Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ವಿ.ಬಿ. ಕುಟಿನೋ

ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕಾರ್ಮಿಕ ಹಾಗೂ ಪರಿಸರ ಕಾನೂನು ವಿಷಯಗಳಲ್ಲಿ ಆಳವಾದ ಜ್ಞಾನವುಳ್ಳ ಅಂತಾರಾಷ್ಟ್ರೀಯಮಟ್ಟದ ಶಿಕ್ಷಣ ತಜ್ಞ ಪ್ರೊ. ವಿ.ಬಿ. ಕುಟಿನೋ ಅವರು.
ಎಲ್.ಎಲ್.ಎಂ., ಪಿ.ಎಚ್.ಡಿ. ಪದವಿ ಪಡೆದು ಬೆಳಗಾವಿ, ಧಾರವಾಡ ಬೆಂಗಳೂರು ಮೊದಲಾದ ಕಡೆ ಕಾನೂನು ಉಪನ್ಯಾಸಕರಾಗಿ ದುಡಿದು ೨೦೦೨ ರಿಂದ ೨೦೦೬ ರವರೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆಸಲ್ಲಿಕೆ. ಕಾರ್ಮಿಕ ಕಾಯ್ದೆ ಹಾಗೂ ಪರಿಸರ ಕಾನೂನು ಇವರ ಆಸಕ್ತಿಯ ಕ್ಷೇತ್ರಗಳು, ಈ ವಿಷಯಗಳ ಬಗೆಗೆ ಅನೇಕ ಪುಸ್ತಕಗಳ ರಚನೆ.
ಕೌಲಾಲಂಪೂರ್, ಸಿಡ್ನಿ, ಅಡಿಲೇಡ್ ಮೆಲಬರ್ನ್, ಕ್ಯಾನ್‌ಬೆರಾ, ಹಾಲೆಂಡ್ ಮೊದಲಾದ ವಿಶ್ವವಿದ್ಯಾಲಯಗಳ ಕೋರಿಕೆ ಮೇರೆಗೆ ವಿವಿಧ ವಿಷಯಗಳನ್ನು ಕುರಿತು ಯೋಜನಾವರದಿಗಳನ್ನು ಸಿದ್ಧಪಡಿಸಿ ನೀಡಿದ್ದಾರೆ.
ಅನೇಕ ಗಣ್ಯ ವೇದಿಕೆಗಳಲ್ಲಿ ಹಾಗೂ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಪ್ರಶಂಸೆಗಳಿಸಿದ ಮೇಧಾವಿ. ಬೆಂಗಳೂರು ಕಾನೂನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಅವಧಿಯಲ್ಲಿ ಅನೇಕ ಮಹತ್ವಪೂರ್ಣ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡುದು, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಕಾಲದಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಜಾರಿಗೊಳಿಸಿದ ಯೋಜನೆಗಳು ಅವರ ಶೈಕ್ಷಣಿಕ ಪ್ರಬುದ್ಧತೆಗೆ ಸಾಕ್ಷಿಗಳು.
ಯು.ಜಿ.ಸಿ.ಯ ಸದಸ್ಯರಾಗಿ ಮತ್ತು ಯು.ಜಿ.ಸಿ.ಯ ಬೃಹತ್ ಯೋಜನೆಗಳ ಪರಿಶೀಲಕರಾಗಿ ನಿರ್ವಹಿಸಿದ ಇವರ ಕಾವ್ಯ ಪ್ರಶಂಸಾರ್ಹ.
ಕಾನೂನು, ಪರಿಸರ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅರ್ಪಣಾಭಾವದಿಂದ ಅಧ್ಯಯನ ನಡೆಸಿ ಉತ್ತುಂಗಕ್ಕೇರಿರುವ ಗಣ್ಯವ್ಯಕ್ತಿ ಪ್ರೊ. ವಿ.ಬಿ. ಕುಟಿನೋ ಅವರು.