Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರೋಹನ್ ಬೋಪಣ್ಣ

ಭಾರತದ ಅಗ್ರಗಣ್ಯ ಟೆನ್ನಿಸ್ ಆಟಗಾರರಲ್ಲಿ ಶ್ರೀ ರೋಹನ್ ಬೋಪಣ್ಣ ಒಬ್ಬರು. ಮೊಟ್ಟ ಮೊದಲ ಬಾರಿಗೆ ೨೦೦೨ ರಲ್ಲಿ ಇವರು ಭಾರತವನ್ನು ಪ್ರತಿನಿಧಿಸಿ ವಿಜಯ ಪತಾಕೆಯನ್ನು ಹಾರಿಸುತ್ತ ಬಂದಿದ್ದಾರೆ. ೨೦೧೮ ರಲ್ಲಿ ಇವರಿಗೆ ಕ್ರೀಡಾಪಟುಗಳಿಗೆ ಕೊಡಮಾಡುವ ‘ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.

ಪುರುಷರ ಡಬಲ್ಸ್ ಪಂದ್ಯದಲ್ಲಿ ಕತಾರ್ ಮತ್ತು ಕೆನಡಾ ಓಪನ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಏಷ್ಯನ್ ಗೇಮ್ಸ್ ೨೦೧೮ ರಲ್ಲಿ ಚಿನ್ನದಪದಕ ಗಳಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ೨೦೦೫ ರಲ್ಲಿ ‘ಏಕಲವ್ಯ ಪ್ರಶಸ್ತಿ’ ದೊರೆತಿದೆ.

ತಾವೇ ಒಬ್ಬ ಪ್ರಭಾವಿ ಟೆನ್ನಿಸ್ ಕ್ರೀಡಾಪಟುವಾಗಿದ್ದು ಮುಂದಿನ ಪೀಳಿಗೆಗೆ ಯುವ ಪ್ರತಿಭೆಗಳನ್ನು ಉತ್ತೇಜಿಸುತ್ತಿದ್ದಾರೆ. ಟೆನ್ನಿಸ್ ತರಬೇತಿ ಕೇಂದ್ರಗಳನ್ನು ತೆರೆದು ಆಟಗಾರರು ಭಾರತವನ್ನು ಪ್ರತಿನಿಧಿಸುವಷ್ಟು ಸಾಮರ್ಥ್ಯ ಪಡೆಯುವತ್ತ ಶ್ರಮಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಶಿವನಗೌಡ ರುದ್ರಗೌಡ ರಾಮನಗೌಡ

ಹಳ್ಳಿಯ ಜನರು ಅರೋಗ್ಯ ಸೇವೆಯಿಂದ ವಂಚಿತರಾಗಿ ಕಷ್ಟಪಡುವುದನ್ನು ಕಂಡ ಗೌಡರು, ಉತ್ತರ ಕರ್ನಾಟಕ ಭಾಗದ ಜನರಿಗಾಗಿ ಧಾರವಾಡದಲ್ಲಿ ಆಸ್ಪತ್ರೆಯನ್ನು ೧೯೬೦ ರಲ್ಲಿ ಪ್ರಾರಂಭ ಮಾಡಿದರು. ನಂತರ ಸ್ವಂತ ಕಟ್ಟಡ ನಿರ್ಮಿಸಿ ಸತತ ೪೦ ವರ್ಷಗಳ ಕಾಲ ಒಂದು ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿ ಹಳ್ಳಿಗರ ಪ್ರಾಣ ಉಳಿಸಿ ಬಡಜನರ ವೈದ್ಯರೆಂದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಈಗಲೂ ಪ್ರತಿ ಭಾನುವಾರ ಹಳ್ಳಿಗಳಲ್ಲಿ ಉಚಿತವಾಗಿ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಂ. ಕೆ. ಸುದರ್ಶನ್

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ. ಎಂ. ಕೆ. ಸುದರ್ಶನ್ ಅವರು ಪ್ರಾಧ್ಯಾಪಕರಾಗಿ, ಡೀನ್ ಆಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತಂದವರು. ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತ ಕೋವಿಡ್ ನಿಯಂತ್ರಣ ಮಾಡುವಲ್ಲಿ ಹೆಚ್ಚು ಶ್ರಮಿಸಿದ್ದಾರೆ. ಪ್ರಸ್ತುತ ಕಿಮ್ಸ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಸುರೇಶ್ ರಾವ್

