Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಗುರುರಾಜ ಕರ್ಜಗಿ

ನಾಡಿನ ಹೆಸರಂತ ಶಿಕ್ಷಣ ತಜ್ಞರು, ಪ್ರಖರ ವಾಗಿ, ಉಪನ್ಯಾಸಕರು ಅಂಕಣಕಾರರು ಹಾಗೂ ಆಧ್ಯಾತ್ಮಿಕ ಚಿಂತಕರಾಗಿ ಡಾ.ಗುರುರಾಜ ಕರ್ಜಗಿ ಅವರದ್ದು ಬಹುಶ್ರುತ ಸಾಧನೆ.
ಧಾರವಾಡದವರಾದ ಡಾ. ಗುರುರಾಜ ಕರ್ಜಗಿ ಕರ್ನಾಟಕ ವಿ.ವಿ ಯಿಂದ ಡಾಕ್ಟರೇಟ್ ಪದವಿ ಪಡೆದವರು. ಬೆಂಗಳೂರಿನ ವಿವಿಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ವಿವಿಎಸ್ ಶೈಕ್ಷಣಿಕ-ಆಡಳಿತ ಮಹಾವಿದ್ಯಾಲಯದ ನಿರ್ದೇಶಕರು, ಜೈನ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರು, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಸ್ಥಾಪಕ ನಿರ್ದೇಶಕರು, ಅನೇಕ ವೈದ್ಯಕೀಯ ವಿ.ವಿ ಗಳ ಹಾಗೂ ಅಂತಾರಾಷ್ಟ್ರೀಯ ಶಾಲೆಗಳ ಆಡಳಿತ ಮಂಡಳಿ ಸದಸ್ಯರಾಗಿ ಅವರದ್ದು ಅನನ್ಯ ಶೈಕ್ಷಣಿಕ ಸೇವೆ. ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ೮೫ಕ್ಕೂ ಹೆಚ್ಚು ಶಾಲೆಗಳ ನಿರ್ಮಾಣದ ಕಾರಣೀಕರ್ತರು, ಕರ್ನಾಟಕ ಜ್ಞಾನ ಆಯೋಗದ ಸದಸ್ಯರೂ ಆಗಿರುವ ಕರ್ಜಗಿ ಅತ್ಯುತ್ತಮ ಬರಹಗಾರರೂ ಕೂಡ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ೧೦೦ಕ್ಕೂ ಹೆಚ್ಚು ಲೇಖನ, ೧೭೦೦ಕ್ಕೂ ಅಧಿಕ ಅಂಕಣ ಬರಹ, ಆಂಗ್ಲ ಮತ್ತು ಕನ್ನಡದಲ್ಲಿ ಕಥೆ, ಪಠ್ಯಪುಸ್ತಕಗಳನ್ನು ರಚಿಸಿರುವ ವಿದ್ವಾಂಸರು. ಕರುಣಾಳು ಬಾ ಬೆಳಕೆ ಅವರ ಮಹೋನ್ನತ ಜನಪ್ರಿಯ ಕೃತಿ. ಅವರ ವಿದ್ವತ್ತೂರ್ಣ ಮಾತು-ಬರಹಗಳು ಯುವಜನತೆಗೆ ಮಾದರಿ, ನಾಡಿಗೆ ಹೆಮ್ಮೆಯ ವಿಷಯ.