೊಬ್ಬರು. ಎಪ್ಪತ್ತರ ದಶಕದಲ್ಲಿ ರಾಜ್ಯದಾದ್ಯಂತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಚನೆಗಾಗಿ ಶ್ರಮಿಸಿದ ಎನ್. ವೆಂಕಟೇಶ್ ಸಂಘದ ಮುಂಚೂಣಿಯಲ್ಲಿ ಕೆಲಸ ಮಾಡಿದವರು. ನಿರಂತರವಾಗಿ ದಲಿತ ಸಂಘರ್ಷ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿರುವ ವೆಂಕಟೇಶ್ ಅನ್ಯಾಯಗಳ ವಿರುದ್ಧ ಈಗಲೂ ದನಿ ಎತ್ತುವುದರಲ್ಲಿ ಮುಂದು.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ರೆ. ಫಾದರ್ ಡಾ. ಪಿ.ಜೆ. ಜೇಕಬ್

ರೆ. ಫಾದರ್ ಡಾ. ಪಿ.ಜೆ. ಜೇಕಬ್ ಅವರು ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಲೇ ತಮ್ಮ ಸುತ್ತಮುತ್ತಲ ಜನರನ್ನು ಸರ್ವರೀತಿಯಿಂದಲೂ ಪ್ರೋತ್ಸಾಹಿಸುವ ಹಾಗೂ ಅಭಿವೃದ್ಧಿಯ ಪಥದಲ್ಲಿ ನಡೆಸಲು ನಿರಂತರವಾಗಿ ಐದು ದಶಕಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ.

ಗ್ರಾಮೀಣ ಸೇವೆ, ಶೈಕ್ಷಣಿಕ ಸೌಲಭ್ಯ ಪೂರೈಸುತ್ತಾ ಮಾನವ ಹಕ್ಕು ರಕ್ಷಣೆ ಮಾಡುವಲ್ಲಿಯೂ ಮುಂದಾಗಿರುವ ಡಾ. ಪಿ.ಜೆ. ಜೇಕಬ್ ತಮ್ಮದೇ ಅಭಿವೃದ್ಧಿ ವೃಕ್ಷ ಎಂಬ ಮೂಲಮಂತ್ರವನ್ನು ಸಮಾಜದ ಬಹುಮುಖ ಬೆಳವಣಿಗೆಗಾಗಿ ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮ ಪ್ರಚಾರ ಮಾಡುತ್ತಲೇ ಸಾರ್ವಜನಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡು ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ, ಶಾಸಕರಾಗಿ ಆಯ್ಕೆಯಾದ ಅಪರೂಪದ ವ್ಯಕ್ತಿತ್ವವುಳ್ಳವರು ಡಾ. ಪಿ.ಜೆ.ಜೇಕಬ್,

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಗುರುರಾಜ ಹೆಬ್ಬಾರ್

ಮೈಸೂರಿನಲ್ಲಿ ವೈದ್ಯಕೀಯ ಪದವಿ ಪಡೆದ ಡಾ. ಗುರುರಾಜ ಹೆಬ್ಬಾರ್ ಅವರು ಮೊದಲಿಗೆ ಗ್ರಾಮೀಣ ಭಾಗದಲ್ಲಿಯೇ ತಮ್ಮ ವೃತ್ತಿಯನ್ನು ಆರಂಭಿಸಿ ಬಹುಬೇಗ ಗ್ರಾಮೀಣ ಜನರ ನೆಚ್ಚಿನ ವೈದ್ಯರೆನಿಸಿಕೊಂಡರು. ವಿಶೇಷವಾಗಿ ಬಡವರ ಡಾಕ್ಟರ್ ಎಂದು ಕರೆಸಿಕೊಂಡ ಗುರುರಾಜ ಹೆಬ್ಬಾರ್ ಸರ್ಕಾರ ಸೇವೆಯಲ್ಲಿದ್ದರೂ ಬಲು ಬೇಗ ಸ್ವತಂತ್ರವಾಗಿ ಹಾಸನದಲ್ಲಿ ರಾಮಕೃಷ್ಣ ನರ್ಸಿಂಗ್ ಹೋಂ ಸ್ಥಾಪಿಸಿದರು.

ಜನಸಾಮಾನ್ಯರಿಗೆ ಸುಲಭವಾಗಿ ಆರೋಗ್ಯ ಸೌಲಭ್ಯಗಳು ದೊರೆಯಬೇಕೆಂಬ ಸದುದ್ದೇಶದಿಂದ ಸಹಕಾರಿ ತತ್ವದಲ್ಲಿ ಆಸ್ಪತ್ರೆಯನ್ನು ಆರಂಭಿಸಿದ ಅವರು ಹಾಸನ ಜಿಲ್ಲೆಯಲ್ಲಿ ಸಹಕಾರಿ ತತ್ವವನ್ನು ಅತ್ಯಂತ ವ್ಯಾಪಕ ಚಳುವಳಿಯನ್ನಾಗಿ ರೂಪಿಸಿದರು. ಹಾಸನದಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಆಸ್ಪತ್ರೆ, ವೃದ್ಧಾಶ್ರಮ, ಸಿ.ಟಿ. ಸ್ಕ್ಯಾನ್ ಕೇಂದ್ರಗಳನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಗೌರವ ಸನ್ಮಾನಗಳು ಇವರನ್ನರಸಿ ಬಂದಿವೆ.

Categories
ಬಯಲಾಟ ಯಕ್ಷಗಾನ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಬಸಪ್ಪ ದುಡಲಪ್ಪ ಸಲಲ

ಬಸಪ್ಪ ದುಡಲಪ್ಪ ಸಲಲ ಅವರು ಹೆಸರಾಂತ ದೊಡ್ಡಾಟದ ಕಲಾವಿದರು. ನೇಕಾರಿಕೆ ವೃತ್ತಿಯ ಕುಟುಂಬದ ಹಿನ್ನೆಲೆಯಿಂದ ಬಂದ ಬಸಪ್ಪ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡಾಟದ ತಂಡಗಳಲ್ಲಿ ಸೇರಿಕೊಂಡು ತಿರುಗಾಟ ನಡೆಸುತ್ತಿದ್ದರು. ಪುರುಷ ಹಾಗೂ ಸ್ತ್ರೀ ಪಾತ್ರಗಳೆರಡರಲ್ಲೂ ನಿಪುಣರಾದ ಇವರು ದೊಡ್ಡಾಟದ ಹಿನ್ನೆಲೆ ಗಾಯಕರೂ ಹೌದು. ಅಂಗವಿಕಲತೆಯ ನಡುವೆಯೂ ಗೋಪಾಲಕೃಷ್ಣ, ರುಕ್ಕಿಣಿ, ರಾಮ, ಭೈಕುಂಡ ಮುನಿ ಮೊದಲಾದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುವ ಬಸಪ್ಪ ಎಂಭತ್ತರ ಹರೆಯದಲ್ಲೂ ದೊಡ್ಡಾಟದ ಸಂಗವನ್ನು ಬಿಟ್ಟಿಲ್ಲ.