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನ ಡಾ.ಸುರೇಶ್ ರಾವ್, ಹುಟ್ಟೂರು ಕಟೀಲು ಆದರೂ ಸಹ ಅವರ ಕರ್ಮಭೂಮಿ ಮುಂಬೈ. ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕೆಂದು ಬಯಸಿದ ಅವರು ೧೯೮೮ ರಲ್ಲಿ ‘ಸಂಜೀವಿನಿ’ ಆಸ್ಪತ್ರೆಯನ್ನು ನಿರ್ಮಾಣ ಮಾಡಿ, ಸಮಾಜದಲ್ಲಿ ಕೆಳಸ್ತರದಲ್ಲಿರುವ ಜನರಿಗೆ ನೆರವಾಗಿದ್ದಾರೆ. ಕಡಿಮೆ ವೆಚ್ಚದಲ್ಲಿ ಪ್ರತಿ ತಿಂಗಳು ೩೦೦ ಡಯಾಲಿಸಿಸ್‌ಗಳು ಇವರ ಆಸ್ಪತ್ರೆಯಲ್ಲಿ ನಡೆಯುತ್ತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎ. ಆರ್. ಪ್ರದೀಪ್

ಬೆಂಗಳೂರು ನಗರದ ದಂತ ವೈದ್ಯಕೀಯ ವಿಭಾಗದಲ್ಲಿ ಡಾ.ಎ.ಆರ್. ಪ್ರದೀಪ್ ಅವರ ಹೆಸರು ವಿಶಿಷ್ಟವಾದದ್ದು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರಿನ ವಿಶ್ರಾಂತ ಕುಲಪತಿಗಳು ಹಾಗೂ ಎಮಿರಿಟಸ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ಇವರು ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ವಿಚಾರ ಮಂಡನೆ ಮಾಡಿರುವ ಇವರು ಹೃದ್ರೋಗದ ಬಗ್ಗೆ ಹಲವು ಲೇಖನಗಳನ್ನು ರಚಿಸಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವೇದವ್ಯಾಸ ದೇಶಪಾಂಡೆ

ವೈದ್ಯರು ಹಳ್ಳಿಗಳಲ್ಲಿ ಸೇವೆ ಮಾಡುವುದು ಅಪರೂಪವಾಗಿರುವ ಸಂದರ್ಭದಲ್ಲಿ ಡಾ. ವೇದವ್ಯಾಸ ದೇಶಪಾಂಡೆ ಅವರು ಕಳೆದ ೩೫ ವರ್ಷಗಳಿಂದ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಸುತ್ತಮುತ್ತಲಿನ ಸಮುದಾಯಕ್ಕೆ ವೈದ್ಯಕೀಯ ಸೇವೆ ನೀಡುವುದರ ಮೂಲಕ ಬಡವರ ಡಾಕ್ಟರ್ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

೧೯೭೮ ರಲ್ಲಿ ‘ಗ್ರಾಮೋತ್ಥಾನ’ ಎಂಬ ಪರಿಕಲ್ಪನೆಯಡಿಯಲ್ಲಿ ಆರಂಭಗೊಂಡ ವೈದ್ಯಕೀಯ ಶಿಬಿರಗಳಲ್ಲಿ ಪಾಲ್ಗೊಂಡ ಡಾ. ದೇಶಪಾಂಡೆ ಅವರು ಹಳ್ಳಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ನಿರ್ಧಾರ ಕೈಗೊಂಡು ಈಗಲೂ ತಮ್ಮ ಸೇವಾಕಾರ್ಯ ಮುಂದುವರೆಸಿದ್ದಾರೆ. ವೈದ್ಯರಾಗಿದ್ದರೂ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ತೊಡಗಿಸಿಕೊಂಡು ಬಂದಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಸುಲ್ತಾನಚೀ ಜಗಳೂರು

ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಶ್ರೀಮತಿ ಸುಲ್ತಾನ್ ಬಿ, ನಾಟಿ ಔಷಧಿ ಕೊಡುವುದರಲ್ಲಿ ಸುತ್ತಮುತ್ತ ಹೆಸರುವಾಸಿ. ಚರ್ಮ ರೋಗ, ಹುಳುಕಡ್ಡಿ ಮತ್ತು ಇಸುಬಿಗೆ ತಾನೇ ಔಷಧಿ ತಯಾರಿಸಿ ಚಿಕಿತ್ಸೆ ನೀಡುವ ಸುಲಾನ್ ಬಿ ಯವರ ಖ್ಯಾತಿ ಈಗ ಆಂಧ್ರ, ತಮಿಳುನಾಡು, ಬೆಂಗಳೂರು ಹಾಗೂ ಮಂಗಳೂರಿನವರೆಗೂ ಹಚ್ಚಿದೆ.

ಶ್ರೀಮತಿ ಸುಲ್ತಾನ್ ಬಿ ಸೂಲಗಿತ್ತಿ ಕಾರ್ಯವನ್ನು ನಿರ್ವಹಿಸಲು ಆರೋಗ್ಯ ಇಲಾಖೆಯಿಂದ ಹೆರಿಗೆ ಕಿಟ್ ಗಳನ್ನು ವಿತರಿಸಿ ಅಧೀಕೃತಗೊಳಿಸಲಾಗಿದ್ದು, ಎಲ್ಲ ಹೆರಿಗೆಗಳನ್ನು ಯಶಸ್ವಿಯಾಗಿಸಿದ ಹೆಗ್ಗಳಿಕೆ ಇವರದು.

ರೋಟರಿ ಕ್ಲಬ್‌, ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ ಹಾಗೂ ಗ್ರಾಮಪಂಚಾಯಿತಿಗಳು ಇವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಜೆ. ಎನ್. ರಾಮಕೃಷ್ಣಗೌಡ

ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಜವರನಹಳ್ಳಿಯವರಾದ ಡಾ. ಜೆ. ಎನ್. ರಾಮಕೃಷ್ಣಗೌಡರು, ಶ್ರೀ ಆದಿಚುಂಚನಗಿರಿ ಮಠದ ದೊಡ್ಡಗುರುಗಳಾದ ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸತ್ಕಾರ್ಯಗಳನ್ನು ಸಾಕಾರಗೊಳಿಸಲು ಶ್ರಮಿಸಿರುವವರಲ್ಲಿ ಅಗ್ರಗಣ್ಯರು.

ಸಾಮಾಜಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಕಲೆ,ಸಾಹಿತ್ಯ, ಆರೋಗ್ಯ, ಕ್ರೀಡೆ, ವೈದ್ಯಕೀಯ, ಪರಿಸರ ಸಂರಕ್ಷಣೆ, ನೆರೆ ಸಂತ್ರಸ್ತರಿಗೆ ಪರಿಹಾರ ಮುಂತಾದ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತ ನಾಡಿನ ಏಳಿಗೆಗೆ ಕಾರಣರಾಗಿದ್ದಾರೆ. ಬೆಳ್ಳೂರು ಹಾಗು ಸುತ್ತಮುತ್ತಲಿನ ತಾಲ್ಲೂಕಿನ ಅಭಿವೃದ್ಧಿಗೆ ರಾಮಕೃಷ್ಣಗೌಡರು ದುಡಿದಿದ್ದಾರೆ. ಶ್ರೀಯುತರಿಗೆ ‘ಸಾರ್ಥಕ ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ, ಅಮೇರಿಕಾದ ಫ್ಲಾರಿಡಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಮಂಡ್ಯ ಜಿಲ್ಲಾಡಳಿತದ ವತಿಯಿಂದ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ನೀಡಿ ಪುರಸ್ಕರಿಸಲಾಗಿದೆ

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ

ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಅಪ್ಪಟ ಕನ್ನಡದ ವಚನಗಳ ತಲಸ್ಪರ್ಶಿ ಅಧ್ಯಯನಕ್ಕಾಗಿ ಮೀಸಲಾದ ಸಂಸ್ಥೆಯೇ ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠದ ವಚನ ಅಧ್ಯಯನ ಕೇಂದ್ರ

ವಚನ ಸಾಹಿತ್ಯದ ಅಭ್ಯಾಸಿಗಳಿಗೆ, ಸಂಶೋಧಕರಿಗೆ ಪೂರಕ ಸಾಮಗ್ರಿಯನ್ನು ಒದಗಿಸುವುದಕ್ಕಾಗಿ ಆರಂಭಿಸಲಾದ ವಚನ ಅಧ್ಯಯನ ಕೇಂದ್ರ ಪ್ರಾತಿನಿಧಿಕ ವಚನಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವ ಕೆಲಸವನ್ನೂ ಮಾಡುತ್ತಿದೆ.

