Categories
ನೃತ್ಯ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಬಿ.ಎಸ್. ಸುನಂದಾದೇವಿ

ಶ್ರೀಮತಿ ಬಿ. ಎಸ್. ಸುನಂದಾ ದೇವಿ ಕರ್ನಾಟಕದ ಪ್ರತಿಷ್ಠಿತ ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ ಮತ್ತು ಗುರು, ಪ್ರಖ್ಯಾತ ಗುರುಗಳಿಂದ ಕಲಿತು ಚಿಕ್ಕ ವಯಸ್ಸಿನಲ್ಲಿಯೇ ಎರಡೂ ಶೈಲಿಯ ನೃತ್ಯಗಳನ್ನು ಪಳಗಿಸಿಕೊಂಡವರು.
ಕಳೆದ ಮೂವತ್ತು ವರ್ಷಗಳಿಂದ “ಛಾಯಾ ನೃತ್ಯ ನಿಕೇತನ’ ಎಂಬ ಸಂಸ್ಥೆಯನ್ನು ನಡೆಸುತ್ತಾ ನೂರಾರು ಕಲಾ ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುವ ಮೂಲಕ ಕಲಾ ಪ್ರಪಂಚಕ್ಕೆ ಅವರನ್ನು ಪರಿಚಯಿಸಿದ್ದಾರೆ.
ವೀಣಾವಾದನದಲ್ಲೂ ಸೈ ಎನ್ನಿಸಿಕೊಂಡವರು ಸುನಂದಾ ದೇವಿ. ಕರ್ನಾಟಕದಲ್ಲಿ ಕೂಚುಪುಡಿ ನೃತ್ಯವನ್ನು ಪದವಿ ಪರೀಕ್ಷೆಗೆ ಒಳಪಡಿಸುತ್ತಿರಲಿಲ್ಲ ಎನ್ನುವುದನ್ನು ಗಮನಿಸಿ ಮೊಟ್ಟಮೊದಲ ಬಾರಿಗೆ ಕೂಚುಪುಡಿಗೆ ಪಠ್ಯಪುಸ್ತಕ ರಚಿಸಿ ಕಿರಿಯರ ವಿಭಾಗದ ಕೂಚುಪುಡಿ ಪರೀಕ್ಷೆಗೆ ಅಳವಡಿಸಬೇಕಾದ ಪಠ್ಯಕ್ರಮ ಕುರಿತು ಪಟ್ಟಿ ತಯಾರಿಸಿದ್ದಾರೆ. ಇವರ ಈ ಕ್ರಮವನ್ನು ಅನುಸರಿಸಿಯೇ ಪ್ರಸ್ತುತ ತಜ್ಞರ ತಂಡವು ಹಿರಿಯರ ವಿಭಾಗದ ಕೂಚುಪುಡಿ ಪರೀಕ್ಷೆಗೂ ಸಹ ಪಠ್ಯಕ್ರಮವನ್ನು ಸಿದ್ಧಪಡಿಸುತ್ತಿದೆ.
‘ಸುಭದ್ರಾ ಕಲ್ಯಾಣ’, ‘ಮೋಹಿನಿ ಭಸ್ಮಾಸುರ’, ‘ಶ್ರೀ ವೆಂಕಟೇಶ್ವರ ಕಲ್ಯಾಣ’, ‘ರತಿಮನ್ಮಥ’, ‘ಶಿವರಂಜಿನಿ’, ‘ಕುಮಾರಸಂಭವ’ ಮೊದಲಾದ ರೂಪಕಗಳನ್ನು ನೃತ್ಯಕ್ಕೆ ಅಳವಡಿಸಿ ನಾಟ್ಯ ಸಂಯೋಜನೆ ಮಾಡಿದ್ದು ಇವು ಅಪಾರ ಜನಮೆಚ್ಚುಗೆಯನ್ನು ಗಳಿಸಿವೆ.
ಸುನಂದಾ ದೇವಿ ಅವರನ್ನು ಅರಸಿ ಬಂದ ಪ್ರಶಸ್ತಿ ಸನ್ಮಾನಗಳು ಅನೇಕ. ಶೃಂಗೇರಿ ಮಠದ ಜಗದ್ಗುರುಗಳಿಂದ ‘ನಾಟ್ಯ ಕಲಾಧರೆ’ ಬಿರುದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ, ಆರ್ಯಭಟ ಸಾಂಸ್ಕೃತಿಕ ಸಂಘದಿಂದ ‘ನಾಟ್ಯ ಶಾಂತಲಾ’ ಪ್ರಶಸ್ತಿ, ಸಿದ್ದಗಂಗಾ ಮಠದ ಸ್ವಾಮಿಗಳಿಂದ ಪುರಸ್ಕಾರಗಳೇ ಅಲ್ಲದೇ ಅನೇಕ ಸಂಘ ಸಂಸ್ಥೆಗಳು ಸಹ ಸುನಂದಾ ದೇವಿಯವರನ್ನು ಸನ್ಮಾನಿಸಿವೆ.
ದೇಶ ವಿದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿರುವ ಸುನಂದಾ ದೇವಿ ಪ್ರಮುಖವಾಗಿ ಚೀನಾ ದೇಶದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರಿಂದಲೇ ‘ಕಿಸಾಗೌತಮಿ ನೃತ್ಯ ರೂಪಕವನ್ನು ಪ್ರದರ್ಶಿಸಿದರು. ದಲಾಯಿಲಾಮಾ ಅವರು ಆ ನೃತ್ಯ ಪ್ರದರ್ಶನವನ್ನು ಅಪಾರವಾಗಿ ಮೆಚ್ಚಿಕೊಂಡರು.
ಎಸ್. ರಾಧಾಕೃಷ್ಣನ್, ಪಂಡಿತ ನೆಹರು, ಇಂದಿರಾ ಗಾಂಧಿ ಮೊದಲಾದವರ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿ ಭರತ ನಾಟ್ಯ ಮತ್ತು ಕೂಚುಪುಡಿ ಶೈಲಿಗಳೆರಡರಲ್ಲೂ ಪರಿಣತಿ ಪಡೆದವರು ಶ್ರೀಮತಿ ಸುನಂದಾದೇವಿ ಅವರು.