Categories
ಚಲನಚಿತ್ರ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಜಯಮಾಲಾ

ಚಲನಚಿತ್ರರಂಗದ ಕ್ರಿಯಾಶೀಲ ವ್ಯಕ್ತಿತ್ವದ ಸುಪ್ರಸಿದ್ದ ಕಲಾವಿದೆ ಶ್ರೀಮತಿ ಜಯಮಾಲಾ ಅವರು.

ಮಂಗಳೂರಿನಲ್ಲಿ ೧೯೫೯ರಲ್ಲಿ ಜನನ. ತಮ್ಮ ೧೩ನೆಯ ವಯಸ್ಸಿನಲ್ಲೇ ತುಳು ಚಿತ್ರ ‘ಕಾಸ್‌ದಾಯೆಕಂಡನೆ’ ಮೂಲಕ ಚಿತ್ರರಂಗ ಪ್ರವೇಶ ಹಾಗೂ ಅದೇ ಪ್ರಥಮ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ದಕ್ಷಿಣ ಭಾರತದ ಐದು ಭಾಷೆಗಳು ಸೇರಿದಂತೆ ಒಟ್ಟು ೭೫ ಚಲನಚಿತ್ರಗಳಲ್ಲಿ ಅಭಿನಯ, ಚಲನಚಿತ್ರ ನಿರ್ಮಾಣಕ್ಕೂ ಪ್ರವೇಶ, ನಾಲ್ಕು ಚಿತ್ರಗಳ ನಿರ್ಮಾಣ. ಇವರು ನಿರ್ಮಿಸಿದ ‘ತಾಯಿ ಸಾಹೇಬ’ಕ್ಕೆ ಸ್ವರ್ಣಕಮಲ ಸೇರಿದಂತೆ ಒಟ್ಟು ೨೨ ಪ್ರಶಸ್ತಿಗಳ ದಾಖಲೆ.

ಶ್ರೀಮತಿ ಜಯಮಾಲಾರ ಕಾರಶೀಲತೆಗಾಗಿ ಇವರನ್ನು ಹುಡುಕಿ ಬಂದ ಪದವಿಗಳು ಹಲವಾರು. ಕರ್ನಾಟಕ ಚಲನಚಿತ್ರ ಮಂಡಳಿಯ ಗೌರವ ಖಜಾಂಚಿ ಹಾಗೂ ಉಪಾಧ್ಯಕ್ಷೆ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷೆ. ಮೈಸೂರಿನ ಶಕ್ತಿಧಾಮ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಭಾರತೀಯ ಪನೋರಮಾ – ೨೦೦೦ದ ಆಯ್ಕೆ ಸಮಿತಿಯ ಸದಸ್ಯೆ. ಕರ್ನಾಟಕ ರಾಜ್ಯ ಫಿಲಂ ಪ್ರಶಸ್ತಿಗಳ ಆಯ್ಕೆ ಸಮಿತಿ ಅಧ್ಯಕ್ಷೆ ಮುಂತಾದವು. ಶ್ರೀಮತಿ ಜಯಮಾಲಾ ಅವರನ್ನು ಅರಸಿ ಬಂದ ಪ್ರಶಸ್ತಿ ಗೌರವಗಳು ಹಲವು. ಅತ್ಯುತ್ತಮ ನಟಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸ್ವರ್ಣಕಮಲ ಪ್ರಶಸ್ತಿ ಫಿಲಂಫೇರ್ ಪ್ರಶಸ್ತಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮುಂತಾದವು. ಕನ್ನಡ, ತಮಿಳು, ತೆಲುಗು, ತುಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಬಲ್ಲ ಶ್ರೀಮತಿ ಜಯಮಾಲಾ ಅವರಿಗೆ ತೋಟಗಾರಿಕೆ, ಒಳಾಂಗಣ ಅಲಂಕರಣ, ಅಧ್ಯಯನ ಮುಂತಾದವುಗಳು ಆಸಕ್ತಿಯ ವಿಷಯಗಳು.

ಅಂತರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಗಳನ್ನು ಗಳಿಸಿರುವ ನಾಡಿನ ಹೆಮ್ಮೆಯ ಕಲಾವಿದೆ ಶ್ರೀಮತಿ ಜಯಮಾಲಾ ಅವರು.

Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿ ಹೊನ್ನಪ್ಪ

ಮೊಟ್ಟ ಮೊದಲ ಬಾರಿಗೆ ಕರ್ನಾಟಕಕ್ಕೆ ಕಬಡ್ಡಿ ಕ್ರೀಡೆಯಲ್ಲಿ ಭಾರತ ಸರ್ಕಾರದ ಅರ್ಜುನ ಪ್ರಶಸ್ತಿ ತಂದು ಕೊಟ್ಟ ಕನ್ನಡದ ಕುವರ ಶ್ರೀ ಸಿ ಹೊನ್ನಪ್ಪ ಅವರು. ಜನನ ೧೯೭೩ರಲ್ಲಿ, ವೃತ್ತಿಯಿಂದ ಬ್ಯಾಂಕ್ ಅಧಿಕಾರಿ.

ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶ್ರೀ ಸಿ ಹೊನ್ನಪ್ಪ ಅವರು, ತಮ್ಮ ೧೭ನೆಯ ವಯಸ್ಸಿನಲ್ಲಿಯೇ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಹೊಮ್ಮಿದ ಅಪ್ರತಿಮ

ಪ್ರತಿಭಾವಂತ.

ಕರ್ನಾಟಕದ ಕ್ರೀಡಾ ತಂಡವನ್ನು ಉಪನಾಯಕರಾಗಿ ಹಾಗೂ ನಾಯಕರಾಗಿ ಪ್ರತಿನಿಧಿಸಿದ್ದು ಮಾತ್ರವಲ್ಲ, ಅಂತರಾಷ್ಟ್ರೀಯ ಏಷ್ಯನ್ ಕ್ರೀಡಾಕೂಟದಲ್ಲಿ ಉಪನಾಯಕರಾಗಿ ಭಾರತವನ್ನು ಪ್ರತಿನಿಧಿಸಿದ್ದು ಇವರ ಹೆಗ್ಗಳಿಕೆ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ದಕ್ಷಿಣವಲಯ ಚಾಂಪಿಯನ್‌ ಷಿಪ್ ಮತ್ತು ಫೆಡರೇಷನ್ ಕಪ್ ಟೂರ್ನ್‌ಮೆಂಟ್ ಗಳಲ್ಲಿ ಭಾಗವಹಿಸಿದ ಹಿರಿಮೆಗೆ ಶ್ರೀಯುತರು ಪಾತ್ರರು. ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಈ ಅಪ್ರತಿಮ ಉತ್ಸಾಹಿ ಕ್ರೀಡಾಪಟುವನ್ನು ಅರಸಿ ಬಂದ ಬೆಳ್ಳಿ ಪದಕ, ಚಿನ್ನದ ಪದಕ ಹಾಗೂ ಪ್ರಶಸ್ತಿಗಳು ಅಸಂಖ್ಯಾತ, ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ರೈಡರ್ ಮತ್ತು ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ ಪಡೆದಿರುವ ಶ್ರೀ ಹೊನ್ನಪ್ಪನವರು ಇತ್ತೀಚೆಗೆ ಭಾರತ ಸರ್ಕಾರದ ಅತ್ಯುನ್ನತ ಅರ್ಜುನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ ಹಾಗೂ ಬೆಂಗಳೂರು ನಗರ ಮಹಾಪೌರರಿಂದ ಕೆಂಪೇಗೌಡ ಪ್ರಶಸ್ತಿ ಪಡೆದಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಪ್ರಶಸ್ತಿ ಪದಕಗಳ ಸರದಾರನಾದ ಶ್ರೀ ಹೊನ್ನಪ್ಪನವರು ಕರ್ನಾಟಕದ ಸುಪುತ್ರ; ಸರಳ ಸಜ್ಜನಿಕೆಯ ವಿನಯ ಸಂಪನ್ನ.

Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ರಂಜಿನಿ ರಾಮಾನುಜಂ

ಹುಟ್ಟಿನಿಂದಲೇ ಕೇಳುವ ಭಾಗ್ಯದಿಂದ ವಂಚಿತಳಾಗಿದ್ದರೂ, ಬ್ಯಾಡ್ಮಿಂಟನ್ ಕ್ರೀಡೆಯ ಖ್ಯಾತಿಯ ಪ್ರತಿಭಾಶಾಲಿ ಕರ್ನಾಟಕದ ಹೆಮ್ಮೆಯ ಸುಪುತ್ರಿ ಶ್ರೀಮತಿ ರಂಜಿನಿ ರಾಮಾನುಜಂ.