ಈ ಅಧ್ಯಯನ ಕೇಂದ್ರದಲ್ಲಿ ಈಗಾಗಲೇ ಎಪ್ಪತ್ತೊಂಭತ್ತಕ್ಕೂ ಹೆಚ್ಚು ಸಂಶೋಧನಾರ್ಥಿಗಳು ಅಭ್ಯಾಸ ಮಾಡಿ ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದು, ಇಲ್ಲಿ ಕಳೆದ ಒಂಭೈನೂರು ವರ್ಷಗಳಲ್ಲಿ ರಚಿತವಾದ ಶರಣರ ಅಪರೂಪದ ಸಾಹಿತ್ಯ ಗ್ರಂಥಗಳನ್ನು ಸಂಗ್ರಹಿಸಲಾಗಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ರೋನಾಲ್ಡ್ ಕೊಲಾಸೋ

ಮಂಗಳೂರಿನವರಾದ ರೋನಾಲ್ಡ್ ಕೊಲಾಸೋ ವಿದೇಶದಲ್ಲಿ ನೆಲೆಸಿ ಅನೇಕ ಉದ್ಯಮಗಳನ್ನು ಕಟ್ಟಿದವರು. ಕಳೆದ ಇಪ್ಪತ್ತೈದು ವರ್ಷಗಳಿಂದ ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಸ್ವಂತ ಖರ್ಚಿನಿಂದ ಜಾರಿಗೊಳಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಅನೇಕ ಪೋಲೀಸ್ ಕಚೇರಿಗಳನ್ನು ನವೀಕರಣಗೊಳಿಸುವುದರಲ್ಲಿ ಹಾಗು ತಾಲೂಕು ಪಂಚಾಯಿತಿ ಕಚೇರಿಗಳನ್ನು ನಿರ್ಮಾಣ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ರೊನಾಲ್ಡ್ ಕೊಲಾಸೋ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಿದ್ದಾರೆ.

ಸಾಮಾಜಿಕ ಸೌಹಾರ್ದತೆಗಾಗಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕೊಲಾಸೋ, ಅನ್ನ ಆರೋಗ್ಯ ಒದಗಿಸುವಲ್ಲಿಯೂ ಯೋಜನೆ ಅನುಷ್ಠಾನಗೊಳಿಸಿದ್ದಾರೆ.

ರೊನಾಲ್ಡ್ ಕೊಲಾಸೋ ಅವರಿಗೆ ಪ್ರತಿಷ್ಠಿತ ಟೈಮ್ಸ್ ನೌ ಗ್ಲೋಬಲ್ ಏನ್.ಆರ್.ಐ ಪ್ರಶಸ್ತಿ, ಇಂಡಿಯನ್ ಬಹರೇನ್ ಸೆಂಟಿನರಿ ಅವಾರ್ಡ್, ವಿಶ್ವ ಕೊಂಕಣಿ ಸಮ್ಮೇಳನದ ಗೌರವ ಪ್ರಶಸ್ತಿಗಳೂ ಸೇರಿದಂತೆ ಹಲವು ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಬಿ.ಎ.ರಡ್ಡಿ

ಕರ್ನಾಟಕ ಸರ್ಕಾರದ ಇಂಜಿನಿಯರಿಂಗ್ ಇನ್ ಚೀಫ್ ಆಗಿ ನಿವೃತ್ತರಾಗಿರುವ ಬಿ.ಎ.ರಡ್ಡಿ ಅವರು ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಣ್ಣ ನೀರಾವರಿ ವಿಭಾಗದಲ್ಲಿ ಸರ್ಕಾರಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಡ್ಡಿ ಅವರು ನಾರಾಯಣಪುರ ಜಲಾಶಯದ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ.