Categories
ಬಯಲಾಟ ಯಕ್ಷಗಾನ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಭೀಮವ್ವ ಶಿಳ್ಳೇಕ್ಯಾತ

ಭೀಮವ್ವ ಶಿಳ್ಳೇಕ್ಯಾತ ಅವರು ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದವರಾಗಿದ್ದು ತೊಗಲುಗೊಂಬೆ ಕಲಾವಿದರಾಗಿ ನಿರಂತರವಾಗಿ ೭೫ ವರ್ಷಗಳಿಂದ ಸೇವೆ

ಸಲ್ಲಿಸುತ್ತಿದ್ದಾರೆ. ಪರದೆಯ ಹಿಂದೆ ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಅಪರೂಪದ ಕಲಾವಿದೆಯಾದ ಶ್ರೀಮತಿ ಭೀಮವ್ವ ದೊಡ್ಡಬಾಳಪ್ಪ ಅವರು ದೇಶ ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಇಳಿ ವಯಸ್ಸಿನಲ್ಲಿಯೂ ತೊಗಲುಗೊಂಬೆಯಾಟವನ್ನು ಮನಮುಟ್ಟುವಂತೆ ಪ್ರದರ್ಶಿಸುವ ಭೀಮವ್ವ ಅಮೇರಿಕ, ಇರಾನ್, ಸ್ವಿಡರ್‌ಲ್ಯಾಂಡ್ ಮೊದಲಾದ ಭಾರತದ ಪುರಾತನ ಕಲೆಯಾದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುವ ತಂಡಗಳಲ್ಲಿ ಪ್ರಮುಖ ಸದಸ್ಯೆಯಾಗಿದ್ದ ಭೀಮವ್ವ ತನ್ನ ಮಾತಿನ ಚಾಕಚಕ್ಯತೆಯಿಂದ ಹಾಗೂ ಸಮಯೋಚಿತ ಸಂಭಾಷಣೆಯಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

Categories
ಬಯಲಾಟ ಯಕ್ಷಗಾನ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಸಂಪಾಜೆ ಸೀನಪ್ಪ ರೈ

ಸಂಪಾಜೆ ಸೀನಪ್ಪ ರೈ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿ ತೆಂಕು ತಿಟ್ಟಿನ ಪ್ರಮುಖ ಯಕ್ಷಗಾನ ಕಲಾವಿದರಾಗಿ ಕಳೆದ ಐದು ದಶಕಗಳಿಂದ ಜನಪ್ರಿಯರಾಗಿದ್ದಾರೆ.

ಮೊದಲಿಗೆ ತಂದೆಯವರಿಂದ ಮೊದಲ ಪಾಠಗಳನ್ನು ಕಲಿತು ಅರ್ಥಗಾರಿಕೆ, ನಾಟ್ಯಾಭ್ಯಾಸ, ಭರತನಾಟ್ಯ ಹಾಗೂ ಬಣ್ಣಗಾರಿಕೆಯನ್ನು ಅಭ್ಯಾಸ ಮಾಡಿ ಯಕ್ಷಗಾನದ ಹಲವು ಮೇಳಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಪಡೆದ ಕಲಾವಿದರೆನಿಸಿಕೊಂಡಿದ್ದಾರೆ. ಕ್ರಿಯಾಶೀಲ ಅಭಿನಯದ ಪ್ರಮುಖ ಕಲಾವಿದರಾಗಿ ಮೂಲಕ ವಿಶೇಷವಾಗಿ ರಾಕ್ಷಸ ಪಾತ್ರಗಳಲ್ಲಿ ಗಂಡುಗತ್ತಿನ ಪಾತ್ರಗಳಲ್ಲಿ ಜೋಡಾಟ- ಕೂಡಾಟಗಳಲ್ಲಿ ಜೀವ ತುಂಬಿ ಅಭಿನಯಿಸಿ ಜನಮನ್ನಣೆಗಳಿಸಿದ್ದಾರೆ.

Categories
ಬಯಲಾಟ ಯಕ್ಷಗಾನ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ವಣಸೆ ನಾರಾಯಣ ಗಾಣಿಗ

ತೆಂಕು ಹಾಗು ಬಡಗಿನ ಯಕ್ಷಗಾನದ ಮುಮ್ಮೇಳ ಕಲಾವಿದರಾಗಿ ಹೆಸರಾಗಿರುವ ನಾರಾಯಣ ಗಾಣಿಗರು ಸಮರ್ಥ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾದವರು. ಸುಮಾರು ಮೂವತ್ತು ವರ್ಷಗಳ ಕಾಲ ಹತ್ತಕ್ಕೂ ಹೆಚ್ಚು ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿದ್ದ ಗಾಣಿಗ ಅವರು ಹಲವಾರು ಪೌರಾಣಿಕ ಪಾತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಶಿವರಾಮ ಕಾರಂತರ ಯಕ್ಷರಂಗದ ಕಲಾವಿದರಾಗಿ ಸೇವೆ ಸಲ್ಲಿಸಿರುವ ವಣಸೆ ನಾರಾಯಣ ಗಾಣಿಗರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಚಿಕ್ಕಮರಿಯಪ್ಪ

ಬೀಸು ಕಂಸಾಳೆ ಕಲೆಯನ್ನು ಸುಮಾರು ಐದು ದಶಕಗಳಿಂದಲೂ ಪ್ರದರ್ಶಿಸುತ್ತಾ ಬಂದಿರುವ ಹಿರಿಯ ಕಲಾವಿದ ಚಿಕ್ಕಮರಿಯಪ್ಪ, ನಾಡಿನುದ್ದಕ್ಕೂ ಬೀಸುಕಂಸಾಳೆ ಪ್ರದರ್ಶನದಲ್ಲಿ ಹೆಸರು ಪಡೆದಿದ್ದಾರೆ. ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಷ್ಠಿತ ಉತ್ಸವಗಳಲ್ಲಿ ಭಾಗವಹಿಸಿದ್ದಾರೆ.

