Categories
ನೃತ್ಯ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಬಿ ಭಾನುಮತಿ

ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ, ನೂರಾರು ಶಿಷ್ಯರ ಗುರು ಶ್ರೀಮತಿ ಭಾನುಮತಿ ಅವರು.

ಸುಪ್ರಸಿದ್ಧಕ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ ಇಶ್ಚಿಮಣಿ ಎಲ್.ಆರ್. ಲಕ್ಷ್ಮಿ ಅವರ ಸುಪುತ್ರಿ. ಸಂಗೀತ ನಾಟ್ಯಗಳ ರಸಗಂಗೆಯ ಮನೆತನದಲ್ಲಿ ಹುಟ್ಟಿದ ಇವರು ನಾಟ್ಯದಲ್ಲಿ ನೈಪುಣ್ಯತೆ ಪಡೆಯಲು ಮನೆಯ ಪರಿಸರಕ್ಕಿಂತ ಮಿಗಿಲಾದ ಬೇರೆ ಪ್ರಭಾವ, ಪ್ರೇರಣೆಗಳು ಬೇಕಾಗಲಿಲ್ಲ.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಗೆಜ್ಜೆ ಕಟ್ಟಿದ ಭಾನುಮತಿ ಅವರು ಮುಂದೆ ಅಂತರಾಷ್ಟ್ರೀಯ ಖ್ಯಾತಿಯ ಶ್ರೀಮತಿ ಕಮಲಾಲಕ್ಷ್ಮಣ್ ಹಾಗೂ ಪದ್ಮಶ್ರೀ ಶ್ರೀ ಕೆ.ಎನ್. ದಂಡಾಯುಧಪಾಣಿ ಪಿಳ್ಳೆ ಅವರಲ್ಲಿ ಶಿಷ್ಯಳಾಗಿ ಅವಿರತ ಸಾಧನೆಯೊಂದಿಗೆ ತಮ್ಮ ನೃತ್ಯಕಲೆಗೆ ಅಗತ್ಯವಾದ ಅಖಂಡತೆಯನ್ನು ಮೈಗೂಡಿಸಿಕೊಂಡರು. ದೇಶದಾದ್ಯಂತ ಕುಣಿದೂ ತಣಿಯದ ಈ ನಾಟ್ಯ ಪ್ರತಿಭೆ ವಿಶೇಷ ಆಹ್ವಾನದ ಮೇರೆಗೆ ಬ್ರಿಟಿಷ್ ಐಲ್ಯಾಂಡ್, ಈಶಾನ್ಯ ಏಷ್ಯಾ, ಸಿಂಗಾಪುರ ಮತ್ತು ಮಲೇಷಿಯಾದಂತಹ ದೂರ ದೇಶಗಳಲ್ಲಿಯೂ ತಮ್ಮ ನೃತ್ಯದ ಪಲುಕುಗಳು ರಿಂಗಣಿಸುವಂತೆ ಮಾಡಿದರು.

ಅಭಿನಯ ಶಾರದೆಯನ್ನು ಬೆನ್ನತ್ತಿ ಹೋದ ಇವರ ಪ್ರತಿಭೆಯನ್ನು ಅರಸಿ ಬಂದ ಹತ್ತಾರು ಪ್ರಶಸ್ತಿ ಪುರಸ್ಕಾರಗಳಲ್ಲಿ ‘ಸುರ್‌ ಸಿಂಗಾ‌ ಸಂಸದ್ -೧೯೮೩’ ಅತ್ಯುನ್ನತ ಪ್ರಶಸ್ತಿಯಾಗಿದೆ. ಎಷ್ಟು ಕಲಿತರೂ ಮತ್ತಷ್ಟು ವೈವಿಧ್ಯತೆಯನ್ನು ಅರಸುತ್ತಿರುವ ಇವರು ಡಾ. ಕೆ. ವೆಂಕಟಲಕ್ಷ್ಮಮ್ಮ ಹಾಗೂ ಕಲಾನಿಧಿ ಡಾ. ನಾರಾಯಣನ್ ಅವರಲ್ಲಿ ವಿಶೇಷ ನೃತ್ಯ ಶಿಕ್ಷಣ ಪಡೆದಿದ್ದಾರೆ.

ನೃತ್ಯ ಕಲಾಮಂದಿರ ಎಂಬ ನೃತ್ಯಶಾಲೆಯನ್ನು ಸ್ಥಾಪಿಸಿ, ನೃತ್ಯಾಸಕ್ತ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ನೀಡುತ್ತಿರುವ ನೃತ್ಯ ತಾರೆ ಶ್ರೀಮತಿ ಬಿ. ಭಾನುಮತಿ ಅವರು.