Categories
ಪರಿಸರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎನ್.ಡಿ. ಪಾಟೀಲ

ಸರ್ಕಾರಿ ಕೆಲಸದ ನಡುವೆಯೂ ಪರಿಸರ ರಕ್ಷಣೆಯನ್ನೇ ಬದುಕಿನ ಧೈಯವಾಗಿಸಿಕೊಂಡವರು ಎನ್.ಡಿ. ಪಾಟೀಲ. ೨೦ ಸಾವಿರಕ್ಕೂ ಅಧಿಕ ಸಸಿಗಳ ನೆಟ್ಟು ಪೋಷಿಸಿದ ಪರಿಸರ ಸಂರಕ್ಷಕ.
ವಿಜಯಪುರ ಜಿಲ್ಲೆಯ ಡೂಮನಾಳದ ನಾನಾಸಾಹೇಬ ದ್ಯಾಮನಗೌಡ ಪಾಟೀಲರು ಹುಟ್ಟಿದ್ದು ೧೯೫೫ರ ಏಪ್ರಿಲ್ ೧೩ರಂದು. ಬಿ.ಎ. ಪದವೀಧರರು. ವೃತ್ತಿ ಕಂದಾಯ ಇಲಾಖೆಯ ಸರ್ಕಾರಿ ನೌಕರಿ, ಪ್ರವೃತ್ತಿ ಪರಿಸರ ಸಂರಕ್ಷಣೆ. ೩೮ ವರ್ಷಗಳ ಸುದೀರ್ಘ ಸೇವಾವಧಿಯ ಉದ್ದಕ್ಕೂ ಸಸಿಗಳ ಪೋಷಣೆಗೈದ, ನಿವೃತ್ತಿಯ ಹಣವನ್ನೆಲ್ಲಾ ಗಿಡಗಳನ್ನು ನೆಡಲು ವ್ಯಯಿಸಿದ ಪರಿಸರಪ್ರೇಮಿ. ವಿಜಯಪುರ ಹಾಗೂ ಇಂಡಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದ ಸಾರ್ಥಕತೆ. ಬೆಂಗಳೂರಿನ ತಿಂಡ್ಲುವಿನಲ್ಲೂ ೩೩೦ ಸಸಿ ನೆಟ್ಟಿರುವ ಎನ್.ಡಿ. ಪಾಟೀಲರ ಪರಿಸರಪೂರಕ ಚಟುವಟಿಕೆಗಳಿಗೆ ಆದಿ ಮಾತ್ರ ಅಂತ್ಯವೆಂಬುದೇ ಇಲ್ಲ. ಅನುದಿನ ಅನುಕ್ಷಣ ಪರಿಸರದ್ದೇ ಧ್ಯಾನ, ಸಂರಕ್ಷಣೆಯದ್ದೇ ಆಲೋಚನೆ. ಜಿಲ್ಲಾ ರಾಜ್ಯ ಮಟ್ಟದ ಹಲವು ಪ್ರಶಸ್ತಿ-ಸನ್ಮಾನಗಳಿಗೆ ಪಾತ್ರರಾಗಿರುವ ಪಾಟೀಲರು ನೈಜ ಪರಿಸರಮಿತ್ರ