ಜಾನಪದ ಕಲೆಯನ್ನು ಜೀವಂತವಾಗಿಟ್ಟು ಅದರಲ್ಲಿ ಹಲವಾರು ಉತ್ಕೃಷ್ಟ ಬದಲಾವಣೆಗಳನ್ನು ತರುವಲ್ಲಿ ಚಿಕ್ಕಮರಿಯಪ್ಪ ಅವರು ಶ್ರಮಿಸಿದ್ದು ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕೋತ್ಸವ ಪುರಸ್ಕಾರಗಳು ಸೇರಿದಂತೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ.

Categories
ಜಾನಪದ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಲಕ್ಷ್ಮೀಬಾಯಿ ರೇವಲ್

ಲಕ್ಷ್ಮೀಬಾಯಿ ರೇವಲ್ ಅವರು ತಮ್ಮ ಮನೆತನದ ಕಸುಬಾದ ಬುರಕಥೆ ಹೇಳುವ ವೃತ್ತಿಯನ್ನು ಅನೂಚಾನವಾಗಿ ಮುಂದುವರೆಸುತ್ತಾ ಸುಮಾರು ಏಳೂವರೆ ದಶಕಗಳನ್ನು ಕಳೆದಿದ್ದಾರೆ. ಪಾರಂಪರಾನುಗತವಾಗಿ ಬಂದ ಮಹಾಕಾವ್ಯಗಳ ಜೊತೆಗೆ ಶ್ರೀ ರೇಣುಕಾದೇವಿ ಯಲ್ಲಮ್ಮನ ಮಹಾಕಾವ್ಯ, ಕುಮಾರರಾಮನ ಮಹಾಕಾವ್ಯ, ಕೃಷ್ಣಗೊಲ್ಲರಾಯನ ಮಹಾಕಾವ್ಯ ಮೊದಲಾದ ಇಪ್ಪತ್ತಮೂರಕ್ಕೂ ಹೆಚ್ಚು ಮಹಾಕಾವ್ಯಗಳನ್ನು ಪ್ರಸ್ತುತಿ ಪಡಿಸುವ ನೈಪುಣ್ಯತೆ ಹೊಂದಿರುವ ಲಕ್ಷ್ಮೀಬಾಯಿ ರೇವಲ್ ಜಾನಪದ ಹಾಡುಗಳನ್ನು ಹಾಗೂ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲವರು. ಪ್ರಾಚೀನ ಕಾವ್ಯದ ಜೊತೆಗೆ ಆಧುನಿಕವಾದ ವಚನಗಳು ತತ್ವಪದಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡಿರುವ ಲಕ್ಷ್ಮೀಬಾಯಿ ರೇವಲ್ ಅವರು ನಾಡಿನ ಹಲವಾರು ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಪಡೆದಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಪೂಜಾಲ ನಾಗರಾಜ್

ನಾಲ್ಕು ತಲೆಮಾರುಗಳಿಂದ ಕರಗ ಹೊರುವ ಕಾಯಕವನ್ನೂ ನಡೆಸಿಕೊಂಡು ಬರುತ್ತಿರುವ ಕುಟುಂಬ ಕುಡಿಯಾದ ನಾಗರಾಜ್ ಬಾಲ್ಯದಿಂದಲೇ ಕರಗ ಧಾರ್ಮಿಕ ಕಲೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದರೂ ಕರಗ ಹೊರುವುದನ್ನು ಆರಂಭಿಸಿದ್ದು ತಮ್ಮ ೧೮ನೇ ವಯಸ್ಸಿನಲ್ಲಿ.

ನಾಲ್ಕು ದಶಕಗಳಿಂದ ನೂರಾರು ಸ್ಥಳಗಳಲ್ಲಿ ಕರಗಹೊರುವ ಪರಿಪಾಠವನ್ನು ರೂಢಿಸಿಕೊಂಡು ಬಂದಿರುವ ನಾಗರಾಜ್ ಆರಾಧನಾ ಕಲೆಯಾದ ಕರಗ ಶಕ್ಯುತ್ಸವವನ್ನು ಅತ್ಯಂತ ನೇಮ ನಿಷ್ಠೆಗಳಿಂದ ಆಚರಿಸುತ್ತಾ ಬಂದಿದ್ದಾರೆ. ತಂದೆ ಪ್ರಸಿದ್ದ ಕರಗ ಪೂಜಾರಿ ಮುನಿಸ್ವಾಮಿ ಅವರೊಂದಿಗೆ ಕರಗಹೊರುವುದನ್ನು ಕಲಿತ ನಾಗರಾಜ್ ಕರಗಕ್ಕೆ ಬೇಕಾದ ಎಲ್ಲಾ ಪೂರಕ ತಯಾರಿಗಳನ್ನು ಮಾಡುವ ಕೌಶಲ್ಯವನ್ನು ರೂಢಿಸಿಕೊಂಡಿದ್ದಾರೆ. ಮಲ್ಲಿಗೆ ಹೂವಿನಿಂದ ಪ್ರಸಿದ್ಧವಾಗುವ ಕರಗಕ್ಕೆ ಅನೇಕ ರೀತಿಯ ಆಕರ್ಷಕ ಅಲಂಕಾರಗಳನ್ನು ಮಾಡುವ ನಾಗರಾಜ್ ಶಾಸ್ತ್ರೀಯ ಸಂಗೀತವನ್ನು ತಿಳಿದುಕೊಂಡಿದ್ದಾರೆ. ತಮಟೆ, ನಾದಸ್ವರ ಹಾಗೂ ಬ್ಯಾಂಡ್ ಸಂಗೀತಕ್ಕೆ ಆಕರ್ಷಕವಾಗಿ ಕರಗನೃತ್ಯ ಮಾಡುವ ನಾಗರಾಜ್ ಅವರು ಜೀವನೋಪಾಯಕ್ಕಾಗಿ ನಂಬಿರುವುದು ಬೇಸಾಯವನ್ನು.

