Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಬಸವರಾಜ ಪಾಟೀಲ್ ಸೇಡಂ

“ಶಾಲೆಗಳು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು” ಎಂಬ ಧೇಯ ವಾಕ್ಯದೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ, ನುಡಿದಂತೆ ನಡೆಯುತ್ತಿರುವ ನಮ್ಮ ನಡುವಿನ ಅಪರೂಪದ ಸರಳ ವ್ಯಕ್ತಿ ಶ್ರೀ ಬಸವರಾಜ ಪಾಟೀಲ
ಸೇಡಂ ಅವರು.
ಗುಲ್ಬರ್ಗ ಜಿಲ್ಲೆ ಸೇಡಂ ತಾಲ್ಲೂಕಿನ ತರನಹಳ್ಳಿಯಲ್ಲಿ ಜನನ. ಬಿ.ಎಸ್.ಸಿ. ಪದವಿವರೆಗೆ ಅಧ್ಯಯನ, ಸಮಾನ ಮನಸ್ಕರೊಡನೆ ಜೊತೆಗೂಡಿ “ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ” ಯ ಸ್ಥಾಪನೆ. ಇದರ ಆಶ್ರಯದಲ್ಲಿ ೩೫ ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವು ಶೈಕ್ಷಣಿಕ ಕ್ಷೇತ್ರಕ್ಕೆ ಸೇಡಂ ಅವರ ಹೆಮ್ಮೆಯ ಕೊಡುಗೆಗಳಾಗಿವೆ. ಹೈದರಾಬಾದ್ ಕರ್ನಾಟಕದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕ ವಿಭಾಗವೊಂದನ್ನು ತೆರೆದು ಈ ಪ್ರದೇಶದ ಐದು ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು ೨೦ ಕೋಟಿ ರೂಗಳಿಗೂ ಅಧಿಕ ವೆಚ್ಚಮಾಡಿ ತಾಯ್ಯಾಡಿನ ಬೆಳವಣಿಗೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ಎಂ.ಪಿ. ಯಾಗಿ, ಎಂ.ಎಲ್.ಸಿ. ಯಾಗಿ, ಸಾರ್ವಜನಿಕ ಲೆಕ್ಕಪತ್ರ ವ್ಯವಹಾರ ಸಮಿತಿಯ ಸದಸ್ಯರಾಗಿ, ರಾಜ್ಯ ಭಾರತೀಯ ಜನತಾಪಾರ್ಟಿಯ ಅಧ್ಯಕ್ಷರಾಗಿ, ನಿಷ್ಕಳಂಕ ಸೇವೆಸಲ್ಲಿಸಿದ ಹಿರಿಮೆ ಇವರದು.
ಸಮಾಜ ಸೇವೆ ಮಾಡುತ್ತ ಇತರರಿಗಾಗಿ ಬದುಕುವ ಅಪರೂಪದ ವ್ಯಕ್ತಿಗಳಲ್ಲಿ ಶ್ರೀ ಬಸವರಾಜ ಪಾಟೀಲ ಸೇಡಂ ಅವರೂ ಒಬ್ಬರು.