Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಸೈಯ್ಯದ್ (ಸತ್ಯಜಿತ್)

ಹುಬ್ಬಳ್ಳಿಯಲ್ಲಿ ಬಸ್ ಚಾಲಕರಾಗಿದ್ದುಕೊಂಡೇ ರಂಗಭೂಮಿಯಲ್ಲಿ ಹೆಸರು ಮಾಡಿ ಅನೇಕ ಪ್ರಸಿದ್ಧ ನಾಟಕಗಳಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯರಾದ ಸಯ್ಯದ್ (ಸತ್ಯಜಿತ್) ಕನ್ನಡ ಚಲನಚಿತ್ರ ಜಗತ್ತಿಗೆ ಪ್ರವೇಶ ಮಾಡಿದ್ದು ಖಳನಾಯಕನ ಪಾತ್ರಧಾರಿಯಾಗಿ,
ಕನ್ನಡದ ಅನೇಕ ಚಲನಚಿತ್ರಗಳಲ್ಲಿ ಖಳನಾಯಕನಾಗಿ ಹಾಗೂ ಪೋಷಕ ಪಾತ್ರಧಾರಿಯಾಗಿ ಸತ್ಯಜಿತ್ ಅವರು ನಟಿಸಿದ್ದು ಜನಮೆಚ್ಚುಗೆ ಪಡೆದಿದ್ದಾರೆ. ಸತ್ಯಜಿತ್ ಅವರು ಈವರೆಗೆ ಅಭಿನಯಿಸಿರುವ ಚಿತ್ರಗಳ ಸಂಖ್ಯೆ ೬೫೦ಕ್ಕೂ ಹೆಚ್ಚು.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಸಾ.ರಾ. ಗೋವಿಂದು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿರುವ ಸಾ.ರಾ. ಗೋವಿಂದು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಚಲನಚಿತ್ರರಂಗದಲ್ಲಿ ನಿರ್ಮಾಣ ನಿರ್ವಾಹಕರಾಗಿ ಕಾಲಿಟ್ಟು ನಂತರ ಕನ್ನಡ ಚಿತ್ರ ನಿರ್ಮಾಪಕರಾದವರು.
ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇವರು ಅಖಿಲ ಕರ್ನಾಟಕ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಳ್ಳಿ ಕಾಲುಂಗುರ ಸೇರಿದಂತೆ ಹಲವು ಚಲನಚಿತ್ರಗಳನ್ನು ಸಾ.ರಾ. ಗೋವಿಂದು ಅವರು ನಿರ್ಮಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಚಲನಚಿತ್ರ ಸಂಬಂಧದ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಜೆ.ಕೆ. ಶ್ರೀನಿವಾಸ ಮೂರ್ತಿ

ರಂಗಭೂಮಿಯಲ್ಲಿ ಹಲವಾರು ಪ್ರಭಾವಶಾಲಿ ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಖ್ಯಾತರಾಗಿದ್ದ ಜೆ.ಕೆ. ಶ್ರೀನಿವಾಸಮೂರ್ತಿ ಚಲನಚಿತ್ರ ರಂಗವನ್ನು ಪ್ರವೇಶ ಮಾಡಿದ್ದು ನಾಯಕನಟರಾಗಿ, ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರ ಗರಡಿಯಲ್ಲಿ ಪಳಗಿದ ಶ್ರೀನಿವಾಸಮೂರ್ತಿ ಪೋಷಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದರು. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಭೋಜರಾಜನ ಪಾತ್ರ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು.
ಕನ್ನಡದ ಬೇಡಿಕೆಯ ಪೋಷಕ ನಟರಾಗಿರುವ ಶ್ರೀನಿವಾಸಮೂರ್ತಿ ಅನೇಕ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರಲ್ಲದೆ ಕಿರುತೆರೆಯಲ್ಲಿಯೂ ಜನಪ್ರಿಯ ನಟರಾಗಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಲಭಿಸಿದೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಲಕ್ಷ್ಮಿ