ನೀರಾವರಿ ವಿಭಾಗದಲ್ಲಿ ಬಿ.ಎ.ರೆಡ್ಡಿ ಅವರ ಅನುಪಮ ಸೇವೆಯನ್ನು ಗುರುತಿಸಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆಯಿಂದ ಅತ್ಯುತ್ತಮ ಇಂಜಿನಿಯರ್, ನವದೆಹಲಿಯ ಫ್ರೆಂಡ್‌ಶಿಪ್ ಫೋರಂನ ಗೌರವ, ಔರಂಗಾಬಾದಿನ ಝಾನ್ಸಿ ಸಂಸ್ಥೆಯ ಪ್ರಶಸ್ತಿ ನೀಡಲಾಗಿದೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ|| ಪಿ.ಶಾಮರಾಜು

ಬೆಂಗಳೂರಿನ ಮೂಲ ಸೌಕರ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿರುವ ಡಾ|| ಶ್ಯಾಮರಾಜು ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗಣನೀಯ.

ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ವಿಭಿನ್ನ ಬಗೆಯ ಕಾರ್ಯಸ್ಥಳಗಳನ್ನು ನಿರ್ಮಿಸಿಕೊಟ್ಟಿರುವ ಶ್ಯಾಮರಾಜು ಅವರು ತಮ್ಮ ರೇವಾ ವಿಶ್ವವಿದ್ಯಾನಿಲಯದ ಮೂಲಕ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಿದ್ದಾರೆ.

ಬೆಂಗಳೂರಿನ ಟಿಟಿಡಿ ಸಂಸ್ಥೆಯ ದೇವಾಲಯದ ಧರ್ಮದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ಯಾಮರಾಜು ಅವರು ಹಲವು ದೇವಾಲಯಗಳ ಅಭಿವೃದ್ಧಿಗಾಗಿ ಶ್ರಮಿಸಿದವರು. ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿರುವ ಇವರು ಸಂಜೀವಿನಿ ಅಂಬ್ಯುಲೆನ್ಸ್, ವೃದ್ಧಾಲಯ, ಕಾರ್ಮಿಕ ಮಕ್ಕಳ ಶಾಲೆಗಳೇ ಮೊದಲಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಹನಾ ಕುಮಾರಿ

ದೇಶದ ಹೈಜಂಪ್ ಕ್ರೀಡಾಪಟುಗಳಲ್ಲಿ ಒಬ್ಬರಾದ ಸಹನಾ ಕುಮಾರಿ ಅವರು ಲಂಡನ್ನಿನಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರತಿಭಾವಂತ ಕ್ರೀಡಾಳು.

ಮಹಿಳಾ ಹೈಜಂಪ್ ವಿಭಾಗದಲ್ಲಿ ೧.೯೨ ಮೀಟರ್ ಎತ್ತರ ಜಿಗಿಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಸಹನಾಕುಮಾರಿ ಗೌಹಾತಿಯಲ್ಲಿ ಜರುಗಿದ ಹನ್ನೆರಡನೆಯ ದಕ್ಷಿಣ ಏಷಿಯಾ ಕ್ರೀಡಾಕೂಟದಲ್ಲಿಯೂ ಮಹಿಳಾ ವಿಭಾಗದ ಹೈಜಂಪ್ ನಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.

ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹದಿನಾಲ್ಕಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸಿರುವ ಸಹನಾ ಕುಮಾರಿ ಅವರಿಗೆ ಕರ್ನಾಟಕ ರಾಜ್ಯ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಗೌರವ, ಕೆಂಪೇಗೌಡ ಪ್ರಶಸ್ತಿ ಹಾಗೂ ಕೇಂದ್ರ ರೈಲ್ವೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿ.ಆರ್.ರಘುನಾಥ್

ಭಾರತ ಹಾಕಿ ತಂಡದ ಪ್ರಮುಖ ಆಟಗಾರರಾದ ವಿ.ಆರ್.ರಘುನಾಥ್ ರಾಷ್ಟ್ರಮಟ್ಟದಲ್ಲಿ ಸಬ್ ಜ್ಯೂನಿಯರ್ ಭಾರತೀಯ ತಂಡದ ಆಟಗಾರರಾಗಿ ಪಾದಾರ್ಪಣೆ ಮಾಡಿದರು.

