Categories
ಪರಿಸರ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಾಲುಮರದ ನಿಂಗಣ್ಣ

ಬಡತನದ ಬದುಕಿನಲ್ಲೂ ಸಮಷ್ಟಿ ಪ್ರಜ್ಞೆ ಮೆರೆದ ಅಪ್ಪಟ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣ. ಹಳ್ಳಿಗಾಡಿನ ನಿಜ ಸೇವಕ, ಸಾವಿರಾರು ಗಿಡಗಳನ್ನು ಪೋಷಿಸಿದ ಸಮಾಜಮುಖಿ, ರಾಮನಗರ ಜಿಲ್ಲೆ ಕೂಟಗಲ್ ಹೋಬಳಿಯ ಅರೇಹಳ್ಳಿಯವರಾದ ನಿಂಗಣ್ಣ ವೃತ್ತಿಯಲ್ಲಿ ಕೂಲಿಕಾರ್ಮಿಕ, ಬಾಲ್ಯದಿಂದಲೂ ಪ್ರಕೃತಿಯ ಆರಾಧಕ, ಬಟಾಬಯಲಿನಂತಿದ್ದ ಅರೇಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವುದೇ ನಿತ್ಯಕಾಯಕ. ಆಲ, ಅರಚಿ, ಬೇವು, ಬಾಗೆ, ಹೊಂಗೆ, ಅತ್ತಿ ಮುಂತಾದ ಗಿಡಗಳನ್ನು ನೆಟ್ಟು ನಿತ್ಯ ನೀರೆರೆದು ಪೋಷಿಸಿ ಬೇಲಿ ಹಾಕಿ ಕಾವಲು ಕಾದು ಮರಗಳನ್ನಾಗಿ ಬೆಳೆಸಿದ ಪರಿಸರಪ್ರೇಮಿ, ಬರಗಾಲದಲ್ಲಿ ಮರಗಳಿಗೆ ನೀರುಣಿಸಲು ಪತ್ನಿಯ ಮಾಂಗಲ್ಯ ಮಾರಲು ಹೋಗಿದ್ದ ತ್ಯಾಗಮಯಿ, ಊರವರ ಕುಹಕಮಾತು, ಅಧಿಕಾರಿಗಳ ಕಿರುಕುಳದ ಮಧ್ಯೆಯೂ ೩೦ ವರ್ಷಗಳಲ್ಲಿ ಬರೋಬ್ಬರಿ ೧೫೦೦ ಮರಗಳನ್ನು ಬೆಳೆಸಿದ ಪರಿಸರ ರಕ್ಷಕ. ಗಿಡಮರಗಳ ಬಗ್ಗೆ ನಿಷ್ಕಲ್ಮಶ ಪ್ರೀತಿ, ನಿಷ್ಕಾಮ ಸೇವೆ. ೬೭ರ ಇಳಿವಯಸ್ಸಿನಲ್ಲೂ ತವರೂರಿನ ಕೆರೆಯ ಪಕ್ಕ ನೂರು ಗಿಡನೆಟ್ಟು ನಿತ್ಯ ಆರೈಕೆ ಮಾಡುತ್ತಿರುವ ನಿಂಗಣ್ಣ ನಿಜ ಅರ್ಥದಲ್ಲಿ ಸಾಲುಮರದ ನಿಂಗಣ್ಣ. ಪರಿಸರಕಾಳಜಿಗೆ ರಾಜ್ಯಪಾಲರ ಸನ್ಮಾನ, ರಾಜ್ಯ ಪರಿಸರ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಪಾತ್ರ. ಮರಗಳನ್ನು ಬೆಳೆಸಲು ದುಡಿದ ಕೂಲಿ ಹಣದ ಒಂದು ಭಾಗ ವ್ಯಯಿಸಿರುವ ನಿಂಗಣ್ಣ ನಮ್ಮ ನಡುವಿರುವ ನಿಜ ಮನುಷ್ಯ, ನಿಸ್ವಾರ್ಥ ಸೇವೆಗೊಂದು ಮಹಾಮಾದರಿ.