Categories
ಜಾನಪದ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಮಾರುತಿ ಹಣಮಂತ ಭಜಂತ್ರಿ

ಮಾರುತಿ ಹಣಮಂತ ಭಜಂತ್ರಿ ಅವರು ಜಾನಪದ ವಾದ್ಯಗಳನ್ನು ಅತ್ಯಂತ ಸುಲಲಿತವಾಗಿ ನುಡಿಸುವುದರಲ್ಲಿ ಸಿದ್ಧಹಸ್ತರು. ಭಜಂತ್ರಿ ಅವರು ಸನಾದಿವಾದನ ಹಾಗೂ ಭಜಂತ್ರಿವಾದನ ಕಲೆಯ ಪರಿಣತರು. ಇವರ ವಾದನದ ವೈಶಿಷ್ಟ್ಯಕ್ಕೆ ತಲೆದೂಗುವಷ್ಟೂ ಚಿರಪರಿಚಿತ. ಮಾರುತಿ ಹಣಮಂತ ಭಜಂತ್ರಿ ಅವರಿಗೆ ಹಲವಾರು ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ದೊರಕಿದ್ದು ಜನಮೆಚ್ಚುಗೆ ಗಳಿಸಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಎಸ್. ಯೋಗಅಂಗಂ

ಎಳೆಯ ವಯಸ್ಸಿನಿಂದಲೇ ಕೀಲುಕುದುರೆ ಕಲೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿರುವ ಎಸ್. ಯೋಗಲಿಂಗಂ ಕೀಲು ಕುದುರೆ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ತಂದೆಯವರಿಂದ ಬಳುವಳಿಯಾಗಿ ಪಡೆದ ಕೀಲುಕುದುರೆ ಕಲೆಯನ್ನು ನಿರಂತರವಾಗಿ ಪ್ರದರ್ಶಿಸಿದ ಕಾರಣದಿಂದಾಗಿ ಎರಡೂ ಕಾಲುಗಳಿಗೆ ಚಿಕಿತ್ಸೆ ಮಾಡಿಸಿಕೊಂಡಿರುವ ಯೋಗಲಿಂಗಂ ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿದ್ದಾರೆ.

ಹತ್ತಾರು ಚಲನಚಿತ್ರಗಳಲ್ಲಿಯೂ ಕೀಲು ಕುದುರೆ ಕಲೆಯನ್ನು ಪ್ರದರ್ಶನ ಮಾಡಿರುವ ಎಸ್. ಯೋಗಲಿಂಗಂ ವಿದೇಶಿ ಕಲೆಗಾರರಿಂದಲೂ ಪ್ರಶಂಸೆ ಪಡೆದಿದ್ದು ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಸಂದಿವೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಕಜಾ ರಾಮಕೃಷ್ಣಯ್ಯ

ಪಂಕಜಾ ರಾಮಕೃಷ್ಣಯ್ಯನವರು ಪದವಿಯ ನಂತರ ನೃತ್ಯದತ್ತ ಒಲವು ಬೆಳಸಿಕೊಂಡು ನಾಟ್ಯಾಚಾರ್ಯ ಎಂ. ವಿಷ್ಣುದಾಸ್ ಗುರುಗಳನ್ನಾಗಿ ಸ್ವೀಕರಿಸಿ ನಾಟ್ಯವನ್ನು ಅಭ್ಯಾಸ ಮಾಡಿದರು. ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯಲ್ಲೂ ತೇರ್ಗಡೆಯಾಗಿ ನಂತರ ಕಥಕ್ ಪ್ರಾಕಾರವನ್ನೂ ತಮ್ಮದಾಗಿಸಿಕೊಂಡರು.

ತಾವು ಕಲಿತ ವಿದ್ಯೆಯನ್ನು ಆಸಕ್ತರಿಗೆ ಕಲಿಸುವ ಉದ್ದೇಶದಿಂದ ಪಂಕಜಾ ರಾಮಕೃಷ್ಣಯ್ಯ ಅವರು ಮೈಸೂರಿನಲ್ಲಿ ಸರ್ವೇಶ್ವರ ನೃತ್ಯ ಮಂದಿರದ ಮೂಲಕ ಆಸಕ್ತ ಯುವ ಯುವತಿಯರಿಗೆ, ವಿಶೇಷವಾಗಿ ಹಿಂದುಳಿದ ವರ್ಗಗಳ ಮತ್ತು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೃತ್ಯ, ಸಂಗೀತ, ವಾದ್ಯ ಸಂಗೀತ, ಚಿತ್ರಕಲೆ ತರಬೇತಿ ನೀಡುವ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಇಂದೂ ವಿಶ್ವನಾಥ್

ಚಿಕ್ಕಂದಿನಲ್ಲಿಯೇ ಸಾಂಪ್ರದಾಯಿಕ ಸಂಗೀತ ಶಿಕ್ಷಣ ಪಡೆದ ಇಂದೂ ವಿಶ್ವನಾಥ್ ಅವರು ನಂತರದ ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದಲ್ಲಿ ತರಬೇತಿ ಪಡೆದರು. ಹಿನ್ನೆಲೆ ಗಾಯನದಲ್ಲಿ ಡಿಪ್ಲೋಮಾ ಗಳಿಸಿರುವ ಇಂದೂ ವಿಶ್ವನಾಥ್‌ ಅವರ ಆಕಾಶವಾಣಿ, ದೂರದರ್ಶನದ ‘ಎ’ ಶ್ರೇಣಿ ಕಲಾವಿದೆ.

೧೦೦ಕ್ಕೂ ಹೆಚ್ಚು ಧ್ವನಿಸುರಳಿಗಳಿಗೆ ಕಂಠದಾನ ಮಾಡಿರುವ ಇಂದೂ ವಿಶ್ವನಾಥ್ ಅವರು ಸ್ವತಂತ್ರವಾಗಿ ೨೫ಕ್ಕೂ ಹೆಚ್ಚು ಧ್ವನಿಸುರಳಿಗಳನ್ನು ತಾವೇ ತಯಾರಿಸಿದ್ದಾರೆ. ಚಲನಚಿತ್ರ ಹಿನ್ನಲೆ ಗಾಯಕಿಯಾಗಿ ಹೆಸರು ಮಾಡಿರುವ ಅವರು ದಕ್ಷಿಣ ಭಾರತದ ಹಲವಾರು ಗಾಯಕರೊಂದಿಗೆ ಹಾಡಿದ್ದಾರೆ. ಚಲನಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿರುವ ಇವರು

