Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಅನಸೂಯಮ್ಮ

ರಂಗಭೂಮಿಯನ್ನೇ ಬದುಕಿನ ವೃತ್ತಿ-ಭಾವದ ಬುತ್ತಿಯಾಗಿಸಿಕೊಂಡ ಕಲಾವಿದೆ ಅನಸೂಯಮ್ಮ, ಐದು ದಶಕಗಳ ಕಲಾನುಭವದ ನಟ, ಹಾಡುಗಾರ್ತಿ, ಪಕ್ಕವಾದ್ಯಪ್ರವೀಣೆ.
ಸಿಳ್ಳೇಕ್ಯಾತ ಕುಟುಂಬದ ಅಪ್ಪಟ ವೃತ್ತಿ ರಂಗಕಲಾವಿದೆ ಅನಸೂಯಮ್ಮ ತುಮಕೂರು ಜಿಲ್ಲೆಯ ಪ್ರತಿಭೆ, ಶಿರಾ ತಾಲ್ಲೂಕಿನ ನಾದೂರು ಹೋಬಳಿಯ ಉದ್ದರಾಮನಹಳ್ಳಿ ಕ್ರಾಸ್ ಹುಟ್ಟೂರು. ನಟನೆ-ಹಾಡುಗಾರಿಕೆ ಪರಂಪರಾನುಗತ ಬಂದ ಕಲಾಬಳುವಳಿ, ಅಕ್ಷರ ಕಲಿಕೆ ಅಸಾಧ್ಯದ ಮಾತು. ಅನಕ್ಷರಸ್ಥ ಬದುಕಿಗೆ ಕಲೆಯೇ ಆಸರೆ, ಕಲೆಯ ಹಲವು ಪ್ರಕಾರಗಳಲ್ಲಿ ಹಿಡಿತ ಸಾಧಿಸಿದ ಮೇಲೆ ಬಹುಮುಖಿ ಆಸಕ್ತಿಯ ಬಹುಮುಖಿ ಪ್ರತಿಭೆ. ೧೬ರ ಹರೆಯದಲ್ಲೇ ಕಲಾರಂಗ ಪ್ರವೇಶ. ನಟಿ, ಸಂಗೀತಗಾರ್ತಿ, ಹಾರ್ಮೋನಿಯಂ ಮತ್ತು ಕೀಬೋರ್ಡ್ ವಾದ್ಯಗಾರ್ತಿಯಾಗಿ ಅವ್ಯಾಹತ ಸೇವೆ. ಬರೋಬ್ಬರಿ ೫೦ ವರ್ಷಗಳ ಸುದೀರ್ಘ ರಂಗಾನುಭವ. ೭೬೦೦ಕ್ಕೂ ಹೆಚ್ಚು ಪ್ರದರ್ಶನದಲ್ಲಿ ಬಣ್ಣ ಹಚ್ಚಿದ ಹಿರಿಮೆ, ಹಾಡಿ ರಂಗಪ್ರೇಮಿಗಳ ತಣಿಸಿದ ಗರಿಮೆ. ವೃತ್ತಿ ರಂಗಭೂಮಿಯ ಅಗ್ಗಳಿಕೆ ಹೆಚ್ಚಿಸಿದ ಕಲಾವಿದೆ.