ಕೇಳುವ ಶಕ್ತಿಯನ್ನು ಕಳೆದುಕೊಂಡ ಕ್ರೀಡಾಪಟುಗಳ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಶ್ರೀಮತಿ ರಂಜಿನಿ ಸತತ ಎರಡು ಬಾರಿಯೂ ಚಿನ್ನದ ಪದಕಗಳ ವಿಜೇತೆ, ”ಸೈಲೆಂಟ್ ಒಲಿಂಪಿಕ್ಸ್’ ಎಂಬ ಅಭಿದಾನದ ಅಂತರಾಷ್ಟ್ರೀಯ ತಂಡಗಳು ಭಾಗವಹಿಸಿದ ೧೮ನೆಯ ಜಾಗತಿಕ ಕ್ರೀಡಾಮೇಳದಲ್ಲಿ ಭಾರತವು ಚಿನ್ನದ ಪದಕದೊಂದಿಗೆ ಅದ್ಭುತ ವಿಜಯ ಸಂಪಾದಿಸಿದಾಗ, ತಂಡವನ್ನು ಪ್ರತಿನಿಧಿಸಿದವರು ಶ್ರೀಮತಿ ರಂಜಿನಿ.

ಸೈಲೆಂಟ್ ಒಲಿಂಪಿಕ್ಸ್‌ನ ಏಕವ್ಯಕ್ತಿ ನಡುವಿನ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ತಂದಿತ್ತ ವಿಶ್ವದ ನಂ. ೨ನೇ ಆಟಗಾರ್ತಿ ಶ್ರೀಮತಿ ರಂಜಿನಿ.

2

ಇಟಲಿಯ ಬ್ರಿಕ್ಸನ್ ನಗರದಲ್ಲಿ ೧೯೯೮ರಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಗೂ ತೈವಾನ್‌ ದೇಶದ ತೈಪೆಯಲ್ಲಿ ೨೦೦೦ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಮತ್ತು ಡಬ್ಬಲ್ಸ್ ಎರಡೂ ಪ್ರಶಸ್ತಿಯನ್ನು ಭಾರತಕ್ಕೆ ತಂದುಕೊಟ್ಟ ಕೀರ್ತಿವಂತೆ ಶ್ರೀಮತಿ ರಂಜಿನಿ. ಬ್ಯಾಡ್ಮಿಂಟನ್ ಕ್ರೀಡಾಲೋಕವನ್ನು ಪ್ರವೇಶಿಸಿದ ನಾಲ್ಕು ವರ್ಷಗಳ ಅನತಿ ಕಾಲದಲ್ಲಿಯೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಚಿನ್ನ, ೪ ರಜತ, ಒಂದು ಕಂಚಿನ ಪದಕಗಳನ್ನು ಗೆದ್ದುಕೊಟ್ಟ ಭಾರತದ ಕ್ರೀಡಾ ಲೋಕದ ಉಜ್ವಲತಾರೆ ಶ್ರೀಮತಿ ರಂಜಿನಿ. ಅರ್ಜುನ ಪ್ರಶಸ್ತಿ ಏಕಲವ್ಯ ಪ್ರಶಸ್ತಿ ಪಡೆದ ಈ ಕ್ರೀಡಾಪಟು ಅಂಗವಿಕಲರ ಬಾಳಿನ ಆಶಾದೀಪ.

Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಹುಲ್ ದ್ರಾವಿಡ್

ಅಂತರಾಷ್ಟ್ರೀಯ ಕ್ರಿಕೆಟ್ಟಿನ ಭರವಸೆಯ ಬ್ಯಾಟ್ಸ್‌ಮನ್, ಭಾರತ ಕ್ರಿಕೆಟ್ ತಂಡದ ಉಪನಾಯಕ. ಕರ್ನಾಟಕದ ಹೆಮ್ಮೆಯ ಕ್ರೀಡಾಪ್ರತಿಭೆ ಶ್ರೀ ರಾಹುಲ್ ದ್ರಾವಿಡ್.

೧೯೭೩ರಲ್ಲಿ ಜನನ, ಬೆಂಗಳೂರಿನ ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ, ಬಿ.ಕಾಂ. ಪದವಿ ಗಳಿಕೆ, ಎಳೆಯ ವಯಸ್ಸಿನಲ್ಲಿಯೇ ಕ್ರಿಕೆಟ್ ಲೋಕಕ್ಕೆ ಪ್ರವೇಶ. ಮೊದಲ ದರ್ಜೆಯ ಅನೇಕ ಪಂದ್ಯಗಳಲ್ಲಿ ಭಾಗಿ, ಯಶಸ್ವಿನ ಮೆಟ್ಟಿಲೇರಿದ ಗಟ್ಟಿ ಅಡಿಗಳು. ೧೯ ವರ್ಷದೊಳಗಿನ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಹುದ್ದೆಯ ಗೌರವ.