ಅನೇಕ ನೃತ್ಯ ರೂಪಕಗಳಿಗೆ ಟೆಲಿ ಧಾರವಾಹಿಗಳಿಗೆ ಸಂಗೀತ ನೀಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳಿಗೆ ಇಂದೂ ವಿಶ್ವನಾಥ್ ಅವರು ಪಾತ್ರರಾಗಿದ್ದಾರೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಎಸ್. ಶಂಕರ್

ವಿದ್ವಾನ್ ಎಸ್. ಶಂಕರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸಿಸಿ ಎಲ್ಲಾ ವಾಗ್ಗೇಯಕಾರರ ಕೃತಿಗಳನ್ನು ಜನಮನಕ್ಕೆ ತಲುಪಿಸಿದವರು. ಆಕಾಶವಾಣಿ ಎ ಟಾಪ್ ಕಲಾವಿದರಾಗಿ ವಿದ್ವಾನ್ ಎಸ್. ಶಂಕರ್ ಅವರು ದೇಶ ವಿದೇಶಗಳ ಹಲವಾರು ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಗೌರವ ಪುರಸ್ಕಾರವೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಗೌರವ ಪುರಸ್ಕಾರಗಳೂ ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಡಿ. ಕುಮಾರವಾಸ್

ಸುಪ್ರಸಿದ್ಧ ಹಿಂದೂಸ್ತಾನಿ ಗ್ವಾಲಿಯರ್ ಮತ್ತು ಕಿರಾಣ ಘರಾನದಲ್ಲಿ ಮೂರು ದಶಕಗಳಿಂದ ಗಾಯಕರಾಗಿರುವ ಡಿ. ಕುಮಾರದಾಸ್ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ‘ಎ’ ಶ್ರೇಣಿ ಗಾಯಕರಾಗಿ ಕಾಲು ಶತಮಾನ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರಮಟ್ಟದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದುಕೊಂಡ ಕುಮಾರವಾಸ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನದ ಜೊತೆಗೆ ವಚನ ಸಾಹಿತ್ಯ ಮತ್ತು ದಾಸರ ಕೀರ್ತನ ಗಾಯನದಲ್ಲೂ ಖ್ಯಾತಿ ಪಡೆದಿದ್ದಾರೆ.

ಕನ್ನಡ ಸಾಹಿತ್ಯವನ್ನು ಸಂಗೀತದಲ್ಲಿ ಅಳವಡಿಸಿಕೊಂಡು ನಾಡು-ನುಡಿ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಿರುವ ಕುಮಾರದಾಸ್ ಅವರು ವಚನ ಹಾಗೂ ಭಜನೆ ಗಾಯಕರಾಗಿ ದೇಶದ ತುಂಬಾ ಹೆಸರು ಪಡೆದವರು. ಇವರಿಗೆ ರಮಣಶ್ರೀ ಶರಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

Categories
ನೃತ್ಯ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿ. ಮಣಿ

ಪರಂಪರೆಯಿಂದ ಬಂದ ಕಲೆಯನ್ನು ಮುಂದುವರಿಸುತ್ತಿರುವ ವಿ. ಮಣಿ ಅವರು ಚಿಕ್ಕಂದಿನಿಂದಲೇ ಸಂಗೀತದೆಡೆಗೆ ನಡೆದರು. ತಂದೆಯಿಂದ ಡೋಲು ವಾದನ ಕಲಿತ ವಿ. ಮಣಿ ನಂತರ ಅನೇಕ ಹಿರಿಯ ಡೋಲು ವಿದ್ವಾಂಸರಲ್ಲಿ ತರಬೇತಿ ಪಡೆದರು. ದಕ್ಷಿಣ ಭಾರತದ ಹಲವಾರು ಹಿರಿಯ ವಿದ್ವಾಂಸರೊಂದಿಗೆ ವಿ. ಮಣಿ ಅವರು ದೇಶ-ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕುನ್ನ ಕುಡಿ ವೈದ್ಯನಾಥನ್, ಕದ್ರಿ ಗೋಪಾಲನಾಥ್ ಮೊದಲಾದ ವಿದ್ವಾಂಸರ ಜೊತೆ ಡೋಲುವಾದಕರಾಗಿ ನೂರಾರು ಕಚೇರಿಗಳಲ್ಲಿ ಸಂಗಾತಿಯಾಗಿದ್ದ ವಿ. ಮಣಿ ಅವರು ಅನೇಕ ಧ್ವನಿಸುರಳಿಗಳನ್ನು ಹಾಗೂ ಧ್ವನಿ ಸಾಂದ್ರಿಕೆಗಳನ್ನು ಹೊರತಂದಿದ್ದಾರೆ. ಡೋಲು ವಾದನದಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿರುವ ಮಣಿ ಅವರು ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ನಾಲ್ಕೂವರೆ ದಶಕಗಳಿಂದ ನಿರಂತರವಾಗಿ ಡೋಲು ಕಚೇರಿಗಳನ್ನು ಮಾಡುತ್ತಿರುವ ವಿ. ಮಣಿ ಅವರು ವೀಣೆ, ಮ್ಯಾಂಡೊಲೀನ್ ವಾದನ ಹಾಗೂ ಗಾಯನದಲ್ಲಿಯೂ ಪರಿಣತಿ ಹೊಂದಿದ್ದಾರೆ. ಇವರಿಗೆ ಕಲೆ ಮಾಮಣಿ ಗೌರವವೂ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಶಿವಕುಮಾಲ ಅ.

ಶಿವಕುಮಾರಿ ಅವರು ಕಳೆದ ಮೂರು ದಶಕಗಳಿಂದ ನಿರಂತರವಾಗಿ ವೃತ್ತಿ ರಂಗಭೂಮಿಯಲ್ಲಿ ವಿವಿಧ ಬಗೆಯ ಪಾತ್ರ ನಿರ್ವಹಿಸುತ್ತಾ ಬಂದಿರುವ ಹಿರಿಯ ಕಲಾವಿದೆ. ಪೌರಾಣಿಕ, ಸಾಮಾಜಿಕ ಹಾಗೂ ಸಾಂಸಾರಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ಶಿವಕುಮಾರಿ ಅವರು ಆಕಾಶವಾಣಿಯ ಬಿ ಗ್ರೇಡ್ ನಾಟಕ ಕಲಾವಿದೆ.

