Categories
ರಾಜ್ಯೋತ್ಸವ 2014 ಲಲಿತಕಲೆ ಶಿಲ್ಪಕಲೆ

ಖಾಸೀಂ ಕನ್ಧಾವಿ

ಖಾಸೀಮ್ ಕಾವಿ ಅವರು ನಾಡಿನ ಹೆಸರಾಂತ ಚಿತ್ರ ಕಲಾವಿದರು. ಚಿತ್ರಕಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದ ಇವರು ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಬಹುಮಾನಗಳಿಗೆ ಪಾತ್ರರಾಗಿದ್ದರು. ಆ ನಂತರ ದೇಶದ ಅನೇಕ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲುಗೊಂಡಿದ್ದ ಖಾಸೀಂ ಕಾವಿ ಅವರು ಏಕ ವ್ಯಕ್ತಿ ಪ್ರದರ್ಶನಗಳನ್ನು ಸಮೂಹ ಚಿತ್ರಕಲಾ ಪ್ರದರ್ಶನಗಳನ್ನು ನಾಡಿನುದ್ದಕ್ಕೂ ನಡೆಸಿದ್ದು ಅನೇಕ ರಾಷ್ಟ್ರಮಟ್ಟದ ಕಲಾವಿದರ ಶಿಬಿರಗಳಲ್ಲಿಯೂ ಪಾಲುಗೊಂಡಿದ್ದಾರೆ. ಇವರ ಚಿತ್ರಕಲಾಕೃತಿಗಳು ದೇಶ ವಿದೇಶಗಳ ಸಂಗ್ರಹಗಳಲ್ಲಿದೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ಲಕ್ಷ್ಮೀ ರಾಮಪ್ಪ

ಲಕ್ಷ್ಮೀ ರಾಮಪ್ಪ ಅವರು ಕಳೆದ ೪೦ ವರ್ಷಗಳಿಂದ ಅವರ ವಂಶ ಪರಂಪರೆಯಾದ ಹಸೆ ಚಿತ್ತಾರವನ್ನು ಹಸೆಗೋಡೆ ಚಿತ್ತಾರ, ತೇರಿನ ಚಿತ್ತಾರ, ಭೂಮಿ ಹುಣ್ಣಿಮೆ ಬುಟ್ಟಿ, ಭತ್ತದಿಂದ ಮಾಡುವ ತೋರಣ, ಗೂಡು, ಅರಳಿಎಲೆ, ಜುಮುಕಿ ಹಾಗೂ ಕಳಸದಕಡಿ, ವಿವಿಧ ಕಲಾಕೃತಿಗಳ ನಿರ್ಮಾಣ ಮತ್ತು ಸೋಬಾನೆ ಪದ, ಭತ್ತ ಕಟ್ಟುವ ಹಾಡು, ಬೀಡುವ ಹಾಡು, ನಾಟ ಹಾಡು, ದೀಪಾವಳಿ ಹಾಗೂ ಗೌರಿ-ಗಣೇಶ ಹಬ್ಬದ ಹಾಡುಗಳನ್ನು ಹಾಡುತ್ತಾರೆ.

ಚಿತ್ತಾರ ಕಲೆಯ ಜೊತೆಗೆ ಗ್ರಾಮ್ಯ ಜಗತ್ತಿನಲ್ಲಿ ಜನಪ್ರಿಯವಾದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಲಕ್ಷ್ಮಿ ರಾಮಪ್ಪ ಅವರ ಕಲಾ ಪ್ರತಿಭೆಯನ್ನು ಗುರುತಿಸಿ ಹಲವಾರು ಗೌರವ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ವೈ. ಯಂಕಪ್ಪ

ಕರ್ನಾಟಕದಲ್ಲಿ ದೇವಾಲಯಗಳಿಗೆ ಗೋಪುರಗಳನ್ನು ನಿರ್ಮಿಸುವಲ್ಲಿ ನೈಪುಣ್ಯತೆ ಹೊಂದಿರುವ ವೈ, ಯಂಕಪ್ಪ ಅವರು ವಿದ್ಯಾಭ್ಯಾಸದಲ್ಲಿ ಹೆಚ್ಚು ದಿನ ಮುಂದುವರೆಯದಿದ್ದರೂ ಶಿಲ್ಪಕಲೆಯಲ್ಲಿ ವಿಶೇಷವಾಗಿ ಗೋಪುರ ಹಾಗೂ ಸಭಾಮಂಟಪಗಳನ್ನು ನಿರ್ಮಿಸುವಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡವರು.

