Categories
ಕನ್ನಡ ಸೇವೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ ಜಯಸಿಂಹ

ಶ್ರೀ ಕೆ ಜಯಸಿಂಹ ಕನ್ನಡಪರವಾದ ಕ್ರಿಯಾತ್ಮಕ ಕೆಲಸಕ್ಕೆ ಸದಾ ಸಿದ್ಧವಾಗಿರುವ ಶ್ರೀ ಕೆ ಜಯಸಿಂಹ ಅವರು ನಾಡಿನ ಎಲ್ಲ ವಲಯಗಳಲ್ಲೂ ಕನ್ನಡ ಭಾಷೆ-ಸಂಸ್ಕೃತಿಗಳು ಬೇರೂರಬೇಕೆಂಬ ಕನಸು ಹೊತ್ತವರು.

ಮೈಸೂರು ವಾಸಿಯಾದ ಶ್ರೀ ಜಯಸಿಂಹ ಅವರು ಕನ್ನಡವನ್ನು ಒಂದು ರಚನಾತ್ಮಕ ಕೆಲಸವೆಂದು ಭಾವಿಸಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ತಿಳಿವಳಿಕೆಯಿಂದ ಕನ್ನಡಪರ ಹೋರಾಟಕ್ಕೆ ಸಂವೇದನೆಯ ಸ್ಪರ್ಶವನ್ನು ತಂದುಕೊಟ್ಟಿದ್ದಾರೆ. ಕಳೆದ ಇಪ್ಪತ್ತೇಳು ವರ್ಷಗಳಿಂದ ನಿರಂತರವಾಗಿ ಬದ್ಧತೆಯಿಂದ ದುಡಿಯುತ್ತ ಬಂದಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅನೇಕ ಆಂದೋಲನಗಳ ರೂವಾರಿಯಾಗಿದ್ದಾರೆ.

೧೯೯೪ರಲ್ಲಿ ಮೈಸೂರು ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಶ್ರೀ ಜಯಸಿಂಹ ಅವರನ್ನು ೧೯೯೮ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮೈಸೂರಿನಲ್ಲಿ ನಡೆಸಿದ ವಿಭಾಗ ಮಟ್ಟದ ಸಮಾವೇಶದಲ್ಲಿ ಸನ್ಮಾನಿಸಿದೆ. ಇದೇ ರೀತಿ ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನ ಹಾಗೂ ಅಭಿನಂದನೆಗಳನ್ನು ನ್ನು ಪಡೆದಿದ್ದಾರೆ. ಹೀಗೆ ತಮ್ಮ ಜೀವನವನ್ನೇ ಕನ್ನಡ ಸೇವೆಗೆ ಮೀಸಲಾಗಿಟ್ಟಿರುವ ಶ್ರೀ ಜಯಸಿಂಹ ಅವರಿಗೆ ಕನ್ನಡ ರಾಜ್ಯೋತ್ಸವದ ಈ ಸಾಲಿನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

 

Categories
ಕನ್ನಡ ಸೇವೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಫಾದರ್ ಐ ಅಂತಪ್ಪ

ಬೆಂಗಳೂರು ಜಿಲ್ಲೆ ಕನಕಪುರ ತಾಲ್ಲೂಕು ಹಾರೋಬೆಲೆಯಲ್ಲಿ ಜನಿಸಿದ ಫಾದರ್ ಡಾ. ಐ ಅಂತಪ್ಪ ಅವರು ಇಟಲಿಯಲ್ಲಿ ಗ್ರೆಗೋರಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು, ಭಾರತಕ್ಕೆ ಹಿಂದಿರುಗಿ ಯಾಜಕ ಗುರುದೀಕ್ಷೆ ಪಡೆದು ಜನಸೇವೆಯೇ ಜನಾರ್ದನ ಸೇವೆ ಎಂದು ದುಡಿಯುತ್ತಿರುವ ಪ್ರಾಮಾಣಿಕ ಸಮಾಜಸೇವಕ.

ಸುಮಾರು ೪೫ ವರ್ಷಗಳಿಂದ ಕನ್ನಡದ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ವಹಿಸಿ, ಸೇವೆ ಸಲ್ಲಿಸುತ್ತಿರುವ ಡಾ. ಅಂತಪ್ಪ ಕ್ರೈಸ್ತ ಧರ್ಮದ ಪವಿತ್ರ ಧರ್ಮಗ್ರಂಥ ಬೈಬಲನ್ನು ಕನ್ನಡಕ್ಕೆ ಅನುವಾದಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಲ್ಯಾಟಿನ್, ಹೀಬ್ರು, ಗ್ರೀಕ್ ಮತ್ತು ಇಟಾಲಿಯನ್ ಭಾಷೆಗಳನ್ನು ಬಲ್ಲ ಶ್ರೀಯುತರು ವಿವಿಧ ಸ್ಥಳಗಳಲ್ಲಿ ಕ್ರೈಸ್ತಧರ್ಮದ ಉಗಮ, ಕ್ರಿಸ್‌ಮಸ್ ಹಬ್ಬ ಪ್ರಾರ್ಥನೆಗಳು ಮುಂತಾದ ಧಾರ್ಮಿಕ ವಿಷಯಗಳನ್ನು ಕುರಿತ ಗ್ರಂಥಗಳನ್ನು ರಚಿಸಿದ್ದಾರೆ. ಪ್ರಥಮ ಕೆಥೋಲಿಕ್ ಬೈಬಲ್ ಕನ್ನಡ ಭಾಷಾಂತರ ಇವರ ಕೊಡುಗೆ. ಬೆಂಗಳೂರಿನ ಕನ್ನಡ ಕ್ರೈಸ್ತರ ಮುಖವಾಣಿಯಾದ ‘ಕರ್ನಾಟಕ ತಾರೆ’ ಮಾಸಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದವರು.

ಬೆಂಗಳೂರು ಮಹಾಧರ್ಮಕ್ಷೇತ್ರದ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು ತೆರೆದು ಶಿಕ್ಷಣ ಕ್ಷೇತ್ರಕ್ಕೆ ಸ್ಮರಣೀಯ ಕೊಡುಗೆ ನೀಡಿದವರು.

ಶಿಕ್ಷಣ ಕ್ಷೇತ್ರ ಹಾಗೂ ಸಾಹಿತ್ಯವಲಯದಲ್ಲಿ ಇವರು ಸಲ್ಲಿಸಿದ ನಿಷ್ಕಾಮ ಸೇವೆಯನ್ನು ಪರಿಗಣಿಸಿ ೬೭ನೆಯ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.

ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಚೇತನ ಫಾದರ್ ಐ ಅಂತಪ್ಪ ಅವರು.