Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ.ಪಿ. ಶೆಟ್ಟಿ

ಕೃಷಿ ಪ್ರಯೋಗಾಲಯದ ಫಲಿತಾಂಶಗಳನ್ನು ಕ್ಷೇತ್ರಕ್ಕೆ, ರೈತರ ಬಳಿಗೆ ಕೊಂಡೊಯ್ದ ಸಾಧನೆ ಡಾ. ಜಿ.ಪಿ.ಶೆಟ್ಟಿ ಅವರದು.
ಉಡುಪಿ ಜಿಲ್ಲೆಯ ಕಾಲ್ಲೊರೆಹಳ್ಳಿಯಲ್ಲಿ ೧೯೪೦ರಲ್ಲಿ ಕೃಷಿಕ ಕುಟುಂಬದಲ್ಲಿ ಜನನ. ಸಸ್ಯ ಶರೀರ ಕ್ರಿಯಾಶಾಸ್ತ್ರದಲ್ಲಿ ಎಂಎಸ್ಸಿ ಪದವಿ. ‘ಸಸ್ಯ ಶರೀರ ಕ್ರಿಯಾಶಾಸ್ತ್ರ ಮತ್ತು ಸಸ್ಯ ಪೋಷಕಾಂಶಗಳು’ ವಿಷಯದಲ್ಲಿ ಡಾಕ್ಟರೇಟ್ ಪದವಿ. ಶಿವಾಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿಂಬಕಾ‌ ಕೃಷಿ ಸಂಸ್ಥೆಯಲ್ಲಿ ಹತ್ತಿ ವಿಭಾಗದ ಪೋಷಕರಾಗಿ ಹಾಗೂ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಅಧಿಕಾರಿಯಾಗಿ ಅನನ್ಯ ಸೇವೆ.
ರಾಜ್ಯ ಸರ್ಕಾರದ ಸ್ವಉದ್ಯೋಗ ಯೋಜನೆಯಡಿ ಲಘು ಪೋಷಕಾಂಶಗಳು ಮತ್ತು ಮಧ್ಯಮ ಪೋಷಕಾಂಶಗಳ ಬಗ್ಗೆ ಸಂಶೋಧನೆ ನಡೆಸಿರುವ ಶ್ರೀಯುತರು ಲಘು ಪೋಷಕಾಂಶ ಉತ್ಪಾದನಾ ಘಟಕಗಳ ಸ್ಥಾಪಕರು. ಲಘು ಪೋಷಕಾಂಶ ಉಪಯೋಗ ಕುರಿತು ಕೃಷಿಕರಿಗೆ, ಕೃಷಿ ಸಂಸ್ಥೆಗಳಿಗೆ ಶ್ರೀಯುತರು ಮಾರ್ಗದರ್ಶಿ, ಆ ಮೂಲಕ ದೇಶದ ಲಘು ಪೋಷಕಾಂಶ ಉದ್ಯಮದ ಪಿತಾಮಹರೆನಿಸಿರುವರು.
ಸಾವಯವ ಗೊಬ್ಬರ ಕುರಿತು ರೈತರಿಗೆ ತಿಳಿವಳಿಕೆ ನೀಡುವ ಕೃಷಿ ವಿಜ್ಞಾನಿ ಶೆಟ್ಟಿ ಅವರು ಮುಂದಾಲೋಚನೆಯುಳ್ಳ ಕುಶಲ ಉದ್ಯಮಿಯೂ ಹೌದು. ಅವರು ಬರೆದಿರುವ ಬಹುಪಯೋಗಿ ಸಂಶೋಧನಾ ಲೇಖನಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಪ್ರಕಾಶಿಸಿವೆ.
ಶ್ರೀಯುತರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಅಖಿಲ ಭಾರತೀಯ ಸಾಧಕರ ಸಮ್ಮೇಳನದಲ್ಲಿ ಗೌರವ, ರಾಷ್ಟ್ರೀಯ ಒಕ್ಕೂಟ ಪ್ರಶಸ್ತಿ ಸಂದಿದೆ. ಪ್ರಸ್ತುತ ಅವರು ಜೈವಿಕ ಕೀಟನಾಶಕ ಸಂಶೋಧನಾ ಮಂಡಳಿಯ ಹಾಗೂ ಕೇಂದ್ರ ಸರ್ಕಾರದ ಕೃಷಿ ವ್ಯವಹಾರ ಕಾರ್ಯನಿರತ ಮಂಡಳಿ ಸದಸ್ಯರು.
ರೈತರಿಗೆ ನೆರವಾಗುತ್ತ ಕ್ರಿಯಾಶೀಲತೆ ಮತ್ತು ಸಂಶೋಧನಾ ಪ್ರವೃತ್ತಿ ರೂಢಿಸಿಕೊಂಡ ಕೃಷಿ ವಿಜ್ಞಾನಿ ಶ್ರೀ ಡಾ. ಜಿ.ಪಿ.ಶೆಟ್ಟಿ.