Categories
ಕರಕುಶಲಕಲೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಶರಣಮ್ಮ ಮ್ಯಾಗೇರಿ

ಬಡತನದ ಸಿರಿಯಾಗಿ ಶರಣಮ್ಮ ಮ್ಯಾಗೇರಿ ಅವರು ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಸಿದ್ಧಪಡಿಸುವ ಕೌದಿಗಳು ಕೇವಲ ಹಾಸಿಗೆ ಹೊದ್ದಿಕೆಯಾಗಿದ್ದಲ್ಲದೆ, ಕಲಾತ್ಮಕ ಕಸೂತಿಯಾಗಿಯೂ ರೂಪುಗೊಂಡಿವೆ.

ಅತ್ಯಂತ ಸುಲಭ ದರದಲ್ಲಿ ಕಲಾತ್ಮಕವಾಗಿ ಸಿದ್ದಪಡಿಸುವ ಕೌದಿಗಳು ಹಿರಿಯರ ನೆನಪಾಗಿಯೂ, ಉತ್ತಮ ಕಲಾಕೃತಿಯಾಗಿಯೂ ಸಿದ್ಧಪಡಿಸುವಲ್ಲಿ ಶರಣಮ್ಮ ಅವರು ಸಿದ್ಧಹಸ್ತರು.

Categories
ಕರಕುಶಲಕಲೆ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಪಾರ್ವತಮ್ಮ ಪಿಲೆ

ಬಡವರ ಹಾಸಿಗೆ ಮತ್ತು ಹೊದಿಕೆ ಎಂದೇ ಖ್ಯಾತವಾದ ಕೌದಿ ಇಂದು ತನ್ನ ಕಲಾತ್ಮಕತೆಯಿಂದ ಕಲಾಕೃತಿಯಾಗಿ ಸಹ ಜನಮೆಚ್ಚುಗೆ ಪಡೆದಿದೆ. ಪಾರ್ವತಮ್ಮ ಪಿಟೀಲೆ ಅವರು ಈ ಜನಪದೀಯ ಕಲಾತ್ಮಕ ಪರಂಪರೆಯನ್ನು ಅತ್ಯಂತ ಸೃಜನಾತ್ಮಕವಾಗಿ ರೂಪಿಸುವಲ್ಲಿ ಸಿದ್ಧಹಸ್ತರು.
ವಿವಿಧ ಅಳತೆಯ ಮತ್ತು ವಿನ್ಯಾಸ ಕೌದಿಗಳನ್ನು ಸಿದ್ಧಪಡಿಸುತ್ತಿರುವ ಪಾರ್ವತಮ್ಮ ಅವರ ರಚನೆಯ ಕೌದಿಗಳಲ್ಲಿ ದೇಶ ವಿದೇಶಗಳ ಆಸಕ್ತರ ಸಂಗ್ರಹಕ್ಕೆ ಸೇರಿದೆ. ಹೊಸ ತಲೆಮಾರಿನ ಆಸಕ್ತರಿಗೆ ಕೂಡ ಕೌದಿಯ ತಯಾರಿಕೆ ತರಬೇತಿ ನೀಡುತ್ತಿರುವ ಪಾರ್ವತಮ್ಮ ಅವರು ತಮ್ಮ ಕಲಾತ್ಮಕ ಕೌದಿಗಳ ಮೂಲಕ ಜನಮನ ಗೆದ್ದಿದ್ದಾರೆ.

Categories
ಕರಕುಶಲಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಆರ್. ನಾರಾಯಣಪ್ಪ

