Categories
ಕರಕುಶಲಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಆರ್. ನಾರಾಯಣಪ್ಪ

ನಶಿಸುತ್ತಿರುವ ಕೈಮಗ್ಗ ನೇಕಾರಿಕೆಯ ಉಳಿವಿಗಾಗಿ ಶ್ರಮಿಸುತ್ತಿರುವವರು ಆರ್.ನಾರಾಯಣಪ್ಪ ಅವರು. ಮಂಡ್ಯ ಜಿಲ್ಲೆಯ ಮೇಲುಕೋಟೆಯವರಾದ ಶ್ರೀಯುತರು ಕುಶಲ ನೇಕಾರರೆಂದೇ ಖ್ಯಾತಿವೆತ್ತವರು. ನೇಕಾರಿಕೆಯಲ್ಲಿ ಇತಿಹಾಸ ಸೃಷ್ಟಿಸುವ ಅವರ ಹಂಬಲ ಈಡೇರಿದ್ದು ರೋಚಕ ಕಥೆ. ಬೆಂಕಿಪೊಟ್ಟಣದಲ್ಲಿಡುವಂತಹ ಮಸ್ಲಿನ್ ಸೀರೆಯನ್ನು ನೇಯ್ದು ದಾಖಲೆ ನಿರ್ಮಿಸುವ ಮೂಲಕ ಕನಸು ನನಸು. ಆ ಸೀರೆಯ ತೂಕ ಕೇವಲ ೩೦ ಗ್ರಾಂಗಳು ಮಾತ್ರ. ಅದನ್ನು ಮೈಸೂರು ಮಹಾರಾಜರಿಗೆ ಉಡುಗೊರೆಯಾಗಿ ನೀಡಿ ಅವರಿಂದ ಸನ್ಮಾನ, ಬಹುಮಾನ ಪಡೆದ ಹಿರಿಮೆ ನಾರಾಯಣಪ್ಪ ಅವರದು. ೨೦೦೧ರಲ್ಲಿ ರಾಜ್ಯ ಹಾಗೂ ೨೦೦೩ರಲ್ಲಿ ರಾಷ್ಟ್ರ ಪ್ರಶಸ್ತಿ ಸಂದಿದೆ. ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಜವಳಿ ಉತ್ಸವದಲ್ಲಿ ಆ ಸೀರೆ ಪ್ರದರ್ಶನ ಭಾಗ್ಯ ಕಂಡಿದೆ.
ಕಳೆದ ೪೫ ವರ್ಷಗಳಿಂದ ನೇಯ್ದೆ ವೃತ್ತಿಯಲ್ಲಿ ಸಕಲ ಪಾರಂಗತರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕೃತ ನೇಕಾರರು. ಕಾಸರಗೋಡು ನೇಕಾರ ಸಹಕಾರ ಸಂಸ್ಥೆಯಲ್ಲಿಯೂ ದುಡಿದಿರುವ ಅವರು ಅಖಿಲ ಭಾರತ ಕೈಮಗ್ಗ ಅಭಿವೃದ್ಧಿ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವರು.
ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಹಠ ಬಿಡದೆ ಸಾಧಿಸುವ ಛಲಗಾರ, ಸಾಧಕ ಶ್ರೀ ಆರ್.ನಾರಾಯಣಪ್ಪ.