Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಸೋಲಿಗರ ಮಾದಮ್ಮ

ಬುಡಕಟ್ಟು ಸಮುದಾಯದ ಹಿತರಕ್ಷಣೆಗೆ ಹೋರಾಡಿದ ಮೊಟ್ಟಮೊದಲ ದಿಟ್ಟ ಮಹಿಳೆ ದೊಡ್ಡಮಾದಮ್ಮ. ಸೋಲಿಗರ ನಾಯಕಿ, ಜಾನಪದ ಹಾಡುಗಾರ್ತಿ, ಉಪಕಾರಿ ನಾಟಿವೈದ್ಯೆ, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಜೀರಿಗೆಗದ್ದೆಯವರಾದ ದೊಡ್ಡಮಾದಮ್ಮ ಸೋಲಿಗ ಸಮುದಾಯದ ಹೆಣ್ಣುಮಗಳು. ಬಿಳಿಗಿರಿರಂಗನಬೆಟ್ಟದ ಡಾ. ಸುದರ್ಶನ್‌ರ ಮಾರ್ಗದರ್ಶನದಲ್ಲಿ ಸೋಲಿಗ ಅಭಿವೃದ್ಧಿ ಸಂಘ ಸ್ಥಾಪಿಸಿ ಸಮುದಾಯದ ಏಳ್ಗೆಗೆ ಶ್ರಮಿಸಿದಾಕೆ. ಭೂಮಿ ಹಕ್ಕು, ಜಾತಿಪದ್ಧತಿ, ಅರಣ್ಯ ಅಧಿಕಾರಿಗಳ ಕಿರುಕುಳ ಮುಂತಾದ ಸಮಸ್ಯೆಗಳ ವಿರುದ್ಧ ಸಮುದಾಯವನ್ನು ಸಂಘಟಿಸಿ ಹೋರಾಡಿದ ಗಟ್ಟಿಗಿತ್ತಿ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸೋಲಿಗರನ್ನು ಒಗ್ಗೂಡಿಸಿದ ಮಹಾತಾಯಿ. ಬುಡಕಟ್ಟು ಹೆಣ್ಣುಮಕ್ಕಳಲ್ಲಿ ಮಹಿಳಾಪ್ರಜ್ಞೆ ಜಾಗೃತಿಗೊಳಿಸಿದ ಛಲಗಾತಿ. ಪಾರಂಪರಿಕ ಅರಣ್ಯ ಗಿಡಮೂಲಿಕೆಗಳ ಮೂಲಕ ಔಷಧಿ ನೀಡುವ ಮಾದಮ್ಮ ನಾಟಿ ವೈದ್ಯೆಯಾಗಿಯೂ ಸಮುದಾಯದ ಸೇವೆಯಲ್ಲಿ ಅನವರತ ನಿರತ. ಸೋಲಿಗರ ಹಾಡಿಗಳಲ್ಲಿ ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆಗಳನ್ನು ಮಾಡಿಸಿರುವ ಈ ಅಜ್ಜಿಗೆ ಆದಿವಾಸಿ ಕಲೆ, ಸಂಸ್ಕೃತಿ–ಪದ್ಧತಿಯ ಬಗ್ಗೆ ಆಳಜ್ಞಾನ, ಸೋಲಿಗರ ಜಾನಪದ ಹಾಡು, ಸೋಬಾನೆ ಹಾಡು ಮತ್ತು ಮಾದೇಶ್ವರ ಹಾಡುಗಳನ್ನು ಹಾಡುವುದೆಂದರೆ ಅಚ್ಚುಮೆಚ್ಚು. ೮೫ರ ಇಆವಯಸ್ಸಿನಲ್ಲಿ ಕಣ್ಣುದೃಷ್ಟಿಗೆ ತೊಂದರೆಯಾಗಿದ್ದರೂ ಸೋಲಿಗರ ಹಿತ ಚಿಂತಿಸುವ ಮಾದಮ್ಮ ನಾಗರಿಕ ಸಮಾಜಕ್ಕೇ ಮಾದರಿ.