ನಶಿಸುತ್ತಿರುವ ಕೈಮಗ್ಗ ನೇಕಾರಿಕೆಯ ಉಳಿವಿಗಾಗಿ ಶ್ರಮಿಸುತ್ತಿರುವವರು ಆರ್.ನಾರಾಯಣಪ್ಪ ಅವರು. ಮಂಡ್ಯ ಜಿಲ್ಲೆಯ ಮೇಲುಕೋಟೆಯವರಾದ ಶ್ರೀಯುತರು ಕುಶಲ ನೇಕಾರರೆಂದೇ ಖ್ಯಾತಿವೆತ್ತವರು. ನೇಕಾರಿಕೆಯಲ್ಲಿ ಇತಿಹಾಸ ಸೃಷ್ಟಿಸುವ ಅವರ ಹಂಬಲ ಈಡೇರಿದ್ದು ರೋಚಕ ಕಥೆ. ಬೆಂಕಿಪೊಟ್ಟಣದಲ್ಲಿಡುವಂತಹ ಮಸ್ಲಿನ್ ಸೀರೆಯನ್ನು ನೇಯ್ದು ದಾಖಲೆ ನಿರ್ಮಿಸುವ ಮೂಲಕ ಕನಸು ನನಸು. ಆ ಸೀರೆಯ ತೂಕ ಕೇವಲ ೩೦ ಗ್ರಾಂಗಳು ಮಾತ್ರ. ಅದನ್ನು ಮೈಸೂರು ಮಹಾರಾಜರಿಗೆ ಉಡುಗೊರೆಯಾಗಿ ನೀಡಿ ಅವರಿಂದ ಸನ್ಮಾನ, ಬಹುಮಾನ ಪಡೆದ ಹಿರಿಮೆ ನಾರಾಯಣಪ್ಪ ಅವರದು. ೨೦೦೧ರಲ್ಲಿ ರಾಜ್ಯ ಹಾಗೂ ೨೦೦೩ರಲ್ಲಿ ರಾಷ್ಟ್ರ ಪ್ರಶಸ್ತಿ ಸಂದಿದೆ. ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಜವಳಿ ಉತ್ಸವದಲ್ಲಿ ಆ ಸೀರೆ ಪ್ರದರ್ಶನ ಭಾಗ್ಯ ಕಂಡಿದೆ.
ಕಳೆದ ೪೫ ವರ್ಷಗಳಿಂದ ನೇಯ್ದೆ ವೃತ್ತಿಯಲ್ಲಿ ಸಕಲ ಪಾರಂಗತರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕೃತ ನೇಕಾರರು. ಕಾಸರಗೋಡು ನೇಕಾರ ಸಹಕಾರ ಸಂಸ್ಥೆಯಲ್ಲಿಯೂ ದುಡಿದಿರುವ ಅವರು ಅಖಿಲ ಭಾರತ ಕೈಮಗ್ಗ ಅಭಿವೃದ್ಧಿ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವರು.
ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಹಠ ಬಿಡದೆ ಸಾಧಿಸುವ ಛಲಗಾರ, ಸಾಧಕ ಶ್ರೀ ಆರ್.ನಾರಾಯಣಪ್ಪ.

