Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಕೆ. ಶಿವನ್

ಭಾರತೀಯ ಬಾಹ್ಯಾಕಾಶ ವಿಜ್ಞಾನದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ಡಾ. ಕೆ.ಶಿವನ್. ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ನಿಕಟಪೂರ್ವ ಅಧ್ಯಕ್ಷರು, ಚಂದ್ರಯಾನ–೨ರ ರೂವಾರಿ, ಅಜ್ಞಾತ ನೆಲೆಯಿಂದ ಅರಳಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದಕ್ಷತೆ ಮೆರೆದ ವಿಶಿಷ್ಟ ಪ್ರತಿಭೆ ಡಾ. ಕೆ.ಶಿವನ್‌. ೧೯೫೭ರ ಏಪ್ರಿಲ್ ೧೪ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಬಳಿಯಿರುವ ಮೇಳ ಸರಕ್ಕಲ್ವಲೈ ಗ್ರಾಮದಲ್ಲಿ ಜನಿಸಿದ ಶಿವನ್ ತಂದೆ ಕೃಷಿಕರು, ಬಡಕುಟುಂಬದ ಕುಡಿ, ಅಕ್ಷರವೇ ಸಾಧನೆಗೆ ಮೆಟ್ಟಲು. ಸರ್ಕಾರಿ ಶಾಲೆಯಲ್ಲಿ ತಮಿಳು ಮಾಧ್ಯಮದಲ್ಲಿ ಕಲಿತ ಶಿವನ್ ಪರಿವಾರ ಮೊಟ್ಟಮೊದಲ ಪದವೀಧರರು. ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರ್ ಪದವಿ ಪಡೆದ ಶಿವನ್ ೮೨ರಲ್ಲಿ ಭಾರತೀಯ ವಿಜ್ಞಾನಸಂಸ್ಥೆಯಲ್ಲಿ ಬಾಹ್ಯಾಕಾಶ ಇಂಜಿನಿಯಲಿಂಗ್‌ನಲ್ಲಿ ಸ್ನಾತಕೋತ್ತರ ಪದವಿ, ಬಾಂಬೆಯ ಐಎಸ್ಸಿಯಿಂದ ಪಿಎಚ್‌ಡಿ ಪಡೆದ ಶಿವನ್ ಇಸ್ರೋದ ಪಿಎಸ್‌ಎಲ್‌ಐ ಯೋಜನೆಯ ಭಾಗವಾಗುವುದರೊಂದಿಗೆ ವೃತ್ತಿ ಬದುಕು ಆರಂಭಿಸಿದರು. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಹಾಗೂ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕ, ಪ್ರತಿಷ್ಠಿತ ಇಸ್ರೋದ ಅಧ್ಯಕ್ಷರಾಗಿ ನಾಲ್ಕು ವರ್ಷ ಗುರುತರ ಸೇವೆ. ಬಹುನಿರೀಕ್ಷಿತ ಚಂದ್ರಯಾನ-೨ರ ರೂವಾರಿಯಾಗಿ ಸಂಪೂರ್ಣ ಸಫಲತೆ ಕಾಣದೇ ನೊಂದರೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೊಳಗಾದ ಸಾಧಕರು.