Categories
ಜಾನಪದ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಗುರುರಾಜ ಹೊಸಕೋಟೆ

ಹಳ್ಳಿಗಾಡಿನ ಬದುಕನ್ನು ಹಾಡಾಗಿಸಿದ ವಿಶಿಷ್ಟ ಜನಪದ ಪ್ರತಿಭೆ ಗುರುರಾಜ ಹೊಸಕೋಟೆ, ಗಾಯಕ, ಸ್ವರಸಂಯೋಜಕ, ಗೀತರಚನೆಕಾರ, ನಟ, ಚಿತ್ರ ನಿರ್ಮಾಪಕ-ನಿರ್ದೇಶಕರಾಗಿ ಅವರದ್ದು ಬಹುಮುಖಿ ಸಾಧನೆ.
ಗುರುರಾಜ ಹೊಸಕೋಟೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಗಟ್ಟಿ ಪ್ರತಿಭೆ. ಹಾಡುಗಾರಿಕೆಯ ಕಲೆ ಅಪ್ಪ-ಅಮ್ಮನ ಬಳುವಳಿ. ಕಲಿತದ್ದು ಪಿಯುಸಿ, ವೃತ್ತಿ ನೇಕಾರಿಕೆ. ಗಾಯನ, ಗೀತರಚನೆ, ಸ್ವರಸಂಯೋಜನೆ, ನಟನೆಯೇ ಪ್ರವೃತ್ತಿ-ಬದುಕು. ೧೯೭೮ರಲ್ಲಿ ಪ್ರಾರಂಭಿಸಿದ ಹಾಡುಗಾರಿಕೆಗೀಗ ೪೨ ವಸಂತದ ಪಕ್ವತೆ, ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದವ್ವ, ಕಲಿತ ಹುಡುಗಿ ಕುದುರಿ ನಡಿಗಿಯಂತಹ ಹಾಡುಗಳು ಸದಾಕಾಲಕ್ಕೂ ಜನಪ್ರಿಯ. ೬೦೦೦ ಹಾಡುಗಳ ರಚನೆ, ೧೫ ಸಾವಿರಕ್ಕೂ ಅಧಿಕ ಸಾರ್ವಜನಿಕ ಕಾರ್ಯಕ್ರಮಗಳು, ದೇಶಾದ್ಯಂತ ಕಲಾಸಂಚಾರ, ೧೫೦ ಚಿತ್ರಗಳಲ್ಲಿ ನಟನೆ, ೬೦೪ ಧ್ವನಿಸುರುಳಿಗಳಲ್ಲಿ ಗಾಯನ, ನಾಲ್ಕು ನಾಟಕಗಳ ರಚನೆ, ಸಿನಿಮಾ ನಿರ್ದೇಶನ-ನಿರ್ಮಾಣ. ಎಲ್ಲವೂ ಜನಮೆಚ್ಚಿದ ಕಲಾಸಾಧನೆ. ೫೦ಕ್ಕೂ ಹೆಚ್ಚು ಬಿರುದಾವಳಿಗಳಿಂದ ಭೂಷಿತ ಕಲಾವಂತಿಕೆಯ ಅಚ್ಚಳಿಯದ ಹೆಗ್ಗಳಿಕೆ.