ದಕ್ಷಿಣ ಭಾರತದ ಎಲ್ಲ ಭಾಷೆಯ ಚಲನಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳನ್ನು ವಹಿಸಿರುವ ಲಕ್ಷ್ಮಿ ಕನ್ನಡದ ಮೊದಲ ವಾಕ್ಷಿತ್ರ ಸತಿ ಸುಲೋಚನ ನಿರ್ದೇಶಕ ವೈ.ವಿ.ರಾವ್ ಅವರ ಸುಪುತ್ರಿ, ಕನ್ನಡದ ಬಹುತೇಕ ನಾಯಕರೊಂದಿಗೆ ನಟಿಸಿರುವ ಲಕ್ಷ್ಮಿ ಅವರು ಕಿರುತೆರೆಯಲ್ಲಿ ನೀನಾ ನಾನಾ, ಡ್ರಾಮಾ ಜ್ಯೂನಿಯರ್ ಸರಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.
ಸಮಕಾಲೀನ ಜ್ಯೂಲಿ ಚಿತ್ರದಿಂದ ಅಖಿಲಭಾರತ ಮಟ್ಟದಲ್ಲಿ ಮನೆಮಾತಾದ ಲಕ್ಷ್ಮಿ ಸಮಾಜದ ಸಮಸ್ಯೆಗಳನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಹರಿಸುವ ರಿಯಾಲಿಟಿ ಷೋಗಳ ಮೂಲಕ ನಿರ್ವಹಿಸಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಲಭಿಸಿದೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ರೇವತಿ ಕಲ್ಯಾಣ ಕುಮಾರ್

ರಂಗಭೂಮಿಯಲ್ಲಿ ಜನಪ್ರಿಯ ನಟಿ ಎನಿಸಿಕೊಂಡ ರೇವತಿ ಅವರು ನಂತರ ಚಲನಚಿತ್ರ ರಂಗದಲ್ಲಿ ಕಾಲಿಟ್ಟು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ಪತಿ ನಾಯಕ ನಟ ಕಲ್ಯಾಣಕುಮಾರ್ ಅವರೊಂದಿಗೆ ನಾಟಕ ತಂಡವೊಂದನ್ನು ಕಟ್ಟಿಕೊಂಡು ರಾಜ್ಯಾದ್ಯಂತ ತಿರುಗಾಟ ನಡೆಸಿದವರು ರೇವತಿ ಅವರು.
ರೇವತಿ ಕಲ್ಯಾಣಕುಮಾರ್ ಸಾಹಿತ್ಯ ಕೃತಿಗಳನ್ನು ಆಧರಿಸಿದ ಕೆಲವು ಚಿತ್ರಗಳನ್ನು ತಮ್ಮದೇ ಲಾಂಛನದಡಿಯಲ್ಲಿ ನಿರ್ಮಿಸಿದರು. ರೇವತಿ ಕಲ್ಯಾಣಕುಮಾರ್ ಅವರಿಗೆ ಫಿಲಂ ಚೇಂಬರ್ ಅಮೃತ ಮಹೋತ್ಸವ ಗೌರವವೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಎಂ.ಎಸ್. ರಾಜಶೇಖರ್

ಎಂ.ಎಸ್. ರಾಜಶೇಖರ್ ಅವರು ಕನ್ನಡದ ಹಿರಿಯ ಮೇಕಪ್ ಮ್ಯಾನ್ ಹಾಗೂ ಕಲಾವಿದ ಸುಬ್ಬಣ್ಣನವರ ಪುತ್ರ. ಚಿಕ್ಕಂದಿನಿಂದಲೇ ಚಲನಚಿತ್ರ ತಯಾರಿಕೆಯ ವಿವಿಧ ವಿಭಾಗಗಳಲ್ಲಿ ಪರಿಣತಿ ಪಡೆದ ಎಂ.ಎಸ್‌.ರಾಜಶೇಖರ್ ಅವರಿಗೆ ಹೆಸರು ತಂದುಕೊಟ್ಟ ಮೊದಲ ಚಿತ್ರ ‘ನಂಜುಂಡಿ ಕಲ್ಯಾಣ’.

ಡಾ|| ರಾಜಕುಮಾರ್ ಅವರ ನಿರ್ಮಾಣ ಸಂಸ್ಥೆಯ ಬಹಳಷ್ಟು ಚಿತ್ರಗಳಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಎಂ.ಎಸ್.ರಾಜಶೇಖರ್ ಅನೇಕ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರಿಗೆ ಪ್ರತಿಷ್ಟಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯೂ ಸಂದಿದೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಆರ್.ಟಿ. ರಮಾ

ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಜನಪ್ರಿಯ ನಟಿಯಾಗಿದ್ದ ಆರ್.ಟಿ.ರಮಾ ಅವರು ಚಲನಚಿತ್ರಗಳಲ್ಲೂ ನಾಯಕಿಯಾಗಿ ಪೋಷಕ ನಟಿಯಾಗಿ ನಾಲ್ಕು ದಶಕಗಳಿಂದ ದುಡಿಯುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನ ಕಲಾವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದು, ಪ್ರೌಢ ಪ್ರಬಂಧವನ್ನು ರಚಿಸಿರುವ ಆರ್.ಟಿ.ರಮಾ ಏಕಪಾತ್ರಗಳ ನಾಟಕಗಳಿಂದ ಪ್ರಖ್ಯಾತರಾದವರು.