ವೃತ್ತಿ ರಂಗಭೂಮಿ ಅಲ್ಲದೆ, ಹವ್ಯಾಸಿ ನಾಟಕ ತಂಡಗಳ ಜೊತೆಯಲ್ಲೂ ಕೆಲಸ ಮಾಡಿರುವ ಶಿವಕುಮಾರಿ ಅವರು ಅನೇಕ ಸರ್ಕಾರಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ದೂರದರ್ಶನ ಹಾಗೂ ಆಕಾಶವಾಣಿಗಳಲ್ಲಿ ರಂಗಗೀತೆಗಳ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಬಹುಮಾನಗಳು ದೊರೆತಿವೆ.

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಜೆ. ಲೋಕೇಶ್

ಹವ್ಯಾಸಿ ನಾಟಕಗಳಲ್ಲಿ ನಟರಾಗಿ ಹೆಸರಾಗಿರುವ ಜೆ. ಲೋಕೇಶ್ ಅವರು ನಂತರ ರಂಗವಿನ್ಯಾಸ, ಬೆಳಕಿನ ವಿನ್ಯಾಸಗಳಲ್ಲಿ ಖ್ಯಾತರಾದವರು. ಕರ್ನಾಟಕ ಹವ್ಯಾಸಿ ಲೋಕದಲ್ಲಿ ರಂಗಸಂಪದ ತಂಡ ಬಹುಪ್ರಸಿದ್ಧವಾದುದು. ಇದರ ಸ್ಥಾಪಕರಾದ ಜೆ. ಲೋಕೇಶ್ ಅವರು ನಾಟಕ ಚಳುವಳಿಯನ್ನು ಗ್ರಾಮೀಣ ಭಾಗಗಳಿಗೆ ಹಬ್ಬಿಸುವಲ್ಲಿ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದರು.

ರಂಗಭೂಮಿಗಾಗಿ ಹಲವಾರು ನಾಟಕಗಳನ್ನು ಪ್ರಕಟಿಸಿದ ಜೆ. ಲೋಕೇಶ್ ರಾಜ್ಯದಾದ್ಯಂತ ಹಲವು ನಾಟಕೋತ್ಸವಗಳನ್ನು ಏರ್ಪಡಿಸುವ ಮೂಲಕ ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದರು. ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಜೆ. ಲೋಕೇಶ್ ಅವರು ರಂಗಭೂಮಿಯನ್ನು ಕುರಿತಂತಹ ರಂಗವಿಹಂಗಮ ಸಾಕ್ಷ್ಯಚಿತ್ರ ಧಾರವಾಹಿಯನ್ನು ನಿರ್ಮಿಸಿದ್ದಾರೆ.

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ತೊಟ್ಟವಾಡಿ ನಂಜುಂಡಸ್ವಾಮಿ

ಎಳೆಯ ವಯಸ್ಸಿನಲ್ಲಿಯೇ ರಂಗಭೂಮಿಯ ಕಡೆ ಒಲವನ್ನಿಟ್ಟುಕೊಂಡ ತೊಟ್ಟವಾಡಿ ನಂಜುಂಡಸ್ವಾಮಿ ಹಲವಾರು ನಾಟಕಗಳನ್ನು ಹಾಗೂ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಅನೇಕ ಕೃತಿಗಳನ್ನು ರಂಗ ರೂಪಾಂತರ ಮಾಡಿರುವ ಇವರು ರಂಗಭೂಮಿಯಲ್ಲಿ ಅಭಿನಯಿಸಿದ್ದಾರೆ. ಸಮಾನ ಮನಸ್ಕರೊಂದಿಗೆ ನಾಟಕ ಸಂಸ್ಥೆಯನ್ನು ಸ್ಥಾಪಿಸಿ ಇವರು ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ಅನೇಕ ರಂಗ ಕೃತಿಗಳನ್ನು, ಅಭಿನಂದನಾ ಗ್ರಂಥಗಳನ್ನು ಹಾಗೂ ವಿಮರ್ಶಾ ಸಂಗ್ರಹಗಳನ್ನು ಸಂಪಾದನೆ ಮಾಡಿರುವ ನಂಜುಂಡಸ್ವಾಮಿ ಅವರು ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೊದಲಾದ ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸುಮಾರು ಎರಡೂವರೆ ದಶಕಗಳಿಂದ ನಿರಂತರವಾಗಿ ನಾಟಕೋತ್ಸವಗಳನ್ನು ವ್ಯವಸ್ಥೆ ಮಾಡುತ್ತಿರುವ ಇವರು ಆಕಾಶವಾಣಿ, ದೂರದರ್ಶನಗಳಲಿಯೂ ನಾಟಕಗಳನ್ನು ನಡೆಸಿಕೊಟ್ಟಿದ್ದಾರೆ. ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ನಡೆಸುತ್ತಿರುವ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ ಪ್ರಶಸ್ತಿಗಳೂ ಸೇರಿ ಅನೇಕ ಗೌರವಗಳು ಸಂದಿವೆ.

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಸಾಬ್ ಅಣ್ಣಿಗೇರಿ

ಅಬ್ದುಲ್ ಸಾಬ್ ಅಣ್ಣಿಗೇರಿ ಅವರು ಕರ್ನಾಟಕ ವೃತ್ತಿ ರಂಗಭೂಮಿಯ ಹೆಸರಾಂತ ಕಲಾವಿದರಲ್ಲಿ ಒಬ್ಬರು. ತಮ್ಮ ಹದಿನೈದನೆಯ ವಯಸ್ಸಿನಿಂದಲೇ ಬಣ್ಣದ ಬದುಕಿಗೆ ಕಾಲಿಟ್ಟ ಅಬ್ದುಲ್ ಸಾಬ್ ಅವರು ನಿರಂತರವಾಗಿ ಆರು ದಶಕಗಳಿಂದ ವೈವಿಧ್ಯಮಯವಾದ ಪಾತ್ರಗಳನ್ನು ನಿರ್ವಹಿಸುತ್ತಾ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ಕರ್ನಾಟಕದ ಹಲವು ವೃತ್ತಿ ನಾಟಕ ಕಂಪೆನಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿರುವ ಅಬ್ದುಲ್ ಸಾಬ್ ಇಳಿ ವಯಸ್ಸಿನಲ್ಲಿಯೂ ಕೂಡಾ ಬಣ್ಣ ಹಚ್ಚುವುದನ್ನು ಬಿಟ್ಟಿಲ್ಲ. ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಅಬ್ದುಲ್ ಸಾಬ್ ಗಂಡು ಪಾತ್ರಗಳಲ್ಲದೆ ಮಹಿಳಾ ಪಾತ್ರಗಳಲ್ಲೂ ಕಾಣಿಸಿಕೊಂಡು ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಕಂಠಿ ಹನುಮಂತರಾಯರು