೨೦೦೫ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೀನಿಯರ್ ಹಾಕಿ ಪಂದ್ಯದಲ್ಲಿ ಸ್ಥಾನ ಪಡೆದ ರಘುನಾಥ, ನಂತರ ಹಲವು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿ ಪಾಲುಗೊಂಡಿದ್ದಾರೆ.

೨೦೦೭ರಲ್ಲಿ ಸುಲ್ತಾನ್ ಅಜ್ಞಾನ್ ಷಾ ಕಪ್ ಗೆದ್ದ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಇವರು ರಾಷ್ಟ್ರೀಯ ಲೀಗ್ ಪಂದ್ಯಾವಳಿಗಳಲ್ಲಿ ಉತ್ತರ ಪ್ರದೇಶದ ನಾಯಕರಾಗಿದ್ದು, ಒಂದೇ ಸೀಸನ್ನಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಎರಡು ಬಾರಿ ಬರೆದಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಲ್.ಶೇಖರ ನಾಯಕ್

ಭಾರತೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಲ್.ಶೇಖರ ನಾಯಕ್ ಅವರು ಅಂತರರಾಷ್ಟ್ರೀಯ ಟಿ-೨೦ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಪದ್ಮಶ್ರೀ ಪುರಸ್ಕೃತರಾದ ಶೇಖರ ನಾಯಕ್ ಬಡರೈತನ ಮಗನಾಗಿ ಜನಿಸಿದ ಹುಟ್ಟು ಅಂಧರು. ಅಂಧ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೇ ಕ್ರಿಕೆಟ್ ಕಲಿತ ಶೇಖರನಾಯಕ್ ಕರ್ನಾಟಕ ರಾಜ್ಯ ಅಂಧ ಕ್ರಿಕೆಟ್ ಆಟಗಾರರಾಗಿ, ನಾಯಕರಾಗಿ, ಹೆಸರುವಾಸಿಯಾದವರು.

ಭಾರತ ತಂಡದ ಅಂಧ ಕ್ರಿಕೆಟ್ ಕ್ಯಾಪ್ಟನ್ ಆಗಿ ವಿಶ್ವಕಪ್ ಅಂಧ ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ಬಾರಿ ಗೆದ್ದುಕೊಟ್ಟ ಶೇಖರನಾಯಕ್ ಅವರಿಗೆ ಭಾರತ ಸರ್ಕಾರ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಗೌರವ ಸನ್ಮಾನಗಳು ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಲೀಲಾವತಿ ದೇವದಾಸ್

ಹೈದರಾಬಾದ್ ಕರ್ನಾಟಕದಲ್ಲಿ ಹದಿನೈದು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ ಲೀಲಾವತಿ ದೇವದಾಸ್ ಅವರು ಗಾಂಧಿ ಸ್ಮಾರಕ ಕುಷ್ಠರೋಗ ನಿವಾರಣಾ ನಿಧಿಯಲ್ಲಿ ಸೇವೆ ಸಲ್ಲಿಸಿದವರು.

ಟಿ. ನರಸೀಪುರದಲ್ಲಿ ಕುಷ್ಠರೋಗ ನಿವಾರಣಾ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಆರು ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ವಿಶ್ರಾಂತ ಜೀವನದಲ್ಲಿಯೂ ಮೂರು ಮಿಷನ್ ಆಸ್ಪತ್ರೆಗಳಲ್ಲಿ ಸಲ್ಲಿಸುತ್ತಿರುವ ಲೀಲಾದೇವಿ ಅವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಸೇವೆ ಅನುಕರಣೀಯ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಗೌರವ ಶಾಶ್ವತಿ ಸಂಸ್ಥೆಯ ಸದೋದಿತಾ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಗೌರವಗಳನ್ನು ಪಡೆದಿರುವ ಡಾ|| ಲೀಲಾವತಿ ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿಯೂ ಸಕ್ರಿಯರು.