ಕನ್ನಡ ಚಲನಚಿತ್ರ ರಂಗಕ್ಕೆ ನಾಯಕಿಯಾಗಿ ಪ್ರವೇಶ ಮಾಡಿದ ಆರ್.ಟಿ.ರಮಾ ಅನುಭವಿ ನೃತ್ಯ ಕಲಾವಿದೆ. ಅನೇಕ ನಾಯಕನಟರೊಂದಿಗೆ ಪ್ರಧಾನಪಾತ್ರಗಳಲ್ಲಿ ಕಾಣಿಸಿಕೊಂಡ ರಮಾ ಅವರು ಈಗ ಕಿರುತೆರೆಯಲ್ಲಿ ಬೇಡಿಕೆ ನಟಿಯಾಗಿರುವ ಆರ್.ಟಿ.ರಮಾ ರಂಗಭೂಮಿಯಲ್ಲಿ ಅಗಾಗ ಹೊಸ ಪ್ರಯೋಗಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರಿಯರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ವೈಜನಾಥ ಬಿರಾದಾರ

ರಂಗಭೂಮಿಯ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ವೈಜನಾಥ ಬಿರಾದಾರ್ ಕನ್ನಡದ ಹಿರಿಯ ಪೋಷಕ ನಟರಲ್ಲೊಬ್ಬರು. ಹಾಸ್ಯ ಪಾತ್ರಗಳಿಂದ ಕನ್ನಡ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ವೈಜನಾಥ ಬಿರಾದಾರ್ ಅವರು ನಾಲ್ಕು ದಶಕಗಳಿಂದ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ದೊರೆಯುವ ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬಿ ಅಭಿನಯಿಸುವ ವೈಜನಾಥ ಬಿರಾದಾರ್ ಅವರು ಅಂತರರಾಷ್ಟ್ರೀಯ ಖ್ಯಾತಿ ಪಡೆದ ಚಲನಚಿತ್ರ ನಿದೇಶಕ ಗಿರೀಶ ಕಾಸರವಳ್ಳಿ ಅವರ ಕನಸೆಂಬ ಕುದುರೆಯನೇರಿ ಚಿತ್ರದಲ್ಲಿ ಮನೋಜ್ಞ ಅಭಿನಯದಿಂದ ರಾಷ್ಟ್ರಮಟ್ಟದಲ್ಲೂ ಪ್ರೇಕ್ಷಕರ ಗಮನ ಸೆಳೆದರು. ಹೀಗಾಗಿ ಅವರ ಹೆಸರು ರಾಷ್ಟ್ರ ಪ್ರಶಸ್ತಿಯ ವೇಳೆ ಚರ್ಚೆಯಾಯಿತು. ಅತ್ಯಂತ ನೈಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿರುವ ವೈಜನಾಥ ಬಿರಾದಾರ್ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ನಿರಂತರವಾಗಿ ಅಭಿನಯಿಸುತ್ತಿರುವ ಕಲಾವಿದರು.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಿನಿಮಾ

ಎಸ್. ಜಾನಕಿ

ದಕ್ಷಿಣ ಭಾರತದ ಹೆಸರಾಂತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಹದಿನಾಲ್ಕಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ದಾಖಲೆ ಹೊಂದಿದ್ದಾರೆ. ಕನ್ನಡದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಎಸ್.ಜಾನಕಿ ಅವರು ಹೆಚ್ಚಾಗಿ ಹಾಡಿರುವುದು ಮಾಧುರ್ಯ ಪ್ರಧಾನ ಗೀತೆಗಳನ್ನು,

ಸಂಧ್ಯಾರಾಗ, ಗೆಜ್ಜೆಪೂಜೆ, ಉಪಾಸನೆ, ಮೊದಲಾದ ಚಿತ್ರಗಳಲ್ಲಿ ಬಹುಕಾಲ ನೆನಪಿನಲ್ಲುಳಿಯುವಂತಹ ಗೀತೆಗಳಿಗೆ ಕಂಠ ನೀಡಿರುವ ಎಸ್.ಜಾನಕಿ ಅವರು ಸಂಗೀತ ನಿರ್ದೇಶಕಿಯಾಗಿ ರಾಗ ಸಂಯೋಜಕಿಯಾಗಿ ಹಾಗೂ ಕವಿಯತ್ರಿಯಾಗಿ ಪ್ರಸಿದ್ದರು. ಹಿನ್ನೆಲೆ ಗಾಯನಕ್ಕಾಗಿ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಎಸ್.ಜಾನಕಿ ಅವರು ಕವಿ ಗೀತೆಗಳಿಗೆ ವಿಶೇಷವಾದ ಕಂಠ ನೀಡಿ ಹೆಸರಾಗಿದ್ದಾರೆ.