Categories
ಕೃಷಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ. ಎಸ್. ಶಂಕರಪ್ಪ ಅಮ್ಮಿನಘಟ್ಟ

ಸಾವಯವ ಕೃಷಿ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಶ್ರೀ ಎಸ್. ಶಂಕರಪ್ಪ ಅಮ್ಮಿನಘಟ್ಟ ಅವರದು ವಿಶಿಷ್ಟ ಸಾಧನೆ. ಸಾವಯವ ಕೃಷಿಯನ್ನು ಪ್ರೇರೇಪಿಸಲು ಶ್ರಮಿಸುತ್ತಿರುವ ಇವರು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಾವಯವ ಕೃಷಿ ಪ್ರೇರಕರಾಗಿ ದುಡಿಯುತ್ತಿದ್ದಾರೆ.

ತಮ್ಮ ಎಂಟು ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ಅಡಿಕೆ, ಹಲಸು, ಮಾವು, ಮೆಣಸು, ಸಪೋಟ ಹಾಗೂ ನಾನಾ ತರದ ಗಿಡಗಳನ್ನು ಬೆಳೆಸಿದ್ದಾರೆ. ಇದಲ್ಲದೇ ಮಳೆ ನೀರು ಸಂಗ್ರಹಣೆಯಲ್ಲಿ ಕೂಡ ಇವರ ಕಾಳಜಿ ಅಪಾರ, ನಿಸರ್ಗ ಸಾವಯವ ಕೃಷಿ ಪರಿವಾರದಲ್ಲಿ ನಿರ್ದೇಶಕರಾಗಿ ಹಾಗೂ ತುಮಕೂರು ಜಿಲ್ಲಾ ಸಂಚಾಲಕರಾಗಿ ಸಕ್ರಿಯವಾಗಿದ್ದಾರೆ. ಸುಭಿಕ್ಷ ಆರ್ಗಾನಿಕ್ ಫಾರ್ಮಸ್್ರ ಮಲ್ಟಿ ಸ್ಟೇಟ್ಸ್ ಕೋ ಆಪರೇಟಿವ್ ಸೊಸೈಟಿ ಅಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುರುಲಿಂಗಪ್ಪ ಮೇಲ್ಗೊಡ್ಡಿ

ಸಾವಯವ ಕೃಷಿಯನ್ನು ಕಳೆದ ೨೧ ವರ್ಷಗಳಿಂದ ಮಾಡುತ್ತಾ ಬಂದಿರುವ ಶ್ರೀ ಗುರುಲಿಂಗಪ್ಪ ಮೇಲೊಡ್ಡಿ, ತೊಗರಿ ಬೆಳೆಯಲ್ಲಿ ವಿನೂತನ ಪದ್ಧತಿಯಾದ ನಾಟಪದ್ಧತಿ ಅಳವಡಿಸಿಕೊಂಡು ದಾಖಲೆ ಇಳುವರಿ ಪಡೆದಿದ್ದಾರೆ. ಸಾವಯವ ಬೆಳೆಯ ಬೆಲ್ಲ, ತರಕಾರಿ, ಹಣ್ಣು ಇತ್ಯಾದಿಗಳನ್ನು ಬೆಳೆದು ಸಂಸ್ಕರಿಸಿ ಬಳಕೆದಾರರಿಗೆ ಪೂರೈಸುತ್ತಿದ್ದಾರೆ.

ತಮ್ಮಂತೆಯೇ ಸಾವಯವ ಕೃಷಿ ಮಾಡಿ ಯಶ ಕಾಣಲಿ ಎನ್ನುವ ಸಹಕಾರ ಮನೋಭಾವದಲ್ಲಿ ಇವರು ತಮ್ಮ ಜ್ಞಾನ ಹಾಗೂ ಅನುಭವಗಳನ್ನು ಸಂಪನ್ಮೂಲ ವ್ಯಕ್ತಿಯಾಗಿ ಸಮಾಜದ ಇತರ ರೈತರಿಗೆ ತಿಳಿಸಿಕೊಡುತ್ತಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಕೃಷಿ ಇಲಾಖೆಯು ಸಾವಯವ ಕೃಷಿ ಪಂಡಿತ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಹಲವು ಪ್ರಶಸ್ತಿಗಳು, ಪ್ರಯೋಗಶೀಲ ಕಿಸಾನ್ ಪ್ರಶಸ್ತಿಯನ್ನು ಗುಜರಾತ್ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದಲೂ ಪಡೆದಿದ್ದಾರೆ. ಹಲವು ಕೃಷಿ ಮತ್ತು ವಸ್ತುಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಡಾ. ಸಿ. ನಾಗರಾಜ್

ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನವರಾದ ಡಾ.ಸಿ.ನಾಗರಾಜ್ ಅವರ ನೆಚ್ಚಿನ ಕ್ಷೇತ್ರ ಕೃಷಿಯಾಗಿದೆ. ಸುಮಾರು ೩೫ ವರ್ಷಗಳ ಸುದೀರ್ಘ ಪರಿಶ್ರಮದಿಂದ ರೈತರಿಗೆ ಅನುಕೂಲವಾಗುವಂಥ ಬಹುಪಯೋಗಿ ಯಂತ್ರವನ್ನು ತಯಾರಿಸಿಕೊಟ್ಟಿದ್ದು ಈ ಯಂತ್ರ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.

ಮಾರುತಿ ಕೃಷಿ ಉದ್ಯೋಗ್ ಸಂಸ್ಥೆಯನ್ನು ಸ್ಥಾಪಿಸಿ, ಕೃಷಿ ಯಂತ್ರಗಳನ್ನು ತಯಾರಿಸಿದ್ದು, ರೈತರ ಸಮಯ ಮತ್ತು ಖರ್ಚು ಕಡಿಮೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಸಾವಯವ ಕೃಷಿಯ ಅಗತ್ಯತೆಯನ್ನು ಮನಗಂಡು ಆ ನಿಟ್ಟಿನಲ್ಲಿ ಸಂಶೋಧನೆ ಮಾಡಿದ್ದಾರೆ. ಇವರ ಸಾಧನೆಗಾಗಿ ರೋಟರಿ ಸಂಸ್ಥೆಯಿಂದ ಎಕ್ಸಲೆನ್ಸ್ ಅವಾರ್ಡ್, ಉಜ್ವಲ ಉದ್ಯಮಿ ಪ್ರಶಸ್ತಿ, ಮಣ್ಣಿನ ಮಗ ಪ್ರಶಸ್ತಿ, ಸಾಲು ಮರದ ತಿಮ್ಮಕ್ಕ ಗೌರವ ಸನ್ಮಾನ, ಎ.ಪಿ.ಜೆ. ಅಬ್ದುಲ್ ಕಲಾಂ ಇನ್ನೋವೇಷನ್ ಅವಾರ್ಡ್‌ಗಳು ಸಂದಿವೆ.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಸಿದ್ರಾಮಪ್ಪ ಬ. ಪಾಟೀಲ

ಭೂತಾಯಿ ಮಕ್ಕಳ ಹಿತರಕ್ಷಣೆಗೆ ಬದುಕನ್ನೆ ಮೀಸಲಿಟ್ಟ ರೈತಪರ ಚಿಂತಕ ಡಾ. ಸಿದ್ರಾಮಪ್ಪ ಬ. ಪಾಟೀಲ. ಕೃಷಿ ಸಾಹಿತಿ, ಸಂಘಟನಾಕಾರರಾಗಿ ಅವರದ್ದು ಅನನ್ಯ ಸೇವೆ.
ಕಲಬುರಗಿ ತಾಲ್ಲೂಕಿನ ಶಾಂತಿನಗರದವರಾದ ಸಿದ್ರಾಮಪ್ಪ ಬಿ.ಎ., ಎಲ್ಎಲ್ಬಿ ಪದವೀಧರರು. ಆದಾಯ ತರುವ ವಕಾಲತ್ತು ತೊರೆದು ರೈತಪರ ಹೋರಾಟಕ್ಕೆ ಧುಮುಕಿದವರು. ಸಾವಯವ ಕೃಷಿಗೆ ಬೆಂಬಲ, ರೈತಪರ ಹೋರಾಟದ ಮುಂದಾಳತ್ವ, ನೊಂದ ರೈತರಲ್ಲಿ ಆತ್ಮವಿಶ್ವಾಸ ತುಂಬುವಿಕೆ, ಚಳವಳಿಗಳಿಗೆ ರೈತರ ಸಂಘಟನೆ-ರವಾನೆ, ಕೃಷಿಕರಿಗಾಗಿಯೇ ಕವನ ರಚನೆ, ಆಳಂದ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಸೇವೆ. ಬಸವತತ್ವ ಪ್ರಚಾರ, ಹತ್ತಾರು ಸಂಘಟನೆಗಳಲ್ಲಿ ಸೇವೆ ಮುಂತಾದ ಬಹುಕೃತ ಸಾಮಾಜಿಕ ಕಾರ್ಯಗಳಲ್ಲಿ ಬಹುದಶಕಗಳಿಂದಲೂ ತನ್ಮಯರಾಗಿರುವ ಸಿದ್ರಾಮಪ್ಪ ರೈತರಿಗಾಗಿ ಕಾರಾಗೃಹವಾಸ ಅನುಭವಿಸಿದ ರೈತರಕ್ಷಕ. ಭಾರತ ಕೃಷಿಕ ಸಮಾಜದ ಸದಸ್ಯರಾಗಿ 30 ವರ್ಷಗಳಿಂದ ಸೇವೆಗೈಯುತ್ತಿರುವ, ಗೌರವ ಡಾಕ್ಟರೇಟ್ಗೆ ಪಾತ್ರವಾಗಿರುವ ರೈತಜೀವಿ.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ

ಕೃಷಿ ಕ್ಷೇತ್ರದ ಅನನ್ಯ ಸಾಧಕಿಯರಲ್ಲಿ ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ಪ್ರಮುಖರು. ವಿಶ್ವವಿದ್ಯಾಲಯಕ್ಕೂ ಸಾಟಿ ಇಲ್ಲದಂತಹ ಕೃಷಿ ಕ್ಷೇತ್ರ ಸ್ಥಾಪಿಸಿದ ಹೆಮ್ಮೆಯ ರೈತಮಹಿಳೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲೂರು ತಾಲ್ಲೂಕಿನ ಬಿ.ಜಿ. ಕೆರೆಯವರಾದ ಸುಮಂಗಲಮ್ಮ ಓದಿದ್ದು ಪಿಯುಸಿವರೆಗೆ ಮಾತ್ರ ಆದರೆ ಸಾಧನೆ ವಿವಿ ಮಟ್ಟದ್ದು. ೮೦ ಎಕರೆ ವಿಶಾಲವಾದ ಜಾಗದಲ್ಲಿ ತಮ್ಮದೇ ‘ವಸುಂಧರ ಕೃಷಿ ಕ್ಷೇತ್ರ’ ಸ್ಥಾಪಿಸಿದ ಕೃಷಿಪಂಡಿತೆ. ತೆಂಗು ಬೆಳೆ, ಹುಣಸೆ ಮರಗಳ ಪೋಷಣೆ, ರೇಷ್ಮೆ ಬೆಳೆ, ರೇಷ್ಮೆ ಹುಳುಗಳ ಸಾಕಾಣಿಕೆ, ಅರಣ್ಯ ಬೆಳೆಗಳ ಅಭಿವೃದ್ಧಿ, ಪಶುಸಂಗೋಪನೆ, ಮೇಕೆ ಸಾಕಾಣಿಕೆ, ಎರೆಹುಳು ಗೊಬ್ಬರ ಮತ್ತು ಜೇನು ಸಾಕಾಣಿಕೆಯಲ್ಲಿ ಅನವರತ ನಿರತರು. ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆ ಪರವಾನಿಗೆ ಪಡೆದ ಮೊದಲ ಮಹಿಳೆ, ೬೦ ಕೃಷಿ ಕಾರ್ಮಿಕರ ಅನ್ನದಾತೆ. ನಲವತ್ತು ವರ್ಷಗಳಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸುಮಂಗಲಮ್ಮ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಉತ್ತಮ ಸಾಧಕಿ ಮತ್ತಿತರ ಗೌರವಗಳ ಪುರಸ್ಕೃತರು.

Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಸೂರಜಸಿಂಗ್ ಕನ್ಸಿಂಗ್ ರಜಪೂತ

ಸಾವಯವ ಕೃಷಿಯಲ್ಲಿ ಅಚ್ಚರಿಯ ಸಾಧನೆಗೈದವರು ಸೂರಜಸಿಂಗ್ ರಜಪೂತ, ಗೋ ಆಧಾರಿತ ಒಕ್ಕಲುತನದ ಮೂಲಕ ಗಮನಸೆಳೆದಿರುವ ಪ್ರಗತಿಪರ ಕೃಷಿಕ.
ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಮದಕಟ್ಟಿ ಗ್ರಾಮದ ಸೂರಜ್ ಸಿಂಗ್ ಹಿರಿಯ ಹೋರಾಟಗಾರರು. ೧೯೫೨ರ ಫೆಬ್ರವರಿ ೨ರಂದು ಕೃಷಿಕುಟುಂಬದಲ್ಲಿ ಜನನ. ಸೇನೆ ಸೇರುವ ಕನಸು ನನಸಾಗದಾಗ ಕೃಷಿಯತ್ತ ಒಲವು. ೧೯೯೭ರಲ್ಲಿ ಒಂದೂವರೆ ಎಕರೆ ಭೂಮಿಯಲ್ಲಿ ಕುಂಬಳಕಾಯಿ ಬೆಳೆದು ಪಡೆದ ಐದು ಲಕ್ಷ ರೂಪಾಯಿ ಆದಾಯದಿಂದ ಖರೀದಿಸಿದ ಆರು ಎಕರೆ ಭೂಮಿಯಲ್ಲಿ ಹಣ್ಣು ಮತ್ತು ತರಕಾರಿಯ ಭರ್ಜರಿ ಇಳುವರಿ ತೆಗೆದವರು. ಆರು ಸಾವಿರ ಗಿಡಗಳ ನೆಡುವಿಕೆ, ೩೦ ಗೋವುಗಳ ಪೋಷಣಾನಿರತ ಸೂರಜಸಿಂಗ್ರ ನಿರಂತರ ಹೊಸತನ, ಪ್ರಯೋಗಶೀಲತೆ ಬೇಸಾಯಗಾರರಿಗೆ ಸದಾ ಮಾದರಿ, ನಾಲ್ಕು ದಶಕಗಳಿಂದಲೂ ಸಾವಯವ ಕೃಷಿಯಲ್ಲೇ ತನ್ಮಯರಾಗಿರುವ ಸೂರಜಸಿಂಗ್ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸದಸ್ಯತ್ವ ಸೇರಿ ಹಲವು ಪ್ರಶಸ್ತಿ-ಗೌರವಗಳಿಗೂ ಪಾತ್ರರು.

Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವೇಶ್ವರ ಸಜ್ಜನ್

ಒಣಭೂಮಿ ಬೇಸಾಯವನ್ನೇ ಬದುಕಾಗಿಸಿಕೊಂಡು ಬಂಗಾರದ ಬೆಳೆ ಬೆಳೆದವರು ವಿಶ್ವೇಶ್ವರ ಸಜ್ಜನ್, ಸಾವಯವ ಕೃಷಿಯಲ್ಲಿ ಯಶಸ್ಸಿನ ಹೊಸ ದಾಖಲೆ ಬರೆದ ಆದರ್ಶ ಕೃಷಿಕರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆಯವರಾದ ವಿಶ್ವೇಶ್ವರ ಸಜ್ಜನ್ ಕನ್ನಡದ ಸ್ನಾತಕೋತ್ತರ ಪದವೀಧರರು. ಕೃಷಿಯಲ್ಲಿ ಆಸಕ್ತಿ ಮೊಳಕೆಯೊಡೆದು ಬೇಸಾಯಕ್ಕಿಳಿದವರು. ಪಾಲಿಗೆ ಬಂದ ಐದು ಎಕರೆ ಒಣಭೂಮಿಯೇ ಕರ್ಮಭೂಮಿ, ಬರ ಮತ್ತು ಅಕಾಲಿಕ ಮಳೆಯ ಮಧ್ಯೆಯೇ ಸಾವಯವ ಕೃಷಿಯಿಂದ ಒಂದೂವರೆ ಎಕರೆಯಲ್ಲಿ ಬೇಲದ ಹಣ್ಣು, ಎರಡು ಎಕರೆಯಲ್ಲಿ ಬೆಟ್ಟದ ನೆಲ್ಲಿಕಾಯಿ, ಮತ್ತೊಂದು ಎಕರೆಯಲ್ಲಿ ಜಂಬೂ ನೇರಳೆ ಬೆಳೆದ ಸಾಧಕರು.ಬೇಲದ ಜ್ಯೂಸ್, ಪೇಡ, ರಸಂ, ಟೀಪೌಡರ್ ತಯಾರಿಕೆ, ಹತ್ತು ದೇಸೀ ಗೀರ್ ತಳಿಯ ಗೋವುಗಳ ಸಾಕಣೆ, ಅವುಗಳ ಹಾಲಿನಿಂದಲೂ ಪೇಡ, ಗೋಮೂತ್ರ, ಆರ್ಕ ಮತ್ತು ತುಪ್ಪ ತಯಾರಿಸಿ ಮಾರಾಟ ಮಾಡಿ ಗೆದ್ದವರು. ಕೃಷಿ ಆದಾಯದಲ್ಲೇ ನಾಲ್ಕಾರು ಜನರಿಗೆ ಉದ್ಯೋಗ ಕಲ್ಪಿಸಿರುವ ಸಜ್ಜನ್ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ನೈಜ ಕೃಷಿಋಷಿ.

Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ಕೆ.ದೇವರಾವ್

ಸಾವಯವ ಕೃಷಿಯನ್ನೇ ಬದುಕಿನ ಮಾರ್ಗವಾಗಿಸಿಕೊಂಡ ಕಾಯಕಯೋಗಿ ಬಿ.ಕೆ.ದೇವರಾವ್. ಭತ್ತದ ತಳಿಗಳ ಸಂರಕ್ಷಣೆಯಲ್ಲಿ ಮೌಲಿಕವಾದ ಸಾಧನೆಗೈದ ಮಾದರಿ ಕೃಷಿಕರು.
ದೇವರಾಯರು ಮೂಲತಃ ಕೃಷಿ ಮನೆತನದವರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಹುಟ್ಟೂರು. ಓದಿದ್ದು ೧೧ನೇ ಇಯತ್ತೆವರೆಗೆ ಮಾತ್ರ ಶಾಲೆಗಿಂತ ಕೃಷಿ ಅನುಭವದಲ್ಲಿ ಕಲಿತದ್ದೇ ಅಪಾರ. ಮಿತ್ತಬಾಗಿಲಿನ ಕೃಷಿ ಭೂಮಿಯೇ ಇವರ ತಪೋಭೂಮಿ. ತಂದೆಯಿಂದ ಬಂದ ೩೦ ಎಕರೆ ಭೂಮಿಯ ಪೈಕಿ ೪ ಎಕರೆಯಲ್ಲಿ ಭತ್ತ, ಎರಡೂವರೆ ಎಕರೆಯಲ್ಲಿ ಅಡಿಕೆ, ೨೫೦ ತೆಂಗು, ಗೇರು, ಕಾಳುಮೆಣಸು, ಮನೆಮಟ್ಟಿಗೆ ತರಕಾರಿ ಬೆಳೆವ ಸ್ವಾವಲಂಬಿ ಕೃಷಿ ಬದುಕು. ಮಲೆನಾಡಿನ ಆಕಳ ತಳಿಗಳ ಸಂರಕ್ಷಣೆಯಲ್ಲೂ ಎತ್ತಿದ ಕೈ. ಮರೆಯಾಗಿದ್ದ ಭತ್ತದ ೨೩ ತಳಿಗಳ ಸಂರಕ್ಷಕರು- ಪೋಷಕರು. ತಳಿ ವೈವಿಧ್ಯ ಹೆಚ್ಚಿಸುವುದೇ ಬದುಕಿನ ಹೆಗ್ಗುರಿ. ಸಾಂಪ್ರದಾಯಿಕ ಕ್ರಮದ ಬಿತ್ತನೆ ಮತ್ತು ನಾಟ ದೇವರಾಯರ ಬೇಸಾಯದ ವೈಶಿಷ್ಟ್ಯ, ರೈತ ಅವರ ಊಟಕ್ಕಾದರೂ ಗದ್ದೆ ಮಾಡಲಿ ಎಂಬ ದಿವ್ಯಮಂತ್ರ ಪಠಿಸುತ್ತಿರುವ ದೇವರಾಯರು ಸಾವಯವ ಕೃಷಿಯ ಅನನ್ಯ ಸಾಧಕರು.

Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಿ.ಯತಿರಾಜು

ವಿಜ್ಞಾನ ಹಾಗೂ ಪರಿಸರ ಜಾಗೃತಿಗಾಗಿ ಮೂರು ದಶಕಗಳಿಂದ ತೊಡಗಿಕೊಂಡಿರುವ ಸಿ.ಯತಿರಾಜು ಅವರು ವೃತ್ತಿಯಿಂದ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಯತಿರಾಜು ಅವರು ಭಾರತ ಜ್ಞಾನ ವಿಜ್ಞಾನ ಸಮಿತಿಯ ಚಟುವಟಿಕೆಗಳಲ್ಲಿ ಪಾಲುಗೊಂಡವರು.

ಕರ್ನಾಟಕ ರಾಜ್ಯ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆಯ ಸಂಚಾಲಕರಾಗಿದ್ದ ಯತಿರಾಜು ಅವರು ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಪಶ್ಚಿಮಘಟ್ಟಗಳ ಕರೆ, ಕಾಯದ ಕೃಷಿ, ಹಿರೋಷಿಮಾದಿಂದ ಬುದ್ಧನ ನಗುವಿನವರೆಗೆ ಕೃತಿಗಳು ಮುಖ್ಯವಾದವು.

ವಿಜ್ಞಾನ ಸಂವಹನಕಾರರಾಗಿ ಉಪನ್ಯಾಸ, ಲೇಖನ ಬರೆಯುವುದರಲ್ಲಿಯೂ ನಿಪುಣರಾದ ಯತಿರಾಜು ಅವರು ಸಾಕ್ಷರತಾ ಅಂದೋಲನಗಳಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.

Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಸ್.ಎಂ. ಕೃಷ್ಣಪ್ಪ

ಸಾಂಪ್ರದಾಯಿಕ ತೋಟದ ಬೆಳೆಗಳನ್ನು ಬೆಳೆಯುವ ಮನೆತನದಲ್ಲಿ ಜನಿಸಿದ ಎಸ್.ಎಂ.ಕೃಷ್ಣಪ್ಪ ಅವರು ಇಂಜಿನಿಯರಿಂಗ್ ಶಿಕ್ಷಣ ಪಡೆದ ನಂತರ ಪಾರಂಪರಿಕ ತೋಟಗಾರಿಕೆ ವೃತ್ತಿಯನ್ನು ಕೈಗೊಂಡವರು.

ಉತ್ಕೃಷ್ಟವಾದ ನರ್ಸರಿಗಳನ್ನು ಸ್ಥಾಪಿಸಿ ಬೆಳೆಸುವ ಮೂಲಕ ಹೆಸರಾಗಿರುವ ಕೃಷ್ಣಪ್ಪ ಅಂಗಾಂಶ ಕಸಿ ತಂತ್ರಜ್ಞಾನ ಹಾಗು ಸಾಂಪ್ರದಾಯಿಕ ತೋಟಗಾರಿಕೆ ಎರಡರಲ್ಲೂ ಯಶ ಸಾಧಿಸಿ ವಿದೇಶಗಳಿಗೆ ಸಸಿಗಳನ್ನು ರಫ್ತು ಮಾಡುತ್ತಿದ್ದಾರೆ.

ಲಾಲ್‌ಬಾಗಿನಲ್ಲಿ ವೈವಿಧ್ಯಮಯವಾದ ಹೂವುಗಳ ಪ್ರದರ್ಶನವನ್ನು ಏರ್ಪಡಿಸುತ್ತಿರುವ ಕೃಷ್ಣಪ್ಪ ಅವರು ತೋಟಗಾರಿಕೆ ಬೆಳೆಗಾರರಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸುವ ನರ್ಸರಿಮೆನ್ಸ್ ಮ್ಯಾಗಜಿನ್ ಸಂಪಾದಕರಾಗಿದ್ದು, ನರ್ಸರಿಮನ್ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಖಾದರ್ ಇಮಾಮಸಾಬ್ ನಡಕಟ್ಟಿನ

ಕೃಷಿಗೆ ಸಂಬಂಧಿಸಿದ ವಿವಿಧ ಯಂತ್ರೋಪಕರಣಗಳನ್ನು ಸ್ವಂತ ಬಂಡವಾಳ ಹೂಡಿ ತಯಾರಿಸಿ ಕೃಷಿಕರಿಗೆ ನೆರವು ನೀಡಿದ ಅಬ್ದುಲ್ ಖಾದರ್ ಇಮಾಂಸಾಬ್ ನಡಕಟ್ಟಿನ ಅವರಿಗೆ ಭಾರತ ಸರ್ಕಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಮುವ್ವತ್ತು ವರ್ಷಗಳಿಂದ ಹೊಸ ಹೊಸ ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿರುವ ನಡಕಟ್ಟಿನ ಅವರು ಕೂರಿಗೆ, ಕಬ್ಬಿಣದ ನೇಗಿಲ ಗಾಲಿ, ಕಬ್ಬು ಬಿತ್ತುವ ಕೂರಿಗೆ, ರೋಟೋವೇಟರ್‌ ಮೊದಲಾದ ಸರಳ ಯಂತ್ರಗಳನ್ನು ಸಂಶೋಧಿಸಿ ತಯಾರಿಸಿದ್ದಾರೆ.

ತಾವು ಸಿದ್ದಗೊಳಿಸಿದ ಯಂತ್ರೋಪಕರಣಗಳನ್ನು ಪ್ರಯೋಗ ಮಾಡಲು ಸ್ವಂತ ಜಮೀನನ್ನು ಮೀಸಲಾಗಿರಿಸಿರುವ ನಡಕಟ್ಟಿನ ಅವರಿಗೆ ಕೃಷಿ ವಿವಿ ಹಾಗೂ ಕೃಷಿ ಇಲಾಖೆಗಳು ಅನೇಕ ಗೌರವಗಳನ್ನು ನೀಡಿ ಗೌರವಿಸಿವೆ.

Categories
ಕೃಷಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಡಾ|| ಬಿಸಲಯ್ಯ

ಕೃಷಿ ಅಧ್ಯಯನ ಸಂಶೋಧನೆ, ಅಭಿವೃದ್ಧಿ ಕಾರ್ಯ ಮತ್ತು ಆಡಳಿತದಲ್ಲಿ ತೊಡಗಿರುವ ಡಾ|| ಬಿಸಲಯ್ಯ ಅವರು ಕೃಷಿ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಒಡನಾಟವಿಟ್ಟುಕೊಂಡಿದ್ದಾರೆ.

ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಿದ ಬಿಸಲಯ್ಯ ಅವರು ಈವರೆಗೆ ಸುಮಾರು ೧೭೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಕೃಷಿ ಅಭಿವೃದ್ಧಿ ಯೋಜನೆಯ ರೂಪುರೇಷೆಗಳ ತಯಾರಿಕೆಯಲ್ಲಿ ತಮ್ಮ ತಜ್ಞತೆಯನ್ನು ಧಾರೆ ಎರೆದಿರುವ ಬಿಸಲಯ್ಯ ಅವರು ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮೂಕಪ್ಪ ಶಿವಪ್ಪ ಪೂಜಾ

ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ಮೂಕಪ್ಪ ಶಿವಪ್ಪ ಪೂಜಾರ್ ದೇಸೀ ತಳಿಯ ಸಂರಕ್ಷಕ, ಸಾವಯವ ಕೃಷಿಕ ಹಾಗೂ ದೇಸೀ ತಳಿಯ ಬೆಳೆಗಾರ,
ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ‘ಗುಳಿ ರಾಗಿ’ ಪದ್ಧತಿಯನ್ನು ಉಳಿಸಿಕೊಂಡು ಬರುವುದರ ಜೊತೆಗೆ ಈ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮತ್ತೆ ಪುನಶ್ವೇತನ ನೀಡಿದ ಹಿರಿಮೆ ಮೂಕಪ್ಪ ಪೂಜಾರರದ್ದು. ದೇಶಾದ್ಯಂತ ಸಂಚರಿಸಿ ದೇಸೀ ಬಿತ್ತನೆ ಬೀಜಗಳ ಪ್ರಯೋಜನದ ಬಗ್ಗೆ ರೈತರಲ್ಲಿ ಜನಜಾಗೃತಿ ಮೂಡಿಸಿದ ಕೃಷಿಕರು. ಒಣಭೂಮಿ ಭತ್ತದ ಕೃಷಿಯಲ್ಲೂ ಸಹ ಮೂಕಪ್ಪ ಪರಿಣಿತರು. ಕರಿಮುಂಡಗ, ಕರಿದಡಿಬುಡ್ಡ ತಳಿಗಳು ಮಾತ್ರವಲ್ಲದೆ, ದೇಸೀ ತಳಿ ತರಕಾರಿ ಬೀಜಗಳ ಸಂರಕ್ಷಣೆಯಲ್ಲಿ ಸದಾ ನಿರತರು. ದೇಶಾದ್ಯಂತ ನಡೆಯುವ ಬೀಜಮೇಳದ ಉಪನ್ಯಾಸಕರು ಸಹ. ೨೦೧೭ರಲ್ಲಿ ನಡೆದ ವಿಶ್ವ ಸಾವಯವ ಸಮಾವೇಶದಲ್ಲಿ ಪಾಲ್ಗೊಂಡ ಹಿರಿಮೆ ಈ ಕೃಷಿಸಾಧಕರದ್ದು.