ನಮ್ಮ ನಾಡಿನ ಶ್ರೇಷ್ಠ ವಾಸ್ತು ಶಿಲ್ಪ ಶೈಲಿಯನ್ನು ವಿಶ್ವನಾಥ ನಾಯ್ಡು ಅವರಿಂದ ಕಲಿತು ವಾಸ್ತು ಶಿಲ್ಪವನ್ನು ಬದುಕಿಗಾಗಿ ಆರಿಸಿಕೊಂಡು ನಡೆದದ್ದು ಗ್ರಾಮೀಣ ಪ್ರದೇಶಕ್ಕೆ ದಾವಣಗೆರೆಯವರಾದ ಯಂಕಪ್ಪ ಸುತ್ತಮುತ್ತಲ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅಸಂಖ್ಯಾತ ಗುಡಿ ಗೋಪುರಗಳನ್ನು ಸಭಾ ಮಂಟಪಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಮೂರು ದಶಕಗಳಿಂದ ಅನೇಕ ಗೋಪುರ ಹಾಗೂ ಸಭಾಮಂಟಪಗಳನ್ನು ವಿಭಿನ್ನ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಶಿಲ್ಪಿ ಯಂಕಪ್ಪ ಅವರು ಒಂದೊಂದು ದೇವಾಲಯವನ್ನೂ ವಿಭಿನ್ನ ರೀತಿಯಲ್ಲಿ ನಿರ್ಮಾಣ ಮಾಡುವಲ್ಲಿ ನಿಪುಣರು. ಶಿಲ್ಪಕಲಾ ಅಕಾಡೆಮಿಯ ಗೌರವವನ್ನೂ ಪಡೆದಿರುವ ಯಂಕಪ್ಪನವರು ಅನೇಕ ಪ್ರಶಸ್ತಿ – ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ ಶಿಲ್ಪಕಲೆ

ಚಂದ್ರಶೇಖರ್ ವೈ. ಶಿಲ್ಪ

ಚಂದ್ರಶೇಖರ .ವೈ. ಶಿಲ್ಪಿ ಅವರು ಲೋಹ, ಶಿಲೆ ಹಾಗೂ ಕಾಷ್ಠ ಶಿಲ್ಪಿಗಳಾಗಿ ಹೆಸರು ಮಾಡಿದವರು. ಕಠಿಣ ಅಭ್ಯಾಸದಿಂದ ಶಿಲ್ಪಕಲೆಯಲ್ಲಿ ನೈಪುಣ್ಯತೆ ಪಡೆದ ಚಂದ್ರಶೇಖರ .ವೈ. ಶಿಲ್ಪಿ ಅವರು ದ್ವಾರಬಾಗಿಲುಗಳು, ದೇವರಮನೆ ಬಾಗಿಲು ಕೆತ್ತುವಲ್ಲಿ ಪರಿಣತರು. ಚಾಳುಕ್ಯ ಹಾಗೂ ರಾಷ್ಟ್ರಕೂಟ ಶೈಲಿಯಲ್ಲಿ ಶಾಸ್ತ್ರಬದ್ಧವಾದ ವಿಗ್ರಹಗಳ ರಚನೆಯಲ್ಲಿ ನೈಮಣ್ಯತೆ ಪಡೆದಿರುವ ಇವರು ದೇವಾನುದೇವತೆಗಳ ವಿಗ್ರಹಗಳ ಕೆತ್ತನೆಯಲ್ಲಿ ಖ್ಯಾತಿ ಪಡೆದಿದ್ದಾರೆ.

ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿದ್ದು ಇವರ ಅನೇಕ ಕೃತಿಗಳು ದೇಶ-ವಿದೇಶಗಳ ಅನೇಕ ಸಂಗ್ರಹಗಳಲ್ಲಿದ್ದು ಶಿಲ್ಪಕಲೆಯಲ್ಲಿ ಅನೇಕ ಯುವಜನರನ್ನು ಚಂದ್ರಶೇಖರ .ವೈ. ಶಿಲ್ಪಿಗಳು ಗುರುಕುಲ ಪದ್ಧತಿಯಲ್ಲಿ ತಯಾರು ಮಾಡುತ್ತಿದ್ದಾರೆ. ಇವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶಿ ಜೆ.ಎಂ.ಎಸ್. ಮಣಿ

ತಾವು ಅಭ್ಯಾಸ ಮಾಡಿದ ಶಾಲೆಗೆ ಇಂದು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಜೆ.ಎಂ.ಎಸ್‌. ಮಣಿ ಅವರು ನಾಡಿನ ಹಿರಿಯ ಚಿತ್ರಕಲಾವಿದರಲ್ಲೊಬ್ಬರು.
ಡ್ರಾಯಿಂಗ್ ಹಾಗೂ ಚಿತ್ರಕಲೆ ಡಿಪ್ಲೊಮಾ ತರಗತಿಗಳಲ್ಲಿ ಮೊದಲ ಬ್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದ ಶ್ರೀ ಜೆ.ಎಂ.ಎಸ್. ಮಣಿ ಅವರು ಕರ್ನಾಟಕ ಲಲಿತಕಲಾ ಅಕಾಡಮಿಯಿಂದ ಪ್ರತಿಭಾವಂತ ವಿದ್ಯಾರ್ಥಿ ಎಂಬ ಬಹುಮಾನ ಪಡೆದವರು.
೧೯೭೯ರಿಂದ ದೇಶವಿದೇಶಗಳಲ್ಲಿ ಸತತವಾಗಿ ಏಕಕಲಾ ಪ್ರದರ್ಶನಗಳನ್ನು ನಡೆಸಿರುವ ಶ್ರೀ ಜೆ.ಎಂ.ಎಸ್. ಮಣಿ ಮ್ಯಾಂಚೆಸ್ಟರ್‌ನಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನದಲ್ಲಿಯೂ ಪಾಲ್ಗೊಂಡವರು.
ಕರ್ನಾಟಕ ಕಲಾಯಾತ್ರೆಯೂ ಸೇರಿದಂತೆ ಹಲವಾರು ಕಲಾ ಪ್ರದರ್ಶನಗಳಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿರುವ ಶ್ರೀ ಜೆ.ಎಂ.ಎಸ್. ಮಣಿ ಯವರು ಹತ್ತಾರು ಕಲಾಶಿಬಿರ ಹಾಗೂ ಕಾರಾಗಾರಗಳಲ್ಲಿ ಭಾಗವಹಿಸಿದ್ದಾರೆ.
ಅನೇಕ ಸರ್ಕಾರಿ ಗ್ಯಾಲರಿಗಳು ಹಾಗೂ ಖಾಸಗಿ ಸಂಗ್ರಹಗಳಲ್ಲಿ ಶ್ರೀ ಜೆ.ಎಂ.ಎಸ್. ಮಣಿ ಅವರ ಕೃತಿಗಳು ಪ್ರದರ್ಶನಕ್ಕಿದ್ದು ಪ್ರಸ್ತುತ ಅವರು ಕೆನ್ ಕಲಾಶಾಲೆಯ ಪ್ರಾಂಶುಪಾಲರಾಗಿದ್ದಾರೆ.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀಮತಿ ರೇಖಾರಾವ್

ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಶ್ರೀಮತಿ ರೇಖಾರಾವ್‌ ಪ್ರಸಿದ್ಧ ಕಲಾವಿದರಾದ ಕೆ.ಕೆ. ಹೆಬ್ಬಾರ್ ಅವರ ಮಗಳು.
ತಂದೆಯವರಲ್ಲಿಯೇ ಚಿತ್ರಕಲೆ ಅಭ್ಯಾಸ ಮಾಡಿದ ಶ್ರೀಮತಿ ರೇಖಾರಾವ್ ೧೯೭೦ರ ದಶಕದಲ್ಲಿಯೇ ತಮ್ಮ ರಚನೆಗಳಿಂದ ಚಿತ್ರಾಸಕ್ತರ ಗಮನ ಸೆಳೆದರು.
ನವದೆಹಲಿ, ಮುಂಬೈ, ಬರೋಡ, ಜರ್ಮನಿ, ಅಮೇರಿಕಾ ದೇಶಗಳಲ್ಲಿ ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ಏರ್ಪಡಿಸಿರುವ ಶ್ರೀಮತಿ ರೇಖಾರಾವ್‌ ಅವರು ದೇಶದ ಹಲವು ನಗರಗಳಲ್ಲಿ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ.
ಲಲಿತಕಲಾ ಅಕಾಡಮಿ ಏರ್ಪಡಿಸಿದ್ದ ಪಂಡಿತ್ ನೆಹರೂ ಅವರಿಗೆ ಶ್ರದ್ದಾಂಜಲಿ, ಹೆಲ್ವೇಜ್ ಇಂಡಿಯಾ ಪ್ರದರ್ಶನ, ಮಕ್ಕಳ ರಕ್ಷಣೆ ಹೀಗೆ ಹಲವಾರು ಸಮಕಾಲೀನ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಶ್ರೀಮತಿ ರೇಖಾರಾವ್‌ ಹಲವಾರು ಚಿತ್ರಕಲಾವಿದರ ಶಿಬಿರಗಳಲ್ಲಿ, ಕಾರಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ದೇಶವಿದೇಶಗಳ ಹಲವು ಗ್ಯಾಲರಿಗಳಲ್ಲಿ ಶ್ರೀಮತಿ ರೇಖಾರಾವ್ ಅವರ ಚಿತ್ರಕೃತಿ ಸಂಗ್ರಹವಿದೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಆರ್. ವೀರಭದ್ರಾಚಾರ್

ಸಹಜ ಕಲಾಕೌಶಲ್ಯ ಮತ್ತು ಇಚ್ಛಾಶಕ್ತಿಯಿಂದ ಪ್ರತಿಭಾನ್ವಿತ ಶಿಲ್ಪಿಯಾಗಿ ಅರಳಿದವರು ಶ್ರೀ ಆರ್. ವೀರಭದ್ರಾಚಾರ್. ಜನನ ೧೯೪೦. ಕುಶಲ ಕಲಾವಿದರ ಮಾರ್ಗದರ್ಶನದಿಂದ ಬೆಳ್ಳಿವಿಗ್ರಹ ರಚನೆಯಲ್ಲಿ ತರಬೇತಿ ಮತ್ತು ಲೋಹ ಶಿಲ್ಪಕಲೆಯಲ್ಲಿ ನಿಪುಣತೆ ಪಡೆದರು. ತಮ್ಮ ೧೮ನೆಯ ವಯಸ್ಸಿನಲ್ಲಿ ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಮಾಸ್ಟರ್ ಕ್ರಾಫ್ಟ್ಮನ್ ಆಗಿ ವೃತ್ತಿ ಜೀವನದ ಆರಂಭ. ೧೯೫೫ರಲ್ಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಹಿರಿಯ ಮಾಡೆಲ್ಗಾರರಾಗಿ ಸೇರಿದ್ದು, ೧೯೮೨ರಲ್ಲಿ ಪ್ರಧಾನ ಮಾಡಲ ಆಗಿ ನಿವೃತ್ತರಾದರು.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರಾಡುವ ಗಂಧರ್ವರು ಶಿಲ್ಪದ ಪ್ರತಿರೂಪದ ರಚನೆ, ಕುರುಕ್ಷೇತ್ರದ ಶ್ರೀಕೃಷ್ಣ ಮ್ಯೂಸಿಯಂನಲ್ಲಿ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಶಿಲ್ಪಗಳು, ಹಂಪಿಯ ಮೂಲ ವಿಗ್ರಹಕ್ಕೆ ಮುಖವಾಡ ರಚನೆ ಶ್ರೀಯುತರ ಪ್ರಮುಖ ಸಾಧನೆಗಳಾಗಿವೆ. ೧೯೯೮ನೇ ಸಾಲಿನ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಆರ್. ವೀರಭದ್ರಾಚಾರ್ ಅವರ ಸಾಧನೆಗೆ ೮೪ ಅಡಿ ಬೃಹತ್ ಆದಿನಾಥ ಪ್ರತಿಮೆಯು ದ್ಯೋತಕವಾಗಿದೆ. ಕಲಾನೈಪುಣ್ಯದಿಂದ ರಚಿಸಿದ ಮಹಾತ್ಮಾ ಗಾಂಧೀಜಿ, ಬುದ್ಧ, ಲುಂಬಿನಿ ಸ್ತಂಭಗಳಿಂದ ಎಲ್ಲರ ಶ್ಲಾಘನೆಗೆ ಪಾತ್ರರಾದವರು ಶ್ರೀ ಆರ್. ವೀರಭದ್ರಾಚಾರ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಭಾಸ್ಕರರಾವ್