ರಣಜಿ ಟ್ರೋಫಿ ಕ್ಷೇತ್ರಕ್ಕೆ ಪದಾರ್ಪಣೆ. ೩೭ ಪಂದ್ಯ, ೫೨ ಇನ್ನಿಂಗ್ಸ್‌, ೭ ಅಜೇಯ ಇನ್ನಿಂಗ್ಸ್, ೩೬೨೮ ರನ್ನುಗಳು, ೮೦.೮೪ರ ಸರಾಸರಿ, ೧೪ ಶತಕಗಳು ೧೬ ಅರ್ಧಶತಕಗಳು, ೭ ಪಂದ್ಯಗಳಲ್ಲಿ ನಾಯಕತ್ವ – ಹೀಗೆ ಸಾಗಿರುವ ಉಜ್ವಲ ಸಾಧನೆ.

ದುಲೀಪ್ ಟ್ರೋಫಿ, ಇರಾನಿ ಟ್ರೋಫಿ ಪಂದ್ಯಗಳಲ್ಲಿಯೂ ಅತ್ಯುತ್ತಮ ಸಾಧನೆ. ಆಯ್ಕೆ ಸಮಿತಿಯಿಂದ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ ಗೆ ವೀರೋಚಿತ ಸ್ವಾಗತ. ೪೮ ಟೆಸ್ಟ್‌ಗಳು, ೮೪ ಇನ್ನಿಂಗ್ಸ್‌ಗಳು, ೪೦೩೩ ರನ್ನುಗಳು, ಸರಾಸರಿ ರನ್ನು ಸಂಖ್ಯೆ ೫೩.೭೭.೯ ಶತಕಗಳ, ೨೧ ಅರ್ಧ ಶತಕಗಳ ಹೆಮ್ಮೆಯ ಕೊಡುಗೆ, ತಾಳ್ಮೆಯ ಕಲಾತ್ಮಕ ಆಟಗಾರನೆಂಬ ಪ್ರಶಂಸೆ. ಓಲಾಡುವ ಇನ್ನಿಂಗ್ಸ್‌ಗೆ ಲಂಗರು ಹಾಕಬಲ್ಲ ನಂಬಿಕೆಯ ಬ್ಯಾಟ್ಸ್‌ಮನ್, ಏಕದಿನದ ೧೬೩ ಪಂದ್ಯಗಳಲ್ಲಿ ಆಡಿದ ಅಮೂಲ್ಯ ಅನುಭವ, ೫೧೯೦ ರನ್ನುಗಳ ಗಳಿಕೆ.

ಅರ್ಜುನ್ ಪ್ರಶಸ್ತಿ ೧೯೯೯ರ ಸಿಯೆಟ್ ಬೆಸ್ಟ್ ಕ್ರಿಕೆಟರ್, ವಿಸ್ಟನ್ ಕ್ರಿಕೆಟರ್ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಭೂಷಿತ. ಕನ್ನಡಿಗರ ಕಣ್ಮಣಿ, ಭಾರತದ ಹೆಮ್ಮೆಯ ಪುತ್ರ ರಾಹುಲ್ ದ್ರಾವಿಡ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ದೇಚು ಮೂಲ

ಟೆನ್ನಿಸ್ ಕ್ರೀಡಾರಂಗದಲ್ಲಿ ಕರ್ನಾಟಕಕ್ಕೆ ಹೆಸರು ತಂದುಕೊಟ್ಟ ಪ್ರತಿಭಾವಂತೆ ಶ್ರೀಮತಿ ದೇಚು ಮೂಲ ಅವರು.

ಮಹಿಳಾ ಟೆನ್ನಿಸ್‌ನ ರಾಷ್ಟ್ರೀಯ ಚಾಂಪಿಯನ್ ಆಗಿ ಮೆರೆದು ವಿಂಬಲ್ಡನ್ ಪಂದ್ಯದ ಕ್ವಾರ್ಟರ್ ಫೈನಲ್‌ವರೆಗೂ ತಲುಪಿದ ಸಾಧನೆ ಇವರದು.