ಐವತ್ತಕ್ಕೂ ಹೆಚ್ಚು ಆರೋಗ್ಯ ಸಂಬಂಧಿ ಕೃತಿಗಳನ್ನು ರಚಿಸಿರುವ ಇವರು ಅನೇಕ ಪತ್ರಿಕೆಗಳಲ್ಲಿ ಆರೋಗ್ಯ ವಿಷಯವಾಗಿ ಅಂಕಣಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಮುನಿವೆಂಕಟಪ್ಪ ಸಂಜಪ್ಪ

ಭಾರತೀಯ ಸಸ್ಯ ಸರ್ವೇಕ್ಷಣಾ ನಿರ್ದೇಶಕರಾದ ಎಸ್.ಸಂಜಪ್ಪ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯ ಶಾಸ್ತ್ರ ವಿಭಾಗದ ನಿರ್ದೇಶಕರಾಗಿದ್ದವರು. ಪ್ರಸಕ್ತ ಸಿ.ಎಸ್.ಐ.ಆರ್ ವಿಜ್ಞಾನಿಯಾಗಿರುವ ಎಸ್.ಸಂಜಪ್ಪ ಅವರು ರಾಷ್ಟ್ರೀಯ ರೇಷ್ಮೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ.

ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿರುವ ಸಂಜಪ್ಪ ಅವರು ಟಾನಮಿ ಸಂಶೋಧನೆಯಲ್ಲಿ ಪರಿಣತರು.

ದೇಶದ ಪ್ರಮುಖ ವಿಜ್ಞಾನಿಗಳು, ಸಂಶೋಧಕರು, ಸಸ್ಯ ಶಾಸ್ತ್ರಜ್ಞರಿಗೆ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿರುವ ಸಂಜಪ್ಪ ಅವರು ಸಸ್ಯಶಾಸ್ತ್ರಕ್ಕೆ ಮುವ್ವತ್ತೈದು ನೂತನ ಪ್ರಬೇಧಗಳನ್ನು ಪತ್ತೆ ಹಚ್ಚಿಕೊಟ್ಟವರು. ಹಲವಾರು ಸಸ್ಯಶಾಸ್ತ್ರ ಕೃತಿಗಳ ರಚನಾಕಾರರಾದ ಸಂಜಪ್ಪ ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಇವರಿಗೆ ಪ್ರತಿಷ್ಠಿತ ಬಿ.ವಿ.ಶಿವರಂಜನ್ ಚಿನ್ನದ ಪದಕ, ಡಾ|| ಜಿ.ಪಾಣಿಗ್ರಾಹಿ ಸ್ಮರಣ ಪ್ರಶಸ್ತಿ ಹಾಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಜಾನಕಿ ಅಮ್ಮಾಳ್ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ|| ಎಂ.ಆರ್.ಶ್ರೀನಿವಾಸನ್

ರಾಷ್ಟ್ರದ ಅಣುಶಕ್ತಿ ಕಾರ್ಯಕ್ರಮದ ಪ್ರವರ್ತಕರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಎಂ.ಆರ್.ಶ್ರೀನಿವಾಸನ್ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿ ನಂತರ ಕೇಂದ್ರ ಸರ್ಕಾರದ ಅಣು ಇಂಧನ ಇಲಾಖೆಗೆ ಕಾಲಿಟ್ಟರು.

ದೇಶದ ಮೊಟ್ಟಮೊದಲ ಅಣುಇಂಧನ ಕೇಂದ್ರದ ಪ್ರಧಾನ ಯೋಜನಾ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಶ್ರೀನಿವಾಸನ್ ಅವರು ನಂತರ ಮದರಾಸಿನ ಅಣುವಿದ್ಯುತ್ ಕೇಂದ್ರದ ನೇತೃತ್ವ ವಹಿಸಿದವರು. ಭಾರತದ ಅಣು ಇಂಧನ ಆಯೋಗದ ಅಧ್ಯಕ್ಷರಾಗಿ ಕೇಂದ್ರ ಅಣು ಇಂಧನ ಇಲಾಖೆಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸನ್ ಭಾರತೀಯ ನ್ಯೂಕ್ಲಿಯ ಪವರ್ ಕಾರ್ಪೋರೇಷನ್‌ ಸ್ಥಾಪಕ ಅಧ್ಯಕ್ಷರು.

