Categories
ಮಾಧ್ಯಮ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಟಿ. ವೆಂಕಟೇಶ್ (ಈ ಸಂಜೆ)

ಮಾಧ್ಯಮ ಮತ್ತು ಮುದ್ರಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ವಿರಳ ಪತ್ರಿಕೋದ್ಯಮಿ ಟಿ. ವೆಂಕಟೇಶ್, ಕನ್ನಡಾಭಿಮಾನದಿಂದಲೇ ಮೈದಳೆದ ಅಭಿಮಾನಿ ಸಂಸ್ಥೆಯ ಒಡೆಯ.
ಸಾಮಾನ್ಯ ರೈತಾಪಿ ಕುಟುಂಬದವರಾದ ವೆಂಕಟೇಶ್ಗೆ ಜೀವನಾಧಾರವಾಗಿದ್ದ ಭೂಮಿಯನ್ನು ಮಠಕ್ಕೆ ದಾನ ಮಾಡಿದ ತಾಯಿಯೇ ಆದರ್ಶ. ಬಡತನದ ನಡುವೆ ಡಿಪ್ಲೊಮಾ ವ್ಯಾಸಂಗ, ಸರ್ಕಾರಿ ನೌಕರಿಗೆ ಹೋಗದೆ ಸ್ವಂತ ಉದ್ಯೋಗಕ್ಕೆ ಮಿಡಿದ ಮನಸ್ಸು, ಎಲೆಕ್ಟಿಕಲ್ ಗುತ್ತಿಗೆದಾರರಾಗಿದ್ದವರಿಗೆ ವರನಟ ರಾಜ್ ಕಂಡರೆ ಪಂಚಪ್ರಾಣ. ಗೋಕಾಕ್ ಚಳವಳಿಗೆ ಧುಮುಕಿದ ಮೇಲೆ ಮೈಮನಗಳಲ್ಲಿ ಕನ್ನಡದ್ದೇ ಝೇಂಕಾರ. ಕನ್ನಡಪರ ದನಿಯಾಗಿ ೧೯೮೨ರಲ್ಲಿ ‘ಅಭಿಮಾನಿ’ ದಿನಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ. ೧೯೮೬ರಲ್ಲಿ ‘ಅಭಿಮಾನಿ’ ಸಂಸ್ಥೆ ಸ್ಥಾಪಿಸಿ ಮುದ್ರಣ ಕ್ಷೇತ್ರಕ್ಕೂ ಅಡಿ. ಮುಂದಿನದ್ದು ಇತಿಹಾಸ. ೧೯೮೫ರಲ್ಲಿ ಆರಂಭಿಸಿದ ‘ಅರಗಿಣಿ’ ಸಿನಿಮಾ ವಾರಪತ್ರಿಕೆ, ೧೯೮೯ರಲ್ಲಿ ಶುರು ಮಾಡಿದ ‘ಈ ಸಂಜೆ’ ಸಂಜೆಪತ್ರಿಕೆಗಳ ಮುಖೇನ ಮಾಧ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆಗುರುತು. ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಮುದ್ರಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವಷ್ಟು ಅಪೂರ್ವ ಸಾಧನೆ. ಮೂರೂವರೆ ದಶಕದ ಬಳಿಕವೂ ಜನಪ್ರಿಯತೆ-ಉದ್ಯಮಶೀಲತೆ ಉಳಿಸಿಕೊಂಡು ಮುನ್ನಡೆದಿರುವ ಸಾಧಕ ಪತ್ರಿಕೋದ್ಯಮಿ.