Categories
ಚಲನಚಿತ್ರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಬಿ.ಎಸ್. ಬಸವರಾಜು

ಕನ್ನಡದ ಬೆಳ್ಳಿಪರದೆಯನ್ನು ಚೆಂದಗಾಣಿಸಿ-ಸನ್ನಿವೇಶದ ಅರ್ಥಪೂರ್ಣತೆ ಹೆಚ್ಚಿಸಿದ ಛಾಯಾಗ್ರಾಹಕರಲ್ಲಿ ಬಿ.ಎಸ್. ಬಸವರಾಜು ಪ್ರಮುಖರು.
ತುಮಕೂರು ಜಿಲ್ಲೆ ತಿಪಟೂರು ಮೂಲದ ಬಿ.ಎಸ್. ಬಸವರಾಜು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ರಿಂದ ಸೈ ಎನಿಸಿಕೊಂಡ ಪ್ರತಿಭೆ, ಬಿಎಸ್ಸಿ ಪದವಿ ಮುಗಿದೊಡನೆ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ನಲ್ಲಿ ಛಾಯಾಗ್ರಾಹಣದಲ್ಲಿ ಡಿಪ್ಲೊಮಾ ಪಡೆದವರು. ಹೆಸರಾಂತ ಛಾಯಾಗ್ರಾಹಕರಾದ ವಿ.ಕೆ. ಮೂರ್ತಿ-ರಾಜೇಂದ್ರ ಮೆಲೋನ್, ಡಿ.ವಿ. ರಾಜಾರಾಂ ಬಳಿ ಸಹಾಯಕರಾಗಿದ್ದವರು. ೧೯೭೮ರಲ್ಲಿ ಒರಿಯಾ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾದರೂ ಕನ್ನಡ ಸಿನಿಪಯಣ ಆರಂಭವಾಗಿದ್ದು ೧೯೮೧ರ ‘ಅಂದದ ಅರಮನೆ’ ಚಿತ್ರದಿಂದ. ಪುಟ್ಟಣ್ಣ ಕಣಗಾಲ್ ಅಮೃತಘಳಿಗೆ, ಮಾನಸಸರೋವರ ಚಿತ್ರದ ಛಾಯಾಗ್ರಹಣದೊಂದಿಗೆ ಮುನ್ನೆಲೆಗೆ ಬಂದ ಬಸವರಾಜು ಅವರದ್ದು ೧೨೦ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಹೆಗ್ಗಳಿಕೆ. ೪೦ ವರ್ಷಗಳ ಸುದೀರ್ಘ ಚಿತ್ರಯಾನದಲ್ಲಿ ಹೊಸನೀರು, ಭೂತಾಯಿ ಮಕ್ಕಳು, ಉದ್ಭವ, ನೀ ಮುಡಿದಾ ಮಲ್ಲಿಗೆ ಮುಂತಾದವು ಹೆಸರು ತಂದುಕೊಟ್ಟ ಚಿತ್ರಗಳು. ಹತ್ತಾರು ಸಾಕ್ಷ್ಯಚಿತ್ರಗಳ ನಿರ್ದೇಶಕರು, ಅಮೃತಘಳಿಗೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ, ಬಿ.ಎಸ್.ರಂಗಾ ಪ್ರಶಸ್ತಿ, ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸನ್ಮಾನ ಸೇರಿ ಹಲವು ಪ್ರಶಸ್ತಿ-ಗೌರವಗಳಿಂದ ಭೂಷಿತರು.