ಕಂಠಿ ಹನುಮಂತರಾಯರು ಕಳೆದ ಆರು ದಶಕಗಳಿಂದ ರಂಗಭೂಮಿಯ ಒಡನಾಟವಿಟ್ಟುಕೊಂಡವರು. ಇವರು ಹದಿನೆಂಟು ಜನಪ್ರಿಯ ನಾಟಕಗಳನ್ನು ರಚಿಸಿದ್ದು ರಂಗಭೂಮಿಯಲ್ಲಿ ಅವು ಹಲವಾರು ಪ್ರದರ್ಶನಗಳನ್ನು ಕಂಡಿವೆ.

ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಗಳು ಸಂದಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ವಿಷ್ಣು ಜಿ. ಭಂಡಾರಿ

ವಿಷ್ಣು ಜಿ. ಭಂಡಾರಿ ಅವರು ಚುಟುಕ ಬ್ರಹ್ಮ ದಿನಕರ ದೇಸಾಯಿರವರ ಗರಡಿಯಲ್ಲಿ ಪಳಗಿ ದೇಸಾಯಿಯವರಂತೆಯೇ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡಪರ ಹೋರಾಟದಲ್ಲಿ ಪಾಲುಗೊಳ್ಳುತ್ತಾ ಬಂದಿದ್ದಾರೆ. ಕನ್ನಡ ಗ್ರಂಥಗಳ ಮಾರಾಟವನ್ನು ತಮ್ಮ ಊರಿನಿಂದಲೇ ಆರಂಭಿಸಿದರು ವಿಷ್ಣು ಜಿ. ಭಂಡಾರಿ ಚುಟುಕುಗಳನ್ನು ವಿಡಂಬಾರಿ ಎಂಬ ಕಾವ್ಯ ನಾಮದಿಂದ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಅಂಚೆ ಪೇದೆ ಆಗಿಯೂ ಕಾರ್ಯನಿರ್ವಹಿಸಿದ ವಿಷ್ಣು ಜಿ. ಭಂಡಾರಿ ಅವರು ‘ಅಂಚೆ ಪೇದೆಯ ಆತ್ಮಕಥೆ’ ಎಂ ಕೃತಿಯನ್ನು ರಚಿಸಿದ್ದು ಇವರ ಆರು ಚುಟುಕ ಸಂಕಲನಗಳು ನಾಡಿನ ಓದುಗರ ಗಮನ ಸೆಳೆದಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಜಿ.ಎಚ್. ಹನ್ನೆರಡು ಮಠ

ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಜಿ.ಎಚ್. ಹನ್ನೆರಡು ಮಠ ಅವರು ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಬರೆಯುವ ಮೂಲಕ ಓದುಗರ ಗಮನ ಸೆಳೆದಿದ್ದಾರೆ. ಕಥೆ, ಕಾವ್ಯ, ಕಾದಂಬರಿ, ಪ್ರವಾಸ, ನಾಟಕ, ಪ್ರಬಂಧ, ಚಿಂತನೆ ಹೀಗೆ ಹಲವಾರು ವಿಚಾರ ವೈವಿಧ್ಯಗಳನ್ನು ಕುರಿತು ೯೪ ಪುಸ್ತಕಗಳನ್ನು ರಚಿಸಿದ್ದಾರೆ. ‘ಬಸವ ಕಾವ್ಯದರ್ಶನಂ’ ಎಂಬ ಮಹಾಕಾವ್ಯವನ್ನು ರಚಿಸಿರುವ ಜಿ.ಎಚ್. ಹನ್ನೆರಡು ಮಠ ಅವರು ನಾಟಕಕಾರರಾಗಿಯೂ ಹೆಸರು ಮಾಡಿದ್ದಾರೆ. ಮಕ್ಕಳ ನಾಟಕಗಳೂ ಸೇರಿಂದಂತೆ ೨೫ ನಾಟಕಗಳನ್ನು ಬರೆದಿರುವ ಅವರು, ಬಸವಣ್ಣನವರ ಆಶಯಗಳನ್ನು ಪ್ರಚುರಪಡಿಸಿದ ಶರಣರ ಬದುಕು ಹಾಗೂ ಸಾಧನೆಯನ್ನು ಕುರಿತು ಅರ್ಥಪೂರ್ಣವಾದಂತಹ ಎಂಟು ಕಾದಂಬರಿಗಳನ್ನು ಪ್ರತ್ಯೇಕವಾಗಿ ಹಾಗೂ ಸಂಕಲಿತವಾಗಿ ‘ಮಹಾಸಂಗಮ’ ಎಂಬ ಬೃಹತ್ಸಂಪುಟ ರೂಪದಲ್ಲಿ ಹೊರತಂದಿದ್ದಾರೆ. ಜಿ.ಎಚ್. ಹನ್ನೆರಡು ಮಠ ಅವರು ಚಲನ ಚಿತ್ರಗಳಿಗಾಗಿಯೂ ಹಾಗೂ ಟೆಲಿವಿಷನ್‌ಗಾಗಿಯೂ ಸಾಹಿತ್ಯ ಗೀತೆಗಳನ್ನು ರಚಿಸಿದ್ದು, ರಂಗದ ಮೇಲೆ ಹಾಗೂ ಬಾನುಲಿಯಲ್ಲಿಯೂ ಅವರ ರಂಗಕೃತಿಗಳು ಪ್ರಯೋಗವಾಗಿವೆ. ಇವರಿಗೆ ನಾಡಿನ ಹಲವಾರು ಸಂಘ ಸಂಸ್ಥೆಗಳು ಗೌರವ ಸನ್ಮಾನಗಳನ್ನು ನೀಡಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶೂದ್ರ ಶ್ರೀನಿವಾಸ್

ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶೂದ್ರ ಶ್ರೀನಿವಾಸ್‌ ವೃತ್ತಿಯಿಂದ ಶಿಕ್ಷಕರು. ಅನೇಕ ಸಾಹಿತ್ಯ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತ ಬಂದಿರುವ ಶೂದ್ರ ಶ್ರೀನಿವಾಸ್ ‘ಶೂದ್ರ’ ಸಾಹಿತ್ಯ ಪತ್ರಿಕೆಯ ಸಂಪಾದಕರು. ಸಮಕಾಲೀನ ಸಾಮಾಜಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯವಾಗಿರುವ ಶ್ರೀನಿವಾಸ್ ಈ ಅವಧಿಯಲ್ಲಿ ನಡೆದ ಬಹುತೇಕ ಎಲ್ಲಾ ಜನಪರ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

‘ಕನಸಿಗೊಂದು ಕಣ್ಣು’ ಎಂಬ ಜನಪ್ರಿಯ ಅಂಕಣ ಆರಂಭಿಸಿದ ಶ್ರೀನಿವಾಸ್‌ ಅದೇ ಹೆಸರಿನ ಲೇಖನ ಸಂಕಲನವನ್ನು ಪ್ರಕಟಿಸಿದರು. ಕಾವ್ಯ, ಕಥೆ ಹಾಗೂ ಪ್ರಬಂಧಗಳನ್ನು ಬರೆಯುವಲ್ಲಿ ನಿಪುಣರಾದ ಶೂದ್ರ ಶ್ರೀನಿವಾಸ್ ಪರಿಸರ ಕುರಿತಂತಹ ‘ನೆಲದ ಮಾತು’ ಎಂಬ ನಿಯತಕಾಲಿಕವನ್ನು ಸಂಪಾದಿಸುತ್ತಿದ್ದರು.

ಪ್ರಸ್ತುತ ಸಮಾಜದ ಆಗು-ಹೋಗುಗಳ ಬಗ್ಗೆ ನಿರಂತರವಾಗಿ ಪ್ರತಿಕ್ರಿಯಿಸುತ್ತಾ ಬೇರೆಯವರನ್ನು ಪ್ರತಿಕ್ರಿಯಿಸುವಂತೆ ಪ್ರೋತ್ಸಾಹಿಸುವ ಶೂದ್ರ ಶ್ರೀನಿವಾಸ್ ತಮ್ಮ ಪತ್ರಿಕೆ ಮೂಲಕ ಹಾಗೂ ವಿವಿಧ ವೇದಿಕೆಗಳ ಮೂಲಕ ಹೊಸ ಪೀಳಿಗೆಯ ಹಲವಾರು ಮಂದಿಯನ್ನು ತಯಾರು ಮಾಡಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಹೆಚ್. ಗಿರಿಜಮ್ಮ

ಡಾ. ಹೆಚ್. ಗಿರಿಜಮ್ಮನವರು ವೃತ್ತಿಯಿಂದ ವೈದ್ಯರಾಗಿದ್ದು ಪ್ರವೃತ್ತಿಯಿಂದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ನಿರತರಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಕಥೆಗಾರರಾಗಿಯೂ ಹೆಸರು ಮಾಡಿರುವ ಗಿರಿಜಮ್ಮನವರು ಸ್ವಾತಂತ್ರ್ಯನಂತರದ ಸಂದರ್ಭದಲ್ಲಿನ ಕೌಟುಂಬಿಕ ವಿಘಟನೆ, ದಾಂಪತ್ಯದ ವಿಷಮತೆ, ಸ್ತ್ರೀಪರ ಕಾಳಜಿ ಮೊದಲಾದ ಜನಮುಖಿ ನಿಲುವುಗಳ ಹಿನ್ನೆಲೆಯಲ್ಲಿ ಮನೋಜ್ಞವಾದ ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.

ಮಕ್ಕಳ ಮನೋವಿಜ್ಞಾನ ಸಂಬಂಧಿ ಸಂಶೋಧನೆ ನಡೆಸಿ ಡಿ.ಲಿಟ್ ಪದವಿ ಪಡೆದಿರುವ ಡಾ.ಗಿರಿಜಮ್ಮನವರು ನಿರ್ದೇಶಿಸಿರುವ ಟೆಲಿಫಿಲ್ಡ್ ಹಾಗೂ ಧಾರಾವಾಹಿಗಳು ಹಲವಾರು. ಪ್ರತಿಷ್ಠಿತ ಡಾ|| ಬಿ.ಸಿ. ರಾಯ್, ಅತ್ತಿಮಬ್ಬೆ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವ ಪುರಸ್ಕಾರಗಳು ಇವರಿಗೆ ಲಭಿಸಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಮೂಡ್ನಾಕೂಡು ಚಿನ್ನಸ್ವಾಮಿ

ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ನಡೆದ ದಲಿತ ಸಾಹಿತ್ಯ ಚಳುವಳಿಯ ಮೊದಲ ತಲೆಮಾರಿನ ಬರಹಗಾರರು, ದಲಿತ-ಬಂಡಾಯ ಕಾವ್ಯ ಮಾರ್ಗದಲ್ಲಿ ನಡೆದು ಬಂದ ಇವರು ಕವಿತೆ, ನಾಟಕ, ಕಥೆ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಹಾದು ಬಂದಿದ್ದಾರೆ. ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸಿದ್ದಾರೆ.

ಮೂಡ್ನಾಕೂಡು ಚಿನ್ನಸ್ವಾಮಿ ಅವರು ತಮ್ಮ ಕೃತಿ ಮತ್ತು ಚಿಂತನೆಗಳ ಮೂಲಕ ಸಮಾಜದ ಶೋಷಿತ ಮತ್ತು ದಮನಿತ ವರ್ಗಗಳ ಅಭಿಮಾನವನ್ನು ಜಾಗೃತಗೊಳಿಸಿದವರು. ಇವರ ಅನೇಕ ಕವಿತೆಗಳು ಬೇರೆ ಬೇರೆ ಭಾಷೆಗಳಿಗೂ ಅನುವಾದಗೊಂಡಿದ್ದು, ಅನೇಕ ಕೃತಿಗಳನ್ನು ಇವರ ಸಂಪಾದನೆ ಮಾಡಿದ್ದಾರೆ. ಕನ್ನಡದಿಂದ ಸ್ಪ್ಯಾನಿಷ್ ಭಾಷೆಗೆ ಗ್ರಂಥ ರೂಪದಲ್ಲಿ ಪ್ರಕಟಗೊಂಡ ಮೊದಲ ಕೃತಿ ಕೂಡ ಇವರದೇ. ಇವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಅರಸಿ ಬಂದಿವೆ.