ಚಿತ್ರಕಲಾ ಕ್ಷೇತ್ರದಲ್ಲಿ ಅಪಾರವಾದ ಪ್ರಸಿದ್ಧಿಯನ್ನು ಪಡೆದಿರುವ ಶ್ರೀ ಯು. ಭಾಸ್ಕರರಾವ್ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ.
೧೯೭೧ ಹಾಗೂ ೧೯೯೦ರಲ್ಲಿ ಬೆಂಗಳೂರು, ೧೯೯೪ರಲ್ಲಿ ಚೆನ್ನೈ ಹಾಗೂ ಇನ್ನಿತರ ಹಲವಾರು ಸ್ಥಳಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿರುವ ಶ್ರೀ ಭಾಸ್ಕರರಾವ್ ಅವರು ಬೆಂಗಳೂರು ಮತ್ತು ಮುಂಬೈಗಳಲ್ಲಿ ಏಳಕ್ಕೂ ಹೆಚ್ಚು ಸಮೂಹ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಇದಲ್ಲದೆ ಹತ್ತು ಹಲವು ಪ್ರದರ್ಶನಗಳ ಮೂಲಕ ಚಿತ್ರಕಲಾಸಕ್ತರ ಗಮನ ಸೆಳೆದಿರುವ ಶ್ರೀ ಯು. ಭಾಸ್ಕರರಾವ್ ಅವರು ಬೆಂಗಳೂರಿನ ದೊಡ್ಡ ಗಣೇಶ ದೇವಾಲಯ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್, ಮಂಜುನಾಥಸ್ವಾಮಿ ಚೌಲ್ಟಿ, ಸೇಂಟ್ ಮಾರ್ಕ್ಸ್ ಹೋಟೆಲ್ಗಳಲ್ಲಿನ ಭಿತ್ತಿಚಿತ್ರಗಳ ಮೂಲಕ ತಮ್ಮ ಚಿತ್ರಕಲಾ ಪ್ರತಿಭೆಯನ್ನು ಜನರ ಬಳಿಗೂ ಕೊಂಡೊಯ್ದವರು.
ಶ್ರೀಯುತರು ಕರ್ನಾಟಕ ಕಲಾ ಮೇಳದಲ್ಲಿ ೧೯೮೦ರಿಂದ ೯೩ರ ವರೆಗೂ ಆರು ಬಾರಿ ಭಾಗವಹಿಸಿರುವರಲ್ಲದೆ, ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಶಿಲ್ಪಕಲಾವಿದರ ಶಿಬಿರ, ಸಾರ್ಕ್ ಸಮ್ಮೇಳನ ಸಂದರ್ಭದ ಚಿತ್ರಕಲಾ ಪರಿಷತ್ತು ಸಂಘಟಿಸಿದ ರಾಷ್ಟ್ರೀಯ ಕಲಾವಿದರ ಶಿಬಿರದಂತಹ ಅತ್ಯಂತ ಮಹತ್ವದ ಶಿಬಿರಗಳಲ್ಲಿ ಭಾಗವಹಿಸಿದ ಹೆಮ್ಮೆ ಇವರದು.
ಕರ್ನಾಟಕ ಲಲಿತಕಲಾ ಅಕಾಡೆಮಿ ಪುರಸ್ಕಾರ ಪಡೆದಿರುವ ಶ್ರೀ ಯು. ಭಾಸ್ಕರರಾವ್ ಅವರು ನಾಡು ಹೆಮ್ಮೆಪಡುವ ಚಿತ್ರಕಲಾವಿದರಾಗಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಹೀರಾಲಾಲ್ ಮಾರಿ