೧೯೪೧ರಲ್ಲಿ ಜನಿಸಿದ ದೇಚು ಅಪ್ಪಯ್ಯ ಮೂಲ ಅವರು ೧೯೫೯ನೆಯ ಇಸವಿಯಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್ ಷಿಪ್ ಸಿಂಗಲ್ಸ್ ಪ್ರಶಸ್ತಿ ವಿಜೇತರು. ೧೯೬೦, ೧೯೬೧, ೧೯೬೨ನೇ ಇಸವಿಯಲ್ಲಿ ಭಾರತದ ನಂ. ೧ ಬ್ಯಾಂಕಿನ ಮಹಿಳಾ ಟೆನ್ನಿಸ್ ಕ್ರೀಡಾಪಟುವೆಂಬ ಕೀರ್ತಿಗೆ ಭಾಜನರಾದರು.

2

೧೯೬೦ರ ದಶಕದಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಸತತವಾಗಿ ೩ ಬಾರಿ ಪ್ರಥಮ ಸ್ಥಾನ ಪಡೆದು ‘ಟ್ರಿಪಲ್ ಕೌನ್’ ಪ್ರಶಸ್ತಿ ಗಳಿಸಿದ ಹಿರಿಮೆ ಇವರದು.

ಸಿಂಗಪೂರದಲ್ಲಿ ೧೯೬೧ರಲ್ಲಿ ನಡೆದ ಮಹಿಳೆಯರ ಮುಕ್ತ ಟೆನ್ನಿಸ್ ಸ್ಪರ್ಧೆಯಲ್ಲಿ ‘ರನ್ನರ್ ಅಪ್’ ಆಗಿ ಮೆರೆದ ಪ್ರತಿಭಾವಂತರು.

~

ಭಾರತದ ಕ್ರೀಡಾಕ್ಷೇತ್ರದಲ್ಲಿ ಸಾಧನೆಯ ಸುಧಾರಣೆಯಲ್ಲಿ ಅಷ್ಟೇನೂ ಅನುಕೂಲತೆಗಳಿಲ್ಲದ ದಿನಗಳಲ್ಲೇ ಸ್ವಂತ ಪರಿಶ್ರಮದಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚಿ ಮೆರೆದ ಅಪ್ರತಿಮ ಟೆನ್ನಿಸ್ ಕ್ರೀಡಾಪಟು ಕರ್ನಾಟಕದ ಶ್ರೀಮತಿ ದೇಚು ಮೂಲ ಅವರು.

Categories
ಕನ್ನಡ ಸೇವೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ ಜಯಸಿಂಹ

ಶ್ರೀ ಕೆ ಜಯಸಿಂಹ ಕನ್ನಡಪರವಾದ ಕ್ರಿಯಾತ್ಮಕ ಕೆಲಸಕ್ಕೆ ಸದಾ ಸಿದ್ಧವಾಗಿರುವ ಶ್ರೀ ಕೆ ಜಯಸಿಂಹ ಅವರು ನಾಡಿನ ಎಲ್ಲ ವಲಯಗಳಲ್ಲೂ ಕನ್ನಡ ಭಾಷೆ-ಸಂಸ್ಕೃತಿಗಳು ಬೇರೂರಬೇಕೆಂಬ ಕನಸು ಹೊತ್ತವರು.

ಮೈಸೂರು ವಾಸಿಯಾದ ಶ್ರೀ ಜಯಸಿಂಹ ಅವರು ಕನ್ನಡವನ್ನು ಒಂದು ರಚನಾತ್ಮಕ ಕೆಲಸವೆಂದು ಭಾವಿಸಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ತಿಳಿವಳಿಕೆಯಿಂದ ಕನ್ನಡಪರ ಹೋರಾಟಕ್ಕೆ ಸಂವೇದನೆಯ ಸ್ಪರ್ಶವನ್ನು ತಂದುಕೊಟ್ಟಿದ್ದಾರೆ. ಕಳೆದ ಇಪ್ಪತ್ತೇಳು ವರ್ಷಗಳಿಂದ ನಿರಂತರವಾಗಿ ಬದ್ಧತೆಯಿಂದ ದುಡಿಯುತ್ತ ಬಂದಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅನೇಕ ಆಂದೋಲನಗಳ ರೂವಾರಿಯಾಗಿದ್ದಾರೆ.

