Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ಎಸ್. ರಾಜಣ್ಣ (ವಿಶೇಷ ಚೇತನ)

ಅಂಗವೈಕಲ್ಯವನ್ನೇ ಮೆಟ್ಟಿನಿಂತು ಉತ್ತುಂಗ ಸಾಧನೆಗೈದ ವಿಶೇಷ ಚೇತನ ಡಾ. ಕೆ.ಎಸ್. ರಾಜಣ್ಣ, ದಿವ್ಯಾಂಗರ ಕಣ್ಮಣಿಯಾದ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಉದ್ಯಮಿ.
ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ೧೯೫೯ರಲ್ಲಿ ಜನಿಸಿದ ರಾಜಣ್ಣ ೧೧ ತಿಂಗಳ ಮಗುವಾಗಿದ್ದಾಗಲೇ ಪೋಲಿಯೋಗೆ ತುತ್ತಾಗಿ ಎರಡು ಕೈ, ಕಾಲಿನ ಸ್ವಾಧೀನ ಕಳೆದುಕೊಂಡರಾದರೂ ಧೃತಿಗೆಡಲಿಲ್ಲ. ಎಸ್.ಎಸ್.ಎಲ್.ಸಿ., ಮೈಕಾನಿಕಲ್ ಡಿಪ್ಲೋಮಾವರೆಗೆ ವ್ಯಾಸಂಗ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಕ್ರೀಡೆಯಲ್ಲೂ ಆಸಕ್ತರು. ೧೯೮೦ರಲ್ಲಿ ಸ್ವಂತದ್ದೇ ಉದ್ಯಮ ಸ್ಥಾಪಿಸಿ ೫೦೦ ಮಂದಿ ಅಂಗವಿಕಲರ ಉದ್ಯೋಗದಾತರು. ಬದುಕಿನುದ್ದಕ್ಕೂ ವಿಶೇಷಚೇತನರ ಸೇವೆಗೆ ಮಿಡಿದ ರಾಜಣ್ಣ ಸಾವಿರಾರು ಮಂದಿ ನಿರುದ್ಯೋಗಿ ಅಂಗವಿಕಲರಿಗೆ ಮಾರ್ಗದರ್ಶನ, ಸ್ವಯಂ ಉದ್ಯೋಗಕ್ಕೆ ನೆರವು ನೀಡಿದ ಹೆಗ್ಗಳಿಕೆ. ೨೦೧೭ರಲ್ಲಿ ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಅಧಿನಿಯಮಕ್ಕೆ ರಾಜ್ಯ ಆಯುಕ್ತರಾಗಿ ನೇಮಕಗೊಂಡ ಹಿರಿಮೆ, ರಾಜ್ಯದ ೩೦ ಲಕ್ಷ ದಿವ್ಯಾಂಗರಿಗೆ ನೆರವಿನ ಹಸ್ತ ಚಾಚಿದ ಸಾರ್ಥಕತೆ. ಅಂತಾರಾಷ್ಟ್ರೀಯ ಕ್ರೀಡಾಪಟುವೂ ಆಗಿರುವ ರಾಜಣ್ಣ ೨೦೦೨ರ ಪ್ಯಾರಾ ಒಲಂಪಿಕ್ಸ್ನಲ್ಲಿ ಹಾಗೂ ಮೈಸೂರಿನ ರೋಟರಿ ಕ್ಲಬ್ ಕ್ರೀಡಾಕೂಟದಲ್ಲಿ ಚಿನ್ನ-ಬೆಳ್ಳಿ ಪದಕ ವಿಜೇತರು. ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಅಪೂರ್ವ ಸಾಧಕರು.