Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೆ. ಚಿದಾನಂದಗೌಡ

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿದಾನಂದಗೌಡರು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಕಂಡ ಅಪ್ರತಿಮ ಪ್ರತಿಭೆ. ಶಿಕ್ಷಣ ತಜ್ಞ ಆಡಳಿತಗಾರ, ಲೇಖಕರಾಗಿ ಅವರದ್ದು ವಿದ್ವತ್ತೂರ್ಣ ಸಾಧನೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಚೊಕ್ಕಾಡಿ ಚಿದಾನಂದಗೌಡರ ಹುಟ್ಟೂರು. ಬಾಲ್ಯದಲ್ಲೇ ಪ್ರಖರ ಬುದ್ಧಿವಂತಿಕೆ. ಯುವಿಸಿಇಯಲ್ಲಿ ಇಂಜಿನಿಯರಿಂಗ್, ಬರೋಡಾದಲ್ಲಿ ಸ್ನಾತಕೋತ್ತರ ಪದವಿ, ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಎಚ್‌ ಡಿ ಪಡೆದವರು. ಅಮೇರಿಕಾದ ನಾಸಾ, ಫ್ರಾನ್ಸ್‌ನ ಇನಿಯಾದ ಫೆಲೋಶಿಪ್ ಪುರಸ್ಕೃತರು. ಉಪನ್ಯಾಸಕರಾಗಿ ಆರಂಭವಾದ ವೃತ್ತಿ ಬದುಕು ಪ್ರಾಧ್ಯಾಪಕ, ಪ್ರಾಂಶುಪಾಲಗಿರಿ ದಾಟಿ ಮೈಸೂರು ವಿವಿಯ ಕುಲಪತಿ ಸ್ಥಾನದವರೆಗೂ ವಿಸ್ತಾರಗೊಂಡಿದ್ದು ಚಿದಾನಂದಗೌಡರ ದೈತ್ಯ ಪ್ರತಿಭೆಯ ಪ್ರತೀಕ. ಹಲವು ವಿವಿಗಳ ಶೈಕ್ಷಣಿಕ- ಆಡಳಿತಾತ್ಮಕ ಸಮಿತಿಗಳಲ್ಲಿ ಪ್ರಮುಖ ಹುದ್ದೆಗಳ ನಿರ್ವಹಣೆ-ಮಾರ್ಗದರ್ಶನ. ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳ ಮಂಡನೆ, ಹತ್ತಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಉಪನ್ಯಾಸ, ಪ್ರಪಂಚದ ಉದ್ದಗಲಕ್ಕೂ ಸಂಚಾರ ಚಿದಾನಂದಗೌಡರ ಜ್ಞಾನದ ಆಳಕ್ಕೆ ಸಾಕ್ಷಿ. ಪುಟಾಣಿಗಳ ವಿಜ್ಞಾನ ಪದ್ಯಗಳು, ವಿಜ್ಞಾನ ವಚನಗಳು, ಪತ್ತೇದಾರಿ ಪದ್ಯಗಳು ಸೇರಿ ಹಲವು ಕೃತಿಗಳ ರಚಿಸಿರುವ ಚಿದಾನಂದಗೌಡರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೇಜಗೌ ಸಾಹಿತ್ಯ ಪ್ರಶಸ್ತಿಗಳಿಂದ ಭೂಷಿತರು.