ವೃತ್ತಿಯಿಂದ ಟೈಲರ್, ಪ್ರವೃತ್ತಿಯಿಂದ ಚಿತ್ರಕಲಾವಿದರಾದವರು ಶ್ರೀ ಹಿರಾಲಾಲ್ ಮಲ್ಲಾರಿ ಅವರು.
೧೯೩೪ರಲ್ಲಿ ರಾಯಚೂರಿನಲ್ಲಿ ಜನನ. ಅತ್ಯಂತ ಬಡಕುಟುಂಬದಲ್ಲಿ ಮನೆಯ ಹಿರಿಯ ಮಗನಾಗಿ ಪ್ರಾಥಮಿಕ ಶಾಲೆಯವರೆಗೆ ಮಾತ್ರ ಕಲಿಕೆ. ನಂತರ ಟೈಲರ್ ವೃತ್ತಿಯ ಆರಂಭ. ಬಿಡುವಿನ ವೇಳೆಯಲ್ಲಿ ಚಿತ್ರರಚನೆ ಅಭ್ಯಾಸ. ಕಲ್ಲು, ಬಂಡೆ, ಗೋಡೆ, ಕಾಗದ, ಸಿಕ್ಕ ಸಿಕ್ಕಲ್ಲಿ ಕಲಾವಿದನ ಮನದಲ್ಲಿ ಮೂಡುವ ಭಾವನೆಗಳಿಗೆ ಚಿತ್ರರೂಪ. ಹವ್ಯಾಸಿ ಕಲಾವಿದರಾಗಿ ಕಲಾಕ್ಷೇತ್ರ ಪ್ರವೇಶಿಸಿದ ಶ್ರೀ ಹಿರಾಲಾಲ್ ಕಲಾವಿದ ಎಂ. ಶಂಕರರಾವ್ ಅವರ ಶಿಷ್ಯರಾಗಿ ಕಲಾವಿದರಾಗಿ ಬೆಳೆದಿರುವುದು ಅವರ ಕಲಾಜೀವನಕ್ಕೆ ಸಾಕ್ಷಿಯಾಗಿದೆ.
೧೯೬೮ರಿಂದ ೨೦೦೨ರ ವರೆಗೆ ಅನೇಕ ಶಿಬಿರ, ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ ಬಹುಮಾನಗಳನ್ನು ಪಡೆದು ಪ್ರವರ್ಧಮಾನಕ್ಕೆ ಬೆಳಗುತ್ತಿರುವ ಕಲಾವಿದರು ಶ್ರೀ ಹೀರಾಲಾಲ್ ಮಲ್ಕಾರಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ವಿ.ಟಿ. ಕಾಳೆ

