Categories
ಬಯಲಾಟ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಚನ್ನಬಸಪ್ಪ ಬಸಪ್ಪ ಬೆಂಡಿಗೇರಿ

ದೊಡ್ಡಾಟ ಕಲೆಯ ಅಪರೂಪದ ಮದ್ದಳೆ ಕಲಾವಿದ ಚನ್ನಬಸಪ್ಪ ಬೆಂಡಿಗೇರಿ, ಆರು ದಶಕಗಳ ಸಾರ್ಥಕ ಕಲಾಸೇವೆಗೈದ ಕಲಾಚೇತನ.
ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಮಾನಸನಕಟ್ಟಿಯ ಪ್ರತಿಭೆ ಚನ್ನಬಸಪ್ಪ ಬೆಂಡಿಗೇರಿ, ೧೯೩೭ರ ಜುಲೈ ೪ರಂದು ಜನಿಸಿದ ಚನ್ನಬಸಪ್ಪ ಅವರಿಗೆ ಬಾಲ್ಯದಿಂದಲೂ ಕಲಾ ಆಕರ್ಷಣೆ, ದೊಡ್ಡಾಟದ ಕಲಾಪ್ರಕಾರದ ಮೇಲೆ ಅಪರಿಮಿತ ಪ್ರೀತಿ. ಇಷ್ಟಪಟ್ಟು ರೂಢಿಸಿಕೊಂಡ ಕಲೆಯೇ ಬದುಕು-ಭಾವಕ್ಕೆ ಆಸರೆಯಾಗಿದ್ದು ವಿಶೇಷ, ದೊಡ್ಡಾಟದ ಬಹುಮುಖ್ಯ ಕಲೆಯಾದ ಮದ್ದಳೆ ವಾದನದಲ್ಲಿ ಅಸೀಮ ಹಿಡಿತ. ಬಯಲಾಟಕ್ಕಾಗಿ ಜೀವನ ಮುಡಿಪಿಟ್ಟ ಚನ್ನಬಸಪ್ಪ ಕರ್ನಾಟಕದ ನಾನಾ ಕಡೆ, ಗಡಿಭಾಗದಲ್ಲಿ ಅರವತ್ತು ವರ್ಷಗಳಿಂದಲೂ ದೊಡ್ಡಾಟದಲ್ಲಿ ಮದ್ದಳೆ ಬಾರಿಸುವ ಮೂಲಕ ನಿರಂತರ ಕಲಾಸೇವೆ. ನಶಿಸಿಹೋಗುತ್ತಿರುವ ದೊಡ್ಡಾಟ ಕಲೆಯ ಉಳಿವಿಗಾಗಿ ಹೊಸ ತಲೆಮಾರಿನ ಯುವಕ- ಯುವತಿಯರಿಗೆ ದೊಡ್ಡಾಟದ ಸಂಗೀತ ಮತ್ತು ಮದ್ದಳೆ ವಾದನದ ತರಬೇತಿ ನೀಡಿದ ಕಲಾಗುರು. ಅನೇಕ ರಾಜ್ಯ- ಜಿಲ್ಲಾಮಟ್ಟದ ಪ್ರಶಸ್ತಿಗಳಿಗೆ ಸತ್ತಾತರು.