Categories
ಕೃಷಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವೇಶ್ವರ ಸಜ್ಜನ್

ಒಣಭೂಮಿ ಬೇಸಾಯವನ್ನೇ ಬದುಕಾಗಿಸಿಕೊಂಡು ಬಂಗಾರದ ಬೆಳೆ ಬೆಳೆದವರು ವಿಶ್ವೇಶ್ವರ ಸಜ್ಜನ್, ಸಾವಯವ ಕೃಷಿಯಲ್ಲಿ ಯಶಸ್ಸಿನ ಹೊಸ ದಾಖಲೆ ಬರೆದ ಆದರ್ಶ ಕೃಷಿಕರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆಯವರಾದ ವಿಶ್ವೇಶ್ವರ ಸಜ್ಜನ್ ಕನ್ನಡದ ಸ್ನಾತಕೋತ್ತರ ಪದವೀಧರರು. ಕೃಷಿಯಲ್ಲಿ ಆಸಕ್ತಿ ಮೊಳಕೆಯೊಡೆದು ಬೇಸಾಯಕ್ಕಿಳಿದವರು. ಪಾಲಿಗೆ ಬಂದ ಐದು ಎಕರೆ ಒಣಭೂಮಿಯೇ ಕರ್ಮಭೂಮಿ, ಬರ ಮತ್ತು ಅಕಾಲಿಕ ಮಳೆಯ ಮಧ್ಯೆಯೇ ಸಾವಯವ ಕೃಷಿಯಿಂದ ಒಂದೂವರೆ ಎಕರೆಯಲ್ಲಿ ಬೇಲದ ಹಣ್ಣು, ಎರಡು ಎಕರೆಯಲ್ಲಿ ಬೆಟ್ಟದ ನೆಲ್ಲಿಕಾಯಿ, ಮತ್ತೊಂದು ಎಕರೆಯಲ್ಲಿ ಜಂಬೂ ನೇರಳೆ ಬೆಳೆದ ಸಾಧಕರು.ಬೇಲದ ಜ್ಯೂಸ್, ಪೇಡ, ರಸಂ, ಟೀಪೌಡರ್ ತಯಾರಿಕೆ, ಹತ್ತು ದೇಸೀ ಗೀರ್ ತಳಿಯ ಗೋವುಗಳ ಸಾಕಣೆ, ಅವುಗಳ ಹಾಲಿನಿಂದಲೂ ಪೇಡ, ಗೋಮೂತ್ರ, ಆರ್ಕ ಮತ್ತು ತುಪ್ಪ ತಯಾರಿಸಿ ಮಾರಾಟ ಮಾಡಿ ಗೆದ್ದವರು. ಕೃಷಿ ಆದಾಯದಲ್ಲೇ ನಾಲ್ಕಾರು ಜನರಿಗೆ ಉದ್ಯೋಗ ಕಲ್ಪಿಸಿರುವ ಸಜ್ಜನ್ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ನೈಜ ಕೃಷಿಋಷಿ.