ಕಲಾವಿದ, ಶಿಕ್ಷಕ, ಬರಹಗಾರ ನಾಟಕಕಾರ, ನಿರ್ದೇಶನ ಹಾಗೂ ಸಿನಿಮಾ ನಟನಾಗಿಯೂ ವಿ.ಟಿ. ಕಾಳೆಯವರದು ಬಹುಮುಖ ಪ್ರತಿಭೆ,
೧೯೩೪ರಲ್ಲಿ ಬಿಜಾಪುರ ಜಿಲ್ಲೆಯ ಹುನಗುಂದದ ಬಡರೈತ ಕುಟುಂಬದಲ್ಲಿ ಕಾಳೆಯವರ ಜನನ, ಬಾಲ್ಯದ ಕಲಾಸಕ್ತಿಯನ್ನು ಪ್ರೀತಿಯಿಂದ ಪ್ರೋತ್ಸಾಹಿಸಿ ಬೆಳಸಿದವರು ಹಿರಿಯ ಕಲಾವಿದ ಶ್ರೀ ಟಿ.ಪಿ. ಅಕ್ಕಿಯವರು, ಅವರ ವಿಜಯ ಕಲಾಮಂದಿರವೇ ಕಾಳೆಯವರಿಗೆ ಕಲೋಪಾಸನೆಗೆ ಸ್ಫೂರ್ತಿಯ ಸೆಲೆ. ೧೯೫೩ರಲ್ಲಿ ಮುಂಬಯಿಯ ಜೆ.ಜೆ. ಕಲಾಶಾಲೆಯ ಡಿಪ್ಲೊಮಾ ಪದವಿ. ನಂತರ ಸಾಧನಾ ರಂಗವೇ ಬೋಧನಾರಂಗ ಆಗಲು ವಿಜಯ ಕಲಾಮಂದಿರದಲ್ಲೇ ಶಿಕ್ಷಕನಾಗಿ ಕಲಾಸೇವೆಯ ಮುಂದುವರಿಕೆ. ನಂತರ ೧೯೬೪ರಿಂದ ಸಂಡೂರಿನ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಸೇವಾನಿರತರು.
ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ರಾಜ್ಯದ ದೇವಾಲಯಗಳ ಭಿತ್ತಿ ಚಿತ್ರಗಳ ನಕಲು ಮಾಡವ ಯೋಚನೆಯಲ್ಲಿ ಕಾಳೆಯವರ ಪಾತ್ರ ದೊಡ್ಡದು. ಶ್ರವಣಬೆಳಗೊಳದ ಜೈನ ಹಾಗೂ ಶಿರಾದಲ್ಲಿರುವ ರೇವಣಸಿದ್ಧೇಶ್ವರ ದೇವಾಲಯಗಳ ಭಿತ್ತಿ ಚಿತ್ರಗಳ ನಕಲು ಕಾರ್ಯದಲ್ಲಿ ಕಾಳೆಯವರು ತೋರಿರುವ ಕಲಾನೈಪುಣ್ಯ ಶ್ಲಾಘನೀಯ.
ಮಕ್ಕಳಿಗೆ ಚಿತ್ರಕಲೆ ಕಲಿಸುವುದರ ಬಗ್ಗೆ ಇವರ ಕಲಾಪರಿಚಯ ಪುಸ್ತಕ ಬರಹಗಾರನಾಗಿ ಕಾಳೆಯವರ ಸಂವೇದನಾಶೀಲತೆಗೆ ನಿದರ್ಶನ. ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ. ಪ್ರಶಂಸೆ, ಭಾರತದಾದ್ಯಂತ ನಡೆಯುವ ಕಲಾಪ್ರದರ್ಶಗಳಲ್ಲಿ ಇವರ ಕೃತಿಗಳ ಪ್ರದರ್ಶನ ಹಾಗೂ ಆನೇಕ ಏಕವ್ಯಕ್ತಿ ಪ್ರದರ್ಶನಗಳು ಪ್ರಶಂಸೆಗಳಿಸಿವೆ ಕಾಳೆಯವರು ವಿಭಿನ್ನ ಪ್ರತಿಭೆಯ ಕಲಾವಿದ, ನಾಟಕಕಾರ, ನಿರ್ದೇಶಕ-ನಟನಾಗಿ ರಂಗ ಹಾಗೂ ಚಲನ ಚಿತ್ರಗಳಲ್ಲಿ ಇವರದು ಶ್ರೀಮಂತ ಅನುಭವ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ”ಮಾನಸವೀಣೆ” ಚಿತ್ರಗಳ ಅಭಿನಯ ಇವರ ಪ್ರತಿಭೆಯ ಮತ್ತೊಂದು ಹೆಗ್ಗಳಿಕೆ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಎಂ.ಬಿ. ಪಾಟೀಲ್