Categories
ಕೃಷಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಹಾದೇವಿ ಅಣ್ಣಾರಾವ ವಣದೆ

ಕಲಬುರಗಿ ಜಿಲ್ಲೆಯ ಅಳಂದ ಪಟ್ಟಣದ ಮಹಾದೇವಿ ಅಣ್ಣಾರಾವ ವಣದೆ ಬೇಸಾಯಗಾರರಿಗೆ ಮಾದರಿಯಾಗಿರುವ ಪ್ರಗತಿಪರ ರೈತಮಹಿಳೆ, ತೋಟಗಾರಿಕೆಯಲ್ಲಿ ಸಾಧನೆಗೈದ ಛಲದಂಕಮಲ್ಲೆ.
ಮಹಾದೇವಿ ಶಾಲೆಯ ಮೆಟ್ಟಿಲು ಹತ್ತಿದವರಲ್ಲ, ಕೃಷಿಯನ್ನೇ ನೆಚ್ಚಿ ಬದುಕಿದವರು. ಅಳಂದದಲ್ಲಿನ ೪೪ ಗುಂಟೆ ಜಮೀನಿನಲ್ಲಿ ಚಿನ್ನದ ಬೆಳೆ ತೆಗೆದ ಸಾಹಸಿ ಇವರು. ಅಲ್ಪ ಭೂಮಿಯಲ್ಲೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತರಕಾರಿ, ಚೆಂಡು ಹೂ, ಗಲಾಡಿಯಾ ಹೂವ, ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆದು ಭರ್ಜರಿ ಫಸಲು ತೆಗೆದ ನೇಗಿಲಯೋಗಿ, ತಾವು ಬೆಳೆದ ಹೂ, ದವಸಧಾನ್ಯಗಳನ್ನು ತಾವೇ ಖುದ್ದು ಮಾರಿ ಮಾರುಕಟ್ಟೆ ಸೃಷ್ಟಿಸಿಕೊಂಡವರು. ಹೈನೋದ್ಯಮದಲ್ಲೂ ಲಾಭದ ಸಾಧನೆಗೈದವರು. ೭೨ರ ಇಳಿವಯಸ್ಸಿನಲ್ಲೂ ಬೇಸಾಯದಲ್ಲಿ ತೊಡಗಿರುವ ಮಹಾದೇವಿ ಅಣ್ಣಾರಾವ ವಣದೆ ಅವರು ತೋಟಗಾರಿಕೆಯ ಶ್ರೇಷ್ಠ ಮಹಿಳೆ, ಉತ್ತಮ ರೈತಮಹಿಳೆ, ಮಹಿಳಾ ಸಾಧಕಿ ಮತ್ತಿತರ ಪ್ರಶಸ್ತಿ, ನಾಡಿನ ಗಣ್ಯಮಾನ್ಯರಿಂದ ಸನ್ಮಾನಗಳಿಂದ ಭೂಷಿತರು.

Categories
ಕೃಷಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಮೊಹಮ್ಮದ್ ಇದ್ರಿಸ್ ಖಾದ್ರಿ

ಮೊಹಮ್ಮದ್ ಇದ್ರಿಸ್ ಖಾದ್ರಿ ಅವರು ಬೀದರ್ ಜಿಲ್ಲೆಯಲ್ಲಿ ಸಮಗ್ರ ಕೃಷಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡವರು. ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಕಬ್ಬು ಮತ್ತು ಮಾವಿನ ತಳಿಗಳನ್ನು ಬೆಳೆಸಿ ಅತ್ಯುತ್ತಮ ಇಳುವರಿಯನ್ನು ಪಡೆದಿರುವ ಮೊಹಮದ್ ಖಾದ್ರಿ ಅವರು ಹೊಸ ತಲೆಮಾರಿನ ರೈತರಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾದ್ರಿ ಅವರ ಸಮಗ್ರ ಕೃಷಿ ಪದ್ದತಿಯನ್ನು ಗುರುತಿಸಿ ಗೌರವ ಪ್ರಶಸ್ತಿಯನ್ನು ಕೊಡಮಾಡಿದೆ. ನವದೆಹಲಿಯ ಐಸಿಎಆರ್ ಸಂಸ್ಥೆ ಸಹ ಅವರನ್ನು ಗೌರವಿಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯವು ೨೦೧೫ನೆಯ ಸಾಲಿನ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಡಾ|| ಮೊಹಮ್ಮದ್ ಇದ್ರಿಸ್ ಖಾದ್ರಿ ಅವರಿಗೆ ನೀಡಿ ಗೌರವಿಸಿದೆ.

Categories
ಕೃಷಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಕೆ. ಪುಟ್ಟಯ್ಯ

ಸೊಪ್ಪು, ಉಪ್ಪು, ವಿದ್ಯುತ್ ಖರೀದಿ ಬಿಟ್ಟರೆ ಆಹಾರ ಧಾನ್ಯಗಳನ್ನು ತಮ್ಮ ಜಮೀನಿನಲ್ಲಿಯೇ ಬೆಳೆದುಕೊಳ್ಳುವ ಸಮಗ್ರ ಕೃಷಿ ಪದ್ಧತಿಯ ಪ್ರಗತಿಪರ ರೈತ ಕೆ. ಪುಟ್ಟಯ್ಯ ಅವರು ಮೊದಲಿಗೆ ಜೀತದಾಳಾಗಿ ದುಡಿಯುತ್ತಿದ್ದರು. ನಂತರ ನಾಲ್ಕು ಎಕರೆ ದರಖಾಸ್ತು ಜಮೀನು ಹೊಂದಿದ್ದು, ನಲವತ್ತು ಜನ ಅವಿಭಕ್ತ ಕುಟುಂಬದ ಬದುಕಿಗೆ ಬೇಕಾದ ಎಲ್ಲ ದವಸ ಧಾನ್ಯಗಳನ್ನು ಬೆಳೆದುಕೊಳ್ಳಬೇಕಾಗುತ್ತಿತ್ತು.
ಲಭ್ಯವಿದ್ದ ನೀರಿನ ಮೂಲಗಳನ್ನು ಉಪಯೋಗಿಸಿಕೊಂಡು ಹಸಿರೆಲೆ ಗೊಬ್ಬರ ಬಳಸಿ ಸಾವಯವ ಕೃಷಿ ನಡೆಸಿದ ಪುಟ್ಟಯ್ಯ, ಇಂದು ತಮ್ಮ ಜಮೀನಿನಲ್ಲಿ ತರಿ, ಖುಷ್ಕ ಎರಡೂ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಜೊತೆಗೆ ಪಶು ಸಂಗೋಪನೆಯನ್ನು ಸಹ ಮಾಡುತ್ತಾರೆ.
ಕೃಷಿ ಹೊಂಡದಿಂದ ಬೇಸಾಯಕ್ಕೆ ಆಗುವ ಅನುಕೂಲಗಳನ್ನು ಅರಿತುಕೊಂಡು ಅದರಿಂದ ಹೆಚ್ಚಿನ ಲಾಭ ಪಡೆಯುತ್ತಿರುವ ಪುಟ್ಟಯ್ಯ ಬೇರೆ ರೈತರಿಗೂ ಮಾದರಿ ಆಗಿದ್ದಾರೆ. ಮೊಟ್ಟಮೊದಲ ಬಾರಿಗೆ ಈ ಪ್ರಗತಿಪರ ರೈತ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಚಾಲನೆ ಕೊಟ್ಟು ಮನೆಮಾತಾದವರು.

Categories
ಕೃಷಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಪ್ರೊ.ಜಿ.ಕೆ. ವೀರೇಶ್

ಕೇಂದ್ರ ಸರ್ಕಾರವು ಇವರ ವರದಿಗಳ ಅನುಸಾರ ಕೃಷಿ ಇಲಾಖೆಯನ್ನು ಮರು ಸಂಘಟಿಸಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಎಂದು ನಾಮಕರಣ ಮಾಡಿದೆ ಎಂಬುದು ಇವರ ಅಧ್ಯಯನಶೀಲತೆಯ ಹೆಗ್ಗಳಿಕೆಗೆ ಸಂದ ಗರಿ.
ಕೃಷಿಕರ ಸರಣಿ ಆತ್ಮಹತ್ಯೆ ಸಮಸ್ಯೆಯ ಪರಿಹಾರಕ್ಕಾಗಿ ಎರಡು ದಶಕಗಳ ಹಿಂದೆ ರಚಿಸಿದ್ದ ಆಯೋಗದ ನೇತೃತ್ವ ವಹಿಸಿದ್ದ ಪ್ರೊ| ಜಿ.ಕೆ.ವೀರೇಶ ಅವರ ಶಿಫಾರಸ್ಸುಗಳನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ಅನುಷ್ಟಾನ ಮಾಡಿದೆ.
ಸರ್ಕಾರದ ಹಲವು ಸಮಿತಿಗಳಲ್ಲಿ ತಮ್ಮ ತಜ್ಞತೆಯನ್ನು ಧಾರೆ ಎರೆಯುತ್ತಿರುವ ಪ್ರೊ. ಜಿ.ಕೆ.ವೀರೇಶ್ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸುಸ್ಥಿರ ಕೃಷಿ ಪದ್ಧತಿಯ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಕೃಷಿ ತಜ್ಞರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿರುವ ಜಿ.ಕೆ.ವೀರೇಶ ರೈತರಿಗೆ ಹಾಗೂ ರೈತ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗುವಂತಹ ಹಲವು ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಭಾರತೀಯ ಕೃಷಿ ಸಂಸ್ಥೆಯ ಸಮಾಲೋಚಕರಲ್ಲೊಬ್ಬರಾದ ಡಾ|| ಜಿ.ಕೆ.ವೀರೇಶ್ ತೃತೀಯ ವಿಶ್ವದಲ್ಲಿ ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ನೀಲನಕಾಶೆ ರಚಿಸಿಕೊಟ್ಟ ಉನ್ನತ ಸಮಿತಿಯಲ್ಲಿ ಸಹ ಕೆಲಸ ಮಾಡಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಎಲ್.ಸಿ. ಸೋನ್ಸ್

ನೈಸರ್ಗಿಕ ಕೃಷಿ ಪದ್ಧತಿಯನ್ನು ಅತ್ಯಂತ ಸಮರ್ಥವಾಗಿ ಅಳವಡಿಸಿಕೊಂಡಿರುವ ಎಲ್.ಸಿ. ಸೋನ್ಸ್ ಅವರು ತಮ್ಮ ಸೋನ್ಸ್ ಫಾರ್ಮ್ ಅನ್ನು ಮೂಡಬಿದ್ರಿಯಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಮೂಡಬಿದ್ರಿಯ ಕಸ ವಿಲೇವಾರಿಯ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಎಲ್.ಸಿ.ಸೋನ್ಸ್ ಅವರು ತಾಲೂಕಿನ ಎಲ್ಲ ಕಸವನ್ನು ತಮ್ಮ ತೋಟದಲ್ಲಿ ಸಾವಯವ ಮಾದರಿಯಲ್ಲಿ ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶ ವಿದೇಶಗಳ ಹಲವು ಅಪರೂಪದ ಫಲ-ಪುಷ್ಪ ಸಂಪತ್ತನ್ನು ಬೆಳೆಸಿರುವ ಎಲ್.ಸಿ.ಸೋನ್ಸ್ ಅವರು ಮಿಶ್ರ ಬೆಳೆಯ ಪದ್ಧತಿಯ ಮೂಲಕ ರೈತ ಸ್ನೇಹಿ ಕೃಷಿ ಮಾದರಿಗಳನ್ನು ಅಳವಡಿಸಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಆಶಾ ಶೇಷಾದ್ರಿ