Categories
ಕರಕುಶಲಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪುಟ್ಟರಾಜು

ನೈಸರ್ಗಿಕ ಮರಗಳ ಬಣ್ಣ ಬಣ್ಣದ ಚಕ್ಕೆಗಳನ್ನು ಬಳಸಿ ಉಬ್ಬುಚಿತ್ರ ತಯಾರಿಸುವ ವಿಶಿಷ್ಟ ಕಲಾವಿದ ಆರ್.ಪುಟ್ಟರಾಜು. ೧೯೩೮ರಲ್ಲಿ ಚಾಮರಾಜನಗರ ಜಿಲ್ಲೆ ಮುಳ್ಳೂರಿನಲ್ಲಿ ಜನನ. ಸದ್ಯ ಅವರು ಮೈಸೂರು ನಿವಾಸಿ. ‘ಕಾವಾ’ದಲ್ಲಿ ಕುಂದಕಲೆಯಲ್ಲಿ ಡ್ರಾಯಿಂಗ್ ಮತ್ತು ಪೇಂಟಿಂಗ್ ತರಬೇತಿ. ೧೪೬೪ರಲ್ಲಿ ಅವರು ತಯಾರಿಸಿದ ಉಬ್ಬು ಚಿತ್ರ ಡಿವೋಷನ್ ಅಮೇರಿಕಾದ ಷಿಕಾಗೋ ಪಟ್ಟಣದಲ್ಲಿ ಪ್ರದರ್ಶನ ಭಾಗ್ಯ ಕಂಡು ಮೆಚ್ಚುಗೆ ಪಡೆದ ಶ್ರೇಷ್ಠ ಕೃತಿ.
ಈವರೆಗೂ ಒಂದು ಸಾವಿರಕ್ಕೂ ಹೆಚ್ಚಿನ ಉಬ್ಬು ಚಿತ್ರ ತಯಾರಿಸಿರುವ ಅವರು ಯಾವುದೇ ವಸ್ತು ವಿಷಯ ನೀಡಿದರೂ ಕೃತಕ ಬಣ್ಣಗಳ ಹಂಗಿಲ್ಲದೇ ನೈಸರ್ಗಿಕ ಮರದ ಬಣ್ಣದ ಚಕ್ಕೆಗಳಿಂದ ಉಬ್ಬು ಚಿತ್ರ ತಯಾರಿಸುವುದರಲ್ಲಿ ನಿಷ್ಣಾತರು. ಅವರು ಆವಿಷ್ಕರಿಸಿರುವ ಭಾವಚಿತ್ರ ಮತ್ತು ಉಬ್ಬುಚಿತ್ರ ಮಾದರಿಗಳು ನೂರಾರು ಮಂದಿಯ ಜೀವನೋಪಾಯಕ್ಕೆ ಸಹಕಾರಿ. ಪುಟ್ಟರಾಜು ಅವರು ತಯಾರಿಸಿರುವ ಉತ್ತಮ ಕಲಾಕೃತಿಗಳಿಗೆ ಮೈಸೂರು ದಸರಾ ಪ್ರಶಸ್ತಿ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಅನೇಕ ಸಂಸ್ಥೆಗಳಿಂದ ಗೌರವ.
ಮಳೆ, ಗಾಳಿ, ಬೆಂಕಿ, ನೀರು, ಇಬ್ಬನಿ, ಚಳಿ, ಬಗೆ, ದಾಹ ಇವೆ ಮೊದಲಾದ ವಿಷಯಗಳ ಬಗೆಗೆ ಶ್ರೀಯುತರು ತಯಾರಿಸಿರುವ ಎಲ್ಲ ಕಲಾಕೃತಿಗಳು ವಿಶಿಷ್ಟ.
ನೈಸರ್ಗಿಕ ಮರಗಳ ಚಕ್ಕೆಗಳೂ ಕಲಾವಿದನ ಕೈಗೆ ಸಿಕ್ಕರೆ ಅದ್ಭುತ ಕಲಾಕೃತಿಯಾಗಿ ರೂಪುಗೊಳ್ಳಬಲ್ಲವು ಎಂಬ ಕಲಾವಂತಿಕೆಯನ್ನು ಮೆರೆದವರು ಶ್ರೀ ಆರ್. ಪುಟ್ಟರಾಜು.

Categories
ಕರಕುಶಲಕಲೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಆರ್.ಎ. ಖಾದ್ರಿ

ವಂಶ ಪಾರಂಪರವಾಗಿ ಬಂದಿರುವ ಬಿದಿರಿ ಕಲೆಯನ್ನು ಮುಂದಿನ ಪೀಳಿಗೆಗೂ ಮುಂದುವರೆಸುತ್ತಿರುವ ಕಲಾವಿದರು ಶ್ರೀ ಷಾ ರಷೀದ್ ಅಹಮದ್ ಖಾದ್ರಿ ಬೀದರ್‌ನ ಬಿದಿರಿ ತಯಾರಕರ ಕುಟುಂಬದವರಾದ ಶ್ರೀ ಖಾದ್ರಿ ಚಿಕ್ಕಂದಿನಿಂದಲೇ ಬಿದಿರಿಕಲೆಯ ಒಡನಾಟದಲ್ಲಿ ಬೆಳೆದವರು.
ಕುಟುಂಬದ ಕಸುಬಾಗಿರುವ ಬಿದಿರಿ ಕಲೆಯನ್ನು ತಂದೆಯವರಿಂದಲೇ ಕಲಿತ ಶ್ರೀ ಖಾದ್ರಿ ಅವರು ಕಾಲಕ್ಕೆ ತಕ್ಕಂತೆ ಈ ಕಲೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿ ಈಗಲೂ ಬಿದ್ರಿಯನ್ನು ಜೀವಂತವಾಗಿಟ್ಟವರು.
ಬಿದಿರಿ ಕಲೆಯಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಸೃಷ್ಠಿಸಿದ ಶ್ರೀ ಖಾದ್ರಿ ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಅನೇಕ ಬಾರಿ ಪ್ರದರ್ಶನ, ಕಾರಾಗಾರಗಳನ್ನು ನಡೆಸಿಕೊಟ್ಟಿರುವ ಶ್ರೀ ಖಾದ್ರಿ ಅವರು ವಿವಿಧ ಯೋಜನೆಗಳಡಿ ಹತ್ತಾರು ವಿದ್ಯಾರ್ಥಿಗಳನ್ನು ಬಿದಿರಿ ಕಲೆಯಲ್ಲಿ ತರಬೇತಿಗೊಳಿಸಿದ್ದಾರೆ.