ಕರ್ನಾಟಕದ ಕಲಾಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆಗಳಲ್ಲಿ ಮಹತ್ವದ ಹೆಸರು ಶ್ರೀ ಎಂ.ಬಿ. ಪಾಟೀಲ್ ಅವರದು.
ಬಿಜಾಪುರ ಜಿಲ್ಲೆಯ ತಿಕೋಟಾದಲ್ಲಿ ೧೯೩೯ರಲ್ಲಿ ಜನಿಸಿದ ಎಂ. ಬಿ. ಪಾಟೀಲ್ ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ತೋರಿ, ನಂತರ ಮುಂಬಯಿಯ ಜಿ.ಡಿ. ಆರ್ಟ್ಸ್ ಹಾಗೂ ನೂತನ್ ಕಲಾ ಮಂದಿರದಲ್ಲಿ ಕಲಾಭ್ಯಾಸ ಮಾಡಿದರು. ತಮ್ಮ ಕಲೆಯಿಂದ ಬಹಳ ಬೇಗ ಪ್ರಖ್ಯಾತಿಗೆ ಬಂದ ಪಾಟೀಲ್ ಅವರು ವ್ಯಕ್ತಿಚಿತ್ರ, ಭಿತ್ತಿ ಚಿತ್ರಗಳು, ವಾಸ್ತವ ಚಿತ್ರಣ, ಜಲವರ್ಣ, ಲ್ಯಾಂಡ್‌ಪ್‌ಗಳಲ್ಲಿ ಪರಿಣತರಾದರು.
ಭಾರತದ ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲಿ ಹಾಗೂ ಖಾಸಗಿ ಕಲಾಕ್ಷೇತ್ರಗಳಲ್ಲಿ ಅವರ ಅಪಾರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಪ್ರಾರಂಭದಲ್ಲಿ ಕರ್ನಾಟಕದಾದ್ಯಂತ ಸಮೂಹ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ ಎಂ. ಬಿ. ಪಾಟೀಲ್ ನಂತರ ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿ ಖ್ಯಾತಿಗಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಲಲಿತ ಕಲಾ ಅಕಾಡೆಮಿಯ ಕಲಾ ಶಿಬಿರಗಳು, ದೆಹಲಿಯ ಆಧುನಿಕ ಕಲಾ ಗ್ಯಾಲರಿ, ಚೆನ್ನೈನ ದಕ್ಷಿಣ ವಲಯ ಶಿಬಿರ, ಕೇರಳದ ಭಿತ್ತಿ ಚಿತ್ರ ಕಲಾವಿದರ ಶಿಬಿರ, ಪಾಂಡಿಚೇರಿಯ ಕಲಾ ಶಿಬಿರ ಹೀಗೆ ಹಲವು ಹತ್ತು ಕಡೆ ಭಾಗವಹಿಸಿ ಕರ್ನಾಟಕಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಕಲೆ ಕುರಿತು ಶ್ರೀಯುತರ ಉಪನ್ಯಾಸಗಳು ಹಾಗೂ ಪ್ರಾತ್ಯಕ್ಷಿಕೆಗಳು ಅತ್ಯಂತ ಜನಪ್ರಿಯವಾಗಿವೆ.
ಎಂ.ಬಿ. ಪಾಟೀಲರ ಸಾಧನೆಯನ್ನು ಗಮನಿಸಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಲಾಗಿದೆ. ಮುಖ್ಯವಾಗಿ ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಸ್ಪರ್ಧಾತ್ಮಕ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಎಂ.ಟಿ.ವಿ. ಆಚಾರ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಹಿರಿಯ ತಲೆಮಾರಿನ ಕಲಾವಿದರಾಗಿ, ಕಿರಿಯ ತಲೆಮಾರಿಗೆ ಆದರ್ಶಪ್ರಿಯರಾಗಿ, ಸದಾ ಸ್ನೇಹಮಯಿ ಕಲಾವಿದರೆಂದು ಹೆಸರಾದವರು ಶ್ರೀ ಎಂ.ಬಿ. ಪಾಟೀಲ್ ಅವರು.