Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಹಮ್ಮಣ್ಣ ಮಾಣಿ ನಾಯಕ

ಕರ್ನಾಟಕದ ಬಾರ್ಡೋಲಿ ಎಂದು ಖ್ಯಾತಿ ಪಡೆದ ಉತ್ತರ ಕನ್ನಡಜಿಲ್ಲೆ ಅಂಕೋಲಾ ತಾಲ್ಲೂಕಿನ ಶೆಟಗೇರಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ೯೨ ವರ್ಷ ಹರೆಯದ ಹಿರಿಯ ಗಾಂಧೀವಾದಿ ಶ್ರೀ ಹಮ್ಮಣ್ಣ ಮಾಣಿ ನಾಯಕ ಅವರು. ತಮ್ಮ ೧೪ನೆ ವಯಸ್ಸಿನಲ್ಲಿಯೆ, ಭಾರತದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಶ್ರೀ ಹಮ್ಮಣ್ಣ ನಾಯಕ ಅವರು ಉಪ್ಪಿನ ಸತ್ಯಾಗ್ರಹ, ಕಾಯಿದೆ ಭಂಗ ಚಳುವಳಿ, ಕರನಿರಾಕರಣೆ ಸಂಗ್ರಾಮ, ಚಲೇಜಾವ್‌ ಚಳುವಳಿ ಮೊದಲಾದ ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಸಾರಿ ಜೈಲುವಾಸ ಅನುಭವಿಸಿದವರು.
೧೯೩೨ ರಲ್ಲಿ ಮಹಾತ್ಮಾ ಗಾಂಧೀಜಿಯವರು ಅಂಕೋಲೆಗೆ ಬಂದಾಗ ಸ್ವಯಂ ಸೇವಕರಾಗಿ ಅವರ ಮೆಚ್ಚುಗೆ ಪಡೆದವರು. ಕೇಂದ್ರ ಸರ್ಕಾರದಿಂದ ತಾಮ್ರಪಟ ಪ್ರಶಸ್ತಿ ಪಡೆದ ಕೆಲವೇ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶ್ರೀ ಹಮ್ಮಣ್ಣ ನಾಯಕರೂ ಒಬ್ಬರು.
ಸರ್ಕಾರ ಕೊಡುತ್ತಿರುವ ಸ್ವಾತಂತ್ರ್ಯಯೋಧರ ಗೌರವಧನದಲ್ಲಿ ಬಹುಭಾಗವನ್ನು ಬಡ ಮಕ್ಕಳ ಶಿಕ್ಷಣಕ್ಕೆ, ಬಡರೋಗಿಗಳ ಚಿಕಿತ್ಸೆಗೆ, ಹರಿಜನರ ಶವಸಂಸ್ಕಾರಕ್ಕೆ ನೀಡುತ್ತಿರುವ ಕರುಣಾಳು ಇವರು.
ಈ ತಮ್ಮ ಇಳಿವಯಸ್ಸಿನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಮೆರವಣಿಗೆಗಳಲ್ಲಿ ಪ್ರತಿವರ್ಷ ತಪ್ಪದೆ ಭಾಗವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ಭಾರತದ ಮಾಜಿ ಪ್ರಧಾನಿ ಲಾಲಬಹಾದ್ದೂರ್ ಶಾಸ್ತ್ರಿ ಅವರು ಪ್ರತಿ ಸೋಮವಾರ ರಾತ್ರಿ ಒಂದು ಊಟ ಬಿಡಿ ಎಂದು. ಅಂದು ನೀಡಿದ್ದ ಕರೆಗೆ ಓಗೊಟ್ಟು ಸೋಮವಾರ ಮಾತ್ರ ಏಕೆ ಪ್ರತಿ ದಿನವೂ ಒಂದೇ ಹೊತ್ತು ಶಾಖಾಹಾರದ ಊಟಮಾಡುವುದಾಗಿ ಸಂಕಲ್ಪ ಕೈಗೊಂಡು ಇಂದಿಗೂ ಅದನ್ನು ಪರಿಪಾಲಿಸುತ್ತಿದ್ದಾರೆ.
ಅಪ್ಪಟ ಗಾಂಧಿವಾದಿ, ಅಖಂಡ ರಾಷ್ಟ್ರಪ್ರೇಮಿ, ಸಂಪೂರ್ಣ ಖಾದಿಧಾರಿ, ಗಾಂಧಿ ಯುಗದ ಹಿರಿಯ ಕೊಂಡಿ ಶ್ರೀ ಹಮ್ಮಣ್ಣ ಮಾಣಿ ನಾಯಕ, ಶೆಟಗೇರಿ ಅವರು.