Categories
ನೃತ್ಯ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಎಂ.ಆರ್.ಕೃಷ್ಣಮೂರ್ತಿ

ನಾಟ್ಯರಂಗದಲ್ಲಿ ದಶಕಗಳಿಂದಲೂ ತೊಡಗಿಸಿಕೊಂಡಿರುವ ಪ್ರೊ ಎಂ.ಆರ್.ಕೃಷ್ಣಮೂರ್ತಿ ನಾಟ್ಯಾಚಾರರೆಂದೇ ಹೆಸರುವಾಸಿ. ಬೆಳ್ಳಿಹಬ್ಬದ ಸಂಭ್ರಮ ಕಂಡಿರುವ ಕಲಾಕ್ಷಿತ್ರಿಯ ಸಂಸ್ಥೆಯ ಸಂಸ್ಥಾಪಕರು, ನಾಟ್ಯ ಗುರು.
ಮೂಲತಃ ಬೆಂಗಳೂರಿನವರಾದ ಕೃಷ್ಣಮೂರ್ತಿ ಅವರು ಹುಟ್ಟಿದು ೧೯೩೬ರ ಡಿಸೆಂಬರ್ ೧೯ರಂದು. ಬಾಲ್ಯದಿಂದಲೂ ನಾಟ್ಯ, ಗಾಯನದಲ್ಲಿ ಒಲವು. ಹದಿನೈದನೇ ವಯಸ್ಸಿಗೆ ನಾಟ್ಯದಂಪತಿಗಳಾದ ಪ್ರೊ. ಯು.ಎಸ್.ಕೃಷ್ಣರಾವ್-ಚಂದ್ರಭಾಗಾದೇವಿ ಅವರ ಮಾರ್ಗದರ್ಶನದಲ್ಲಿ ಮದ್ರಾಸಿನ ರುಕ್ಷಿಣಿದೇವಿ ಅರುಂಡೇಲರ ಕಲಾಕ್ಷೇತ್ರದಲ್ಲಿ ನೃತ್ಯಾಭ್ಯಾಸ, ಮೈಲಾಪುರ್ ಗೌರಿ ಅಮ್ಮಾಳರಲ್ಲಿ ನೃತ್ಯಾಭಿನಯ, ಚಂದುಪಣಿಕ್ಕರ್ರವರಲ್ಲಿ ಕಥಕ್ಕಳಿ ಕಲಿಕೆ. ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ. ನಾಟ್ಯಶಾಸ್ತ್ರ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಕೃಷ್ಣಮೂರ್ತಿ ಅವರದ್ದು ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕಲಾಪ್ರದರ್ಶನ ನೀಡಿದ ಹೆಗ್ಗಳಿಕೆ. ೧೯೯೧ರಲ್ಲಿ ಬೆಂಗಳೂರಿಗೆ ಮರಳಿ ‘ಕಲಾಕ್ಷಿತಿಯ’ ಸಂಸ್ಥೆ ಸ್ಥಾಪನೆ, ನೂರಾರು ಮಕ್ಕಳಿಗೆ ಭರತನಾಟ್ಯ ಕಲೆಯ ಧಾರೆಯೆರೆಯುವಿಕೆ. ಹಲವು ಜನಪ್ರಿಯ ನೃತ್ಯರೂಪಕಗಳನ್ನು ಸಂಯೋಜಿಸಿರುವ ಕೃಷ್ಣಮೂರ್ತಿ ಅವರ ಸಾರ್ಥಕ ಕಲಾಸೇವೆಗೆ ಕರ್ನಾಟಕ ಕಲಾಶ್ರೀ, ನಾಟ್ಯತಪಸ್ವಿ ಬಿರುದು, ಪುರ್ವಂಕರ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.