ಶ್ರೀಮತಿ ಆಶಾ ಶೇಷಾದ್ರಿ ಅವರು ಸಸ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪುಷೋದ್ಯಮದ ಕ್ರಾಂತಿಗೆ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಆರ್ಥಿಕತೆಗೆ ಹೊಸ ಪ್ರೋತ್ಸಾಹ ಕೊಡುತ್ತಿರುವ ಪುಷ್ಪ ರಫ್ತು ಉದ್ಯಮದಲ್ಲಿಯೂ ಸಾಕಷ್ಟು ಪರಿಣತಿ ಪಡೆದಿರುವ ಆಶಾ ಶೇಷಾದ್ರಿ ಅವರು ಕೃಷಿ ಕ್ಷೇತ್ರದಲ್ಲಿ ವಾಣಿಜ್ಯ ಕೃಷಿಯ ರಬ್ಬರ್, ವೆನಿಲ್ಲಾ, ಅಡಿಕೆ, ಭತ್ತ, ಆರ್ಕಿಡ್‌ಗಳನ್ನು ಬೆಳೆಯುವಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕಸಿ ಕೃಷಿಯ ಮೂಲಕ ಬಾಳೆ ಹಣ್ಣು ಬೆಳೆಯನ್ನು ಇತರ ತರಕಾರಿ ಬೆಳೆಗಳೊಂದಿಗೆ ಬೆಳೆಯುವ ಹೊಸ ಪದ್ಧತಿಯೊಂದನ್ನು ಕಂಡು ಹಿಡಿದಿರುವ ಆಶಾ ಶೇಷಾದ್ರಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಕೀರಣಗೆರೆ ಜಗದೀಶ್

ಕೀರಣಗೆರೆ ಜಗದೀಶ ಅವರು ರೇಷ್ಮೆ ಕೃಷಿಕರಿಗೆ ಬಹುಬಗೆಯ ಸೌಲಭ್ಯಗಳನ್ನು ಒದಗಿಸಿಕೊಡುವ ಅತ್ಯಾಧುನಿಕ ಚಾಕಿ ಸಾಕಾಣಿಕಾ ಕೇಂದ್ರವನ್ನು ಸ್ಥಾಪಿಸಿ ಅಸಂಖ್ಯಾತ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತಾ ಬಂದಿದ್ದಾರೆ.

ರೇಷ್ಮೆ ಕೃಷಿ ಬೆಳೆಗಾರರಿಗೆ ಒಳ್ಳೆಯ ಆದಾಯ ಗಳಿಸಿಕೊಡುವಂತೆ ಆಧುನಿಕ ತಂತ್ರಜ್ಞಾನ ಹಾಗೂ ತರಬೇತಿಯನ್ನು ೬,೦೦೦ಕ್ಕೂ ಹೆಚ್ಚು ಮಂದಿಗೆ ತಮ್ಮ ಕೇಂದ್ರದ ಮೂಲಕ ನೀಡಿರುವ ಜಗದೀಶ್ ಅವರು ಉತ್ತಮ ಗುಣಮಟ್ಟದ ಚಾಕಿ ಹುಳುಗಳನ್ನು ರೈತರಿಗೆ ವಿತರಿಸುವ ಮೂಲಕ ಹೆಚ್ಚಿನ ಇಳುವರಿ ಹಾಗೂ ಆದಾಯ ಪಡೆಯಲು ನೆರವಾಗಿದ್ದಾರೆ. ಅತಿ ದೊಡ್ಡ ಹಾಗೂ ಅತ್ಯುತ್ತಮ ಜಾಕಿ ಕೇಂದ್ರವೆಂಬ ಹೆಗ್ಗಳಿಕೆಗೂ ಜಗದೀಶ ಅವರ ಕೀರಣಕೆರೆ ಚಾಕಿ ಕೇಂದ್ರ ಪಾತ್ರವಾಗಿದೆ.

Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಶಿವಾನಂದ ಕಳವೆ

ನಾಡಿನ ಹೆಸರಾಂತ ಪರಿಸರ ಹಾಗೂ ಅಭಿವೃದ್ಧಿ ಬರಹಗಾರರಾದ ಶಿವಾನಂದ ಕಳವೆ ನಾಡಿನ ಪರಿಸರ ಕುರಿತ ಹಲವಾರು ಲೇಖನಗಳನ್ನು ಹಾಗೂ ಅಂಕಣಗಳನ್ನು ನಿಯತವಾಗಿ ವಿವಿಧ ಪತ್ರಿಕೆಗಳಿಗೆ ಬರೆಯುತ್ತಾ ಬಂದಿದ್ದಾರೆ. ಮಾಲಿನ್ಯದಿಂದ ವಾತಾವರಣದ ಮೇಲೆ ಉಂಟಾಗುವ ಅಪಾಯಗಳನ್ನು ಜನತೆಗೆ ತಿಳಿಸಿಕೊಡುವಲ್ಲಿ ಅನೇಕ ಕಾರ್ಯಾಗಾರಗಳನ್ನು ವ್ಯವಸ್ಥೆ ಮಾಡಿರುವ ಶಿವಾನಂದ ಕಳವೆ ಕೃಷಿ ಪತ್ರಿಕೋದ್ಯಮದಲ್ಲಿ ಹಲವರನ್ನು ತರಬೇತುಗೊಳಿಸಿದ್ದಾರೆ.

ಪ್ರತಿಷ್ಟಿತ ಅಭಿವೃದ್ಧಿ ವರದಿಗಾರಿಕೆ ಪ್ರಶಸ್ತಿಯನ್ನು ರಾಜ್ಯ ಸರ್ಕಾರದಿಂದ ಪಡೆದಿರುವ ಶಿವಾನಂದ ಕಳವೆ ಉತ್ತರ ಕನ್ನಡದಲ್ಲಿ ಪ್ರಾತ್ಯಕ್ಷಿಕೆಗಾಗಿ ಕೇಂದ್ರವೊಂದನ್ನು ನಿರ್ಮಿಸಿ ಪರಿಸರ ಹಾಗೂ ಕೃಷಿ ಕುರಿತ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಡಿ.ಎ. ಚೌಡಪ್ಪ

ಚೌಡಪ್ಪ ಅವರು ಪಿನಾಕಿನಿ ನದಿಯಲ್ಲಿ ಮರಳು ಅಕ್ರಮ ದಂಧೆಯನ್ನು ವಿರೋಧಿಸುವ ಹೋರಾಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಅಪಾರ ಮಾಹಿತಿಯನ್ನು ನೀಡಿ ಮೆಚ್ಚುಗೆಯನ್ನು ಪಡೆದಿರುವ ಚೌಡಪ್ಪ ಅನೇಕ ಬಾರಿ ಮಾರಣಾಂತಿಕ ಹಲ್ಲೆಗಳಿಂದ ಪಾರಾಗಿದ್ದಾರೆ. ವೃತ್ತಿಯಿಂದ ನೇಕಾರರಾದ ಚೌಡಪ್ಪ ಕೃಷಿಯನ್ನು ತಮ್ಮ ಬದುಕನ್ನಾಗಿ ಮಾಡಿಕೊಂಡು ಮರಳು ನಿಕ್ಷೇಪಗಳನ್ನು ಉಳಿಸುವ ಹೋರಾಟದಲ್ಲಿ ಈಗಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮುತ್ತಣ್ಣ ಪೂಜಾರ

ಕುರಿ ಹಿಂಡಿನೊಂದಿಗೆ ಊರೂರು ಸುತ್ತುವ ಪ್ರವೃತ್ತಿಯ ಮುತ್ತಣ್ಣ ಪೂಜಾರ್ ಕೆಲದಿನಗಳ ನಂತರ ಒಂದೇ ಕಡೆ ನೆಲೆ ನಿಂತು ಜಮೀನು ಖರೀದಿಸಿ ಬೇಸಾಯ ಆರಂಭಿಸಿ ಯಶಸ್ಸು ಗಳಿಸಿದವರು.
ಸತತ ಪರಿಶ್ರಮ ಹಾಗೂ ಹೊಸ ದಾರಿಗಳನ್ನು ಅರಿತುಕೊಂಡ ಮುತ್ತಣ್ಣ ಪೂಜಾ ಈಗ ಮುವ್ವತ್ತಾರು ಎಕರೆ ಭೂಮಿಯನ್ನು ನಂದನವನವನ್ನಾಗಿ ಮಾಡಿದ್ದು, ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಭತ್ತ, ಕಬ್ಬು, ತೋಟಗಾರಿಕೆ ಬೆಳೆಗಳು ಹಾಗೂ ಜೇನು,ಮೀನು ಸಾಕಾಣಿಕೆಯನ್ನು ಕೈಗೊಂಡಿದ್ದಾರೆ.
ರಸಗೊಬ್ಬರಗಳ ಬಳಕೆಯಿಂದ ದೂರವಿರುವ ಮುತ್ತಣ್ಣ, ತಮ್ಮ ಜಮೀನಿನಲ್ಲಿ ಎರೆಹುಳು ಗೊಬ್ಬರ ತಯಾರಿಕೆ, ಮಾಡುವುದೇ ಅಲ್ಲದೆ, ನೂರಾರು ಕುರಿಗಳನ್ನು ಮೇಯಿಸಿ, ಅದರ ಹಿಕ್ಕೆಯನ್ನು ಬೇಸಾಯಕ್ಕಾಗಿ ಉಪಯೋಗಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಬನ್ನೂರು ಕೃಷ್ಣಪ್ಪ

