Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಅಶೋಕ್ ಎಸ್. ಶೆಟ್ಟರ್

ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಅಪರೂಪದ ಶಿಕ್ಷಣ ತಜ್ಞರು ಡಾ. ಅಶೋಕ್ ಎಸ್. ಶೆಟ್ಟರ್, ಕುಲಪತಿ, ದಕ್ಷ ಆಡಳಿತಗಾರ, ಮೇರುಸಾಧನೆಯ ಶಿಕ್ಷಣಶಿಲ್ಪಿ.
ಧಾರವಾಡ ಮೂಲದ ಅಶೋಕ್ ಎಸ್. ಶೆಟ್ಟರ್ ೧೯೮೧ರಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ, ಬೆಂಗಳೂರಿನ ಐಐಎಸ್ಸಿಯಲ್ಲಿ ಸ್ನಾತಕೋತ್ತರ ಪದವಿ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದವರು. ೩೫ ವರ್ಷಗಳ ಸುದೀರ್ಘ ಬೋಧನಾನುಭವ. ಪ್ರಾಧ್ಯಾಪಕ, ಪ್ರಾಚಾರ್ಯ, ಡೀನ್, ಸಂಸ್ಥಾಪಕ ನಿರ್ದೇಶಕರಾಗಿ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಗುರುತರ ಸೇವೆ. ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿ, ಸಂಶೋಧನೆ, ಯೋಜನಾ ಮಾರ್ಗದರ್ಶನ, ತರಬೇತಿ ನೀಡುವಿಕೆಯಲ್ಲಿ ವಿಶೇಷ ಪ್ರಾವೀಣ್ಯತೆ. ಎಂಜಿನಿಯರಿಂಗ್ ಶಿಕ್ಷಣವನ್ನು ಉದ್ಯಮಕ್ಕೆ ಪೂರಕವಾಗಿಸಿದ ಬಗೆ ಅನನ್ಯ. ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿಗೆ ಭದ್ರ ಅಡಿಪಾಯ ಹಾಕಿದ ಶಿಲ್ಪಿ. ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗಿ ವಿವಿಯನ್ನು ಕಟ್ಟಿ ಬೆಳೆಸಿದ ಪರಿ ನಿಜಕ್ಕೂ ಸೋಜಿಗವೇ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಟೆಕ್ನ ವಿಜಿನರಿ ಮುಂತಾದ ಪ್ರಶಸ್ತಿಗಳು ಅಶೋಕ್ ಶೆಟ್ಟರ್ರವರ ಅಪ್ರತಿಮ ಸಾಧನೆಗೆ ಸಂದ ಸತ್ಪಲಗಳು.