ದೇಶದ ಎಲ್ಲ ನ್ಯೂಕ್ಲಿಯರ್ ಇಂಧನ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀನಿವಾಸನ್ ಗ್ಯಾಸ್ ಟರ್ಬೈನ್ ತಂತ್ರಜ್ಞಾನದಲ್ಲಿಯೂ ನೈಪುಣ್ಯತೆ ಪಡೆದವರು. ದೇಶದ ಪ್ರತಿಷ್ಠಿತ ಪದ್ಮವಿಭೂಷಣ, ಭಾರತೀಯ ಇಚಿಜಿನಿಯರಿಂಗ್ ಇನ್ಸಿಟ್ಯೂಟಿನ ಶ್ರೇಷ್ಠ ವಿನ್ಯಾಸಕಾರ, ಹೋಮಿ ಬಾಬಾ ಪ್ರಶಸ್ತಿ ಸೇರಿದಂತೆ ಹಲವಾರು ದೇಶವಿದೇಶಗಳ ಉನ್ನತ ಗೌರವ ಪುರಸ್ಕಾರಗಳಿಗೆ ಇವರು ಪಾತ್ರರಾಗಿದ್ದಾರೆ

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ರಾಮದೇವ ರಾಕೆ

ದಲಿತ ಹೋರಾಟದ ಮಂಚೂಣಿಯಲ್ಲಿದ್ದ ರಾಮದೇವ ರಾಕೆಯವರು ಆಚಿದೋಲನ-ಪಂಚಮ ಪತ್ರಿಕೆಗಳ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದವರು.

ಪಂಚಮ ನಿಯತಕಾಲಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ರಾಮದೇವ ರಾಕೆಯವರು ನಂತರ ಪ್ರಜಾವಾಣಿ ಸಮೂಹ ಸೇರಿದರು. ವಿಶೇಷ ವರದಿ, ಶೋಧನಾ ವರದಿಗಳಲ್ಲಿ ನಿಪುಣತೆ ಸಾಧಿಸಿದ ಇವರದ್ದು ರಾಜಕೀಯ ವಿಶ್ಲೇಷಣೆಯಲ್ಲಿ ಎತ್ತಿದ ಕೈ.

ಚುನಾವಣಾ ವಿಶ್ಲೇಷಣೆ ಮಾಡುವಲ್ಲಿ ನಿಪುಣರಾದ ರಾಮದೇವ ರಾಕೆಯವರು ಗುಲಬರ್ಗಾದ ಪ್ರಜಾವಾಣಿ ಬ್ಯೂರೋದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ದಲಿತ ಸಮೂದಾಯದ ಜಾಗೃತಿಗಾಗಿ ಆರಂಭವಾದ ಕನ್ನಡದ ಪ್ರಪ್ರಥಮ ಪತ್ರಿಕೆ ‘ಪಂಚಮ’ವನ್ನು ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಪ್ರಮುಖ. ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿವೆ.

Categories
ಮಾಧ್ಯಮ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿಠಪ್ಪ ಗೋರಂಟ್ಲಿ

ಪತ್ರಕರ್ತರಾಗಿ ಹಾಗೂ ಸಾಹಿತಿಗಳಾಗಿ ಹೆಸರಾಗಿರುವ ವಿಠಪ್ಪ ಗೋರಂಟ್ಲಿ ಅವರು ಲಂಕೇಶ್‌ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದವರು.

ಕೊಪ್ಪಳ ಪ್ರದೇಶದಲ್ಲಿ ಪತ್ರಿಕೋದ್ಯಮದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಠಪ್ಪ ಗೋರಂಟ್ಲಿ ಅನೇಕ ದೈನಿಕ ಹಾಗೂ ನಿಯತಕಾಲಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾವ್ಯ, ಕತೆ, ಜೀವನಚರಿತ್ರೆ ಹಾಗೂ ಅಂಕಣ ಬರೆಹಗಳ ಬಗ್ಗೆ ಅನೇಕ ಕೃತಿಗಳನ್ನು ಹೊರತಂದಿರುವ ಇವರು ಅನೇಕ ಜನಪರ ಹೋರಾಟಗಳಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ತನಿಖಾ ವರದಿ ಪ್ರಶಸ್ತಿಯು ೨೦೦೩ರಲ್ಲಿ ಲಭಿಸಿದೆ.