Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೋಡಿ ರಂಗಪ್ಪ

ಶಿಕ್ಷಣ ಕ್ಷೇತ್ರದಲ್ಲಿ ಬಹುರೂಪಿಯಾಗಿ ಸಾರ್ಥಕ ಸೇವೆ ಸಲ್ಲಿಸಿದ ತಜ್ಞರು ಡಾ. ಕೋಡಿ ರಂಗಪ್ಪ. ಪ್ರಾಧ್ಯಾಪಕರು, ಸಾಕ್ಷರತಾ ಆಂದೋಲನದ ಸಂಪನ್ಮೂಲ ವ್ಯಕ್ತಿ, ಲೇಖಕರು, ಪಠ್ಯಪುಸ್ತಕ ರಚನಾಕಾರರರು, ಕನ್ನಡ ಪರಿಚಾರಕರು.
ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಕೋಡಿ ರಂಗಪ್ಪ ಅವರು ರೈತ ಕುಟುಂಬದ ಕುಡಿ, ಬಡತನದ ನಡುವೆಯೇ ಅಕ್ಷರದಿಂದ ಅರಳಿದ ಪ್ರತಿಭೆ, ಕನ್ನಡ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್, ಎಂ.ಎಡ್ ಪದವೀಧರರು. ಶಿಕ್ಷಣದಲ್ಲಿ ಲಿಂಗಸಮಾನತೆ ಕುರಿತು ಬೆಂಗಳೂರು ವಿವಿಯಿಂದ ಪಿಎಚ್‌ಡಿ. (೧೯೮೫ರಲ್ಲಿ ಚಿಕ್ಕಬಳ್ಳಾಪುರ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ವೃತ್ತಿಬದುಕಿನಾರಂಭ. ೩೨ ವರ್ಷಗಳ ಸುದೀರ್ಘ ಸೇವೆ, ಪ್ರಾಂಶುಪಾಲರಾಗಿ ನಿವೃತ್ತಿ. ವೃತ್ತಿಯ ಜೊತೆ ಭಾಷೆ ಸಾಹಿತ್ಯ ಸಂಸ್ಕೃತಿ ಚಿಂತನೆ ಮತ್ತು ಸಾಕ್ಷರತಾ ಆಂದೋಲನದಲ್ಲಿ ಸೇವೆ. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಕೈಂಕರ್ಯ, ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷನಾಗಿ ಮಾನವೀಯ ಸೇವೆ. ಬಿಎಡ್, ಡಿಎಡ್ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ, ಕನ್ನಡ ಕಲಿಕಾ ಮಾನಕಗಳ ರಚನೆ ಅಧ್ಯಕ್ಷ, ರಾಷ್ಟ್ರೀಯ ಸಾಕ್ಷರತಾ ಮಿಷನ್‌ಯಡಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ತರಬೇತಿ ಸಂಯೋಜಕ, ಮನೆಯಲ್ಲೇ ಗ್ರಂಥಾಲಯ ತೆರೆದು ೧೦ ಸಾವಿರ ಪುಸ್ತಕಗಳ ಸಂಗ್ರಹ ಹಾಗೂ ಹಳ್ಳಿಹಳ್ಳಿಗೆ ತೆರಳಿ ರಾತ್ರಿಪಾಠಶಾಲೆಗಳನ್ನು ನಡೆಸಿದ, ಹಲವು ಕೃತಿಗಳ ಲೇಖಕರೂ ಆಗಿರುವ ಕೋಡಿರಂಗಪ್ಪ ಅಪ್ಪಟ ಶಿಕ್ಷಣಬಂಧು.