ಬೇಸಾಯ ಹೆಚ್ಚಿನ ಬಂಡವಾಳವನ್ನು ಬೇಡುವ ಈ ಕಾಲದಲ್ಲಿ ಶೂನ್ಯ ಬಂಡವಾಳದಿಂದ ನೈಸರ್ಗಿಕ ಬೆಳೆ ತೆಗೆದು ಆದಾಯ ಸಂಪಾದಿಸುವ ದೇಸೀಯ ಮಾರ್ಗವನ್ನು ಕಂಡುಕೊಂಡವರು ಬನ್ನೂರು ಕೃಷ್ಣಪ್ಪ.
ಸಹಜ ಕೃಷಿ ತಜ್ಞ ಸುಭಾಶ ಪಾಲೇಕಾರ್ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಔಷಧೋಪಚಾರ ಹಾಗೂ ಗೊಬ್ಬರಗಳನ್ನು ಬಳಸಿ, ಸಹಜ ಕೃಷಿಯತ್ತ ಮರಳುವ ಮಾರ್ಗದಲ್ಲಿರುವ ಬನ್ನೂರು ಕೃಷ್ಣಪ್ಪ ಫಲವತ್ತಾದ ಭೂಮಿಗೆ ಯಾವುದೇ ಕುತ್ತಾಗದಂತೆ ಸಾವಯವ ಕೃಷಿಯಿಂದ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಡಾ. ಮಲ್ಲಣ್ಣ ನಾಗರಾಳ

ನೀರಿನ ಕೊರತೆಯನ್ನು ನೀಗಿಸಿ, ಲಭ್ಯ ನೀರನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಬೇಸಾಯ ಮಾಡುವ ಪದ್ಧತಿಗಳನ್ನು ರೂಢಿಗೆ ತರುವಲ್ಲಿ ಯಶ ಸಾಧಿಸಿದ ತಜ್ಞರಾದ ಹುನಗುಂದದ ಡಾ|| ಮಲ್ಲಣ್ಣ ನಾಗರಾಳ ಅವರಿಗೆ ಗೌರವ ಡಾಕ್ಟರೇಟ್ ಸಂದಿದೆ.
ಮಣ್ಣು ಹಾಗೂ ನೀರನ್ನು ಜತನದಿಂದ ಕಾಪಾಡುವುದರ ಮೂಲಕ ಉತ್ತಮವಾದ ಗುಣಮಟ್ಟದ ಬಿತ್ತನೆ ಬೀಜಗಳನ್ನು ಉಪಯೋಗಿಸುವ ಪರಿಪಾಠವನ್ನು ನಮ್ಮ ಪೂರ್ವಜರು ಇಟ್ಟುಕೊಂಡಿದ್ದರಿಂದ ಬೇಸಾಯವೊಂದೇ ಮೂಲಾಧಾರವಾಗಿತ್ತು. ಇದನ್ನು ನಿರ್ಲಕ್ಷಿಸಿದ್ದರಿಂದ ಕೃಷಿ ವಲಯ ಸಾಕಷ್ಟು ಪೆಟ್ಟು ತಿಂದಿದೆ ಎನ್ನುವ ಮಲ್ಲಣ್ಣ ನಾಗರಾಳ ಹಳೆಯ ವಿಧಾನಗಳಿಂದಲೇ ಕೃಷಿ ಮಾಡುವ ಮೂಲಕ ಹಳೆಯ ಯಶಸ್ಸನ್ನು ಇಂದಿನ ಕಾಲಕ್ಕೆ ನಿಜ ಮಾಡಿ ತೋರಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಡಾ. ಪ್ರಕಾಶ್ ಭಟ್

ಹಳ್ಳಿಗಾಡಿನ ಅಭಿವೃದ್ಧಿಯಲ್ಲಿ ಸಮುದಾಯ ಸಂಪೂರ್ಣವಾಗಿ ಪಾಲುಗೊಳ್ಳುವುದು ಹಾಗೂ ಕೃಷಿ ಕ್ಷೇತ್ರದಲ್ಲಿ ಸಬಲೀಕರಣ ಮಾಡುವ ಉದ್ದೇಶದಿಂದ ಧಾರವಾಡದಲ್ಲಿ ಸ್ಥಾಪನೆಗೊಂಡಿರುವ SCOPE ಎಂಬ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಡಾ|| ಪ್ರಕಾಶ ಭಟ್.
ಗ್ರಾಮೀಣ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಜನತೆಗೆ ಅರಿವು ಮೂಡಿಸುವ ಹಾಗೂ ಆರ್ಥಿಕ ಚೈತನ್ಯವನ್ನು ರೂಪಿಸಿಕೊಳ್ಳಲು ಮಾರ್ಗಗಳನ್ನು ಸಿದ್ಧ ಮಾಡುವ ಕಾರ್ಯಕ್ರಮಗಳನ್ನು ಡಾ|| ಪ್ರಕಾಶ ಭಟ್ ಅವರು ತಮ್ಮ ಸ್ಕೋಪ್ ಸಂಸ್ಥೆ ಮೂಲಕ ಅನುಷ್ಠಾನಗೊಳಿಸುತ್ತಿದ್ದಾರೆ.

Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ.ಪಿ. ಶೆಟ್ಟಿ

ಕೃಷಿ ಪ್ರಯೋಗಾಲಯದ ಫಲಿತಾಂಶಗಳನ್ನು ಕ್ಷೇತ್ರಕ್ಕೆ, ರೈತರ ಬಳಿಗೆ ಕೊಂಡೊಯ್ದ ಸಾಧನೆ ಡಾ. ಜಿ.ಪಿ.ಶೆಟ್ಟಿ ಅವರದು.
ಉಡುಪಿ ಜಿಲ್ಲೆಯ ಕಾಲ್ಲೊರೆಹಳ್ಳಿಯಲ್ಲಿ ೧೯೪೦ರಲ್ಲಿ ಕೃಷಿಕ ಕುಟುಂಬದಲ್ಲಿ ಜನನ. ಸಸ್ಯ ಶರೀರ ಕ್ರಿಯಾಶಾಸ್ತ್ರದಲ್ಲಿ ಎಂಎಸ್ಸಿ ಪದವಿ. ‘ಸಸ್ಯ ಶರೀರ ಕ್ರಿಯಾಶಾಸ್ತ್ರ ಮತ್ತು ಸಸ್ಯ ಪೋಷಕಾಂಶಗಳು’ ವಿಷಯದಲ್ಲಿ ಡಾಕ್ಟರೇಟ್ ಪದವಿ. ಶಿವಾಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿಂಬಕಾ‌ ಕೃಷಿ ಸಂಸ್ಥೆಯಲ್ಲಿ ಹತ್ತಿ ವಿಭಾಗದ ಪೋಷಕರಾಗಿ ಹಾಗೂ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಅಧಿಕಾರಿಯಾಗಿ ಅನನ್ಯ ಸೇವೆ.
ರಾಜ್ಯ ಸರ್ಕಾರದ ಸ್ವಉದ್ಯೋಗ ಯೋಜನೆಯಡಿ ಲಘು ಪೋಷಕಾಂಶಗಳು ಮತ್ತು ಮಧ್ಯಮ ಪೋಷಕಾಂಶಗಳ ಬಗ್ಗೆ ಸಂಶೋಧನೆ ನಡೆಸಿರುವ ಶ್ರೀಯುತರು ಲಘು ಪೋಷಕಾಂಶ ಉತ್ಪಾದನಾ ಘಟಕಗಳ ಸ್ಥಾಪಕರು. ಲಘು ಪೋಷಕಾಂಶ ಉಪಯೋಗ ಕುರಿತು ಕೃಷಿಕರಿಗೆ, ಕೃಷಿ ಸಂಸ್ಥೆಗಳಿಗೆ ಶ್ರೀಯುತರು ಮಾರ್ಗದರ್ಶಿ, ಆ ಮೂಲಕ ದೇಶದ ಲಘು ಪೋಷಕಾಂಶ ಉದ್ಯಮದ ಪಿತಾಮಹರೆನಿಸಿರುವರು.
ಸಾವಯವ ಗೊಬ್ಬರ ಕುರಿತು ರೈತರಿಗೆ ತಿಳಿವಳಿಕೆ ನೀಡುವ ಕೃಷಿ ವಿಜ್ಞಾನಿ ಶೆಟ್ಟಿ ಅವರು ಮುಂದಾಲೋಚನೆಯುಳ್ಳ ಕುಶಲ ಉದ್ಯಮಿಯೂ ಹೌದು. ಅವರು ಬರೆದಿರುವ ಬಹುಪಯೋಗಿ ಸಂಶೋಧನಾ ಲೇಖನಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಪ್ರಕಾಶಿಸಿವೆ.
ಶ್ರೀಯುತರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಅಖಿಲ ಭಾರತೀಯ ಸಾಧಕರ ಸಮ್ಮೇಳನದಲ್ಲಿ ಗೌರವ, ರಾಷ್ಟ್ರೀಯ ಒಕ್ಕೂಟ ಪ್ರಶಸ್ತಿ ಸಂದಿದೆ. ಪ್ರಸ್ತುತ ಅವರು ಜೈವಿಕ ಕೀಟನಾಶಕ ಸಂಶೋಧನಾ ಮಂಡಳಿಯ ಹಾಗೂ ಕೇಂದ್ರ ಸರ್ಕಾರದ ಕೃಷಿ ವ್ಯವಹಾರ ಕಾರ್ಯನಿರತ ಮಂಡಳಿ ಸದಸ್ಯರು.
ರೈತರಿಗೆ ನೆರವಾಗುತ್ತ ಕ್ರಿಯಾಶೀಲತೆ ಮತ್ತು ಸಂಶೋಧನಾ ಪ್ರವೃತ್ತಿ ರೂಢಿಸಿಕೊಂಡ ಕೃಷಿ ವಿಜ್ಞಾನಿ ಶ್ರೀ ಡಾ. ಜಿ.ಪಿ.ಶೆಟ್ಟಿ.

Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪಾಪಮ್ಮ

ಹಳ್ಳಿ ಹಳ್ಳಿಗಳಲ್ಲಿ ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ, ಓದು ಬರಹ ಬಾರದ ಪರಿಶಿಷ್ಟ ಜಾತಿಯ ಬಡ ಕೃಷಿಕ ಮಹಿಳೆ ಶ್ರೀಮತಿ ಪಾಪಮ್ಮ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕುಂಭರಹಳ್ಳಿಯವರಾದ ಶ್ರೀಮತಿ ಪಾಪಮ್ಮ ಅವರ ಕುಟುಂಬ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇರುವ ಸ್ವಲ್ಪ ಜಮೀನಿನಲ್ಲಿಯೇ ವ್ಯವಸಾಯ ಮಾಡುತ್ತಿರುವ ಶ್ರೀಮತಿ ಪಾಪಮ್ಮ “ಗ್ರಾಮವಿಕಾಸ ಸಂಸ್ಥೆ’ಯ ಕ್ರಿಯಾಶೀಲ ಕಾರ್ಯಕರ್ತೆ. ಒಕ್ಕಲುತನದ ಹೊಸ ಆವಿಷ್ಕಾರಗಳತ್ತ ಅಪರಿಮಿತ ಆಸಕ್ತಿ. ಸಾವಯವ ಕೃಷಿಯ ಮಹತ್ವವನ್ನು ಅರಿತಿರುವ ಇವರು ಅದರ ಪ್ರಯೋಜನಗಳನ್ನು ರೈತರಿಗೆ ಮನಮುಟ್ಟುವಂತೆ ವಿವರಿಸಿ ವ್ಯಾಪಕ ಜನಜಾಗೃತಿಯನ್ನು ಉಂಟುಮಾಡುತ್ತಿದ್ದಾರೆ.
ಜಾನಪದ ಜಾತ್ರೆ, ಜನಪದ ವಸ್ತುಪ್ರದರ್ಶನ, ಮೊದಲಾದ ಮೇಳಗಳಲ್ಲಿ ಗ್ರಾಮವಿಕಾಸ ಸಂಸ್ಥೆಯ’ ಮೂಲಕ ಬಿತ್ತನೆ ಬೀಜಗಳ ಸಂಗ್ರಹ ಬ್ಯಾಂಕನ್ನು ತೆರೆದು ರೈತರಿಗೆ ನೆರವಾಗುತ್ತಿದ್ದಾರೆ.
ತಮ್ಮ ಉಪಜೀವನ ಕಾರ್ಯಗಳ ನಡುವೆಯೇ ಸಮಾಜಕ್ಕೆ ಹೇಗೆ ನೆರವಾಗಬಹುದೆಂಬುದಕ್ಕೆ ಜ್ವಲಂತ ನಿದರ್ಶನ ಶ್ರೀಮತಿ ಪಾಪಮ್ಮ.

Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮೀರಾತಾಯಿ ಕೊಪ್ಪಿಕ‌ರ್‌

ಯಾವ ಪುರುಷನಿಗೂ ಕಡಿಮೆ ಇಲ್ಲದಂತೆ ಕೃಷಿ ನಂಬಿ ದುಡಿಯುತ್ತಿರುವ ಭೂಮಿ ತೂಕದ ಮಹಿಳೆ ಶ್ರೀಮತಿ ಮೀರಾತಾಯಿ ಕೊಪ್ಪಿಕರ್ ಅವರು.
ಧಾರವಾಡ ಜಿಲ್ಲೆಯಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಮೀರಾತಾಯಿ ಅವರು, ಓದಿನ ಹಂಬಲಕ್ಕಿಂತ ಹೆಚ್ಚಾಗಿ ಕೃಷಿ ಕಡೆಗೆ ಒಲಿದವರು. ಮಲೆನಾಡು, ಬಯಲು ಸೀಮೆಗಳೆರಡನ್ನು ಹೊದ್ದಿರುವ ಗಂಡು ಮೆಟ್ಟಿನ ನಾಡಾದ ಧಾರವಾಡದಲ್ಲಿ ಕೃಷಿ ಮಾಡುವುದೆಂದರೆ ಅವರಿಗದು ಬದುಕಿನ ಪರಿ.
ಹಸಿರು ಕ್ರಾಂತಿ ಮತ್ತು ಜಾಗತೀಕರಣದ ನಾಗಾಲೋಟದಲ್ಲಿ ಅತಿಯಾದ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತ ಮೂಲತಳಿಗಳನ್ನೇ ಕಳೆದುಕೊಳ್ಳುತ್ತಿದ್ದ ಕೃಷಿ ಕ್ಷೇತ್ರದಲ್ಲಿ ಸದ್ದಿಲ್ಲದೇ ದೇಸಿ ತಳಿಗಳನ್ನು ಸಂರಕ್ಷಿಸುತ್ತ ಸಾವಯವ ಕೃಷಿಯಲ್ಲಿ ತೊಡಗಿಕೊಂಡವರು. ಸಾವಯವ ಕೃಷಿಯಲ್ಲಿ ಇವರು ಮಾಡಿದ ಮೌನಕ್ರಾಂತಿ ನಾಡಿನ ನೂರಾರು ಕೃಷಿಕರಲ್ಲಿ ಬದುಕಿನ ಭರವಸೆ ಮೂಡಿಸಿದೆ.
ಸಾವಯವ ಕೃಷಿಯಲ್ಲಿ ಶ್ರೀಮತಿ ಮೀರಾತಾಯಿ ಕೊಪ್ಪಿಕರ್ ಅವರು ಮಾಡಿರುವ ಸಾಧನೆ ಬಸವಳಿದ ಬಡರೈತರಿಗೆ ಹೊಸ ದಾರಿದೀಪ.

Categories
ಕೃಷಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗಣೇಶ ತಿಮ್ಮಯ್ಯ

ಕೃಷಿ ಕ್ಷೇತ್ರದಲ್ಲಿ ನವೀನ ಸಂಶೋಧನೆಗಳಿಂದ ಹೊಸ ಸಾಧ್ಯತೆಗಳನ್ನು ತೋರ್ಗಾಣಿಸಿದ ಸಾಧಕರು ಗಣೇಶ ತಿಮ್ಮಯ್ಯ, ಸೇನೆ ಮತ್ತು ಕೃಷಿಯಲ್ಲಿನ ಸಾಧನೆ ರಾಷ್ಟ್ರಪ್ರಶಸ್ತಿಗಳಿಗೆ ಭಾಜನವಾದ ಪ್ರತಿಭಾವಂತರು, ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದಲ್ಲಿ ೧೯೬೦ರಲ್ಲಿ ಜನಿಸಿದ ಗಣೇಶ ತಿಮ್ಮಯ್ಯ ಅವರು ಅಪ್ಪಟ ದೇಶಪ್ರೇಮಿ, ಬೇಸಾಯದಲ್ಲಿ ಧನ್ಯತೆ ಕಂಡುಕೊಂಡ ಪ್ರಗತಿಪರ ಕೃಷಿಕ, ಭಾರತೀಯ ಸೇನೆಯಲ್ಲಿ ಹವಾಲ್ದಾ‌ರ್ ‍ಆಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಸೈನಿಕರು. ಸೇನೆಯಿಂದ ನಿವೃತ್ತರಾದ ಮೇಲೆ ಸಾಧನಾಕ್ಷೇತ್ರವಾಗಿಸಿಕೊಂಡವರು. ಭತ್ತದ ವಿವಿಧ ತಳಿಗಳನ್ನು ಬೆಳೆದು ಸಂಶೋಧನಾ ಕೇಂದ್ರಗಳಿಗೆ ಬೀಜ ನೀಡುತ್ತಿರುವ ಬೇಸಾಯಗಾರರು. ಹೊಸ ಹೊಸ ಬೆಳೆಯಾದ ನುಸುಗುನ್ನಿ, ಬೀಯಂವನ್ನೂ ಬೆಳೆದವರು. ರಾಜ್ಯದಲ್ಲೇ ಪ್ರತಿ ಹೆಕ್ಟೇರ್‌ಗೆ ಅತಿ ಹೆಚ್ಚು ಭತ್ತದ ಇಳುವರಿಯನ್ನು ಬೆಳೆದ ಹೆಗ್ಗಳಿಕೆ, ಕೋಟಿಯ ಹೊಸ ತಳಿ, ಮೀನಿನ ಹೊಸ ತಳಿ, ಬೆಳೆಗಂದ, ಬಿದಿರು ಮಾಡಂಗಲ, ತುಂಗಾ, ಅಲೇರಾ ಜೀರಿಗೆ ಸಣ್ಣ, ಕಜೆ.ವಿ.ಆರ್‌ನಂರ ಬೆಳೆಗಳನ್ನು ಬೆಳೆದ ಮಾದರಿ ರೈತರು. ರಾಜ್ಯ, ರಾಷ್ಟ್ರೀಯ ಕೃಷಿ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಹಿರಿಮೆ. ಕೃಷಿ ಸಾಧನೆಗಾಗಿ ಎರಡು ರಾಷ್ಟ್ರೀಯ ಹಾಗೂ ಆರು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇಲಿಸಿಕೊಂಡ ದೇಸೀ ಕೃಷಿ ವಿಜ್ಞಾನಿ.

