Categories
ಗುಡಿ ಕೈಗಾರಿಕೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನವರತ್ನ ಇಂದುಕುಮಾರ್

ಗುಡಿಕೈಗಾರಿಕೆಯ ಹಿರಿಮೆಯನ್ನು ಸಾರಿದ ಪಾರಂಪರಿಕ ಕರಕುಶಲ ಕಲಾವಿದೆ ನವರತ್ನ ಇಂದುಕುಮಾರ್. ಗೊಂಬೆ ಮತ್ತು ಹೂಗುಚ್ಛಗಳ ತಯಾರಿಕೆಯಲ್ಲಿ ವಿಶಿಷ್ಟತೆ ಮೆರೆದವರು.
ಚಿಕ್ಕಮಗಳೂರಿನ ವಾಸಿಗಳಾದ ನವರತ್ನ ಇಂದುಕುಮಾರ್ ಹಿಂದಿ ರಾಷ್ಟ್ರಭಾಷಾ ವಿಶಾರದರು, ಬಾಲ್ಯದಿಂದಲೂ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ವಿಶೇಷ ಆಸಕ್ತಿ, ಗೊಂಬೆ ಮತ್ತು ಹೂಗುಚ್ಛ ತಯಾರಿಕೆಯಲ್ಲಿ ಕಲಾನೈಪುಣ್ಯತೆ, ಬಟ್ಟೆ ಮತ್ತು ವುಡ್‌ವುಲ್‌ನಲ್ಲಿ ಗೊಂಬೆಗಳ ತಯಾರಿಸುವ ಭಾರತದಲ್ಲಿರುವ ಅಪರೂಪದ ಮೂವರು ಕಲಾವಿದರಲ್ಲಿ ಒಬ್ಬರೆಂಬುದು ನಾಡಿನ ಹೆಮ್ಮೆ, ಗಾಜು ಮತ್ತು ಮರದ ಮೇಲೆ ಪೈಂಟಿಂಗ್, ಉಬ್ಬು ಚಿತ್ರಗಳ ರಚನೆ, ಪಂಪನ ಆದಿಪುರಾಣದ ೩೨ ದೃಶ್ಯಗಳು, ಹೊಂಬುಜ ಪದ್ಮಾವತಿಯ ೨೪ ಕೈಗಳುಳ್ಳ ಚಾಮುಂಡೇಶ್ವರಿ, ಯಕ್ಷಗಾನದ ಗೊಂಬೆಗಳು, ಶಿಲಾಬಾಲಿಕೆಯರು, ಜಾನಪದ ಗೊಂಬೆಗಳು ಸೇರಿ ಸಾವಿರಾರು ಗೊಂಬೆಗಳ ರಚನೆ, ಗೊಂಬೆ ತಯಾರಿಕೆ- ಎಂಬೋಸಿಂಗ್ ಬಗ್ಗೆ ಯುವಪೀಳಿಗೆಗೆ ತರಬೇತಿ.ವೇದಿಕೆಗಳ ನಿರ್ಮಾಣದಲ್ಲೂ ನಿಸ್ಸಿಮರು, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ವೇದಿಕೆ, ಚಿಕ್ಕಮಗಳೂರು ಜಿಲ್ಲಾ ಸಮ್ಮೇಳನದ ವೇದಿಕೆ ಮುಂತಾದ ವೇದಿಕೆಗಳು ಇವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿವೆ. ರಾಜ್ಯ-ಹೊರರಾಜ್ಯಗಳಲ್ಲಿನ ಅನೇಕ ಉತ್ಸವಗಳಲ್ಲಿ ಕರಕುಶಲ ಉತ್ಪನ್ನಗಳನ್ನು ಪ್ರದರ್ಶಿಸಿರುವ ನವರತ್ನ ಅವರು ಸಾಂಸ್ಕೃತಿಕ ಸಂಘಟನೆ-ಬರಹದಲ್ಲೂ ತೊಡಗಿಕೊಂಡಿರುವ ಬಹುಮುಖ ಪ್ರತಿಭೆ. ಹತ್ತಾರು ಪ್ರಶಸ್ತಿಗಳಿಂದ ಭೂಷಿತರು.