Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪಾಪಮ್ಮ

ಹಳ್ಳಿ ಹಳ್ಳಿಗಳಲ್ಲಿ ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ, ಓದು ಬರಹ ಬಾರದ ಪರಿಶಿಷ್ಟ ಜಾತಿಯ ಬಡ ಕೃಷಿಕ ಮಹಿಳೆ ಶ್ರೀಮತಿ ಪಾಪಮ್ಮ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕುಂಭರಹಳ್ಳಿಯವರಾದ ಶ್ರೀಮತಿ ಪಾಪಮ್ಮ ಅವರ ಕುಟುಂಬ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇರುವ ಸ್ವಲ್ಪ ಜಮೀನಿನಲ್ಲಿಯೇ ವ್ಯವಸಾಯ ಮಾಡುತ್ತಿರುವ ಶ್ರೀಮತಿ ಪಾಪಮ್ಮ “ಗ್ರಾಮವಿಕಾಸ ಸಂಸ್ಥೆ’ಯ ಕ್ರಿಯಾಶೀಲ ಕಾರ್ಯಕರ್ತೆ. ಒಕ್ಕಲುತನದ ಹೊಸ ಆವಿಷ್ಕಾರಗಳತ್ತ ಅಪರಿಮಿತ ಆಸಕ್ತಿ. ಸಾವಯವ ಕೃಷಿಯ ಮಹತ್ವವನ್ನು ಅರಿತಿರುವ ಇವರು ಅದರ ಪ್ರಯೋಜನಗಳನ್ನು ರೈತರಿಗೆ ಮನಮುಟ್ಟುವಂತೆ ವಿವರಿಸಿ ವ್ಯಾಪಕ ಜನಜಾಗೃತಿಯನ್ನು ಉಂಟುಮಾಡುತ್ತಿದ್ದಾರೆ.
ಜಾನಪದ ಜಾತ್ರೆ, ಜನಪದ ವಸ್ತುಪ್ರದರ್ಶನ, ಮೊದಲಾದ ಮೇಳಗಳಲ್ಲಿ ಗ್ರಾಮವಿಕಾಸ ಸಂಸ್ಥೆಯ’ ಮೂಲಕ ಬಿತ್ತನೆ ಬೀಜಗಳ ಸಂಗ್ರಹ ಬ್ಯಾಂಕನ್ನು ತೆರೆದು ರೈತರಿಗೆ ನೆರವಾಗುತ್ತಿದ್ದಾರೆ.
ತಮ್ಮ ಉಪಜೀವನ ಕಾರ್ಯಗಳ ನಡುವೆಯೇ ಸಮಾಜಕ್ಕೆ ಹೇಗೆ ನೆರವಾಗಬಹುದೆಂಬುದಕ್ಕೆ ಜ್ವಲಂತ ನಿದರ್ಶನ ಶ್ರೀಮತಿ ಪಾಪಮ್ಮ.