Categories
ಕೃಷಿ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ.ಡಿ. ಭರಮಗೌಡ

ಸಾವಯವ ಕೃಷಿಯನ್ನು ಆಶ್ರಯಿಸಿದ ಪ್ರಗತಿಪರ ಕೃಷಿಕರು ಶ್ರೀ ಡಿ.ಡಿ. ಭರಮಗೌಡ ಅವರು.
೧೯೪೭ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಜನನ. ಬಿ.ಎಸ್ಸಿ. ಪದವಿಯ ನಂತರ ಕೃಷಿಕ ವೃತ್ತಿಯತ್ತ ಒಲವು. ಸಂಪೂರ್ಣ ಮಳೆಯಾಶ್ರಿತ ಕಪ್ಪುಭೂಮಿಯನ್ನು ಆಧಲಸಿ ಹತ್ತಿ, ಚಳಿಜೋಳ, ನೆಲಗಡಲೆ, ಈರುಳ್ಳಿ, ಮೆಣಸಿನಕಾಯಿ, ಹುರುಳಿ, ಅಲಸಂದೆ, ಎಚ್ಚು, ನವಣೆ, ಸಜ್ಜೆ, ಕೊತ್ತಂಬಲಿಯಂತಹ ಬಹುತೇಕ ಬೆಳೆಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ವಿಧಾನದ ಮೂಲಕ ಬೆಳೆಯುವ ಮೂಲಕ ರಾಷ್ಟ್ರಕ್ಕೆ ಮಾದಲ ಕೃಷಿಕರೆಂದು ಹೆಸರು ಗಆಕೆ. ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಮಿಶ್ರಬೆಳೆ ಪದ್ಧತಿ, ಅಂತರಬೆಳೆ ಪದ್ಧತಿ ಅನುಸಲಿಸಿ, ನಾಟಿಬೀಜ ಬಳಕೆ ಮೂಲಕ ಹೆಚ್ಚು ಇಳುವಲ ಮತ್ತು ಅಧಿಕ ವರಮಾನ ಪಡೆಯುತ್ತಿರುವ ಕೃಷಿಕರು.
ಡಾ|| ವಂದನಾಶಿವ, ಅರೋವಿಲ್ ಮದರ್ ಮತ್ತು ಬರ್ನಾಡ್ ಇವರ ವಿಚಾರಗಳಿಂದ ಪ್ರಭಾವಿತರಾದ ಪಲಸರ ಪ್ರೇಮಿ, ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆಯ ನಾಶ, ಹುಳುಗಳ ನಾಶ ಮುಂತಾದವುಗಳನ್ನು ತಡೆಗಟ್ಟಲು, ಸಸ್ಯಸಾರ, ಕಷಾಯ, ಸಗಣಿ ಇತ್ಯಾದಿಗಳ ಮೂಲಕ ಬೆಳೆರಕ್ಷಣೆಯನ್ನು ರೂಢಿಗೆ ತಂದ ಶ್ರಮಿಕರು. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಅಲ್ಲದೆ ದಕ್ಷಿಣ ಕೊಲಿಯಾ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ ರಾಷ್ಟ್ರಗಳಲ್ಲಿ ಸಂಚಲಸಿ ವಿಚಾರ ಸಂಕಿರಣಗಳ ಮೂಲಕ ಸಾವಯವ ಕೃಷಿ ಪ್ರಾಮುಖ್ಯತೆಯನ್ನು ಸಾಲದವರು.
ಆಕಾಶವಾಣಿ, ದೂರದರ್ಶನಗಳಲ್ಲಿ ಕೃಷಿ ಸಂದರ್ಶನ, ಭಾಷಣ, ಲೇಖನಗಳನ್ನು ಪ್ರಕಟಿಸಿರುವ ಶ್ರೀಯುತರು ಸ್ವಂತ ಪತ್ರಿಕೆ, ಸಹಜ ಸಾಗುವಳಿ, ಅಂಕಣಕಾರರು. ಭಾರತೀಯ ಸಾವಯವ ಬೇಸಾಯ ಸಂಘಟನೆಯ ರಾಷ್ಟ್ರಾಧ್ಯಕ್ಷರು, ಕೃಷಿ ವಿಜ್ಞಾನಗಳ ಸದಸ್ಯರು ಮುಂತಾದ ಕೃಷಿ ಸಂಬಂಧಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲ ಕಾರ್ಯನಿರ್ವಹಣೆ. ಹದಿನೆಂಟು ವರ್ಷಗಳ ಹಿಂದೆ ರೈತರೇ ಸ್ಥಾಪಿಸಿರುವ ಧಲತ್ರಿ ಸಂಸ್ಥೆ ಸ್ಥಾಪಕ ಸದಸ್ಯರು. ಸಾಯವಯ ಕೃಷಿ ಪ್ರಚಾರಕರು, ರೈತರ ಹಿತಚಿಂತಕರು ಶ್ರೀ ಡಿ.ಡಿ. ಭರಮಗೌಡ್ರ ಅವರು.

Categories
ಕೃಷಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಸ್. ತಿಮ್ಮೇಗೌಡ

೧. ಕೃಷಿಶಾಸ್ತ್ರಜ್ಞರಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವವರು ಡಾ. ಎಸ್. ತಿಮ್ಮೇಗೌಡ ಅವರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ೩೫ ವರ್ಷಗಳಿಗೂ ಮಿಗಿಲಾಗಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ೩೨ ಜನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಸುಸ್ಥಿರ ಕೃಷಿ, ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅಧ್ಯಯನ ನಡೆಸಿರುವ ಅನುಭವಿ ಕೃಷಿತಜ್ಞ ಡಾ. ಎಸ್. ತಿಮ್ಮೇಗೌಡ ಅವರು.

Categories
ಕೃಷಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹೆಚ್.ಆರ್. ಚಂದ್ರೇಗೌಡ

ಪದವೀಧರರಾದರೂ ಪಗಾರ ತರುವ ನೌಕರಿ ಸಿಗಲಿಲ್ಲವೆಂದು ನಿರಾಶರಾಗದೆ ಪ್ರಗತಿಶೀಲ ರೈತರಾಗಿ ಪ್ರಕೃತಿಯನ್ನು ಅಪ್ಪಿಕೊಂಡ ಅಪರೂಪದ ಕೃಷಿಕ ಶ್ರೀಯುತ ಹೆಚ್.ಆರ್. ಚಂದ್ರೇಗೌಡ ಅವರು.
ಚಿಕ್ಕಮಗಳೂರು ಜಿಲ್ಲೆಯ ಪುಟ್ಟ ಗ್ರಾಮ ಹಳಿಯೂರಿನ ಶ್ರೀಮಂತ ಕೃಷಿ ಕುಟುಂಬದಲ್ಲಿ ೧೯೫೨ರಲ್ಲಿ ಹುಟ್ಟಿದ ಶ್ರೀಯುತರು ಬಾಲ್ಯದಿಂದಲೂ ಹಿಡಿದ ಕಾರ್ಯ-ಸಾಧಿಸುವ ಛಲಗಾರರು. ಅವರ ಈ ಛಲ ಮತ್ತು ಅವಿರತ ದುಡಿಮೆ ಅವರನ್ನಿಂದು ಕೃಷಿತಜ್ಞರನ್ನಾಗಿಸಿದೆ. ೨೪ ಎಕರೆ ಜಮೀನಿನ ಯಶಸ್ವೀ ರೈತ ಒಡೆಯನೆನಿಸಿದೆ.
ಸಾವಯವ ಕೃಷಿಯನ್ನು ಸಾಕ್ಷಾತ್ಕರಿಸಿಕೊಂಡು ಮಳೆಯ ಹನಿಹನಿಯನ್ನೂ ಮಿತವಾಗಿ ಬಳಸಿಕೊಂಡು ಕೃಷಿಗೆ ಪೂರಕವಾಗಿ ಗೊಬ್ಬರ, ನೀರಾವರಿ, ಅರಣ್ಯ, ಹೈನುಗಾರಿಕೆ, ಎಲ್ಲದರಲ್ಲೂ ಯಶಸ್ವಿಯಾದ ಶ್ರೀಯುತರ ಸಾಧನೆಗೆ ಸಂದ ಗೌರವ ಪುರಸ್ಕಾರಗಳು ಹತ್ತಾರು.
‘ನೆಲ ನಂಬಿ ಕೆಟ್ಟವರಿಲ್ಲ’ ಎಂಬ ನಾಣ್ಣುಡಿಗೆ ತಕ್ಕಂತೆ ಬದುಕಿ ತೋರಿಸುತ್ತಿರುವ ನಾಡಿನ ರೈತ ಬಾಂಧವರಿಗೆ ಮಾದರಿಯಾಗಿರುವ ಆದರ್ಶ ಕೃಷಿಕ ಶ್ರೀ ಹೆಚ್.ಆರ್.ಚಂದ್ರೇಗೌಡರು.

Categories
ಕೃಷಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಂದ್ರಶೇಖರ್‌ ನಾರಾಯಣಪುರ

ಬೇಸಾಯ ಲಾಭದಾಯಕ ಎಂಬುದನ್ನು ನಿರೂಪಿಸಿದ ಕೃಷಿಪಂಡಿತರು ಎನ್.ಎಸ್. ಚಂದ್ರಶೇಖರ್, ನೈಸರ್ಗಿಕ ಕೃಷಿಯ ಪ್ರತಿಪಾದಕ, ರೈತರ ಆಶಾಕಿರಣ, ಆದರ್ಶ ಕೃಷಿರತ್ನ, ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿಯಲ್ಲಿ ೧೯೬೦ರಲ್ಲಿ ಜನಿಸಿದ ಚಂದ್ರಶೇಖರ್ ಮೂಲತಃ ಕೃಷಿಕರಾದರೂ ಬಹುರೂಪಿ, ೧೫ ವರ್ಷದ ಅನುಭವವುಳ್ಳ ಪತ್ರಿಕೋದ್ಯಮಿ, ಕರ್ನಾಟಕದ ಧಾರ್ಮಿಕ ಕೇಂದ್ರಗಳ ಅಧ್ಯಯನಕ್ಕಾಗಿ ೨೪ ಸಾವಿರ ಹಳ್ಳಿಗಳ ವೀಕ್ಷಿಸಿದ ಅಲೆಮಾರಿ, ೨೦೦೯ರಲ್ಲಿ ಕೃಷಿರಂಗಪ್ರವೇಶ, ಉಳುಮೆ ಮಾಡದೇ, ಗೊಬ್ಬರ ಬಳಸದೇ, ಔಷಧಿ ಸಿಂಪಡಿಸದೇ ನೈಸರ್ಗಿಕ ವಾತಾವರಣ ಸೃಷ್ಟಿಸಿ ಬೆಳೆಗಳ ಉತ್ಪಾದಿಸಿ ನೈಸರ್ಗಿಕ ಕೃಷಿಯಲ್ಲಿ ಬಂಡವಾಳಕ್ಕಿಂತ ಹತ್ತು ಪಟ್ಟು ಲಾಭ ತೋರಿಸಿದ ಪ್ರಗತಿಪರ ಕೃಷಿಕ, ಕಾಫಿ, ಕೋಕೋ, ಬಾಳೆ, ೧೦ ವಿಧದ ಹಣ್ಣಿನ ಗಿಡಗಳು, ಜಾಯಿಕಾಯಿ ಬೆಳೆದ ಕೃಷಿಋಷಿ, ನೈಸರ್ಗಿಕ ಕೃಷಿ ಕುರಿತು ೧೫೦೦ ರೈತರಲ್ಲಿ ಅರಿವು ಮೂಡಿಸಿದ ಹೆಗ್ಗಳಿಕೆ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ ಸಮ್ಮೇಳನ, ಆಕಾಶವಾಣಿ, ದೂರದರ್ಶನಗಳಲ್ಲಿ ಉಪನ್ಯಾಸ, ರೈತಬಳಗ ರಚಿಸಿ ಕೃಷಿ ಚಟುವಟಿಕೆ ಕುರಿತು ನಿರಂತರ ಸಮಾಲೋಚನೆ, ಪ್ರತಿಷ್ಠಿತ ಕೃಷಿಪಂಡಿತ ಪ್ರಶಸ್ತಿ, ವಾರಣಾಸಿಯ ಕೃಷಿರತ್ನ ಪ್ರಶಸ್ತಿ, ಗುಜರಾತ್ ಸರ್ಕಾರದ ಶ್ರೇಷ್ಠ ಕೃಷಿಕ ಪ್ರಶಸ್ತಿ ಇನ್ನಿತರ ಗೌರವಗಳಿಂದ ಭೂಷಿತರು, ಲೇಖಕರೂ ಆಗಿರುವ ಚಂದ್ರಶೇಖರ್ ಮಾದರಿ ಕೃಷಿಕರು.