೧೯೯೪ರಲ್ಲಿ ಮೈಸೂರು ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಶ್ರೀ ಜಯಸಿಂಹ ಅವರನ್ನು ೧೯೯೮ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮೈಸೂರಿನಲ್ಲಿ ನಡೆಸಿದ ವಿಭಾಗ ಮಟ್ಟದ ಸಮಾವೇಶದಲ್ಲಿ ಸನ್ಮಾನಿಸಿದೆ. ಇದೇ ರೀತಿ ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನ ಹಾಗೂ ಅಭಿನಂದನೆಗಳನ್ನು ನ್ನು ಪಡೆದಿದ್ದಾರೆ. ಹೀಗೆ ತಮ್ಮ ಜೀವನವನ್ನೇ ಕನ್ನಡ ಸೇವೆಗೆ ಮೀಸಲಾಗಿಟ್ಟಿರುವ ಶ್ರೀ ಜಯಸಿಂಹ ಅವರಿಗೆ ಕನ್ನಡ ರಾಜ್ಯೋತ್ಸವದ ಈ ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

 

Categories
ಕನ್ನಡ ಸೇವೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಫಾದರ್ ಐ ಅಂತಪ್ಪ

ಬೆಂಗಳೂರು ಜಿಲ್ಲೆ ಕನಕಪುರ ತಾಲ್ಲೂಕು ಹಾರೋಬೆಲೆಯಲ್ಲಿ ಜನಿಸಿದ ಫಾದರ್ ಡಾ. ಐ ಅಂತಪ್ಪ ಅವರು ಇಟಲಿಯಲ್ಲಿ ಗ್ರೆಗೋರಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು, ಭಾರತಕ್ಕೆ ಹಿಂದಿರುಗಿ ಯಾಜಕ ಗುರುದೀಕ್ಷೆ ಪಡೆದು ಜನಸೇವೆಯೇ ಜನಾರ್ದನ ಸೇವೆ ಎಂದು ದುಡಿಯುತ್ತಿರುವ ಪ್ರಾಮಾಣಿಕ ಸಮಾಜಸೇವಕ.

ಸುಮಾರು ೪೫ ವರ್ಷಗಳಿಂದ ಕನ್ನಡದ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ವಹಿಸಿ, ಸೇವೆ ಸಲ್ಲಿಸುತ್ತಿರುವ ಡಾ. ಅಂತಪ್ಪ ಕ್ರೈಸ್ತ ಧರ್ಮದ ಪವಿತ್ರ ಧರ್ಮಗ್ರಂಥ ಬೈಬಲನ್ನು ಕನ್ನಡಕ್ಕೆ ಅನುವಾದಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಲ್ಯಾಟಿನ್, ಹೀಬ್ರು, ಗ್ರೀಕ್ ಮತ್ತು ಇಟಾಲಿಯನ್ ಭಾಷೆಗಳನ್ನು ಬಲ್ಲ ಶ್ರೀಯುತರು ವಿವಿಧ ಸ್ಥಳಗಳಲ್ಲಿ ಕ್ರೈಸ್ತಧರ್ಮದ ಉಗಮ, ಕ್ರಿಸ್‌ಮಸ್ ಹಬ್ಬ ಪ್ರಾರ್ಥನೆಗಳು ಮುಂತಾದ ಧಾರ್ಮಿಕ ವಿಷಯಗಳನ್ನು ಕುರಿತ ಗ್ರಂಥಗಳನ್ನು ರಚಿಸಿದ್ದಾರೆ. ಪ್ರಥಮ ಕೆಥೋಲಿಕ್ ಬೈಬಲ್ ಕನ್ನಡ ಭಾಷಾಂತರ ಇವರ ಕೊಡುಗೆ. ಬೆಂಗಳೂರಿನ ಕನ್ನಡ ಕ್ರೈಸ್ತರ ಮುಖವಾಣಿಯಾದ ‘ಕರ್ನಾಟಕ ತಾರೆ’ ಮಾಸಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದವರು.

ಬೆಂಗಳೂರು ಮಹಾಧರ್ಮಕ್ಷೇತ್ರದ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರಕ್ಕೆ ಸ್ಮರಣೀಯ ಕೊಡುಗೆ ನೀಡಿದವರು.

ಶಿಕ್ಷಣ ಕ್ಷೇತ್ರ ಹಾಗೂ ಸಾಹಿತ್ಯವಲಯದಲ್ಲಿ ಇವರು ಸಲ್ಲಿಸಿದ ನಿಷ್ಕಾಮ ಸೇವೆಯನ್ನು ಪರಿಗಣಿಸಿ ೬೭ನೆಯ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.

ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಚೇತನ ಫಾದರ್ ಐ ಅಂತಪ್ಪ ಅವರು.