Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಡಿ.ಅಣ್ಣು ದೇವಾಡಿಗ

ದಕ್ಷಿಣ ಕನ್ನಡ ಜಿಲ್ಲೆಯ ಕಲಾಪ್ರತಿಭೆ ಡಿ. ಅಣ್ಣು ದೇವಾಡಿಗ ಅವರು ಸಂಗೀತದ ಪರಂಪರೆಯಿಂದ ಬೆಳೆದ ಬಂದ ಕಲಾವಿದರು. ನಾಗಸ್ವರ ವಾದನ ಪ್ರವೀಣರು.
ಬಾಲ್ಯದಲ್ಲೇ ಪಾರಂಪರಿಕ ಕಲೆ ನಾಗಸ್ವರಕ್ಕೆ ಮನಸೋತ ಅಣ್ಣು ದೇವಾಡಿಗ ಅವರು ಅಯ್ಯನಾರು ಸಂಗೀತ ಶಾಲೆಯ ಎಂ.ಕೋದಂಡರಾಮರಲ್ಲಿ ಪ್ರಾರಂಭಿಕ ತರಬೇತಿ ಪಡೆದು ಕಲಾಲೋಕ ಪ್ರವೇಶಿಸಿದವರು. ಟಿ.ಕೆ.ಗೋವಿಂದರಾಜ ಪಿಳ್ಳೆ, ಕೊಟ್ಟೂರು ರಾಜರತ್ನಂರ ಗರಡಿಯಲ್ಲಿ ಪರಿಣಿತಿ ಪಡೆದು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿಯ ಸೇವೆಗೆ ನಿಯುಕ್ತರಾದವರು. ಶ್ರೀಕ್ಷೇತ್ರದಲ್ಲಿ ೪೫ ವರ್ಷಗಳಿಂದಲೂ ನಾಗಸ್ವರ ಸೇವೆಗೈಯುತ್ತಿರುವ ಇವರು ಬೆಂಗಳೂರು, ಶ್ರೀರಂಗಪಟ್ಟಣ, ತಿರುಪತಿ, ತಂಜಾವೂರು, ಮಧುರೈ ಮುಂತಾದೆಡೆ ನಾಗಸ್ವರ ಕಛೇರಿ ನಡೆಸಿರುವರು. ಆಕಾಶವಾಣಿಯ ಎ ದರ್ಜೆ ಕಲಾವಿದರೂ ಸಹ. ಹಲವು ಶಿಷ್ಯರನ್ನು ರೂಪಿಸಿದ ಗುರು, ಗಣ್ಯವ್ಯಕ್ತಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಅಣ್ಣು ದೇವಾಡಿಗರ ಕಲಾಸಾಧನೆಗೆ ಕರ್ನಾಟಕ ಕಲಾಶ್ರೀ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಗಸ್ವರದೊರೆ ಬಿರುದು ಮತ್ತಿತರ ಗೌರವಗಳು ಸಂದಿವೆ.